Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ನಿಮ್ಮ ಜನ್ಮಸಂಖ್ಯೆ, ಗುಣ- ಸ್ವಭಾವ ತಿಳಿಯಿರಿ
ನಿಮ್ಮ ಜನ್ಮಸಂಖ್ಯೆ ಯಾವುದು ಎಂದು ತಿಳಿದುಕೊಳ್ಳಿ. ಅದರ ಪ್ರಕಾರ ಗುಣ ಸ್ವಭಾವ ಏನು? ಬದಲಾವಣೆ ಆಗಬೇಕಾದ ಮುಖ್ಯಗುಣ ಏನು? ಎಂಬುದನ್ನು ತಿಳಿದುಕೊಂಡು ಬಿಡಿ.
ಎಲ್ಲರಿಗೂ ನಮಸ್ತೆ, ಇನ್ನು ಮುಂದೆ ನಮ್ಮ ಮಧ್ಯೆ ಹೀಗೊಂದು ಸಂಖ್ಯೆಗಳ ಸೇತುವೆ ಇರುತ್ತದೆ. ಅಂದರೆ ದಿನ ಭವಿಷ್ಯ, ವಾರ ಭವಿಷ್ಯ ಹಾಗೂ ನಿಮ್ಮ ಮಾಸ ಭವಿಷ್ಯವನ್ನು ಸಂಖ್ಯಾಶಾಸ್ತ್ರದ ಆಧಾರದಲ್ಲಿ ತರಲಾಗುವುದು. ಜನ್ಮಸಂಖ್ಯೆಯ ಆಧಾರದಲ್ಲಿ ನಿಮ್ಮ ಭವಿಷ್ಯವನ್ನು (horoscope) ಆ ದಿನ, ಆ ವಾರದ ಅಥವಾ ಆ ಮಾಸದ ಲೆಕ್ಕಾಚಾರದಲ್ಲಿ ತಿಳಿಸಲಾಗುವುದು. ಅದಕ್ಕೂ ಮುನ್ನ ನಿಮ್ಮ ಜನ್ಮಸಂಖ್ಯೆ ಯಾವುದು, ತಿಳಿದುಕೊಳ್ಳಿ. ಅದರ ಪ್ರಕಾರ ಗುಣ ಸ್ವಭಾವ ಏನು, ಬದಲಾವಣೆ ಆಗಬೇಕಾದ ಮುಖ್ಯಗುಣ ಏನು ಎಂಬುದನ್ನು ತಿಳಿದುಕೊಂಡು ಬಿಡಿ. ಆ ನಂತರದಲ್ಲಿ ಎಂದಿನಿಂದ ಪ್ರತಿ ದಿನ ಇಲ್ಲೇ ಸಿಗೋಣ.
ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1
ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2
ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3
ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4
ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5
ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6
ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7
ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8
ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9
ಜನ್ಮಸಂಖ್ಯೆ 1
ಈ ಸಂಖ್ಯೆಯಲ್ಲಿ ಜನಿಸಿದವರ ಅಧಿಪತಿ ರವಿ. ಇವರ ನಾಯಕತ್ವ ಗುಣ ಬಹಳ ಚೆನ್ನಾಗಿರುತ್ತದೆ. ಬೇರೆಯವರಿಗೆ ಮಾರ್ಗದರ್ಶನ, ಸಲಹೆ, ಸೂಚನೆ ನೀಡುತ್ತಾ, ಕೆಲಸ ಮಾಡಿಸುವಂಥ ಜಾಯಮಾನ ಇವರದು. ಸರ್ಕಾರಕ್ಕೆ ಸಂಬಂಧಿಸಿದ ಕೆಲಸಗಳು ಇದ್ದಲ್ಲಿ ಸಲೀಸಾಗಿ ಮಾಡಿಕೊಂಡು ಬರಬಲ್ಲ ಚಾಕಚಕ್ಯತೆ ಇರುವಂಥ ಜನ ಇವರು. ಎಲ್ಲೇ ಹೋದರೂ ತಮಗೆ ಪ್ರಾಮುಖ್ಯ ಸಿಗಬೇಕು ಎಂದು ನಿರೀಕ್ಷೆ ಮಾಡುತ್ತಾರೆ, ಅಷ್ಟೇ ಅಲ್ಲ ಆ ಗೌರವ ದಕ್ಕಿಸಿಕೊಳ್ಳುವುದಕ್ಕೆ ಶ್ರಮ ಸಹ ಪಡುತ್ತಾರೆ. ಉಳಿದೆಲ್ಲ ಸಂಖ್ಯೆಗಿಂತ ಇವರಿಗೆ ಯಶಸ್ಸು ಸಿಗುವ ಸಾಧ್ಯತೆ ಹೆಚ್ಚು. ಆದರೆ ಇವರು ಯಶಸ್ಸು ಪಡೆದಂತೆಲ್ಲ ತಗ್ಗಿ-ಬಗ್ಗಿ ನಡೆದುಕೊಳ್ಳಬೇಕು. ಕನಿಷ್ಠ ಪಕ್ಷ ಹಾಗೆ ನಟನೆಯನ್ನಾದರೂ ಮಾಡಬೇಕು.
ಜನ್ಮಸಂಖ್ಯೆ 2
ಈ ಸಂಖ್ಯೆಯಲ್ಲಿ ಹುಟ್ಟಿದವರ ಅಧಿಪತಿ ಚಂದ್ರ. ಇವರು ಬಹಳ ಮೂಡಿ. ಈ ಕ್ಷಣಕ್ಕೆ ಒಂದು ರೀತಿಯಲ್ಲಿದ್ದರೆ ಮತ್ತೊಂದು ಕ್ಷಣದಲ್ಲಿ ಇನ್ನೊಂದು ರೀತಿಯಲ್ಲಿ ಇರುತ್ತಾರೆ. ಯಾವುದೇ ವಿಚಾರವಾದರೂ ಮನಸ್ಸಿಗೆ ಹಚ್ಚಿಕೊಳ್ಳುವ ಜನ ಇವರು. ಜತೆಗೆ ಹೆಂಗರುಳು ಅನ್ನುತ್ತಾರಲ್ಲಾ, ಹಾಗೆ ಈ ದಿನದಲ್ಲಿ ಹುಟ್ಟಿದ ಗಂಡಾಗಲಿ, ಹೆಣ್ಣಾಗಲಿ ಅದೇ ಥರದ ಸ್ವಭಾವದವರು. ಆದರೆ ಇವರಲ್ಲಿ ಕರುಣೆಯೋ ಅಥವಾ ಕ್ರೌರ್ಯವೋ ಯಾವುದು ತಲೆ ಎತ್ತುತ್ತದೋ ಅದು ವಿಪರೀತಕ್ಕೆ ಹೋಗುತ್ತದೆ. ಎಷ್ಟು ದಯಾಮಯಿಗಳಾಗಿ ಇರುತ್ತಾರೋ ಅಷ್ಟೇ ಕಠಿಣರಾಗಿ ಬಿಡುತ್ತಾರೆ. ಇವರು ತಮ್ಮ ಯಶಸ್ಸಿನ ಗುಟ್ಟನ್ನು ಯಾರಿಗೂ ಬಿಟ್ಟು ಕೊಡಬಾರದು. ಅಷ್ಟೇ ಅಲ್ಲ, ಎತ್ತರಕ್ಕೆ ಬೆಳೆದಂತೆಲ್ಲ ಹತ್ತಿರಕ್ಕೆ ಯಾರನ್ನೂ ಬಿಟ್ಟುಕೊಳ್ಳಬಾರದು.
ಜನ್ಮಸಂಖ್ಯೆ 3
ಈ ಸಂಖ್ಯೆಯ ಜನರ ಅಧಿಪತಿ ಗುರು. ಇವರು ಬಹಳ ಅಚ್ಚುಕಟ್ಟು. ತಮಗೆ ಬರುವ ಕೆಲಸವನ್ನು ಎಷ್ಟು ಒಪ್ಪ- ಓರಣವಾಗಿ ಮಾಡುತ್ತಾರೆಂದರೆ ಈ ರೀತಿ ಮತ್ತೊಬ್ಬರು ಆ ಕೆಲಸವನ್ನು ಮಾಡುವುದಕ್ಕೆ ಸಾಧ್ಯವೇ ಇಲ್ಲವೇನೋ ಅನ್ನಿಸಿಬಿಡಬೇಕು ಹಾಗಿರುತ್ತದೆ. ಜತೆಗೆ ಅಡ್ಡದಾರಿ ಹುಡುಕುವ ಜಾಯಮಾನದವರಲ್ಲ ಇವರು. ನಿಶ್ಚಿತವಾದ ಗುರಿ ನಿಗದಿ ಮಾಡಿಕೊಂಡು ಗೆರೆ ಕೊಯ್ದಂತೆ ಅದರತ್ತ ಸಾಗುತ್ತಾರೆ. ತುಂಬ ಓದಿಕೊಂಡವರು, ವಿಷಯತಜ್ಞರು, ಪರಿಣತರು ಇಂಥವರ ಸಹವಾಸವನ್ನು ಬಹಳ ಇಷ್ಟಪಡುತ್ತಾರೆ. ಆದರೆ ಎಲ್ಲದರಲ್ಲೂ ಗುಣಮಟ್ಟ, ಸೌಂದರ್ಯ, ಚಂದ ಎಂದು ನೋಡುತ್ತಾ ಸಾಗುವ ಇವರಿಗೆ ಇತರ ತಪ್ಪುಗಳ ವಿಚಾರದಲ್ಲಿ ಕರುಣೆ, ಅನುಕಂಪ ಕಡಿಮೆ.
ಜನ್ಮಸಂಖ್ಯೆ 4
ಈ ಸಂಖ್ಯೆಯಲ್ಲಿ ಜನಿಸಿದವರ ಅಧಿಪತಿ ರಾಹು. ಜ್ಯೋತಿಷ, ವೇದ, ನಿಗೂಢ ವಿದ್ಯೆ ಹಾಗೂ ರಹಸ್ಯ ವಿದ್ಯೆಗಳನ್ನು ಕಲಿಯುವುದರಲ್ಲಿ ವಿಪರೀತ ಆಸಕ್ತಿ ಇವರಿಗೆ. ತಮ್ಮ ಜೀವನದ ಬಹುಪಾಲು ಸಮಯವನ್ನು ಅಧ್ಯಯನಕ್ಕಾಗಿಯೇ ಮೀಸಲು ಇಡುವ ಇವರಿಗೆ ಅದರಲ್ಲೇ ತೃಪ್ತಿ ಕಾಣುವ ಸ್ವಭಾವ ಇರುತ್ತದೆ. ಅಂದ ಹಾಗೆ ಈ ಸಂಖ್ಯೆಯಲ್ಲಿ ಜನಿಸಿದವರು ಅಷ್ಟು ಸುಲಭಕ್ಕೆ ಯಾರನ್ನೂ ನಂಬುವವರಲ್ಲ. ಜತೆಗೆ ಇಬ್ಬರಿಗಾಗುವಷ್ಟು ಸೋಮಾರಿತನ ಹಾಗೂ ಅಷ್ಟೇ ಪ್ರಮಾಣದ ಚಟುವಟಿಕೆ ಎರಡನ್ನೂ ಇವರಲ್ಲಿ ಕಾಣಬಹುದು. ಆದರೆ ಇವರು ಯಾರ ಸಹವಾಸದಲ್ಲಿ ಇರುತ್ತಾರೆ ಎಂಬುದು ಬಹಳ ಮುಖ್ಯ ಆಗುತ್ತದೆ. ತಪ್ಪು ವಿಚಾರಗಳು, ಸಂಗತಿಗಳು ಬೇಗ ಇವರನ್ನು ಸೆಳೆಯುತ್ತವೆ.
ಜನ್ಮಸಂಖ್ಯೆ 5
ಈ ಸಂಖ್ಯೆಯಲ್ಲಿ ಹುಟ್ಟಿದವರು ಅಧಿಪತಿ ಬುಧ. ಅಂದರೆ ಇವರ ಮೆದುಳು ಪಾದರಸದಷ್ಟೇ ಚುರುಕಾಗಿ ಇರುತ್ತದೆ. ಆಯಾ ಕಾಲಕ್ಕೆ ತಕ್ಕಂತೆ ತಮ್ಮ ಪ್ರಸ್ತುತತೆ ಸಾಬೀತು ಮಾಡಿಕೊಳ್ಳುವ ಜನ ಇವರು. ಅದೇ ತಂತ್ರಜ್ಞಾನ ಇರಲಿ, ಯೋಜನೆ, ಯೋಚನೆ, ಆಲೋಚನೆ ಇರಲಿ ಎಲ್ಲ ಕಾಲಕ್ಕೂ ಸಲ್ಲುವಂಥ ಜನರಿವರು. ಯಾವುದಾದರೂ ಒಂದು ಕೆಲಸವನ್ನು ಮಾಡುತ್ತಾ ಅದರ ಜತೆಗೆ ಮತ್ತೊಂದು, ಮಗದೊಂದು ಹಾಗೂ ಮುಂದೆ ಆಗಬಹುದಾದ್ದನ್ನೆಲ್ಲ ಆಲೋಚಿಸುತ್ತಾ ಸಾಗುತ್ತಾರೆ. ಇವರು ಬುದ್ಧಿವಂತರೇನೋ ಸರಿ, ಆದರೆ ಇತರರು ದಡ್ಡರು ಎಂಬಂತೆ ನಡೆದುಕೊಳ್ಳುತ್ತಾರೆ, ನಡೆಸಿಕೊಳ್ಳುತ್ತಾರೆ ಎಂಬುದು ಇವರ ಬಗೆಗಿನ ಆಕ್ಷೇಪ. ಯಾವುದೇ ಕೆಲಸವನ್ನು ಇವರು ಕೊನೆ ಕ್ಷಣದ ತನಕ ಎಳೆದುಕೊಂಡು ಹೋಗಬಾರದು.
ಜನ್ಮಸಂಖ್ಯೆ 6
ಈ ಸಂಖ್ಯೆಯಲ್ಲಿ ಜನಿಸಿದವರ ಅಧಿಪತಿ ಶುಕ್ರ. ಬಹಳ ಆಕರ್ಷಕವಾದ ಸ್ವಭಾವ, ವ್ಯಕ್ತಿತ್ವ ಇವರದು. ಈ ಸಂಖ್ಯೆಯಲ್ಲಿ ಜನಿಸಿದವರ ಆರ್ಥಿಕ ಸ್ಥಿತಿ ಏನೇ ಆಗಿರಲಿ ಇವರು ಮಾತ್ರ ಸಂಪತ್ತಿನ ಸುತ್ತ ಸರಿದಾಡುತ್ತಾ ಇರುತ್ತಾರೆ. ಇವರದೇ ದುಡ್ಡು ಆಗಬೇಕು ಅಂತಿಲ್ಲ, ಈ ವ್ಯಕ್ತಿಗಳ ಮೂಲಕ ಹರಿದಾಡುತ್ತಾ ಇರುತ್ತದೆ. ಸುಗಂಧ ದ್ರವ್ಯ, ಬ್ಯಾಂಕಿಂಗ್, ಫೈನಾನ್ಸ್, ಷೇರು ಮಾರ್ಕೆಟ್, ಸಿನಿಮಾ ಈ ಕ್ಷೇತ್ರದ ಸುತ್ತಲೇ ಕಾಣಸಿಗುವ ಜನ ಇವರು. ಕೆಲ ವಿಚಾರಗಳಂತೂ ಬಹಳ ಮುಂಚಿತವಾಗಿ ಗ್ರಹಿಸುತ್ತಾರೆ, ಮತ್ತೊಬ್ಬರಿಗೆ ಸಲಹೆ ನೀಡುತ್ತಾರೆ. ಆದರೆ ತಮಗೆ ಅಂತ ಬಂದಾಗ ಉಡಾಫೆ ಮನೋಭಾವ ಇರುತ್ತದೆ. ಇನ್ನು ಬ್ರ್ಯಾಂಡ್ ವಸ್ತುಗಳೆಂದರೆ ಇವರಿಗೆ ಬಲು ಪ್ರೀತಿ. ಈ ಸಂಖ್ಯೆಯ ಜನ ಪುರುಷರಾದರೆ ಸ್ತ್ರೀಯರ ವಿಚಾರಕ್ಕೆ ಹಾಗೂ ಸ್ತ್ರೀಯರಾದರೆ ಪುರುಷರ ವಿಚಾರದಲ್ಲಿ ಎಚ್ಚರಿಕೆ ಇರಬೇಕು.
ಜನ್ಮಸಂಖ್ಯೆ 7
ಈ ಸಂಖ್ಯೆಯಲ್ಲಿ ಹುಟ್ಟಿದವರ ಅಧಿಪತಿ ಕೇತು. ಈ ವ್ಯಕ್ತಿಗಳು ತಮ್ಮ ವಯಸ್ಸಿಗಿಂತ ಹೆಚ್ಚು ಗಂಭೀರವಾಗಿ ಇರುತ್ತಾರೆ. ಸಾರ್ವಜನಿಕ ಜೀವನಕ್ಕಿಂತ ಖಾಸಗಿಯಾಗಿ ಇವರ ಸಂತೋಷಗಳು ಬೇರೆ. ಕವಿ ಮನಸ್ಸಿರುತ್ತದೆ. ಸಂಕೋಚ- ನಾಚಿಕೆ ಸ್ವಭಾವ. ಎಲ್ಲ ವಿಚಾರದಲ್ಲೂ ಇನ್ನೊಬ್ಬರು ಏನೆಂದುಕೊಂಡಾರು ಎಂಬ ಅಳುಕು ಇರುತ್ತದೆ. ಮದುವೆ ವಿಚಾರದಲ್ಲಿ ಇವರು ನಿರ್ಲಕ್ಷ್ಯ ತೋರಬಾರದು. ಅಷ್ಟೇ ಅಲ್ಲ, ಮದುವೆ ಆದ ನಂತರ ಕೂಡ ಹೆಂಡತಿ, ಮಕ್ಕಳು, ಮನೆಯ ಕಡೆಗೆ ಜಾಸ್ತಿ ನಿಗಾ ಕೊಡಬೇಕು. ಮಧ್ಯವಯಸ್ಸು ಹಾಗೂ ಆ ನಂತರದಲ್ಲಿ ಇವರ ಪಾಲಿಗೆ ಸಂತೋಷ, ಸುಖ- ನೆಮ್ಮದಿ ದೊರೆಯುತ್ತದೆ. ಅಷ್ಟರಲ್ಲಾಗಲೇ ಇವರು ಏಕಾಂಗಿಗಳಾಗಿರುತ್ತಾರೆ. ಅಧ್ಯಾತ್ಮ ಜೀವನದಲ್ಲಿ ಅತ್ಯುತ್ತಮ ಸಾಧನೆ ಮಾಡಬಲ್ಲಂಥವರು ಇವರು.
ಜನ್ಮಸಂಖ್ಯೆ 8
ಈ ಸಂಖ್ಯೆಯ ಅಧಿಪತಿ ಶನಿ. ನಿಧಾನವೇ ಪ್ರಧಾನ ಅಥವಾ ಆಲಸ್ಯಂ ಅಮೃತಂ ವಿಷಂ ಎಂಬೆರಡರ ಮಧ್ಯದ ವ್ಯತ್ಯಾಸ ತಿಳಿದುಕೊಂಡು ಬಿಟ್ಟರೆ ಜೀವನದಲ್ಲಿ ಅರ್ಧ ಯಶಸ್ಸು ಇವರಿಗೆ ದೊರೆತಂತೆಯೇ. ದಿಢೀರ್ ಯಶಸ್ಸು ನೋಡುವಂಥ ಯೋಗ ಇವರದು. ಆದರೆ ಅದರ ಹಿಂದೆ ಶ್ರಮ ಹಾಕಿ, ಹಾಕಿ ಸುಸ್ತಾಗಿರುತ್ತಾರೆ. ತುಂಬ ಎತ್ತರಕ್ಕೆ ಏರಿದ ನಂತರ ಯಾವುದೋ ಸಣ್ಣ ತಪ್ಪು, ಅಚಾತುರ್ಯದಿಂದ ಹಣ, ಕೀರ್ತಿ, ಯಶಸ್ಸು ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಇಂಥ ಯಾವ ಬೆಳವಣಿಗೆಯೂ ಇವರನ್ನು ಅಧೀರರನ್ನಾಗಿ ಮಾಡುವುದಿಲ್ಲ. ಆದರೆ ಇವರ ಆತ್ಮಗೌರವಕ್ಕೆ ಪೆಟ್ಟು ಬಿದ್ದರೆ, ಗೌರವ ಸಿಗುತ್ತಿಲ್ಲ ಎಂದಾದರೆ ಬಹಳ ಬೇಗ ಕುಗ್ಗಿಬಿಡುತ್ತಾರೆ. ಆದ್ದರಿಂದ ಧ್ಯಾನ- ಯೋಗ ಇಂಥದ್ದನ್ನು ಇವರು ಕಡ್ಡಾಯವಾಗಿ ಪಾಲಿಸುತ್ತಾ ಬರಬೇಕು.
ಜನ್ಮಸಂಖ್ಯೆ 9
ಈ ಸಂಖ್ಯೆಯಲ್ಲಿ ಜನಿಸಿದವರ ಅಧಿಪತಿ ಕುಜ. ಸದಾ ಸವಾಲುಗಳನ್ನು ಹುಡುಕುವಂಥ ಜನ ಇವರು. ನಿನ್ನಿಂದ ಇದನ್ನು ಮಾಡುವುದಕ್ಕೆ ಸಾಧ್ಯವಿಲ್ಲ ಅಂತ ಇವರೆದುರು ಹೇಳಿದರೆ ಶತಾಯ- ಗತಾಯ ಅದನ್ನು ಮಾಡುವುದಕ್ಕೆ ಹೊರಟು ನಿಂತು ಬಿಡುತ್ತಾರೆ. ಇವರ ಜತೆಗೆ ಶತ್ರುತ್ವ ಕಟ್ಟಿಕೊಳ್ಳುವುದು ಮಹಾ ಅಪಾಯಕಾರಿ. ಜನರಿಂದ ಕೆಲಸ ತೆಗೆಸುವುದರಲ್ಲಿ ಹಾಗೂ ಯಾವ ಕೆಲಸಕ್ಕೆ ಯಾರು ಸೂಕ್ತ ಎಂದು ನಿರ್ಧರಿಸುವಲ್ಲಿ ಬಹಳ ನಿಸ್ಸೀಮರು. ಮತ್ತೊಂದು ವಿಚಾರ ಏನೆಂದರೆ, ಎಲ್ಲರಿಗೂ ಒಂದೇ ದಂಡ ಪ್ರಯೋಗ. ಸಾಮ-ದಾನ-ಭೇದ-ದಂಡ ಎಂಬ ಉಪಾಯಗಳೆಲ್ಲ ಏನೂ ಯೋಚಿಸುವುದಕ್ಕೆ ಹೋಗಲ್ಲ. ಈ ಸಂಖ್ಯೆಯವರು ತಾಳ್ಮೆಯಿಂದ ವರ್ತಿಸಬೇಕು. ಆರೋಗ್ಯದ ಕಡೆಗೆ ಜಾಸ್ತಿ ನಿಗಾ ಮಾಡಬೇಕು.
– ಎನ್.ಕೆ.ಸ್ವಾತಿ
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ