Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 14ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 14ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು (Numerology Prediction) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 14ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ನಿಮ್ಮ ಮೇಲೆ ವಿಪರೀತ ಜವಾಬ್ದಾರಿಗಳು ಬರಲಿವೆ. ಅದನ್ನು ನಿಭಾಯಿಸುವುದು ಒತ್ತಡವಾಗಿ ಪರಿಣಮಿಸುತ್ತದೆ. ಇದರ ಜತೆಗೆ ಖರ್ಚು- ವೆಚ್ಚಗಳು ಹೆಚ್ಚಾಗಿ, ಸಾಲ ಮಾಡಲೇಬೇಕು ಎಂಬಂಥ ಸನ್ನಿವೇಶ ಎದುರಾಗಲಿದೆ. ದೇಹದ ತೂಕ ಹೆಚ್ಚಾಗಿರುವವರು ಅದರ ನಿರ್ವಹಣೆಗೆ ಗಮನ ನೀಡಿ. ಒಂದು ವೇಳೆ ಈ ದಿನ ವೈದ್ಯರನ್ನು ಭೇಟಿ ಆಗಬೇಕು ಎಂಬ ಉದ್ದೇಶ ಇದ್ದಲ್ಲಿ ಅದನ್ನು ಮುಂದೆ ಹಾಕಬೇಡಿ. ಕುಟುಂಬಸ್ಥರು ನಿಮ್ಮ ಜತೆ ಮಾತನಾಡುವಾಗ ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ತೀರ್ಥಕ್ಷೇತ್ರಗಳಿಗೆ ಪ್ರವಾಸ ತೆರಳುವಂಥ ಯೋಗ ಇದೆ. ಸ್ನೇಹಿತರ ಜತೆಗೆ ಭವಿಷ್ಯದ ಮುಖ್ಯ ವಿಚಾರಗಳನ್ನು ಚರ್ಚೆ ಮಾಡಲಿದ್ದೀರಿ. ವಾಹನ ಚಾಲನೆ ಮಾಡುವಾಗ ಏಕಾಗ್ರತೆಯಿರಲಿ. ನಿಮ್ಮ ವೈಯಕ್ತಿಕ ವಿಚಾರಗಳನ್ನು ಹೊಸಬರ ಜತೆಗೆ ಚರ್ಚೆ ಮಾಡುವುದಕ್ಕೆ ಹೋಗದಿರಿ. ಮಕ್ಕಳ ಭವಿಷ್ಯದ ಬಗ್ಗೆ ತುಂಬ ಮುಖ್ಯವಾದ ವಿಚಾರದಲ್ಲಿ ತೀರ್ಮಾನ ಕೈಗೊಳ್ಳಲಿದ್ದೀರಿ. ಈ ದಿನ ಬಿಳಿ ಬಟ್ಟೆಯನ್ನು ಧರಿಸುವುದರಿಂದ ಮಾನಸಿಕವಾಗಿ ನೆಮ್ಮದಿ ದೊರೆಯಲಿದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ತಂದೆ- ತಾಯಿಗೆ ಅಥವಾ ತಂದೆ- ತಾಯಿ ಸಮಾನರಾದವರನ್ನು ಅವರಿಗೆ ಬಹಳ ಇಷ್ಟವಾದ ಸ್ಥಳಕ್ಕೆ ಕರೆದೊಯ್ಯಲಿದ್ದೀರಿ. ತುಂಬ ಕಡಿಮೆ ಖರ್ಚಿನಲ್ಲಿ ಒಳ್ಳೆ ಮನರಂಜನೆ, ಸಂತೋಷ ಪಡೆಯುವಂಥ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ಪ್ರೀತಿ- ಪ್ರೇಮದಲ್ಲಿ ಇರುವಂಥವರು ಕಿರು ಪ್ರವಾಸಕ್ಕೆ ತೆರಳುವಂಥ ಸಾಧ್ಯತೆ ಇದೆ. ದಂಪತಿ ಮಧ್ಯೆ ಭಿನ್ನಾಭಿಪ್ರಾಯಗಳು ಇದ್ದಲ್ಲಿ ಅದು ಈ ದಿನ ಬಗೆಹರಿಸಿಕೊಳ್ಳುವುದಕ್ಕೆ ವೇದಿಕೆ ದೊರೆಯಲಿದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಮನೆಗೆ ಸಂಬಂಧಿಕರು, ಸ್ನೇಹಿತರು ಬರಲಿದ್ದಾರೆ. ಅವರು ಬಂದ ನಂತರದಲ್ಲಿ ಹೊರಗೆ ಹೋಗುವ, ಪಾರ್ಟಿ ಮಾಡುವ ಆಲೋಚನೆ ಬರಲಿದೆ. ಒಂದೇ ವಿಚಾರವಾಗಿ ಬಹಳ ಚರ್ಚೆಗಳು ನಡೆಯಲಿವೆ. ನೀವೇ ಇಟ್ಟು, ಮರೆತು ಹೋಗಿದ್ದ ಕಾಗದ- ಪತ್ರಗಳು, ವಸ್ತುಗಳು ಸಿಗುವ ಸಾಧ್ಯತೆಗಳಿವೆ. ಮನೆಯಲ್ಲಿನ ಕರ್ಟನ್ ಗಳು ಮತ್ತು ಇತರ ಅಲಂಕಾರಿಕ ವಸ್ತುಗಳನ್ನು ಬದಲಾಯಿಸುವುದಕ್ಕೆ ಈ ದಿನ ಖರೀದಿ ಮಾಡಲಿದ್ದೀರಿ. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಮನೆಗೆ ಹತ್ತಿರದ ಸಂಬಂಧಿಕರು ಬರಲಿದ್ದಾರೆ. ಅವರ ಆರೋಗ್ಯದ ವಿಚಾರಕ್ಕೋ ಅಥವಾ ಅವರ ಮಕ್ಕಳ ಮದುವೆ, ಶಿಕ್ಷಣ ಇತ್ಯಾದಿಗಳಿಗಾಗಿ ನೀವು ಓಡಾಡಬೇಕಾಗುತ್ತದೆ. ಒಂದೇ ಸಲಕ್ಕೆ ಹಲವರನ್ನು ಸಮಾಧಾನ ಪಡಿಸಬಹುದು ಎಂದು ನಿಮಗೆ ಅನಿಸಬಹುದಾದರೂ ಸಮಯ ನೀಡುವುದು ಕಷ್ಟ ಆಗಲಿದೆ. ಊಟ- ತಿಂಡಿ ಮಾಡಿ ಹಾಕುವುದರಲ್ಲಿಯೇ ಹೈರಾಣಾಗಲಿದ್ದೀರಿ. ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಬಿಸಿ ಪದಾರ್ಥಗಳ ಬಗ್ಗೆ ಜಾಗ್ರತೆ ವಹಿಸಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಸ್ವಂತವಾಗಿ ವ್ಯಾಪಾರ- ವ್ಯವಹಾರ ಮಾಡುವವರಿಗೆ ಅದರ ವಿಸ್ತರಣೆಗೆ ಹೊಸ ಆಲೋಚನೆಗಳು ಹೊಳೆಯಲಿವೆ. ಬ್ಯಾಂಕ್ ನಿಂದ ಸಾಲ ಮಾಡುವ ಬಗ್ಗೆ ತೀರ್ಮಾನವನ್ನು ಕೈಗೊಳ್ಳಲಿದ್ದೀರಿ. ಕುಟುಂಬದ ಸದಸ್ಯರ ಬಳಕೆಗಾಗಿ ವಾಹನಗಳನ್ನು ಖರೀದಿ ಮಾಡಲಿದ್ದೀರಿ. ಈ ದಿನ ಶೋರೂಮ್ ಗಳಿಗೆ ಭೇಟಿ ನೀಡಿ, ಅಡ್ವಾನ್ಸ್ ನೀಡುವ ಸಾಧ್ಯತೆ ಕೂಡ ಇದೆ. ವಿದೇಶಗಳಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ಮಹತ್ತರ ಬದಲಾವಣೆ ಬಗ್ಗೆ ಸುಳಿವು ದೊರೆಯಲಿದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಎಲ್ಲರಿಗೂ ಆಗಿದ್ದು ನನಗೂ ಆಗಲಿದೆ ಎಂಬ ಉಡಾಫೆ ಮಾಡದೆ ಯಾವುದೇ ವಿಚಾರದಲ್ಲಿ ಮುಂಜಾಗ್ರತೆ ಏನು ತೆಗೆದುಕೊಳ್ಳಬೇಕು ಎಂಬುದನ್ನು ತೀರ್ಮಾನಿಸಿ. ಮನೆಯ ಹೊರಗಿನ ಊಟ- ತಿಂಡಿಗಳನ್ನು ಮಾಡುವವರಿಗೆ ಗ್ಯಾಸ್ಟ್ರಿಕ್, ಎದೆಯುರಿ ಇಂಥ ಸಮಸ್ಯೆಗಳು ಕಾಡಬಹುದು. ಕೆಲವರು ಹೇಳಿದ್ದನ್ನೇ ಹೇಳಿ ತಲೆ ಚಿಟ್ಟು ಹಿಡಿಯುವಂತೆ ಮಾಡಲಿದ್ದಾರೆ. ನಿಮ್ಮ ಕೆಲಸ ಮಾಡಿಕೊಡುತ್ತೀನಿ ಎಂದು ಇತರರಿಗೆ ಮಾತು ನೀಡುವ ಮೊದಲು ಅವರ ಸ್ವಭಾವದ ಬಗ್ಗೆ ತಿಳಿದುಕೊಳ್ಳಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಅಧ್ಯಾತ್ಮದ ಬಗ್ಗೆ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಮನೆಯಲ್ಲಿ ಹಿರಿಯರ ಜತೆಗೆ ಬಾಂಧವ್ಯ ಗಟ್ಟಿ ಆಗಲಿದೆ. ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಸಿ, ಮನೆಗೆ ತರಲಿದ್ದೀರಿ. ನೀವು ಈ ಹಿಂದೆ ಯಾರಿಗೆ ನೆರವು ನೀಡಿದ್ದಿರೋ ಅವರು ಈಗ ನಿಮ್ಮ ಅಗತ್ಯಕ್ಕೆ ಸಹಾಯವನ್ನು ಮಾಡಲಿದ್ದಾರೆ. ಈ ದಿನ ಮನೆಯಲ್ಲಿ ವಿಷ್ಣು ಸಹಸ್ರನಾಮ ಶ್ರವಣ, ಪಠಣ ಮಾಡುವುದಕ್ಕೆ ಸಾಧ್ಯವಾದರೆ ಮಾಡಿ. ಇದರಿಂದ ಮನಸ್ಸಿಗೆ ಮತ್ತಷ್ಟು ಪ್ರಶಾಂತತೆ ಸಿಗಲಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಈ ದಿನ ನೀವಂದುಕೊಂಡಂತೆ ಯಾವುದೇ ಕೆಲಸಗಳು ಸಾಗುವುದಿಲ್ಲ. ಪ್ರಯಾಣಕ್ಕೆ ಸಿದ್ಧವಾಗಿ ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ ಅದು ಕ್ಯಾನ್ಸಲ್ ಆಗಬಹುದು. ಅಥವಾ ಏನೋ ಅನಿವಾರ್ಯ ಕಾರಣಗಳಿಗಾಗಿ ನೀವೇ ಅದನ್ನು ರದ್ದು ಮಾಡುವ ಸಾಧ್ಯತೆ ಇದೆ. ಇತರರನ್ನು ನೆಚ್ಚಿಕೊಂಡು, ಮುಖ್ಯವಾದ ಯಾವ ಕೆಲಸವನ್ನು ಈ ದಿನ ಹಾಕಿಕೊಳ್ಳಬೇಡಿ. ಮಕ್ಕಳ ಆರೋಗ್ಯದ ಬಗ್ಗೆ ಮಾಮೂಲಿಗಿಂತ ಹೆಚ್ಚಿನ ಲಕ್ಷ್ಯ ನೀಡಿ.
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ