Deepavali Yearly Finance Horoscope: ಮೇಷದಿಂದ ಮೀನದ ತನಕ 2025- 26ರ ದೀಪಾವಳಿ ಹಣಕಾಸು ವರ್ಷ ಭವಿಷ್ಯ

Diwali Rewards 2025: ದೀಪಾವಳಿ ಬಂತೆಂದರೆ ಹಿಂದಿನ ವರ್ಷದ, ಅಂದರೆ ಅಲ್ಲಿಂದ ಹನ್ನೆರಡು ತಿಂಗಳ ಹಿಂದಿನ ಖಾತೆ- ಹಣಕಾಸು ವ್ಯವಹಾರಗಳ ಲಾಭ, ನಷ್ಟಗಳನ್ನು ಲೆಕ್ಕ ಚುಕ್ತಾ ಮಾಡಿ, ಹೊಸ ಲೆಕ್ಕಾಚಾರದ ಪುಸ್ತಕ ತೆರೆಯುವ ಪರಿಪಾಠ ಕೆಲವು ಸಮುದಾಯಗಳಲ್ಲಿ ಇವೆ. ಅದರಲ್ಲೂ ವ್ಯಾಪಾರಿಗಳು, ವರ್ತಕರು, ವ್ಯವಹಾರಸ್ಥರು ಈ ಕ್ರಮವನ್ನು ಅನುಸರಿಸುತ್ತಾರೆ. ಷೇರು ಮಾರುಕಟ್ಟೆಯಲ್ಲಿ ಹಬ್ಬದ ಸಂದರ್ಭದಲ್ಲಿ ವಿಶೇಷ ವಹಿವಾಟು ಮಾಡುವುದನ್ನು ಸಹ ಗಮನಿಸಬಹುದು. ಈ ಹಿನ್ನೆಲೆಯಲ್ಲಿ ಜ್ಯೋತಿಷ್ಯದಲ್ಲಿನ ಗ್ರಹ ಗೋಚಾರದ ಆಧಾರದಲ್ಲಿ ಮೇಷದಿಂದ ಮೀನ ರಾಶಿಯ ತನಕ ಹನ್ನೆರಡು ರಾಶಿಯ ಆರ್ಥಿಕ ಭವಿಷ್ಯ ಮುಂದಿನ ಒಂದು ವರ್ಷ ಹೇಗಿರಲಿದೆ ಎಂಬುದನ್ನು ವಿವರಿಸುವ ಲೇಖನ ಇಲ್ಲಿದೆ.

Deepavali Yearly Finance Horoscope: ಮೇಷದಿಂದ ಮೀನದ ತನಕ 2025- 26ರ ದೀಪಾವಳಿ ಹಣಕಾಸು ವರ್ಷ ಭವಿಷ್ಯ
ಸಾಂದರ್ಭಿಕ ಚಿತ್ರ
Edited By:

Updated on: Oct 06, 2025 | 10:38 AM

ಅಕ್ಟೋಬರ್ 20, 2025ರಂದು ನರಕ ಚತುರ್ದಶಿ, ದೀಪಾವಳಿ (Deepavali) ಇದೆ. ಅಲ್ಲಿಂದ ಮುಂದಿನ ಒಂದು ವರ್ಷ, ಅಂದರೆ ಮುಂದಿನ ದೀಪಾವಳಿ ದಿನವಾದ ನವೆಂಬರ್ 8, 2026ರ ತನಕ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಗಳ ಹಣಕಾಸು ವರ್ಷ ಭವಿಷ್ಯ (Finance Yearly Horoscope) ಹೇಗಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗುವುದು. ಇದಕ್ಕಾಗಿ ಗ್ರಹಗಳ, ಅದರಲ್ಲೂ ಪ್ರಮುಖ ಎನಿಸುವಂತೆ ಒಂದು ರಾಶಿಯಲ್ಲಿ ದೀರ್ಘ ಕಾಲದ ತನಕ ಸಂಚರಿಸುವ ಶನಿ (Saturn), ಗುರು (Jupiter) ಹಾಗೂ ರಾಹು- ಕೇತು (Rahu-Ketu) ಸಂಚಾರವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.

ಈ ಅವಧಿಯಲ್ಲಿ, ಅಂದರೆ ದೀಪಾವಳಿ ದಿನವಾದ ಅಕ್ಟೋಬರ್ 20ನೇ ತಾರೀಕಿನಿಂದ ಡಿಸೆಂಬರ್ 5ನೇ ತಾರೀಕಿನ ತನಕ ಗುರು ಗ್ರಹ ಕರ್ಕಾಟಕ ರಾಶಿಯಲ್ಲಿ ಸಂಚರಿಸುತ್ತದೆ. ಆ ದಿನದಂದು ಮತ್ತೆ ಮಿಥುನ ರಾಶಿಗೆ ತೆರಳುವ ಗುರು ಗ್ರಹ, 2026ರ ಜೂನ್ 1ನೇ ತಾರೀಕಿಗೆ ಕರ್ಕಾಟಕ ರಾಶಿಗೆ ಪ್ರವೇಶ ಮಾಡಲಿದ್ದು, ಮುಂದಿನ ದೀಪಾವಳಿಗೂ ಅಲ್ಲಿಯೇ ಇರುತ್ತದೆ.

ಅಕ್ಟೋಬರ್ 20ನೇ ತಾರೀಕಿನಿಂದ ಮುಂದಿನ ದೀಪಾವಳಿವರೆಗೆ ಶನಿ ಗ್ರಹ ಮೀನ ರಾಶಿಯಲ್ಲೂ, ರಾಹು ಕುಂಭ ರಾಶಿಯಲ್ಲೂ ಹಾಗೂ ಕೇತು ಗ್ರಹ ಸಿಂಹ ರಾಶಿಯಲ್ಲೂ ಸಂಚರಿಸುತ್ತದೆ.

ಗೋಚಾರ ರೀತಿಯಾಗಿ ಆಗುವಂಥ ಬದಲಾವಣೆಯನ್ನು ಮಾತ್ರ ಪರಿಗಣಿಸಿದ್ದು, ಪ್ರಮುಖ ತೀರ್ಮಾನ- ನಿರ್ಧಾರಗಳನ್ನು ಮಾಡಬೇಕಾದ ಸಂದರ್ಭದಲ್ಲಿ ಜ್ಯೋತಿಷ್ಯ ಸಲಹೆ (Astrology Consultation) ತೆಗೆದುಕೊಳ್ಳ ಬೇಕು ಎಂದಾದಲ್ಲಿ ವೈಯಕ್ತಿಕ ಜಾತಕವನ್ನು ಪರಿಶೀಲನೆ ಮಾಡಿಸಿಕೊಳ್ಳುವುದು ಉತ್ತಮ. ಹಾಗೂ ಅದೇ ಸರಿಯಾದ ಮಾರ್ಗ. ದಶಾ, ಭುಕ್ತಿ ಮತ್ತು ಜನ್ಮ ಜಾತಕದಲ್ಲಿನ ಗ್ರಹ ಸ್ಥಿತಿ, ಬಲಾಬಲಗಳನ್ನು ಲೆಕ್ಕ ಹಾಕಿಸಿ, ಆ ನಂತರದಲ್ಲಿ ಜ್ಯೋತಿಷ್ಯ ಸಲಹೆಯನ್ನು ಪಡೆದುಕೊಳ್ಳುವುದು ಕರಾರುವಾಕ್ ಆಗಿರುತ್ತದೆ.

ಮೇಷ:

ಮನೆ- ಸೈಟು ಖರೀದಿ ಮಾಡಬೇಕು ಎಂದಿರುವವರು ಈ ಅವಧಿಯಲ್ಲಿ ಕೊಂಡುಕೊಳ್ತೀರಿ. ಆದರೆ ನೆನಪಿನಲ್ಲಿಡಿ, ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಸಾಲ ಆಗುತ್ತದೆ. ಅಥವಾ ವಿಪರೀತ ಉತ್ಸಾಹದಲ್ಲಿ ಅದನ್ನು ಮಾಡಿಸಬೇಕು, ಇದನ್ನು ಮಾಡಿಸಬೇಕು ಎಂದುಕೊಂಡು ಸಾಲ ಮಾಡಿಯೇ ಮಾಡುತ್ತೀರಿ. ಇನ್ನು ನಿಮ್ಮಲ್ಲಿ ಕೆಲವರು ಈಗಾಗಲೇ ಸೈಟು ಅಥವಾ ಜಮೀನು ಇರುವಂಥವರು, ಅದನ್ನು ಮಾರಾಟ ಮಾಡಿ, ಬಂದ ಹಣದಲ್ಲಿ ತಿಂಗಳಾ ತಿಂಗಳು ಆದಾಯ ಬರುವಂಥ ವ್ಯವಸ್ಥೆ ಮಾಡಿಕೊಳ್ಳಲು ಮುಂದಾಗುತ್ತೀರಿ. ನಿಮ್ಮಿಂದ ಆದ ತಪ್ಪಿಗೆ ಬೆಲೆಯನ್ನು ಕಟ್ಟಿಕೊಡುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಎಲ್ಲ ರೀತಿಯಲ್ಲೂ ನಿಮ್ಮ ಸಹಾಯಕ್ಕೆ ನಿಲ್ಲುತ್ತಿದ್ದ ಸ್ನೇಹಿತರನ್ನು ನಿಮ್ಮದೇ ಮಾತಿನಿಂದಾಗಿ ದೂರ ಮಾಡಿಕೊಳ್ಳುವ ಮೂಲಕ ಹಲವು ಬಗೆಯಲ್ಲಿ ನಷ್ಟ ಅನುಭವಿಸುವಂತೆ ಆಗಲಿದೆ. ಇನ್ನು ಹಣ ಉಳಿತಾಯ ಎಂಬುದು ಸಾಧ್ಯವೇ ಇಲ್ಲ ಎಂಬಂತಾಗುತ್ತದೆ. ಲೆಕ್ಕಾಚಾರದಂತೆ ಬದುಕು ಸಾಗದ ಪರಿಣಾಮವಾಗಿ ಸಾಲಗಾರರಾಗ್ತೀರಿ. ಬೇರೆಯವರ ಮೇಲೆ ಪ್ರತಿಷ್ಠೆಗೆ ಬಿದ್ದು ನೀವು ಮಾಡುವ ಕಾರ್ಯ ಸಮಸ್ಯೆಗೆ ಸಿಲುಕಿಸುತ್ತದೆ.

ವೃಷಭ:

ನಿಮ್ಮಲ್ಲಿ ಹಲವರಿಗೆ ಸಾಲ ಚುಕ್ತಾ ಮಾಡುವಂಥ ಯೋಗ ಇದೆ. ಆರ್ಥಿಕ ವಿಚಾರಗಳಲ್ಲಿ ಶಿಸ್ತು ತಂದುಕೊಂಡು, ಖರ್ಚು- ವೆಚ್ಚಗಳಲ್ಲಿ ಈ ಹಿಂದೆ ಆದ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಕ್ಕೆ ಸಾಗುತ್ತೀರಿ. ಉದ್ಯೋಗ- ವೃತ್ತಿ ಬದುಕಿನ ಮೂಲಕ ಬರುವ ಆದಾಯದ ಹೆಚ್ಚಳ ಆಗಲಿದೆ. ಕೆಲಸ ಬದಲಾವಣೆ ಮಾಡಬೇಕು ಎಂದುಕೊಳ್ಳುತ್ತಿರುವ ಕೆಲವರಿಗೆ ವಿದೇಶದಲ್ಲಿ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಇದರಿಂದಾಗಿ ಆದಾಯದಲ್ಲಿ ಹಾಗೂ ಆದಾಯ ಮೂಲದಲ್ಲಿಯೂ ಜಾಸ್ತಿ ಆಗಲಿದೆ. ಆದರೆ ಒಳ್ಳೆ ಕಾರಣಕ್ಕೋ ಅಥವಾ ಕೆಟ್ಟ ಕಾರಣಕ್ಕೋ ನಿಮಗೆ ಹೆಸರು ಹಾಗೂ ಆ ಮೂಲಕವಾಗಿ ಸ್ಥಾನ- ಮಾನ ಹೆಚ್ಚಾಗುವ ಅವಕಾಶಗಳು ಬರುತ್ತವೆ. ಸಂಗಾತಿ ಕಡೆಯಿಂದ ನಿಮಗೆ ಹಣಕಾಸು ಹರಿವು ಉತ್ತಮವಾಗಲಿದೆ. ಬರಬೇಕಾದ ಹಣದ ಬಾಕಿ ವಸೂಲಿ ಮಾಡುವುದಕ್ಕೆ ಈ ಅವಧಿಯಲ್ಲಿ ಅವಕಾಶಗಳು ತೆರೆದುಕೊಳ್ಳಲಿವೆ. ಕುಟುಂಬ ಸದಸ್ಯರ ಆರೋಗ್ಯ ಕಾರಣಗಳಿಗೆ, ಅದರಲ್ಲೂ ವೈದ್ಯಕೀಯ ಪರೀಕ್ಷೆಗಳಿಗೆ ಹೆಚ್ಚು ಹಣ ವ್ಯಯ ಆಗಬಹುದು. ನಿಮಗೆ ಸಂಬಂಧ ಪಡದ ವಿಷಯಗಳಲ್ಲಿ ಮೂಗು ತೂರಿಸದೆ ದೂರ ಉಳಿಯುವುದು ಕ್ಷೇಮ.

ಮಿಥುನ:

ಈ ಹಿಂದೆ ನೀವು ತೆಗೆದುಕೊಂಡ ನಿರ್ಧಾರಗಳು ಆರ್ಥಿಕವಾಗಿ ನರಳುವಂತೆ ಮಾಡಲಿವೆ. ಕೆಲವು ಹೊಸ ಆದಾಯ ಮೂಲ ಅಥವಾ ಹೆಚ್ಚಿನ ಹಣ ಒಂದೆರಡು ತಿಂಗಳ ಮಟ್ಟಿಗೆ ಬಂದಿದೆ ಎಂಬುದನ್ನು ನೆಚ್ಚಿಕೊಂಡು, ಅದರ ಆಧಾರದಲ್ಲಿಯೇ ದೊಡ್ಡ ದೊಡ್ಡ ಕೆಲಸಕ್ಕೆ ಕೈ ಹಾಕಬೇಡಿ. ನಿಮ್ಮ ಅಂದಾಜು ಅಥವಾ ಲೆಕ್ಕಾಚಾರಗಳು ಒಂದಿಷ್ಟು ಕೂಡ ಕೈ ಹಿಡಿಯುವುದಿಲ್ಲ. ಆದ್ದರಿಂದ ನಿಮಗೆ ಹಿರಿಯರ- ಅನುಭವಿಗಳ ಮಾರ್ಗದರ್ಶನ ಅಗತ್ಯ ಬೀಳುತ್ತದೆ. ನಿಮ್ಮಲ್ಲಿ ಕೆಲವರು ಈ ಅವಧಿಯಲ್ಲಿ ಉದ್ಯೋಗವನ್ನು ಬಿಟ್ಟು ಅಥವಾ ಈಗ ಮಾಡುತ್ತಿರುವ ವೃತ್ತಿಯನ್ನು ಬಿಟ್ಟು, ಹೊಸ ವ್ಯವಹಾರಕ್ಕೆ ಕೈ ಹಾಕಲು ಮುಂದಾಗುತ್ತೀರಿ. ಇದರಿಂದ ಆರ್ಥಿಕ ಒತ್ತಡ ಹೆಚ್ಚಾಗಲಿದೆ. ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡಲು ಸಾಧ್ಯವಾಗದಿರುವುದು ಅಥವಾ ನೀವು ಪಡೆದ ಸಾಲದ ಇಎಂಐ ಪಾವತಿ ಮಾಡಲಿಕ್ಕಾಗದೆ ಕ್ರೆಡಿಟ್ ಸ್ಕೋರ್ ಕಡಿಮೆ ಆಗುವುದು ಹಾಗೂ ಇದೇ ವೇಳೆ ನಿಮಗೆ ಸಾಲ ನೀಡುವುದಾಗಿ ಮಾತು ನೀಡಿದ್ದವರು ಕೊನೆ ಕ್ಷಣದಲ್ಲಿ ತಮ್ಮಿಂದ ಸಾಧ್ಯವಿಲ್ಲ ಎಂದು ಹೇಳುವುದು- ಇಂಥ ಬೆಳವಣಿಗೆಗಳು ನಿಮ್ಮಲ್ಲಿ ಹಲವರಿಗೆ ಆರೋಗ್ಯ ಸಮಸ್ಯೆಗಳನ್ನು ತರುತ್ತವೆ.

ಕರ್ಕಾಟಕ:

ಪಾರ್ಟನರ್ ಷಿಪ್ ನಲ್ಲಿ ಯಾವುದೇ ವ್ಯಾಪಾರ- ವ್ಯವಹಾರ ಮಾಡುವುದಕ್ಕೆ ಮುಂದಾದಲ್ಲಿ ಅದರಲ್ಲಿ ಭಾರೀ ನಷ್ಟವನ್ನು ಅನುಭವಿಸ ಬೇಕಾಗುತ್ತದೆ. ನಿಮ್ಮ ಎದುರಿಗೆ ಇರುವ ವ್ಯಕ್ತಿಗಳು ಹೇಳುವ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳದೆ ಅಥವಾ ಅರ್ಥ ಗ್ರಹಿಸದೆ ಆರ್ಥಿಕ ನಷ್ಟವನ್ನು ಅನುಭವಿಸುವ ಯೋಗ ನಿಮ್ಮ ಪಾಲಿಗೆ ಇದೆ. ಭಾವನಾತ್ಮಕವಾಗಿ ದುರ್ಬಲರಾದಾಗ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಹೋಗಬೇಡಿ. ಅದರಲ್ಲೂ ಮುಖ್ಯವಾಗಿ ಕಾರ್ಯಕ್ರಮ- ಸಮಾರಂಭಗಳ ಖರ್ಚು ವೆಚ್ಚಗಳ ವಿಚಾರದಲ್ಲಿ ನಿಮ್ಮ ಲೆಕ್ಕಾಚಾರಗಳು ತಪ್ಪಾಗುವ ಮತ್ತು ಅದೇ ಸಂದರ್ಭದಲ್ಲಿ ಇತರರನ್ನು ತೊಂದರೆಗೆ ಸಿಲುಕಿಸುವ ಸಾಧ್ಯತೆ ಇರುತ್ತದೆ. ಒಂದೇ ಕೆಲಸವನ್ನು ಪದೇ ಪದೇ ಮಾಡಬೇಕಾಗಿ ಬರುವುದರಿಂದ ವೆಚ್ಚದ ಹೊರೆ ಮೇಲೆ ಬೀಳುತ್ತದೆ. ನಿಮ್ಮ ಸಾಮರ್ಥ್ಯವನ್ನು ಮೀರಿದ ಕೆಲಸಗಳು ವಹಿಸಿಕೊಳ್ಳುವುದಕ್ಕೆ ಹೋಗಬೇಡಿ. ಹಾಗೊಂದು ವೇಳೆ ಮಾಡಿದಲ್ಲಿ ಕೈಯಿಂದ ಹಣ ಹಾಕಿಕೊಂಡು, ನಷ್ಟ ಮಾಡಿಕೊಂಡು ಕೆಲಸ ಮುಗಿಸಿಕೊಡಬೇಕಾದ ಸನ್ನಿವೇಶ ಸೃಷ್ಟಿ ಆಗುತ್ತದೆ. ವಿಲಾಸಿ ವಸ್ತುಗಳ ಖರೀದಿಗೆ ಸಿಕ್ಕಾಪಟ್ಟೆ ಖರ್ಚು ಮಾಡಿ, ಆ ನಂತರ ಪರಿತಪಿಸುತ್ತೀರಿ.

ಸಿಂಹ:

ಆಸ್ಪತ್ರೆ, ವೈದ್ಯಕೀಯ ವೆಚ್ಚಕ್ಕೆ ಖರ್ಚುಗಳು ಸಿಕ್ಕಾಪಟ್ಟೆ ಆಗಲಿವೆ. ಇನ್ನು ನಿಮ್ಮಲ್ಲಿ ಕೆಲವರು ವ್ಯಾಜ್ಯಗಳ ಕಾರಣಕ್ಕೆ ಕೋರ್ಟ್- ಕಚೇರಿ ಮೆಟ್ಟಿಲೇರುವಂಥ ಸಾಧ್ಯತೆಗಳಿವೆ. ಭೂಮಿಗೆ ಸಂಬಂಧಿಸಿದ ಕಾನೂನು ತೊಡಕುಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ವೇದಿಕೆ ದೊರೆಯಲಿದೆ. ಆದರೆ ಅದರ ಮೂಲಕ ನೀವು ಅಂದುಕೊಂಡ ಮಟ್ಟಕ್ಕೆ ಲಾಭ ಬರುವುದಿಲ್ಲ. ನೀವು ಸ್ನೇಹಿತರು- ಸಂಬಂಧಿಗಳಿಂದ ಸಾಲವನ್ನು ಪಡೆದುಕೊಂಡಿದ್ದಲ್ಲಿ ಅವಮಾನಕ್ಕೆ ಗುರಿ ಆಗುತ್ತೀರಿ. ನಿಮ್ಮ ಯಾವುದೇ ವ್ಯವಹಾರವನ್ನು ಮೇ ತಿಂಗಳ ಕೊನೆಯ ಒಳಗಾಗಿ ಪೂರ್ಣ ಮಾಡುವುದಕ್ಕೆ ಶ್ರಮ ಹಾಕಿ. ಅದರ ಆಚೆಗೆ ಆದಲ್ಲಿ ವಿಪರೀತ ಶ್ರಮ ಹಾಕಿ ಕೆಲಸ ಮುಗಿಸಿಕೊಳ್ಳ ಬೇಕಾಗುತ್ತದೆ. ಸೈಟು- ಜಮೀನು ಅಥವಾ ಫ್ಲ್ಯಾಟ್ ಖರೀದಿ ಮಾಡಬೇಕು ಎಂದು ನೀವು ನೀಡಿದ ಹಣವು ಹಾಗೇ ತಗುಲಿ ಹಾಕಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ವ್ಯವಹಾರಕ್ಕೆ ಸಂಬಂಧಿಸಿದ ಕಾನೂನು ವಿಷಯಗಳನ್ನು ಸರಿಯಾಗಿ ತಿಳಿದುಕೊಂಡ ನಂತರವಷ್ಟೇ ಮುಂದಕ್ಕೆ ಹೆಜ್ಜೆ ಇಡಿ. ಮದುವೆ ನಿಶ್ಚಯ ಆಗಿರುವವರು ಮೂರನೇ ವ್ಯಕ್ತಿಗಳ ಮಾತು ಕೇಳಿಕೊಂಡು, ಮದುವೆ ಮುರಿದುಕೊಳ್ಳುವ ಹಾಗೂ ಅದಕ್ಕೆ ನಷ್ಟ ಪರಿಹಾರ ಕಟ್ಟಿಕೊಡಬೇಕಾದ ಸನ್ನಿವೇಶ ಸಹ ಬರಬಹುದು.

ಕನ್ಯಾ:

ಜಮೀನು ಇರುವಂಥವರು ಅಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಹಣವನ್ನು ಹೂಡಿಕೆ ಮಾಡಲಿದ್ದೀರಿ. ಕಾರು ಹಾಗೂ ಸ್ಕೂಟರ್, ಬೈಕ್ ಇಂಥವುಗಳನ್ನು ಖರೀದಿ ಮಾಡಲಿದ್ದೀರಿ. ಕುಟುಂಬ ಸದಸ್ಯರ ಅಗತ್ಯಗಳಿಗೆ ಖರ್ಚು- ಹೂಡಿಕೆ ಮಾಡಲಿದ್ದೀರಿ. ಹಣಕಾಸಿನ ಹರಿವು ನಿಧಾನವಾಗಿದೆ ಎಂಬ ಕಾರಣಕ್ಕೆ ವಿಳಂಬ ಆಗುತ್ತಾ ಬಂದಿದ್ದ ಕೆಲಸ- ಕಾರ್ಯಗಳು ವೇಗವನ್ನು ಪಡೆಯಲಿವೆ. ಮನೆಯಲ್ಲಿ ದೊಡ್ಡ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದಕ್ಕೆ ಹಾಗೂ ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ನೀಡಲಿಕ್ಕೆ ಹಣ ವ್ಯಯ ಮಾಡಲಿದ್ದು, ಬಹು ವರ್ಷಗಳ ನಿಮ್ಮ ಕನಸುಗಳು ಈಡೇರಲಿವೆ. ನಿಮಗಿಂತ ಬಲಿಷ್ಠರಾದವರನ್ನು ಉದ್ಯೋಗ ಅಥವಾ ವೃತ್ತಿ ಕ್ಷೇತ್ರದಲ್ಲಿ ಎದುರು ಹಾಕಿಕೊಳ್ಳುವುದರಿಂದ ನಷ್ಟವನ್ನು ಕಾಣುವಂತಾಗುತ್ತದೆ. ಮೊದಮೊದಲಿಗೆ ನಿಮಗೆ ಹಿನ್ನಡೆ ಆದಂತೆ ಕಂಡುಬಂದರೂ ಈ ಸನ್ನಿವೇಶವನ್ನು ಸಾಧಕವಾಗಿ ಪರಿವರ್ತನೆ ಮಾಡಿಕೊಳ್ಳುವುದಕ್ಕೆ ಯಶಸ್ವಿ ಆಗಲಿದ್ದೀರಿ. ಹಣದ ಹರಿವು ಏರಿಳಿತದಿಂದ ಆಗಾಗ ಚಿಂತೆ ತಂದಿಟ್ಟರೂ ಅದನ್ನು ಮೀರುವುದಕ್ಕೆ ಸಾಧ್ಯವಾಗಲಿದೆ.

ತುಲಾ:

ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ಮಾಡುವವರಿಗೆ ಹೆಚ್ಚು ಶ್ರಮದಾಯಕ ಆಗಿರುತ್ತದೆ. ಒಂದು ಕೆಲಸಕ್ಕೆ ಇಂತಿಷ್ಟೇ ಖರ್ಚಾಗುವುದು ಎಂಬ ಲೆಕ್ಕಾಚಾರ ಗೊತ್ತಿದ್ದರೂ ಹೆಚ್ಚಿನ ಹಣವನ್ನು ಖರ್ಚು ಮಾಡಿ, ಕೆಲಸ- ಕಾರ್ಯಗಳನ್ನು ಮಾಡಿಸಿಕೊಳ್ಳಬೇಕಾದ ಸನ್ನಿವೇಶ ಇರುತ್ತದೆ. ನಿಮ್ಮಲ್ಲಿ ಕೆಲವರು ಎಷ್ಟು ಆದಾಯ ಬರುತ್ತದೋ ಬರಲಿ ಎಂದು ಅದರ ಪಾಡಿಗೆ ಬಿಟ್ಟು, ಎದ್ದು ಬಿದ್ದು ಕೆಲಸ ಮಾಡುವ ಧೋರಣೆಯನ್ನೇ ಬಿಡಲಿದ್ದೀರಿ. ಧಾರ್ಮಿಕ ಕ್ಷೇತ್ರವನ್ನೇ ವೃತ್ತಿಯಾಗಿ ಆರಿಸಿಕೊಂಡಂಥವರಿಗೆ ಆದಾಯ ಮತ್ತು ಆದಾಯ ಮೂಲಗಳು ಹೆಚ್ಚಾಗಲಿವೆ. ನಿಮ್ಮ ಕೆಲಸಕ್ಕೆ ಆದಾಯ ಬರುವ ಜೊತೆಗೆ ಹೆಸರು, ಸನ್ಮಾನಗಳು ಸಹ ಹುಡುಕಿಕೊಂಡು ಬರಲಿವೆ. ಮಕ್ಕಳ ಸಲುವಾಗಿ ಹೆಚ್ಚಿನ ಖರ್ಚು- ವೆಚ್ಚಗಳು ಆಗಲಿವೆ. ಇನ್ನು ಅತಿ ಬುದ್ಧಿವಂತಿಕೆ ಮಾಡುವುದಕ್ಕೆ ಹೋಗಿ, ಬರಬೇಕಾದ ಲಾಭದ ಪ್ರಮಾಣ ಇಳಿಮುಖ ಆಗಬಹುದು ಅಥವಾ ನಿರೀಕ್ಷೆ ಮಾಡಿದ ಮಟ್ಟಕ್ಕೆ ಹಣದ ಹರಿವು ಇರುವುದಿಲ್ಲ. ಪಿತ್ರಾರ್ಜಿತ ಆಸ್ತಿ ವ್ಯವಹಾರಗಳು ಇತ್ಯರ್ಥ ಆಗಬೇಕು ಎಂದಿದ್ದಲ್ಲಿ ಅದು ಸಾಧ್ಯವಾಗಲಿದೆ. ಪ್ರಭಾವಿಗಳು ನಿಮ್ಮ ಪರವಾಗಿ ಮಾತನಾಡಿ, ಕೆಲವು ಅನುಕೂಲಗಳನ್ನು ಮಾಡಿಕೊಡಲಿದ್ದಾರೆ.

ವೃಶ್ಚಿಕ:

ಹಣಕಾಸಿನ ವಿಚಾರ ನಿಮ್ಮನ್ನು ಹಣ್ಣುಗಾಯಿ- ನೀರುಗಾಯಿ ಮಾಡಲಿದೆ. ಅಷ್ಟೇನೂ ಆಸಕ್ತಿ ಕೊಡದೆ, ಇರಲಿ ಅಂತಷ್ಟೇ ಅಂದುಕೊಂಡು ನೀವು ಭಾಗಿಯಾದ ಕೆಲಸ- ಕಾರ್ಯಗಳಲ್ಲಿ ನಿರೀಕ್ಷೆಗೂ ಮೀರಿದ ಆದಾಯ ಬರುತ್ತದೆ. ಬಹಳ ಶ್ರಮ ಹಾಕಿ, ಕಷ್ಟಪಟ್ಟು ಮಾಡಿದ ಪ್ರಾಜೆಕ್ಟ್ ಗಳು ಅಂದುಕೊಂಡ ಮಟ್ಟಕ್ಕೆ ಆದಾಯ ತರುವುದಿಲ್ಲ. ಯಾವುದಕ್ಕೆ ಸಂಭ್ರಮಿಸುವುದು ಎಂಬುದರ ಗೊಂದಲ ಹಾಗೂ ಬೇಸರದ ಕಾರಣಕ್ಕೆ ನಿಮ್ಮಲ್ಲಿ ಹಲವರು ಹೊಸ ಕೆಲಸಗಳನ್ನು ಸದ್ಯಕ್ಕೆ ಒಪ್ಪಿಕೊಳ್ಳುವುದು ಬೇಡ ಅಂತ ಅಂದುಕೊಳ್ಳುವ ಸಾಧ್ಯತೆಗಳು ಸಹ ಇವೆ. ನಿಮ್ಮ ತಂದೆ- ತಾಯಿ ಬಳಿ ಬಹಳ ಸಮಯದಿಂದ ಹೇಳುತ್ತಾ ಬಂದಂಥ ವಿಚಾರಗಳು ಅನುಷ್ಠಾನಕ್ಕೆ ಬರುವ ಸನ್ನಿವೇಶ ಸೃಷ್ಟಿ ಆಗಲಿದೆ. ನಿಮ್ಮಲ್ಲಿ ಕೆಲವರು ಹೆಚ್ಚಿನ ಬಡ್ಡಿ ಕಟ್ಟುತ್ತಿರುವ ಸಾಲಗಳನ್ನು ತೀರಿಸಿಕೊಂಡು ಬಿಡಬೇಕು ಎಂದುಕೊಳ್ಳಲಿದ್ದೀರಿ. ಅದಕ್ಕಾಗಿ ಪಿಎಫ್ ಹಣ ಅಥವಾ ಮ್ಯೂಚುವಲ್ ಫಂಡ್ ನಲ್ಲಿ ಮಾಡಿದ್ದ ಹೂಡಿಕೆಯನ್ನು ಹಿಂತೆಗೆದುಕೊಳ್ಳುವ ಆಲೋಚನೆಯನ್ನು ಮಾಡಲಿದ್ದೀರಿ. ಸಂಬಂಧಿಗಳ ಮಧ್ಯೆ ಹಣಕಾಸಿನ ವಿಚಾರಕ್ಕಾಗಿಯೇ ನಿಮಗೆ ಅವಮಾನವೊಂದು ಆಗಿ, ಆ ನಂತರದಲ್ಲಿ ಹಲವು ಬದಲಾವಣೆಗಳನ್ನು ಅಳವಡಿಸಿಕೊಳ್ಳಲಿದ್ದೀರಿ.

ಧನುಸ್ಸು:

ಕೆಲವು ಸಂತೋಷದಲ್ಲಿ ಮೈ ಮರೆತು, ಅವಕಾಶಗಳು ಕೈ ತಪ್ಪಲಿವೆ. ಆರ್ಥಿಕ ಸ್ಥಿತಿಯಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದರೂ ಆರಾಮವಾಗಿ ಇದ್ದುಬಿಡುವ ಸ್ವಭಾವ ಇದ್ದಲ್ಲಿ ಅದನ್ನು ಬದಲಾಯಿಸಿ ಕೊಳ್ಳಲೇಬೇಕು. ಹೊಸ ವ್ಯವಹಾರ ಆರಂಭಿಸಲೇ ಬೇಕು ಎಂಬ ಒತ್ತಡವು ವಿವಾಹಿತರಿಗೆ ಸಂಗಾತಿ ಹಾಗೂ ಮಾವನ ಮನೆಯವರ ಕಡೆಯಿಂದ ವಿಪರೀತ ಹೆಚ್ಚಾಗಲಿದೆ. ಸೋದರ ಅಥವಾ ಸೋದರಿ ಜೊತೆಗೆ ಆಸ್ತಿಗೆ ಸಂಬಂಧಿಸಿದ ವ್ಯಾಜ್ಯಗಳು ಇದ್ದಲ್ಲಿ ಅವು ತಾರಕಕ್ಕೆ ಏರಬಹುದು. ನಿಮ್ಮಲ್ಲಿ ಕೆಲವರು ಇದೇ ಕಾರಣಕ್ಕೆ ಕೋರ್ಟ್- ಪೊಲೀಸ್ ಠಾಣೆ ಮೆಟ್ಟಿಲೇರುವಂಥ ಸನ್ನಿವೇಶ ಎದುರಾಗಲಿವೆ. ಈ ಅವಧಿಯಲ್ಲಿ ನಿಮ್ಮ ಸ್ವಾರ್ಥ ಪರ ಚಿಂತನೆಯೊಂದು ನಿಮಗೆ ದೊರೆಯ ಬೇಕಿದ್ದ ಹಣಕಾಸು ಹರಿವಿನ ಅವಕಾಶಗಳನ್ನು ಕಸಿದುಕೊಳ್ಳಲಿದೆ. ಯಾರಿಗೂ ಗೊತ್ತಾಗದಂತೆ ನಿರ್ವಹಿಸುತ್ತೇನೆ ಎಂದು ಆಲೋಚನೆ ಮಾಡುವ ಗೋಜಿಗೆ ಹೋಗಬೇಡಿ. ಬಾಡಿಗೆ ಆದಾಯ ಬರುವಂಥ ಆಸ್ತಿ ಖರೀದಿ ಮಾಡಬೇಕು ಎಂದುಕೊಳ್ಳುತ್ತಿರುವವರಿಗೆ ಉದ್ದೇಶ ಈಡೇರಲಿದೆ. ಆದರೆ ಈ ಬೆಳವಣಿಗೆಯಿಂದ ನಿಮ್ಮ ತಂದೆ- ತಾಯಿಗೆ ಅಸಮಾಧಾನ ಆಗಬಹುದು. ಅಂದರೆ ಈ ಪ್ರಯತ್ನದಲ್ಲಿ ನಿಮ್ಮ ನಡವಳಿಕೆ ಹಾಗೂ ಮಾತುಗಳು ಅವರ ಬೇಸರಕ್ಕೆ ಕಾರಣ ಆಗಬಹುದು.

ಮಕರ:

ದೊಡ್ಡ ಮೊತ್ತದ ಹಣ ಬಂದುಬಿಡಬಹುದು ಎಂಬ ಅಂದಾಜಿನಲ್ಲಿ ನೀವು ವಿಪರೀತ ಶ್ರಮ ಹಾಕಿ, ಮಾಡಿದ ಕೆಲಸ- ಕಾರ್ಯಗಳು ಅಂದುಕೊಂಡ ಮಟ್ಟಕ್ಕೆ ಆದಾಯ ತರುವುದಿಲ್ಲ. ಈ ಕಾರಣದಿಂದ ಕೆಲವು ಕೆಲಸಗಳಲ್ಲಿ ಆಸಕ್ತಿಯನ್ನೇ ಕಳೆದುಕೊಂಡು ಬಿಡುತ್ತೀರಿ. ಯಾವುದು ನಿಮ್ಮ ದೀರ್ಘಾವಧಿಗೆ ಕೈ ಹಿಡಿಯುವ ಆದಾಯ ಮೂಲ ಆಗುತ್ತದೆ ಎಂದುಕೊಂಡಿರುತ್ತೀರೋ ಅಲ್ಲಿಂದಲೇ ಹೊರಗೆ ಬರಬೇಕಾದ ಸನ್ನಿವೇಶಗಳು ಎದುರಾಗುತ್ತವೆ. ಪಾರ್ಟನರ್ ಷಿಪ್ ನಲ್ಲಿ ವ್ಯವಹಾರ ಮಾಡುವ ಪ್ರಸ್ತಾವಗಳು ಬಂದಲ್ಲಿ ಗಂಭೀರವಾಗಿ ಪರಿಗಣಿಸಿ. ಹೊಸಬರು ನಿಮಗೆ ದೊಡ್ಡ ಮೊತ್ತದ ಆರ್ಡರ್ ಅಥವಾ ಕೆಲಸ ಕೊಡಿಸುವ ಮಾತುಗಳನ್ನು ಆಡಿದಲ್ಲಿ ಏಕಾಏಕಿ ಇರುವ ಕೆಲಸ ಬಿಡುವುದಕ್ಕೆ ಹೋಗಬೇಡಿ. ಇನ್ನು ನಿಮಗಿಂತ ಹಿರಿಯರೊಬ್ಬರು ಹಾಗೂ ಈ ಹಿಂದೆ ಜೊತೆಗೆ ಕೆಲಸ ಮಾಡಿದವರು ಅಥವಾ ನಿಮ್ಮನ್ನು ಬಹಳ ಹತ್ತಿರದಿಂದ ಗಮನಿಸುತ್ತಾ ಬಂದವರು ದೊಡ್ಡ ಮಟ್ಟದಲ್ಲಿ ನಿಮ್ಮ ಬೆನ್ನಿಗೆ ನಿಂತು ಕೆಲವು ಪ್ರಾಜೆಕ್ಟ್ ಗಳನ್ನು ನಿಮಗೆ ಕೊಡಿಸಲಿದ್ದಾರೆ. ಲೋಹದ ಮೂಲಕ ಒಳ್ಳೆ ಆದಾಯ, ಲಾಭವನ್ನು ಮಾಡುವ ಯೋಗ ಇದೆ. ನಿಮ್ಮಲ್ಲಿ ಯಾರು ಕಮಾಡಿಟಿ ಮಾರ್ಕೆಟ್ ನಲ್ಲಿ ವ್ಯವಹಾರ ಮಾಡುತ್ತೀರಿ, ಅಂಥವರಿಗೆ ಒಳ್ಳೆ ಲಾಭ ಗಳಿಸುವ ಯೋಗ ಇದೆ.

ಇದನ್ನೂ ಓದಿ: ಅಕ್ಟೋಬರ್ ತಿಂಗಳಲ್ಲಿ ಯಾವ ರಾಶಿಗೆ ಯಾವ ಫಲ, ಇಲ್ಲಿದೆ ನೋಡಿ

ಕುಂಭ:

ಕಡಿಮೆಗೆ ಸಿಗುತ್ತಾ ಇದೆಯಂತೆ ಸಾಲ ಮಾಡಿಯಾದರೂ ಹಣ ತಂದು, ಹೂಡಿಕೆ ಮಾಡಿಬಿಡೋಣ ಎಂಬ ಆಲೋಚನೆಯಿಂದ ಹೊರಬರುವುದು ಬಹಳ ಮುಖ್ಯ. ಮುಂದಿನ ವರ್ಷದ ಅಕ್ಟೋಬರ್ ನಿಂದ ಡಿಸೆಂಬರ್ ಮೊದಲ ವಾರದ ತನಕ ಹಾಗೂ ಮುಂದಿನ ವರ್ಷದ ಜೂನ್ ನಂತರ ದೀಪಾವಳಿ ತನಕವಂತೂ ನೀವಾಗಿಯೇ ಮಾಡಿಕೊಂಡ ಸಮಸ್ಯೆಗಳಿಂದಾಗಿ ಹಣಕಾಸು ಹರಿವು ನಿಮ್ಮ ನೆಮ್ಮದಿಯನ್ನು ಬಹು ಮಟ್ಟಿಗೆ ಕದಡಲಿದೆ. ಬೇರೆಯವರಿಗೆ ಸಮಜಾಯಿಷಿ ನೀಡಿ, ನಿಮ್ಮ ಸಾಮರ್ಥ್ಯ, ನಿಷ್ಠೆ, ಪ್ರಾಮಾಣಿಕತೆಯನ್ನು ಸಾಬೀತು ಮಾಡಿದರೂ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಹುಟ್ಟುವುದಿಲ್ಲ. ಕೌಟುಂಬಿಕ ಸಮಸ್ಯೆಗಳ ಕಾರಣದಿಂದಾಗಿಯೂ ಏಕಾಗ್ರತೆಯನ್ನು ಸಾಧಿಸುವುದು ಕಷ್ಟವಾಗಿ, ನೀವು ಉಳಿಸಿಕೊಂಡಿದ್ದಂಥ ಬ್ರ್ಯಾಂಡ್ ವ್ಯಾಲ್ಯೂ ಹೊಡೆತ ತಿನ್ನುತ್ತದೆ. ಹಣಕಾಸು ಹರಿವು ವಿಪರೀತ ನಿಧಾನ ಆಗುತ್ತದೆ. ಕೈ ಬದಲಾವಣೆಗೋ ಅಥವಾ ಹಣ ಹೊಂದಾಣಿಕೆಗೋ ಸಾಲ ಮಾಡಲೇಬೇಕು ಎಂಬ ಸ್ಥಿತಿ ಎದುರಾಗಲಿದೆ. ಷೇರು ಮಾರ್ಕೆಟ್ ವ್ಯವಹಾರ ಮಾಡುವಂಥವರು ಬಹಳ ಎಚ್ಚರಿಕೆಯಿಂದ ಹೂಡಿಕೆ ಮಾಡುವುದು ಮುಖ್ಯ. ಫ್ಯೂಚರ್- ಆಪ್ಷನ್ಸ್ ನಲ್ಲಿ ಹಣ ಹಾಕುವ ಬಗ್ಗೆ ಆಲೋಚನೆ ಸಹ ಮಾಡದಿರುವುದು ಉತ್ತಮ.

ಮೀನ:

ಆದಾಯ- ಖರ್ಚು ಜೊತೆಜೊತೆಗೆ ಸಾಗುತ್ತದೆ. ಮದುವೆ ಮೊದಲಾದ ಕಾರ್ಯಕ್ರಮಗಳಿಗೆ ಅಂತ ನಿಮ್ಮಿಂದ ಹಣ ಹರಿದು ಹೋಗಲಿದೆ. ಮನೆ ದೇವರ ಪೂಜೆ ಅಥವಾ ಈ ತನಕ ನೀವು ಮನೆಯಲ್ಲಿ ಮಾಡಿಸಬೇಕು ಅಂದುಕೊಳ್ಳುತ್ತಿದ್ದ ಪೂಜೆ- ಪುನಸ್ಕಾರಗಳನ್ನು ಮಾಡುವುದಕ್ಕೆ ಅವಕಾಶ ಮತ್ತು ಹಣಕಾಸಿನ ಅನುಕೂಲ ಒದಗಿ ಬರಲಿದೆ. ಆದರೆ ಪದೇಪದೇ ಆಸ್ಪತ್ರೆ ಖರ್ಚುಗಳು ಕಾಣಿಸಿಕೊಳ್ಳಲಿವೆ. ಕೊಳ್ಳುಬಾಕತನ ಅನ್ನುವ ಮನೋಭಾವ ನಿಮ್ಮಲ್ಲಿ ಈ ತನಕ ಇಲ್ಲದಿದ್ದರೂ ಈಗ ವಿಪರೀತ ಹೆಚ್ಚಾಗಲಿದೆ. ನಿಮ್ಮಲ್ಲಿ ಹಲವರು ವಿದೇಶ ಪ್ರವಾಸಗಳಿಗೆ ತೆರಳುವುದಕ್ಕೆ ಹೆಚ್ಚಿನ ಹಣ ಖರ್ಚು ಮಾಡಲಿದ್ದೀರಿ. ಅದೇ ರೀತಿ ಹೊಸ ಕೋರ್ಸ್ ಗಳು, ಹೊಸ ಹೊಸ ಭಾಷೆಗಳು, ಸೆಮಿನಾರ್- ವರ್ಕ್ ಶಾಪ್ ಗಳು ಇಂಥವುಗಳಲ್ಲಿ ಪಾಲ್ಗೊಳ್ಳುವುದಕ್ಕೆ ಹೆಚ್ಚು ಹಣವನ್ನು ಮೀಸಲಾಗಿ ಇಡಲಿದ್ದೀರಿ. ಆಲಸ್ಯದ ಕಾರಣಕ್ಕೆ ಕೆಲವು ಲಾಭದ ಅವಕಾಶಗಳನ್ನು ಕೈ ಚೆಲ್ಲಲಿದ್ದೀರಿ. ಅದರ ಬಗ್ಗೆ ತುಂಬ ಪಶ್ಚಾತಾಪ ನಿಮ್ಮನ್ನು ಕಾಡಲಿದೆ. ಹಿರಿಯರು ಹೇಳಿದ ಮಾತುಗಳು, ನೀಡಿದ ಸಲಹೆಗಳನ್ನು ನಿರ್ಲಕ್ಷಿಸಬೇಡಿ. ಇದರಿಂದಾಗಿ ವೈಯಕ್ತಿಕವಾಗಿ ದೊಡ್ಡ ಪ್ರಮಾಣದಲ್ಲಿ ನಷ್ಟವನ್ನು ಅನುಭವಿಸುತ್ತೀರಿ.

-ಸ್ವಾತಿ ಎನ್.ಕೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:28 pm, Fri, 3 October 25