ಇದು ಡಿಸೆಂಬರ್ ತಿಂಗಳ ಕೊನೆಯ ವಾರವಿದಾಗಿದೆ. 22-12-2024ರಿಂದ 28-12-2024ರವರೆಗೆ ಇರಲಿದೆ. ಗ್ರಹಗಳು ರಾಶಿಯಲ್ಲಿ ಬದಲಾವಣೆ ಆಗದಿದ್ದರೂ ಇರುವ ಸ್ಥಾನದಲ್ಲಿ ಕೆಲವು ಬದಲಾವಣೆ ಆಗಿದೆ. ಮಿತ್ರನ ಸ್ಥಾನ ಶತ್ರು ಸ್ಥಾನಗಳನ್ನು ಪ್ರವೇಶಿಸುವ ಗ್ರಹಗಳು ತಮ್ಮ ಫಲಾಫಲಗಳನ್ನು ರಾಶಿಯವರ ಮೇಲೆ ಬೀರುವರು. ಅಯಾ ರಾಣಿಯವರು ದೇವಾತಾರಾಧನೆಯ ಮೂಲಕ ಸಂಕಟವನ್ನು ಪರಿಹರಿಸಿಕೊಳ್ಳಬಹುದು.
ಮೇಷ ರಾಶಿ: ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ರಾಶಿ ಚಕ್ರದ ಮೊದಲ ರಾಶಿಯವರಿಗೆ ಅಶುಭ. ರಾಶಿಯ ಅಧಿಪತಿ ಕುಜ ಮಿತ್ರನ ರಾಣಿಯ ಇದ್ದರೂ ಶತ್ರುವಿನ ಅಂಶವನ್ನು ಪಡೆದು ತೊಂದರೆ ಕೊಡುವನು. ಕೌಟುಂಬಿಕವಾಗಿ ನೆಮ್ಮದಿ ಇರದು. ವಿದೇಶದ ವಾಸಿಗಳಿಗೆ ಸರ್ಕಾರದಿಂದ ತೊಂದರೆ. ಓಡಾಟ ಮಾಡಬೇಕಾಗುವುದು. ಇತರರು ನಿಮ್ಮ ಕುರಿತು ಸಲ್ಲದ ಮಾತುಗಳನ್ನು ಆಡಬಹುದು. ತಪ್ಪುಗಳ ನಡೆಯದಿದ್ದಾಗ ಅದಕ್ಕೆ ಹೆದರಬೇಕಾದ ಅವಶ್ಯಕತೆಯಿರದು. ನಿಮ್ಮ ಕಾರ್ಯಗಳು ಎಂದಿನಂತೆ ಅಬಾಧಿತವಾಗಿ ನಡೆಯಲಿದೆ. ಆಪ್ತರ ಭೇಟಿಯಾಗಬಹುದು. ಹಲವು ದಿನಗಳಿಂದ ಹೇಳದೇ ಉಳಿದುಕೊಂಡ ವಿಷಯಗಳನ್ನು ಈ ವಾರ ಚರ್ಚೆಗೆ ತರುವಿರಿ. ಆಪ್ತಸಮಾಲೋಚನೆ ನಡೆಯಲಿದೆ. ಕಾರ್ತಿಕೇಯನ ಚರಣವನ್ನು ಅತಿ ವಿಶ್ವಾಸದಿಂದ ಹಿಡಿದುಕೊಳ್ಳಿ.
ವೃಷಭ ರಾಶಿ: ಈ ತಿಂಗಳ ಕೊನೆಯ ವಾರದಲ್ಲಿ ನಿಮಗೆ ಶುಭ. ರಾಶಿಯ ಅಧಿಪತಿ ಮಿತ್ರನ ರಾಶಿಯಲ್ಲೂ ಮಿತ್ರನ ಅಂಶದಲ್ಲಿಯೂ ಇದ್ದು ಗೌರವವನ್ನು ತಂದುಕೊಡುವನು. ಕಲಾವಿದರು ಪ್ರತಿಭಾನ್ವಿತರಿಗೆ ಹೆಚ್ಚು ಅನುಕೂಲವಿದೆ. ನಿಮಗೆ ಕೆಲವು ಜವಾಬ್ದಾರಿಗಳು ಬರಬಹುದು. ಎಲ್ಲವನ್ನೂ ಶಕ್ತಿಮೀರಿ ಪ್ರಯತ್ನಿಸುವಿರಿ. ಆಲಸ್ಯವು ಒಳ್ಳೆಯದಲ್ಲ. ನಿಮ್ಮದೇ ಯೋಜನೆಗಳು ನಿಮಗಿದ್ದು ಅದರ ಕುರಿತು ಆಲೋಚನೆಯನ್ನು ಮಾಡುವಿರಿ. ಹಳೆಯ ಖಾಯಿಲೆಯು ಮತ್ತೆ ಮರುಕಳಿಸಬಹುದು. ಹಣಕಾಸಿನಲ್ಲಿ ಸುಧಾರಣೆಯನ್ನು ಕಾಣಬಹುದಾಗಿದೆ. ಕಾರ್ಯದಲ್ಲಿ ಸಾವಧಾನತೆ ಇರಲಿದೆ. ಮಹಾಗೌರಿಯ ಸ್ತೋತ್ರ ಮಾಡಿ.
ಮಿಥುನ ರಾಶಿ: ರಾಶಿ ಚಕ್ರದ ಮೂರನೇ ರಾಶಿಯವರಿಗೆ ಈ ವಾರ ಶುಭ. ರಾಶಿ ಅಧಿಪತಿ ಬುಧನು ಕುಜನ ರಾಶಿಯಲ್ಲಿ ಶನಿಯ ಅಂಶವನ್ನು ಪಡೆದಿರುವನು. ಶತ್ರುಗಳು ಮಿತ್ರರಂತೆ ಆಗುವರು. ಬಹಳ ಎಚ್ಚರಿಕೆಯಿಂದ ಸ್ನೇಹ ಸಹವಾಸವನ್ನು ಮಾಡಬೇಕು. ಅತಿಯಾದ ಹಿಂಸೆಯನ್ನು ಅನುಭವಿಸಬೇಕಾದ ಸ್ಥಿತಿಯು ಬರಬಹುದು. ದೂರದ ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ. ಭೂಮಿಯ ಕ್ರಯ ಮತ್ತು ವಿಕ್ರಯದಲ್ಲಿ ನಷ್ಟವನ್ನು ಅನುಭವಿಸಬೇಕಾಗಬಹುದು. ಸರ್ಕಾರಿ ಉದ್ಯೋಗದಲ್ಲಿ ವಿಶೇಷ ಭತ್ಯೆಯು ಸಿಗಬಹುದಾಗಿದೆ. ಯಾರಾದರೂ ಚುಚ್ಚಿ ಮಾತನಾಡಬಹುದು. ಅದನ್ನು ಮನಸ್ಸಿ ತೆಗದುಕೊಳ್ಳುವಿರಿ. ಸಲಹೆಯನ್ನು ಪಡೆದುಕೊಂಡು ಸ್ವಂತ ನಿರ್ಧಾರಕ್ಕೆ ಬನ್ನಿ. ಲಕ್ಷ್ಮೀನಾರಾಯಣರನ್ನು ಪೂಜಿಸಿ.
ಕರ್ಕಾಟಕ ರಾಶಿ: ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ರಾಶಿಯ ಅಧಿಪತಿ ಚಂದ್ರನು ವಾರಾಂತ್ಯದಲ್ಲಿ ಕುಜನ ಅಂಶವನ್ನು ಪಡೆದಿರುವನು. ಮಾನಸಿಕವಾದ ಚಾಂಚಲ್ಯವನ್ನು, ನಕಾರಾತ್ಮಕ ಅಂಶಗಳನ್ನು ಹೆಚ್ಚು ಮಾಡಿಸುವನು. ಯಾವ ತೀರ್ಮಾನಕ್ಕೆ ಬರುವುದು ಸಾಧ್ಯವಾಗದು. ಹೊಸ ಅಭ್ಯಾಸವನ್ನು ಕಲಿಯಲು ಪ್ರಯತ್ನಪಡುವಿರಿ. ಅಲಂಕಾರಿಕ ವಸ್ತುಗಳನ್ನು ಖರೀದಿಸುವ ಆಸಕ್ತಿಯನ್ನು ಹೊಂದಿದ್ದೀರಿ. ಮಕ್ಕಳಿಂದ ನಿಮಗೆ ಸಂತೋಷಕರವಾದ ವಾರ್ತೆಯು ಸಿಗಲಿದೆ. ಯಾವುದಾದರೂ ಸುಂದರ ಪ್ರದೇಶಕ್ಕೆ ಹೋಗಬೇಕಾಗಿಬರಬಹುದು. ನಿರಂತರ ಶ್ರಮದ ಫಲವನ್ನು ನೀವು ಪಡೆಯುವಿರಿ. ಆಲಸ್ಯವನ್ನು ಬಿಟ್ಟು ಮುನ್ನಡೆಯುವ ತೀರ್ಮಾನವನ್ನು ಮಾಡಲಿದ್ದೀರಿ. ನಿಮ್ಮ ಕಷ್ಟಕ್ಕೆ ಬಂದವರು ಆಪ್ತರಾಗಲಿದ್ದಾರೆ. ಗೋಗ್ರಾಸವನ್ನು ಪ್ರಾತಃಕಾಲದಲ್ಲಿ ನೀಡಿ.
ಸಿಂಹ ರಾಶಿ: ರಾಶಿ ಚಕ್ರದ ಐದನೇ ರಾಶಿಯವರಿಗೆ ಈ ವಾರ ರಾಶಿಯ ಅಧಿಪತಿ ಸೂರ್ಯನು ಗುರುವಿನ ರಾಶಿಯಲ್ಲಿ ಚಂದ್ರನ ಅಂಶವನ್ನು ಪಡೆದಿದ್ದು ದಾಂಪತ್ಯದಲ್ಲಿ ಐಕಮತ್ಯ ಬರುವುದು. ಆರೋಗ್ಯದ ಸುಧಾರಣೆಯಾಗುವುದು. ಶಿಕ್ಷಣಕ್ಷೇತ್ರದಲ್ಲಿ ಸಾಧನೆ ಸಾಧ್ಯವಾಗುವುದು. ನೀವು ಏನನ್ನಾದರೂ ಪಡೆಯಲು ಪ್ರಯತ್ನಿಸಲೇ ಬೇಕು. ಸ್ವಾತಂತ್ರ್ಯವನ್ನು ಪಡೆಯಲು ಹವಣಿಸುವಿರಿ. ಮನೆಯಿಂದ ದೂರವಿರುವವರಿಗೆ ಮನೆಯ ನೆನಪಾಗಲಿದೆ. ತನ್ನವರನ್ನು ಕಳೆದುಕೊಳ್ಳುವ ಹೆದರಿಕೆ ಉಂಟಾಗಲಿದೆ. ಆದಿತ್ಯ ಹೃದಯವು ನಿಮ್ಮ ಮನೋಬಲವನ್ನು ಹೆಚ್ಚಿಸುವುದು.
ಕನ್ಯಾ ರಾಶಿ: ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ನಿಮಗೆ ಮಿತ್ರನಾದ ಶನಿಯ ಅಂಶವನ್ನು ಪಡೆದು ಶುಭವನ್ನು ಮಾಡುವನು. ಬಂಧುಗಳಿಂದ ಪೂರ್ವ ಉಪಕಾರಕ್ಕೆ ಪ್ರತ್ಯುಪಕಾರವು ಸಿಗಲಿದೆ. ನಿಮ್ಮೊಳಗೆ ಹತ್ತಾರು ದ್ವಂದ್ವಗಳು ನಿವಾರಣೆಯಾಗುವ ಸಮಯ. ಆಯ್ಕೆ ಮಾಡಿಕೊಳ್ಳುವುದು ಕಷ್ಟವಾದೀತು. ಹಿರಿಯರ, ಅನುಭವಿಗಳ ಮಾರ್ಗದರ್ನವನ್ನು ಪಡೆಯಿರಿ. ಶ್ರಮದ ಕೆಲಸವು ಆಯಾಸವನ್ನು ತರಲಿದೆ. ಅತಿಯಾದ ಆಲಸ್ಯದಿಂದ ನಿದ್ರಿಸುವ ಮನಸ್ಸಿನಲ್ಲಿ ಇರುವಿರಿ. ಯಾರೂ ನನಗೆ ಸಹಾಯಕ್ಕೆ ಬರಲಾರರು ಎಂಬ ಅನಾಥ ಪ್ರಜ್ಞೆಯು ಕಳಚಿಬೀಳುವುದು. ಕ್ಲಿಷ್ಟಕರವಾದ ಸನ್ನಿವೇಶವು ಸುಖಕರವಾಗಿ ಬದಲಾಗಲಿದೆ. ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಕಷ್ಟವಾದೀತು. ಸೀತಾರಾಮರ ಸೇವೆ ಮಾಡಿ.
ತುಲಾ ರಾಶಿ: ಈ ತಿಂಗಳ ಕೊನೆಯ ವಾರ ರಾಶಿಯ ಅಧಿಪತಿ ಶನಿಯ ಸ್ಥಾನದಲ್ಲಿ ಇದ್ದರೂ ಬುಧನ ಅಂಶವನ್ನು ಪಡೆದರೂ ಬುಧನಿಗೆ ಶುಕ್ರನು ಶತ್ರುವಾಗಿದ್ದು ಸ್ತ್ರೀಕೃತವಾದ ದೋಷವನ್ನು ಕೊಡುವನು. ಕಳ್ಳತನದ ಅಪವಾದವೂ ಬರಬಹುದು. ನಿಮ್ಮ ಮೇಲಧಿಕಾರಿಗಳನ್ನು ಚೆನ್ನಾಗಿ ಇರಿಸಿಕೊಳ್ಳಿ. ಮಾನಹಾನಿಯಾಗುವ ಸಂಗತಿಗಳು ಬರಬಹುದು. ಅವರ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಿಕೊಡಿ. ವ್ಯಕ್ತಿಗಳನ್ನು ದೂರುವ ಸ್ವಭಾವವನ್ನು ಬಿಟ್ಟುಬಿಡಿ. ಆಂತರಿಕ ಕಲಹವು ಜಗಜ್ಜಾಹಿರವು ಆಗಬಹುದು. ನಿಮ್ಮ ವಾಸಸ್ಥಾನವು ಮನೆಯಿಂದ ದೂರವಿರಲಿದೆ. ವಸ್ತ್ರಗಳ ಖರೀದಿಯಲ್ಲಿ ನೀವು ಮಗ್ನರಾಗಿರುತ್ತೀರಿ. ನಿಮ್ಮ ಬೆಳವಣಿಗೆಯನ್ನು ಕಂಡು ಮನೆಯಲ್ಲಿ ಸಂತಸಗೊಳ್ಳಬಹುದು. ಮಾಹಾಲಕ್ಷ್ಮಿಯ ಕೃಪೆಯನ್ನು ಬೇಡಿ.
ವೃಶ್ಚಿಕ ರಾಶಿ: ಡಿಸೆಂಬರ್ ತಿಂಗಳ ಈ ವಾರ ನಿಮಗೆ ಅಶುಭ. ರಾಶಿಯ ಅಧಿಪತಿ ಕುಜನು ನೀಚನಾಗಿ ಮತ್ತೂ ಶತ್ರುವಿನ ಅಂಶವನ್ನು ಪಡೆದಿದ್ದಾನೆ. ನಿಮ್ಮದು ಅರಣ್ಯರೋದನವಾಗುವುದು. ಯಾರೂ ನಿಮ್ಮ ಮಾತನ್ನು ಕೇಳರು. ಕೇಳುವಂತೆ ಮಾಡಲೂ ನಿಮ್ಮ ಬಳಿ ಆಗದು. ಸೋತು ಸುಮ್ಮನಾಗುವುದೊಂದೇ ದಾರಿ. ವಿವಾಹದ ಪ್ರಸ್ತಾಪಗಳು ಬಂದು ಮತ್ತೆ ಹೋಗುತ್ತವೆ. ನಿಮ್ಮ ಮಾತಿನಿಂದ ಮನೆಯವರಲ್ಲಿ ಆತಂಕದ ವಾತಾವರಣವೂ ಸೃಷ್ಟಿಯಾಗಲಿದೆ. ಮನೆಯಿಂದ ದೂರವಿರುವ ಆಲೋಚನೆಯನ್ನು ಮಾಡುವಿರಿ. ಭೂಮಿಯ ವ್ಯವಹಾರದಲ್ಲಿ ಅಲ್ಪಲಾಭವು ಆಗಲಿದೆ. ಮನೆಯನ್ನು ಬದಲಾಯಿಸುವಿರಿ. ಕೆಲಸಗಳು ನಿಧಾನಗತಿಯಲ್ಲಿ ಸಾಗಲಿವೆ. ನಾಗದೇವರಿಗೆ ಉತ್ತಪ್ಪ ನೈವೇದ್ಯ ನೀಡಿ.
ಧನು ರಾಶಿ: ರಾಶಿ ಚಕ್ರದ ಒಂಭತ್ತನೇ ರಾಶಿಯವರಿಗೆ ಈ ವಾರ ರಾಶಿ ಅಧಿಪತಿ ಷಷ್ಠದಲ್ಲಿ ಬುಧನ ಅಂಶವನ್ನು ಪಡೆದಿದ್ದಾನೆ. ಬಂಧುಗಳ ನಡುವೆ ವೈರತ್ವ ಆರಂಭವಾಗುವುದು. ಕಥೆಗಾರರೋ ಸಾಹಿತಿಗಳೋ ಕವಿಗಳೋ ಆಗಿದ್ದರೆ ನಿಮಗಿಂದು ಗೌರವ, ಸಮ್ಮಾನಗಳು ತಪ್ಪಿಹೋಗಿ ನಿರಾಸೆಯ ಭಾವವಿರಲಿದೆ. ಮೇಲಿನಿಂದ ಬಿದ್ದು ಪೆಟ್ಟುಮಾಡಿಕೊಳ್ಳುವಿರಿ. ನೀವು ಎಲ್ಲ ರೀತಿಯಿಂದ ಸರಿದೂಗುವ ವ್ಯಕ್ತಿಯನ್ನು ಇಷ್ಟಪಡಲು ಆರಂಭಿಸುವಿರಿ. ಅವಸರದಲ್ಲಿ ಅನಾಹುತವಾದೀತು. ಧಾರ್ಮಿಕಕ್ಷೇತ್ರಗಳಿಗೆ ಭೇಟಿ ನೀಡಲಿದ್ದೀರಿ. ನಿಮ್ಮ ವ್ಯಕ್ತಿತ್ವವನ್ನು ಕಂಡು ಕೆಲವರು ಸಲಹೆಗಳನ್ನು ಕೊಡಲು ಬರಬಹುದು. ಯಾವುದೇ ಪ್ರತ್ಯುತ್ತರಗಳನ್ನು ನೀಡುವುದು ಬೇಡ. ಸಮಾಧಾನದಿಂದ ಆಲೋಚಿಸಿ. ನಿಮಗೆ ಅವಶ್ಯಕವಾದವೂ ಇದರಲ್ಲಿ ಇರುತ್ತವೆ. ಗುರು ಚರಿತ್ರೆಯನ್ನು ಪಠಿಸಿ.
ಮಕರ ರಾಶಿ: ತಿಂಗಳ ಕೊನೆಯ ವಾರದಲ್ಲಿ ನಿಮಗೆ ಅಶುಭ. ರಾಶಿಯ ಅಧಿಪತಿ ಶನಿಯು ತನ್ನ ರಾಶಿಯಲ್ಲಿ ಇದ್ದರೂ ಕುಜನ ಅಂಶವನ್ನು ಪಡೆದಿರುವನು. ಆಸ್ತಿಗಾಗಿ ಕಲಹವು ಉಂಟಾಗುವುದು. ಅಥವಾ ಈಗಾಗಲೇ ಕಲಹವಿದ್ದರೆ ಅದು ಬೇರೆ ರೂಪವನ್ನು ಪಡೆಯುವುದು. ನೀವು ಬದಲಾವಣೆಯನ್ನು ಇಷ್ಟಪಡುತ್ತೀರಿ. ಹೆಸರಾಂತ ವ್ಯಕ್ತಿಗಳ ಸಹವಾಸವು ನಿಮಗೆ ಸಿಗಲಿದೆ. ಒತ್ತಡವನ್ನು ನಿಭಾಯಿಸುವ ಕಲೆ ನಿಮಗೆ ಸಿದ್ಧಿಸಿದ್ದು ಅದನ್ನು ಚೆನ್ನಾಗಿ ನಿರ್ವಹಿಸಬಲ್ಲಿರಿ. ದೊಡ್ಡ ಅಪಾಯದಿಂದ ನೀವು ಹೊರಬರಲಿದ್ದೀರಿ. ಎಂದೋ ಮಾಡಿದ ನಿಮ್ಮ ಆಪತ್ತಿಗೆ ಬರಲಿದೆ. ಸತ್ಯವನ್ನು ಮುಚ್ಚಿಡಲು ಹೋಗಬೇಡಿ. ಮುಂದೆ ಅದೇ ದೊಡ್ಡ ಕಂಟಕವಾದೀತು. ಎಲ್ಲರ ಜೊತೆ ಬೆರೆತು ಬದುಕುವ ನಿಮ್ಮ ಗುಣವು ಮೆಚ್ವುಗೆಯಾಗಲಿದೆ. ಅಯ್ಯಪ್ಪನಿಗೆ ಶುದ್ಧ ತೈಲದಿಂದ ದೀಪ ಬೆಳಗಿ.
ಕುಂಭ ರಾಶಿ: ಈ ತಿಂಗಳ ಕೊನೆಯ ವಾರದಲ್ಲಿ ನಿಮಗೆ ಶುಭಾಶುಭ. ರಾಶಿಯ ಆಧಿಪತಿ ಸ್ವರಾಶಿಯಲ್ಲಿ ಇದ್ದರೂ ಶತ್ರುವಾದ ಕುಜನ ಅಂಶವನ್ನು ಪಡೆದಿದ್ದಾನೆ. ಕೋಪವು ಎಷ್ಟೇ ಇದ್ದರೂ ಅದನ್ನು ಹೊರಹಾಕುವ ಧೈರ್ಯ ನಿಮಗೆ ಇರದು. ಪುತ್ರೋತ್ಸವವು ನಿಮ್ಮ ನೆಮ್ಮದಿಯನ್ನು ಇಮ್ಮಡಿಗೊಳಿಸುವುದು. ಸತ್ಯವನ್ನೇ ನಂಬಿ ಬದುಕುವವರು ಎಂದು ಇದುವರೆಗೆ ತಿಳಿದದ್ದು ಸುಳ್ಳು ಮಾಡುವಿರಿ. ನಿಮ್ಮ ಮಾತಿನ ಬೆಲೆಯೂ ಕಡಿಮೆಯಾದೀತು. ನಿಮ್ಮನ್ನು ನೀವು ಆದ್ಯಂತವಾಗಿ ನೋಡಿಕೊಳ್ಳಿ. ಬಂಧುಗಳ ಭೇಟಿಯಿಂದ ಸಂತೋಷವಾಗಲಿದೆ. ಈ ವಾರ ಮಾಡುವ ಪ್ರಯಾಣದ ಸುಖವೂ ಇರಲಿದೆ. ಶಿವನಿಗೆ ರುದ್ರದಿಂದ ಅಭಿಷೇಕ ಮಾಡಿ.
ಮೀನ ರಾಶಿ: ಡಿಸೆಂಬರ್ ತಿಂಗಳ ಕೊನೆಯ ವಾರದಲ್ಲಿ ಮಧ್ಯಫಲ. ರಾಶಿಯ ಅಧಿಪತಿ ಗುರುವು ತೃತೀಯದಲ್ಲಿ ಇದ್ದು ಶತ್ರುವಾದ ಬುಧನ ಅಂಶವನ್ನು ಪಡೆದಿದ್ದಾನೆ. ಸ್ನೇಹದಲ್ಲಿ ಅಸಮಾಧಾನ. ದೈವವು ನಿಮಗೆಂದೇ ಇರಿಸಿಟ್ಟ ಕಾರ್ಯವೊಂದನ್ನು ಕೊಡಬಹುದು. ನಿಮ್ಮ ಪರೀಕ್ಷೆಯ ಕಾಲ. ಅದಕ್ಕೆ ಯೋಗ್ಯವಾದ ಉತ್ತರವನ್ನು ಕೊಡುವ ಭರದಲ್ಲಿ ಅವಘಡಗಳು ಆಗಬಹುದು. ಗೊಂದಲವನ್ನು ಪರಿಹರಿಸಲು ನಿಮಗೆ ನೂರಾರು ಮಾರ್ಗಗಳಿವೆ. ನೀವು ಯಾವುದನ್ನು ಆರಿಸಿಕೊಳ್ಳುವಿರಿ ಎನ್ನುವುದು ಮುಖ್ಯವಾಗಲಿದೆ. ಸಂಗಾತಿಯ ಜೊತೆ ಕಾಲವನ್ನು ಕಳೆದರೂ ತಂದೆ-ತಾಯಿಯರ ಜೊತೆಗೂ ಕೆಲವು ಕಾಲ ಕಳೆಯಿರಿ. ಅವರ ನೋವು ಮತ್ತು ನಲಿವಿನಲ್ಲೂ ಭಾಗಿಯಾಗುವಿರಿ. ಗುರುವಿನ ಸಾನ್ನಿಧ್ಯದಲ್ಲಿ ಹೆಚ್ಚು ಸಮಯ ಇರುವಂತೆ ಮಾಡಿಕೊಳ್ಳಿ.
– ಲೋಹಿತ ಹೆಬ್ಬಾರ್ – 8762924271 (what’s app only)