
2026ನೇ ಇಸವಿಯಲ್ಲಿ ಇಡೀ ವರ್ಷ ಶನಿ ಗ್ರಹ ನಿಮ್ಮ ರಾಶಿಗೆ 7ನೇ ಮನೆಯಲ್ಲಿ ಸಂಚಾರ ಮಾಡುತ್ತದೆ. ಇನ್ನು ಗುರು ಗ್ರಹವು ಜನವರಿಯಿಂದ ಜೂನ್ ಒಂದನೇ ತಾರೀಕಿನ ತನಕ 10ನೇ ಮನೆ, ಅಂದರೆ ಕರ್ಮ ಸ್ಥಾನದಲ್ಲಿ ಇರುತ್ತದೆ. ಆ ನಂತರ ಅಕ್ಟೋಬರ್ 31ನೇ ತಾರೀಕಿನವರೆಗೆ ಲಾಭ ಸ್ಥಾನ, ಅಂದರೆ 11ನೇ ಮನೆಯಾದ ಕರ್ಕಾಟಕ ರಾಶಿಯಲ್ಲಿ ಸಂಚರಿಸುತ್ತದೆ. ನವೆಂಬರ್ ಹಾಗೂ ಡಿಸೆಂಬರ್ ಈ ಎರಡೂ ತಿಂಗಳು, ವ್ಯಯ ಸ್ಥಾನ ಅಂದರೆ 12ನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಆಗುತ್ತದೆ. ಇನ್ನು ಬಹುತೇಕ ಇಡೀ ವರ್ಷ ರಾಹು ಗ್ರಹವು ನಿಮ್ಮ ರಾಶಿಗೆ 6ನೇ ಮನೆ ಆಗುವಂಥ ಕುಂಭದಲ್ಲಿಯೂ ಹಾಗೂ ಕೇತು ಗ್ರಹವು 12ನೇ ಮನೆ, ಅಂದರೆ ವ್ಯಯ ಸ್ಥಾನದಲ್ಲಿ ಸಂಚರಿಸುತ್ತದೆ. 2026ನೇ ಇಸವಿಯ ಡಿಸೆಂಬರ್ 5ನೇ ತಾರೀಕಿಗೆ ರಾಹು ಗ್ರಹವು 5ನೇ ಮನೆಯಾದ ಮಕರ ರಾಶಿಗೂ ಹಾಗೂ ಕೇತು ಗ್ರಹ ನಿಮ್ಮ ರಾಶಿಗೆ 11ನೇ ಮನೆಗೂ ಪ್ರವೇಶಿಸುತ್ತದೆ.
ಉತ್ತರಾ ಫಲ್ಗುಣಿ ನಕ್ಷತ್ರದ ಎರಡು, ಮೂರು, ನಾಲ್ಕನೇ ಪಾದ, ಹಸ್ತಾ ನಕ್ಷತ್ರದ ನಾಲ್ಕೂ ಪಾದ, ಚಿತ್ತಾ ನಕ್ಷತ್ರದ ಒಂದು, ಎರಡನೇ ಪಾದ ಸೇರಿ ಕನ್ಯಾ ರಾಶಿ ಆಗುತ್ತದೆ. ಈ ರಾಶಿಯ ಅಧಿಪತಿ ಬುಧ.
ಇಡೀ ವರ್ಷ ನಿಮ್ಮ ರಾಶಿಗೆ ಏಳನೇ ಮನೆಯಲ್ಲಿ ಶನೈಶ್ಚರ ಸಂಚಾರ ಇರುತ್ತದೆ. ಕನ್ಯಾ ರಾಶಿಯವರಿಗೆ ಸಂತಾನ ಹಾಗೂ ರಿಪು ಸ್ಥಾನದ ಅಧಿಪತಿ ಆಗುವಂಥ ಶನಿ ಗ್ರಹವು ಏಳನೇ ಮನೆಯಲ್ಲಿ ಇರುತ್ತದೆ. ಈ ಅವಧಿಯಲ್ಲಿ ಪಾರ್ಟನರ್ ಷಿಪ್ ವ್ಯವಹಾರದಲ್ಲಿ ತೊಡಗಿದವರಿಗೆ ಲಾಭದಲ್ಲಿ ಇಳಿಕೆ ಆಗಲಿದೆ. ಅಥವಾ ಲೆಕ್ಕಪತ್ರ- ಹಣಕಾಸು ವಿಚಾರಕ್ಕೆ ಅಭಿಪ್ರಾಯ ಭೇದ ಉದ್ಭವಿಸಲಿದೆ. ಇಷ್ಟು ಸಮಯ ನಿಮ್ಮ ಜತೆಗೆ ಇದ್ದು, ನೀವು ಮಾಡುವಂಥ ವ್ಯವಹಾರ- ವ್ಯಾಪಾರ ತಿಳಿದುಕೊಂಡಂಥವರಿಂದ ಬೇರ್ಪಡುವಂತೆ ಆಗಲಿದೆ. ಇನ್ನು ನೀವು ಯಾರ ಬಳಿ ಅಂತರಂಗದ ವಿಚಾರಗಳನ್ನು ಹಂಚಿಕೊಂಡಿರುತ್ತೀರಿ ಅಂಥ ವ್ಯಕ್ತಿಗಳು ನಿಮ್ಮ ಬಗ್ಗೆ ಅಪಪ್ರಚಾರ ಮಾಡುವ ಸಾಧ್ಯತೆಗಳಿವೆ. ಅಥವಾ ಅವರಾಗಿಯೇ ನಿಮ್ಮಿಂದ ಅಂತರ ಕಾಯ್ದುಕೊಳ್ಳುವುದರಿಂದ ನಾನಾ ಅನುಮಾನಗಳು ನಿಮ್ಮಲ್ಲಿ ಮೂಡಲಿವೆ. ಉದ್ಯೋಗ- ವ್ಯವಹಾರದ ಸಲುವಾಗಿ ವಿದೇಶಕ್ಕೆ ತೆರಳಬೇಕು ಎಂದುಕೊಂಡವರಿಗೆ ನಾನಾ ಬಗೆಯಲ್ಲಿ ಅಡೆತಡೆ ಕಾಣಿಸಿಕೊಳ್ಳಲಿದೆ. ದೊಡ್ಡ ಮೊತ್ತದ ಪ್ರಾಜೆಕ್ಟ್ ನಲ್ಲಿ ತೊಡಗಿರುವವರಿಗೆ ಹಣಕಾಸಿನ ಹರಿವು ಅಂದುಕೊಂಡಷ್ಟು ಸರಾಗವಾಗಿ ಆಗದೆ ಹೆಚ್ಚಿನ ಬಡ್ಡಿ ದರಕ್ಕೆ ಸಾಲ ಮಾಡಬೇಕಾದ ಪರಿಸ್ಥಿತಿ ಉದ್ಭವಿಸಲಿದೆ. ಪೊಸೆಸಿವ್ ನಿಂದ ಸಂಬಂಧಗಳಲ್ಲಿ ಬಿರುಕು ಕಾಣಿಸಿಕೊಂಡು, ಅನುಮಾನ ಉದ್ಭವಿಸದಂತೆ ನೋಡಿಕೊಳ್ಳಿ. ಮಕ್ಕಳ ವಿವಾಹಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಒಂದಲ್ಲ ಒಂದು ಕಾರಣದಿಂದ ಸಂಪೂರ್ಣವಾಗಿ ತೊಡಗಿಕೊಳ್ಳುವುದಕ್ಕೆ ಸಾಧ‌್ಯವಾಗದೇ ಹೋಗಬಹುದು. ಎಲ್ಲ ವಿಚಾರಗಳಲ್ಲಿ ಪ್ಲಾನಿಂಗ್ ಹಾಗೂ ಅದರ ಸರಿಯಾದ ಅನುಷ್ಠಾನಕ್ಕೆ ಲಕ್ಷ್ಯ ನೀಡಿ.
ಹತ್ತನೇ ಮನೆಯಲ್ಲಿ ಗುರು ಸಂಚಾರದ ಅವಧಿಯಾದ ಜನವರಿಯಿಂದ ಜೂನ್ ಒಂದನೇ ತಾರೀಕಿನ ತನಕ ಉದ್ಯೋಗ- ವೃತ್ತಿ ಜೀವನದಲ್ಲಿ ಮಿಶ್ರ ಫಲಿತಾಂಶಗಳನ್ನು ಕಾಣಲಿದ್ದೀರಿ. ನೀವು ಹಾಕಿದ ಶ್ರಮಕ್ಕೆ ಆರ್ಥಿಕ ರೀತಿಯಲ್ಲಿ ಫಲಿತಾಂಶ ಸಿಗದಿರುತ್ತದೆ. ಆದರೆ ಹೆಸರು ತಂದುಕೊಡಲಿದೆ. ನೀವು ನಿರ್ವಹಿಸುವ ಜವಾಬ್ದಾರಿಯಿಂದ ಬೇರೆಯದನ್ನು ನೀಡಬಹುದು, ಬೇರೆ ವಿಭಾಗಕ್ಕೆ- ಪ್ರಾಜೆಕ್ಟ್ ಗೆ ವರ್ಗಾವಣೆ ಆಗಲಿದೆ. ಮನೆಯ ರೆನೊವೇಷನ್, ಇಂಟೀರಿಯರ್ ಡಿಸೈನ್ ಇಂಥವಕ್ಕೆ ಹೆಚ್ಚಿನ ಖರ್ಚನ್ನು ಮಾಡಲಿದ್ದೀರಿ. ಆದರೆ ಸರಿಯಾದ ಬಜೆಟ್- ಪ್ಲಾನಿಂಗ್ ಇಟ್ಟುಕೊಂಡು ಅದರಂತೆಯೇ ನಡೆದುಕೊಳ್ಳಿ. ಜೂನ್ ನಿಂದ ಅಕ್ಟೋಬರ್ ತನಕ ಹನ್ನೊಂದನೇ ಮನೆಯಲ್ಲಿ ಗುರು ಸಂಚಾರ ಅವಧಿಯಲ್ಲಿ ಹಣಕಾಸಿನ ಹರಿವು ಸರಾಗವಾಗಿ ಆಗಲಿದೆ. ಮನೆ ನಿರ್ಮಾಣ, ಸೈಟು ಖರೀದಿ, ವಾಹನ ಖರೀದಿ ಸೇರಿದಂತೆ ನೀವು ಯಾವ ವಿಚಾರಕ್ಕೆ ಪ್ರಯತ್ನ ಮಾಡಲಿದ್ದೀರಿ ಅದಯ ಸಾಧ್ಯವಾಗಲಿದೆ. ವ್ಯಾಪಾರ- ವ್ಯವಹಾರಗಳು ಕೈ ಹಿಡಿಯಲಿವೆ. ನಿಮಗೆ ಬರಬೇಕಾದ ಹಣ ಬಾಕಿ ವಸೂಲಿ ಮಾಡುವುದಕ್ಕೆ ಸಾಧ್ಯವಾಗಲಿದೆ. ಮದುವೆಗೆ ಪ್ರಯತ್ನ ಮಾಡುತ್ತಿರುವವರಿಗೆ ಸೂಕ್ತ ಸಂಬಂಧ ದೊರೆಯಲಿದೆ. ನಾನಾ ಶುಭ ಕಾರ್ಯಗಳು ಈ ಅವಧಿಯಲ್ಲಿ ನಡೆಯಲಿವೆ. ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ವ್ಯಯ ಸ್ಥಾನವಾದ ಹನ್ನೆರಡನೇ ಮನೆಯಲ್ಲಿ ಗುರು ಸಂಚಾರ ಆಗುವುದರಿಂದ ಖರ್ಚು- ವೆಚ್ಚಗಳು ಹೆಚ್ಚಾಗಲಿವೆ. ವೈದ್ಯಕೀಯ ವೆಚ್ಚಗಳು, ಕೋರ್ಟ್- ಕಚೇರಿಗೆ ಅಲೆದಾಟ ಮೊದಲಾದವುಗಳಿಗೆ ಹಣ ಹೊಂದಿಸುವುದಕ್ಕೆ ಪಡಿಪಾಟಲು ಪಡುತ್ತೀರಿ.
ಇದನ್ನೂ ಓದಿ: 2026ನೇ ಹೊಸ ವರ್ಷ ಮಿಥುನ ರಾಶಿಯವರಿಗೆ ಹೇಗಿರಲಿದೆ? ವರ್ಷ ಭವಿಷ್ಯ ಇಲ್ಲಿದೆ
ಆರನೇ ಮನೆಯಲ್ಲಿ ರಾಹು ಸಂಚಾರ ಮಾಡಲಿದ್ದು, ಈ ಹಿಂದೆ ನೀವು ಜಮೀನು, ಸೈಟು ಇಂಥವುಗಳ ಮೇಲೆ ಮಾಡಿದ ಹೂಡಿಕೆಗಳು ಒಳ್ಳೆ ರಿಟರ್ನ್ಸ್ ನೀಡಲಿವೆ. ಹೀಗೆ ಬರುವಂಥ ಹಣದಿಂದ ನಿಯಮಿತವಾಗಿ ಆದಾಯ ಬರುವಂಥ ಕಡೆಗೆ ಹೂಡಲು ಚಿಂತನೆ ನಡೆಸುತ್ತೀರಿ. ಈ ಅವಧಿಯಲ್ಲಿ ಭೂಮಿಗೆ ಸಂಬಂಧಿಸಿದ ವ್ಯವಹಾರಗಳು ಲಾಭದಾಯಕ ಆಗಿರುತ್ತವೆ. ಕಡಿಮೆ ಬೆಲೆಗೆ ಖರೀದಿಗೆ ಸಿಗಬಹುದು. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಇರುವವರಿಗೆ ಹೆಚ್ಚಿನ ಕಮಿಷನ್ ದೊರೆಯಲಿದೆ. ವೃತ್ತಿಯಲ್ಲಿ ನಿಮಗೆ ತೀವ್ರ ಪ್ರತಿಸ್ಪರ್ಧೆ ಒಡ್ಡುತ್ತಾ ಇರುವವರು ತಾವಾಗಿಯೇ ನಿಮ್ಮ ದಾರಿಯಿಂದ ಪಕಕ್ಕೆ ಸರಿದುಕೊಳ್ಳಲಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಸಾಲ ತಂದು, ಹೂಡಿಕೆ ಮಾಡುವುದಕ್ಕೆ ಹೋಗಬೇಡಿ. ಷೇರು ಮಾರುಕಟ್ಟೆಯಲ್ಲಿ ಡೇ ಟ್ರೇಡಿಂಗ್- ಫ್ಯೂಚರ್- ಆಪ್ಷನ್ಸ್ ವ್ಯವಹಾರಗಳಿಗೆ ದೊಡ್ಡ ಮೊತ್ತದ ಹಣವನ್ನು ಹಾಕುವುದಕ್ಕೆ ಹೋಗಬೇಡಿ. ವ್ಯಯ ಸ್ಥಾನದಲ್ಲಿ ಕೇತು ಸಂಚಾರ ಆಗುತ್ತದೆ. ದೇವತಾ ಕಾರ್ಯಗಳಿಗೆ ಹೆಚ್ಚಿನ ಹಣವನ್ನು ವ್ಯಯ ಮಾಡಲಿದ್ದೀರಿ. ನೀವು ಈ ಹಿಂದೆ ಹರಕೆ ಹೊತ್ತುಕೊಂಡಿದ್ದು, ಅದನ್ನು ಪೂರೈಸದೆ ಇದ್ದಲ್ಲಿ ಅವುಗಳನ್ನು ತೀರಿಸುವ ಕಡೆಗೆ ಲಕ್ಷ್ಯ ಇರಲಿದೆ. ಈ ಅವಧಿಯಲ್ಲಿ ದೈವನಿಂದನೆ ಮಾಡುವುದರಿಂದ ಸಮಸ್ಯೆಗಳು ಹೆಚ್ಚು ಮಾಡಿಕೊಳ್ಳುತ್ತೀರಿ. ನವೆಂಬರ್- ಡಿಸೆಂಬರ್ ತಿಂಗಳಲ್ಲಿ ನೀವಾಗಿಯೇ ಕೆಲವು ತಪ್ಪುಗಳನ್ನು ಮಾಡಿ, ತೊಂದರೆಗೆ ಸಿಲುಕಿಕೊಳ್ಳುವಂತೆ ಆಗಲಿದೆ. ಮನೆಯ ಹಿರಿಯರ ಆರೋಗ್ಯದ ಮೇಲೆ ಹೆಚ್ಚಿನ ಗಮನವನ್ನು ನೀಡಿ.
ಗಣಪತಿ ಆರಾಧನೆ ಬಹಳ ಮುಖ್ಯ. ವರ್ಷದ ಕೊನೆ ಎರಡು ತಿಂಗಳಲ್ಲಿ ಸಾಯಿಬಾಬ, ರಾಘವೇಂದ್ರ ಸ್ವಾಮಿಗಳ ಆರಾಧನೆಯನ್ನೂ ಮಾಡಿಕೊಳ್ಳುವುದು ಕ್ಷೇಮ.
ಲೇಖನ- ಸ್ವಾತಿ ಎನ್.ಕೆ.