AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂದ್ರನಿಂದ ಕಾರ್ಯಾರಂಭದ ಬಗ್ಗೆ ತಿಳಿಯಬಹುದಾದ ಅನೇಕ ಸಂಗತಿಗಳಿವು…

ಜನ್ಮ, ಸಂಪತ್, ವಿಪತ್, ಕ್ಷೇಮ, ಪ್ರತ್ಯರ, ಸಾಧಕ, ವಧ, ಮೈತ್ರ, ಪರಮಮೈತ್ರ ಎಂಬುದಾಗಿ ಒಂಭತ್ತು ನಾಮಗಳನ್ನು ಇಟ್ಟು ಯಾವ ಜನ್ಮನಕ್ಷತ್ರದಿಂದ ಇಷ್ಟದಿನದ ನಕ್ಷತ್ರವನ್ನು ಗಣಿಸಿ ಶೇಷದ ಆಧಾರದ ಮೇಲೆ ತಾರಾನುಕೂಲ ನೋಡುವುದು ಒಂದಾದರೆ, ಇನ್ನೊಂದು ಜನ್ಮದಲ್ಲಿ ಚಂದ್ರನು ಯಾವ ರಾಶಿಯಲ್ಲಿ ಇದ್ದಾನೆಂದು ಮತ್ತು ಇಷ್ಟಕಾಲದಲ್ಲಿ ಎಲ್ಲಿ ಇರುವನೆಂದು ತಿಳಿದು ಫಲಾಫಲವನ್ನು ಹೇಳುವುದು ಇನ್ಮೊಂದು.

ಚಂದ್ರನಿಂದ ಕಾರ್ಯಾರಂಭದ ಬಗ್ಗೆ ತಿಳಿಯಬಹುದಾದ ಅನೇಕ ಸಂಗತಿಗಳಿವು...
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Feb 05, 2025 | 6:02 PM

Share

ಚಂದ್ರ ಮತ್ತು ಸೂರ್ಯರು ಇಡೀ ಪ್ರಪಂಚದ ದೊಡ್ಡ ಅಳತೆಗೋಲು.ಅವರೀರ್ವರ ಆಧಾರದ ಮೇಲೆ ಕಾಲಗಣನೆ ಇರಲಿದೆ. ಇಂತಹ ಚಂದ್ರ ಹುಟ್ಟಿದಾಗ ಮತ್ತು ವರ್ತಮಾನದಲ್ಲಿ ಎಲ್ಲಿದ್ದ ಎನ್ನುವುದು ಮುಖ್ಯವಾಗಿದ್ದು, ಇದರಿಂದ ಅನೇಕ ಜೀವನಕ್ಕೆ ಸಂಬಂಧಿಸಿದ ವಿಚಾರಗಳನ್ನು ಮಥನ ಮಾಡಬಹುದು. ಒಂದು ವಿಧಾನ ನಕ್ಷತ್ರಗಳ ಮೂಲಕ ಚಂದ್ರನ ಬಲವನ್ನು ತಿಳಿಯುವುದು. ಇದನ್ನು ತಾರಾನುಕೂಲ ಎಂದು ಕರೆದಿದ್ದಾರೆ. ಜನ್ಮ, ಸಂಪತ್, ವಿಪತ್, ಕ್ಷೇಮ, ಪ್ರತ್ಯರ, ಸಾಧಕ, ವಧ, ಮೈತ್ರ, ಪರಮಮೈತ್ರ ಎಂಬುದಾಗಿ ಒಂಭತ್ತು ನಾಮಗಳನ್ನು ಇಟ್ಟು ಯಾವ ಜನ್ಮನಕ್ಷತ್ರದಿಂದ ಇಷ್ಟದಿನದ ನಕ್ಷತ್ರವನ್ನು ಗಣಿಸಿ ಶೇಷದ ಆಧಾರದ ಮೇಲೆ ತಾರಾನುಕೂಲ ನೋಡುವುದು ಒಂದಾದರೆ, ಇನ್ನೊಂದು ಜನ್ಮದಲ್ಲಿ ಚಂದ್ರನು ಯಾವ ರಾಶಿಯಲ್ಲಿ ಇದ್ದಾನೆಂದು ಮತ್ತು ಇಷ್ಟಕಾಲದಲ್ಲಿ ಎಲ್ಲಿ ಇರುವನೆಂದು ತಿಳಿದು ಫಲಾಫಲವನ್ನು ಹೇಳುವುದು ಇನ್ಮೊಂದು. ಇದೂ ಕೂಡ ಅಂಗವಾಗಿ ಕೆಲವು ಕಡೆಗಳಲ್ಲಿ ನೋಡಲು ಸಿಗುತ್ತದೆ.

ಜನಿಸುವಾಗಲೂ ಮತ್ತು ವರ್ತಮಾನದ ಸಂದರ್ಭದಲ್ಲಿ ಚಂದ್ರನು ಒಂದೇ ರಾಶಿಯನ್ನು ಇದ್ದರೆ, ಅಂದರೆ ಹುಟ್ಟುವಾಗ ಮೇಷದಲ್ಲಿ ಹಾಗೂ ಪ್ರಶ್ನೆ ಕೇಳುವ ಸಂದರ್ಭದಲ್ಲಿ ಅಥವಾ ಹೊಸ ಕಾರ್ಯವನ್ನು ಆರಂಭಿಸುವ ಸನ್ನಿವೇಶ ಬಂದಾಗ ಚಂದ್ರನು ಮೇಷದಲ್ಲಿ ಇದ್ದರೆ ಯಾವುದೇ ಬದಲಾವಣೆ ಇಲ್ಲದೆ ಮುಂದುವರಿಯುತ್ತದೆ ಎನ್ನಬೇಕು. ಅದೇ ಮೇಷದಲ್ಲಿ ಚಂದ್ರ, ಅವನಿಂದ ಎರಡನೇ ರಾಶಿಯಲ್ಲಿ ವತ್ರಮಾನದ ಚಂದ್ರನಿದ್ದರೆ, ನಾನಾ ಪ್ರಕಾರದ ಸಂಪತ್ತು ಪ್ರಾಪ್ತಿ. ಮೂರರಲ್ಲಿ ಇದ್ದರೆ ಮಂಗಲಕರವಾದ ಕಾರ್ಯವಾಗಿರಲಿದೆ. ನಾಲ್ಕರಲ್ಲಾದರೆ ಕಲಹವುಂಟಾಗುವುದು, ಐದನೇ ರಾಶಿಯಲ್ಲಿ ಚಂದ್ರನಿದ್ದರೆ, ಜ್ಞಾನದ ವೃದ್ಧಿಯಾಗಲಿದೆ.‌ ಆರರಲ್ಲಿ ಧಾನ್ಯಗಳ ಸಮೃದ್ಧಿ, ಏಳರಲ್ಲಿ ಗೌರವ, ಆದರಗಳನ್ನು ಪಡೆಯುವನು. ಅಷ್ಟಮದಲ್ಲಿ ಚಂದ್ರನಿದ್ದಾಗ ಆರಂಭ ಮಾಡಿದ ಕಾರ್ಯದಿಂದ ಪ್ರಾಣಿಹಾನಿಯಾಗುವುದು ಅಥವಾ ಸಂಕಟಗಳು ನಿಮ್ಮನ್ನು ಮುತ್ತಬಹುದು. ಒಂಭತ್ತರಲ್ಲಿ ಇದ್ದರೆ ನಿತ್ಯವೂ ಒಂದಲ್ಲ ಒಂದು ರೀತಿಯಲ್ಲಿ ಸಂಪತ್ತು ನಿಮಗೆ ಬರಲಿದೆ. ದಶಮದಲ್ಲಿ ಇದ್ದರೆ ನೀವು ಅಂದುಕೊಂಡಿದ್ದು ಸಾಧ್ಯವಾಗಲಿದೆ. ಏಕಾದಶದಲ್ಲಿ ಇದ್ದರೆ, ವಿಜಯದ ಶಿಖರವನ್ನು ಏರುವಿರಿ. ದ್ವಾದಶದಲ್ಲಿ ಇದ್ದರೆ ನಾನಾ‌ ಪ್ರಕಾರದಲ್ಲಿ‌ ಹಾನಿಗಳಾಗುವುದು.

ಆದರೆ ಇದಕ್ಕೆ ಅಪವಾದವೂ ಇದೆ. ಅಧಿಕಾರ ಸ್ವೀಕಾರ, ಗರ್ಭಾದಾನ, ಅನ್ನಪ್ರಾಶನ, ಯಾವುದಾದರೂ ವ್ರತವನ್ನು ಕೈಗೊಳ್ಳುವುದು, ಗೃಹ ಪ್ರವೇಶ, ಯಾತ್ರೆಗಳಿಗೆ ದ್ವಾದಶದಲ್ಲಿ ಇರುವ ಚಂದ್ರನು ಶುಭ ಎಂಬ ಮಾತೂ ಇದೆ. ಜನ್ಮಸ್ಥಾನದಲ್ಲಿ‌ ಇರುವ ಚಂದ್ರನು ಎಲ್ಲ ಕಾರ್ಯಕ್ಕೂ ಶ್ರೇಷ್ಠ. ಆದರೆ ಕೌರ, ಔಷಧವನ್ನು ತೆಗೆದುಕೊಳ್ಳಲು ಆರಂಭಿಸುವುದು, ನ್ಯಾಯಾಲಯದಲ್ಲಿ ವಾದ ಮಂಡನೆ ಆರಂಭವಾಗುವುದು, ಪ್ರಯಾಣ ಮತ್ತು ಮನೆಯ ಉಪಯೋಗಕ್ಕೆ ಬೇಕಾದ ವಸ್ತುಗಳನ್ನು ಕತ್ತರಿಸುವ ಕಾರ್ಯವನ್ನು ಮಾಡಬಾರದು.

ಕೃಷ್ಣ ಪಕ್ಷದಲ್ಲಿ ತಾರಾಬಲವನ್ನೂ ಶುಕ್ರಪಕ್ಷದಲ್ಲಿ ಚಂದ್ರಬಲವನ್ನೂ ನೋಡಿ ಕಾರ್ಯವನ್ನು ಆರಂಭಿಸಿದರೆ ಉತ್ತಮ.

ಒಟ್ಟಿನಲ್ಲಿ ನಾಲ್ಕು, ಎಂಟು ಮತ್ತು ಹನ್ನೆರಡನೆಯ ರಾಶಿ ಶುಭಪ್ರದವಲ್ಲ. ಉಳಿದವು ಶುಭ. ಅದರಲ್ಲಿಯೂ ಆರಂಭ ಮಾಡುವ ಕಾರ್ಯಗಳು ಸಂಪತ್ತಿಗೋ ವಿಜಯಕ್ಕೋ, ಗೌರವಕ್ಕೋ ಎನ್ನುವುದರ ಮೇಲೆ ಅದು ನಿರ್ಧಾರವಾಗಲಿದೆ. ಇದನ್ನು ಅರ್ಥಮಾಡಿಕೊಂಡು ಮುಂದಾದರೆ ಎಲ್ಲವೂ ಸಮಾಧಾನಕರವಾಗಿ ಇರಲಿದೆ.

– ಲೋಹಿತ ಹೆಬ್ಬಾರ್ – 8762924271