Numerology Horoscope 2nd September: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಸೆಪ್ಟೆಂಬರ್ 2ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಸೆಪ್ಟೆಂಬರ್ 2ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ವಿವಾಹಿತರಾಗಿದ್ದಲ್ಲಿ ಸಂಗಾತಿಯ ಹಠಮಾರಿ ಧೋರಣೆ ಕಂಗೆಡಿಸಲಿದೆ. ನೀವು ಹೇಳು ವಿಚಾರ- ಸಲಹೆ ಸೂಕ್ತವಾಗಿದ್ದರೂ ಅದನ್ನು ಪಾಲಿಸುತ್ತಿಲ್ಲವಲ್ಲ ಎಂಬ ಸಂಗತಿಯು ಬೇಸರಕ್ಕೆ ಕಾರಣ ಆಗಬಹುದು. ಒಂದು ವೇಳೆ ನೀವೇನಾದರೂ ಸ್ನೇಹಿತರು- ಸಂಬಂಧಿಕರಿಂದ ಸಾಲವನ್ನು ಪಡೆದುಕೊಂಡಿದ್ದಲ್ಲಿ ಅದು ಈಗಲೇ ಹಿಂತಿರುಗಿಸಬೇಕು ಎಂದು ಕೇಳಿಕೊಂಡು ಬರಬಹುದು. ಅವರು ನಿಮಗೆ ಇನ್ನಷ್ಟು ಸಮಯವನ್ನು ನೀಡುವುದಕ್ಕೆ ಸುತರಾಂ ಒಪ್ಪುವುದಿಲ್ಲ. ಇನ್ನು ನೀವಾಗಿಯೇ ಇಂಥ ದಿನಾಂಕದಲ್ಲಿ- ಸಮಯದಲ್ಲಿ ಹಣವನ್ನು ಹಿಂತಿರುಗಿಸುತ್ತೇನೆ ಎಂದೇನಾದರೂ ಮಾತು ನೀಡಿದ್ದಲ್ಲಿ ಅದನ್ನು ಉಳಿಸಿಕೊಳ್ಳುವ ಕಡೆಗೆ ಲಕ್ಷ್ಯ- ಪ್ರಯತ್ನ ಇರಲಿ. ನಿಮ್ಮಲ್ಲಿ ಯಾರಿಗೆ ಥೈರಾಯ್ಡ್ ಸಮಸ್ಯೆ ಇದೆಯೋ ಅಂಥವರು ಆತಂಕಕ್ಕೆ ಗುರಿ ಆಗುವಂಥ ಕೆಲವು ಬೆಳವಣಿಗೆಗಳು ಆಗಬಹುದು. ಆದ್ದರಿಂದ ಎಚ್ಚರಿಕೆಯಿಂದ ಇರುವುದು ಮುಖ್ಯವಾಗುತ್ತದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಆದಾಯ ತೆರಿಗೆ ರೀಫಂಡ್, ಸರ್ಕಾರದಿಂದ ಬರಬೇಕಾದ ಯಾವುದಾದರೂ ಹಣ, ನೀವು ಈಗಾಗಲೇ ಕೆಲಸ ಮಾಡಿಯಾಗಿದೆ, ಅದು ನಿಮ್ಮ ಕೈ ತಲುಪಿಲ್ಲ ಎಂದಾದಲ್ಲಿ ಈ ದಿನ ನಿಮಗೆ ಬರುವ ಅವಕಾಶಗಳು ಹೆಚ್ಚಿವೆ. ಮನೆಯಲ್ಲಿ ಹಿರಿಯರು ಅನಾರೋಗ್ಯದಿಂದ ಏನಾದರೂ ಬಳಲುತ್ತಿದ್ದಲ್ಲಿ ಅವರಿಗೂ ಸೂಕ್ತ ವೈದ್ಯೋಪಚಾರಗಳು ದೊರೆಯಲಿವೆ. ಮಕ್ಕಳಿಗೆ ಪಠ್ಯೇತರ ಚಟುವಟಿಕೆಗೆ ಪ್ರೋತ್ಸಾಹ ನೀಡುವ ಸಲುವಾಗಿ ತರಬೇತಿಗೆ ಸೇರಿಸುವ ನಿರ್ಧಾರ ಮಾಡುವಂಥ ಯೋಗ ಈ ದಿನ ಇದೆ. ಉದ್ಯೋಗ ಸ್ಥಳದಲ್ಲಿ ಇತ್ತೀಚೆಗೆ ಆಗಿರುವ ಕೆಲವು ಬೆಳವಣಿಗೆಗಳ ಬಗ್ಗೆ ನಿಮ್ಮಲ್ಲಿ ಕೆಲವರು ಆಕ್ಷೇಪ ವ್ಯಕ್ತಪಡಿಸಲಿದ್ದೀರಿ. ತುಂಬ ಕಡಿಮೆ ಖರ್ಚಿನೊಳಗೆ ಮಾಡಿ ಮುಗಿಸಬೇಕು ಎಂದು ನೀವು ಅಂದುಕೊಂಡಿದ್ದ ಕಾರ್ಯಕ್ರಮಕ್ಕೆ ಸಿಕ್ಕಾಪಟ್ಟೆ ಖರ್ಚುಗಳು ಬರಲಿವೆ. ಇದರಿಂದ ಸ್ವಲ್ಪ ಮಟ್ಟಿಗೆ ನಿಮಗೆ ಒತ್ತಡ ಸಹ ಎದುರಾಗಲಿದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ನಿಮಗೆ ಇಲ್ಲಿಯವರೆಗೆ ಯಾವ ವಿಚಾರದಲ್ಲಿ ಅನಿಶ್ಚಿತತೆ ಕಾಡುತ್ತಿರುತ್ತದೋ ಅದರಿಂದ ಹೊರಗೆ ಬರುವಂಥ ದಾರಿ ಈ ದಿನ ಗೋಚರ ಆಗಲಿದೆ. ಕನ್ಸಲ್ಟಂಟ್ ಆಗಿ ಕಾರ್ಯ ನಿರ್ವಹಿಸುತ್ತಿರುವವರು ಹಾಗೂ ಫೈನಾನ್ಷಿಯಲ್ ಪ್ಲಾನಿಂಗ್ ಇಂಥವುಗಳಲ್ಲಿ ತೊಡಗಿಸಿಕೊಂಡಂಥವರಿಗೆ ಸಮಾಧಾನ ದೊರೆಯುವಂತಹ ಬೆಳವಣಿಗೆಗೆಳು ಆಗಲಿವೆ. ಕೆಲವರು ತಾವಾಗಿಯೇ ನಿಮ್ಮ ಬಳಿ ಬಂದು, ಸಹಾಯವನ್ನು ಕೇಳಲಿದ್ದಾರೆ. ಹಣಕಾಸಿನ ಆದಾಯದ ದೃಷ್ಟಿಯಿಂದಲೂ ನಿಮಗೆ ಇದರಿಂದ ಅನುಕೂಲಗಳು ಆಗಲಿವೆ. ಇದೇ ಮೊದಲ ಬಾರಿಗೆ ಎಂಬಂತೆ ವ್ಯಾಪಾರ- ವ್ಯವಹಾರಗಳನ್ನು ಆರಂಭಿಸಿದವರಿಗೆ ಹಿಡಿತ ಸಿಕ್ಕಿರುವ ಸೂಚನೆ ದೊರೆಯಲಿದ್ದು, ಆತ್ಮವಿಶ್ವಾಸ ಹೆಚ್ಚಾಗಲಿದೆ. ಕೌಟುಂಬಿಕ ವಿಚಾರದಲ್ಲಿ ನೀವು ಮೌನವಾಗಿ ಇದ್ದುಬಿಡುವುದಕ್ಕೆ ನಿರ್ಧರಿಸುವಂತೆ ಆಗುವ ಸನ್ನಿವೇಶಗಳು ಸೃಷ್ಟಿ ಆಗಲಿವೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನಿಮ್ಮ ಮನಸ್ಸಿಗೆ ಬಹಳ ಹತ್ತಿರವಾದವರು ವಿಪರೀತ ನೆನಪಾಗಲಿದ್ದಾರೆ. ಒಂದೋ ಅವರನ್ನು ಈ ದಿನ ಭೇಟಿಯೇ ಆಗಿ ಬಿಡಬೇಕು ಅಂತಲೋ ಅಥವಾ ಫೋನ್ ನಲ್ಲಿಯಾದರೂ ಮಾತನಾಡಿ ಬಿಡಬೇಕು ಎಂದು ಬಲವಾಗಿ ಅನಿಸಲಿದೆ. ನಿಮ್ಮಲ್ಲಿ ಕೆಲವರು ಪುಸ್ತಕಗಳ ಖರೀದಿ ಮಾಡಬಹುದು ಅಥವಾ ಒಟಿಟಿ ಸಬ್ ಸ್ಕ್ರಿಪ್ಷನ್ ಗಳನ್ನು ಪಡೆದುಕೊಳ್ಳಬಹುದು ಅಥವಾ ಹೊಸ ವೈಫೈ ಸಂಪರ್ಕ- ಒಂದು ವೇಳೆ ಈಗಾಗಲೇ ಇರುವಂಥ ಕನೆಕ್ಷನ್ ಗಳಲ್ಲಿ ಪ್ಲಾನ್ ಬದಲಾವಣೆ ಇಂಥವೇನಾದರೂ ಮಾಡಿಸಲಿದ್ದೀರಿ. ಆಯುರ್ವೇದ ಮೂಲಿಕೆಗಳ ಕೃಷಿ ಮಾಡಿ, ಅದರ ಮೂಲಕ ಆದಾಯ ಗಳಿಸುತ್ತಿರುವವರಿಗೆ ದೊಡ್ಡ- ಪ್ರತಿಷ್ಠಿತ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳುವಂತೆ ಪ್ರಸ್ತಾವ ಬರಬಹುದು. ಭೂಮಿ ಮೇಲೆ ಹೂಡಿಕೆ ಮಾಡಬೇಕು ಎಂದು ಸೂಕ್ತ ಸ್ಥಳಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯಲಿದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ನಿಮ್ಮದೇ ಮನೆಯಲ್ಲಿ ಇತರರು ತಮ್ಮ ಅಭಿಪ್ರಾಯ, ತಮಗೆ ಬೇಕಾದ ಸಂಗತಿಗಳನ್ನು ಹೇರುತ್ತಿದ್ದಾರೆ ಎಂದು ಬಲವಾಗಿ ನಿಮಗೆ ಅನಿಸಲಿದೆ. ಇದನ್ನು ಯಾರು ಸಂಬಂಧಪಟ್ಟವರು ಇದ್ದಾರೋ ಅವರಿಗೆ ಹೇಳುವಂಥ ಸಾಧ್ಯತೆಗಳು ಈ ದಿನ ಜಾಸ್ತಿ ಇವೆ. ಮಕ್ಕಳ ಕೆಲವು ನಿರ್ಲಕ್ಷ್ಯ ಅಥವಾ ಬೇಜವಾಬ್ದಾರಿ ವರ್ತನೆ ನಿಮ್ಮನ್ನು ಕೆರಳಿಸಲಿದೆ. ನಿಮ್ಮಲ್ಲಿ ಕೆಲವರ ಕಾರಣವೇ ಇಲ್ಲದೆ ಮಕ್ಕಳ ಮೇಲೆ ಸಿಟ್ಟನ್ನು ಸಹ ಮಾಡಿಕೊಳ್ಳಲಿದ್ದೀರಿ. ಸರ್ಕಾರಿ ಕೆಲಸಗಳಲ್ಲಿ ಇರುವವರಿಗೆ ಹೆಚ್ಚಿನ ಜವಾಬ್ದಾರಿ ಹೆಗಲೇರಲಿದೆ, ವೈಯಕ್ತಿಕ ಕೆಲಸ- ಕಾರ್ಯಗಳ ಮೇಲೆ ಸ್ವಲ್ಪ ಕೂಡ ಗಮನ ಹರಿಸುವುದಕ್ಕೆ ಸಾಧ್ಯವಿಲ್ಲದಂಥ ಸನ್ನಿವೇಶ ಎದುರಾಗಲಿದೆ. ಇನ್ನು ಊಟ- ತಿಂಡಿ ವಿಚಾರಗಳಲ್ಲಿ ನೀವು ಬಹಳ ಸಮಯದಿಂದ ಹೋಗಬೇಕು ಅಂದುಕೊಂಡಿದ್ದ ಹೋಟೆಲ್ ಅಥವಾ ರೆಸ್ಟೋರೆಂಟ್ ಇಂಥ ಕಡೆಗಳಿಗೆ ತೆರಳುವಂಥ ಯೋಗ ಸಹ ನಿಮ್ಮ ಪಾಲಿಗೆ ಇರಲಿದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಸಮಯಕ್ಕೆ ನೀವು ತೆಗೆದುಕೊಂಡ ನಿರ್ಧಾರಕ್ಕೆ ಕುಟುಂಬ ಸದಸ್ಯರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಲಿದೆ. ಧೈರ್ಯದಿಂದ ನೀವಾಡುವ ಮಾತು ಇತರರಲ್ಲಿ ಆತ್ಮವಿಶ್ವಾಸ ತುಂಬಲಿದ್ದು, ಎಲ್ಲರೂ ನಿಮ್ಮ ಕಡೆಗೆ ಮೆಚ್ಚುಗೆಯಿಂದ ನೋಡುವಂತೆ ಆಗಲಿದೆ. ನಿಮ್ಮಲ್ಲಿ ಕೆಲವರು ಮನೆಯಲ್ಲಿ ಇರುವಂಥ ಹಳೇ ವಸ್ತುಗಳು, ಪಾತ್ರೆಗಳ ರಿಪೇರಿಗಾಗಿ ಹಣ ಖರ್ಚು ಮಾಡುವಂಥ ಯೋಗ ಇದೆ. ಅಥವಾ ನಿಮ್ಮ ಸ್ನೇಹಿತರೋ- ಸಂಬಂಧಿಕರೋ ತಮ್ಮ ಮನೆಯಲ್ಲಿ ಇರುವಂಥದ್ದನ್ನು ನೀವು ತೆಗೆದುಕೊಂಡು ಹೋಗಿ ಬಳಸಿಕೊಳ್ಳಿ ಅಂತಲೂ ಹೇಳಬಹುದು. ಕಾಲಿನ ಬೆರಳುಗಳ ಸಂದಿಯಲ್ಲಿ ಫಂಗಸ್ ಅಥವಾ ಯಾವುದಾದರೂ ಸೋಂಕು- ಇನ್ ಫೆಕ್ಷನ್ ಆಗುವಂಥ ಸಾಧ್ಯತೆಗಳಿವೆ. ಆದ್ದರಿಂದ ಅದರ ಸೂಚನೆ ಅಥವಾ ಸಾಧ್ಯತೆಗಳಿದ್ದರೂ ಮುನ್ನೆಚ್ಚರಿಕೆಯನ್ನು ವಹಿಸಿ. ಈಗಾಗಲೇ ಈ ಸಮಸ್ಯೆ ಇದೆ ಎಂದಾದಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಆರೋಗ್ಯ ಹಾಗೂ ದೇಹದಲ್ಲಿನ ಒಂದಲ್ಲಾ ಒಂದು ಸಮಸ್ಯೆ, ಗಾಯ, ಸಣ್ಣ- ಪುಟ್ಟ ಅಪಘಾತ ನಿಮ್ಮ ಆತ್ಮಸ್ಥೈರ್ಯವನ್ನು ಕುಗ್ಗಿಸಲಿದೆ. ಉದ್ಯೋಗ ಸ್ಥಳದಲ್ಲಿ ನೀವು ಅಂದುಕೊಂಡಂಥ ಸಂಗತಿಯನ್ನು ಅಂದುಕೊಂಡ ರೀತಿಯಲ್ಲಿ ಹೇಳಲಿಕ್ಕೆ ಸಾಧ್ಯವಾಗದೇ ಹೋಗಬಹುದು. ಈ ದಿನ ಮುಖ್ಯವಾಗಿ ಯಾರ ಜೊತೆಗೂ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳುವುದಕ್ಕೆ ಹೋಗಬೇಡಿ. ಹಳೇ ನೆನಪುಗಳು ಕಾಡುವುದರಿಂದ ಹಲವು ವರ್ಷಗಳ ಹಿಂದೆ ನೀವಿದ್ದ ಸ್ಥಳ, ತೆರಳಿದ್ದ ದೇವಸ್ಥಾನ, ಹೋಟೆಲ್ ಅಥವಾ ನದಿ- ಸಮುದ್ರ ಹೀಗೆ ಒಂದಲ್ಲಾ ಒಂದು ಸ್ಥಳಕ್ಕೆ ತೆರಳಬೇಕು ಎಂದು ಬಲವಾದ ಇಚ್ಛೆ ಮೂಡಲಿದೆ. ಕೆಲವರು ಸಣ್ಣ- ಪುಟ್ಟದಾದರೂ ಕೈ ಸಾಲ ಕೇಳಿಕೊಂಡು ನಿಮ್ಮ ಬಳಿ ಬರಬಹುದು. ನಿಮ್ಮ ತಾಯಿ ಅಥವಾ ತಾಯಿ ಸಮಾನರಾದವರ ಕಡೆಯಿಂದ ಕೆಲವರು ಬಂದು, ತಮಗೆ ತುರ್ತಾಗಿ ಹಣದ ಅಗತ್ಯವಿದೆ ಎಂದು ಕೇಳಬಹುದು.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಈ ದಿನ ಚುಚ್ಚುಮಾತುಗಳನ್ನು ಕೇಳಿಸಿಕೊಳ್ಳುವಂತೆ ಆಗಲಿದೆ. ನಿಮ್ಮ ಎದುರಿಗೆ ಇರುವ ವ್ಯಕ್ತಿಯು ಆಡುವ ಮಾತುಗಳು ಕೇಳಿ, ನಿಮಗೂ ಹೌದಲ್ಲವಾ ಅಂತ ಒಂದು ಕ್ಷಣ ಅನ್ನಿಸಿಬಿಡುವ ಅವಕಾಶಗಳು ಇವೆ. ಈ ಹಿಂದೆ ಯಾವಾಗಲೋ ನಿಮ್ಮಿಂದ ಆದ ತಪ್ಪು ನಿರ್ಧಾರ- ತೀರ್ಮಾನಗಳನ್ನು ನೆನಪಿಸಿಕೊಂಡು ಬಾಧೆ ಪಡುವಂತೆ ಆಗಲಿದೆ. ಕೆಲವು ಕಾರ್ಯಗಳು ಸರಿ ಮಾಡಿಬಿಡೋಣ ಎಂದು ಪ್ರಯತ್ನ ಮಾಡಿದ ಹೊರತಾಗಿಯೂ ಅದು ರಂಪ- ರಾಮಾಯಣ ಆಗಬಹುದು. ಆದ್ದರಿಂದ ತಕ್ಷಣಕ್ಕೆ ಅನ್ನಿಸಿದ್ದನ್ನು ಮಾಡಿಬಿಡುತ್ತೇನೆ ಎಂದು ಹೊರಡಬೇಡಿ. ಈ ದಿನ ನಿಮ್ಮದಲ್ಲ ಅಂದುಕೊಂಡು ಸುಮ್ಮನಿರುವುದು ಕ್ಷೇಮ. ನೀವಿರುವ ಸ್ಥಳದಿಂದ ದೂರದ ಪ್ರದೇಶಗಳಲ್ಲಿ ವ್ಯಾಪಾರ- ವ್ಯವಹಾರ ಮಾಡುತ್ತಿದ್ದೀರಿ ಎಂದಾದಲ್ಲಿ ಅದರ ಬಗ್ಗೆ ನಿಮಗೆ ಲಕ್ಷ್ಯ ಹೆಚ್ಚಾಗಲಿದೆ. ಅಲ್ಲಿಗೇ ಹೋಗಿ ಕೆಲ ಸಮಯ ಇದ್ದು, ನಿಗಾ- ಮೇಲುಸ್ತುವಾರಿ ಮಾಡುವ ತೀರ್ಮಾನ ಮಾಡುವಂತಾಗಲಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ದೇವತಾ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದೀರಿ. ನಿಮ್ಮಲ್ಲಿ ಕೆಲವರು ಮನೆ ದೇವರ ದೇವಸ್ಥಾನ ಅಥವಾ ಗ್ರಾಮದೇವತೆ ದೇವಸ್ಥಾನ, ಪೂಜೆ, ಜಾತ್ರೆ, ಅನ್ನ ಸಂತರ್ಪಣೆ ಇಂಥವುಗಳಿಗೆ ದೇಣಿಗೆ ಅಥವಾ ಪದಾರ್ಥಗಳನ್ನು ದಾನ ನೀಡುವಂಥ ಯೋಗ ಇದೆ. ನಿಮ್ಮಲ್ಲಿ ಯಾರು ದೊಡ್ಡ ಮಟ್ಟದ ಪ್ರಾಜೆಕ್ಟ್ ಕೈಗೆತ್ತಿಕೊಂಡಿರುತ್ತೀರೊ ಅಂಥವರಿಗೆ ಸದ್ಯದ ಪರಿಸ್ಥಿತಿಯಲ್ಲಿ ಹಣಕಾಸಿನ ವಿಚಾರಕ್ಕೆ ಇಕ್ಕಟ್ಟು ಕಾಣಿಸಿಕೊಂಡಿದ್ದಲ್ಲಿ ಅದರಿಂದ ಹೊರಬರುವುದಕ್ಕೆ ಮಾರ್ಗೋಪಾಯಗಳು ಗೋಚರ ಆಗಲಿವೆ. ಒಂದು ವೇಳೆ ನಿಮ್ಮದೇ ಹಣ ಬರಬೇಕಿತ್ತು, ಅದಕ್ಕಾಗಿಯೇ ಕಾಯುತ್ತಾ ಇದ್ದೀರಿ ಅಂತಾದಲ್ಲಿ ಅದು ಬರುವ ಸೂಚನೆಗಳು ದೊರೆಯಲಿವೆ ಅಥವಾ ಆ ಹಣ ಕೈ ತಲುಪುವ ಅವಕಾಶಗಳು ಸಹ ಇವೆ. ಸಂಶೋಧನಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಉದ್ಯೋಗ ಸ್ಥಳದಲ್ಲಿ ಸ್ವಲ್ಪ ಮಟ್ಟಿಗಿನ ಹಿನ್ನಡೆ ಕಾಡಬಹುದು. ಆದರೆ ಇದು ತಾತ್ಕಾಲಿಕವಾದದ್ದು ಆಗಿರುತ್ತದೆ.
ಲೇಖನ- ಎನ್.ಕೆ.ಸ್ವಾತಿ




