Saturn Transit: ನಿಮ್ಮದು ಈ ರಾಶಿಯೋ ಲಗ್ನವೋ ಆಗಿದ್ದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು ಎನ್ನುತ್ತಾರೆ ಜ್ಯೋತಿಷಿಗಳು
ಕುಂಭ ರಾಶಿಯಲ್ಲಿ ಶನಿ ಸಂಚಾರ ಮಾಡುತ್ತಿದ್ದು, ಇದರಿಂದ ಕರ್ಕಾಟಕ ರಾಶಿ ಹಾಗೂ ಲಗ್ನದವರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಖ್ಯಾತ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ.
ಕಳೆದ ಏಪ್ರಿಲ್ 28ನೇ ತಾರೀಕಿನಂದು ಶನಿಯು (Saturn) ಕುಂಭ ರಾಶಿಯನ್ನು ಪ್ರವೇಶಿಸಿದೆ. ಆ ಗ್ರಹಕ್ಕೆ ಬಲವಾದ ಮನೆ ಕುಂಭ ರಾಶಿ. ಆದರೆ ಕರ್ಕಾಟಕ ರಾಶಿಯವರು, ಲಗ್ನದವರು ಈ ಸಂಚಾರದ ಅವಧಿಯಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ ಉಡುಪಿಯ ಕಾಪು ಮೂಲದ ಪ್ರಖ್ಯಾತ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ. ಈ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಜತೆಗೆ ಎಕ್ಸ್ಕ್ಲೂಸಿವ್ ಆಗಿ ಮಾತನಾಡಿದ ಅವರು, ಕರ್ಕಾಟಕ ರಾಶಿಯಿಂದ ಎಂಟನೇ ಮನೆಯಾದ ಕುಂಭ ರಾಶಿಯಲ್ಲಿ ಶನಿ ಸಂಚಾರ ಇರುವಾಗ ನಿಯಂತ್ರಣ ಬಹಳ ಅಗತ್ಯ. ಅದರಲ್ಲೂ ಮನಸ್ಸಿಗೆ ಸಂಬಂಧಿಸಿದಂತೆ, ಹವ್ಯಾಸ- ಅಭ್ಯಾಸ, ಗುಣ- ಸ್ವಭಾವದಲ್ಲಿ ತುಂಬ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದಲ್ಲಿ ತಾವಾಗಿಯೇ ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಾರೆ ಎಂದು ಹೇಳಿದರು.
ವಿಪರೀತ ಮಾತನಾಡುವವರಿಗೆ ಮಾತಿನಲ್ಲಿ ನಿಯಂತ್ರಣ, ಸಿಕ್ಕಾಪಟ್ಟೆ ಖರ್ಚು ಮಾಡುವವರಿಗೆ ವೆಚ್ಚದಲ್ಲಿ ಹತೋಟಿ, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುವವರು ಅದರಲ್ಲಿ, ತುಂಬ ವೇಗವಾಗಿ ವಾಹನ ಚಲಾಯಿಸುವವರು ಅದರಲ್ಲಿ ಹತೋಟಿ ಇಟ್ಟುಕೊಳ್ಳುವುದು ಮುಖ್ಯವಾಗುತ್ತದೆ. ಈ ಸಲಹೆಯನ್ನು ಮೇಲ್ನೋಟಕ್ಕೆ ಕಾಣುವಷ್ಟು ಸಲೀಸು ಅಂದುಕೊಳ್ಳಬೇಡಿ. ಮನಸ್ಸನ್ನು ಹದ್ದು ಮೀರದಂತೆ ತಡೆಯುವುದು ಸುಲಭದ ಸಂಗತಿಯಲ್ಲ. ತುಂಬ ಸರಳವಾಗಿ ಹೇಳುವುದಾದರೆ ಯಾವುದೂ ಅತಿಯಾಗಿ ಬೇಡ. ಊಟವಿರಲಿ, ಪ್ರಯಾಣ, ಸುಖವಿರಲಿ. ಎಲ್ಲದಕ್ಕೂ ಒಂದು ಮಿತಿ ಇರಲಿ.
ಇಂಥ ಸ್ಥಿತಿಗೆ ನಿಯಂತ್ರಣವೇ ಪರಿಹಾರ. ಆದರೂ ರಂಗಪೂಜೆ, ವಾಯಸ್ತುತಿ ಹೋಮ, ಆಂಜನೇಯನ ಆರಾಧನೆ, ಶನೈಶ್ಚರ ದೇಗುಲ ದರ್ಶನ- ಆರಾಧನೆ ಮೊದಲಾದವು ಪರಿಹಾರ ಆಗಬಲ್ಲವು. ಆದರೆ ಅದನ್ನು ಮಾಡುವ ವ್ಯಕ್ತಿಗೆ ನಂಬಿಕೆ ಬಹಳ ಮುಖ್ಯ ಆಗುತ್ತದೆ. ಜನ್ಮ ಜಾತಕದಲ್ಲೂ ಶನಿಯು ದುರ್ಬಲನಾಗಿದ್ದಲ್ಲ್ಲಿ, ಜತೆಗೆ ರಾಶಿಯೋ ಲಗ್ನವೋ ಕರ್ಕಾಟಕವಾಗಿದ್ದಲ್ಲಿ ಪರಿಹಾರದ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡುವುದು ಉತ್ತಮ.
ನೆನಪಿಟ್ಟುಕೊಳ್ಳಿ, ಒಮ್ಮೆ ಜನ್ಮ ಜಾತಕವನ್ನು ನೋಡಿಕೊಳ್ಳಿ. ನಿಮ್ಮದು ರಾಶಿ ಅಥವಾ ಲಗ್ನ ಕರ್ಕಾಟಕವಾಗಿದ್ದಲ್ಲಿ ಕುಂಭ ರಾಶಿಯಲ್ಲಿ ಶನಿ ಸಂಚರಿಸುವಾಗ ತುಂಬ ಎಚ್ಚರಿಕೆಯಿಂದ ಇರಿ. ಯಾವುದೇ ಅನಾಹುತ ಆಗದಂತೆ ಮುಂಜಾಗ್ರತೆಯನ್ನು ವಹಿಸಿ ಎನ್ನುತ್ತಾರೆ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ.
ಜ್ಯೋತಿಷ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Saturn Transit: 30 ವರ್ಷಗಳ ನಂತರ ಕುಂಭ ರಾಶಿಗೆ ಶನಿ ಪ್ರವೇಶ; ಏ. 28ರ ನಂತರ ಯಾವ ರಾಶಿಗೆ ಏನಿದೆ ವಿಶೇಷ?