AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope: ನಿಮ್ಮ ರಾಶಿಗನುಗುಣವಾಗಿ ಡಿ. 14ರಿಂದ 20ರ ವರೆಗಿನ ವಾರಭವಿಷ್ಯ ತಿಳಿಯಿರಿ

ಡಿಸೆಂಬರ್ ಮೂರನೇ ವಾರದಲ್ಲಿ ಧನು ರಾಶಿಯಲ್ಲಿ ಸೂರ್ಯ, ಮಂಗಳ, ಶುಕ್ರ, ಚಂದ್ರರ ಸಮಾಗಮ ಮತ್ತು ಗುರುವಿನ ದೃಷ್ಟಿಯಿಂದ ಕೆಲವರಿಗೆ ಅತ್ಯುತ್ತಮ ಯಶಸ್ಸು ದೊರೆಯಲಿದೆ. ಸಾಡೇ ಸಾತ್ ಇರುವವರಿಗೆ ಮಾನಸಿಕ ಕಿರಿಕಿರಿ, ಆರೋಗ್ಯ ಹಾಗೂ ಹಣಕಾಸಿನ ಚಿಂತೆಗಳು ಎದುರಾಗಬಹುದು. ಈ ವಾರ ಪ್ರತಿಯೊಂದು ರಾಶಿಗೂ ಪ್ರೀತಿ, ಉದ್ಯೋಗ, ಹಣಕಾಸು ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಪ್ರಮುಖ ಭವಿಷ್ಯ ಇಲ್ಲಿದೆ.

Weekly Horoscope: ನಿಮ್ಮ ರಾಶಿಗನುಗುಣವಾಗಿ ಡಿ. 14ರಿಂದ 20ರ ವರೆಗಿನ ವಾರಭವಿಷ್ಯ ತಿಳಿಯಿರಿ
ವಾರ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷತಾ ವರ್ಕಾಡಿ|

Updated on: Dec 14, 2025 | 11:18 AM

Share

ಡಿಸೆಂಬರ್ ತಿಂಗಳ ಮೂರನೇ ವಾರ ಧನುವಿನಲ್ಲಿ ಸೂರ್ಯ, ಮಂಗಳ, ಶುಕ್ರ ಹಾಗು ಚಂದ್ರರ ಸಮಾಗಮ ಆಗಲಿದೆ. ಗುರುವಿನ ದೃಷ್ಟಿಯೂ ಇದ್ದು ಅವರಿಗೆ ಅತ್ಯುತ್ತಮ ಯಶಸ್ಸು‌. ನಾಲ್ಕೂ ದಶೆಗಳಿಗೂ ಉತ್ತಮವಾಗಲಿದೆ. ಸಾಡೇ ಸಾಥ್ ನವರಿಗೆ ಮಾನಸಿಕ ಕಿರಿಕಿರಿ, ಆರೋಗ್ಯದಲ್ಲಿ ತೊಂದರೆ, ಹಣಕಾಸಿನ ಚಿಂತೆಯಾಗಲಿದೆ. ಯಾವುದನ್ನೂ ಅಪೇಕ್ಷಿಸದೇ ಉಪೇಕ್ಷಿಸದೇ ನಿಶ್ಚಲ ಮನಸಿಂದ ಮುಂದುವರಿಯಿರಿ.

ಮೇಷ ರಾಶಿ:

ಈ ವಾರ ನೀವು ನಿಮ್ಮೊಳಗಿನ ಶಾಂತಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುವಿರಿ. ವ್ಯಾಪಾರ ಹಾಗೂ ಹಣಕಾಸಿನ ವಿಷಯಗಳಲ್ಲಿ ಅಪ್ರತೀಕ್ಷಿತ ಸಲಹೆಗಳು ಉಪಯುಕ್ತವಾಗಬಹುದು. ಹಳೆಯ ಬಾಕಿ ವ್ಯವಹಾರಗಳು ಮುಕ್ತಾಯದ ಹಂತಕ್ಕೆ ಬರಲಿವೆ. ಈ ವಾರ ವಾಸಸ್ಥಾನದ ವಿಚಾರದಲ್ಲಿ ಅಸ್ಥಿರತೆ ಕಂಡುಬರುವ ಸಾಧ್ಯತೆ ಇದೆ. ಸಂಗಾತಿಯ ಮನಸ್ಥಿತಿ ನಿಮಗೆ ಗೊಂದಲ ಉಂಟುಮಾಡಬಹುದು. ಸತ್ಯತೆಯನ್ನು ಹಿಡಿದಿಟ್ಟುಕೊಳ್ಳುವುದೇ ನಿಮ್ಮ ಶಕ್ತಿ.

ವೃಷಭ ರಾಶಿ:

ಎರಡನೇ ರಾಶಿಯವರಿಗೆ ಭವಿಷ್ಯದ ಕನಸುಗಳೇ ನಿಮ್ಮನ್ನು ಮುನ್ನಡೆಸುವ ವಾರ. ಸಮಯವನ್ನು ಸರಿಯಾಗಿ ಬಳಸದಿದ್ದರೆ ಪಶ್ಚಾತ್ತಾಪ ಉಂಟಾಗಬಹುದು. ಈ ವಾರ ಮಾಡುವ ಕಾರ್ಯದಲ್ಲಿ ತಾಯಿಯ ಆಶೀರ್ವಾದದಿಂದ ಮಾನಸಿಕ ಧೈರ್ಯ ಹೆಚ್ಚುವುದು. ರಾಶಿಯ ಅಧಿಪತಿ ಶುಕ್ರನ ಕಾರಣ ಉದ್ಯೋಗದಲ್ಲಿ ನಿಧಾನಗತಿಯ ಪ್ರಗತಿ ಕಂಡರೂ ಫಲ ಸಿಗಲಿದೆ. ಮನೆ ಹಾಗೂ ಆಸ್ತಿ ಕುರಿತ ಆಸೆಗಳು ತೀವ್ರವಾಗುತ್ತವೆ. ಅನಾವಶ್ಯಕ ಖರ್ಚು ತಪ್ಪಿಸಲು ಬಹಳ ಪ್ರಯಾಸ ಮಾಡುವಿರಿ.

ಮಿಥುನ ರಾಶಿ:

ಈ ತಿಂಗಳ ಮೂರನೇ ವಾರದಲ್ಲಿ ಹಳೆಯ ಸ್ನೇಹಗಳು ಹೊಸ ಅರ್ಥವನ್ನು ಪಡೆಯಲಿವೆ. ನಿಮ್ಮ ಸಾಮರ್ಥ್ಯವನ್ನು ಕೆಲಸದಲ್ಲಿ ತೋರಿಸಲು ಅವಕಾಶ ಸಿಗಲಿದೆ. ಯೋಜನೆಗಳು ಕಾರ್ಯರೂಪಕ್ಕೆ ಬರಬಹುದು. ಆದರೆ ಜನರ ಮಾತುಗಳಿಂದ ತಪ್ಪು ಅರ್ಥ ಮಾಡಿಕೊಳ್ಳಬೇಡಿ. ಕುಟುಂಬದ ಜೊತೆ ಸಮಯ ಕಳೆಯುವ ಮೂಲಕ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಈ ವಾರ ಹೂಡಿಕೆ ಮಾಡುವ ವಿಷಯದಲ್ಲಿ ವಿವೇಕ ಅಗತ್ಯ.

ಕರ್ಕಾಟಕ ರಾಶಿ:

ಈ ವಾರ ಭಾವನೆಗಳನ್ನು ಒಳಗೇ ಇಟ್ಟುಕೊಳ್ಳುವ ಸ್ವಭಾವ ಈ ವಾರ ಹೆಚ್ಚು ಕಾಣಿಸಿಕೊಳ್ಳಬಹುದು. ಸಣ್ಣ ವಿಷಯಗಳಿಗೂ ಕೋಪ ಹೆಚ್ಚಾಗುವ ಸಾಧ್ಯತೆ. ಹಣಕಾಸಿನ ವಿಷಯದಲ್ಲಿ ನಿರೀಕ್ಷಿತ ಫಲ ತಡವಾಗಬಹುದು. ಯಾರಾದರೂ ಏನಾದರೂ ಹೇಳಿದರೆ ಸಹೋದ್ಯೋಗಿಗಳೊಂದಿಗೆ ಸಂಯಮ ಇರಲಿ. ಮನಸ್ಸನ್ನು ಹಗುರಗೊಳಿಸಲು ಸೌಂದರ್ಯ, ಕಲೆ ಅಥವಾ ಸಂಗೀತದ ಕಡೆ ಒಲವು ಹೆಚ್ಚುವುದು.

ಸಿಂಹ ರಾಶಿ:

ಸೂರ್ಯನ ರಾಶಿಯವರಿಗೆ ಈ ವಾರ ಆರೋಗ್ಯದ ವಿಷಯದಲ್ಲಿ ವಿಶ್ರಾಂತಿ ಮಾತ್ರವಲ್ಲ, ಚಟುವಟಿಕೆಯೂ ಅಗತ್ಯ. ಜವಾಬ್ದಾರಿಗಳು ಹೆಚ್ಚಾದರೂ ಅದರ ಬಗ್ಗೆ ತೃಪ್ತಿ ಕಡಿಮೆ ಇರಬಹುದು. ಮಧ್ಯಭಾಗದಲ್ಲಿ ಆಪ್ತರಿಂದ ಅಚ್ಚರಿಯ ಉಡುಗೊರೆ ಸಿಗುವ ಸೂಚನೆ. ಮಾತಿನಲ್ಲಿ ಕಠೋರತೆ ಬೇಡ; ಅದೇ ನಿಮ್ಮ ಸಮಸ್ಯೆಗೆ ಕಾರಣವಾಗಬಹುದು. ನೀವು ಕೊಡುವ ವಿವೇಕಪೂರ್ಣ ಉತ್ತರಗಳು ಗೌರವ ತರುತ್ತವೆ.

ಕನ್ಯಾ ರಾಶಿ:

ಬುಧನ ಆಧಿಪತ್ಯದ ಈ ರಾಶಿಯವರಿಗೆ ಸಣ್ಣ ಆರೋಗ್ಯ ಸಮಸ್ಯೆಗಳು ಸುಧಾರಣೆಯ ದಿಕ್ಕಿನಲ್ಲಿ ಸಾಗುತ್ತವೆ. ಈ ವಾರ ಸ್ನೇಹ ಹಾಗೂ ಪ್ರವಾಸದಿಂದ ಹೊಸ ಉತ್ಸಾಹ ಮೂಡಬಹುದು. ಸಂಗಾತಿಯ ಜೊತೆ ಸಂಭಾಷಣೆಯಲ್ಲಿ ಜಾಗರೂಕತೆ ಅಗತ್ಯ. ಚರ್ಮ ಸಂಬಂಧಿತ ವಿಚಾರಗಳಿಗೆ ಗಮನ ಕೊಡಿ. ಮೂರನೇ ವಾರದಲ್ಲಿ ವೈಯಕ್ತಿಕ ಕಾರ್ಯಗಳನ್ನು ಕ್ರಮಬದ್ಧವಾಗಿ ಮುಗಿಸುವುದರಿಂದ ಆತ್ಮತೃಪ್ತಿ ದೊರೆಯುತ್ತದೆ.

ತುಲಾ ರಾಶಿ:

ಏಳನೇ ರಾಶಿಯವರಿಗೆ ಈ ವಾರ ಕುಟುಂಬದ ಜವಾಬ್ದಾರಿಗಳು ನಿಮ್ಮ ಮೇಲೆ ಹೆಚ್ಚಿನ ಒತ್ತಡ ತರುತ್ತವೆ. ಉದ್ಯೋಗದಲ್ಲಿ ಬದಲಾವಣೆಗಳ ಸಾಧ್ಯತೆ ಇದೆ. ಆಲಸ್ಯವನ್ನು ಬಿಟ್ಟು ಚಟುವಟಿಕೆಗೆ ಒತ್ತು ಕೊಡಿ. ಅನುಮಾನಗಳಿಂದ ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆ. ಈ ವಾರದಲ್ಲಿ ಹಲವರ ಒತ್ತಡದಿಂದ ಮಕ್ಕಳ ವಿವಾಹ ಅಥವಾ ಭವಿಷ್ಯದ ವಿಚಾರಗಳು ನಿಮ್ಮ ಗಮನ ಸೆಳೆಯುತ್ತವೆ.

ವೃಶ್ಚಿಕ ರಾಶಿ:

ಮೂರನೇ ವಾರದಲ್ಲಿ ಕುಜನ ಆಧಿಪತ್ಯದ ಈ ರಾಶಿಯವರಿಗೆ ಭೂಮಿ ಹಾಗೂ ಆಸ್ತಿ ಸಂಬಂಧಿತ ಕೆಲಸಗಳು ಸುಗಮವಾಗಿ ಸಾಗುವ ವಾರ. ಈ ರಾಶಿಯಲ್ಲಿ ಬುಧನಿದ್ದು ಕೆಲವರು ನಿಮ್ಮ ಪ್ರಯತ್ನಗಳನ್ನು ತಗ್ಗಿಸಿ ಮಾತನಾಡಬಹುದು. ಆರೋಗ್ಯವನ್ನು ನಿರ್ಲಕ್ಷ್ಯ ಮಾಡಿ ಎಲ್ಲವನ್ನೂ ಹಾಳುಮಾಡಿಕೊಳ್ಳುವುದು ಬೇಡ. ಮನೆಯಲ್ಲಿ ನಿಮ್ಮ ವಿವಾಹದ ಶುಭಕಾರ್ಯದ ಚರ್ಚೆ ನಡೆಯಬಹುದು. ಈ ವಾರ ನೌಕರಿಗೆ ಕೆಲಸ ಹೇಳುವಾಗ ಸ್ಪಷ್ಟತೆ ಇರಲಿ; ತಪ್ಪು ಅರ್ಥಗಳು ಸಮಸ್ಯೆ ತರಬಹುದು.

ಇದನ್ನೂ ಓದಿ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 14ರಿಂದ 20ರ ವರೆಗಿನ ವಾರಭವಿಷ್ಯ

ಧನು ರಾಶಿ:

ರಾಶಿ ಚಕ್ರದ ಒಂಭತ್ತನೇ ರಾಶಿಯವರಿಗೆ ಈ ವಾರ ಆಸೆಗಳನ್ನು ನಿಯಂತ್ರಿಸುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ದಾನ, ಧರ್ಮ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಕೇಳಿದವರಿಗೆ ಇಲ್ಲ ಎನ್ನುವ ಮಾತನ್ನು ಹೇಳಲಾರಿರಿ. ಶುಕ್ರ, ಕುಜ, ಸೂರ್ಯರಿದ್ದು ಬಾಕಿ ಯೋಜನೆಗಳು ಅಂತಿಮ ಹಂತ ತಲುಪಲು ಶತಪ್ರಯತ್ನ ಮಾಡುವಿರಿ. ಪ್ರಯಾಣದಲ್ಲಿ ಜಾಗರೂಕತೆ ಅಗತ್ಯ. ಬಂಧುಗಳ ಸಹಾಯದಿಂದ ಉದ್ಯೋಗ ಸಂಬಂಧಿತ ಅವಕಾಶಗಳು ಮೂಡಬಹುದು.

ಮಕರ ರಾಶಿ:

ಶನಿಯ ಆಧಿಪತ್ಯದ ಈ ರಾಶಿಗೆ ವಾರಾದಲ್ಲಿ ಮಾತಿನ ಜಗಳಗಳು ಅನವಶ್ಯಕವಾಗಿ ಹೆಚ್ಚಾಗಬಹುದು. ಕಾರ್ಯಗಳಲ್ಲಿ ವಿಳಂಬ ಕಂಡರೂ ಸಹನೆ ಇರಲಿ. ಕುಟುಂಬದ ಅಗತ್ಯಗಳನ್ನು ಅರಿತು ನಡೆದುಕೊಳ್ಳುವಿರಿ. ನಿಮ್ಮ ವಿದೇಶ ಪ್ರಯಾಣದ ಯೋಜನೆ ಈ ವಾರದಿಂದ ಬದಲಾಗುವ ಸಾಧ್ಯತೆ. ಮಕ್ಕಳಿಗೆ ನೀಡುವ ಪ್ರೋತ್ಸಾಹ ನಿಮಗೂ ಸಂತೋಷ ತರುತ್ತದೆ.

ಕುಂಭ ರಾಶಿ:

ಹನ್ನೊಂದನೇ ರಾಶಿಯವರಿಗೆ ಈ ವಾರ ಹಳೆಯ ವಿಷಯಗಳನ್ನು ಮರೆತು ಹೊಸದನ್ನು ಸ್ವೀಕರಿಸುವ ಮನಃಸ್ಥಿತಿ ಮೂಡುತ್ತದೆ. ಹಣಕಾಸಿನ ಒತ್ತಡ ಇದ್ದರೂ ಹೊಂದಾಣಿಕೆಯಿಂದ ಸಾಗುವಿರಿ. ಈ ವಾರ ಹೊಸ ವಾಹನ ಅಥವಾ ದೊಡ್ಡ ಖರೀದಿಯ ಚಿಂತನೆ ಬರಬಹುದು. ಕಚೇರಿಯ ಬಾಕಿ ಕೆಲಸಗಳು ಪೂರ್ಣಗೊಳ್ಳುತ್ತವೆ. ಕರ್ತವ್ಯದ ಕಡೆ ಗಮನ ಹೆಚ್ಚಿಸಿ.

ಮೀನ ರಾಶಿ:

ಗುರುವಿನ ಆಧಿಪತ್ಯದ ಈ ರಾಶಿಯಲ್ಲಿ ಶನಿಯ ಸಂಚಾರವಿದ್ದು ಉದ್ಯಮದಲ್ಲಿ ಬದಲಾವಣೆ ಅಗತ್ಯ ಎಂಬ ಅರಿವು ತಾನಾಗಿಯೇ ಬರುತ್ತದೆ. ಆತುರದ ನಿರ್ಧಾರಗಳಿಂದ ಗೊಂದಲ ಉಂಟಾಗಬಹುದು. ಕುಟುಂಬದ ಬೆಂಬಲದಿಂದ ಹೊಸ ಪ್ರಯತ್ನಗಳಿಗೆ ಧೈರ್ಯ ಸಿಗುತ್ತದೆ. ಈ ವಾರ ಹಣದ ಮೇಲೆ ನಿಯಂತ್ರಣ ಅಗತ್ಯ. ದಾಂಪತ್ಯ ಜೀವನದಲ್ಲಿ ಸೌಮ್ಯತೆ ಮತ್ತು ಪ್ರೀತಿ ಹೆಚ್ಚಾದರೆ ಎಲ್ಲವೂ ಸುಗಮ.

– ಲೋಹಿತ ಹೆಬ್ಬಾರ್ – 8762924271 (what’s app only)