Venus in Virgo: ಏನಿದು ಬುಧ- ಶುಕ್ರ ಪರಿವರ್ತನೆ ಯೋಗ? ಇದರ ಪರಿಣಾಮ ಏನಾಗಲಿದೆ?
ಶುಕ್ರ ಗ್ರಹವು ನೀಚ ಸ್ಥಾನವಾದ ಕನ್ಯಾ ರಾಶಿಗೆ ಪ್ರವೇಶ ಮಾಡಲಿದೆ. ಅದೇ ಸಮಯದಲ್ಲಿ ತುಲಾ ರಾಶಿಗೆ ಬುಧ ಗ್ರಹ ಪ್ರವೇಶಿಸಲಿದೆ. ಹೀಗೆ ಪರಸ್ಪರ ರಾಶ್ಯಾಧಿಪತಿಗಳು ಒಬ್ಬರು ಇನ್ನೊಬ್ಬರ ಮನೆಯಲ್ಲಿ ಇರುವುದನ್ನು ಪರಿವರ್ತನೆ ಯೋಗ ಎನ್ನಲಾಗುತ್ತದೆ. ಈ ಸಮಯದಲ್ಲಿ ಹುಟ್ಟುವಂಥವರಿಗೆ ಈ ಪರಿವರ್ತನೆ ಯೋಗದ ಫಲ ದೊರೆಯುವುದರ ಜೊತೆಗೆ ಹನ್ನೆರಡು ರಾಶಿಗಳ ಮೇಲೂ ಪ್ರಭಾವ ಇರಲಿದೆ. ಏನು ಆ ಪ್ರಭಾವ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದೇ ಅಕ್ಟೋಬರ್ 9ನೇ ತಾರೀಕಿನಂದು ಶುಕ್ರ ಗ್ರಹ ಕನ್ಯಾ ರಾಶಿಯನ್ನು ಪ್ರವೇಶ ಮಾಡಲಿದ್ದು, ನವೆಂಬರ್ 2ನೇ ತಾರೀಕಿನ ತನಕ ಅದೇ ರಾಶಿಯಲ್ಲಿ ಸಂಚರಿಸಲಿದೆ. ಇನ್ನು ಅಕ್ಟೋಬರ್ 2ನೇ ತಾರೀಕಿನಂದು ತುಲಾ ರಾಶಿಯನ್ನು ಪ್ರವೇಶಿಸುವ ಬುಧ ಗ್ರಹವು ಅಕ್ಟೋಬರ್ 24ನೇ ತಾರೀಕಿನ ತನಕ ಅದೇ ರಾಶಿಯಲ್ಲಿ ಇರಲಿದೆ. ಯಾವಾಗ ಶುಕ್ರ ಗ್ರಹವು ಕನ್ಯಾ ರಾಶಿ ಪ್ರವೇಶಿಸುತ್ತದೋ ಆಗ ನೀಚ ಸ್ಥಿತಿಯನ್ನು ತಲುಪುತ್ತದೆ. ಇಲ್ಲಿ ನೆನಪಿರಬೇಕಾದ ಸಂಗತಿ ಏನೆಂದರೆ, ಯಾರದೇ ಜನ್ಮ ಜಾತಕದಲ್ಲಿ ಶುಕ್ರ ಕನ್ಯಾ ರಾಶಿಯಲ್ಲಿ ಇದೆ ಎಂದಾದರೆ ಅದು ನೀಚ ಶುಕ್ರನ ಫಲ ನೀಡುತ್ತದೆ ಎಂದಾಗುತ್ತದೆ. ಅಂಥವರು ವ್ಯಾಪಾರ- ವ್ಯವಹಾರದಲ್ಲಿ ಯಶಸ್ಸು ಕಾಣುವುದು ಬಹುತೇಕ ಅಸಾಧ್ಯ. ಇನ್ನು ಅಂಥವರು ಷೇರು ಮಾರ್ಕೆಟ್ ವ್ಯವಹಾರಗಳಿಗೆ ಕೈ ಹಾಕಲು ಹೋಗಬಾರದು. ಇನ್ನು ಇದೇ ಅವಧಿಯಲ್ಲಿ ಒಂದು ವಿಶೇಷವಿದೆ. ಅದೇನೆಂದರೆ ಪರಿವರ್ತನೆ ಯೋಗ ಸೃಷ್ಟಿ ಆಗುತ್ತದೆ.
ಇಲ್ಲಿ ಪರಿವರ್ತನೆ ಯೋಗ ಅಂದರೆ, ಕನ್ಯಾ ರಾಶಿಯ ಅಧಿಪತಿ ಬುಧ ತುಲಾ ರಾಶಿಯಲ್ಲೂ ಹಾಗೂ ತುಲಾ ರಾಶಿಯ ಅಧಿಪತಿ ಶುಕ್ರ ಕನ್ಯಾ ರಾಶಿಯಲ್ಲೂ ಇರುವುದನ್ನು ಪರಿವರ್ತನೆ ಯೋಗ ಎನ್ನಲಾಗುತ್ತದೆ. ಹೀಗೆ ಪರಿವರ್ತನೆ ಆಗುವುದರಿಂದ ಶುಕ್ರನ ನೀಚತ್ವದ ಪ್ರಭಾವವು ಅಕ್ಟೋಬರ್ 9ರಿಂದ 24ನೇ ತಾರೀಕಿನ ತನಕ ಇರುವುದಿಲ್ಲ. ಸಾಮಾನ್ಯವಾಗಿ ಶುಕ್ರ ಗ್ರಹ ನೀಚ ಸ್ಥಾನದಲ್ಲಿ ಇದ್ದಾಗ ಜನಿಸಿದವರ ಮದುವೆಗೆ ಸಂಬಂಧಿಸಿದಂತೆ ನಾನಾ ಅಡೆ-ತಡೆಗಳು, ಗಂಡುಮಕ್ಕಳ ಜಾತಕದಲ್ಲಿ ಈ ರೀತಿ ಸ್ಥಿತಿ ಇದ್ದಲ್ಲಿ ವೀರ್ಯಾಣುಗಳ ಸಂಖ್ಯೆಯಲ್ಲಿ ಕೊರತೆ ಕಾಣಿಸಿಕೊಂಡರೆ, ಹೆಣ್ಣುಮಕ್ಕಳ ಜಾತಕದಲ್ಲಿ ಹೀಗಿದ್ದರೆ ಅಂಡಾಣುವಿಗೆ ಸಂಬಂಧಿಸಿದ ತೊಂದರೆಗಳು ಇರುತ್ತವೆ. ವ್ಯಾಪಾರ- ವ್ಯವಹಾರ ಮಾಡುವುದಕ್ಕೆ ಮುಂದಾದಲ್ಲಿ ಪದೇಪದೇ ನಷ್ಟ ಆಗುವುದು ಅಥವಾ ನಿರೀಕ್ಷಿತ ಮಟ್ಟದ ಅಥವಾ ಉತ್ತೇಜನ ಆಗುವ ರೀತಿಯಲ್ಲಿ ಲಾಭ ಬರುವುದಿಲ್ಲ.
ಆದರೆ, ಹೀಗೆ ಪರಿವರ್ತನೆ ಯೋಗ ಆಗುವುದರಿಂದ ಶುಕ್ರನ ನೀಚತ್ವದ ಪ್ರಭಾವವನ್ನು ಕನ್ಯಾ ರಾಶಿಯವರು ಅನುಭವಿಸಬೇಕಾಗಿರುವುದಿಲ್ಲ. ಶುಕ್ರ ನೀಚ ಸ್ಥಿತಿಗೆ ತಲುಪಿದಾಗ ಸ್ತ್ರೀಯರ ವಿಚಾರದಲ್ಲಿ ವೈಮನಸ್ಯ, ಹಣಕಾಸು ವಿಚಾರದಲ್ಲಿ ಜಗಳ- ಕಲಹ, ಲೈಂಗಿಕ ವಿಚಾರಗಳಲ್ಲಿನ ಅಸಂತೃಪ್ತಿ ಹಾಗೂ ಅಸಮಾಧಾನಗಳು ಹೊರಬರುವುದು, ಡೈವೋರ್ಸ್ ಪ್ರಮಾಣ ಹೆಚ್ಚಾಗುವುದು ಈ ರೀತಿಯಾದದ್ದೆಲ್ಲ ಫಲಗಳು ಕಾಣಿಸಿಕೊಳ್ಳುತ್ತವೆ. ಮನಸ್ತಾಪ- ಅಭಿಪ್ರಾಯ ಭೇದ ಇರುವ ದಂಪತಿ ಇದ್ದಲ್ಲಿ ನೀಚ ಶುಕ್ರ ಸಂಚಾರ ಇರುವ ಅವಧಿಯಲ್ಲಿ ಸ್ವಲ್ಪ ತಾಳ್ಮೆಯನ್ನು ವಹಿಸಬೇಕು.
ಲಕ್ಷ್ಮೀನಾರಾಯಣ ಯೋಗ:
ಅದೇ ಒಂದೇ ರಾಶಿಯಲ್ಲಿ ಬುಧ ಹಾಗೂ ಶುಕ್ರ ಗ್ರಹ ಇದ್ದಲ್ಲಿ ಅದನ್ನು ಲಕ್ಷ್ಮೀನಾರಾಯಣ ಯೋಗ ಎನ್ನಲಾಗುತ್ತದೆ. ಗಂಡಾಗಲಿ ಅಥವಾ ಹೆಣ್ಣಾಗಲಿ ಹೀಗೆ ಯಾರ ಜಾತಕದಲ್ಲಿ ಒಂದೇ ರಾಶಿಯಲ್ಲಿ ಬುಧ ಹಾಗೂ ಶುಕ್ರ ಗ್ರಹ ಒಂದೇ ಕಡೆ ಇರುತ್ತದೋ ಅಂಥವರ ದಾಂಪತ್ಯ ಜೀವನ ಉತ್ತಮವಾಗಿರುತ್ತದೆ. ಗಂಡ- ಹೆಂಡತಿ ಮಧ್ಯೆ ಅನ್ಯೋನ್ಯತೆ ಇರುತ್ತದೆ. ಬುಧ ಅಂದರೆ ನಾರಾಯಣ ಹಾಗೂ ಶುಕ್ರ ಅಂದರೆ ಲಕ್ಷ್ಮೀ. ಹೀಗೆ ಈ ಎರಡೂ ಗ್ರಹಗಳು ಒಟ್ಟಿಗೆ ಒಂದೇ ರಾಶಿಯಲ್ಲಿ ಇರುವುದನ್ನು ಈ ಹೆಸರಿನಿಂದ ಕರೆಯಲಾಗುತ್ತದೆ.
ನೀಚಭಂಗ ರಾಜಯೋಗ:
ಇನ್ನು ಕನ್ಯಾ ರಾಶಿಯಲ್ಲಿ ಶುಕ್ರ ಗ್ರಹ ಇರುವಾಗ ಅದೇ ರಾಶಿಯಲ್ಲಿ ಬುಧ ಗ್ರಹವೂ ಇದ್ದಲ್ಲಿ ಆಗ ಶುಕ್ರನ ನೀಚತ್ವ ಭಂಗವಾಗಿ ನೀಚಭಂಗ ರಾಜಯೋಗ ಎನಿಸಿಕೊಳ್ಳುತ್ತದೆ. ಯಾವುದೇ ನೀಚ ಸ್ಥಿತಿಯ ಗ್ರಹದ ಜೊತೆಗೆ ಆ ಗ್ರಹ ಇರುವಂಥ ರಾಶಿಯ ಅಧಿಪತಿಯೋ ಅಥವಾ ಆ ರಾಶಿಯಲ್ಲಿ ಉಚ್ಚ ಸ್ಥಿತಿ ತಲುಪುವಂಥ ಗ್ರಹವೋ ಯುತಿಯಾದಲ್ಲಿ ನೀಚಭಂಗ ರಾಜಯೋಗ ಎನಿಸಿಕೊಳ್ಳುತ್ತದೆ.
ಇದನ್ನೂ ಓದಿ: ಹಳೆಯದ್ದು ಬಿಸಾಕಿ ಹೊಸ ಪರ್ಸ್ ತೆಗೆದುಕೊಳ್ಳುವ ಮುನ್ನ ಈ ವಿಷ್ಯ ತಿಳಿದುಕೊಳ್ಳಿ
ಎಚ್ಚರಿಕೆ ಮುಖ್ಯ:
ಅಕ್ಟೋಬರ್ 24ರ ನಂತರ ನವೆಂಬರ್ 2ನೇ ತಾರೀಕಿನ ತನಕ ಶುಕ್ರ ನೀಚ ಸ್ಥಿತಿಯ ಪ್ರಭಾವ ಎಲ್ಲ ರಾಶಿಯವರ ಮೇಲೂ ಇರುತ್ತದೆ. ಈ ಅವಧಿಯಲ್ಲಿ ಜನ ಭಾವನಾತ್ಮಕವಾಗಿ ಯೋಚಿಸುವುದಕ್ಕಿಂತ ವಾಸ್ತವವಾದಿಗಳಾಗಿ ಆಲೋಚಿಸುವುದಕ್ಕೆ ಆರಂಭಿಸುತ್ತಾರೆ. ಸಣ್ಣ- ಪುಟ್ಟದಾಗಿ ಆರಂಭವಾಗುವ ದಾಂಪತ್ಯ ಕಲಹವೂ ವಿವಾಹ ವಿಚ್ಛೇದನದ ತನಕ ಹೋಗಬಹುದು. ಇನ್ನು ಪ್ರೇಮಿಗಳ ಮಧ್ಯೆ ಸಣ್ಣ ಪುಟ್ಟ ವಿಚಾರಗಳು ಬೇರ್ಪಡುವ ತನಕ ಹೋಗಬಹುದು.
ಯಾರಿಗೆ ಜನ್ಮ ಜಾತಕದಲ್ಲೂ ಶುಕ್ರ ಕನ್ಯಾ ರಾಶಿಯಲ್ಲಿ ಇರುತ್ತದೋ ಅಂಥವರು ಈ ಅವಧಿಯಲ್ಲಿ ಮತ್ತೂ ಜಾಗ್ರತೆ ವಹಿಸಬೇಕಾಗುತ್ತದೆ. ಹೂಡಿಕೆ- ವ್ಯವಹಾರ, ವ್ಯಾಪಾರದಲ್ಲಿ ಅತಿ ಮುಖ್ಯ ನಿರ್ಧಾರಗಳನ್ನು ಸಾಧ್ಯವಾದಷ್ಟೂ ಈ ಸಮಯದಲ್ಲಿ ತೆಗೆದುಕೊಳ್ಳದಿರುವುದು ಕ್ಷೇಮ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




