ವಿಶಾಖದಿಂದ ರೇವತಿಯ ತನಕ ಹನ್ನೆರಡು ನಕ್ಷತ್ರಗಳ ಗುಣ- ಸ್ವಭಾವ, ನಕ್ಷತ್ರಾಧಿಪತಿಯ ವಿವರ ಇಲ್ಲಿದೆ
ಜ್ಯೋತಿಷ್ಯದ ಪ್ರಕಾರ ಇಪ್ಪತ್ತೇಳು ನಕ್ಷತ್ರ ಗಳಿವೆ. ಈ ಲೇಖನದಲ್ಲಿ ವಿಶಾಖದಿಂದ ಆರಂಭವಾಗಿ ರೇವತಿ ತನಕ ನೀಡಲಾಗಿದೆ. ಯಾವ ನಕ್ಷತ್ರದ ಗುಣ, ಸ್ವಭಾವ ಹೇಗೆ ಎಂಬುದನ್ನು ವಿವರಿಸಲಾಗಿದೆ. ಇದರ ಜತೆಗೆ ಆ ನಕ್ಷತ್ರದ ಅಧಿಪತಿ ಗ್ರಹ ಯಾವುದು ಅಂತಲೂ ತಿಳಿಸಲಾಗಿದೆ.
ಹಿಂದೂ ಧರ್ಮದಲ್ಲಿ ಜ್ಯೋತಿಷ್ಯ ಶಾಸ್ತ್ರಕ್ಕೆ ವಿಶೇಷ ಪ್ರಾಮುಖ್ಯ ನೀಡಲಾಗಿದೆ. ಜ್ಯೋತಿಷ್ಯದ ಪ್ರಕಾರ ಇಪ್ಪತ್ತೇಳು ನಕ್ಷತ್ರ (Nakshatras) ಗಳಿವೆ. ಆದರೆ ಈ ಲೇಖನದಲ್ಲಿ ವಿಶಾಖಯಿಂದ ಆರಂಭವಾಗಿ ರೇವತಿ ತನಕ ನೀಡಲಾಗಿದೆ. ಈ ಲೇಖನದಲ್ಲಿ ಯಾವ ನಕ್ಷತ್ರದ ಗುಣ- ಸ್ವಭಾವ ಹೇಗೆ ಎಂಬುದನ್ನು ವಿವರಿಸಲಾಗಿದೆ. ಇದರ ಜತೆಗೆ ಆ ನಕ್ಷತ್ರದ ಅಧಿಪತಿ ಗ್ರಹ ಯಾವುದು ಅಂತಲೂ ತಿಳಿಸಲಾಗಿದೆ.
ವಿಶಾಖ: ಈ ನಕ್ಷತ್ರದಲ್ಲಿ ಜನಿಸಿದವರ ಅಧಿಪತಿ ಗುರು. ತಮ್ಮ ವಾಕ್ ಸಾಮರ್ಥ್ಯದಿಂದಾಗಿ ಎಂಥ ವಿಚಾರವನ್ನಾದರೂ ಮತ್ತೊಬ್ಬರಿಗೆ ಮೆಚ್ಚಿಸಬಲ್ಲರು, ಒಪ್ಪಿಸಬಲ್ಲವರಾಗಿರುತ್ತಾರೆ. ಹಣ ಖರ್ಚು ಮಾಡುವಾಗ ಸಾವಿರ ಬಾರಿ ಆಲೋಚನೆ ಮಾಡುತ್ತಾರೆ. ತನಗಿಂತ ಮೇಲ್ ಸ್ತರಕ್ಕೆ ದಾಟಿ ಹೋದವರ ಬಗ್ಗೆ ಅಸೂಯೆ ಪಡುವಂಥವರಾಗಿರುತ್ತಾರೆ. ಲೈಂಗಿಕ ವಿಚಾರದಲ್ಲಿ ಇದು ಸರಿ- ಇದು ತಪ್ಪು ಎಂಬ ವಿವೇಚನೆ ಇಲ್ಲದಂಥವರು. ವಿಪರೀತ ಕೋಪ ಹಾಗೂ ವಿಪರೀತ ಸಮಾಧಾನ ಎರಡೂ ಗುಣಗಳ ಮಿಶ್ರಣ ಇವರಾಗಿರುತ್ತಾರೆ. ಹೆಂಡತಿ ಮಾತಿಗೆ ಭಾರೀ ಮನ್ನಣೆ ನೀಡುತ್ತಾರೆ.
ಅನೂರಾಧ: ಈ ನಕ್ಷತ್ರದಲ್ಲಿ ಜನಿಸಿದವರಿಗೆ ಶನಿ ಅಧಿಪತಿ. ಸಮಾಧಾನವಾಗಿ ಕೂತು ಆಹಾರ ಸೇವಿಸುವಂಥ ಯೋಗ ಕಡಿಮೆ. ಆ ಸಮಯಕ್ಕೆ ಏನಾದರೊಂದು ಸುದ್ದಿ, ಆತುರದ ಪ್ರಯಾಣ ಬರುತ್ತದೆ. ಇವರಿಗೆ ತಾವು ಜನಿಸಿದ ಸ್ಥಳದಿಂದ ಬೇರೆ ಜಾಗ, ದೇಶದಲ್ಲಿ ನೆಲೆಸುವ ಯೋಗ ಇರುತ್ತದೆ. ಕಲೆಯ ಬಗ್ಗೆ ಆಸಕ್ತಿ ಹಾಗೂ ಸ್ವತಃ ಪರಿಣತಿಯನ್ನು ಪಡೆಯುವ ಸಾಧ್ಯತೆ ಇರುತ್ತದೆ. ಸಮಾಜದಲ್ಲಿ ಇವರಿಗೆ ಹಾಗೂ ಇವರ ಕುಟುಂಬದವರಿಗೆ ಪೂಜ್ಯ ಸ್ಥಾನ ಇರುತ್ತದೆ. ಆದರೆ ದ್ವೇಷಸಾಧನೆ ಮಾಡುವ ಸ್ವಭಾವ ಇವರದಾಗಿರುತ್ತದೆ.
ಜ್ಯೇಷ್ಠಾ: ಈ ನಕ್ಷತ್ರದಲ್ಲಿ ಜನಿಸಿದವರಿಗೆ ಬುಧ ಅಧಿಪತಿ. ಹೆಚ್ಚಿನ ಸಂಖ್ಯೆಯಲ್ಲಿ ಸ್ನೇಹ ಬಳಗ ಇರುವುದಿಲ್ಲ. ಏಕಾಂತದಲ್ಲಿ ಅಥವಾ ಒಂಟಿಯಾಗಿರುವಾಗ ಸಂತೋಷದಿಂದ ಇರುತ್ತಾರೆ. ಆದರೆ ವಿಪರೀತ ಸಿಟ್ಟಿನ ಸ್ವಭಾವ ಇರುತ್ತದೆ. ಇದರಿಂದಲೇ ತಮ್ಮ ಏಳ್ಗೆಗೆ ಸಮಸ್ಯೆ ಮಾಡಿಕೊಳ್ಳುತ್ತಾರೆ. ಯಾರಿಗಾದರೂ ತೊಂದರೆ ನೀಡಬೇಕು ಎಂದು ತೀರ್ಮಾನಿಸಿದರೆ ಕೈ ತೊಳೆದು, ಬೆನ್ನು ಬೀಳುವುದು ಅಂತಾರಲ್ಲ ಹಾಗೆ ಸಿಕ್ಕಾಪಟ್ಟೆ ಕಾಡಿಬಿಡುತ್ತಾರೆ. ಇವರು ಕವಿಗಳಾಗಿಯೂ ಹೆಸರು ಪಡೆಯುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: ಅಶ್ವಿನಿಯಿಂದ ಸ್ವಾತಿ ತನಕ ಹದಿನೈದು ನಕ್ಷತ್ರಗಳ ಗುಣ- ಸ್ವಭಾವ, ನಕ್ಷತ್ರಾಧಿಪತಿಯ ವಿವರ ಇಲ್ಲಿದೆ
ಮೂಲಾ: ಈ ನಕ್ಷತ್ರದಲ್ಲಿ ಜನಿಸಿದವರಿಗೆ ಕೇತು ಅಧಿಪತಿ. ಮಾನಕ್ಕೆ ಹೆಚ್ಚು ಪ್ರಾಮುಖ್ಯ ನೀಡುತ್ತಾರೆ. ತಮ್ಮ ಕಷ್ಟಗಳನ್ನು ಹೊರಗೆ ತೋರಿಸಿಕೊಳ್ಳುವುದಕ್ಕೆ ಬಯಸದ ಇವರು, ತಮ್ಮ ಅನುಕೂಲಗಳ ಬಗ್ಗೆಯೇ ಹೇಳಿಕೊಳ್ಳುವ ಮೂಲಕ ಇತರರು ಇವರನ್ನು ತಪ್ಪಾಗಿ ತಿಳಿಯುವಂತೆ ಮಾಡಿಕೊಳ್ಳುತ್ತಾರೆ. ಇವರು ಎಂಥ ಕುಟುಂಬದ ಹಿನ್ನೆಲೆಯಲ್ಲಿ ಇದ್ದರೂ ವಾಹನ ಸೌಖ್ಯ ತುಂಬ ಚೆನ್ನಾಗಿರುತ್ತದೆ. ಸದಾ ಏನಾದರೊಂದು ಗುರಿ ಇಟ್ಟುಕೊಂಡು ಕೆಲಸ ಮಾಡುತ್ತಿರುತ್ತಾರೆ. ಎಂಥ ಕೆಟ್ಟ ಸನ್ನಿವೇಶದಲ್ಲಿ ಆತ್ಮವಿಶ್ವಾಸ, ಧೈರ್ಯ ಬಿಟ್ಟುಕೊಡುವುದಿಲ್ಲ.
ಪೂರ್ವಾಷಾಢ: ಈ ನಕ್ಷತ್ರದಲ್ಲಿ ಜನಿಸಿದವರ ಅಧಿಪತಿ ಶುಕ್ರ. ಸ್ನೇಹ ವಲಯ ಗಟ್ಟಿಯಾಗಿರುತ್ತದೆ, ಇವರಿಗೆ ಆಪ್ತರಾದವರು ಅಷ್ಟು ಸುಲಭಕ್ಕೆ ದೂರವಾಗಲು ಆಗುವುದಿಲ್ಲ ಅಥವಾ ಇವರು ದೂರ ಆಗುವುದಕ್ಕೆ ಬಿಡುವುದಿಲ್ಲ. ತಮ್ಮ ಮನಸ್ಸಿನಲ್ಲಿ ಇರುವ ವಿಚಾರವನ್ನು ಎದುರಿನಲ್ಲಿ ಇರುವವರಿಗೆ ದಾಟಿಸುವುದರಲ್ಲಿ ಇವರು ಚಾಣಾಕ್ಷರು. ಒಪ್ಪಿಕೊಂಡ ಕೆಲಸವನ್ನು ತುಂಬ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ. ತಮ್ಮ ಪರಿಚಯಗಳು, ಪ್ರಭಾವದಿಂದಾಗಿ ಜನಪ್ರಿಯರಾಗಿರುತ್ತಾರೆ.
ಉತ್ತರಾಷಾಢ: ಈ ನಕ್ಷತ್ರದಲ್ಲಿ ಜನಿಸಿದವರಿಗೆ ರವಿ ಅಧಿಪತಿ. ಎದುರಿನ ವ್ಯಕ್ತಿಯಿಂದ ರಹಸ್ಯಗಳನ್ನು ಹೊರಗೆ ಎಳೆಯುವುದರಲ್ಲಿ ಸಿದ್ಧಹಸ್ತರು. ಇವರಿಗೆ ನೆರವು- ಸಹಾಯ ಮಾಡಿದವರಿಗೆ ತಮ್ಮಿಂದ ಸಾಧ್ಯವಾದಷ್ಟು ಅನುಕೂಲ ಮಾಡಬೇಕು ಎಂದು ಆಲೋಚಿಸುತ್ತಾರೆ. ಕಷ್ಟದಲ್ಲಿ ಇರುವವರ ಬಗ್ಗೆ ದಯಾ ಇರುತ್ತದೆ. ಗುರು- ಹಿರಿಯರಿಗೆ ಗೌರವ ನೀಡುವುದರಲ್ಲಿ ಬಹಳ ನಿರ್ದಿಷ್ಟ ಆಲೋಚನೆ ಇರುತ್ತದೆ. ಸಭೆ- ಕಾರ್ಯಕ್ರಮಗಳನ್ನು ಆಯೋಜಿಸುವುದರಲ್ಲಿ ಸಂಘಟನಾತ್ಮಕವಾಗಿ ಚಟುವಟಿಕೆಯಿಂದ ಇರುತ್ತಾರೆ.
ಶ್ರವಣ: ಈ ನಕ್ಷತ್ರದಲ್ಲಿ ಜನಿಸಿದವರಿಗೆ ಚಂದ್ರ ಅಧಿಪತಿ. ಕೇಳಿಸಿಕೊಳ್ಳುವ ತಾಳ್ಮೆ, ಕುತೂಹಲ ಜಾಸ್ತಿ ಇರುತ್ತದೆ. ಮಿತ್ರರನ್ನು ಆರಿಸಿಕೊಳ್ಳುವ ವಿಚಾರದಲ್ಲಿ ಎಚ್ಚರಿಕೆಯಿಂದ ಇರುತ್ತಾರೆ. ಕುಟುಂಬಕ್ಕೆ ಮೊದಲ ಪ್ರಾಶಸ್ತ್ಯ ನೀಡುತ್ತಾರೆ. ತಮ್ಮ ವ್ಯಾಪ್ತಿಯೊಳಗೆ ಖ್ಯಾತರಾಗಿರುತ್ತಾರೆ. ಮಾನಸಿಕವಾಗಿ ಸ್ಥಿರತೆ ಸಾಧಿಸುವುದು ಇವರಿಗೆ ಸವಾಲಿನ ವಿಷಯವಾಗಿರುತ್ತದೆ. ಯಾವುದೇ ಕೆಲಸದಲ್ಲಿ ಆರಂಭದಲ್ಲಿ ಇರುವ ಉತ್ಸಾಹ ಅಂತಿಮ ಹಂತದ ತನಕ ಉಳಿಸಿಕೊಳ್ಳುವುದು ಮುಖ್ಯ.
ಧನಿಷ್ಠಾ: ಈ ನಕ್ಷತ್ರದಲ್ಲಿ ಜನಿಸಿದವರಿಗೆ ಕುಜ ಅಧಿಪತಿ. ಹಣದ ಪ್ರಾಮುಖ್ಯ ಜಾಸ್ತಿ. ದುಡಿಮೆಗೆ ಯಾವುದೆಲ್ಲ ದಾರಿ ಇದೆ, ತಮ್ಮ ಹೆಸರನ್ನೇ ಬ್ರ್ಯಾಂಡ್ ಆಗಿ ಮಾಡುವುದು ಹೇಗೆ ಎಂಬುದರ ಬಗ್ಗೆ ಸದಾ ಆಲೋಚನೆ ಮಾಡುತ್ತಾ ಇರುತ್ತಾರೆ. ತಮ್ಮ ಒಟ್ಟು ದುಡಿಮೆಯಲ್ಲಿ ಒಂದಿಷ್ಟು ಅಂಶವನ್ನಾದರೂ ದಾನ ಕಾರ್ಯಗಳಿಗಾಗಿ ಮೀಸಲಿಡಬೇಕು ಎಂದುಕೊಳ್ಳುತ್ತಾರೆ. ವಯಸ್ಸಾದವರು, ಆಶಕ್ತರಿಗೆ ಹೇಗಾದರೂ ಸೇವೆ ಸಲ್ಲಿಸಬೇಕು ಎಂದು ಚಿಂತಿಸುವ ಇವರು, ಭವಿಷ್ಯಕ್ಕಾಗಿ ಉಳಿತಾಯ ಮಾಡುವುದು ಆತ್ಮಗೌರವ ಕಾಪಾಡಿಕೊಳ್ಳುವುದಕ್ಕಾಗಿ ಎಂದುಕೊಳ್ಳುತ್ತಾರೆ.
ಶತಭಿಷಾ: ಈ ನಕ್ಷತ್ರದಲ್ಲಿ ಜನಿಸಿದವರ ಅಧಿಪತಿ ರಾಹು. ತಮ್ಮ ಅಗತ್ಯಗಳು ಹಾಗೂ ಬೇಡವಾದದ್ದರ ಬಗ್ಗೆ ತುಂಬ ಸ್ಪಷ್ಟವಾಗಿರುತ್ತಾರೆ. ಇವರು ಸಾಮಾನ್ಯವಾಗಿ ತಮ್ಮ ಮುಂದಿನ ಯೋಜನೆಗಳ ಗುಟ್ಟನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ. ಅಷ್ಟೇ ಅಲ್ಲ, ಇವರು ಮುಂದೇನು ಮಾಡುತ್ತಾರೆ ಎಂದು ಅಂದಾಜು ಮಾಡುವುದು ಸಹ ಕಷ್ಟ. ತನಗೆ ಅನುಕೂಲ ಆಗುವಂಥ ಕೆಲಸಗಳನ್ನು ಮಾತ್ರ ಮಾಡುವಂಥ ಲೆಕ್ಕಾಚಾರದ ವ್ಯಕ್ತಿಗಳು ಇವರು. ತಲೆನೋವು, ಶೀತಸಮಸ್ಯೆ ಇವರನ್ನು ಕಾಡುತ್ತದೆ.
ಇದನ್ನೂ ಓದಿ: ಈ 6 ರಾಶಿಯ ಮಹಿಳೆಯರು ವೈಲ್ಡ್ ಲೈಫ್ ಫೋಟೋಗ್ರಫಿ ಪ್ರೀತಿಸುತ್ತಾರೆ; ನಿಮಗೂ ಛಾಯಾಗ್ರಹಣದ ಬಗ್ಗೆ ಆಸಕ್ತಿಯಿದೆಯೇ?
ಪೂರ್ವಾಭಾದ್ರ: ಈ ನಕ್ಷತ್ರದಲ್ಲಿ ಜನಿಸಿದವರಿಗೆ ಗುರು ಅಧಿಪತಿ. ತಮ್ಮ ಸಿಟ್ಟಿನ ಕಾರಣಕ್ಕೆ ಪದೇಪದೇ ತಪ್ಪುಗಳನ್ನು ಮಾಡುತ್ತಾರೆ. ಪುರುಷರು ಸ್ತ್ರೀಯರ ವಿಚಾರದಲ್ಲಿ ಆತ್ಮಾಭಿಮಾನಕ್ಕೆ ಪೆಟ್ಟು ಬೀಳುವಂಥ ಅನುಭವವೊಂದು ಪಡೆಯುತ್ತಾರೆ. ಇವರಿಗೆ ಹಣಕಾಸಿನ ಹರಿವಿಗೆ ಸಮಸ್ಯೆ ಆಗುವುದಿಲ್ಲ. ಹಣದ ಅಗತ್ಯ ಇದ್ದಾಗ ಸ್ನೇಹಿತರೋ ಸಂಬಂಧಿಕರೋ ಯಾರಿಂದಲಾದರೂ ದೊರೆಯುತ್ತದೆ.ಇತರರಿಗೆ ಇವರು ಸಹಾಯ ಮಾಡಬೇಕು ಅಂದರೆ ಹತ್ತಾರು ಬಾರಿ ಆಲೋಚಿಸುತ್ತಾರೆ. ಕಾರ್ಯತಂತ್ರ ಹೆಣೆಯುವುದರಲ್ಲಿ ಇವರು ನಿಷ್ಣಾತರು. ವಿವಾದಗಳಿಂದ ದೂರ ಇರುವುದಕ್ಕೆ ಬಯಸುತ್ತಾರೆ.
ಉತ್ತರಾಭಾದ್ರ: ಈ ನಕ್ಷತ್ರದಲ್ಲಿ ಜನಿಸಿದವರ ಅಧಿಪತಿ ಶನಿ. ತಮ್ಮ ಜೀವನದುದ್ದಕ್ಕೂ ಹಣಕಾಸಿನ ಏರಿಳಿತ ಕಾಣುತ್ತಲೇ ಇರುತ್ತಾರೆ. ಆದರೆ ಧಾರ್ಮಿಕ ವ್ಯಕ್ತಿಗಳಾಗಿರುತ್ತಾರೆ, ಅಧ್ಯಾತ್ಮದ ಬಗ್ಗೆ ಆಸಕ್ತಿ ಹೆಚ್ಚಾಗಿರುತ್ತದೆ. ಇವರು ಆಲಸಿಗರಾಗುತ್ತಾರೆ. ತಮಗೆ ಏನು ದೊರೆಯುತ್ತದೋ ಅದರ ಬಗ್ಗೆ ಧನ್ಯತಾ ಭಾವ ಇವರಲ್ಲಿ ಇರುತ್ತದೆ. ಶತ್ರುಗಳು ಸಹ ಇವರು ನಡೆದುಕೊಳ್ಳುವ ರೀತಿಗೆ ಮೆಚ್ಚುಗೆ ಸೂಚಿಸುತ್ತಾರೆ. ಹೊಸ ಕೆಲಸಗಳನ್ನು ಮಾಡುವುದರಲ್ಲಿ, ತಾವು ಆ ತನಕ ಮಾಡದ ಸವಾಲಿನ ಕೆಲಸಗಳ ಬಗ್ಗೆ ಆಸಕ್ತಿ ಇರುತ್ತದೆ.
ರೇವತಿ: ಈ ನಕ್ಷತ್ರದಲ್ಲಿ ಜನಿಸಿದವರಿಗೆ ಬುಧ ಅಧಿಪತಿ. ವಿದೇಶಗಳಲ್ಲಿ ಪ್ರವಾಸ ಮಾಡುವುದು ಇಷ್ಟವಾಗುತ್ತದೆ. ಪ್ರತಿಸ್ಪರ್ಧಿಗಳು ಹೂಡಿರುವ ತಂತ್ರಕ್ಕೆ ಪ್ರತಿ ತಂತ್ರ ರೂಪಿಸುವುದರಲ್ಲಿ ಇವರು ಬಹಳ ನಿಷ್ಣಾತರಾಗಿರುತ್ತಾರೆ. ಇವರ ಕೈಯಲ್ಲಿ ಹಣ ಇದ್ದರೆ ಅದರ ಖರ್ಚನ್ನು ಅಥವಾ ವಿತರಣೆಯನ್ನು ಮಾಡುವುದರಲ್ಲಿ ಚಂಚಲತೆ ಕಾಡುತ್ತದೆ. ಆದರೆ ತೀರ್ಮಾನಗಳನ್ನು ಜಾರಿಗೆ ತರುವುದರಲ್ಲಿ ಮನಸ್ಸನ್ನು ಹತೋಟಿಗೆ ಇರಿಸಿಕೊಳ್ಳಬಲ್ಲರು. ಬಹಳ ವೇಗವಾಗಿ ನಿರ್ಧಾರಗಳನ್ನು ಮಾಡುತ್ತಾರೆ. ಇವರೊಂದಿಗಿನ ಜಗಳ ಬಹಳ ಅಪಾಯಕಾರಿ.
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:53 pm, Fri, 11 August 23