Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 21ರ ದಿನಭವಿಷ್ಯ
ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 21ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ನಿಮ್ಮ ಜನ್ಮಸಂಖ್ಯೆ ಆಧಾರಿತ ಈ ಭವಿಷ್ಯವು ದಿನದ ಸವಾಲುಗಳು ಮತ್ತು ಅವಕಾಶಗಳನ್ನು ಎದುರಿಸಲು ನಿಮಗೆ ಸಹಾಯಕವಾಗಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):
ನಿಮ್ಮಲ್ಲಿ ಏನೋ ಬದಲಾವಣೆ ಮಾಡಿಕೊಳ್ಳಬೇಕಿದೆ ಅಂತೇನಾದರೂ ಅನಿಸಿದಲ್ಲಿ ಮೊದಲಿಗೆ ನಿಮ್ಮ ದಿನಚರಿಯಲ್ಲಿ ಏನೇನು ಬದಲಾಗಬೇಕು ಎಂಬುದನ್ನು ತೀರ್ಮಾನ ಮಾಡಿಕೊಳ್ಳಿ. ಸಣ್ಣ- ಪುಟ್ಟ ಹೊಸ ಅಭ್ಯಾಸಗಳು ಸಹ ಅತಿ ದೊಡ್ಡ ಜಾದೂ ಮಾಡಿಬಿಡುತ್ತವೆ. ನಿಮ್ಮ ಮನಸ್ಸಿನಲ್ಲಿ ಇರುವಂಥ ನೋವನ್ನು ಮಾತಿನಲ್ಲಿ ತೋರಿಸಿಕೊಳ್ಳಬೇಡಿ. ಅದರಿಂದ ಸಮಸ್ಯೆ ಮತ್ತೂ ಹೆಚ್ಚಾಗುತ್ತದೆ. ಬೇರೆಯವರ ನಿರ್ಧಾರದ ಕಾರಣಗಳಿಗೆ ನಿಮ್ಮ ಸಂತೋಷ ಹಾಳಾಗಬಾರದು. ಆದ್ದರಿಂದ ಸಾಧ್ಯವಿಲ್ಲ ಎಂಬಂಥ ಕೆಲಸ- ಕಾರ್ಯಗಳನ್ನು ನೇರವಾಗಿ ಹೇಳಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):
ಈ ದಿನ ನೀವು ಮಾಡುವ ಕೆಲಸದಲ್ಲಿ ಸಂಖ್ಯೆಗಿಂತ ಹೆಚ್ಚಾಗಿ ಗುಣಮಟ್ಟಕ್ಕೆ ಆದ್ಯತೆಯನ್ನು ನೀಡಿ. ಇದರಿಂದಾಗಿ ನೀವು ಇಡುವಂಥ ಚಿಕ್ಕ ಹೆಜ್ಜೆಗಳು ಸಹ ದೊಡ್ಡ ಮಟ್ಟದಲ್ಲಿ ಪರಿಣಾಮವನ್ನು. ಬೀರುತ್ತವೆ. ಉದ್ಯೋಗಸ್ಥರು ತಮ್ಮ ಜತೆಗೆ ಕೆಲಸ ಮಾಡುವವರೊಂದಿಗೆ ಸರಿಯಾದ ಸಮನ್ವಯ ಸಾಧಿಸಿದಲ್ಲಿ ಪರಿಣಾಮಕಾರಿ ಫಲಿತಾಂಶವನ್ನು ಕಾಣಬಹುದು. ನೀವು ನಿರೀಕ್ಷೆ ಮಾಡುತ್ತಿರುವುದು ಏನು ಎಂಬ ಬಗ್ಗೆ ಸ್ಪಷ್ಟವಾದ ಪದಗಳಲ್ಲಿ ವಿವರಿಸಿ. ಇನ್ನು ಕೌಟುಂಬಿಕವಾಗಿ ಸರಳವಾಗಿ ಬಗೆಹರಿಸಬಹುದಾದ ಸಮಸ್ಯೆಯನ್ನು ನೀವಾಗಿಯೇ ಕಗ್ಗಂಟು ಮಾಡಿಬಿಡುವ ಸಾಧ್ಯತೆಯಿದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):
ನಿಮ್ಮ ಮಾನಸಿಕ ಶಾಂತಿಗೆ ಹೊರಗಿನ ಒತ್ತಡ- ಬೆಳವಣಿಗೆ ಕಾರಣ ಎಂಬ ಆಕ್ಷೇಪದಿಂದ ಹೊರಗೆ ಬರುವ ದಿನ ಇದಾಗಿರುತ್ತದೆ. ಪ್ರತಿ ಸಣ್ಣ ವಿಚಾರವನ್ನು ದೊಡ್ಡ ಸಮಸ್ಯೆಯಾಗಿ ನೋಡುವ ಮನೋಭಾವದಿಂದ ಹೊರಗೆ ಬರಲಿದ್ದೀರಿ. ನಿಮ್ಮ ಹಲವು ಸಮಸ್ಯೆಗಳ ಮೂಲ ಇರುವುದು ಸಿಟ್ಟಿನಲ್ಲಿ. ಕೂತು- ಮಾತನಾಡಿ ಬಗೆಹರಿಸಿಕೊಳ್ಳಬೇಕಾದ ಸಮಯದಲಿ ಮಾತೇ ಆಡದಂತೆ ಸುಮ್ಮನಾಗಿಬಿಟ್ಟರೆ ಹೇಗೆ? ಕಾಲಿನ ನೋವು ಕಾಡಲಿದೆ. ಒಂದು ವೇಳೆ ಈಗಾಗಲೇ ಆ ಸಮಸ್ಯೆಯಿಂದ ಬಳಲುತ್ತಾ ಇದ್ದೀರಿ ಅಂತಾದಲ್ಲಿ ಸೂಕ್ತ ವೈದ್ಯೋಪಚಾರ ಮಾಡಿಕೊಳ್ಳುವ ಕಡೆಗೆ ಗಮನ ನೀಡಿ.
ಲೇಖನ- ಸ್ವಾತಿ ಎನ್.ಕೆ.
