ಸಂಖ್ಯಾಶಾಸ್ತ್ರದ ಆಧಾರದಲ್ಲಿ 2024ನೇ ಇಸವಿಯ ವರ್ಷ ಭವಿಷ್ಯ ಇಲ್ಲಿದೆ. ಜನ್ಮ ಸಂಖ್ಯೆ 4 ಯಾರದು ಇರುತ್ತದೋ ಅಂಥವರ ವರ್ಷ ಭವಿಷ್ಯ ಇಲ್ಲಿದೆ. ಯಾರ ಜನ್ಮ ಸಂಖ್ಯೆ 4 ಎಂಬುದನ್ನು ತಿಳಿಯಬೇಕು ಅಂತಾದರೆ, ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4 ಎಂದಾಗುತ್ತದೆ. ಅಂಥವರಿಗೆ ವರ್ಷ ಭವಿಷ್ಯ, ಅಂದರೆ 2024ರ ಜನವರಿಯಿಂದ ಡಿಸೆಂಬರ್ ತನಕ ಹೇಗಿರುತ್ತದೆ ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಈ ಸಂಖ್ಯೆಯ ಜನರ ಅಧಿಪತಿ ರಾಹು. ಇವರ ಏಕಾಗ್ರತೆ ಸಿಕ್ಕಾಪಟ್ಟೆ ಗಟ್ಟಿಯಾಗಿರುತ್ತದೆ. ಪಿಎಚ್ .ಡಿ.,ಯಂಥ ಅಧ್ಯಯನ, ಸಂಶೋಧನೆ, ಜ್ಯೋತಿಷ, ವೇದ, ನಿಗೂಢ ವಿದ್ಯೆಗಳಲ್ಲಿ ಇವರಿಗೆ ಸಿಕ್ಕಾಪಟ್ಟೆ ಆಸಕ್ತಿ ಇರುತ್ತದೆ. ಯಾವುದೇ ವಿಷಯವನ್ನಾದರೂ ಗಂಭೀರವಾಗಿ ಅಧ್ಯಯನ ಮಾಡುವಂಥ ಸ್ವಭಾವದವರು ಇವರು. ಉನ್ನತ ಶಿಕ್ಷಣದಲ್ಲಿ ಅಮೋಘ ಸಾಧನೆಗಳನ್ನು ಮಾಡುವವರು ನಾಲ್ಕರ ಸಂಖ್ಯೆಯವರೇ ಹೆಚ್ಚಿರುತ್ತಾರೆ. ಇತರರ ಮೆಚ್ಚುಗೆಗೆ ಕೆಲಸ ಮಾಡುವ ಸ್ವಭಾವದವರು ಇವರಲ್ಲ. ತಾವು ಮಾಡುವ ಕೆಲಸದಲ್ಲಿ ಮೊದಲಿಗೆ ತಮಗೆ ಆತ್ಮತೃಪ್ತಿ ಸಿಗಬೇಕು ಎಂದಷ್ಟೇ ಆಲೋಚನೆಯನ್ನು ಮಾಡುತ್ತಾರೆ. ಹಲವು ಬಾರಿ ಇವರು ಬಹಳ ಕಠಿಣವಾಗಿ ನಡೆದುಕೊಳ್ಳುತ್ತಾರೆ, ಮನಸ್ಸಿಗೆ ಬೇಸರ ಆಗುವಂತೆ ಮಾತನಾಡುತ್ತಾರೆ ಎಂದೆಲ್ಲ ಅನಿಸುತ್ತದೆ. ಅದಕ್ಕೆ ಕಾರಣ ಏನು ಅಂತ ನೋಡುವುದಾದರೆ ಬಹುತೇಕ ಸಂದರ್ಭಗಳಲ್ಲಿ ಇವರ ಬಾಲ್ಯದ ದಿನಗಳಲ್ಲಿ ಅನುಭವಿಸಿದ ಕಷ್ಟ, ಅನುಮಾನ, ತಿರಸ್ಕಾರ, ನಿರ್ಲಕ್ಷ್ಯಗಳೇ ಎದ್ದು ಕಾಣುತ್ತವೆ. ಇದರರ್ಥ ಇಷ್ಟೇ, ಇವರ ಬಾಲ್ಯದಲ್ಲಿ ಹಲವು ಸಮಸ್ಯೆಗಳು ಇರುತ್ತವೆ. ಆ ಕಹಿ ನೆನಪುಗಳಿಂದ ಆಚೆ ಬರುವುದು ಸವಾಲಾಗಿರುತ್ತದೆ. ಹಾಗೆ ಅದರಿಂದ ಆಚೆ ಬಂದ ಮೇಲೆ ಒಂದು ಹಂತದ ನಂತರ ಸೇವಾ ಮನೋಃಭಾವದ ಮೂಲಕ ಹತ್ತಾರು ಜನಕ್ಕೆ ಸಹಾಯ ಮಾಡುತ್ತಾರೆ.
ಈ ವರ್ಷ ಎಲ್ಲವೂ ಆರಾಮವಾಗಿದೆ ಅನ್ನಿಸುವುದಕ್ಕೆ ಶುರುವಾಗುತ್ತದೆ. ಹಣಕಾಸಿನ ಅಗತ್ಯವೋ ಅಥವಾ ಮತ್ಯಾವುದೇ ಸವಾಲು ತುಂಬ ಸುಲಭವಾಗಿ ಎದುರಿಸಿ, ಮುಂದಕ್ಕೆ ಸಾಗುವುದಕ್ಕೆ ಬೇಕಾದ ವಾತಾವರಣ ಸೃಷ್ಟಿ ಆಗಲಿದೆ. ಆದರೆ ನಿಮ್ಮೊಳಗೆ ಒಂದು ಬಗೆಯ ಅಸಹನೆ ಕಾಡುತ್ತದೆ. ಏಕೆಂದರೆ ಇನ್ನೂ ದೊಡ್ಡದಾಗಿ ಏನಾದರೂ ಮಾಡಬಹುದಿತ್ತು, ಹೆಚ್ಚಿನ ಆದಾಯ ಮಾಡಿಕೊಳ್ಳಬಹುದಿತ್ತು, ಜಾಸ್ತಿ ಲಾಭ ಪಡೆದುಕೊಳ್ಳುವಂಥ ಅವಕಾಶ ಕೈ ಚೆಲ್ಲಿದೆ ಎಂದೆಲ್ಲ ಅನಿಸಲಿದೆ. ಸೈಟು- ಮನೆ, ಅಪಾರ್ಟ್ ಮೆಂಟ್, ಕೃಷಿ ಭೂಮಿ ಹೀಗೆ ಏನನ್ನಾದರೂ ಖರೀದಿ ಮಾಡಬೇಕು ಎಂದಿರುವವರು ನಾಳೆ ಮಾಡಿದರಾಯಿತು, ನಾಳೆ ನೋಡಿದರಾಯಿತು ಎಂಬ ಧೋರಣೆಯಿಂದ ಅವಕಾಶಗಳು ಕೈ ತಪ್ಪಿ ಹೋಗುವಂತಾಗುತ್ತದೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯ ಆಗುತ್ತದೆ. ಈ ವರ್ಷ ಹಲ್ಲು, ಕೂದಲು, ಗಂಟಲು, ಮೂಗು, ಕಿವಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈಗಾಗಲೇ ಸಮಸ್ಯೆ ಇದ್ದಲ್ಲಿ ಅದು ಉಲ್ಬಣ ಆಗಬಹುದು. ಆದ್ದರಿಂದ ಸೂಕ್ತ ವೈದ್ಯೋಪಚಾರ ಪಡೆದುಕೊಳ್ಳುವ ಬಗ್ಗೆ ಆದ್ಯತೆಯನ್ನು ನೀಡಿ.
ಯಾರು ಸ್ವಂತ ವ್ಯವಹಾರ, ಉದ್ಯಮ ಆರಂಭಿಸಬೇಕು ಎಂದು ಅಂದುಕೊಂಡಿರುತ್ತೀರೋ ಅಂಥವರಿಗೆ ಸೂಕ್ತ ವೇದಿಕೆ ದೊರೆಯಲಿದೆ. ಅಷ್ಟೇ ಅಲ್ಲ, ಸಂಬಂಧಿಕರು, ಸ್ನೇಹಿತರು ಹಣಕಾಸಿನ ಹೂಡಿಕೆ ಮಾಡುವ ಬಗ್ಗೆ ನಿಮ್ಮೆದುರು ಪ್ರಸ್ತಾವ ಮಾಡಲಿದ್ದಾರೆ. ಯಾರು ವಿದೇಶದಲ್ಲೇ ಉದ್ಯೋಗ ನೋಡಿಕೊಂಡು ಅಲ್ಲೇ ನೆಲೆಸಬೇಕು ಎಂದು ಬಯಸುತ್ತೀರೋ ಅಂಥವರ ಕನಸು ನೆರವೇರಲಿದೆ. ಈಗಾಗಲೇ ವಿದೇಶದಲ್ಲಿ ನೆಲೆಸಿರುವವರಿಗೆ ಉದ್ಯೋಗ ಬದಲಾವಣೆ ಮತ್ತು ಈಗಿರುವ ಅಧಿಕಾರ, ಸ್ಥಾನ- ಮಾನಗಳು ಮೇಲ್ದರ್ಜೆಗೆ ಏರುವಂಥ ಯೋಗ ಇದೆ. ನಿಮ್ಮಲ್ಲಿ ಕೆಲವರು ಇತರರ ಮಾತು ಕೇಳಿಕೊಂಡು ನಿಮಗೆ ಬರುವಂಥ ಅತ್ಯುತ್ತಮ ಉದ್ಯೋಗದ ಅವಕಾಶವೊಂದು ಕೈ ಬಿಡುವ ನಿರ್ಧಾರ ಮಾಡಲಿದ್ದೀರಿ. ಹೀಗೆ ಮಾಡದಂತೆ ಸರಿಯಾದ ವಿಶ್ಲೇಷಣೆಯನ್ನು ಮಾಡಿ, ತೀರ್ಮಾನವನ್ನು ಕೈಗೊಳ್ಳಿ. ಉದ್ಯಮ ಆರಂಭ, ವಿಸ್ತರಣೆ, ಹೊಸ ವ್ಯವಹಾರ ಮಾಡುವುದಕ್ಕೆ ಬ್ಯಾಂಕ್ ಗಳಲ್ಲಿ ಪ್ರಯತ್ನ ಮಾಡುವ ಮುನ್ನ ನಿಮ್ಮ ಸುತ್ತಮುತ್ತ ಇರುವವರೇ ಹಣ ಹೂಡುವ ಆಸಕ್ತಿ ತೋರಿಸಬಹುದಾ ಎಂದು ಪ್ರಯತ್ನಿಸಿ.
ನಿರೀಕ್ಷೆಯೇ ಮಾಡದ ರೀತಿಯಲ್ಲಿ ವಿವಾಹ ನಿಶ್ಚಯ ಆಗುವಂಥ ಯೋಗ ನಿಮ್ಮ ಪಾಲಿಗೆ ಇದೆ. ನಿಮ್ಮ ಸ್ನೇಹಿತರು ಅಥವಾ ಸ್ನೇಹಿತೆಯರ ಸಲುವಾಗಿ ವರ ಅಥವಾ ವಧು ಅನ್ವೇಷಣೆ ಮಾಡುವಾಗ ನಿಮಗೆ ಇಷ್ಟವಾಗುವಂಥ ವ್ಯಕ್ತಿ ಸಿಕ್ಕು, ಮದುವೆ ಆಗಬಹುದು. ಹೊಸದಾಗಿ ಪರಿಚಯ ಆದವರು ತಾವಾಗಿಯೇ ವಿವಾಹ ಪ್ರಸ್ತಾವವನ್ನು ಮಾಡಿ, ಅದನ್ನು ನೀವೂ ಒಪ್ಪಿಕೊಂಡು, ಮದುವೆ ಆಗಿಯೇ ಬಿಡುವ ಯೋಗ ಇದೆ. ಇನ್ನು ವಿವಾಹಿತರಿಗೆ ಮಕ್ಕಳ ವಿಚಾರವಾಗಿ ಸಂಗಾತಿ ಜತೆಗೆ ಅಭಿಪ್ರಾಯ ಭೇದಗಳು ಕಾಣಿಸಬಹುದು. ಮಕ್ಕಳ ಅನಾರೋಗ್ಯ ಸಮಸ್ಯೆಗಳು ಚಿಂತೆಗೆ ಕಾರಣ ಆಗಲಿದೆ. ಪ್ರೀತಿ- ಪ್ರೇಮದಲ್ಲಿ ಇರುವವರು ಮಾರ್ಚ್ ನಂತರದಲ್ಲಿ ಮನೆಯಲ್ಲಿ ವಿಷಯ ಪ್ರಸ್ತಾವ ಮಾಡಿದಲ್ಲಿ ಅದನ್ನು ಒಪ್ಪಿಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಪ್ರೇಮಿಗಳ ಮಧ್ಯೆ ಮನಸ್ತಾಪ ಬಂದಿದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳುವ ಮಾರ್ಗ ಗೋಚರ ಆಗಲಿದೆ. ಇನ್ನು ನಿಮ್ಮಲ್ಲಿ ಕೆಲವರಿಗೆ ಪ್ರವಾಸದ ವೇಳೆ ಪರಿಚಿತ ಆಗುವ ವ್ಯಕ್ತಿಯೊಬ್ಬರ ಜತೆಗೆ ಪ್ರೀತಿಯಲ್ಲಿ ಬೀಳುವ ಯೋಗವಿದೆ. ಒಟ್ಟಾರೆ ವಿವಾಹಕ್ಕೆ ಪ್ರಯತ್ನಿಸುತ್ತಿರುವವರಿಗೆ, ಪ್ರೀತಿಯಲ್ಲಿ ಇರುವವರಿಗೆ ಬಹಳ ಉತ್ತಮವಾದ ಸಮಯ ಇದಾಗಿರಲಿದೆ.
ಸರ್ಕಾರದ ಜತೆಗಿನ ವ್ಯವಹಾರಗಳಲ್ಲಿ ಕೃಷಿಕರಿಗೆ ಯಶಸ್ಸು ದೊರೆಯಲಿದೆ. ಜಮೀನಿಗೆ ಸಂಬಂಧಿಸಿದಂತೆ ಖಾತಾ ಬದಲಾವಣೆ, ಪೋಡಿ, ಸರ್ವೇ ಇಂಥದ್ದಕ್ಕೆ ಪ್ರಯತ್ನಿಸುತ್ತಿದ್ದು, ಈ ವರೆಗೆ ಅಡತಡೆಗಳು ಎದುರಾಗಿದ್ದಲ್ಲಿ ನಿವಾರಣೆ ಆಗುತ್ತದೆ. ಇನ್ನು ಹೈನುಗಾರಿಕೆಯಲ್ಲಿ ತೊಡಗಿರುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದ್ದು, ರಾಸುಗಳನ್ನು ಹಾಗೂ ನಿಮ್ಮ ಕೆಲಸಕ್ಕೆ ಬೇಕಾದ ಸಲಕರಣೆಗಳನ್ನು ಖರೀದಿಸಿ ತರುವಂಥ ಯೋಗ ಇದೆ. ಆದರೆ ನಿಮ್ಮ ಪಾಲಿಗೆ ಎಚ್ಚರಿಕೆ ಏನೆಂದರೆ, ಈ ವರ್ಷ ಯಾರಿಗೂ ಜಾಮೀನಾಗಿ ನಿಲ್ಲಬೇಡಿ. ಹೀಗೆ ಮಾಡಿದರೆ ಕೈಯಿಂದ ಹಣ ಕಳೆದುಕೊಳ್ಳಬೇಕಾಗುತ್ತದೆ.
ವಿದೇಶಗಳ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವುದಕ್ಕೆ ಅಥವಾ ಉನ್ನತ ವಿದ್ಯಾಭ್ಯಾಸಕ್ಕೆ ಬ್ಯಾಂಕ್ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ದೊರೆಯಲಿದೆ. ಒಂದು ವೇಳೆ ವೀಸಾಗಾಗಿ ಪ್ರಯತ್ನಿಸುತ್ತಿದ್ದಲ್ಲಿ ಅದಕ್ಕೆ ಅಡೆತಡೆಗಳು ಎದುರಾಗಿದೆ ಅಂತಾದರೆ ನಿವಾರಣೆ ಆಗುತ್ತದೆ. ನಿಮಗೆ ಸಂಬಂಧಪಡದ ವಿಚಾರಗಳಲ್ಲಿ ಮೂಗು ತೂರಿಸಿಕೊಂಡು ಹೋಗಬೇಡಿ. ಸ್ನೇಹಿತರು ಕಷ್ಟದಲ್ಲಿದ್ದಾರೆ, ಅವರಿಗೆ ಸಹಾಯ ಮಾಡುತ್ತೇನೆ ಎಂದು ನೀವೇನಾದರೂ ಮುಂದಾದಲ್ಲಿ ಅವರ ಸಮಸ್ಯೆ ನಿವಾರಣೆಯೂ ಆಗಲ್ಲ, ಜತೆಗೆ ನೀವೂ ಕಷ್ಟದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೀರಿ. ಅದೇ ರೀತಿ ನಿಮಗೆ ಮಾಹಿತಿ ಇಲ್ಲದ ವಿಷಯಗಳಲ್ಲಿ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳಲ್ಲಿ ಕಮೆಂಟ್ ಮಾಡಬೇಡಿ,
ಇತರರಿಗೆ ಸುಲಭವಾಗಿ ಅರ್ಥವಾಗದ ಸನ್ನಿವೇಶ, ಪರಿಸ್ಥಿತಿಗಳು ನಿಮಗೆ ಬೇಗ ಅರ್ಥವಾಗಲಿದೆ. ಆದ್ದರಿಂದ ಈ ವರ್ಷ ನಿಮಗೆ ನೀವೇ ಒಳ್ಳೆಯದೋ ಅಥವಾ ಕೆಟ್ಟದ್ದೋ ಮಾಡಿಕೊಳ್ಳುವುದಾಗುತ್ತದೆ. ಈ ಹಿಂದೆ ಏನೆಲ್ಲ ನಡೆದಿತ್ತು ಅವೆಲ್ಲವನ್ನೂ ಮರೆತು ಮುಂದಕ್ಕೆ ಹೆಜ್ಜೆ ಹಾಕುವ ಬಗ್ಗೆ ಆಲೋಚನೆಯನ್ನು ಮಾಡಿ. ಇದೇ ಮೊದಲ ಬಾರಿಗೆ ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಸಿಗುವ ಅವಕಾಶಗಳು ಹೆಚ್ಚಿವೆ. ಇನ್ನು ಸ್ವಂತ ವ್ಯವಹಾರ, ಉದ್ಯಮ ಆರಂಭಿಸಬೇಕು ಎಂದಿರುವವರಿಗೂ ಉತ್ತಮವಾದ ಸಮಯ ಇದು. ಕುಟುಂಬದಲ್ಲಿ ನಿಮ್ಮ ಮಾತಿಗೆ ಮನ್ನಣೆ ದೊರೆಯುತ್ತದೆ. ಮಂಡಿ ನೋವು, ಬೆನ್ನು ನೋವು, ಚರ್ಮದ ಅಲರ್ಜಿ, ಆಸ್ತಮಾ ಇಂಥ ಆರೋಗ್ಯ ಸಮಸ್ಯೆಗಳು ಕಾಣಿಸಬಹುದು ಅಥವಾ ಈಗಾಗಲೇ ಇದ್ದಲ್ಲಿ ಉಲ್ಬಣ ಆಗಬಹುದು, ಜಾಗ್ರತೆಯಿಂದ ಇರಿ.
ಆದಿತ್ಯ ಹೃದಯ ಸ್ತೋತ್ರದ ಪಠಣ ಅಥವಾ ಶ್ರವಣ ಮಾಡಿ.