Monthly Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ ಮಾಸಭವಿಷ್ಯ 

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ಮಾಸ ಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ ಮಾಸಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Monthly Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ ಮಾಸಭವಿಷ್ಯ 
ಪ್ರಾತಿನಿಧಿಕ ಚಿತ್ರ
Follow us
ಸ್ವಾತಿ ಎನ್​ಕೆ
| Updated By: ಗಂಗಾಧರ​ ಬ. ಸಾಬೋಜಿ

Updated on:Sep 02, 2023 | 5:17 PM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ಮಾಸ ಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ ಮಾಸಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಸೋದರ ಸಂಬಂಧಿಗಳು ನಿಮ್ಮಿಂದ ಸಹಾಯ ಕೇಳಿಕೊಂಡು ಬರಲಿದ್ದಾರೆ. ನಿಮ್ಮಿಂದ ನೆರವು ನೀಡುವುದಕ್ಕೆ ಸಾಧ್ಯವಾ ಎಂಬುದನ್ನು ಸರಿಯಾಗಿ ಆಲೋಚನೆ ಮಾಡಿದ ನಂತರವಷ್ಟೇ ಅಭಿಪ್ರಾಯವನ್ನು ಹೇಳಿ. ಭಾವನಾತ್ಮಕ ಸನ್ನಿವೇಶದಲ್ಲಿ ಹೂಂ ಎಂದು ಹೇಳಿ, ಆ ನಂತರದಲ್ಲಿ ನಿಮ್ಮ ವೈಯಕ್ತಿಕ ಜವಾಬ್ದಾರಿಗಳ ಕಾರಣಕ್ಕಾಗಿ ಆಗುವುದಿಲ್ಲ ಎಂದು ಹೇಳುವ ಸ್ಥಿತಿಯನ್ನು ತಂದುಕೊಳ್ಳದಿರಿ. ವಿದೇಶಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಮಾನಸಿಕವಾಗಿ ಗೊಂದಲದ ಸನ್ನಿವೇಶಗಳು ಇರಲಿವೆ. ಕೆಲಸ ಬದಲಾವಣೆಗೆ ಅವಕಾಶಗಳು ಬರಲಿದ್ದು, ಇದಕ್ಕೆ ಹೇಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ನಿಮ್ಮನ್ನು ಗೊಂದಲಕ್ಕೆ ದೂಡಲಿದೆ. ಪ್ರೀತಿ- ಪ್ರೇಮದಲ್ಲಿ ಇರುವವರು ಭೇಟಿ ಮಾಡುವುದಕ್ಕೆ ಹಾಗೂ ಮಾತನಾಡುವುದಕ್ಕೆ ನಾನಾ ಅಡೆ- ತಡೆಗಳು ಎದುರಾಗಲಿವೆ. ಮುಖ್ಯವಾಗಿ ನೀವು ಒಪ್ಪಿಕೊಂಡ ಕೆಲಸಗಳಲ್ಲಿ ಮೇಲಿಂದ ಮೇಲೆ ಬದಲಾವಣೆಗಳನ್ನು ಸೂಚಿಸುವುದರಿಂದ ಅದನ್ನು ಪೂರೈಸುವುದರಲ್ಲಿಯೇ ಹೆಚ್ಚಿನ ಸಮಯ ಕಳೆಯಲಿದೆ. ಆ ಕಾರಣಕ್ಕೆ ವೈಯಕ್ತಿಕ ಜೀವನದ ಕಡೆಗೆ ಗಮನ ಹರಿಸುವುದು ಸಾಧ್ಯವಾಗುವುದಿಲ್ಲ. ಇನ್ನು ಬಹಳ ಸಮಯದ ಹಿಂದೆ ತುಂಬ ಹತ್ತಿರ ಆಗಿದ್ದ ವ್ಯಕ್ತಿಗಳು, ಆ ನಂತರದಲ್ಲಿ ನಿಮ್ಮಿಂದ ದೂರ ಆಗಿದ್ದವರು ಈ ಅವಧಿಯಲ್ಲಿ ಮತ್ತೆ ಹತ್ತಿರ ಆಗುವ ಸಾಧ್ಯತೆಗಳು ಹೆಚ್ಚಿವೆ. ಮದುವೆ ಆಗುವುದಕ್ಕೆ ಸೂಕ್ತ ಸಂಬಂಧಗಳಿಗಾಗಿ ಹುಡುಕಾಟ ನಡೆಸುತ್ತಿರುವವರಿಗೆ ಅನಿರೀಕ್ಷಿತ ಬೆಳವಣಿಗೆಗಳು ಆಗಲಿವೆ. ಸ್ವಲ್ಪ ಸಮಯ ಪ್ರಯತ್ನವನ್ನೇ ಮುಂದಕ್ಕೆ ಹಾಕುವ ಬಗ್ಗೆ ಕುಟುಂಬದೊಳಗೆ ಚರ್ಚೆಗಳು ನಡೆಯಲಿವೆ. ವಕೀಲರು, ಚಾರ್ಟೆಡ್ ಅಕೌಂಟೆಂಟ್ ಗಳು, ವೈದ್ಯರು ಇಂಥ ವೃತ್ತಿಯಲ್ಲಿ ಇರುವವರು ಹೊಸದಾಗಿ ಕಚೇರಿ ತೆರೆಯುವ ಬಗ್ಗೆ ಯೋಜನೆ ಹಾಕಿಕೊಳ್ಳಲಿದ್ದೀರಿ. ಇನ್ನು ಈಗ ಪಡೆಯುತ್ತಿರುವ ಸೇವಾ ಶುಲ್ಕವನ್ನು ಹೆಚ್ಚು ಮಾಡುವ ಬಗ್ಗೆ ಕೂಡ ನಿರ್ಧಾರವನ್ನು ತೆಗೆದುಕೊಳ್ಳಲಿದ್ದೀರಿ. ಯಾರು ವಿದ್ಯಾಭ್ಯಾಸವನ್ನು ಮಾಡುತ್ತಿರುವಿರೋ ಅಂಥವರು ಕೆಲಸಗಳನ್ನು ಮುಂದಕ್ಕೆ ಹಾಕುವುದಕ್ಕೆ ಹೋಗಬೇಡಿ. ಆ ಮೇಲೆ ಮಾಡಿದರಾಯಿತು ಅಥವಾ ಎಲ್ಲಿಯಾದರೂ ಪ್ರವಾಸ, ಮನರಂಜನೆಯ ಆಲೋಚನೆ ಇಟ್ಟುಕೊಂಡು, ಅಲ್ಲಿಂದ ಬಂದ ಮೇಲೆ ಮಾಡುತ್ತೇನೆ ಅಂತೆಲ್ಲ ಅಂದುಕೊಳ್ಳಲು ಹೋಗದಿರಿ. ಮಹಿಳೆಯರು ಥೈರಾಯ್ಡ್ ಸಮಸ್ಯೆ ಈಗಾಗಲೇ ಇದೆ ಎಂದಾದರೆ ನಿಯಂತ್ರಣದಲ್ಲಿ ಇದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಒಂದು ವೇಳೆ ಅಂಥ ಲಕ್ಷಣಗಳೇನಾದರೂ ಕಂಡುಬಂದಲು ವೈದ್ಯಕೀಯ ಪರೀಕ್ಷೆಯನ್ನು ಮಾಡಿಸಿಕೊಂಡು, ಸೂಕ್ತ ಔಷಧೋಪಚಾರವನ್ನು ಮಾಡಿಕೊಳ್ಳುವುದು ಕ್ಷೇಮ. ಮೂಡ್ ಸ್ವಿಂಗ್ ಗಳು ಹೆಚ್ಚಿರುತ್ತವೆ. ಭಾವನೆಗಳ ಮೇಲೆ ನಿಯಂತ್ರಣ ಸಾಧಿಸುವ ಕಡೆಗೂ ಲಕ್ಷ್ಯ ನೀಡಬೇಕಾಗುತ್ತದೆ. ಹೊಸದಾಗಿ ವ್ಯಾಪಾರ- ವ್ಯವಹಾರಕ್ಕೆ ಹಣ ಹಾಕುವ ಮುನ್ನ ಅದರಿಂದ ಸಿಗುವ ರಿಟರ್ನ್ಸ್ ಹಾಗೂ ರಿಸ್ಕ್ ಬಗ್ಗೆ ಸರಿಯಾದ ಲೆಕ್ಕಾಚಾರ ಮಾಡಿಕೊಳ್ಳಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಒಂದು ಖರ್ಚು ಮುಗಿಯಿತು, ಇನ್ನೇನು ಉಳಿತಾಯದ ಬಗ್ಗೆ ಆಲೋಚಿಸಬಹುದು ಎಂದುಕೊಳ್ಳುವಷ್ಟರಲ್ಲಿ ಮತ್ತೊಂದು ಖರ್ಚು ತಲೆ ಎತ್ತಲಿದೆ. ಈ ಹಿಂದೆ ನೀವು ನೀಡಿದ ಮಾತಿಗೆ ಈಗ ಬೆಲೆಯನ್ನು ತೆರಬೇಕಾಗುತ್ತದೆ. ಆದ್ದರಿಂದ ಹಣಕಾಸಿನ ಹೊಂದಾಣಿಕೆಯನ್ನು ಮಾಡಿಕೊಳ್ಳುವ ಕಡೆಗೆ ಗಮನವನ್ನು ನೀಡಿ. ಒಂದು ವೇಳೆ ಆಸ್ತಿಯನ್ನೋ ಅಥವಾ ಯಾವುದಾದರೂ ವಾಹನವನ್ನೋ ಮಾರಾಟ ಮಾಡಿ, ಅದರಿಂದ ಹಣ ಬಂತು ಅಂತಾದರೆ ಯಾವ್ಯಾವುದಕ್ಕೆ ಖರ್ಚು ಎಂಬ ಬಗ್ಗೆ ಸರಿಯಾದ ಬಜೆಟ್ ವೊಂದನ್ನು ಮಾಡಿಕೊಳ್ಳಿ. ನೀವು ಕೆಲಸ ಮಾಡುವ ಸ್ಥಳದಲ್ಲಿ ಹಲವು ಬದಲಾವಣೆಗಳು ಕಾಣಿಸಿಕೊಳ್ಳಲಿವೆ. ಇಷ್ಟು ಸಮಯ ಬಡ್ತಿ ಸಿಕ್ಕೇಬಿಟ್ಟಿತು, ಸಂಬಳ ಹೆಚ್ಚಳ ಮಾಡಿಯೇ ಬಿಡುತ್ತಾರೆ ಅಂತೆಲ್ಲ ಅಂದುಕೊಂಡಿದ್ದರೆ ಆ ನಿರೀಕ್ಷೆಯನ್ನು ಬಿಟ್ಟುಬಿಡಬೇಕು ಎಂಬುದು ನಿಮ್ಮ ಮನಸ್ಸಿಗೇ ಖಾತ್ರಿ ಆಗಲಿದೆ. ಭುಜದ ನೋವು ಅಂತ ಈ ಹಿಂದೆ ಕಾಡಿದ್ದರೆ ಅದು ಈಗ ಉಲ್ಬಣ ಆಗಬಹುದು. ಫಿಸಿಯೋ ಥೆರಪಿ ಮಾಡಿಸಿಕೊಳ್ಳುತ್ತಿದ್ದಲ್ಲಿ ಆಲಸ್ಯದ ಕಾರಣಕ್ಕೋ ಅಥವಾ ನಿರ್ಲಕ್ಷ್ಯದ ಕಾರಣಕ್ಕೋ ನಿಲ್ಲಿಸಬೇಡಿ. ದ್ವಿಚಕ್ರ ವಾಹನ ಖರೀದಿಸಬೇಕು ಎಂದಿರುವ ವಿದ್ಯಾರ್ಥಿಗಳು ಇನ್ನೂ ಕೆಲ ಕಾಲ ಆ ನಿರ್ಧಾರವನ್ನು ಮುಂದಕ್ಕೆ ಹಾಕಬೇಕಾದ ಸನ್ನಿವೇಶ ಎದುರಾಗಲಿದೆ. ಮಕ್ಕಳ ಶಿಕ್ಷಣ, ಮದುವೆ ಅಥವಾ ಭವಿಷ್ಯಕ್ಕಾಗಿ ಅಂತ ಕೂಡಿಟ್ಟಿದ್ದ ದುಡ್ಡನ್ನು ವೈಯಕ್ತಿಕ ಖರ್ಚಿನ ಕಾರಣಕ್ಕೆ ತೆಗೆಯಬೇಕಾಗಬಹುದು. ಈ ರೀತಿಯ ತೀರ್ಮಾನಕ್ಕೆ ಬಂದಿದ್ದೀರಿ ಅಂತಾದರೆ ಒಂದಕ್ಕೆ ನಾಲ್ಕು ಬಾರಿ ಸರಿಯಾಗಿ ಆಲೋಚಿಸಿ, ನಿರ್ಧರಿಸಿ. ಸ್ವಂತ ವ್ಯವಹಾರ ಮಾಡುತ್ತಿರುವವರಿಗೆ ಹೊಸದಾಗಿ ಪಾರ್ಟನರ್ ಷಿಪ್ ಪ್ರಸ್ತಾವಗಳು ಬರಬಹುದು. ಈ ವ್ಯವಹಾರದಲ್ಲಿ ನಿಮ್ಮ ಕೈ ಮೇಲಾಗಿರುತ್ತದೆ. ಆದ್ದರಿಂದ ಇಂಥ ಪ್ರಸ್ತಾವ ಏನಾದರೂ ಬಂದಲ್ಲಿ ಗಂಭೀರವಾಗಿ ಆಲೋಚನೆಯನ್ನು ಮಾಡಿ. ಕೃಷಿ ಭೂಮಿ ಇರುವಂಥವರು ಅಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿಸಲಿದ್ದೀರಿ. ಈಗಿರುವ ಭೂಮಿ ಜತೆಗೆ ಇನ್ನಷ್ಟು ಖರೀದಿ ಮಾಡುವ ಕುರಿತು ನಿರ್ಧಾರ ಮಾಡಲಿದ್ದೀರಿ. ಸೋಲಾರ್ ಉಪಕರಣಗಳನ್ನು ಅಳವಡಿಸುವ ಸಲುವಾಗಿ ಹಣ ಖರ್ಚಾಗಲಿದೆ. ಸೋದರ ಸಂಬಂಧಿಗಳು ನಿಮ್ಮಿಂದ ನಿರೀಕ್ಷೆ ಮಾಡುವುದು ಜಾಸ್ತಿ ಆಗಬಹುದು. ಇದು ನಿಮಗೆ ನಿಚ್ಚಳವಾಗಿ ಅನುಭವಕ್ಕೆ ಬರಲಿದೆ. ಮಹಿಳೆಯರು ವಸ್ತ್ರಾಭರಣಗಳ ಖರೀದಿ ಮಾಡಲಿದ್ದೀರಿ. ಈಗಾಗಲೇ ಚಿನ್ನದ ಚೀಟಿಯಂಥದ್ದೇನಾದರೂ ಹಾಕಿಕೊಂಡಿದ್ದಲ್ಲಿ ನೀವು ಲೆಕ್ಕಾಚಾರ ಕೂಡ ಹಾಕಿಕೊಳ್ಳದಷ್ಟು ಮೊತ್ತವು ಚಿನ್ನಾಭರಣಗಳಿಗೆ ಅಂತಲೇ ಖರ್ಚಾಗಲಿದೆ. ಬಹಳ ಮುಖ್ಯವಾದ ಕೆಲಸಗಳ ಸಲುವಾಗಿ ತೆರಳುತ್ತಿದ್ದೀರಿ ಅಂತಾದರೆ ಮನೆಯಿಂದ ಹೊರಡುವ ಮುನ್ನ ದುರ್ಗಾದೇವಿ ವಿಗ್ರಹಕ್ಕೋ ಫೋಟೋಗೋ ನಮಸ್ಕಾರ ಮಾಡಿಕೊಂಡು ಹೊರಡಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಬಾಡಿಗೆ ಮನೆಯಲ್ಲಿ ಇರುವವರ ಪೈಕಿ ಕೆಲವರಿಗೆ ಬದಲಾವಣೆ ಮಾಡಲೇಬೇಕಾದ ಅನಿವಾರ್ಯ ಎದುರಾಗಲಿದೆ. ಅಥವಾ ನೀವೇ ಮಾತಿನ ಓಘದಲ್ಲಿ ಕುಟುಂಬಸ್ಥರಿಗೆ ಭರವಸೆ ನೀಡಬಹುದು ಅಥವಾ ಮಾಲೀಕರ ಜತೆಗಿನ ಮಾತುಕತೆ ವೇಳೆ, ಮನೆ ಖಾಲಿ ಮಾಡ್ತೀನಿ ಹೋಗ್ರೀ ಎಂದು ಬಿಡಬಹುದು. ಆದರೆ ಇದರಿಂದ ನಿಮಗೆ ಒಳ್ಳೆಯದೇ ಆಗಲಿದೆ. ಇನ್ನು ಬಹಳ ಸಮಯದಿಂದ ತೆರಳಬೇಕು ಎಂದಿದ್ದ ಪ್ರವಾಸಕ್ಕೆ ಕುಟುಂಬ ಸಮೇತರಾಗಿ ಹೋಗುವಂಥ ಯೋಗ ಇದೆ. ಒಂದು ವೇಳೆ ವಿಮಾನ ಪ್ರಯಾಣ ಮಾಡುತ್ತೀರಿ ಎಂದಾದರೆ ಕೊನೆ ಕ್ಷಣದಲ್ಲಿ ಒಂದಿಷ್ಟು ಆತುರ, ಗೊಂದಲ ಏರ್ಪಡಬಹುದು. ಮನೆಯಿಂದ ಸ್ವಲ್ಪ ಮುಂಚಿತವಾಗಿಯೇ ಹೊರಡುವುದರ ಕಡೆಗೆ ಗಮನ ಇರಲಿ. ಈ ತಿಂಗಳ ಮೂರನೇ ವಾರದಲ್ಲಿ ನಿಮಗೆ ಪಾರ್ಟಿ ಅಥವಾ ಸಂಬಂಧಿಕರ ಮನೆಯ ಕಾರ್ಯಕ್ರಮಗಳು, ಸ್ನೇಹಿತರ ಕಡೆಯಿಂದ ಔತಣ ಕೂಟಗಳಿಗೆ ಆಹ್ವಾನ ಬರುವುದು ಇಂಥದ್ದು ಆಗುತ್ತದೆ. ನಾಲಗೆ ಮೇಲೆ ಹಿಡಿತ ಇರಲಿ. ಆಹಾರದ ವಿಚಾರವೇ ಆಗಿರಲಿ ಅಥವಾ ಆಡುವ ಮಾತು, ಬಳಸುವ ಪದಗಳೇ ಬರಲಿ. ಎಚ್ಚರಿಕೆ ವಹಿಸುವುದು ಮುಖ್ಯವಾಗುತ್ತದೆ. ಶಿಕ್ಷಣ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಯಲ್ಲಿ ಇರುವವರಿಗೆ ಹೊಸ ಜವಾಬ್ದಾರಿ, ಗುರಿಗಳನ್ನು ನೀಡಲಾಗುತ್ತದೆ. ಇದರ ಜತೆಗೆ ಇಷ್ಟೇ ಸಮಯದಲ್ಲಿ ಪೂರ್ಣಗೊಳಿಸಬೇಕು ಎಂದು ನಿರ್ದಿಷ್ಟವಾದ ಕಾರ್ಯಗಳನ್ನು ವಹಿಸಲಿದ್ದಾರೆ. ಪ್ರೀತಿ- ಪ್ರೇಮದಲ್ಲಿ ಇರುವವರು ಅದನ್ನು ಮದುವೆ ಹಂತಕ್ಕೆ ಒಯ್ಯಲು ತೀರ್ಮಾನ ಮಾಡಲಿದ್ದೀರಿ. ಮನೆಯಲ್ಲಿ ಈ ಬಗ್ಗೆ ಪ್ರಸ್ತಾವ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಗುರುವಾರಗಳಂದು ತುಂಬ ಮುಖ್ಯ ಕೆಲಸಗಳನ್ನು ಮಾಡಿ. ವ್ಯಾಪಾರ- ವ್ಯವಹಾರ ಮಾಡುವವರು ಈಗ ಮಾಡುತ್ತಿರುವುದರ ಜತೆಗೆ ಹೊಸ ವ್ಯವಹಾರ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೀರಿ. ಇದಕ್ಕಾಗಿ ದೊಡ್ಡ ಮಟ್ಟದ ಹೂಡಿಕೆಯೊಂದನ್ನು ಮಾಡಬೇಕಾಗುತ್ತದೆ. ಆ ಕಾರಣಕ್ಕೆ ಬ್ಯಾಂಕ್ ಗಳಲ್ಲಿ ಸಾಲ ಮಾಡಬೇಕಾಗುತ್ತದೆ. ವಿವಾಹ ವಯಸ್ಕ ಯುವತಿಯರು ಮ್ಯಾಟ್ರಿಮೋನಿ ವೆಬ್ ಸೈಟ್ ಮೂಲಕ ಮದುವೆಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ನಿಮ್ಮ ಮನಸ್ಸಿಗೆ ಒಪ್ಪುವಂಥ ಸಂಬಂಧ ದೊರಕಲಿದೆ. ಮದುವೆ ಹಂತದ ತನಕ ಬಹಳ ವೇಗವಾಗಿ ಸಾಗಲಿದೆ. ಪಿಎಚ್.ಡಿ., ವ್ಯಾಸಂಗ ಮಾಡುತ್ತಿರುವವರು ಅಥವಾ ವಿದೇಶಗಳಲ್ಲಿ ಮ್ಯಾನೇಜ್ ಮೆಂಟ್ ಅಥವಾ ಮೂಲ ವಿಜ್ಞಾನದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವವರಿಗೆ ಸ್ಕಾಲರ್ ಶಿಪ್, ಹಣಕಾಸಿನ ಅನುದಾನ ದೊರೆಯುವಂಥ ಯೋಗ ಇದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಹಣದ ಆದಾಯ ಹೆಚ್ಚು ಮಾಡಿಕೊಳ್ಳಬೇಕು ಎಂಬ ನಿಮ್ಮ ಪ್ರಯತ್ನಗಳು ಫಲ ನೀಡುವುದಕ್ಕೆ ಶುರು ಮಾಡುತ್ತವೆ. ನಿಮ್ಮ ನಿರ್ಧಾರ, ದೂರದೃಷ್ಟಿ ಹಾಗೂ ತೀರ್ಮಾನ ತೆಗೆದುಕೊಳ್ಳುವ ಸಾಮರ್ಥ್ಯದ ಬಗ್ಗೆ ಕುಟುಂಬ ಮತ್ತು ಸ್ನೇಹಿತರ ವಲಯದಲ್ಲಿ ಮೆಚ್ಚುಗೆ ಕೇಳಿಬರಲಿದೆ. ಇನ್ನು ನಿಮ್ಮ ಶಿಫಾರಸಿನ ಮೂಲಕ ಕೆಲವರಿಗೆ ಸಹಾಯ ಕೂಡ ಮಾಡಲಿದ್ದೀರಿ. ರಾಜಕಾರಣದಲ್ಲಿ ಇರುವವರಿಗೆ ಹೆಚ್ಚಿನ ಹುದ್ದೆ, ಜವಾಬ್ದಾರಿಗಳು ದೊರೆಯುವಂಥ ಯೋಗ ಇದೆ. ಪ್ರಯಾಣದಿಂದ ಲಾಭವಾಗುವಂಥ ಯೋಗ ಇದೆ. ಅಂದರೆ ಕೆಲಸ- ಕಾರ್ಯದ ನಿಮಿತ್ತ ದೂರ- ಭಾರ ಹೋಗಬೇಕಿರುವಂಥದ್ದು ಅಪೇಕ್ಷಿತ ಮತ್ತು ನಿರೀಕ್ಷಿತ ಫಲಿತಾಂಶವನ್ನು ನೀಡಲಿದೆ. ಹೊಸ ವಾಹನಗಳ ಖರೀದಿಗಾಗಿ ಮುಂಗಡವನ್ನು ಪಾವತಿಸಲಿದ್ದೀರಿ. ಇದಕ್ಕಾಗಿ ಮೊದಲಿಗೆ ಸಾಲ ಮಾಡಬೇಕು ಎಂದುಕೊಂಡವರಿಗೆ ಪೂರ್ತಿಯಾಗಿ ಸಾಲ ಮಾಡಬೇಕಾಗುವುದಿಲ್ಲ ಎಂಬಂತೆ ಹಣದ ಹರಿವು ಸರಾಗ ಆಗಲಿದೆ. ಸ್ನೇಹಿತರು ಅಥವಾ ಪರಿಚಯಸ್ಥರ ಮೂಲಕ ಒಳ್ಳೆ ಆಫರ್ ಗಳು ಸಹ ಈ ಅವಧಿಯಲ್ಲಿ ದೊರೆಯಲಿದೆ. ಮಾರುಕಟ್ಟೆ ಅಥವಾ ಮಾರಾಟ ವಿಭಾಗದಲ್ಲಿ ಕೆಲಸ ಮಾಡುವಂಥವರಿಗೆ ಸ್ವಲ್ಪ ಮಟ್ಟಿಗೆ ಒತ್ತಡ ಇರುತ್ತದೆ. ಏಕೆಂದರೆ, ನಿಮ್ಮ ಬಳಿ ಮಾತು ನೀಡಿದವರು ಅದರಂತೆ ನಡೆದುಕೊಳ್ಳುವುದಿಲ್ಲ ಅಥವಾ ಅವರಿಗೇ ಏನಾದರೂ ಸಮಸ್ಯೆಗಳು ಎದುರಾಗಿ, ಅಂದುಕೊಂಡಂತೆ ಏನೂ ಆಗುವುದಿಲ್ಲ. ಆದ್ದರಿಂದ ಕೆಲಸ ಆಗುವ ಮುಂಚೆಯೇ ಎಲ್ಲ ಕಡೆ ಹೇಳಿಕೊಂಡು ಬರಬೇಡಿ. ಹೇಗಿದ್ದರೂ ಗುರಿ ತಲುಪಿ ಬಿಡ್ತೀನಿ ಎಂದು ಮೈ ಮರೆಯಬೇಡಿ. ಮನೆ ಕಟ್ಟಿಸುತ್ತಿರುವವರಿಗೆ ಪ್ಲಾನ್ ನಲ್ಲಿ ದೊಡ್ಡ ಬದಲಾವಣೆ ಮಾಡಿಕೊಳ್ಳಬೇಕಾಗಬಹುದು. ಅಥವಾ ನೀವೇ ಹೊಸದಾಗಿ ಏನೇನೋ ಮಟಿರೀಯಲ್ ಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ವೆಚ್ಚದ ಪ್ರಮಾಣ ಕೈ ಮೀರಿ ಹೋಗಲಿದೆ.ತಮ್ಮ ಸ್ನೇಹಿತರ ವಲಯದಲ್ಲಿ, ಉಪನ್ಯಾಸಕರಿಂದ ಅಥವಾ ಪೋಷಕರಿಂದ ವಿದ್ಯಾರ್ಥಿಗಳು ಅಹಂಕಾರಿಗಳು ಎಂದೆನಿಸಿಕೊಳ್ಳಲಿದ್ದೀರಿ. ಇದರಿಂದ ನಿಮ್ಮ ಮನಸ್ಸಿಗೂ ಬೇಸರ ಆಗಲಿದೆ. ವ್ಯಾಪಾರ- ವ್ಯವಹಾರ ಮಾಡಿಕೊಂಡಿರುವವರು ಒಂದು ವಿಭಾಗವನ್ನೋ ಅಥವಾ ಸ್ವಲ್ಪ ಪ್ರಮಾಣ ಪಾಲನ್ನೋ ಮಾರಾಟ ಮಾಡುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ವೃತ್ತಿ ಮಾಡುತ್ತಿರುವವರಿಗೆ ತಾತ್ಕಾಲಿಕವಾಗಿ ಬಿಡುವು ತೆಗೆದುಕೊಳ್ಳಬೇಕು ಮತ್ತು ಈಗ ನೀಡುತ್ತಿರುವ ಸೇವಾ ವಿಧಾನದಲ್ಲಿ ದೊಡ್ಡ ಬದಲಾವಣೆ ಮಾಡಬೇಕು ಎಂದೆನಿಸಲಿದೆ. ಮಹಿಳೆಯರು ಪ್ರಯಾಣದ ಸಂದರ್ಭದಲ್ಲಿ ತುಂಬ ಜಾಗ್ರತೆಯಿಂದ ಇರಬೇಕು. ನಿಮ್ಮ ಮೈ ಮರೆವಿನಿಂದ ಒಂದೋ ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಳ್ಳಬಹುದು ಅಥವಾ ಬಿದ್ದು ಸಣ್ಣ ಮಟ್ಟಿಗಾದರೂ ಗಾಯ ಮಾಡಿಕೊಳ್ಳಬಹುದು, ಜಾಗ್ರತೆಯಿಂದ ಇರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಭಾವನಾತ್ಮಕವಾಗಿ ತೀವ್ರವಾಗಿ ಕಾಡುವಂಥ ಹಲವು ಸನ್ನಿವೇಶಗಳನ್ನು ಎದುರುಗೊಳ್ಳಲಿದ್ದೀರಿ. ಅದು ಕುಟುಂಬದಲ್ಲಿ ಇರಬಹುದು, ಸ್ನೇಹಿತರು- ಸ್ನೇಹಿತೆಯರ ವಿಚಾರದಲ್ಲಿ ಇರಬಹುದು ಅಥವಾ ನೀವು ಕೆಲಸ ಮಾಡುವಂಥ ಸ್ಥಳದಲ್ಲಿ ಆಗಿರಬಹುದು. ನೀವು ನೀಡುವ ಪ್ರೀತಿ, ಸ್ನೇಹ ಇವೆಲ್ಲ ಏಕಮುಖವಾಗಿ ಹೋಯಿತಾ ಎಂದು ನಿಮ್ಮನ್ನು ಕಾಡುವುದಕ್ಕೆ ಶುರುವಾಗುತ್ತದೆ. ಈ ಆಲೋಚನೆಗೆ ಸಿಲುಕಿಕೊಂಡು, ಕೆಲವು ನಿಮ್ಮದೇ ಜವಾಬ್ದಾರಿಗಳು ಅಥವಾ ನೀವೇ ವಹಿಸಿಕೊಂಡ ಕೆಲಸಗಳಲ್ಲಿ ನ್ಯೂನ್ಯತೆ ಕಂಡುಬರಲಿದೆ. ಹೀಗಾಗದಂತೆ ನೋಡಿಕೊಳ್ಳುವುದೇ ನಿಮ್ಮ ಪಾಲಿಗೆ ಸವಾಲಾಗಲಿದೆ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ವೇತನ ವಿಚಾರದಲ್ಲಿ ಸಮಾಧಾನ ಆಗದಂಥ ಕೆಲವು ಆಫರ್ ಗಳು ಬರಬಹುದು. ಅವುಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ನೀವು ಇರುವುದಿಲ್ಲ. ವಿದೇಶಗಳಲ್ಲಿ ಉದ್ಯೋಗ ಮಾಡುತ್ತಿರುವವರು ಕಾನೂನು ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳನ್ನು ಎದುರಿಸುತ್ತೀರಿ. ಇದರಿಂದ ಒತ್ತಡ ಎದುರಾಗಲಿದೆ. ಇದೇ ಮೊದಲ ಬಾರಿಗೆ ಎಂಬಂತೆ ಸಾಲ ಪಡೆದುಕೊಂಡವರಿಗೆ ಯಾವ ಉದ್ದೇಶಕ್ಕಾಗಿ ಕಡ ತೆಗೆದುಕೊಂಡಿರುತ್ತೀರೋ ಅದಕ್ಕಾಗಿಯೇ ಪೂರ್ತಿ ಹಣ ವಿನಿಯೋಗ ಮಾಡುವುದಕ್ಕೆ ಆಗುವುದೇ ಇಲ್ಲ. ಕೃಷಿ ಜಮೀನನ್ನು ನಿವೇಶನಗಳಾಗಿ ಪರಿವರ್ತನೆ ಮಾಡಿಸಿ, ಮಾರಾಟ ಮಾಡಬೇಕು ಎಂದುಕೊಂಡವರಿದ್ದಲ್ಲಿ ನಿಯಮಾವಳಿಗಳನ್ನು ಪೂರೈಸುವುದರಲ್ಲಿ ಹೈರಾಣಾಗಲಿದ್ದೀರಿ. ಮುಖ್ಯವಾಗಿ ನಿಮಗೆ ಸಹಾಯ ಮಾಡುವುದಕ್ಕೆ ಇರುವಂಥ ಮಧ್ಯವರ್ತಿಯೋ ಅಥವಾ ಅಧಿಕಾರಿಯೋ ಅಥವಾ ಸ್ನೇಹಿತರೋ ಸರಿಯಾದ ಮಾಹಿತಿ ನೀಡದ ಕಾರಣಕ್ಕೆ ವಿಪರೀತ ಸಮಯ ವ್ಯರ್ಥ ಆಗಲಿದೆ. ಆದ್ದರಿಂದ ಇಂಥ ಕೆಲಸಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ಪಡೆದ ನಂತರವೇ ಮುಂದುವರಿಯಿರಿ. ವ್ಯಾಪಾರ- ವ್ಯವಹಾರ ಮಾಡುತ್ತಿರುವವರು ನೋಂದಣಿ, ಪರವಾನಗಿಗಳ ರಿನೀವಲ್ ಅನ್ನು ಗಡುವಿನ ದಿನಾಂಕದೊಳಗೆ ಮಾಡಿದ್ದೀರಾ ಎಂಬುದನ್ನು ಖಾತ್ರಿ ಮಾಡಿಕೊಳ್ಳುವುದು ಒಳ್ಳೆಯದು. ಒಂದು ವೇಳೆ ಈ ಜವಾಬ್ದಾರಿಯನ್ನು ಇನ್ನೊಬ್ಬರಿಗೆ ವಹಿಸಿದ್ದೀರಿ ಅಂತಾದಲ್ಲಿ ಸರಿಯಾದ ಫಾಲೋ ಅಪ್ ಮಾಡಿ. ಏಕೆಂದರೆ ಈ ತಿಂಗಳು ಇಂಥದ್ದಕ್ಕಾಗಿ ದಂಡ ಕಟ್ಟಬೇಕಾದ ಪರಿಸ್ಥಿತಿ ನೀವು ಎದುರಿಸಲಿದ್ದೀರಿ. ವೃತ್ತಿನಿರತರು ಒಪ್ಪಂದ ಮಾಡಿಕೊಳ್ಳದೆ ಯಾವುದೇ ಕೆಲಸವನ್ನು ಆರಂಭಿಸಬೇಡಿ. ಅದರಲ್ಲೂ ಹೆಸರಾಂತ ಸಂಸ್ಥೆಗಳು, ಮೊದಲಿಗೆ ಕೆಲಸ ಶುರು ಮಾಡಿ, ಆ ನಂತರ ಅಗ್ರಿಮೆಂಟ್ ಹಾಕಿಕೊಂಡರೆ ಆಯಿತು ಅಂತ ಅಂದರು ಎಂಬ ಕಾರಣಕ್ಕೆ ಕೆಲಸ ಶುರು ಮಾಡಿದಲ್ಲಿ ಆ ನಂತರ ಪರಿತಪಿಸುವಂತೆ ಆಗುತ್ತದೆ. ಶಿಕ್ಷಣದಲ್ಲಿ ಆಸಕ್ತಿ ಕಡಿಮೆ ಆಗುವ ಹಾಗೂ ನಾಟಕ, ಸಿನಿಮಾ ಅಥವಾ ಬೇರೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಆಸಕ್ತಿ ಜಾಸ್ತಿ ಆಗುವಂಥ ಯೋಗ ಇದೆ. ಮಹಿಳೆಯರ ಮೇಲೆ ಸ್ನೇಹಿತರು, ಸಂಬಂಧಿಕರಿಂದ ನಿಂದೆ ಅಥವಾ ಅಪವಾದಗಳು ಎದುರಾಗಬಹುದು.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ನಮ್ಮ ಪಾಲಿಗೆ ಬಂದದ್ದು ಅಚ್ಚುಕಟ್ಟಾಗಿ ಮಾಡಿ ಮುಗಿಸೋಣ ಎಂಬ ನಿಮ್ಮ ಸ್ವಭಾವಕ್ಕೆ ಪ್ರತಿಫಲ ದೊರೆಯಲಿದೆ. ಹೊಸ ಅವಕಾಶಗಳು ತೆರೆದುಕೊಳ್ಳಬಹುದು. ವ್ಯವಹಾರವೊಂದನ್ನು ಸಂಪೂರ್ಣವಾಗಿ ನೋಡಿಕೊಳ್ಳುವಂತೆ ನಿಮಗೆ ವಹಿಸಿಕೊಡಬಹುದು. ಒಂದು ವೇಳೆ ಸಂಬಳಕ್ಕೆ ಕೆಲಸ ಮಾಡುವವರಾಗಿದ್ದಲ್ಲಿ ಲಾಭದಲ್ಲಿ ಪಾಲು ಕೊಡುವಂತೆ ಹೇಳಿ, ಇಡೀ ವ್ಯವಹಾರ, ಹಣಕಾಸು ಲೆಕ್ಕಾಚಾರ ನಿಮಗೇ ವಹಿಸಿಬಿಡುವಂಥ ಸಾಧ್ಯತೆ ಇದೆ. ಇಂಥದ್ದು ಬಂದಲ್ಲಿ ಅವಕಾಶ ಅಂತಲೇ ಭಾವಿಸಿ. ಇಷ್ಟು ದೊಡ್ಡ ಜವಾಬ್ದಾರಿ ನಿರ್ವಹಿಸುವುದಕ್ಕೆ ಸಾಧ್ಯವೆ ಎಂಬ ಹಿಂಜರಿಕೆ ಬೇಡ. ಸಮಾಧಾನವಾಗಿ ಮಾಡುವಂಥ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಇದು ಉಪದೇಶ ಅಂದುಕೊಳ್ಳಬೇಡಿ. ಈ ಹಿಂದೆ ಮಾಡಿದ ಕೆಲಸವೇ ಅಲ್ಲವಾ ಎಂದು ಆಲೋಚನೆಯನ್ನು ಪಕ್ಕಕ್ಕೆ ಇಟ್ಟು, ಆತುರದಿಂದ ಕೆಲಸ ಶುರು ಮಾಡಿಕೊಂಡರೆ ಒಂದನ್ನೇ ಪದೇ ಪದೇ ಮಾಡಬೇಕಾಗುತ್ತದೆ. ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದವರಿಗೆ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಲಾಭ ದೊರೆಯಲಿದೆ. ಅದನ್ನು ತೆಗೆದುಕೊಳ್ಳಬೇಕಾ ಅಥವಾ ಹಾಗೆ ಆ ಮೊತ್ತವನ್ನೇ ಮತ್ತೆ ಹೂಡಿಕೆ ಮಾಡಬೇಕಾ ಎಂಬ ಪ್ರಶ್ನೆ ಕಾಡಲಿದೆ. ಅಗತ್ಯ ಕಂಡುಬಂದಲ್ಲಿ ಹಿರಿಯರ – ಅನುಭವಿಗಳ ಮಾರ್ಗದರ್ಶನವನ್ನು ಪಡೆದುಕೊಳ್ಳಿ. ಸೈನ್ಯದಲ್ಲಿ ಕೆಲಸ ಮಾಡುತ್ತಿರುವಂಥವರಿಗೆ ವರ್ಗಾವಣೆ ಆಗುವಂಥ ಯೋಗ ಇದೆ. ಅಥವಾ ನಿಮ್ಮಲ್ಲಿ ಕೆಲವರಿಗೆ ನಿಯೋಜನೆ ಮೇಲೆ, ಅಲ್ಪ ಕಾಲಕ್ಕಾದರೂ ಬೇರೆ ಕಡೆ ಕೆಲಸಕ್ಕೆ ಹಾಕಬಹುದು. ಇದರಿಂದ ನಿಮಗೆ ಅನುಕೂಲಗಳು ಆಗಲಿವೆ. ಭವಿಷ್ಯದಲ್ಲಿ ಆಗಬಹುದಾದ ಅತಿ ಮುಖ್ಯ ಬೆಳವಣಿಗೆಯೊಂದರ ಸುಳಿವು ದೊರೆಯಲಿದೆ. ಯಾರು ವಿದೇಶಗಳಲ್ಲಿ ವ್ಯಾಸಂಗ ಮಾಡುವ ಸಲುವಾಗಿ ಪ್ರವೇಶ ಪರೀಕ್ಷೆಗಳನ್ನು ತೆಗೆದುಕೊಂಡಿರುತ್ತೀರೋ ಅಂಥವರಿಗೂ ಇದು ಉತ್ತಮವಾದ ಸಮಯ. ಹಣಕಾಸಿನ ಸಮಸ್ಯೆ ಕೂಡ ಏನಾದರೂ ಇದ್ದಲ್ಲಿ ಅದನ್ನು ಕೂಡ ಯಶಸ್ವಿಯಾಗಿ ನಿಭಾಯಿಸುವುದಕ್ಕೆ ಸಾಧ್ಯವಾಗುತ್ತದೆ. ಉದ್ಯಮ- ವ್ಯಾಪಾರ ಮಾಡುತ್ತಿರುವವರು ಕೆಲಸಗಾರರ ಸಂಖ್ಯೆಯನ್ನು ಹೆಚ್ಚು ಮಾಡುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ಇದರ ಜತೆಗೆ ಬೇರೆ ಶಾಖೆಗಳನ್ನು ಸಹ ತೆರೆಯುವುದಕ್ಕೆ ಯೋಜನೆಯನ್ನು ರೂಪಿಸಿಕೊಳ್ಳಲಿದ್ದೀರಿ. ಕೃಷಿಕರಿಗೆ ಬೆಳೆ ನಷ್ಟ ಅನುಭವಿಸುವಂಥ ಯೋಗ ಇದೆ. ನೀವು ಬಳಸುವಂಥ ಗೊಬ್ಬರ, ಔಷಧ, ನೀರಿನ ಪ್ರಮಾಣ ಇಂಥದ್ದರ ಬಗ್ಗೆ ಮಾಮೂಲಿಗಿಂತ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಒಂದು ವೇಳೆ ಸ್ವಲ್ಪ ಭೂಮಿಯನ್ನು ಭೋಗ್ಯಕ್ಕೆ ನೀಡುವಂತೆ ಯಾರಾದರೂ ಕೇಳಿಕೊಂಡು ಬಂದಲ್ಲಿ ಈ ಬಗ್ಗೆ ಯೋಚಿಸಿ, ತೀರ್ಮಾನ ಮಾಡಿ. ವೃತ್ತಿ ನಿರತರಿಗೆ ಸಂಪಾದನೆಯ ಬಹುಪಾಲು ಕಚೇರಿ ದುರಸ್ತಿ, ವಾಹನ ರಿಪೇರಿ, ಪ್ರಯಾಣ ಇಂಥದ್ದಕ್ಕೆ ಖರ್ಚಾಗುವಂಥ ಯೋಗ ಇದೆ. ಮಹಿಳೆಯರು ಸಂಗಾತಿ ಜತೆಗೆ ವಾಗ್ವಾದಗಳು ಆಗದಂತೆ ನೋಡಿಕೊಳ್ಳುವುದು ಮುಖ್ಯ. ಅದರಲ್ಲೂ ಸೈಟು ಖರೀದಿ, ಮನೆ ಖರೀದಿ ಇಂಥ ವಿಚಾರಗಳಲ್ಲಿ ಅಭಿಪ್ರಾಯ ಭೇದ ಬಾರದಂತೆ ನೋಡಿಕೊಳ್ಳಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಮೊದಲಿನಷ್ಟು ಉತ್ಸಾಹದಿಂದ ಕೆಲಸ ಮಾಡುವುದಕ್ಕೆ ಈ ತಿಂಗಳು ಸಾಧ್ಯವಾಗುವುದಿಲ್ಲ. ಏಕಾಗ್ರತೆಯನ್ನು ಸಾಧಿಸುವುದಕ್ಕೆ ಏನು ಮಾಡಬೇಕೋ ಅದನ್ನು ಮಾಡುವುದಕ್ಕೆ ಪ್ರಯತ್ನಿಸುವುದು ಒಳ್ಳೆಯದು. ಕೆಲಸದ ಗುಣಮಟ್ಟ ಸಹ ಈ ಹಿಂದಿನ ರೀತಿಯಲ್ಲಿ ಇಲ್ಲ ಎಂಬ ಬಗ್ಗೆ ಆಕ್ಷೇಪಗಳು ಕೇಳಿಬರಲಿವೆ. ಟೀಕೆ, ವಿಮರ್ಶೆ, ಆಕ್ಷೇಪಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು. ನಾನು ಮಾಡುವುದೇ ಹೀಗೆ ಎಂಬ ಧೋರಣೆಯಿಂದ ಮಾತನಾಡಬೇಡಿ. ಸಿಹಿ ಪದಾರ್ಥಗಳ ಸೇವನೆಯಿಂದ ದೂರ ಇರುವುದು ಮುಖ್ಯವಾಗುತ್ತದೆ. ಏಕೆಂದರೆ ಒಂದೋ ಹಲ್ಲಿನ ಸಮಸ್ಯೆಗಳಾಗಬಹುದು ಹಾಗೂ ಇದಕ್ಕಾಗಿ ಔಷಧೋಪಚಾರಕ್ಕಾಗಿ ಹೆಚ್ಚಿನ ಖರ್ಚು ಆಗಲಿದೆ. ಒಂದು ವೇಳೆ ಮಧುಮೇಹ ಅಥವಾ ಶುಗರ್ ಇರುವಂಥವರು ಆಹಾರ ಪಥ್ಯವನ್ನು ಕಡ್ಡಾಯವಾಗಿ ಪಾಲಿಸುವುದು ಮುಖ್ಯ. ನಿಶ್ವಿತವಾದ ಆದಾಯವನ್ನು ಖಾತ್ರಿ ಮಾಡಿಕೊಳ್ಳುವುದಕ್ಕೆ ವಿವಿಧ ಯೋಜನೆಗಳನ್ನು ರೂಪಿಸಲಿದ್ದೀರಿ. ಸ್ನೇಹಿತರು ಕೂಡ ಇದಕ್ಕಾಗಿ ಸಹಾಯ ಮಾಡಲಿದ್ದಾರೆ. ಬಾಡಿಗೆ ಮನೆಗಳ ಮೂಲಕ ಆದಾಯವನ್ನು ಗಳಿಸುತ್ತಿರುವವರಿಗೆ ಅದರಲ್ಲಿ ಇಳಿಕೆ ಆಗಲಿದೆ. ಅಂದರೆ ಬಾಡಿಗೆಗೆ ಇರುವವರು ಬಿಟ್ಟು ಹೋಗಿ, ತಕ್ಷಣಕ್ಕೆ ಅದಕ್ಕೆ ಬಾಡಿಗೆದಾರರು ಬಾರದೇ ಹೋಗಬಹುದು. ಕೃಷಿ ಮಾಡುತ್ತಿರುವವರಿಗೆ ಮನೆಯಲ್ಲಿ ನೆಮ್ಮದಿ ಇಲ್ಲದಂತಾಗುತ್ತದೆ. ನಿಮ್ಮ ಅಭಿಪ್ರಾಯಗಳೆಲ್ಲದಕ್ಕೂ ವಿರೋಧವನ್ನೇ ಎದುರಿಸಬೇಕಾಗುತ್ತದೆ. ತಂದೆ- ತಾಯಿಯ ಆರೋಗ್ಯದಲ್ಲೂ ಏರುಪೇರಾಗಿ, ಹೆಚ್ಚಿನ ಹಣ ಖರ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ತಮ್ಮ ಸ್ನೇಹಿತರು ಮಾಡುವ ಕೆಲಸದಿಂದ ತಾವು ಕೆಟ್ಟ ಹೆಸರು ಪಡೆಯುವಂತಾಗುತ್ತದೆ. ನೀವು ಏನು ಹೇಳುವುದಕ್ಕೆ ಬಯಸಿದರೂ ಅದನ್ನು ಕೇಳುವ ಸ್ಥಿತಿಯಲ್ಲಿ ಎದುರಿನವರು ಇರುವುದಿಲ್ಲ. ವೃತ್ತಿಯಲ್ಲಿ ಪ್ರತಿಸ್ಪರ್ಧಿಗಳಿಂದ ಸ್ಪರ್ಧೆ ತೀವ್ರವಾಗಲಿದೆ. ಇದರಿಂದ ಆತಂಕಕ್ಕೆ ಒಳಗಾಗಿ ತಪ್ಪು ನಿರ್ಧಾರಗಳನ್ನು ಮಾಡಬೇಡಿ. ಸ್ವಂತ ವ್ಯಾಪಾರ- ವ್ಯವಹಾರ ಮಾಡುತ್ತಿರುವವರಿಗೆ ಕಳಪೆ ವಸ್ತುಗಳನ್ನು ಮಾರಿಬಿಡುವ ಸಾಧ‌್ಯತೆ ಇದೆ. ಆದರೆ ಡೆಲಿವರಿ ಪಡೆದುಕೊಳ್ಳುವ ಮುಂಚೆ ವಸ್ತುಗಳ ಗುಣಮಟ್ಟವನ್ನು ಪರೀಕ್ಷಿಸಿಕೊಳ್ಳುವುದನ್ನು ಮರೆಯದಿರಿ. ಮಹಿಳೆಯರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಗಳನ್ನು ಮಾಡುವ ಮುನ್ನ ಅದರ ಪರಿಣಾಮ ಏನಾಗಬಹುದು ಎಂಬುದನ್ನು ಅರಿತು, ಮುಂದುವರಿಯಿರಿ. ಎಲೆಕ್ಟ್ರಿಕಲ್ ವಾಹನ ಖರೀದಿಸಬೇಕು ಎಂದಿರುವವರಿಗೆ ಹಣಕಾಸಿನ ಅನುಕೂಲ ಒದಗಿ ಬರಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನವ ವಿವಾಹಿತರು ಸಂತೋಷವಾಗಿ ಸಮಯ ಕಳೆಯುವಂಥ ಯೋಗ ಇದೆ. ಕೆಲವರು ವಿದೇಶಕ್ಕೆ ಪ್ರವಾಸಕ್ಕಾಗಿ ತೆರಳಲಿದ್ದೀರಿ. ಈಗಾಗಲೇ ಹಣ ನೀಡಿಯಾಗಿದೆ, ಬಹಳ ಸಮಯದಿಂದ ಕೆಲಸ ಮಾಡಿಕೊಡದೆ ಈಗ – ಆಗ ಎಂದು ನೆಪ ಹೇಳುತ್ತಿದ್ದಾರೆ ಎಂಬಂಥ ಕೆಲಸಗಳು ಈ ತಿಂಗಳಲ್ಲಿ ಆಗಲಿವೆ. ಕೋರ್ಟ್- ಕಚೇರಿ, ಪೊಲೀಸ್ ಠಾಣೆ ಮೆಟ್ಟಿಲು ಏರಿರುವಂಥ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಅವಕಾಶಗಳು ದೊರೆಯಲಿವೆ. ಇದನ್ನು ನೀವು ಹೇಗೆ ನಿರ್ವಹಿಸುತ್ತೀರಿ ಎಂಬುದು ಬಹಳ ಮುಖ್ಯವಾಗುತ್ತದೆ. ನಾನು ಹೇಳಿದಂತೆಯೇ ಆಗಬೇಕು ಎಂಬ ಹಠ ಬೇಡ. ನಿಮ್ಮ ನಿರ್ಧಾರವನ್ನು ಬದಲಿಸುವಂತೆ ಮಾಡುವುದಕ್ಕೆ ಕೆಲವರು ಉದ್ರೇಕಗೊಳಿಸುತ್ತಾರೆ. ಆದರೆ ಇಂಥವರ ಮಾತುಗಳಿಗೆ ಬಲಿ ಆಗಬೇಡಿ. ಸಂಗಾತಿ ನೀಡುವ ಸಲಹೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಿ. ಬ್ಯಾಂಕ್ ವ್ಯವಹಾರಗಳು ಸಲೀಸಾಗಿ ಮುಗಿಯುವುದಕ್ಕೆ ವೇದಿಕೆ ಸಿದ್ಧವಾಗಲಿದೆ. ಈ ಹಿಂದೆ ನೀವು ಯಾರಿಗೆ ಸಹಾಯ ಮಾಡಿದ್ದಿರೋ ಅಂಥವರು ನಿಮ್ಮ ನೆರವಿಗೆ ಬರಲಿದ್ದಾರೆ. ಸಿಮೆಂಟ್, ಕಬ್ಬಿಣ ಅಥವಾ ಇಟ್ಟಿಗೆ ಮಾರಾಟದ ವ್ಯವಹಾರ ಮಾಡುತ್ತಿರುವವರು ಅದನ್ನು ವಿಸ್ತರಣೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದೀರಿ. ನಿಮ್ಮ ವ್ಯವಾಹರಕ್ಕೆ ಅಗತ್ಯ ಇರುವ ಸಲಕರಣೆ, ವಾಹನಗಳನ್ನು ಖರೀದಿ ಮಾಡಲಿದ್ದೀರಿ. ಸರ್ಕಾರಿ ಕೆಲಸಗಳಲ್ಲಿ ಇರುವವರಿಗೆ ವರ್ಗಾವಣೆ ಅಥವಾ ಹೆಚ್ಚಿನ ಜವಾಬ್ದಾರಿಗಳು ದೊರೆಯಲಿವೆ. ಅಧ್ಯಯನ ಪ್ರವಾಸಗಳಿಗಾಗಿ ತೆರಳ ಬೇಕಾಗಬಹುದು. ಈ ತಿಂಗಳು ತಂದೆ- ತಾಯಿ, ಅಣ್ಣ- ತಮ್ಮ, ಅಕ್ಕ- ತಂಗಿಯರ ಅಗತ್ಯಗಳಿಗೆ ಸ್ಪಂದಿಸುವುದಕ್ಕೆ ಸಮಯ ದೊರೆಯದೇ ಹೋಗಬಹುದು. ಸಮಯವನ್ನು ಹೊಂದಾಣಿಕೆ ಮಾಡಿಕೊಳ್ಳುವ ಕಡೆಗೆ – ಸಮಯದ ನಿರ್ವಹಣೆಗೆ ಜಾಸ್ತಿ ಪ್ರಾಮುಖ್ಯ ಕೊಡಿ. ಶನಿವಾರದ ದಿನ ಆಂಜನೇಯ ಸ್ವಾಮಿ ದೇವರ ದೇವಾಲಯಕ್ಕೆ ತೆರಳಿ ದರ್ಶನ ಪಡೆಯುವುದರಿಂದ ಕೆಲಸಗಳಲ್ಲಿ ಎದುರಾಗುವಂಥ ಸವಾಲು, ಅಡೆ ತಡೆಗಳನ್ನು ಎದುರಿಸುವುದಕ್ಕೆ ಆತ್ಮಸ್ಥೈರ್ಯ ಜಾಸ್ತಿ ಆಗುತ್ತದೆ. ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಇಂಟರ್ನ್ ಷಿಪ್ ಮಾಡುವುದಕ್ಕೆ ಅವಕಾಶ ದೊರೆಯಬಹುದು ಅಥವಾ ವಿದ್ಯಾರ್ಥಿ ವೇತನ ದೊರೆಯುವಂಥ ಅವಕಾಶಗಳೂ ಇವೆ. ಬಹಳ ಸಮಯದಿಂದ ನೀವು ತೆಗೆದುಕೊಳ್ಳಬೇಕು ಎಂದಿದ್ದ ಗ್ಯಾಜೆಟ್ ಗಳನ್ನು ಖರೀದಿಸುವುದಕ್ಕೆ ಯೋಗ ಇದೆ. ಮಹಿಳೆಯರು ಚೀಟಿ ವ್ಯವಹಾರಗಳನ್ನು ನಡೆಸುತ್ತಿದ್ದಲ್ಲಿ ಮನಸ್ತಾಪಗಳು ಆಗಬಹುದು. ಪಾರದರ್ಶಕವಾಗಿ ನಡೆದುಕೊಳ್ಳುವುದಕ್ಕೆ ಪ್ರಯತ್ನಿಸಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನೀವು ಆಡದ ಮಾತುಗಳು, ಎಂದಿಗೂ ಚರ್ಚಿಸದ ವಿಷಯಗಳನ್ನು ನೀವೇ ಆಡಿದ್ದೀರಿ ಅಂತಲೂ ಹಾಗೂ ಅವಮಾನ ಆಗುವಂತೆ ಮಾಡಿದ್ದೀರಿ ಅಂತಲೂ ಆರೋಪಗಳನ್ನು ಎದುರಿಸಬೇಕಾಗುತ್ತದೆ. ಉದ್ಯೋಗ ಸ್ಥಳದಲ್ಲಿ ನೀವು ಹಾಕಿಕೊಂಡ ಯೋಜನೆಯಂತೆ ಬೆಳವಣಿಗೆಗಳು ಆಗದೆ ಸಿಟ್ಟಿಗೆ ಒಳಗಾಗುತ್ತೀರಿ. ನಿಮ್ಮ ಕೈಯಲ್ಲಿ ಎಷ್ಟು ಹಣವಿದೆ ಅಷ್ಟಕ್ಕೆ ಮಾತ್ರ ಬಜೆಟ್- ಖರ್ಚಿನ ಪ್ಲ್ಯಾನ್ ಮಾಡಿಕೊಳ್ಳಿ. ಮನೆಯ ನಿರ್ಮಾಣ ಮಾಡುತ್ತಿದ್ದಲ್ಲಿ, ಸೈಟು ಖರೀದಿ ಅಥವಾ ಅಪಾರ್ಟ್ ಮೆಂಟ್ ಖರೀದಿ ಮಾಡಬೇಕು ಎಂದಿರುವವರು ಈ ತನಕ ಏನು ಲೆಕ್ಕಾಚಾರ ಇಟ್ಟುಕೊಂಡಿದ್ದೀರೋ ಅದನ್ನೇ ಅನುಸರಿಸಿ. ಒಂದು ವೇಳೆ ತೀರ್ಮಾನವನ್ನು ಬದಲಿಸಿಕೊಂಡು, ಹೆಚ್ಚಿನ ಸಾಲವನ್ನು ಮಾಡಿದಿರೋ ಬಹಳ ಕಷ್ಟಗಳನ್ನು ಎದುರಿಸಲಿದ್ದೀರಿ. ಈ ತಿಂಗಳು ನೀವು ಮಲಗುವ ಭಂಗಿಯ ಕಡೆಗೆ ಸರಿಯಾದ ಗಮನ ನೀಡಿ. ಕುತ್ತಿಗೆ ನೋವು, ಬೆನ್ನು ಹುರಿಯ ಸಮಸ್ಯೆ ಕಾಡುತ್ತಿದೆ ಎಂದಾದಲ್ಲಿ ಸೂಕ್ತ ವೈದ್ಯೋಪಚಾರ ತೆಗೆದುಕೊಳ್ಳಿ. ಸ್ವಂತ ಉದ್ಯಮ- ವ್ಯವಹಾರ ಮಾಡುತ್ತಿರುವವರು ಪ್ರಚಾರ ಮಾಡುವುದಕ್ಕೆ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಡಿಜಿಟಲ್ ಮಾರ್ಕೆಟಿಂಗ್ ಮೂಲಕ ಪ್ರಚಾರ ಮಾಡಬೇಕು ಎಂದು ನಿರ್ಧರಿಸುವವರು ಸರಿಯಾದ ಯೋಜನೆಯನ್ನು ರೂಪಿಸುವುದು ಮುಖ್ಯ ಎಂಬುದನ್ನು ತಿಳಿದುಕೊಳ್ಳಿ. ಕೃಷಿಕರಿಗೆ ಕೃಷಿ ಉತ್ಪನ್ನಗಳ ಖರೀದಿ ಮಾಡುವುದಕ್ಕೆ ಖರೀದಿದಾರರು ಬರಲಿದ್ದಾರೆ. ಇದು ದೀರ್ಘಾವಧಿಯಲ್ಲಿ ದೊಡ್ಡ ಮಟ್ಟದಲ್ಲಿ ಅನುಕೂಲ ಆಗಿ ಪರಿಣಮಿಸಲಿದೆ. ವಿದ್ಯಾರ್ಥಿಗಳು ಇತರರ ಬಗ್ಗೆ ಯಾವುದೇ ಕಾಮೆಂಟ್ ಮಾಡಬೇಡಿ. ತಮಾಷೆಗೆ ಅಂತ ಮಾತನಾಡಿದರೂ ಗಂಭೀರ ಸ್ವರೂಪ ಪಡೆದುಕೊಂಡು, ಮನಸ್ತಾಪಕ್ಕೆ ಕಾರಣ ಆಗಬಹುದು. ಆದ್ದರಿಂದ ಯಾವುದೇ ತಮಾಷೆ ಹಾಗೂ ಎಷ್ಟು ಮಿತಿ ಇರಬೇಕು ಎಂಬ ಬಗ್ಗೆ ಸ್ಪಷ್ಟ ಗೆರೆಯನ್ನು ಹಾಕಿಕೊಳ್ಳಿ. ಮಹಿಳೆಯರಿಗೆ ತವರು ಮನೆಯಿಂದ ಕಾರ್ಯಕ್ರಮಗಳಿಗೆ ಬರುವಂತೆ ಆಹ್ವಾನ ನೀಡಲಿದ್ದಾರೆ. ಒಂದು ವೇಳೆ ಪಿತ್ರಾರ್ಜಿತ ಆಸ್ತಿಗಳು ಬರಬೇಕಿದ್ದಲ್ಲಿ ಅದು ಬರುವಂಥ ಸಾಧ್ಯತೆ ಇದೆ. ಡಾಕ್ಟರ್ ಗಳು ಅಥವಾ ಚಾರ್ಟರ್ಡ್ ಅಕೌಂಟೆಂಟ್ ಗಳಿಗೆ ಸಂಘ- ಸಂಸ್ಥೆಗಳಲ್ಲಿ ಉನ್ನತ ಹುದ್ದೆ, ಸ್ಥಾನ- ಮಾನಗಳು ದೊರೆಯಲಿವೆ. ಇದರ ಜತೆಗೆ ಸನ್ಮಾನಗಳು ಆಗಲಿವೆ.

ಲೇಖನ- ಎನ್.ಕೆ. ಸ್ವಾತಿ

Published On - 5:15 pm, Sat, 2 September 23

ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’