Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಫೆಬ್ರವರಿ 16ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 16ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 16ರ ಗುರುವಾರದ ದಿನ ಭವಿಷ್ಯ (Daily Prediction as Per Numerology) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1) ವಿದೇಶದಿಂದ ಶುಭ ಸುದ್ದಿ ನಿರೀಕ್ಷೆ ಮಾಡುತ್ತಿರುವವರಿಗೆ ಅದು ಬರುವ ಸಾಧ್ಯತೆ ಇದೆ. ಆದರೆ ಉದ್ಯೋಗದಲ್ಲಿ ಸ್ಥಾನ ಬದಲಾವಣೆ ಅಥವಾ ಕೆಲಸವೇ ಹೋಗುವಂಥ ಸನ್ನಿವೇಶ ಸೃಷ್ಟಿ ಆಗಬಹುದು. ಆದರೆ ಗಾಬರಿ ಬೀಳಬೇಡಿ. ನಿಮ್ಮ ಸಾಮರ್ಥ್ಯದ ಆಧಾರದ ಮೇಲೆ ಕೆಲಸದಿಂದ ತೆಗೆಯಲಾಗಿದೆ ಎಂದುಕೊಂಡು, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಇನ್ನು ಬೇಸರದಿಂದಾಗಿ ಈಗಿನ ಸ್ನೇಹಿತರಿಂದ ದೂರ ಕೂಡ ಆಗದಿರಿ. ಏಕೆಂದರೆ ನಿಮ್ಮ ಸ್ನೇಹಿತರೇ ಹೊಸ ಅವಕಾಶಗಳ ಬಗ್ಗೆ ತಿಳಿಸುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2) ಸಣ್ಣ ಪ್ರಮಾಣದಲ್ಲಿಯಾದರೂ ಭೂಮಿ ಖರೀದಿಸುವುದಕ್ಕೆ ಮನಸ್ಸು ಮಾಡುವ ಸಾಧ್ಯತೆ ಇದೆ. ಇನ್ನು ಕೆಲವರು ಗುತ್ತಿಗೆ ಆಧಾರದಲ್ಲಿ ಭೂಮಿಯನ್ನು ಖರೀದಿಸಬಹುದು. ಹೋಟೆಲ್ ಉದ್ಯಮದಲ್ಲಿ ಇರುವವರಿಗೆ ಪ್ರಗತಿ ಇದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯಬಹುದು. ಅದಕ್ಕೆ ಸಿದ್ಧತೆ ನಡೆಸಲಿದ್ದೀರಿ. ಅನಿರೀಕ್ಷಿತವಾಗಿ ಹೊಸ ಆದಾಯ ಮೂಲ ದೊರೆಯಲಿದೆ. ಆದರೆ ನಿಮಗೆ ಬರಬೇಕಾದ ಹಣವನ್ನು ಪಡೆಯುವುದಕ್ಕೆ ಹೆಚ್ಚಿನ ಪರಿಶ್ರಮವನ್ನು ಹಾಕಬೇಕಾಗುತ್ತದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3) ಈಗಾಗಲೇ ಉದ್ಯೋಗದಲ್ಲಿ ಇರುವವರು ನೀವು ಈಗ ಮಾಡುತ್ತಿರುವ ಕೆಲಸಕ್ಕೆ ಸಂಬಂಧಿಸಿದಂತೆಯೇ ಅಥವಾ ಉದ್ಯೋಗದಲ್ಲಿ ಬದಲಾವಣೆ ಮಾಡಿಕೊಳ್ಳುವುದಕ್ಕಾಗಿ ಹೊಸ ಕೋರ್ಸ್ ತೆಗೆದುಕೊಳ್ಳುವ ಇಚ್ಛೆಯಿದ್ದಲ್ಲಿ ಸರಿಯಾಗಿ ವಿಚಾರಿಸಿ, ಸೂಕ್ತ ಮಾರ್ಗದರ್ಶನವನ್ನು ಪಡೆದುಕೊಂಡು ನಿರ್ಧಾರವನ್ನು ತೆಗೆದುಕೊಳ್ಳಿ. ಯಾವುದೂ ಅಂತಿಮವಾಗದೆ ಬ್ಯಾಂಕ್ ಲೋನ್ ಅಥವಾ ಹೂಡಿಕೆ ವಾಪಸ್ ತೆಗೆದುಕೊಳ್ಳುವುದು ಮಾಡಬೇಡಿ. ನಿಮ್ಮಲ್ಲಿ ಕೆಲವರಿಗೆ ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುವಂತಾಗುತ್ತದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4) ಇತರರನ್ನು ನಿಮ್ಮ ಜತೆಗೆ ಹೋಲಿಕೆ ಮಾಡಿಕೊಳ್ಳದಿರಿ. ಇಂದಿನ ಸ್ಥಿತಿಯಲ್ಲಿ ಒಂದು ವೇಳೆ ನಿಮ್ಮಲ್ಲಿ ಬೇಸರ ಅಥವಾ ಹೀಗಾಗಬಾರದಿತ್ತು ಎಂದು ಇದ್ದಲ್ಲಿ ಹಾಗೆ ಅಂದುಕೊಳ್ಳುವುದನ್ನು ನಿಲ್ಲಿಸುವಂಥ ಬೆಳವಣಿಗೆ ಆಗಲಿದೆ. ಸ್ವತಂತ್ರ ಕೆಲಸ ಮಾಡುತ್ತಿರುವವರು ಆದಾಯ ಹೆಚ್ಚಳ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿ, ನಾನಾ ಮಾಧ್ಯಮಗಳ ಮೂಲಕ ಪ್ರಯತ್ನಿಸುವ ಸಾಧ್ಯತೆ ಇದೆ. ಸ್ನೇಹಿತರ ಸಹಾಯ ನಿಮ್ಮ ಪಾಲಿಗೆ ಒದಗಿ ಬರಲಿದೆ. ದೂರ ಪ್ರಯಾಣದಿಂದ ಅನುಕೂಲ ಅಥವಾ ಲಾಭ ಆಗುವಂಥ ಸಾಧ್ಯತೆಗಳಿವೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5) ಮಹಿಳೆಯರು ಪತಿಯ ಆರೋಗ್ಯದ ಬಗ್ಗೆ ಹೆಚ್ಚು ನಿಗಾ ಇರಿಸಿ. ಇನ್ನು ವೃತ್ತಿನಿರತರಿಗೆ ಅಧ್ಯಯನ ಪ್ರವಾಸಕ್ಕೆ ತೆರಳುವಂಥ ಸಾಧ್ಯತೆ ಇದೆ. ಡೇರಿ ವ್ಯವಹಾರಗಳಲ್ಲಿ ಇರುವವರಿಗೆ ಕಮಿಷನ್ ಅಥವಾ ಲಾಭದ ಪ್ರಮಾಣ ಜಾಸ್ತಿ ಆಗುವಂಥ ಅವಕಾಶ ಇದೆ. ಯಾರದೋ ಮಾತನ್ನು ನಂಬಿಕೊಂಡು ಖರೀದಿಸಿದ ವಸ್ತುಗಳು ಕಳಪೆ ಮಟ್ಟದ್ದು ಎಂದು ತಿಳಿದು ಬರಬಹುದು. ಉದ್ಯಮ- ವ್ಯಾಪಾರ ನಡೆಸುತ್ತಿರುವವರು ಈ ದಿನ ಮೃದುವಾದ ಮಾತುಗಳಿಂದ ಎದುರಿನವರ ಜತೆಗೆ ವ್ಯವಹರಿಸಬೇಕು. ಮಾಧ್ಯಮಗಳ ಜತೆಗೆ ವ್ಯವಹರಿಸುವಾಗ ಮಾತಿನ ಮೇಲೆ ನಿಗಾ ಇರಿಸಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6) ಈ ದಿನ ನೀವು ಕೆಲಸ ಮಾಡುವ ಸ್ಥಳದಲ್ಲಿಯಾದರೂ ಸರಿ ಅಥವಾ ಕುಟುಂಬದಲ್ಲಿಯಾದರೂ ಸರಿ ಹಣದ ವಿಚಾರದಲ್ಲಿ ಪಾರದರ್ಶಕತೆಯಿಂದ ಇರಬೇಕು. ತೀರಾ ಅಗತ್ಯ ಇದ್ದಾಗಲೂ ನಿಮಗೆ ಹಣವೋ ಅಥವಾ ಯಾವುದಾದರೂ ವಸ್ತುವೋ ದೊರೆಯದೆ ಹೋಯಿತು ಎಂಬ ಕಾರಣಕ್ಕೆ ಸಿಟ್ಟಿನಿಂದ ಮಾತನಾಡಬೇಡಿ. ಇದರಿಂದ ನಿಮ್ಮ ಮೇಲಿರುವ ಸದಭಿಪ್ರಾಯ ಕೂಡ ಬದಲಾಗುತ್ತದೆ. ನಿಮ್ಮ ಫೋನ್ ನಲ್ಲಿ ಇರುವ ಡೇಟಾವನ್ನು ಎಚ್ಚರವಾಗಿ ಇಟ್ಟುಕೊಳ್ಳುವುದು ಮುಖ್ಯವಾಗುತ್ತದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7) ನೀವು ಅನುಕೂಲಸ್ಥರೇ ಇರಬಹುದು, ನಿಮ್ಮ ಬಳಿ ಬೆಲೆಬಾಳುವ ಒಡವೆ- ವಸ್ತುಗಳೇ ಇರಬಹುದು. ಈ ದಿನ ಬಹಳ ಮುಖ್ಯವಾದ ಎಚ್ಚರಿಕೆಯೊಂದನ್ನು ಕಡ್ಡಾಯವಾಗಿ ಗಮನಿಸಿ. ಏಕೆಂದರೆ ನಿಮಗೆ ದೃಷ್ಟಿ ದೋಷ ತಾಗುವ ಸಾಧ್ಯತೆಗಳಿವೆ. ಹೀಗೆ ದೋಷ ತಾಗಿದೆ ಎಂಬುದು ಗೊತ್ತಾಗುವುದು ಹೇಗೆ ಅಂದರೆ, ಮೈ- ಕೈ ನೋವು ಕಾಡಲಿದೆ, ಊಟ ಸೇರದಂತೆ ಆಗುತ್ತದೆ. ಆದ್ದರಿಂದ ನೀವು ಧರಿಸುವ ಬಟ್ಟೆ, ಒಡವೆ ಇತ್ಯಾದಿಗಳು ಜನರ ಕಣ್ಣು ಕುಕ್ಕದಂತೆ ಇರಲಿ. ಮನೆಯಲ್ಲಿ ಹಿರಿಯರು ಹೇಳಿದ ಮಾತುಗಳನ್ನು ಪಾಲಿಸಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8) ಸ್ವಾದಿಷ್ಟವಾದ ಊಟ- ತಿಂಡಿ ಮಾಡುವಂಥ ಯೋಗ ಇದೆ. ಆದರೆ ಮಸಾಲೆಯುಕ್ತ ಪದಾರ್ಥಗಳು, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವನೆ ಮಾಡುವಾಗ ಎಚ್ಚರಿಕೆಯಿಂದ ಇರಿ. ಇನ್ನು ನಾಲಗೆ ಚಪಲವನ್ನು ಕಡಿಮೆ ಮಾಡಿಕೊಂಡಲ್ಲಿ ಆರೋಗ್ಯ ಉತ್ತಮವಾಗಿ ಇರುತ್ತದೆ. ಈಗಾಗಲೇ ಸೈಟು ಖರೀದಿ ಮಾಡಿದವರಾಗಿದ್ದಲ್ಲಿ ಮನೆ ಬದಲಾವಣೆ ಅಥವಾ ಹೊಸ ಮನೆ ನಿರ್ಮಾಣ, ಅಲ್ಲಿ ಗೋದಾಮು ಮೊದಲಾದವುಗಳ ನಿರ್ಮಾಣ ಮಾಡುವುದಕ್ಕೆ ಮನಸ್ಸು ಮಾಡಲಿದ್ದೀರಿ. ಅದಕ್ಕಾಗಿ ಸಾಲಕ್ಕೆ ಪ್ರಯತ್ನಿಸಲಿದ್ದೀರಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9) ಹೊಸಬರನ್ನು ನಂಬಿಕೊಂಡು, ಅಂತರಂಗದ ಸಂಗತಿಗಳನ್ನು ಹಂಚಿಕೊಳ್ಳದಿರಿ. ಇನ್ನು ನೀವು ಅನುಸರಿಸುತ್ತಿರುವ ವ್ಯವಹಾರದ ಗುಟ್ಟನ್ನು ಎಷ್ಟೇ ಹತ್ತಿರದವರಿಗೆ ಬಿಟ್ಟುಕೊಡದಿರಿ. ನಿಮ್ಮ ತಪ್ಪಿದ್ದಲ್ಲಿ ಅದನ್ನು ಒಪ್ಪಿಕೊಂಡು ಬಿಡಿ. ಅದನ್ನು ಮುಂದುವರಿಸಿಕೊಂಡು ಹೋಗದಿರಿ. ಉದ್ಯೋಗಿಗಳಿಗೆ ಮೇಲಧಿಕಾರಿಗಳ ಜತೆಗೆ ವೈಚಾರಿಕವಾಗಿ ಭಿನ್ನಾಭಿಪ್ರಾಯ ತಲೆದೋರಬಹುದು. ವಿದೇಶ ಪ್ರಯಾಣಗಳಿಗೆ ಸಿದ್ಧತೆ ನಡೆಸುತ್ತಿರುವವರಿಗೆ ನಾನಾ ಬಗೆಯಲ್ಲಿ ಒತ್ತಡದ ಸನ್ನಿವೇಶ ಸೃಷ್ಟಿಯಾಗಲಿದೆ.
ಲೇಖನ- ಎನ್.ಕೆ.ಸ್ವಾತಿ