
ನಿಮ್ಮ ಅಭ್ಯಾಸಗಳನ್ನು ಬದಲಿಸಿಕೊಳ್ಳಬೇಕಾದ ಸಮಯ ಇದು ಎಂದು ನಿಮಗೇ ಅನಿಸಲಿದೆ. ಯಾವ ರೀತಿಯ ನಡವಳಿಕೆ ನಿಮ್ಮ ಸಿಟ್ಟು- ಆಕ್ರೋಶಕ್ಕೆ ಕಾರಣ ಆಗುತ್ತಿತ್ತೋ ಅಂಥವುಗಳನ್ನು ಹೊಂದಾಣಿಕೆ ಮಾಡಿಕೊಳ್ಳಲು ಆರಂಭಿಸುತ್ತೀರಿ. ಉದ್ಯೋಗ ಸ್ಥಳದಲ್ಲಿ ನೀವಾಗಿಯೇ ವಹಿಸಿಕೊಳ್ಳುವ ಜವಾಬ್ದಾರಿಗಳು ಸ್ವಲ್ಪ ಮಟ್ಟಿಗೆ ಒತ್ತಡ ತರಲಿವೆ. ನಿಮ್ಮ ಸ್ನೇಹಿತರು- ಸಂಬಂಧಿಗಳು ತಮಾಷೆ ಮಾಡಿದಲ್ಲಿ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಸಣ್ಣ ಪ್ರಮಾಣದ ಹೂಡಿಕೆ ಮಾಡಿ, ವ್ಯವಹಾರ ಮಾಡುವ ಬಗ್ಗೆ ಆಲೋಚಿಸಲಿದ್ದೀರಿ. ಸರ್ಕಾರಿ ನೌಕರರಿಗೆ ಉದ್ಯೋಗ ನಿಮಿತ್ತ ಪ್ರಯಾಣ ತೆರಳಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ದೇವತಾ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಅಥವಾ ತೀರ್ಥಕ್ಷೇತ್ರದ ದರ್ಶನ ಮಾಡುವ ಯೋಗ ಇದೆ. ಮನೆ- ಆಸ್ತಿಗೆ ಸಂಬಂಧಿಸಿದ ದಾಖಲೆ- ಪತ್ರಗಳನ್ನು ಕ್ರಮಬದ್ಧವಾಗಿ ಇಟ್ಟುಕೊಳ್ಳುವುದಕ್ಕೆ ಆದ್ಯತೆ ನೀಡಲಿದ್ದು, ಕೆಲವು ದಾಖಲೆಗಳಿಗೆ ಅಪ್ಲೈ ಮಾಡುವ ಆಲೋಚನೆ ಬರಲಿದೆ.
ಸಂಬಂಧದಲ್ಲಿ ಕೆಲವು ಕಠಿಣ ಸನ್ನಿವೇಶಗಳನ್ನು ಎದುರಿಸುತ್ತೀರಿ. ಖರ್ಚು- ವೆಚ್ಚದ ಬಗ್ಗೆ ನಿಮ್ಮ ತೀರ್ಮಾನಗಳ ಬಗ್ಗೆ ಕುಟುಂಬ ಸದಸ್ಯರು ಆಕ್ಷೇಪ ವ್ಯಕ್ತಪಡಿಸಲಿದ್ದಾರೆ. ವೈದ್ಯಕೀಯ ವೃತ್ತಿಯಲ್ಲಿ ಇರುವವರಿಗೆ ಆದಾಯ ಹೆಚ್ಚು ಮಾಡಿಕೊಳ್ಳಲು ಬೇಕಾದ ಅವಕಾಶಗಳು ದೊರೆಯಲಿವೆ. ಆಹಾರ ಪಥ್ಯದ ಬಗ್ಗೆ ಲಕ್ಷ್ಯವನ್ನು ನೀಡಬೇಕಾಗುತ್ತದೆ. ಉದ್ಯೋಗಕ್ಕೆ ಪ್ರಯತ್ನ ಮಾಡುತ್ತಾ ಇರುವವರಿಗೆ ಆತ್ಮವಿಶ್ವಾಸ ಕುಗ್ಗುವಂಥ ಬೆಳವಣಿಗೆ ಆಗಲಿದೆ. ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರು ಹೊಸ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಮುಂಚೆ ಕೆಲವು ಸಾಧಕ- ಬಾಧಕಗಳ ಬಗ್ಗೆ ಆಲೋಚಿಸಿ, ಮುಂದಕ್ಕೆ ಹೆಜ್ಜೆ ಇಡಿ. ಮನೆಗೆ ನಿಮ್ಮಲ್ಲಿ ಕೆಲವರು ಬೆಳ್ಳಿ ಪೂಜಾ ಸಾಮಗ್ರಿ ಖರೀದಿಸುವ ಯೋಗ ಇದೆ. ದೀರ್ಘ ಕಾಲದ ಅನಾರೋಗ್ಯದಿಂದ ಇರುವವರು ಔಷಧದಲ್ಲಿ ಬದಲಾವಣೆ ಮಾಡಿಕೊಳ್ಳಲು ವೈದ್ಯರನ್ನು ಭೇಟಿ ಮಾಡಲು ಆಲೋಚಿಸುತ್ತೀರಿ.
ದೇಹದ ತೂಕ ಇಳಿಸಿಕೊಳ್ಳಲು ಆದ್ಯತೆಯನ್ನು ನೀಡುವಿರಿ. ಮುಂಜಾಗ್ರತೆ ವಹಿಸಿ, ನೀವು ತೆಗೆದುಕೊಂಡ ನಿರ್ಧಾರಗಳು ಭಾರೀ ಲಾಭವನ್ನು ತಂದುಕೊಡಲಿವೆ. ದೇವಸ್ಥಾನ- ಗುಡಿಗಳ ಜೀರ್ಣೋದ್ಧಾರಕ್ಕೆ ದೇಣಿಗೆಯನ್ನು ನೀಡುವ ಯೋಗ ಇದೆ.ರಹಸ್ಯ ಎಂದು ನಿಮ್ಮ ಬಳಿ ಹೇಳಿರುವಂಥದ್ದನ್ನು ನೀವಾಗಿಯೇ ಇತರರಿಗೆ ತಿಳಿಸುವುದಕ್ಕೆ ಹೋಗಬೇಡಿ. ಹೋಲ್ ಸೇಲ್ ದವಸ- ಧಾನ್ಯಗಳ ಮಾರಾಟ ವ್ಯವಹಾರ ಮಾಡುವಂಥವರಿಗೆ ವಿಸ್ತರಣೆಗೆ ಅವಕಾಶಗಳು ತೆರೆದುಕೊಳ್ಳಲಿವೆ. ಲೇವಾದೇವಿ ವ್ಯವಹಾರದಲ್ಲಿ ತೊಡಗಿರುವವರಿಗೆ ಕೆಲವರ ಬಳ ಕೂಡಲೇ ಹಣ ವಸೂಲಿ ಮಾಡಿಕೊಂಡು ಬಿಡೋಣ ಎಂದೇನಾದರೂ ಅನಿಸಿದಲ್ಲಿ ಅದರಂತೆಯೇ ನಡೆದುಕೊಳ್ಳಿ. ಮನೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಹಣವನ್ನು ವೆಚ್ಚ ಮಾಡಲಿದ್ದೀರಿ. ಗಡುವಿನಲ್ಲಿ ಮುಗಿಸಬೇಕಾದ ಕೆಲಸಗಳನ್ನು ಕೊನೆ ತನಕ ಮುಂದಕ್ಕೆ ಹಾಕದೆ, ಅವಧಿಗೂ ಮುನ್ನವೇ ಪೂರ್ಣಗೊಳಿಸಿ.
ನಿಮ್ಮ ಸ್ವಂತ ಸಮಸ್ಯೆಯನ್ನು ಎಲ್ಲರ ತೊಂದರೆ ಎಂಬಂತೆ ಮಾತನಾಡುವುದಕ್ಕೆ ಹೋಗಬೇಡಿ. ನಿಮ್ಮ ಬಳಿ ಏನಿದೆ ಅದಕ್ಕೆ ತಕ್ಕಂತೆ ಆಲೋಚನೆ ಮಾಡಿ. ಅಂದರೆ ಹಣ, ಸಮಯ, ಯೋಜನೆ ಹೀಗೆ ಯಾವ ಸಂಪನ್ಮೂಲ ಇದೆಯೋ ಅದಕ್ಕೆ ತಕ್ಕಂತೆ ಆಲೋಚನೆಯನ್ನು ಮಾಡಿಕೊಳ್ಳಿ. ಆರ್ಥಿಕವಾಗಿ ನಾನಾ ಕಡೆಯಿಂದ ಒತ್ತಡದ ಸನ್ನಿವೇಶ ಎದುರಾಗಲಿದೆ. ಕೆಲವು ವ್ಯಾಪಾರ- ವ್ಯವಹಾರದ ಅವಕಾಶ ತೆರೆದುಕೊಳ್ಳಲಿವೆ. ಅದರ ಕಾರಣಕ್ಕೆ ಓಡಾಟ ನಡೆಸಲಿದ್ದೀರಿ. ಯಾವ ವಿಚಾರಕ್ಕೆ ರಾಜೀ- ಸಂಧಾನ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲ ಎಂದು ಹೇಳಿದ್ದಿರೋ ಅದಕ್ಕೆ ಸಂಬಂಧಿಸಿದಂತೆ ನಿಮ್ಮ ನಿಲವು ಬದಲಾವಣೆ ಮಾಡಿಕೊಳ್ಳಲೇ ಬೇಕಾಗುತ್ತದೆ. ನೀವು ರಹಸ್ಯ ಎಂದು ಸ್ನೇಹಿತರ ಬಳಿ ಹೇಳಿಕೊಂಡಿದ್ದ ಕೆಲವು ಸಂಗತಿಗಳನ್ನು ಎಲ್ಲ ಕಡೆ ತಿಳಿಯುವಂತೆ ಮಾಡಿದ್ದಾರೆ ಎಂಬುದು ತಿಳಿದು ಬರಲಿದ್ದು, ಡ್ಯಾಮೇಜ್ ಕಂಟ್ರೋಲ್ ಗೆ ಏನು ಮಾಡಬೇಕು ಎಂಬ ಬಗ್ಗೆ ಯೋಜನೆ ರೂಪಿಸಲಿದ್ದೀರಿ.
ಬಹಳ ಸಮಯದಿಂದ ಒಂದೇ ವಿಷಯಕ್ಕೆ ಜಗ್ಗಾಡುತ್ತಲೇ ಇದ್ದಲ್ಲಿ ಅದರ ತೀರ್ಮಾನ ಮಾಡಿಕೊಂಡು ಬಿಡಬೇಕು ಎಂದು ನಿರ್ಧಾರ ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಪ್ರಕೃತಿ ಚಿಕಿತ್ಸೆ ಪಡೆಯಲು ಮುಂದಾಗಲಿದ್ದೀರಿ. ವಿವಾಹಕ್ಕೆ ಪ್ರಯತ್ನ ಮಾಡುತ್ತಾ ಇರುವವರಿಗೆ ಸ್ನೇಹಿತರು- ಸಂಬಂಧಿಗಳ ಮೂಲಕ ಒಳ್ಳೆ ರೆಫರೆನ್ಸ್ ದೊರೆಯಲಿದೆ. ಈ ಹಿಂದೆ ಒಮ್ಮೆ ವಿಚಾರಿಸಿಕೊಂಡು ಬಂದಂಥ ಸಂಬಂಧವೇ ಇದಾಗಿರುವ ಸಾಧ್ಯತೆ ಹೆಚ್ಚಿದೆ. ಆ ಕಾರಣಕ್ಕೆ ಇನ್ನೊಮ್ಮೆ ಯಾಕೆ ನೋಡಬೇಕು ಎಂಬ ಆಲೋಚನೆ ಬೇಡ. ನಿಮ್ಮಲ್ಲಿ ಯಾರು ವಾಸ್ತು, ಜ್ಯೋತಿಷ್ಯ ಇಂಥ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಾ ಇದ್ದೀರಿ ಅಂಥವರಿಗೆ ಕಿರಿಕಿರಿ ಆಗುವಂತಹ ಕೆಲವು ಬೆಳವಣಿಗೆಗಳು ಆಗಬಹುದು. ಅದರಲ್ಲೂ ಇಷ್ಟು ಸಮಯ ನಿಮ್ಮ ಜೊತೆಗೆ ಕೆಲಸ ಮಾಡುತ್ತಿದ್ದವರು ತಾವೇ ಸ್ವಂತ ಕಚೇರಿ ಆರಂಭಿಸಬಹುದು, ಅಥವಾ ನಿಮ್ಮ ಪ್ರತಿಸ್ಪರ್ಧಿ ಆಗಿರುವವರು ಬಳಿ ಉದ್ಯೋಗಿಯಾಗಿ ಹೋಗಬಹುದು.
ನಿಮ್ಮ ಮಾತಿನ ಮೂಲಕ ಪ್ರಭಾವ ಬೀರಿ, ಯಾವ ಕೆಲಸ- ಹೇಗೆ ಆಗಬೇಕೋ ಆ ರೀತಿಯಾಗಿ ಮಾಡಿಸಿಕೊಳ್ಳಲು ಯಶಸ್ವಿ ಆಗಲಿದ್ದೀರಿ. ವಿದೇಶಕ್ಕೆ ತೆರಳಬೇಕು ಎಂದು ಪ್ರಯತ್ನ ಮಾಡುತ್ತಿದ್ದು, ಅದರಲ್ಲಿ ನಾನಾ ಬಗೆಯ ಅಡೆತಡೆಗಳನ್ನು ಎದುರಿಸುತ್ತಾ ಇದ್ದಲ್ಲಿ ಅದನ್ನು ನಿವಾರಿಸಿಕೊಳ್ಳಲು ಬೇಕಾದ ಮಾರ್ಗೋಪಾಯಗಳು ಹೊಳೆಯಲಿವೆ. ಅಥವಾ ನಿಮ್ಮ ಸ್ನೇಹಿತರೋ- ಸಂಬಂಧಿಗಳೋ ಈ ಬಗ್ಗೆ ಕೆಲವು ಟಿಪ್ಸ್ ಗಳನ್ನು ನೀಡಲಿದ್ದಾರೆ. ಊಟ- ತಿಂಡಿ ವಿಚಾರಕ್ಕೆ ಜೋರು ಧ್ವನಿಯ ಮಾತುಕತೆ ಆಗುವಂಥ ಯೋಗ ಇದೆ. ನಿಮ್ಮ ಎದುರಿನಲ್ಲಿ ಇರುವವರು ಏನು ಹೇಳುತ್ತಾರೋ ಅದನ್ನು ಸಹ ಕೇಳಿಸಿಕೊಳ್ಳಿ. ನೀವು ಈ ಹಿಂದೆ ಬೇಡ ಅಂದುಕೊಂಡಿದ್ದ ಪ್ರಾಜೆಕ್ಟ್ ವೊಂದಕ್ಕೆ ಸಂಬಂಧಿಸಿದ ವ್ಯಕ್ತಿಗಳು ಮತ್ತೆ ಹುಡುಕಿಕೊಂಡು ಬರಬಹುದು. ಈ ಬಾರಿ ಹಿಂದೆ ಯಾವ ವಿಚಾರಕ್ಕೆ ಅಭಿಪ್ರಾಯ ಭೇದ ಮೂಡಿತ್ತೋ ಅದನ್ನು ಬಗೆಹರಿಸಿಕೊಂಡು ಮುಂದುವರಿಸಿಕೊಂಡು ಹೋಗುವ ಅವಕಾಶ ಇರುತ್ತದೆ, ಗಮನದಲ್ಲಿ ಇರಲಿ.
ದಂಪತಿ ಮಧ್ಯೆ ಮಕ್ಕಳ ವಿಚಾರಕ್ಕೆ ಬೇಸರ- ಕಲಹಗಳು ಆಗುವ ಸಾಧ್ಯತೆ ಇರುತ್ತದೆ. ನಾನು ಹೇಳಿದ್ದೇ ಆಗಬೇಕು ಎಂಬ ಹಠ ಯಾವ ಕಾರಣಕ್ಕೂ ಬೇಡ. ಅಲಂಕಾರಿಕ ವಸ್ತುಗಳಿಗೆ ಹೆಚ್ಚಿನ ಹಣವನ್ನು ಖರ್ಚು ಮಾಡುವಂಥ ಯೋಗ ಇದೆ. ನಿಮ್ಮ ಆಲೋಚನೆಗೆ ಹೊಂದಾಣಿಕೆ ಆಗುವ ವ್ಯಕ್ತಿಗಳಿಗೆ ಮಾತ್ರ ಸಲಹೆ- ಸೂಚನೆ, ಮಾರ್ಗದರ್ಶನ ಮಾಡಿ. ಈ ದಿನ ಸಾಧ್ಯವಾದಲ್ಲಿ ದುರ್ಗಾದೇವಿಯ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆಯಿರಿ. ಇದು ಸಾಧ್ಯವಿಲ್ಲ ಅಂತಾದಲ್ಲಿ ಮೊಬೈಲ್ ಫೋನ್ ನಲ್ಲಿ ದೇವಿಯ ಚಿತ್ರವನ್ನು ಸ್ಕ್ರೀನ್ ಸೇವರ್ ಆಗಿ ಹಾಕಿಕೊಳ್ಳಿ. ಮನೆ ಅಥವಾ ಸೈಟು ಖರೀದಿ ಮಾಡಬೇಕು ಎಂದು ಪ್ರಯತ್ನ ಮಾಡುತ್ತಾ ಇರುವವರಿಗೆ ಈ ನಿರ್ಧಾರವನ್ನು ತಾತ್ಕಾಲಿಕವಾಗಿ ಮುಂದೂಡಬೇಕು ಎಂದೆನಿಸಲಿದೆ. ಹೊಸದಾಗಿ ಪರಿಚಯ ಆಗುವಂಥ ವ್ಯಕ್ತಿಗಳಿಂದ ಕೆಲವು ಅನುಕೂಲಗಳು ಒದಗಿ ಬರಲಿವೆ.
ನಿಮ್ಮಲ್ಲಿ ಕೆಲವರಿಗೆ ಹಳೇ ಗೆಳೆಯ ಅಥವಾ ಗೆಳತಿಯ ನೆನಪು ವಿಪರೀತ ಕಾಡುವಂಥ ದಿನ ಇದಾಗಿರಲಿದೆ. ಅಥವಾ ಅಚಾನಕ್ ಆಗಿ ಭೇಟಿ ಆಗುವುದೋ ಅಥವಾ ಕಾಲ್ ಮಾಡುವುದೋ ಇಂಥದ್ದು ಕೂಡ ಆಗಬಹುದು. ಹೀಗೆ ಆಗುವುದರಿಂದ ನಿಮ್ಮ ಏಕಾಗ್ರತೆ ಕಳೆದುಕೊಳ್ಳುವಂತೆ ಆಗಲಿದೆ. ಹೊಸ ವಾಹನ ಖರೀದಿ ಮಾಡಿದ್ದೀರಿ ಅಂತಾದಲ್ಲಿ ಚಾಲನೆ ವೇಳೆ ಮುಂಜಾಗ್ರತೆ ವಹಿಸಿ. ಏಕೆಂದರೆ ಸಣ್ಣ ಪುಟ್ಟದಾದರೂ ಡೆಂಟ್ ಅಥವಾ ಪೇಂಟ್ ಹೋಗುವಂತಾಗುವುದು ಈ ರೀತಿಯಾದದ್ದು ಆಗಬಹುದು. ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ದಿನಾಂಕವನ್ನು ಒಮ್ಮೆ ಪರಿಶೀಲನೆ ಮಾಡಿಟ್ಟುಕೊಳ್ಳಿ. ಏಕೆಂದರೆ ಇದು ಕೂಡ ಮರೆತು, ಆ ನಂತರ ದಂಡದ ರೂಪದಲ್ಲಿ ಹೆಚ್ಚುವರಿಯಾಗಿ ಹಣ ಕಟ್ಟುವ ಮತ್ತು ನಿಮ್ಮ ಕ್ರೆಡಿಟ್ ಸ್ಕೋರ್ ಗೆ ಇದರಿಂದ ಸಮಸ್ಯೆಯಾಗುವ ಸಾಧ್ಯತೆ ಇದೆ. ಮುಖ್ಯವಾದ ವ್ಯಕ್ತಿಗಳ ಭೇಟಿಗೆ ತೆರಳುತ್ತೀರಿ ಅಂತಾದಲ್ಲಿ ಮುಂಚಿತವಾಗಿ ಅಲ್ಲಿರುವಂತೆ ಹೊರಡಿ.
ನೀವು ಯಾವುದನ್ನು ಕನಿಷ್ಠ ಪ್ರಮಾಣದ ಶಿಸ್ತು ಎಂದು ಭಾವಿಸಿರುತ್ತೀರೋ ಇತರರಿಗೆ ಅದು ಕಿರಿಕಿರಿಯಾಗಿ ಪರಿಣಮಿಸಲಿದೆ. ಅದರಲ್ಲೂ ನೀವು ಸ್ವಂತ ವ್ಯವಹಾರ- ವ್ಯಾಪಾರ ಮಾಡುವಂಥವರು ಆಗಿದ್ದಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಲೇ ಬೇಕು. ನಿಮಗೆ ಹಿರಿಯರಿಂದ ಬಂದಂಥ ಒಡವೆ, ಆಸ್ತಿ ಇಂಥವುಗಳನ್ನು ಮಾರಾಟ ಮಾಡುವ ಆಲೋಚನೆ ಮಾಡಲಿದ್ದೀರಿ. ಹೀಗೆ ಮಾಡುವ ಮುಂಚೆ ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿ, ಮುಂದಕ್ಕೆ ಹೆಜ್ಜೆಯನ್ನು ಇಡಿ. ಕ್ರೀಡಾಪಟುಗಳಿಗೆ ಬಹಳ ಉತ್ತಮವಾದ ದಿನ ಇದಾಗಿರಲಿದೆ. ಹೆಚ್ಚಿನ ತರಬೇತಿಗಾಗಿ ವಿದೇಶಗಳಿಗೆ ಅಥವಾ ನೀವು ಇರುವ ಸ್ಥಳದಲ್ಲಿಯೇ ಅತ್ಯುತ್ತಮ ತರಬೇತಿ ಸಂಸ್ಥೆಗಳಿಗೆ ತೆರಳುವ ಅವಕಾಶ ಸೃಷ್ಟಿ ಆಗಲಿದೆ. ನಿಮ್ಮಲ್ಲಿ ಯಾರಿಗೆ ಸೋದರ- ಸೋದರಿಯರು ಇದ್ದಾರೋ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಮಾಡುವುದು ಒಳ್ಳೆಯದು. ಈ ದಿನ ಅವರಿಗೆ ನಿಮ್ಮ ನೆರವಿನ ಅಗತ್ಯ ಕಂಡುಬರಲಿದೆ.
ಲೇಖನ- ಎನ್.ಕೆ.ಸ್ವಾತಿ