Numerology Prediction: ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 12ರಿಂದ 18ರವರೆಗಿನ ವಾರಭವಿಷ್ಯ  

ಸಂಖ್ಯಾಶಾಸ್ತ್ರ ಕೂಡ ಜ್ಯೋತಿಷ್ಯ ಶಾಸ್ತ್ರದ ಒಂದು ಭಾಗವಾಗಿದೆ. ಒಂದು ಮಗು ಈ ಜಗತ್ತನ್ನು ಪ್ರವೇಶಿಸುವ ದಿನವು ಬಹಳ ಪ್ರಭಾವ ಬೀರುತ್ತದೆ. ಇದು ಆ ಮಗುವಿಗೆ ಅದರ ಹೆತ್ತವರಿಂದ ಸಿಗುವ ಹೆಸರು ಅದರ ಜೀವನದಲ್ಲಿ ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತದೆ. ಸಂಖ್ಯಾಶಾಸ್ತ್ರದಲ್ಲಿನ ಪ್ರಮುಖ ಅಂಶವೆಂದರೆ ಹೆಸರು ಮತ್ತು ಜನ್ಮ ದಿನಾಂಕ ಎಂಬ ಎರಡೂ ಅಂಶಗಳ ಸಂಯೋಜನೆ. ಸಂಖ್ಯಾಶಾಸ್ತ್ರದ ಪ್ರಕಾರ, ನಾವು ಜನರ ವ್ಯಕ್ತಿತ್ವಗಳು ಮತ್ತು ಅವರ ಭವಿಷ್ಯದ ಬಗ್ಗೆ ಹಲವಾರು ವಿಷಯಗಳು, ಸನ್ನಿವೇಶಗಳನ್ನು ಊಹಿಸಬಹುದು.

Numerology Prediction: ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 12ರಿಂದ 18ರವರೆಗಿನ ವಾರಭವಿಷ್ಯ  
Numerology
Follow us
ಸ್ವಾತಿ ಎನ್​ಕೆ
| Updated By: ಸುಷ್ಮಾ ಚಕ್ರೆ

Updated on: Jan 12, 2025 | 4:26 AM

Weekly Numerology: ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 12ರಿಂದ 18ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಎಂಥ ಸಂದರ್ಭದಲ್ಲೂ ನಿಮ್ಮ ಬಳಿ ಏನಿದೆಯೋ ಅದರ ಬಗ್ಗೆ ಸಂತೋಷವನ್ನು ಪಡುವುದು ಒಳ್ಳೆಯದು. ಯಾವ ಕಾರಣಕ್ಕೂ ಇತರರ ಜೊತೆಗೆ ನಿಮ್ಮ ಯಶಸ್ಸು ಹೋಲಿಸಿಕೊಳ್ಳಬೇಡಿ. ನಿಮ್ಮದೇ ವಯಸ್ಸಿನ ಅಥವಾ ನಿಮ್ಮದೇ ವಿದ್ಯಾಭ್ಯಾಸದ ವ್ಯಕ್ತಿ ಏನು ಸಾಧಿಸಿದ್ದಾರೆ ಹಾಗೂ ನೀವು ಏನು ಮಾಡುವುದಕ್ಕೆ ಸಾಧ್ಯವಾಗಿದೆ ಎಂದೆಲ್ಲ ಆಲೋಚಿಸಬೇಡಿ. ಸಣ್ಣ ಮಟ್ಟದಲ್ಲಿ ಆರಂಭಿಸಿದ್ದ ಹೂಡಿಕೆ, ವ್ಯವಹಾರ, ವ್ಯಾಪಾರಗಳಲ್ಲಿ ಗಟ್ಟಿಯಾದ ನೆಲೆ ಕಂಡುಕೊಳ್ಳಬಹುದು ಎಂಬ ವಿಶ್ವಾಸ ಮೂಡಲಿದೆ. ಈಗಾಗಲೇ ಯಶಸ್ವಿಯಾಗಿ ನಡೆಯುತ್ತಿರುವ ವ್ಯಾಪಾರ ಮಾಡುತ್ತಿರುವವರಿಗೆ ವಿಸ್ತರಣೆ ಅವಕಾಶ ಹೆಚ್ಚಲಿದೆ. ಶಾಲೆ- ಕಾಲೇಜು, ಆಸ್ಪತ್ರೆ ಹಾಗೂ ಕಂಪ್ಯೂಟರ್ ಕೋರ್ಸ್ ಗಳ ಕೇಂದ್ರಗಳನ್ನು ನಡೆಸುತ್ತಿರುವವರಿಗೆ ಸರ್ಕಾರದಿಂದ ಕೆಲವು ಅನುದಾನ ಅಥವಾ ಪ್ರೋತ್ಸಾಹಕಗಳು ದೊರೆಯುವ ಸಾಧ್ಯತೆ ಇದೆ. ಆದರೆ ಲೇವಾದೇವಿ ವ್ಯವಹಾರ ಮಾಡುತ್ತಿರುವವರು ಕಾಗದ-ಪತ್ರ ಒತ್ತೆಯಾಗಿರಿಸಿಕೊಂಡು ಏನಾದರೂ ಸಾಲ ನೀಡುತ್ತಿದ್ದೀರಿ ಅಂತಾದಲ್ಲಿ ಅವುಗಳ ಅಸಲಿಯತ್ತಿನ ಬಗ್ಗೆ ಸರಿಯಾಗಿ ಪರಿಶೀಲಿಸಿಕೊಳ್ಳುವುದು ಮುಖ್ಯ. ಹೆಚ್ಚಿನ ಬಡ್ಡಿಯನ್ನು ನೀಡುವುದಾಗಿ ಅವರಾಗಿಯೇ ಹೇಳಿದರು ಎಂಬ ಕಾರಣಕ್ಕೆ ಪಿಗ್ಗಿ ಬೀಳಬೇಡಿ. ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡುವುದಕ್ಕೆ ಮಕ್ಕಳಿಗಾಗಿ ಹಣಕಾಸನ್ನು ಹೊಂದಿಸುತ್ತಿರುವ ಪೋಷಕರಿಗೆ ಅನುಕೂಲಗಳು ಒದಗಿ ಬರಲಿವೆ. ಇನ್ನು ವೀಸಾ ಅಥವಾ ಮತ್ಯಾವುದಾದರೂ ಸಮಸ್ಯೆ ಎದುರಿಸುತ್ತಿದ್ದಲ್ಲಿ ಅದು ಕೂಡ ನಿವಾರಿಸಿಕೊಳ್ಳಲು ಸಾಧ್ಯವಾಗುತ್ತದೆ. ಕೃಷಿಕರಿಗೆ ನಿಮ್ಮದೇ ವೃತ್ತಿಯಲ್ಲಿ ಇರುವಂಥ ಹಾಗೂ ಈಗಾಗಲೇ ಸಾಕಷ್ಟು ಸಾಧನೆ ಮಾಡಿದಂಥವರ ಪರಿಚಯ, ಸ್ನೇಹ ಆಗಲಿದೆ. ಅಥವಾ ಯಾವುದಾದರೂ ಒಂದು ಸಮಾರಂಭ, ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಸಮಯ ಕಳೆಯುವಂಥ ಅವಕಾಶ ದೊರೆಯಲಿದೆ. ಅವರ ಜತೆಗಿನ ಮಾತುಕತೆಯಿಂದ ನಿಮ್ಮ ಆಲೋಚನೆ, ಯೋಚನೆ, ಯೋಜನೆಯಲ್ಲಿ ಬದಲಾವಣೆ ಮಾಡಿಕೊಳ್ಳುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ಇನ್ನು ಕೃಷಿ ಭೂಮಿಯನ್ನು ಮಾರಾಟ ಮಾಡಬೇಕು ಎಂದೇನಾದರೂ ನಿರ್ಧರಿಸಿದ್ದಲ್ಲಿ ಆ ನಿರ್ಧಾರದಿಂದ ವಾಪಸ್ ಬರುವ ಅವಕಾಶಗಳು ಹೆಚ್ಚಿವೆ. ಕೃಷಿ ಜಮೀನಿನಲ್ಲಿ ಗೋಡೌನ್ ನಿರ್ಮಾಣ, ಕೃಷಿ ಹೊಂಡ ತೋಡಿಸುವುದು ಇಂಥದ್ದರ ಬಗ್ಗೆ ಇಲ್ಲಿಯ ತನಕ ಯೋಚಿಸುತ್ತಿದ್ದೀರಿ ಅಂತಾದಲ್ಲಿ ಅದನ್ನು ಮಾಡಿಸುವುದಕ್ಕೆ ಅಂತಲೇ ಆಖೈರು ನಿರ್ಧಾರ ಮಾಡಲಿದ್ದೀರಿ. ಹಣಕಾಸಿನ ಅನುಕೂಲ ಸಹ ಒದಗಿ ಬರಲಿದೆ. ಕುಟುಂಬ ಸದಸ್ಯರ ಬೆಂಬಲ ದೊರೆಯುವುದರಿಂದ ನಿಮ್ಮ ಮನಸ್ಸಿಗೆ ಖುಷಿ ಆಗುತ್ತದೆ. ವೃತ್ತಿನಿರತರು ಇತರರು ಸಣ್ಣ ಮಟ್ಟದ ಆದಾಯ ಅಂತ ನಿರ್ಲಕ್ಷ್ಯ ಮಾಡಿದಂಥ ಕೆಲಸಗಳನ್ನು ಕೈಗೆತ್ತಿಕೊಂಡು ಮಾಡಿಕೊಡಲಿದ್ದೀರಿ. ಇದರಿಂದ ದೀರ್ಘಾವಧಿಗೆ ಆದಾಯ ತರುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಮಕ್ಕಳಿಗಾಗಿ ಬೈಕ್, ಕಾರು ಅಥವಾ ಯಾವುದಾದರೂ ವಾಹನವನ್ನು ಖರೀದಿ ಮಾಡುವಂಥ ಯೋಗ ಇದೆ. ಮೊದಲಿಗೆ ಬೇಡ ಅಂದುಕೊಂಡರೂ ಕೊನೆ ಕ್ಷಣದಲ್ಲಿ ಕೊಡಿಸಲಿದ್ದೀರಿ. ವಿದ್ಯಾರ್ಥಿಗಳು ಏಕಾಗ್ರತೆ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಅದು ನಿವಾರಣೆ ಆಗಲಿದೆ. ನಿಮ್ಮಲ್ಲಿ ಕೆಲವರು ಮನೆ ದೇವರ ಆರಾಧನೆಯಲ್ಲಿ ಪಾಲ್ಗೊಳ್ಳುವ ಯೋಗ ಇದೆ. ಈ ವಾರ ನಿಮಗೆ ಉಡುಗೊರೆಗಳು ಸಿಗುವಂಥ ಸಾಧ್ಯತೆಗಳು ಸಹ ಇವೆ. ಮಹಿಳೆಯರಿಗೆ ಸಂಬಂಧಿಗಳು ಮನೆಗೆ ಬರುವುದರಿಂದ ವಿಪರೀತ ಕೆಲಸದ ಒತ್ತಡ ಇರಲಿದೆ. ನೀವು ಈಗಾಗಲೇ ಮಾಡುವುದಾಗಿ ಅಂದುಕೊಂಡಿದ್ದ ಕೆಲಸಗಳನ್ನು ಮುಂದಕ್ಕೆ ಹಾಕಬೇಕಾಗುತ್ತದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಇತರರ ದೆಸೆಯಿಂದ ಹೀಗಾಯಿತು ಎಂದು ದುರದೃಷ್ಟದ ಅಥವಾ ಕೆಟ್ಟ ಸಮಯ ನಡೆಯುವಾಗ ನೆನೆಯುತ್ತಾರೆ. ಇನ್ನೇನು ನೀವು ಕೂಡ ಹಾಗೇ ಯೋಚಿಸಿರುತ್ತೀರಿ. ಆದರೆ ದೊಡ್ಡ ಸಮಸ್ಯೆಯೊಂದು ಹಣ್ಣುಗಾಯಿ- ನೀರುಗಾಯಿ ಮಾಡಿಬಿಡುತ್ತದೆ ಎಂದು ನೀವು ಭಾವಿಸಿದ್ದು ಅದರಿಂದ ಹೊರ ಬರುವುದಕ್ಕೆ ಮಾರ್ಗೋಪಾಯಗಳು ಗೋಚರ ಆಗಲಿವೆ. ಸಮಯ ಪ್ರಜ್ಞೆಯಿಂದ ನೀವು ಮಾಡುವ ಕೆಲಸಗಳು ಕಾಪಾಡುತ್ತವೆ. ಸಮಾಧಾನದಿಂದ ಆಲೋಚಿಸಿ, ಮುಂದಕ್ಕೆ ಹೆಜ್ಜೆ ಇಡುವುದು ಈ ವಾರ ಬಹಳ ಮುಖ್ಯ ಆಗುತ್ತದೆ. ಇನ್ನು ಯಾರ ಬಳಿ ನೆರವು ಕೇಳಬಹುದು ಎಂಬ ಬಗ್ಗೆ ಕೂಡ ಸ್ಪಷ್ಟತೆ ಇಟ್ಟುಕೊಳ್ಳುವುದು ಒಳ್ಳೆಯದು. ಆದರೆ ನಿಮ್ಮ ಪಾಲಿಗೆ ಸಂತೋಷದ ವಿಚಾರ ಏನೆಂದರೆ, ಬಹಳ ಸಮಯದಿಂದ ಕಾಡುತ್ತಿದ್ದ ಕುಟುಂಬ ಸಮಸ್ಯೆಗಳು, ಆಸ್ತಿ ವಿಚಾರಗಳನ್ನು ಸಹ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ. ಇತರರಿಗೆ ವಹಿಸಿಯಾಗಿದೆ, ಅವರು ಕೆಲಸ ಮಾಡಿಕೊಂಡು ಬಂದು ಬಿಡುತ್ತಾರೆ ಎಂದು ಸುಮ್ಮನೆ ಇರುವುದಕ್ಕೆ ಸಾಧ್ಯವೇ ಇಲ್ಲದಂಥ ಒತ್ತಡವೊಂದು ನಿಮ್ಮ ಸ್ನೇಹಿತರು- ಆಪ್ತರಿಂದ ಸೃಷ್ಟಿ ಆಗುತ್ತದೆ. ನಿಮ್ಮಲ್ಲಿ ಕೆಲವರು ಪಿತ್ರಾರ್ಜಿತವಾಗಿ ಬಂದ ಆಸ್ತಿಯನ್ನು ಮಾರಾಟ ಮಾಡುವ ಬಗ್ಗೆ ನಿರ್ಧಾರ ಮಾಡುವ ಸಾಧ್ಯತೆಗಳಿವೆ. ಅದನ್ನು ಮಾರಿ, ಅದರಿಂದ ಬಂದ ಹಣದಿಂದ ನಿಶ್ಚಿತವಾದ ಆದಾಯವನ್ನು ಮಾಡಿಕೊಳ್ಳಬೇಕು ಎಂದುಕೊಳ್ಳುತ್ತೀರಿ. ಮನೆಯ ಹಿರಿಯರ ಅನಾರೋಗ್ಯ ಸಮಸ್ಯೆ ಸ್ವಲ್ಪ ಮಟ್ಟಿಗೆ ಆತಂಕ ತರಬಹುದು. ಕೃಷಿಕರು ಜಮೀನು ವ್ಯಾಜ್ಯಕ್ಕೋ ಅಥವಾ ನೀರಿನ ವಿಚಾರಕ್ಕೋ ಪೊಲೀಸ್ ಠಾಣೆ, ಕೋರ್ಟ್- ಕಚೇರಿ ಎಂದು ಅಲೆದಾಡುವ ಯೋಗ ಇದೆ. ಇದರಿಂದ ನಿಮಗೆ ದೊಡ್ಡ ಮೊತ್ತವೇ ಕೈ ಬಿಟ್ಟು ಹೋಗಬಹುದು. ಆ ಕಾರಣಕ್ಕೆ ಮಾತುಕತೆ ಆಡಿ, ಬಗೆಹರಿಸ ಬಹುದಾದ ವ್ಯಾಜ್ಯಗಳನ್ನು ಶಾಂತಿಯುತವಾಗಿಯೇ ಮುಗಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ. ಈ ಹಿಂದೆ ಯಾವಾಗಲೋ ಪಡೆದುಕೊಂಡಂಥ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳ ಸಾಲಕ್ಕೆ ಈಗ ನೋಟಿಸ್ ಕೂಡ ಬರಬಹುದು. ಈ ಬಾರಿ ನಿರ್ಲಕ್ಷ್ಯ ಮಾಡುವುದಕ್ಕೆ ಹೋಗಬೇಡಿ. ಮಕ್ಕಳ ಮದುವೆಗಾಗಿ ಪ್ರಯತ್ನಿಸುತ್ತಾ ಇರುವವರಿಗೆ ಸಂಬಂಧದಲ್ಲೇ ವಧು/ವರ ದೊರೆಯುವ ಅವಕಾಶಗಳಿವೆ. ಇತರರ ಆತುರಕ್ಕೆ ನಿರ್ಧಾರ ಮಾಡದಿರುವುದು ಕ್ಷೇಮ. ಇಂಥ ಯಾವುದೇ ವಿಷಯಕ್ಕೂ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿ. ವೃತ್ತಿನಿರತರು ಬಹಳ ಮುಖ್ಯವಾದ ಮೈಲುಗಲ್ಲನ್ನು ಸಾಧಿಸಲಿದ್ದೀರಿ. ಒಂದು ವೇಳೆ ಬೇರೆಯವರ ಕೈ ಕೆಳಗೆ ಅಥವಾ ಪಾರ್ಟನರ್ ಷಿಪ್ ನಲ್ಲಿ ವೃತ್ತಿ ಮಾಡುತ್ತಿದ್ದೀರಿ ಅಂತಾದಲ್ಲಿ ಸ್ವತಂತ್ರವಾಗಿ ವೃತ್ತಿ ಆರಂಭಿಸುವ ಯೋಗ ಕೂಡಿ ಬರಲಿದೆ. ಅದಕ್ಕೆ ಬೇಕಾದ ಎಲ್ಲ ಸಂಪನ್ಮೂಲ, ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ನಿಮ್ಮಲ್ಲಿ ಕೆಲವರು ಇಲ್ಲಿಯವರೆಗೆ ಮಾಡಿದ್ದ ಉಳಿತಾಯದ ಹಣ, ಎಫ್ ಡಿ, ಮ್ಯೂಚುವಲ್ ಫಂಡ್ ಹಾಗೂ ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ಹಣವನ್ನು ತೆಗೆಯುವುದಕ್ಕೆ ನಿರ್ಧರಿಸಲಿದ್ದೀರಿ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯಲ್ಲಿ ಉತ್ತಮ ಸಾಧನೆಯನ್ನು ಮಾಡಲಿದ್ದೀರಿ. ಇನ್ನು ಶಿಕ್ಷಣ ಸಂಸ್ಥೆಯಿಂದಲೇ ಅಥವಾ ಸ್ನೇಹಿತರ ಜತೆಗೆ ಪ್ರವಾಸಕ್ಕೆ ತೆರಳುವಂಥ ಯೋಗ ಸಹ ಇದೆ. ಮಹಿಳೆಯರಿಗೆ ಪ್ರೀತಿ- ಪ್ರೇಮದಲ್ಲಿ ಬೀಳುವ ಯೋಗ ಇದೆ. ಅಂದ ಹಾಗೆ ಇದು ಮದುವೆ ಹಂತಕ್ಕೆ ಬಹಳ ವೇಗವಾಗಿ ತಲುಪಲಿದೆ. ಕಾರ್ಯಕ್ರಮ- ಸಮಾರಂಭಗಳಲ್ಲಿ ಪರಿಚಯ- ಸ್ನೇಹ ಆಗುವ ವ್ಯಕ್ತಿ ನಿಮ್ಮ ಬಾಳ ಸಂಗಾತಿ ಆಗಲಿದ್ದಾರೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಈ ಹಿಂದೆ ನೀವೇ ಮಾಡಿದ ನಿರ್ಧಾರಗಳ ಕಾರಣದಿಂದಾಗಿ ನಿಮಗೆ ಒಳಮನಸ್ಸು ವಿಪರೀತ ಚುಚ್ಚಲಿದೆ. ನಿಮಗೆ ಸಹಾಯಕ್ಕೆ ಬಂದವರಿಗೆ ನಿಮ್ಮಿಂದ ಸಹಾಯ ಮಾಡುವುದಕ್ಕೆ ಸಾಧ್ಯವೇ ಆಗುವುದಿಲ್ಲ ಎಂಬ ಸ್ಥಿತಿ ನಿರ್ಮಾಣ ಆಗಲಿದೆ. ಇನ್ನು ಇದೇ ವೇಳೆ ಅಚಾನಕ್ ಆಗಿ ಪ್ರಯಾಣಗಳು ಒದಗಿಬರಲಿವೆ. ಆ ಪ್ರಯಾಣದಿಂದ ದೇಹಾಲಸ್ಯ, ಆಯಾಸ, ಎಲ್ಲ ಕೆಲಸಗಳಲ್ಲೂ ಒಂದು ಬಗೆ ನಿರಾಸಕ್ತಿ ಕಾಡಲಿದೆ. ಈಗಾಗಲೇ ಮಾನಸಿಕ ಖಿನ್ನತೆ, ಆತಂಕ ಅಥವಾ ಬೇರೆ ಯಾವುದೇ ಮನಸ್ಸಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ವೈದ್ಯೋಪಚಾರ ಪಡೆಯುತ್ತಿದ್ದಲ್ಲಿ ಅದರ ಬಗ್ಗೆ ಸಮಾಧಾನ ಇಲ್ಲದ ಕಾರಣಕ್ಕೆ ಬೇರೆ ವೈದ್ಯರ ಬಳಿ ಚಿಕಿತ್ಸೆ ಪಡೆಯುವುದಕ್ಕೆ ಮನಸ್ಸು ಮಾಡಲಿದ್ದೀರಿ. ಇನ್ನು ಕೆಲವು ಸ್ನೇಹಿತರ ವರ್ತನೆ ಬೇಸರ ಮೂಡಿಸಲಿದೆ. ಬ್ಯಾಂಕ್ ವ್ಯವಹಾರ ಮಾಡುತ್ತಿದ್ದೀರಿ, ಅದರಲ್ಲೂ ಕೆಲವು ಕಾಗದ- ಪತ್ರ, ದಾಖಲಾತಿಗಳನ್ನು ಹೊಂದಿಸುತ್ತಿದ್ದೀರಿ ಅಂತಾದಲ್ಲಿ ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಖರ್ಚು- ವೆಚ್ಚ ಆಗಲಿದೆ. ಇದೇ ವೇಳೆ ಈ ಹಿಂದೆ ನಿಮ್ಮ ಜತೆಗೆ ವೈಮನಸ್ಯ ಮಾಡಿಕೊಂಡಿದ್ದ ವ್ಯಕ್ತಿಗಳು ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ, ಸಾಲ ನೀಡಿದಲ್ಲಿ ವಾಪಸ್ ಕೊಡುವ ಸ್ಥಿತಿಯಲ್ಲಿ ಇಲ್ಲ ಎಂದು ಅಪಪ್ರಚಾರ ಮಾಡುವ ಅವಕಾಶಗಳಿವೆ. ಆದ್ದರಿಂದ ಒಂದೋ ನಿಮ್ಮ ಪ್ರಯತ್ನಗಳನ್ನು ರಹಸ್ಯವಾಗಿ ಇರಿಸಿಕೊಳ್ಳಿ. ಇಲ್ಲದಿದ್ದರೆ ಪೂರ್ತಿಯಾಗಿ ಪ್ರೊಸೆಸ್ ಆಗಿ, ಕೈಗೆ ಹಣ ಬರುವ ಮೊದಲು ಯಾರಿಗೂ ಹೇಳುವುದಕ್ಕೆ ಹೋಗಬೇಡಿ. ಅತಿ ಉತ್ಸಾಹದಿಂದ ಅಥವಾ ನಿಮ್ಮ ವಿರೋಧಿಗಳಿಗೆ ಟಾಂಗ್ ಕೊಡುವ ಮನಸ್ಥಿತಿಯಿಂದ ಏನಾದರೂ ಮುಂಚೆಯೇ ಎಲ್ಲವನ್ನೂ ಹೇಳಿದರೋ ಆ ಕೆಲಸ ಪೂರ್ತಿ ಆಗದೆ ಅವಮಾನದ ಪಾಲಾಗುತ್ತೀರಿ. ಕೃಷಿಕರಿಗೆ ಫಸಲು ಕೈ ಕೊಟ್ಟು, ನಷ್ಟ ಅನುಭವಿಸುವಂತಾಗುತ್ತದೆ. ಕಳಪೆ ಗುಣಮಟ್ಟದ ಬೀಜ, ಗೊಬ್ಬರ ಅಥವಾ ಮತ್ಯಾವುದಾದರೂ ರಾಸಾಯನಿಕವನ್ನು ನಿಮ್ಮ ಅರಿವಿಗೆ ಬಾರದೆ ಬಳಸುವುದರಿಂದ ಒಂದಿಷ್ಟು ನಷ್ಟವನ್ನು ಕಾಣುವಂತಾಗುತ್ತದೆ. ನಿಮಗೆ ಪೂರ್ತಿಯಾಗಿ ಮಾಹಿತಿ ಇಲ್ಲದ ವಿಚಾರಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಅನುಭವಿಗಳು, ತಿಳಿವಳಿಕಸ್ಥರ ಜತೆಗೆ ಮಾತುಕತೆ ನಡೆಸುವುದು ಉತ್ತಮ. ವೃತ್ತಿನಿರತರು ಸ್ವಂತ ಸ್ಥಳದಲ್ಲಿ ಕಚೇರಿ ಆರಂಭಿಸುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಅಥವಾ ಈಗ ಇರುವಂಥ ಬಾಡಿಗೆ ಕಚೇರಿಯನ್ನೇ ಖರೀದಿಸಬಹುದು ಅಥವಾ ಲೀಸ್ ಗೆ ಪಡೆಯುವ ಸಾಧ್ಯತೆಗಳು ಸಹ ಇವೆ. ಇದಕ್ಕಾಗಿ ಸಂಬಂಧಿಕರು, ಸ್ನೇಹಿತರ ಬಳಿಯಲ್ಲೇ ಸಾಲ ಮಾಡುವುದಕ್ಕೆ ಮುಂದಾಗಲಿದ್ದೀರಿ. ಅಥವಾ ನಿಮ್ಮ ಬಳಿ ಇರುವಂಥ ಭೂಮಿ, ಒಡವೆಗಳನ್ನು ಮಾರುವುದಕ್ಕೆ ಸಹ ಯೋಚನೆ ಮಾಡುತ್ತೀರಿ. ಸೋದರ ಸಂಬಂಧಿಗಳ ಮನೆಯಲ್ಲಿ ನಡೆಯುವಂಥ ಶುಭ ಸಮಾರಂಭಗಳಿಗೆ ಓಡಾಟ ನಡೆಸಲಿದ್ದೀರಿ. ವಿದ್ಯಾರ್ಥಿಗಳು ನಿಮ್ಮದೇ ನಿರ್ಲಕ್ಷ್ಯದಿಂದ ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಳ್ಳುವ ಅಥವಾ ಅದನ್ನು ಬೇರೆ ಯಾರೋ ಕಳುವು ಮಾಡುವಂಥ ಸಾಧ್ಯತೆಗಳಿವೆ. ಒಂದು ವೇಳೆ ನೀವು ಬೇರೆಯವರ ವಸ್ತುಗಳನ್ನು ಕೇಳಿ, ಪಡೆದುಕೊಂಡು ಬಂದು ಬಳಸುತ್ತಿದ್ದೀರಿ ಅಂತಾದಲ್ಲಿ ಹೆಚ್ಚು ಜಾಗ್ರತೆಯನ್ನು ವಹಿಸಿ. ಸಾರ್ವಜನಿಕ ಸಾರಿಗೆ ಸಂಚರಿಸುವಾಗ ಕೂಡ ಎಚ್ಚರದಿಂದ ಇರಿ. ಮಹಿಳೆಯರಿಗೆ ಥೈರಾಯ್ಡ್, ರಕ್ತದೊತ್ತಡ, ಪಿಸಿಒಡಿ, ಮುಟ್ಟಿನ ದಿನಗಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳು ತೀವ್ರವಾಗಿ ಕಾಡಬಹುದು. ನಿಮ್ಮಲ್ಲಿ ಕೆಲವರಿಗೆ ಔಷಧದ ಅಲರ್ಜಿ ಕಾಡುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಆಕ್ರಮಣಕಾರಿ ಆಲೋಚನೆ ಕೆಲವು ಸನ್ನಿವೇಶದಲ್ಲಿ ಇರಲಿದೆ. ಇನ್ನು ನಿಮ್ಮದಲ್ಲದ ಸ್ವಭಾವ, ನಡವಳಿಕೆ ಹಾಗೂ ಆಲೋಚನೆಯು ಢಾಳಾಗಿ ಕಾಣಿಸಿಕೊಳ್ಳಲಿದೆ. ಯಾರದೋ ತಪ್ಪಿಗೆ ನಿಮಗೆ ಹಿನ್ನಡೆ ಆಗುತ್ತಿದೆಯೇನೋ ಎಂದೆನಿಸುವುದಕ್ಕೆ ಶುರುವಾಗಲಿದೆ. ಇದೇ ಕಾರಣದಿಂದ ನಿಮಗೆ ದೊರೆಯಬೇಕಾದದ್ದನ್ನು ಪಡೆದುಕೊಳ್ಳುವುದಕ್ಕೆ ಹೆಚ್ಚಿನ ಶ್ರಮವನ್ನು ಹಾಕಲಿದ್ದೀರಿ. ಅದು ಹಣವೇ ಇರಬಹುದು, ಅವಕಾಶ ಇರಬಹುದು ಅಥವಾ ಗೌರವವೇ ಇರಬಹುದು. ಅದನ್ನು ಬಾಯಿ ಬಿಟ್ಟು ಕೇಳಿ ಪಡೆದುಕೊಳ್ಳುತ್ತೀರಿ. ನಿಮ್ಮ ಕೆಲಸವನ್ನು ಬದಲಾವಣೆ ಮಾಡಿಕೊಳ್ಳುವುದಕ್ಕೆ ಪ್ರಯತ್ನ ಮಾಡಲಿದ್ದೀರಿ. ನೀವು ಈ ಹಿಂದೆ ಒಟ್ಟಾಗಿ ಯಾರ ಜತೆಗೆ ಒಟ್ಟಾಗಿ ಕೆಲಸ ಮಾಡಿದವರು ಈ ವಾರ ನಿಮಗಾಗಿ ಅಂತಲೇ ಹೊಸ ಉದ್ಯೋಗದ ಆಫರ್ ತರುವ ಸಾಧ್ಯತೆ ಇದೆ. ಬಹಳ ಸಮಯದಿಂದ ನಿಮ್ಮ ಮನಸ್ಸನ್ನು ಕಾಡುತ್ತಿದ್ದ ವಿಷಯವೊಂದನ್ನು ಸಂಬಂಧಪಟ್ಟವರ ಬಳಿಯೇ ಪ್ರಸ್ತಾವ ಮಾಡಲಿದ್ದೀರಿ. ಇದಕ್ಕೂ ಮುನ್ನ ಗೊಂದಲ ಕಾಡಲಿದೆ. ಇನ್ನು ಇತರರ ವಯಕ್ತಿಕ ವಿಷಯಗಳ ಬಗ್ಗೆ ನಿಮಗೇನಾದರೂ ಆಕ್ಷೇಪಗಳು ಇದ್ದಲ್ಲಿ ಅಂಥದ್ದನ್ನು ಚರ್ಚಿಸದೇ ಇರುವುದು ಕ್ಷೇಮ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಏನಾದರೂ ಆ ಬಗ್ಗೆ ಪೋಸ್ಟ್ ಮಾಡಿದಿರೋ ದೊಡ್ಡ ಮಟ್ಟದ ಸಮಸ್ಯೆ ನಿಮಗೇ ಆಗುತ್ತದೆ. ನಿಮ್ಮಲ್ಲಿ ಯಾರು ವಿಲ್ಲಾ ಅಥವಾ ಹಾಲಿಡೇ ಹೋಮ್ ಥರದ್ದನ್ನು ಖರೀದಿ ಮಾಡಬೇಕು ಎಂದು ಪ್ರಯತ್ನ ಮಾಡುತ್ತಿದ್ದೀರಿ, ಅಂಥವರಿಗೆ ಅನುಕೂಲ ಆಗಲಿದೆ. ಹಣದ ವಿಚಾರಕ್ಕಾಗಿಯೇ ಇಲ್ಲಿಯ ತನಕ ಹಿನ್ನಡೆಯನ್ನೇನಾದರೂ ಅನುಭವಿಸುತ್ತಿದ್ದಲ್ಲಿ ಅದು ನಿವಾರಣೆ ಆಗಲಿದೆ. ಕೃಷಿಕರಿಗೆ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಿಮ್ಮಲ್ಲಿ ಕೆಲವರಿಗೆ ತುರ್ತಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಸಹ ಆಗುವ ಯೋಗ ಇದೆ. ಇನ್ನು ಈಗಾಗಲೇ ದೃಷ್ಟಿ ದೋಷದ ಕಾರಣಕ್ಕೆ ಕನ್ನಡಕವನ್ನು ಬಳಸುತ್ತಿದ್ದೀರಿ ಅಂತಾದಲ್ಲಿ ಕೆಲವು ಗೊಂದಲ ಏರ್ಪಟ್ಟು ಎರಡೆರಡು ಬಾರಿ ಕನ್ನಡಕ ಬದಲಿಸಿಕೊಳ್ಳಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಗುತ್ತಿಗೆ ಒಪ್ಪಂದಗಳು, ಕೃಷಿ ಉತ್ಪನ್ನಗಳ ಮಾರಾಟ ಒಪ್ಪಂದಗಳನ್ನು ಏಕಾಏಕಿ ರದ್ದು ಮಾಡುವುದಕ್ಕೆ ಈ ವರೆಗೆ ನಿಮ್ಮ ಜತೆಗೆ ವ್ಯವಹಾರ ಮಾಡಿದವರು ಮುಂದಾಗುವ ಸಾಧ್ಯತೆ ಇದೆ. ಒಂದು ವೇಳೆ ಕಾಗದ- ಪತ್ರಗಳು ಮಾಡಿಕೊಂಡಿಲ್ಲ ಅಂತಾದಲ್ಲಿ, ಈ ವಾರದ ಶುರುವಿನಲ್ಲೇ ಮಾಡಿಕೊಳ್ಳುವುದು ಒಳ್ಳೆಯದು. ವೃತ್ತಿನಿರತರು ನಿಮ್ಮದೇ ವೃತ್ತಿಯಲ್ಲಿ ಇರುವವರ ಮತ್ಸರಕ್ಕೆ ಗುರಿ ಆಗುತ್ತೀರಿ. ನಿಮ್ಮ ಬಗ್ಗೆ ಅಪ್ರಚಾರ ಮಾಡುವ ಸಾಧ್ಯತೆಗಳು ಜಾಸ್ತಿ ಇವೆ. ಈ ಹಿಂದೆ ಯಾವಾಗಲೋ ನಿಮ್ಮಿಂದ ಆಗಿದ್ದ ತಪ್ಪನ್ನು ಮುಂದೆ ಮಾಡಿಕೊಂಡು, ಹೆಸರನ್ನು ಹಾಳು ಮಾಡುವುದಕ್ಕೆ ಕೆಲವರು ಪ್ರಯತ್ನಿಸಲಿದ್ದಾರೆ. ಕೆಲವು ಬೆಳವಣಿಗೆಗಳಿಂದ ನೀವು ಸಿಟ್ಟಿಗೆದ್ದು, ಆಡಬಾರದ ಮಾತನ್ನು ಆಡಿ, ವರ್ಚಸ್ಸಿಗೆ ಧಕ್ಕೆ ಮಾಡಿಕೊಳ್ಳಲಿದ್ದೀರಿ. ವಿದ್ಯಾರ್ಥಿಗಳಿಗೆ ಕೂದಲಿನ ಹೊಟ್ಟಿನ ಸಮಸ್ಯೆ ತೀವ್ರ ಆಗಲಿದೆ. ಕೂದಲು ಉದುರುವ ಸಮಸ್ಯೆ ಅನುಭವಿಸುತ್ತಿದ್ದಲ್ಲಿ ಅದು ಮತ್ತಷ್ಟು ಜಾಸ್ತಿ ಆಗಲಿದೆ. ಕುಟುಂಬದ ಒಳಗೆ ನಡೆಯುವಂಥ ಕೆಲವು ಬೆಳವಣಿಗೆಗಳಿಂದ ಮಾನಸಿಕ ಖಿನ್ನತೆ ಕಾಡಲಿದೆ. ಮಹಿಳೆಯರಿಗೆ ಸಂಘ- ಸಂಸ್ಥೆಗಳಿಂದ ಸನ್ಮಾನ, ಸ್ಥಾನ- ಮಾನ, ಗೌರವ ಸಿಗುವಂಥ ಸಾಧ್ಯತೆಗಳಿವೆ. ಪ್ರತಿಷ್ಠಿತ ಸಂಸ್ಥೆಯೊಂದನ್ನು ಮುನ್ನಡೆಸುವಂಥ ಜವಾಬ್ದಾರಿ ನಿಮ್ಮ ಹೆಗಲೇರಬಹುದು. ಸಂತಾನ ಅಪೇಕ್ಷಿತರಿಗೆ ಶುಭ ಸಮಯ ಇದು.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನೀವು ಈಗಾಗಲೇ ತೆಗೆದುಕೊಳ್ಳುತ್ತಿರುವ ಔಷಧಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದಿದ್ದಲ್ಲಿ ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿ ಹಾಗೂ ಸೂಕ್ತ ವೈದ್ಯರ ಮಾರ್ಗದರ್ಶನವನ್ನು ಪಡೆದುಕೊಳ್ಳಿ. ನಿಮ್ಮಲ್ಲಿ ಕೆಲವರಿಗೆ ಔಷಧದಿಂದ ಅಲರ್ಜಿ ಸಹ ಆಗಬಹುದು. ನಿಮ್ಮಲ್ಲಿ ಹಲವರಿಗೆ ಚರ್ಮ, ಕೂದಲು ಅಥವಾ ಗಂಟಲಿನ ಸಮಸ್ಯೆ ಕಾಡಬಹುದು. ಸೋರಿಯಾಸಿಸ್ ಸೇರಿದಂತೆ ಯಾವುದೇ ಚರ್ಮದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಏಕಾಏಕಿ ಉಲ್ಬಣ ಆಗಿಬಿಡಬಹುದು. ಮನೆಯ ನಿರ್ಮಾಣ ಮಾಡಬೇಕು ಎಂದುಕೊಳ್ಳುತ್ತಿರುವವರಿಗೆ ಸಂಗಾತಿ ಅಥವಾ ಕುಟುಂಬ ಸದಸ್ಯರ ಜತೆಗೆ ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳಬಹುದು. ಅಥವಾ ವ್ಯಕ್ತಿಯೊಬ್ಬರು ತಾವಾಗಿಯೇ ಬಂದು, ನಿಮ್ಮ ಜಾಗವನ್ನು ಖರೀದಿ ಮಾಡುವುದಾಗಿ ಹೇಳಬಹುದು. ಒಂದು ವೇಳೆ ನೀವು ಈ ವ್ಯವಹಾರದಲ್ಲಿ ಮುಂದುವರಿದರೆ ಬಹಳ ಸಮಯ ಎಳೆದಾಡುತ್ತದೆ. ಜತೆಗೆ ಮಾನಸಿಕವಾಗಿ ನೆಮ್ಮದಿಯನ್ನು ಸಹ ಕಳೆದುಕೊಂಡಂತಾಗುತ್ತದೆ. ಕೆಲವರು ತಮ್ಮ ಮಾತಿನ ಮೂಲಕ ನಿಮ್ಮನ್ನು ರೊಚ್ಚಿಗೇಳುವಂತೆ ಮಾಡಲಿದ್ದು, ಆ ಸಿಟ್ಟಿಗೆ ಪಂಥಗಳನ್ನು ಕಟ್ಟಿಕೊಳ್ಳಲಿದ್ದೀರಿ. ಇದರಿಂದ ಹಣ ಕಳೆದುಕೊಳ್ಳುವ ಜತೆಗೆ, ಮಾನವನ್ನು ಕಳೆದುಕೊಂಡಂತಾಗುತ್ತದೆ. ಆದ್ದರಿಂದ ಹತ್ತಾರು ಜನರ ಗುಂಪಿರುವ ಕಡೆಯಲ್ಲಿ ನೀವಾಗಿಯೇ ಹೋಗಿ ನಿಲ್ಲುವುದಕ್ಕೆ ಹೋಗಬೇಡಿ. ಇತರರ ಮಾತನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ಕೃಷಿಕರಿಗೆ ಆದಾಯದಲ್ಲಿ ಹೆಚ್ಚಳ ಮಾಡಿಕೊಳ್ಳುವುದಕ್ಕೆ ಅವಕಾಶಗಳು ತೆರೆದುಕೊಳ್ಳಲಿವೆ. ಪಶು ಸಾಕಣೆ, ಮೀನು ಸಾಕಣೆ ಇಂಥದ್ದನ್ನು ಈಗಾಗಲೇ ಮಾಡುತ್ತಿದ್ದಲ್ಲಿ ಅದರ ಪ್ರಮಾಣವನ್ನು ಹೆಚ್ಚು ಮಾಡಲಿದ್ದೀರಿ. ಜತೆಗೆ ಕೆಲಸಕ್ಕೆ ಜನರನ್ನು ನೇಮಿಸಿಕೊಳ್ಳಲಿದ್ದೀರಿ. ಕೃಷಿ ಜಮೀನಿನಲ್ಲಿ ಕೆಲವು ಕಟ್ಟಡಗಳನ್ನು ನಿರ್ಮಾಣ ಮಾಡಲಿದ್ದೀರಿ. ಬೋರ್ ವೆಲ್ ತೆಗೆಸುವುದು, ಸೋಲಾರ್ ಉಪಕರಣಗಳನ್ನು ಅಳವಡಿಸಿಕೊಳ್ಳುವುದು ಇತ್ಯಾದಿಗಳನ್ನು ಮಾಡಲಿದ್ದೀರಿ. ಸರ್ವೇ, ಪೋಡಿ ಇತ್ಯಾದಿಗಳನ್ನು ಮಾಡಿಸಬೇಕು ಎಂದು ಕೊಳ್ಳುತ್ತಿರುವವರಿಗೆ ಕೆಲಸ ವೇಗ ಪಡೆದುಕೊಳ್ಳಲಿದೆ. ವೃತ್ತಿನಿರತರು ಬಹಳ ಜನಪ್ರಿಯ ಆಗಲಿದ್ದೀರಿ. ಅಥವಾ ನಿಮ್ಮ ಸಂಸ್ಥೆ ಬಗ್ಗೆ ಪಬ್ಲಿಸಿಟಿ ಆರಂಭಿಸುವ ಸಾಧ್ಯತೆಗಳು ಹೆಚ್ಚಿವೆ. ನಿಮ್ಮ ನಿರೀಕ್ಷೆಗೆ ತಕ್ಕಂತೆ ಫಲಿತಾಂಶಗಳು ದೊರೆಯುವುದಕ್ಕೆ ಶುರು ಆಗುತ್ತದೆ. ಈಗ ನೀಡುತ್ತಿರುವ ಸೇವೆಗೆ ಜತೆಯಾಗಿ ಇನ್ನಷ್ಟು ಸೇವೆಗಳನ್ನು ನೀಡುವುದಕ್ಕೆ ಶುರು ಮಾಡಲಿದ್ದೀರಿ. ನೀವು ವೃತ್ತಿಯ ಗುರುಗಳಾಗಿ ಭಾವಿಸುವಂಥವರು ಕೆಲವು ಸಲಹೆಗಳನ್ನು ನೀಡಲಿದ್ದಾರೆ ಹಾಗೂ ಅದೇ ರೀತಿ ಕೆಲವು ಅನುಕೂಲಗಳನ್ನು ಸಹ ಮಾಡಿಕೊಡಲಿದ್ದಾರೆ. ವಿದ್ಯಾರ್ಥಿಗಳು ಕೆಲವು ವಿವಾದಗಳನ್ನು ಮಾಡಿಕೊಳ್ಳಬಹುದು. ಶಾಲೆ- ಕಾಲೇಜುಗಳಲ್ಲಿ ಇರುವವರ ಮೇಲೆ ಹೊಡೆದಾಟದ ಆರೋಪ ಬರಬಹುದು. ಪೋಷಕರನ್ನು ಕರೆತರುವಂತೆಯೂ ಸೂಚಿಸುವ ಸಾಧ್ಯತೆಗಳಿವೆ. ಆದ್ದರಿಂದ ಇಂಥ ಸನ್ನಿವೇಶಗಳಲ್ಲಿ ಸೂಕ್ಷ್ಮವಾಗಿ ವರ್ತಿಸಿ. ಮಹಿಳೆಯರು ಅತ್ತೆ, ನಾದಿನಿ ಅಥವಾ ಭಾವಿ ಪತಿಯ ಜತೆಗೆ ಜಗಳ ಮಾಡುವ ಸಾಧ್ಯತೆ ಇದೆ. ನಿಮ್ಮ ಆಯ್ಕೆಯ ಬಗ್ಗೆ ಬೇಸರ ಆಗುವಂಥ ಯೋಗ ಇದೆ. ಇದರಿಂದ ನಿಮ್ಮಲ್ಲಿ ಕೆಲವರು ಒತ್ತಡ, ಮಾನಸಿಕ ಖಿನ್ನತೆಯನ್ನು ಅನುಭವಿಸಲಿದ್ದೀರಿ. ಒಂದು ವೇಳೆ ವೈದ್ಯರ ಸಹಾಯ ಬೇಕು ಎಂದೆನಿಸಿದಲ್ಲಿ ಕಡ್ಡಾಯವಾಗಿ ತೆಗೆದುಕೊಳ್ಳಿ. ನಿಮ್ಮ ವೈದ್ಯಕೀಯ ವೆಚ್ಚದಲ್ಲಿ ಗಣನೀಯವಾದ ಏರಿಕೆ ಕಂಡುಬರಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ನೀವು ನಿರೀಕ್ಷೆ ಮಾಡದಂಥ ವ್ಯಕ್ತಿಗಳನ್ನು ಭೇಟಿ ಆಗಲಿದ್ದೀರಿ. ಅದೃಷ್ಟದ ಮೇಲಿನ ನಿಮ್ಮ ನಂಬಿಕೆ ಬದಲಾಗುವಂಥ ವಾರ ಇದಾಗಿರಲಿದೆ. ಅದಕ್ಕೆ ಕಾರಣ ಆಗುವಂತಹ ಅಂಶ ಏನೆಂದರೆ, ನೀವು ಮಾಡುತ್ತಿರುವ ಕೆಲಸವೋ ಉದ್ಯೋಗ ವಿಚಾರಕ್ಕೆ ಆ ವ್ಯಕ್ತಿಗಳಿಂದ ಸಹಾಯ ಆಗಲಿದೆ. ಅತಿಯಾದ ಆತ್ಮವಿಶ್ವಾಸವೋ ಅಥವಾ ಉತ್ಸಾಹವೋ ಸಿಕ್ಕಾಪಟ್ಟೆ ಖರ್ಚು ಮಾಡಿಕೊಳ್ಳುತ್ತೀರಿ. ಆದರೆ ನಿಮ್ಮ ಬಳಿ ಎಷ್ಟು ಹಣ ಇದೆಯೋ ಅಷ್ಟಕ್ಕೆ ಮಾತ್ರ ಬಜೆಟ್ ಮಾಡಿಕೊಳ್ಳುವುದು ಒಳ್ಳೆಯದು. ಒಂದು ವೇಳೆ ಸ್ವಲ್ಪ ಸಾಲ ಮಾಡಿದರೆ ಆಯಿತು ಎಂದೇನಾದರೂ ಅಂದುಕೊಂಡು, ಅದೇ ರೀತಿ ಸಾಲಕ್ಕೆ ಮುಂದಾದಿರೋ ನಿಮ್ಮ ಕೈ ಮೀರಿದ ಖರ್ಚು ಆಗಲಿದೆ. ಸಣ್ಣ- ಪುಟ್ಟ ಮನಸ್ತಾಪದ ಕಾರಣಗಳಿಗಾಗಿ ಪ್ರೇಮಿಯಿಂದ ದೂರ ಆಗಿರುವಂಥವರು ಮತ್ತೆ ಒಂದಾಗಲು ಅವಕಾಶಗಳು ದೊರೆಯಲಿವೆ. ಸೈಟು, ಮನೆ, ಅಪಾರ್ಟ್ ಮೆಂಟ್ ಇಂಥದ್ದನ್ನು ಖರೀದಿ ಮಾಡಬೇಕು ಎಂದಿರುವವರು ಹುಡುಕಾಟವನ್ನು ತೀವ್ರಗೊಳಿಸಲಿದ್ದೀರಿ. ಸಂಗಾತಿಯ ನೆರವಿನಿಂದ ಕೆಲವು ಕೆಲಸಗಳು ಬಹಳ ಸಲೀಸಾಗಿ ಮಾಡಿ ಮುಗಿಸಲಿದ್ದೀರಿ. ನಿಮ್ಮಲ್ಲಿ ಕೆಲವರು ಮಕ್ಕಳ ಸಲುವಾಗಿ ಒಡವೆ- ವಸ್ತ್ರಗಳನ್ನು ಖರೀದಿ ಮಾಡುವಂಥ ಯೋಗ ಇದೆ. ಈಗಾಗಲೇ ಮಾಡಿರುವಂಥ ಉಳಿತಾಯದ ಹಣವನ್ನು ತೆಗೆದುಕೊಂಡು, ಅದನ್ನು ಒಡವೆ ಕೊಳ್ಳುವುದಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ. ನಿತ್ಯವೂ ಹಣಕಾಸಿನ ವ್ಯವಹಾರ ಮಾಡುವಂಥವರಿಗೆ ಸಾಮಾನ್ಯ ಅವಧಿಗಿಂತ ಹೆಚ್ಚಿನ ಒತ್ತಡ ಕಂಡುಬರಲಿದೆ. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರು ಅಥವಾ ಸಹಾಯಕರಾಗಿ ಇರುವವರ ನೆರವು ದೊರೆಯದೆ ಇಂಥ ಪರಿಸ್ಥಿತಿ ಎದುರಾಗಲಿದೆ. ಕೃಷಿಕರಿಗೆ ಮನೆಯಲ್ಲಿ ಸಂಭ್ರಮದ ವಾತಾವರಣ ಇರುತ್ತದೆ. ದೇವತಾ ಕಾರ್ಯಗಳು ಅಥವಾ ಶುಭ ಕಾರ್ಯಗಳನ್ನು ಆಯೋಜಿಸುವಂತಹ ಯೋಗ ಇದೆ. ಡೇರಿ ವ್ಯವಹಾರಗಳಲ್ಲಿ ಇದ್ದು, ಅದರಲ್ಲಿ ಆದಾಯ ಹೆಚ್ಚು ಮಾಡಿಕೊಳ್ಳುವುದಕ್ಕೆ ಆಲೋಚನೆ ಮಾಡುತ್ತಿರುವವರಿಗೆ ಸೂಕ್ತ ವೇದಿಕೆ ದೊರೆಯಲಿದೆ. ರಬ್ಬರ್ ಕೃಷಿ ಮಾಡುವಂಥವರು ಹೂಡಿಕೆಯನ್ನು ಹೆಚ್ಚು ಮಾಡಬೇಕಾಗುತ್ತದೆ. ಕೆಲವು ಅನಿರೀಕ್ಷಿತ ಖರ್ಚುಗಳು ಕಾಣಿಸಿಕೊಳ್ಳಬಹುದು. ನಿಮ್ಮ ಕೈಗೆ ಇನ್ನೂ ಸೇರದ ಆದಾಯವನ್ನು ನೆಚ್ಚಿಕೊಂಡು ಯಾವುದೇ ಖರ್ಚನ್ನು ಮೈ ಮೇಲೆ ಹಾಕಿಕೊಳ್ಳಬೇಡಿ. ವೃತ್ತಿನಿರತರು ಈಗ ಮಾಡುತ್ತಿರುವ ವೃತ್ತಿಯಲ್ಲಿ ಹೊಸದನ್ನು ಕಲಿಯಬೇಕು, ಹೊಸತನ್ನು ಅಳವಡಿಸಿಕೊಳ್ಳಬೇಕು ಎಂಬ ಸವಾಲುಗಳು ಎದುರು ನಿಲ್ಲಲಿವೆ. ನಿಮ್ಮಲ್ಲಿ ಕೆಲವರು ಸಾಲ ಮಾಡಿ ಕಾರು ಖರೀದಿಸುವಂತಹ ಯೋಗ ಇದೆ. ಆದರೆ ಇತರರ ಮೇಲಿನ ಪ್ರತಿಷ್ಠೆಗಾಗಿ ನಿಮ್ಮ ಕೈಮೀರಿ ಸಾಲವನ್ನು ಮಾಡುವ ಸಾಧ್ಯತೆಗಳು ಗೋಚರಿಸುತ್ತಿವೆ. ತಂದೆ ತಾಯಿಗಳ ಜೊತೆಗೆ ಮಾತನಾಡುವಾಗ ಅಭಿಪ್ರಾಯ ಭೇದಗಳು ಕಾಣಿಸಿಕೊಂಡಲ್ಲಿ ಅವರ ಮನಸ್ಸಿಗೆ ನೋವಾಗುವಂತೆ ಏನನ್ನೂ ಹೇಳಬೇಡಿ. ವಿದ್ಯಾರ್ಥಿಗಳು ದೂರ ಪ್ರಯಾಣಗಳಿಂದ ಭಾರಿ ಯಶಸ್ಸು ಸಿಗಲಿದ್ದು, ಜನಪ್ರಿಯತೆ ಕೂಡ ಹೆಚ್ಚಾಗಲಿದೆ. ಸ್ವಲ್ಪ ಮಟ್ಟಿಗೆ ಹಣಕಾಸು ಸಹ ಕೈ ಸೇರುವ ಸಾಧ್ಯತೆಗಳಿವೆ. ಮಹಿಳೆಯರ ಸಾಮಾಜಿಕ ಸ್ಥಾನಮಾನಗಳು ಹೆಚ್ಚಾಗಲಿವೆ. ಸರ್ಕಾರಿ ನೌಕರಿಯಲ್ಲಿ ಇರುವಂತವರಿಗೆ ಪದೋನ್ನತಿ ಅಥವಾ ತಮಗೆ ಬೇಕಾದಂತಹ ವಿಭಾಗ ಅಥವಾ ಸ್ಥಳಕ್ಕೆ ವರ್ಗಾವಣೆ ದೊರೆಯುವ ಅವಕಾಶಗಳು ಸಹ ಇವೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಮೇಲುನೋಟಕ್ಕೆ ಕಾಣುವುದೆಲ್ಲವೂ ಅದೇ ರೀತಿ ಇರುವುದಿಲ್ಲ. ಎಲ್ಲವೂ ಸರಿಯಾಗಿದೆ ಎಂದು ಇಷ್ಟು ಸಮಯ ನೀವು ಭ್ರಮೆಯಲ್ಲಿ ಇದ್ದಿರೇನೋ ಎಂದೆನಿಸುವುದಕ್ಕೆ ಶುರು ಆಗುತ್ತದೆ. ಎಲ್ಲ ದಿನವೂ ಒಂದೇ ಬಗೆಯ ಹಾಗೂ ಅದೇ ಗುಣಮಟ್ಟ ಕಾಯ್ದುಕೊಳ್ಳುವುದು ಬಹಳ ಕಷ್ಟವಾದ ಸಂಗತಿ. ಆದರೆ ಇದೇ ಧೋರಣೆಯಿಂದಾಗಿ ಯಾವ ಕೆಲಸ ಮಾಡಿದರೂ ತೃಪ್ತಿ ಆಗದಂಥ ಪರಿಸ್ಥಿತಿ ನಿಮ್ಮದಾಗಿರುತ್ತದೆ. ಈ ಮುಂಚೆಯೆಲ್ಲ ನಿಮ್ಮ ಮಾತಿಗೆ ಗೌರವ ನೀಡುತ್ತಿದ್ದವರು ಹಾಗೂ ತಕ್ಷಣವೇ ಅದನ್ನು ಮಾಡುತ್ತಿದ್ದವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬುದು ಬಲವಾಗಿ ಅನಿಸುತ್ತದೆ. ಇದೇ ವೇಳೆ ಉದ್ಯೋಗ ಸ್ಥಳದಲ್ಲಿ ವಿರೋಧಿಗಳ ಸಮಸ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಅದಕ್ಕೆ ತಕ್ಕಂತೆ ನಿಮ್ಮದೇ ಅಜಾಗರೂಕತೆಯಿಂದ ಕೆಲವು ತಪ್ಪುಗಳು ಸಹ ಆಗಬಹುದು. ಈ ವಾರ ನೀವು ಕೆಲಸಕ್ಕೆ ತೆರಳುವ ಸ್ಥಳದಲ್ಲಿ ಪದೇ ಪದೇ ಅನುಮತಿ ಪಡೆದು, ಬೇಗ ಮನೆಗೆ ತೆರಳುವುದು ಅಥವಾ ತಡವಾಗಿ ಕೆಲಸಕ್ಕೆ ಹೋಗುವುದು ಮಾಡಬೇಡಿ. ಇದರಿಂದ ನಿಮ್ಮ ವರ್ಚಸ್ಸಿಗೆ ಸಮಸ್ಯೆ ಆಗಲಿದೆ. ಅದರ ಹೊರತಾಗಿಯೂ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ದಿಢೀರನೇ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳಿಗಾಗಿ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಇದಕ್ಕಾಗಿಯೇ ಸಾಲ ಮಾಡಬೇಕಾದ ಸನ್ನಿವೇಶ ಸಹ ಎದುರಾಗಬಹುದು. ಆದ್ದರಿಂದ ಈ ಸಮಯದಲ್ಲಿ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಸಣ್ಣ- ಪುಟ್ಟ ಅನಾರೋಗ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡದೆ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ದೈನಂದಿನ ದಿನಚರಿ ಮತ್ತು ಕೆಲಸಕ್ಕೆ ಸಂಬಂಧಿಸಿದ ವಿಷಯಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ಹೊಸ ಉದ್ಯೋಗಾವಕಾಶಗಳು, ಬಡ್ತಿಗಳು ಅಥವಾ ಮಾಡುವ ಕೆಲಸದಲ್ಲಿ ಹಾಕುವ ಪ್ರಯತ್ನಗಳಿಗೆ ನಿರೀಕ್ಷಿತವಾದ ಫಲಿತಾಂಶ ದೊರೆಯುವುದು ಕಷ್ಟ. ಕೃಷಿಕರು ಹೊಸ ಕೌಶಲಗಳನ್ನು ಅಳವಡಿಸಿಕೊಳ್ಳುವ ಕಡೆಗೆ ನಿಗಾ ಕೊಡಬೇಕು. ಹೆಚ್ಚಿನ ಕೆಲಸದ ಹೊರೆ ಇರುತ್ತದೆ. ಬಾಕಿ ಬರಬೇಕಾದ ಹಣ ಇದ್ದಲ್ಲಿ ಅದು ಬರುವಂಥ ಅವಕಾಶಗಳಿವೆ. ಆದರೆ ಅದಕ್ಕಾಗಿ ಬಲವಾದ ಪ್ರಯತ್ನ ಹಾಕಬೇಕು. ವೃತ್ತಿನಿರತರಿಗೆ ತಮ್ಮ ಜತೆಗೆ ಕೆಲಸ ಮಾಡುವವರ ಜತೆಗೆ ಘರ್ಷಣೆಗಳು ಏರ್ಪಡುವ ಸಾಧ್ಯತೆ ಇದೆ ಹೀಗಾಗದಂತೆ ಎಚ್ಚರಿಕೆಯನ್ನು ವಹಿಸುವುದು ಮುಖ್ಯ. ವ್ಯವಹಾರ ವಿಸ್ತರಣೆಗಾಗಿ ಪ್ರಯತ್ನ ಮಾಡುವುದಿದ್ದಲ್ಲಿ ಸಾಲ ಪಡೆಯುವುದು, ಸಾಲ ನೀಡುವುದು ಎರಡರಿಂದಲೂ ಒಂದಲ್ಲ ಒಂದು ಸಮಸ್ಯೆಗಳು ಕಾಡಲಿದೆ. ಆದ್ದರಿಂದ ಈ ಬಗ್ಗೆ ಎಚ್ಚರಿಕೆಯಿಂದ ಇರುವುದು ಮುಖ್ಯ. ವಿದ್ಯಾರ್ಥಿಗಳು ಎಜುಕೇಶನ್ ಲೋನ್ ಗಾಗಿ ಬ್ಯಾಂಕ್ ಗಳಲ್ಲಿ ಪ್ರಯತ್ನ ಪಡುತ್ತಿದ್ದಲ್ಲಿ ಅದರಲ್ಲಿ ಯಶ ಕಾಣಲಿದ್ದೀರಿ. ಉನ್ನತ ಹುದ್ದೆಯಲ್ಲಿ ಇರುವಂಥವರು ನಿಮ್ಮ ನೆರವಿಗೆ ಬರಲಿದ್ದಾರೆ. ಮಹಿಳೆಯರು ರಾಜಕಾರಣದಲ್ಲಿ ಇರುವಂಥವರಾಗಿದ್ದರೆ ಸ್ಥಾನ- ಮಾನಗಳು ಹೆಚ್ಚಾಗಲಿವೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಜಾಸ್ತಿ ಆಗಲಿದ್ದು, ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಿದ್ದೀರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಒಂದರ ಹಿಂದೆ ಒಂದರಂತೆ ಈ ಮುಂಚೆ ಆದ ಹಿನ್ನಡೆ ಕಾರಣಕ್ಕೆ ಮೊದಲಿನ ಉತ್ಸಾಹದಲ್ಲಿ ಎಲ್ಲರೊಂದಿಗೆ ಮಾತನಾಡುವುದಕ್ಕೋ ಅಥವಾ ವ್ಯವಹರಿಸುವುದಕ್ಕೋ ಸಾಧ್ಯವಿಲ್ಲದಂಥ ಸನ್ನಿವೇಶದ ನಿರ್ಮಾಣ ಆಗಲಿದೆ. ಇದರ ಜೊತೆಗೆ ಈ ವಾರ ನಿಮ್ಮ ಮೇಲೆ ನಿಮಗೇ ಒಂದು ಬಗೆಯ ವಿಶ್ವಾಸದ ಕೊರತೆ ಎದುರಾಗುತ್ತದೆ. ಹೀಗೆ ಅನಿಸುವುದರಿಂದ ನನ್ನಿಂದ ಇದು ಸಾಧ್ಯವಾ, ನಾನು ಈ ಕೆಲಸನ್ನು ಮಾಡಬಲ್ಲೆನಾ ಇತ್ಯಾದಿ ಅನುಮಾನಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ. ಏಕೆಂದರೆ ನಿಮ್ಮ ಸಾಮರ್ಥ್ಯ ಸಿಕ್ಕಾಪಟ್ಟೆ ವೃದ್ಧಿ ಆಗುವ ಸಮಯ ಇದು. ಯಾರು ಊಹಿಸದ ರೀತಿಯಲ್ಲಿ ಯಶಸ್ಸಿನ ಗ್ರಾಫ್ ಮೇಲಕ್ಕೆ ಏರಲಿದೆ. ಅದೇ ವೇಳೆ ಲೆಕ್ಕಾಚಾರದಂತೆ ಆಗುವ ಆರ್ಥಿಕ ಬೆಳವಣಿಗೆಯಿಂದಾಗಿ ನಿಮ್ಮೊಳಗೆ ಒಂದು ಆತ್ಮವಿಶ್ವಾಸ ಬೆಳೆಯಲಿದೆ. ಏಕೆಂದರೆ ಹಣಕಾಸು ವಿಚಾರದಲ್ಲಿ ನೀವಂದುಕೊಂಡಂತೆ ಕೆಲವು ಬೆಳವಣಿಗೆಗಳು ಆಗಲಿವೆ. ಒಂದು ವೇಳೆ ವಿವಾಹ ವಯಸ್ಕರಾಗಿದ್ದಲ್ಲಿ, ಮದುವೆ ಮತ್ತಿತರ ಶುಭ ಕಾರ್ಯಗಳಿಗೆ ಪ್ರಯತ್ನ ಮಾಡುತ್ತಿರುವವರಿಗೆ ಒಳ್ಳೆ ವಾರ ಇದು. ಹೊಸ ಗ್ಯಾಜೆಟ್, ಲ್ಯಾಪ್‌ಟಾಪ್, ಟೀವಿ ಇಂಥದ್ದನ್ನು ಖರೀದಿ ಮಾಡುವುದಕ್ಕೆ ಹಣ ಖರ್ಚಾಗುವ ಯೋಗ ಇದೆ. ಅನಿರೀಕ್ಷಿತವಾಗಿ ಹೊಸ ಜನರ ಪರಿಚಯ ಆಗಲಿದೆ. ಇದು ದೀರ್ಘಾವಧಿಯಲ್ಲಿ ಅನುಕೂಲ ಆಗಲಿದೆ. ಕೃಷಿಕರಾಗಿದ್ದಲ್ಲಿ ಹಣಕಾಸಿನ ಮೂಲವನ್ನು ಹೆಚ್ಚಳ ಮಾಡಿಕೊಳ್ಳುವುದಕ್ಕೆ ಅವಕಾಶ ದೊರೆಯುತ್ತದೆ. ಶುಭ ಕಾರ್ಯಗಳಿಗೆ ಆಹ್ವಾನ ಬರಲಿದೆ. ದೇವತಾರಾಧನೆಯಲ್ಲಿ ಭಾಗೀ ಆಗುವುದಕ್ಕೆ ಅವಕಾಶ ದೊರೆಯಲಿದೆ. ಹೊಸದಾಗಿ ಮನೆ ಅಥವಾ ಸೈಟು ಖರೀದಿ ಮಾಡಬೇಕು ಎಂದಿರುವವರಿಗೆ ಸೂಕ್ತ ಸ್ಥಳ, ಮನೆ ದೊರೆಯುವಂಥ ಸಾಧ್ಯತೆ ಇದೆ. ಪ್ರೇಮದಲ್ಲಿ ಇರುವಂಥವರಿಗೆ ಬಹಳ ಒಳ್ಳೆ ಸಮಯ ಇದು. ಮನೆಯಲ್ಲಿ ಮದುವೆ ಬಗ್ಗೆ ಪ್ರಸ್ತಾವ ಮಾಡಿದಲ್ಲಿ ಹೆಚ್ಚಿನ ವಿರೋಧ ಇಲ್ಲದೆ ಒಪ್ಪಿಗೆ ಸಹ ಸಿಗಬಹುದು. ವೃತ್ತಿನಿರತರಿಗೆ ದೀರ್ಘ ಕಾಲದಿಂದ ಬಾರದೆ ಬಾಕಿ ಉಳಿದಿದ್ದ ಹಣ ಕೈ ಸೇರುವಂಥ ಅವಕಾಶಗಳಿವೆ. ಹೊಸ ಸಂಪರ್ಕಗಳು ದೊರೆಯಲಿವೆ, ಇದರಿಂದ ನಿಮ್ಮ ವೃತ್ತಿ ವಿಸ್ತರಣೆಗೆ ಸಹಾಯ ಆಗಲಿದೆ. ಈಗಾಗಲೇ ಕೆಲಸ ಆರಂಭಿಸಿ, ಒಂದು ಹಂತ ತಲುಪಿದ ನಂತರ ಯಾಕೋ ಮುಂದುವರಿಯುತ್ತಿಲ್ಲ ಎಂದಾಗಿದ್ದಲ್ಲಿ ಈಗ ವೇಗ ಪಡೆದುಕೊಳ್ಳಲಿದೆ. ಇನ್ನು ವೃತ್ತಿಗೆ ಅಗತ್ಯ ಇರುವ ಯಂತ್ರೋಪಕರಣಗಳನ್ನು ಖರೀದಿ ಮಾಡಲಿದ್ದೀರಿ ಅಥವಾ ನಿಮ್ಮ ವೃತ್ತಿಗೆ ಅಗತ್ಯವಾದ ಕೆಲವು ವಿಮೆಗಳನ್ನು ಖರೀದಿ ಮಾಡಲಿದ್ದೀರಿ. ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಬ್ಯಾಂಕ್ ಗಳಲ್ಲಿ ಸಾಲಕ್ಕಾಗಿ ಪ್ರಯತ್ನ ಮಾಡಿದ್ದಲ್ಲಿ ಅದು ದೊರೆಯುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಆನ್ ಲೈನ್ ನಲ್ಲಿ ಬ್ಯಾಂಕಿಂಗ್ ವ್ಯವಹಾರ ಮಾಡುವಂಥವರು ಬಹಳ ಜಾಗ್ರತೆಯಿಂದ ಇರಬೇಕು. ಸೋದರ- ಸೋದರಿಯರಿಗಾಗಿ ಮೀಸಲಿಟ್ಟಿದ್ದ ಹಣವನ್ನು ಸಹ ನಿಮಗಾಗಿ ಪೋಷಕರು ನೀಡಬಹುದು. ಮಹಿಳೆಯರಿಗೆ ತಮ್ಮ ಆತುರದ ಸ್ವಭಾವದಿಂದ ಕೆಲವು ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ನೀವು ಕೆಲಸ ಮಾಡಿಯೂ ಶ್ರಮ ಪಟ್ಟಿರುವುದು ಸಂಬಂಧಪಟ್ಟ ವ್ಯಕ್ತಿಗಳಿಗೆ ತಿಳಿದ ನಂತರವೂ ಹೀಗಾಗಬಹುದು. ಆದ್ದರಿಂದ ಕೆಲಸ ಆಗುವ ಮುಂಚೆ ಎಲ್ಲ ಕಡೆ ಹೇಳಿಕೊಂಡು ಬಾರದಿರಿ. ಮನೆಯಿಂದ ಹೊರಡುವಾಗ ಹಸಿರು ವಸ್ತ್ರವನ್ನು ತೆಗೆದುಕೊಂಡು ಹೋಗಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನಿಮ್ಮ ಹಿತೈಷಿಗಳ ಮಾತನ್ನು ಕೇಳಿಸಿಕೊಳ್ಳಿ. ಹೊಗಳಿಕೆ ಮಾತುಗಳಿಗೆ ಮರುಳಾಗಬೇಡಿ. ನಿಮ್ಮ ಸಾಮರ್ಥ್ಯ ಹಾಗೂ ಮಿತಿ ಎರಡರ ಬಗ್ಗೆಯೂ ಒಂದು ಅಂದಾಜು ಇರುವುದು ಮುಖ್ಯವಾಗುತ್ತದೆ. ಇಬ್ಬರ ಮಧ್ಯೆ ಜಗಳವೋ ವಾಗ್ವಾದವೋ ಅಥವಾ ಮನಸ್ತಾಪ, ಅಭಿಪ್ರಾಯ ಭೇದವೋ ಇದೆ ಎಂದು ಗೊತ್ತಾದಾಗ ಅದನ್ನು ಬಗೆಹರಿಸುವುದಕ್ಕೆ ಅಂತಲೋ ಅಥವಾ ರಾಜೀ- ಸಂಧಾನ ಮಾಡಿಸುವುದಕ್ಕೆ ಅಂತಲೋ ಹೋಗಬೇಡಿ. ಏಕೆಂದರೆ ನಿಮ್ಮ ತೀರ್ಮಾನವನ್ನು ಅವರು ಒಪ್ಪುವುದಿಲ್ಲ ಹಾಗೂ ಜತೆಗೆ ಈ ಹಿಂದೆ ಬೇರೆ ಬೇರೆ ಸಂದರ್ಭಗಳಲ್ಲಿ ನೀವು ನಡೆದುಕೊಂಡ ರೀತಿಯನ್ನು ಎತ್ತಾಡುತ್ತಾರೆ. ಈ ವಾರ ನೀವು ಕಡ್ಡಾಯವಾಗಿ ಪಾಲಿಸಲೇಬೇಕಾದ ವಿಷಯ ಏನೆಂದರೆ, ಯಾವುದೇ ರಾಜೀ- ಪಂಚಾಯಿತಿಗಳನ್ನು ಮಾಡುವುದಕ್ಕೆ ಹೋಗಬೇಡಿ. ಇನ್ನು ಬ್ಯಾಂಕ್ ಅಥವಾ ಚೀಟಿ ಹಣಕ್ಕಾಗಿ ನೀವು ಜಾಮೀನಾಗಿ ನಿಲ್ಲುವಂತೆ ಕೇಳಿಕೊಳ್ಳುವ ಸಾಧ್ಯತೆಗಳಿವೆ. ಆಗ ಕೂಡ ನೀವು ಜಾಮೀನು ಹಾಕುವುದಕ್ಕೆ ಮುಂದಾಗದಿರುವುದು ಕ್ಷೇಮ. ಸ್ತ್ರೀಯರ ವಿಚಾರಕ್ಕೆ ಕುಟುಂಬದಲ್ಲಿ ನಿಮ್ಮ ಮೇಲೆ ವಿನಾಕಾರಣದ ಅಪವಾದಗಳು ಕೇಳಿಬರಲಿವೆ. ವಾಸ್ತವ ಸಂಗತಿ ಏನು ಎಂದು ನೀವು ಪ್ರಯತ್ನ ಪಟ್ಟರೂ ಅದನ್ನು ಕೇಳುವ ಸ್ಥಿತಿಯಲ್ಲಿ ಇತರರು ಇರುವುದಿಲ್ಲ. ಕುಟುಂಬ ಸದಸ್ಯರು ಸೇರಿ ನಿರ್ಧರಿಸಿರುವುದಕ್ಕೆ ಒಪ್ಪಿಗೆ ಸೂಚಿಸಲೇಬೇಕಾದ ಅನಿವಾರ್ಯಕ್ಕೆ ಸಿಲುಕಿಕೊಳ್ಳುತ್ತೀರಿ. ನರಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅದು ಉಲ್ಬಣಿಸಿ, ಆತಂಕಕ್ಕೆ ಕಾರಣ ಆಗಲಿದೆ. ಕೃಷಿಕರು ಈಗಾಗಲೇ ಅಂದುಕೊಂಡಂತೆ ಯೋಜನೆಗಳನ್ನು ಜಾರಿಗೆ ತರುವುದಕ್ಕೆ ಸಾಧ್ಯವಾಗುವುದಿಲ್ಲ. ಇನ್ನು ಹಾಕಿಕೊಂಡ ಬಜೆಟ್ ನೊಳಗೆ ಕೆಲಸ ಮಾಡುವುದು ಸಹ ಕಷ್ಟವಾಗಲಿದೆ. ಇದರ ಜತೆಗೆ ನಿಮ್ಮ ಅಕ್ಕ-ಪಕ್ಕದ ಜಮೀನಿನವರ ಕೆಲಸಗಳನ್ನು ಸಹ ಒಪ್ಪಿಕೊಂಡಿರೋ ಕೈಯಾರೆ ದುಡ್ಡು ಹಾಕಿ, ಆ ಕೆಲಸವನ್ನು ಮುಗಿಸಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಸೆಕೆಂಡ್ ಹ್ಯಾಂಡ್ ಕೃಷಿ ಯಂತ್ರೋಪಕರಣಗಳನ್ನು ಖರೀದಿ ಮಾಡಬೇಕು ಎಂದೇನಾದರೂ ಅಂದುಕೊಂಡಲ್ಲಿ ಒಂದಕ್ಕೆ ನಾಲ್ಕು ಬಾರಿ ಆಲೋಚಿಸುವುದು ಒಳ್ಳೆಯದು. ಒಂದು ವೇಳೆ ಕೊಂಡುಕೊಂಡರೆ ಅದನ್ನು ಸರಿ ಮಾಡಿಸುವುದಕ್ಕೆ ಸಿಕ್ಕಾಪಟ್ಟೆ ಖರ್ಚಾಗಿ, ಇದರ ಬದಲಿಗೆ ಹೊಸದನ್ನೇ ಖರೀದಿಸಬಹುದಿತ್ತು ಎಂದೆನಿಸುತ್ತದೆ. ವೃತ್ತಿನಿರತರು ಹೊಸ ಡೆಸ್ಕ್ ಟಾಪ್, ಸರ್ವರ್, ಕುರ್ಚಿ- ಮೇಜು ಮೊದಲಾದವುಗಳನ್ನು ಖರೀದಿ ಮಾಡಬೇಕು ಎಂದುಕೊಳ್ಳಲಿದ್ದೀರಿ. ಯುಪಿಎಸ್, ಬ್ಯಾಟರಿ ಇಂಥವುಗಳನ್ನು ಸಹ ಕೊಳ್ಳುವಂಥ ಯೋಗ ನಿಮ್ಮ ಪಾಲಿಗೆ ಇದೆ. ಒಟ್ಟಾರೆ ಹೇಳಬೇಕು ಅಂದರೆ ವೃತ್ತಿ ಬದುಕಿಗೆ ಅಗತ್ಯ ಇರುವಂಥ ಸಲಕರಣೆಗಳನ್ನು ಖರೀದಿಸಲಿದ್ದೀರಿ. ವಿದ್ಯಾರ್ಥಿಗಳು ತಾವು ಮಾಡದ ತಪ್ಪಿಗೆ ಹಾಗೂ ಆಡದ ಮಾತಿಗೆ ಅಪವಾದವನ್ನು ಹೊರಬೇಕಾಗುತ್ತದೆ. ಇಂಥ ಸನ್ನಿವೇಶದಲ್ಲಿ ಆಪ್ತ ಸ್ನೇಹಿತರು- ಸ್ನೇಹಿತೆಯರು ಸಹ ನಿಮ್ಮ ನೆರವಿಗೆ ನಿಲ್ಲುವುದಿಲ್ಲ. ಇಷ್ಟು ಸಮಯ ಉಳಿಸಿಕೊಂಡು ಬಂದಿದ್ದ ಸ್ನೇಹ- ವಿಶ್ವಾಸ ಕರಗಿ ಹೋಗಬಹುದು. ನಿಮ್ಮ ಸಮಸ್ಯೆಗೆ ಪರಿಹಾರವನ್ನು ನೀವೇ ಹುಡುಕಿಕೊಳ್ಳಬೇಕು ಎಂಬಂತೆ ಸುತ್ತಮುತ್ತಲು ಇರುವವರು ವರ್ತಿಸಲಿದ್ದಾರೆ. ಮಹಿಳೆಯರಿಗೆ ತಾವು ಬಹಳ ಇಷ್ಟಪಟ್ಟು ಸಾಕಿದ ಸಾಕು ಪ್ರಾಣಿಗಳ ಅನಾರೋಗ್ಯವು ಬೇಸರ, ಚಿಂತೆಗೆ ಕಾರಣ ಆಗಲಿದೆ. ಸೂಕ್ತ ವೈದ್ಯೋಪಚಾರ ಮಾಡಿಸಲು ಸಾಧ್ಯವಾಗದೆ ಅಸಹಾಯಕರಾಗುತ್ತೀರಿ.

ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ