Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 10ರಿಂದ 16ರ ತನಕ ವಾರಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 10ರಿಂದ 16ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 10ರಿಂದ 16ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಈ ವಾರ ಎಲ್ಲ ರೀತಿಯಿಂದಲೂ ಸಂತೋಷ ಹಾಗೂ ಸಮಾಧಾನದಿಂದ ಕಳೆಯಲಿದ್ದೀರಿ. ಒಂದು ವೇಳೆ ಗಂಡ- ಹೆಂಡತಿ ಮಧ್ಯೆ ಯಾವುದಾದರೂ ವಿಚಾರಕ್ಕೆ ಬೇಸರ ಇದ್ದಲ್ಲಿ ಮೂರನೇ ವ್ಯಕ್ತಿಯ ಮಧ್ಯಪ್ರವೇಶದಿಂದ ಅದು ಬಗೆಹರಿಯಲಿದೆ. ಇನ್ನು ದಂಪತಿ ಮಧ್ಯೆ ಇರುವಂಥ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಪರಸ್ಪರ ಕೂತು ಮಾತನಾಡಿ, ಬಗೆಹರಿಸಿಕೊಳ್ಳುವುದಕ್ಕೆ ಈ ವಾರ ಬಹಳ ಒಳ್ಳೆ ಸಮಯವಾಗಿದೆ. ಒಂದು ವೇಳೆ ಪ್ರೇಮಿಗಳಾಗಿದ್ದು, ಇದಕ್ಕಿಂತ ಮುಂಚೆ ಮನಸ್ತಾಪಗಳು, ಅಭಿಪ್ರಾಯ ಭೇದಗಳು ಮೂಡಿ ದೂರವಾಗಿದ್ದಲ್ಲಿ ಈ ವಾರ ಒಗ್ಗೂಡುವಂಥ, ಸಂತೋಷವಾಗಿ ಸಮಯವನ್ನು ಕಳೆಯುವಂಥ ಯೋಗ ಇದೆ. ಇನ್ನು ಯಾರು ಪಾರ್ಟನರ್ ಷಿಪ್ ವ್ಯವಹಾರಗಳನ್ನು ಮಾಡುತ್ತಿದ್ದೀರೋ ಅಂಥವರಿಗೆ ಆದಾಯದಲ್ಲಿ ಸ್ಥಿರತೆ ಕಂಡುಬರಲಿದೆ. ವಕೀಲಿಕೆ ವೃತ್ತಿಯಲ್ಲಿ ಇರುವವರು ಅಥವಾ ಚಾರ್ಟರ್ಡ್ ಅಕೌಂಟೆಂಟ್ ಗಳಿಗೆ ಕೀರ್ತಿ- ಪ್ರತಿಷ್ಠೆಗಳು ಹೆಚ್ಚಾಗಲಿದೆ. ನಿಮಗೆ ಬರಬೇಕಾದ ದೊಡ್ಡ ಮೊತ್ತದ ಹಣ ಇದ್ದಲ್ಲಿ ಈ ವಾರ ಗಟ್ಟಿಯಾಗಿ ಪ್ರಯತ್ನಿಸಿದಲ್ಲಿ ಅದನ್ನು ವಸೂಲಿ ಮಾಡುವ ಸಾಧ್ಯತೆಗಳಿವೆ. ಕೃಷಿಕ ವೃತ್ತಿಯಲ್ಲಿ ಇರುವವರಿಗೆ ಯಾವುದೇ ವಿಚಾರಗಳಲ್ಲಿ ಒಮ್ಮತ ಈ ತನಕ ಆಗಿಲ್ಲ ಎಂದಾದರೆ ಈಗ ಮೂಡಿಬರಲಿದೆ. ಜಮೀನು- ಮನೆಯಲ್ಲಿನ ಪಾಲು ವಿಚಾರಕ್ಕೆ ಅಂತಿಮ ತೀರ್ಮಾನ ಕೈಗೊಳ್ಳುವುದಕ್ಕೆ ಅವಕಾಶ ಇದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಸುವಂಥ ಜವಾಬ್ದಾರಿ ನಿಮ್ಮ ಮೇಲೆ ಬರಲಿದೆ. ಸೋದರ ಸಂಬಂಧಿಗಳು ನಿಮ್ಮಿಂದ ನೆರವು ಕೇಳಿಕೊಂಡು ಬರಲಿದ್ದಾರೆ. ಮಕ್ಕಳ ಶೈಕ್ಷಣಿಕ ಸಾಧನೆಯು ನಿಮ್ಮಲ್ಲಿ ಒಂದು ಬಗೆಯ ಸಮಾಧಾನ ನೀಡಲಿದೆ. ಈ ವರೆಗೆ ಕಾಡುತ್ತಿರುವ ಹಳೆಯ ಅನಾರೋಗ್ಯ ಸಮಸ್ಯೆಗಳಿಗೆ ಪರಿಣಾಮಕಾರಿಯಾದ ವೈದ್ಯೋಪಚಾರ ದೊರೆಯಲಿದೆ. ಒಂದು ವೇಳೆ ವೃತ್ತಿನಿರತರಾಗಿದ್ದು, ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಮಂದಿ ಕೂಡಿ ಒಂದು ವ್ಯವಹಾರಕ್ಕೆ ಅಂತ ಕೈ ಹಾಕಿದಲ್ಲಿ ಅದರಲ್ಲಿ ಯಶಸ್ಸು ದೊರೆಯಲಿದೆ. ಇನ್ನು ವೃತ್ತಿಯಲ್ಲಿ ಇರುವಂಥ ಅವಿವಾಹಿತರಿಗೆ ಅದೇ ವೃತ್ತಿಯಲ್ಲಿ ಇರುವಂಥ ವಧು/ವರರ ಸೂಕ್ತವಾದ ವಿವಾಹ ಸಂಬಂಧಗಳು ದೊರೆಯುವಂಥ ಅವಕಾಶಗಳಿವೆ. ಹೊಸ ವಾಹನಗಳ ಖರೀದಿ ಬಗ್ಗೆ ಆಲೋಚನೆ ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ವಾಹನ ಖರೀದಿ ಮಾಡುವುದಕ್ಕೆ ಅಡ್ವಾನ್ಸ್ ಪಾವತಿಸುವ ಸಾಧ್ಯತೆಗಳು ಸಹ ಇವೆ. ವಿದ್ಯಾರ್ಥಿಗಳ ಜತೆಗೆ ಸ್ನೇಹಿತರ ಜತೆಗೆ ಉತ್ತಮ ಸಮಯವನ್ನು ಕಳೆಯುವಂಥ ಯೋಗ ಇದೆ. ಪ್ರವಾಸಕ್ಕೆ ತೆರಳಲಿದ್ದೀರಿ. ಮಹಿಳೆಯರು ಒಂದೇ ಸಮಯಕ್ಕೆ ಹಲವು ಕೆಲಸಗಳನ್ನು ಮಾಡುವುದು ಒಳ್ಳೆಯದಲ್ಲ. ಅದರಲ್ಲೂ ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಸಾಮಾನ್ಯಕ್ಕಿಂತ ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಾ ಏನಾದರೂ ಮರೆತು, ಅದರಲ್ಲೂ ಗ್ಯಾಸ್ ಸಿಲಿಂಡರ್ ಆಫ್ ಮಾಡುವುದನ್ನು ಮರೆತೋ ಅಥವಾ ರಸ್ತೆ ದಾಟುವಾಗ ಏನಾದರೂ ಸಮಸ್ಯೆ ಮಾಡಿಕೊಂಡೋ ಅಥವಾ ಬೇರೆ ಯಾವುದಾ ಮುಖ್ಯ ಕೆಲಸಗಳನ್ನು ಮಾಡುವುದನ್ನು ಮರೆತು ಸಮಸ್ಯೆಗಳನ್ನು ಮಾಡಿಕೊಳ್ಳಲಿದ್ದೀರಿ ಎಂಬುದು ಕಂಡುಬರುತ್ತಿದೆ. ಆದ್ದರಿಂದ ಜಾಗ್ರತೆಯಿಂದ ಇರುವುದು ಮುಖ್ಯವಾಗುತ್ತದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಮೇಲಧಿಕಾರಿಗಳಿಂದ ಕಿರುಕುಳ, ಮುಜುಗರ ಅನುಭವಿಸುವಂಥ ಯೋಗ ಇದೆ. ನಿಮ್ಮಲ್ಲಿ ಕೆಲವರು ಈಗ ಇರುವಂಥ ವಿಭಾಗದಿಂದ ಬೇರೆ ಕಡೆಗೆ ವರ್ಗಾವಣೆ ಕೇಳುವ ಸಾಧ್ಯತೆಗಳಿವೆ, ಪ್ರಯತ್ನಗಳನ್ನು ಸಹ ಆರಂಭಿಸಬಹುದು. ಅಂದ ಹಾಗೆ ಈ ವಾರದಲ್ಲಿ ನೀವು ಕೈ ಹಾಕುವ ಕೆಲಸಗಳಲ್ಲಿ ನಾನಾ ವಿಘ್ನಗಳು ಎದುರಾಗುತ್ತವೆ. ಯಾರ ಜತೆಗೆ ವ್ಯವಹಾರ ಅಥವಾ ಕೆಲಸ ಮಾಡಬಾರದು ಎಂದುಕೊಂಡಿದ್ದಿರೋ ಅವರ ಜತೆಗೇ ಕೆಲಸ ಮಾಡುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಇದರಿಂದಾಗಿ ನಿಮ್ಮ ಆತ್ಮಾಭಿಮಾನಕ್ಕೆ ಪೆಟ್ಟು ಬೀಳುವಂಥ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ನಿಮ್ಮ ಕೆಲವು ಆತುರದ ತೀರ್ಮಾನದಿಂದ ಹಣವನ್ನು ಕಳೆದುಕೊಳ್ಳಲಿದ್ದೀರಿ. ಈ ವಾರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹೊಸ ವ್ಯವಹಾರಗಳನ್ನು ಶುರು ಮಾಡಿದ್ದಲ್ಲಿ ಆಗಬೇಕಾದ ಅಥವಾ ಅಂದಾಜು ಮಾಡಿದ್ದಕ್ಕಿಂತ ಹೆಚ್ಚಿನ ಖರ್ಚಾಗುತ್ತದೆ. ಆದ್ದರಿಂದ ಲೆಕ್ಕಾಚಾರ ಹಾಗೂ ಬಜೆಟ್ ಸರಿಯಾಗಿ ಇರುವಂತೆ ನೋಡಿಕೊಳ್ಳಿ. ಕೃಷಿಕರು ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಪ್ರಯತ್ನವನ್ನು ಮಾಡಲಿದ್ದೀರಿ. ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವವರು ನಷ್ಟವನ್ನು ಅನುಭವಿಸಬೇಕಾಗುತ್ತದೆ ಅಥವಾ ಆದಾಯದಲ್ಲಿ ಇಳಿಕೆ ಆಗುವಂಥ ಸಾಧ್ಯತೆಗಳಿವೆ. ಒಂದು ವೇಳೆ ಸರ್ಕಾರದ ಮಟ್ಟದಲ್ಲಿ ಆಗಬೇಕಾದಂಥ ಕೆಲಸಗಳು ಇದ್ದಲ್ಲಿ ಅಂದುಕೊಳ್ಳುವ ಅವಧಿಯಲ್ಲಿ ಮುಗಿಯುವುದು ಬಹಳ ಕಷ್ಟ ಆಗಲಿದೆ. ಇತರರಿಗೆ ಮಾಡಿಕೊಡುವುದಾಗಿ ನೀವು ಮಾತು ನೀಡಿದ್ದಲ್ಲಿ ಅದನ್ನು ಸಮಯಕ್ಕೆ ಸರಿಯಾಗಿ ಮಾಡಲಾಗದೆ ಅವಮಾನಕ್ಕೆ ಸಹ ಗುರಿ ಆಗಬಹುದು. ಆದ್ದರಿಂದ ನಿಮ್ಮ ಸಾಮರ್ಥ್ಯಕ್ಕೆ ಮೀರಿದ ಕೆಲಸಗಳನ್ನು ಒಪ್ಪಿಕೊಳ್ಳುವುದಕ್ಕೆ ಹೋಗಬೇಡಿ. ನಿಮ್ಮ ಸಾಮರ್ಥ್ಯವನ್ನು ಗುರುತಿಸಿ, ಸ್ಥಾನ- ಮಾನಗಳು ನೀಡುತ್ತಿದ್ದೇವೆ ಎಂದು ಸಂಘವೋ ಸಂಸ್ಥೆಗಳಲ್ಲಿ ಹೇಳಿ, ಅದನ್ನು ನೀವು ಎಲ್ಲೆಡೆಯೂ ಹೇಳಿಕೊಂಡು ಬಂದ ಮೇಲೆ, ಬೇರೆಯವರಿಗೆ ನೀಡುವಂಥ ಸಾಧ್ಯತೆಗಳಿವೆ. ನಿಮ್ಮ ಸಂಗಾತಿಯ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿದಲ್ಲಿ ಹೆಚ್ಚಿನ ಅನುಕೂಲಗಳು ಒದಗಿಬರಲಿವೆ. ವೃತ್ತಿನಿರತರಿಗೆ ತಾಂತ್ರಿಕ ವಿಚಾರಗಳನ್ನು ಅಳವಡಿಸಿಕೊಳ್ಳುವುದಕ್ಕೆ ಅಥವಾ ವಿವಿಧ ಬಗೆಯಲ್ಲಿ ನಿಮ್ಮ ಸೇವೆಯನ್ನು ಅಪ್ ಗ್ರೇಡ್ ಮಾಡುವ ನಿಟ್ಟಿನಲ್ಲಿ ಹಣವನ್ನು ಹೂಡಿಕೆ ಮಾಡುವಂಥ ಯೋಗ ಇದೆ. ಹೊಸದಾಗಿ ಶಾಖೆಗಳನ್ನು ಆರಂಭಿಸುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಅದಕ್ಕೆ ಸೂಕ್ತ ಬೆಂಬಲ ಕೂಡ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾರೀ ಉತ್ತೇಜನ ದೊರೆಯಲಿದೆ. ಸ್ನೇಹಿತರ ಮಧ್ಯೆ ನಿಮ್ಮ ಜನಪ್ರಿಯತೆ ಜಾಸ್ತಿ ಆಗಲಿದೆ. ಓದಿನ ವಿಷಯದಲ್ಲಿ ಹಿನ್ನಡೆ ಅನುಭವಿಸುತ್ತಿದ್ದಲ್ಲಿ ನಿರ್ದಿಷ್ಟ ವಿಷಯದಲ್ಲಿ ಉತ್ತಮವಾಗಿ ಪಾಠ ಮಾಡುವಂಥ ಅಧ್ಯಾಪಕರು ದೊರೆಯುವ ಅವಕಾಶಗಳು ಹೆಚ್ಚಿವೆ. ಯುವತಿಯರು ಅಥವಾ ಉದ್ಯೋಗಸ್ಥ ಮಹಿಳೆಯರ ಮೇಲೆ ಕೆಲವು ಆರೋಪಗಳನ್ನು ಹೊರಿಸುವಂಥ ಸಾಧ್ಯತೆ ಇದೆ. ಪಾರದರ್ಶಕವಾಗಿ ಇರುವುದಕ್ಕೆ ಪ್ರಯತ್ನಿಸಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ವಾಹನ ಲಾಭ, ಭೂಮಿ ಲಾಭ ಸೇರಿದಂತೆ ನಿಮಗೆ ಹಲವು ಬಗೆಯಲ್ಲಿ ಲಾಭ ದೊರೆಯುವಂತಹ ಸಾಧ್ಯತೆಗಳನ್ನು ಸೂಚಿಸುತ್ತಿದೆ. ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸೂಕ್ತ ಸಂಬಂಧ ದೊರೆಯಲಿದ್ದು, ಇದರಿಂದ ಇನ್ನಷ್ಟು ಸಂತೋಷ ಹೆಚ್ಚಾಗಲಿದೆ. ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಲ್ಲಿ ಇಷ್ಟು ಸಮಯ ನೀವು ಪಟ್ಟ ಶ್ರಮಕ್ಕೆ ಫಲಿತಾಂಶ ದೊರೆಯುವುದಕ್ಕೆ ಶುರು ಆಗುತ್ತದೆ. ನಿಮ್ಮದೇ ವೃತ್ತಿಯಲ್ಲಿ ಇರುವಂಥವರು ಪ್ರತಿಭೆಯನ್ನು ಮೆಚ್ಚಿಕೊಳ್ಳಲಿದ್ದಾರೆ. ತಾಂತ್ರಿಕ ಜ್ಞಾನವನ್ನು ಇತರರು ಬೆರಗಿನಿಂದ ನೋಡುವಂತಾಗುತ್ತದೆ. ಉದ್ಯೋಗದ ನಿಮಿತ್ತವಾಗಿ ಕೆಲ ಕಾಲ ದೂರ ಪ್ರದೇಶಗಳಿಗೆ ತೆರಳುವಂತೆ ಸೂಚಿಸುವ ಸಾಧ್ಯತೆಗಳು ಹೆಚ್ಚಿವೆ. ಆರಂಭದಲ್ಲಿಯೇ ಹೇಳಿದಂತೆ ಸ್ಥಾನ ಲಾಭ, ಧನ ಲಾಭ, ವ್ಯಾಪಾರ- ವ್ಯವಹಾರದಲ್ಲಿ ಲಾಭ ಇತ್ಯಾದಿ ಶುಭ ಫಲಗಳಿವೆ. ಕೃಷಿಕರಿಗೆ ಭೂಮಿ ಅಥವಾ ಜಾನುವಾರು ಖರೀದಿ ಮಾಡುವಂತೆ ಕೆಲವರು ಕೇಳಿಕೊಳ್ಳಬಹುದು. ಮಾರುಕಟ್ಟೆಯ ಬೆಲೆಗಿಂತ ಕಡಿಮೆಗೆ ಅವರು ಮಾರಾಟ ಮಾಡುವ ಸಾಧ್ಯತೆಗಳಿದೆ. ಇದೇ ಅವಧಿಯಲ್ಲಿ ಅನಿರೀಕ್ಷಿತವಾಗಿ ಹಣಕಾಸಿನ ಅನುಕೂಲ ಒದಗಿಬಂದು, ಖರೀದಿ ಮಾಡಿಯೂ ಬಿಡುವಂಥ ಯೋಗಗಳಿವೆ. ನಿಮಗೆ ಯಾವುದಾದರೂ ಅಲರ್ಜಿಗಳು ಇದ್ದಲ್ಲಿ ಈ ವಾರದ ಬಹಳ ಎಚ್ಚರಿಕೆಯಿಂದ ಇರಬೇಕು. ಅದರಲ್ಲಿಯೂ ಆಹಾರ ಪಥ್ಯದ ವಿಚಾರದಲ್ಲಿ ಮಾಮೂಲಿಗಿಂತ ಹೆಚ್ಚು ಜಾಗ್ರತೆ ವಹಿಸುವುದು ಮುಖ್ಯ, ಇಲ್ಲದಿದ್ದಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ವೃತ್ತಿನಿರತರಿಗೆ ಸಂಗಾತಿಗೆ ಬರುವ ಅನುಕೂಲದ ಬಹುಪಾಲು ಪ್ರಯೋಜನ ನಿಮಗೇ ಆಗಲಿದೆ. ಜತೆಗೆ ಕುಟುಂಬ ಸದಸ್ಯರ ಇಚ್ಛೆಗೆ ಅನುಗುಣವಾಗಿ ದೊಡ್ಡ ಅಳತೆಯ ಸೈಟು, ಅಪಾರ್ಟ್ ಮೆಂಟ್ ಅಥವಾ ಐಷಾರಾಮಿ ಕಾರನ್ನು ಖರೀದಿ ಮಾಡಲಿದ್ದೀರಿ. ನಿಮ್ಮ ವೃತ್ತಿಗೆ ಸಂಬಂಧಿಸಿದ ಸಂಘ- ಸಂಸ್ಥೆಗಳಲ್ಲಿ ಸ್ಥಾನ- ಮಾನಗಳು ಈಗಾಗಲೇ ಇದ್ದಲ್ಲಿ ಪದೋನ್ನತಿ ಆಗಬಹುದು. ಪ್ರಭಾರಿಯಾಗಿ ನೇಮಕ ಆಗಿದ್ದಲ್ಲಿ ಅದು ಶಾಶ್ವತವಾದ ನೇಮಕಾತಿಯಾಗಿ ಬದಲಾವಣೆ ಆಗುವ ಸಾಧ್ಯತೆ ಹೆಚ್ಚಿದೆ. ಇನ್ನು ನೀವು ಯಾವ ಕಂಪನಿಗಾಗಿ ಕಾರ್ಯ ನಿರ್ವಹಿಸುತ್ತಿರುವಿರೋ ಅದೇ ಕಂಪನಿಯಲ್ಲಿ ಷೇರು, ಲಾಭದ ಪಾಲು ಇತ್ಯಾದಿ ದೊರೆಯುವಂತಾಗುತ್ತದೆ. ಈ ಹಿಂದೆ ನೀವು ಆರಂಭಿಸಿದ್ದ ವ್ಯವಹಾರ, ಮಾಡಿದ್ದ ಹೂಡಿಕೆ, ಪಟ್ಟ ಶ್ರಮ ಫಲ ನೀಡುವುದಕ್ಕೆ ಆರಂಭಿಸುತ್ತದೆ. ವಿದೇಶ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಲಾಭದ ಪ್ರಮಾಣ ಜಾಸ್ತಿ ಆಗಲಿದೆ. ವಿದ್ಯಾರ್ಥಿಗಳು ಬೈಕ್, ದ್ವಿಚಕ್ರ ವಾಹನಗಳನ್ನು ಪಡೆಯುವಂಥ ಅಥವಾ ಖರೀದಿಸುವಂಥ ಯೋಗ ಇದೆ. ಇಷ್ಟು ಸಮಯ ನೀವು ಯಾವೆಲ್ಲ ಸಾಧನೆ ಮಾಡಬೇಕು ಎಂದು ಕನಸು ಕಾಣುತ್ತಿದ್ದಿರೋ ಆ ಎಲ್ಲ ಸಾಧನೆಗಳನ್ನು ಮಾಡುವುದಕ್ಕೆ ಬೇಕಾದ ವೇದಿಕೆ ನಿಮಗೆ ದೊರೆಯಲಿದೆ. ಜತೆಗೆ ಇತರ ಸಹಾಯ ಕೂಡ ಸಿಗಲಿದೆ. ಮಹಿಳೆಯರಿಗೆ ಅನಿರೀಕ್ಷಿತವಾಗಿ ಆದಾಯದ ಮೂಲಗಳಲ್ಲಿ ಜಾಸ್ತಿ ಆಗಲಿದೆ. ಈ ಅವಧಿಯಲ್ಲಿ ಸಾಂಸಾರಿಕವಾಗಿಯೂ ನೆಮ್ಮದಿ, ಶಾಂತಿ ನೆಲೆಸಿರುತ್ತದೆ. ಈ ಕಾರಣಕ್ಕೆ ಇತರ ಕೆಲಸಗಳನ್ನು ಹೆಚ್ಚು ಆಸಕ್ತಿ, ಪರಿಣಾಮಕಾರಿಯಾಗಿ ಮಾಡಬಹುದು.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಈಗಾಗಲೇ ನಿರ್ಧಾರವಾದಂಥ ಪ್ರಯಾಣವೋ ಹೂಡಿಕೆ ತೀರ್ಮಾನವನ್ನೋ ಬದಲಿಸಬೇಕಾದಂಥ ಅನಿವಾರ್ಯ ಸೃಷ್ಟಿ ಆಗಲಿದೆ. ಇತರರನ್ನು ನಂಬಿ, ಒಪ್ಪಿಸಿದಂಥ ಕೆಲಸವು ಅಂದುಕೊಂಡಂತೆ ಪೂರ್ತಿ ಆಗದೆ ಬೇಸರ ಆಗಲಿದೆ. ಬ್ಯೂಟಿಪಾರ್ಲರ್ ನಡೆಸುತ್ತಿರುವವರಿಗೆ ಆದಾಯದಲ್ಲಿ ಇಳಿಕೆ ಕಂಡುಬಂದು, ಆತಂಕಕ್ಕೆ ಕಾರಣ ಆಗಬಹುದು. ಕುಟುಂಬ ಸದಸ್ಯರ ಆರೋಗ್ಯ ವಿಚಾರವು ಆತಂಕಕ್ಕೆ ಕಾರಣ ಆಗಲಿದೆ. ಈ ಹಿಂದೆ ನೀವು ತೆಗೆದುಕೊಂಡ ಕೆಲವು ನಿರ್ಧಾರಗಳಿಂದ ಸ್ವಲ್ಪ ಮಟ್ಟಿಗೆ ಆದಾಯದಲ್ಲಿ ಕಡಿಮೆ ಆಗಲಿದೆ. ಇದರಿಂದ ನಿಮ್ಮ ಮೇಲೆ ನಿಮಗೆ ಬೇಸರ ಆಗಲಿದೆ. ಇತರರ ಹಣಕಾಸಿನ ಅಗತ್ಯಗಳಿಗೆ ಸಹಾಯ ನೀಡಬೇಕು ಎಂದು ಆಲೋಚಿಸುವ ಮೊದಲು ನಿಮ್ಮ ಸ್ಥಿತಿಯ ಬಗ್ಗೆ ಆಲೋಚಿಸುವುದು ಮುಖ್ಯವಾಗುತ್ತದೆ. ಗಾಸಿಪ್ ಮಾತನಾಡುವ ಜಾಗದಲ್ಲಿ ಸಮಯ ಕಳೆಯದಿರುವುದು ಈ ದಿನ ಬಹಳ ಮುಖ್ಯವಾಗುತ್ತದೆ. ಪ್ರೀತಿ ಪ್ರೇಮ ಹೇಳಿಕೊಳ್ಳಬೇಕು ಅಂದುಕೊಂಡಿದ್ದಲ್ಲಿ ಸನ್ನಿವೇಶವನ್ನು ಸರಿಯಾಗಿ ಅವಲೋಕಿಸಿ ಮುಂದಕ್ಕೆ ಹೆಜ್ಜೆ ಇಡಿ. ಕುಟುಂಬ ವ್ಯಾಪಾರದಲ್ಲಿ ತೊಡಗಿರುವವರಿಗೆ ಹೊಸದಾಗಿ ಹೂಡಿಕೆ ಮಾಡಬೇಕು ಎಂದು ಆಲೋಚನೆ ಬರಲಿದೆ. ಕೃಷಿಕರಿಗೆ ನಿಮ್ಮ ಆಪ್ತರ ಹಣಕಾಸಿನ ಅಗತ್ಯ ತೀವ್ರವಾಗುತ್ತದೆ. ನಿಮಗೆ ಅವರ ಅಗತ್ಯವನ್ನು ಪೂರೈಸುವಷ್ಟು ಸಾಮರ್ಥ್ಯ ಇಲ್ಲದಿದ್ದರೂ ಪ್ರಯತ್ನ ಮಾಡಲೇಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ಇನ್ನು ತಾಯಿಯ ಅಥವಾ ತಾಯಿ ಸಮಾನರಾದವರ ಅನಾರೋಗ್ಯ ನಿಮ್ಮನ್ನು ಚಿಂತೆಗೆ ಈಡು ಮಾಡಲಿದೆ. ಈ ಅವಧಿಯಲ್ಲಿ ಹೊಸಬರು ಪರಿಚಯ ಆಗಿ, ಬಣ್ಣದ ಮಾತನಾಡುತ್ತಿದ್ದಾರೆ ಅಂತಾದಲ್ಲಿ ತಕ್ಷಣವೇ ಎಚ್ಚೆತ್ತುಕೊಳ್ಳುವುದು ಮುಖ್ಯವಾಗುತ್ತದೆ. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಮಾಡುತ್ತಿದ್ದೀರಿ ಎಂದಾದಲ್ಲಿ ನಿಮ್ಮ ಬಳಿ ಇರುವಂಥ ಬೆಲೆಬಾಳುವ ವಸ್ತುಗಳ ಬಗ್ಗೆ ಹೆಚ್ಚಿನ ನಿಗಾ ಮಾಡಬೇಕಾಗುತ್ತದೆ. ದಿಢೀರ್ ಪ್ರಯಾಣ ಮಾಡಬೇಕಾಗಬಹುದು. ಇದರಿಂದ ಹೆಚ್ಚಿನ ಹಣ ನಿಮಗೆ ಖರ್ಚಾಗಲಿದೆ. ವೃತ್ತಿನಿರತರು ನಿಮ್ಮ ಗುಣ- ಸ್ವಭಾವದಲ್ಲಿ ಬದಲಾವಣೆ ಮಾಡಿಕೊಳ್ಳಲೇ ಬೇಕು ಎಂದು ಬಲವಾಗಿ ಅನಿಸಲು ಶುರುವಾಗಲಿದೆ. ಆದಾಯ ಮೂಲ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ತೀವ್ರಗೊಳಿಸಲಿದ್ದೀರಿ. ನೀವು ತೊಡಗಿಕೊಂಡಿರುವ ಕೆಲಸದಲ್ಲಿ ಮಾಮೂಲಿಗಿಂತ ಹೆಚ್ಚಿನ ಶ್ರಮವನ್ನು ಹಾಕಬೇಕಾಗುತ್ತದೆ. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೇ ಅನುಮಾನ ಮೂಡುವಂಥ ಸನ್ನಿವೇಶ ಸೃಷ್ಟಿ ಆದಲ್ಲಿ ಇತರರ ನೆರವನ್ನು ತೆಗೆದುಕೊಳ್ಳಿ. ವಿದ್ಯಾರ್ಥಿಗಳು ದುಬಾರಿಯಾದ ಮೊಬೈಲ್ ಫೋನ್, ಲ್ಯಾಪ್ ಟಾಪ್ ಇತರ ಯಾವುದಾದರೂ ಎಲೆಕ್ಟ್ರಾನಿಕ್ ಅಥವಾ ಎಲೆಕ್ಟ್ರಿಕ್ ವಸ್ತುಗಳನ್ನು ಖರೀದಿ ಮಾಡುವಂಥ ಯೋಗ ಇದೆ. ಒಂದು ವೇಳೆ ತುಂಬ ದೊಡ್ಡ ಮೊತ್ತದ ಸಾಲ ಮಾಡಿಯೇ ಖರೀದಿ ಮಾಡಬೇಕಾಗುತ್ತದೆ ಎಂದಾದಲ್ಲಿ ಒಂದಕ್ಕೆ ನಾಲ್ಕು ಬಾರಿ ಆಲೋಚನೆ ಮಾಡಿ. ಮಹಿಳೆಯರಿಗೆ ಚೈನ್ ಕಂಪನಿಗಳಲ್ಲಿ ಹಣ ಹೂಡುವಂತೆ ಬಹಳ ಆಪ್ತರಿಂದಲೇ ಒತ್ತಡ ಬರುವಂಥ ಸಾಧ್ಯತೆಗಳಿವೆ. ಈ ಒತ್ತಡಕ್ಕೆ ಒಂದು ವೇಳೆ ಮಣಿದರೆ ಹಣ ಕಳೆದುಕೊಂಡಂತೆಯೇ ಸರಿ. ಆದ್ದರಿಂದ ದಾಕ್ಷಿಣ್ಯಕ್ಕೆ ಸಿಲುಕಿಕೊಂಡು ಹಣ ಕಳೆದುಕೊಳ್ಳುವಂಥ ಸ್ಕೀಮ್ ಗಳಿಗೆ ತಗುಲಿಕೊಳ್ಳಬೇಡಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ನೀವು ನಿರೀಕ್ಷೆಯೇ ಮಾಡದ ರೀತಿಯಲ್ಲಿ ಹಲವು ಸಕಾರಾತ್ಮಕ ಬದಲಾವಣೆ ಆಗಲಿದೆ. ಅದು ಕೂಡ ಯಾವುದೇ ಸೂಚನೆ ದೊರೆಯದೆ ದಿಢೀರನೇ ಹಲವು ಬದಲಾವಣೆಗಳು, ಬೆಳವಣಿಗೆಗಳು ಕಂಡುಬರಲಿವೆ. ಒಂದು ವೇಳೆ ಕೋರ್ಟ್ ವ್ಯಾಜ್ಯಗಳು ಅಥವಾ ಹಣಕಾಸಿನ ವಿಚಾರದಲ್ಲಿ ವಾಗ್ವಾದಗಳು ನಡೆಯುತ್ತಿದ್ದಲ್ಲಿ ಕೆಲವರಿಗೆ ರಾಜೀ- ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದಕ್ಕೆ ಅವಕಾಶಗಳು ದೊರೆಯಲಿವೆ. ಹೆಣ್ಣುಮಕ್ಕಳಿಗೆ ತವರು ಮನೆಯಿಂದ ಕೆಲವು ಅನುಕೂಲಗಳು ದೊರೆಯುವ ಸಾಧ್ಯತೆ ಇದೆ. ಅದರಲ್ಲೂ ಪಿತ್ರಾರ್ಜಿತ ಆಸ್ತಿ ಏನಾದರೂ ಬರಬೇಕು ಎಂದು ನಿರೀಕ್ಷೆ ಮಾಡುತ್ತಿದ್ದಲ್ಲಿ ಅದು ಬರುವ ಸಾಧ್ಯತೆಗಳು ಹೆಚ್ಚಿವೆ. ಆದರೆ ನೆನಪಿನಲ್ಲಿಡಿ, ನಿಮ್ಮ ಜವಾಬ್ದಾರಿಗಳನ್ನು ಸಮಯಕ್ಕೆ ಮುಗಿಸಿದ್ದೀರಾ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ಯಾವುದೇ ಕೆಲಸವನ್ನು ಗಡುವಿನ ತನಕ ಕಾಯುತ್ತಾ ಕೂರಬೇಡಿ. ನಿಮ್ಮಲ್ಲಿ ಯಾರಾದರೂ ಹೌಸಿಂಗ್ ಸೊಸೈಟಿ, ಸರ್ಕಾರಿ ಸಂಸ್ಥೆಗಳಿಗೆ ಸೈಟು ಅಥವಾ ಮನೆಗಾಗಿ ಅರ್ಜಿ ಹಾಕಿಕೊಂಡು, ಕಾಯುತ್ತಾ ಇದ್ದಲ್ಲಿ ಅದು ದೊರೆಯುವುದು ಯಾವಾಗ ಎಂಬ ಬಗ್ಗೆ ಖಚಿತ ಮಾಹಿತಿ ದೊರೆಯಲಿದೆ. ಕೃಷಿಕರಿಗೆ ದೈಹಿಕ ಪರಿಶ್ರಮ ಹೆಚ್ಚಾಗಲಿದೆ. ಯಾವುದೇ ಕೆಲಸ ಮಾಡುವ ಮುಂಚೆ ಸರಿಯಾದ ಯೋಜನೆಯನ್ನು ಮಾಡುವುದು ಮುಖ್ಯ. ಇನ್ನು ನೀವು ಯಾರನ್ನಾದರೂ ಮುಖ್ಯ ಕೆಲಸಕ್ಕಾಗಿ ನೇಮಕ ಮಾಡಿಕೊಳ್ಳುತ್ತಿದ್ದೀರಿ ಅಥವಾ ಪ್ರಮುಖ ಜವಾಬ್ದಾರಿಗಳನ್ನು ವಹಿಸುತ್ತಿದ್ದೀರಿ ಎಂದಾದಲ್ಲಿ ನಿಮ್ಮ ಎದುರಿಗಿರುವ ವ್ಯಕ್ತಿಯ ಸಾಮರ್ಥ್ಯವನ್ನು ತಿಳಿದುಕೊಳ್ಳದೆ ಯಾವುದೇ ಆತುರದ ತೀರ್ಮಾನವನ್ನು ತೆಗೆದುಕೊಳ್ಳದಿರಿ. ಕೃಷಿ ವೃತ್ತಿಗೆ ಸಂಬಂಧಿಸಿದಂತೆ ಸೆಕೆಂಡ್ ಹ್ಯಾಂಡ್ ಅಥವಾ ಈಗಾಗಲೇ ಬಳಕೆ ಆಗಿರುವ ವಾಹನಗಳನ್ನು ಅಥವಾ ಯಂತ್ರಗಳನ್ನು ಖರೀದಿ ಮಾಡುವುದಕ್ಕೆ ಮುಂದಾಗುತ್ತಿದ್ದೀರಿ ಎಂದಾದಲ್ಲಿ ದುರಸ್ತಿಗಾಗಿ ಹೆಚ್ಚಿನ ಹಣ ಖರ್ಚಾಗುವಂಥ ಯೋಗ ಇದೆ. ಇತರರಿಂದ ಶಿಫಾರಸು ಮಾಡಿಸುವ ಮೂಲಕ ಸರ್ಕಾರದಿಂದ ದೊರೆಯುವಂಥ ಕೆಲವು ಅನುಕೂಲಗಳು ದೊರೆಯಲಿವೆ. ವೃತ್ತಿನಿರತರು ತುಂಬ ಸಮಾಧಾನವಾಗಿ ಈ ವಾರ ಕಳೆಯುವುದರ ಕಡೆಗೆ ಆಲೋಚನೆ ಮಾಡಿ. ನೀವು ಈಗಾಗಲೇ ಕೆಲಸ ಮಾಡಿಕೊಟ್ಟಾಗಿ, ಅದರಿಂದ ಬರಬೇಕಾದ ಹಣ ಇದ್ದಲ್ಲಿ ಅದನ್ನು ಫಾಲೋ ಅಪ್ ಮಾಡುವುದು ಮುಖ್ಯವಾಗುತ್ತದೆ. ದೀರ್ಘ ಕಾಲದಿಂದ ನಿರೀಕ್ಷೆ ಮಾಡುತ್ತಿದ್ದ ಅವಕಾಶವೊಂದು ಈಗ ದೊರೆಯುವ ಸಾಧ್ಯತೆಗಳಿವೆ. ಸ್ನೇಹಿತರು ನಿಮ್ಮಿಂದ ಆರ್ಥಿಕ ಸಹಾಯವನ್ನು ಬಯಸಿ ಬರುವಂಥ ಸಾಧ್ಯತೆ ಇದೆ. ಕ್ರೆಡಿಟ್ ಕಾರ್ಡ್ ಬಳಸುವಂಥವರು ಖರ್ಚಿನ ಮೇಲೆ ಹಿಡಿತ ಸಾಧಿಸುವುದು ಬಹಳ ಮುಖ್ಯ. ವಿದ್ಯಾರ್ಥಿಗಳು ಬಂಧು- ಮಿತ್ರರನ್ನು ಭೇಟಿ ಆಗುವಂಥ ಯೋಗ ಇದೆ. ಅಥವಾ ದೂರ ಪ್ರಯಾಣಕ್ಕೆ ತೆರಳಬೇಕಾದ ಅಗತ್ಯ ಕಂಡುಬರುತ್ತದೆ. ಸಣ್ಣ- ಪುಟ್ಟ ವಿಚಾರಗಳಿಗೆ ಸ್ನೇಹಿತರ ಜತೆಗೆ ಭಿನ್ನಾಭಿಪ್ರಾಯ ಏರ್ಪಡಬಹುದು. ಮಹಿಳೆಯರು ಭವಿಷ್ಯದ ಯೋಜನೆಗಳ ಬಗ್ಗೆ ಅಥವಾ ಯಾವುದಾದರೂ ವಸ್ತುಗಳ ಖರೀದಿ ಮಾಡುವ ಬಗ್ಗೆ ಸಂಗಾತಿ ಜತೆಗೆ ಮಾತುಕತೆ ಆಡುವಾಗ ಎಚ್ಚರಿಕೆ ಇರಲಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ನಿಮ್ಮಲ್ಲಿ ಕೆಲವರು ಷೇರು, ಮ್ಯೂಚುವಲ್ ಫಂಡ್, ಚಿನ್ನ ಅಥವಾ ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಹಣ ತೊಡಗಿಸುವಂಥ ಯೋಗ ಇದೆ. ಸ್ನೇಹಿತರು ಅಥವಾ ಸಂಬಂಧಿಕರು ಸಹ ನಿಮ್ಮ ಜತೆಗೆ ಸೇರಿ ಹಣ ಹಾಕುವುದಾಗಿ ಹೇಳುವಂಥ ಸಾಧ್ಯತೆ ಇದೆ. ಸಿನಿಮಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಅಥವಾ ಈಗಾಗಲೇ ಮಾತುಕತೆ ಮುಗಿಸಿದಂಥ ಪ್ರಾಜೆಕ್ಟ್ ಗಳು ಕೈಗೊಳ್ಳುವುದಕ್ಕೆ ಸಿದ್ಧತೆಗಳು ನಡೆಯಲಿವೆ. ನಿಮ್ಮಲ್ಲಿ ಕೆಲವರು ಉದ್ಯೋಗ ಅಥವಾ ವೃತ್ತಿ ನಿಮಿತ್ತವಾಗಿ ಕೆಲ ದಿನಗಳ ಮಟ್ಟಿಗಾದರೂ ವಿದೇಶಕ್ಕೆ ತೆರಳಲಿದ್ದೀರಿ. ಆದರೆ ಇದಕ್ಕೆ ಸಂಬಂಧಪಟ್ಟ ಸಿದ್ಧತೆ ಇರಬಹುದು ಅಥವಾ ಅಲ್ಲಿಗೆ ಹೋದ ನಂತರದ ಮೇಲೆ ಇರಬಹುದು, ಒತ್ತಡಗಳು ಏರ್ಪಡುತ್ತವೆ. ವಿಲ್ಲಾ ಅಥವಾ ಹೂಡಿಕೆಗಾಗಿ ಸರ್ವೀಸ್ ಅಪಾರ್ಟ್ ಮೆಂಟ್ ಗಳನ್ನು ಖರೀದಿ ಮಾಡಬೇಕು ಎಂದಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಯೋಗ ಇದೆ. ಅಧ್ಯಾತ್ಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಲಿದೆ. ಕೃಷಿಕರಿಗೆ ಸರ್ಕಾರದ ಜತೆಗಿನ ವ್ಯವಹಾರಗಳು ಸಲೀಸಾಗಿ ಮುಗಿಯಲಿವೆ. ಯಾರು ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದೀರಿ ಅಂಥವರು ಇನ್ನೂ ಹೆಚ್ಚಿನ ಭೂಮಿಯನ್ನು ಖರೀದಿಸಬಹುದು ಅಥವಾ ಗುತ್ತಿಗೆಗೆ ಪಡೆಯುವಂಥ ಸಾಧ್ಯತೆಗಳಿದ್ದು, ನಿರೀಕ್ಷೆಗೂ ಮೀರಿದ ಆದಾಯ ಮೂಲಗಳು ನಿಮಗೆ ತೆರೆದುಕೊಳ್ಳಲಿವೆ. ನಿಮ್ಮಲ್ಲಿ ಕೆಲವರಿಗೆ ಸನ್ಮಾನಗಳು ಅಥವಾ ಸಂಘ- ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳು ದೊರೆಯುವ ಯೋಗ ಇದೆ. ವೃತ್ತಿನಿರತರಿಗೆ ಹಣಕಾಸಿನ ವಿಚಾರಕ್ಕೆ ಪ್ರಾಶಸ್ತ್ಯ ಹೆಚ್ಚಾಗಲಿದೆ. ಸ್ವಂತ ಕಚೇರಿಯನ್ನು ನಡೆಸುತ್ತಾ ಇರುವಂಥವರು ಈಗ ಆಗುತ್ತಿರುವ ವೆಚ್ಚವನ್ನು ಕಡಿಮೆ ಮಾಡಿಕೊಳ್ಳುವ ಬಗ್ಗೆ ಯೋಜನೆಗಳನ್ನು ರೂಪಿಸಲಿದ್ದೀರಿ. ಜಿಎಸ್ ಟಿ, ಆದಾಯ ತೆರಿಗೆಗೆ ಸಂಬಂಧಿಸಿದ ಕೆಲವು ಕಾಗದ ಪತ್ರಗಳು ಕಳೆದುಹೋಗಿ, ಆತಂಕದ ಕ್ಷಣಗಳನ್ನು ಎದುರಿಸಲಿದ್ದೀರಿ. ಇತರರಿಗೆ ಯಾವುದಾದರೂ ಮುಖ್ಯವಾದ ಕೆಲಸ ಒಪ್ಪಿಸುವ ಮೊದಲಿಗೆ ಅವರಿಂದ ಅದನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದಕ್ಕೆ ಸಾಧ್ಯವಿದೆಯೇ ಎಂಬುದನ್ನು ಕೇಳಿ, ತಿಳಿದುಕೊಳ್ಳಿ. ಹೇಗಾದರೂ ಸರಿ, ಆ ಜವಾಬ್ದಾರಿಯನ್ನು ಇನ್ನೊಬ್ಬರು ಒಪ್ಪಿಕೊಂಡರೆ ಸಾಕು ಎಂಬ ಧೋರಣೆ ಒಳ್ಳೆಯದಲ್ಲ. ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಲ್ಲಿ ಅದರಲ್ಲಿ ಏಳ್ಗೆ ಆಗುವ ಸಾಧ್ಯತೆಗಳು ಹೆಚ್ಚಾಗಿವೆ. ಆದ್ದರಿಂದ ನಿಮಗೆ ಸಿಗುವ ಸಣ್ಣದೇ ಅವಕಾಶವಾದರೂ ಅದನ್ನು ಚೆನ್ನಾಗಿ ಬಳಸಿಕೊಳ್ಳುವ ಕಡೆಗೆ ಗಮನವನ್ನು ನೀಡಬೇಕು. ಇದರಿಂದ ನಿಮ್ಮ ಸಾಧನೆಗೆ ಸಹಾಯ ಆಗಲಿದೆ. ಮಹಿಳೆಯರು ಚೀಟಿ ವ್ಯವಹಾರ ನಡೆಸುತ್ತಿದ್ದಲ್ಲಿ ಆ ಹಣ ತೆಗೆದು, ಒಡವೆ- ವಸ್ತುಗಳನ್ನು ಮಾಡಿಸಿಕೊಳ್ಳುವ ಬಗ್ಗೆ ಯೋಜನೆ ಹಾಕಿಕೊಳ್ಳಲಿದ್ದೀರಿ. ನಿಮ್ಮಲ್ಲಿ ಕೆಲವರು ದ್ವಿಚಕ್ರ ವಾಹನ ಅಥವಾ ಕಾರು ಖರೀದಿಸುವಂಥ ಸಾಧ್ಯತೆ ಇದೆ. ಒಂದು ವೇಳೆ ಹಣಕಾಸಿನ ಕೊರತೆ ಕಂಡುಬಂದರೂ ಯಾವುದಾದರೂ ಮೂಲದಿಂದ ಅದನ್ನು ಹೊಂದಾಣಿಕೆ ಮಾಡಿಕೊಳ್ಳಲಿದ್ದೀರಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ನಿಮಗೆ ಬರಬೇಕಾದ ಹಣಕ್ಕೆ ಹೆಚ್ಚಿನ ಪ್ರಯತ್ನ ಹಾಕಬೇಕಾಗುತ್ತದೆ. ಈಗಾಗಲೇ ಆಗಿರುವಂಥ ವ್ಯವಹಾರಗಳಲ್ಲಿ ಕೂಡ ಇನ್ನೂ ಬಾಕಿ ಬರಬೇಕಾದ ಹಣಕ್ಕೆ ನಿಮ್ಮ ಪ್ರಯತ್ನ ಗಟ್ಟಿಯಾಗಿ ಹಾಕಲೇಬೇಕಾಗುತ್ತದೆ. ಯಾರು ಸ್ವಂತ ಉದ್ಯೋಗವನ್ನು ಮಾಡುತ್ತಿರುವಿರೋ ಅಂಥವರಿಗೆ ಹಣದ ಹರಿವು ಚೆನ್ನಾಗಿ ಇರಲಿದೆ. ಕಾರ್ಪೆಂಟರ್ ಗಳಿಗೆ, ಪೇಂಟರ್ ಗಳಿಗೆ, ಮನೆಯ ಒಳಗಿನ ಕೆಲಸ ಮಾಡುವಂಥವರು ಹಾಗೂ ಮಾಡಿಸುವಂಥವರಿಗೆ ಉತ್ತಮ ಆದಾಯ ಇದೆ. ನಿಮ್ಮಲ್ಲಿ ಕೆಲವರಿಗೆ ದೊಡ್ಡ ಮಟ್ಟದ ಆರ್ಡರ್ ದೊರೆಯುವ ಯೋಗ ಸಹ ಇದೆ. ಆದರೆ ನಿಮ್ಮಲ್ಲಿ ಒಂದು ಬಗೆಯ ಹಿಂಜರಿಕೆ ಕಾಡಬಹುದು. ಮೊದಲಿನಷ್ಟು ಉತ್ಸಾಹ ಕಾಣದಿರಬಹುದು. ಇದಕ್ಕಾಗಿ ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಯನ್ನು ಮಾಡಿಕೊಳ್ಳುವುದು ಮುಖ್ಯ. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರಿಂದ ನಿಮಗೆ ವಂಚನೆ ಆಗುತ್ತಿದೆ ಎಂಬ ಅಂಶವೊಂದು ಗಮನಕ್ಕೆ ಬರುವ ಸಾಧ್ಯತೆಗಳಿವೆ. ಇದರಿಂದ ಮನಸ್ಸಿಗೆ ಸ್ವಲ್ಪ ಮಟ್ಟಿಗೆ ಬೇಸರ ಕಾಡಬಹುದು. ಆದರೆ ಇದು ನಿಮ್ಮ ಕೆಲಸದ ಮೇಲೆ ಪರಿಣಾಮ ಆಗದಂತೆ ನೋಡಿಕೊಳ್ಳುವುದು ಮುಖ್ಯ. ಕೃಷಿಕರಿಗೆ ಆಸ್ತಿ ಖರೀದಿ ಅಥವಾ ಮಾರಾಟ ವಿಚಾರದಲ್ಲಿ ಸಮಚಿತ್ತದಿಂದ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ. ಹಣಕಾಸಿನ ಹರಿವು ಸರಾಗವಾಗುತ್ತದೆ. ಆದರೆ ಭಾವನಾತ್ಮಕ ಕಾರಣಗಳಿಗೆ ಅಥವಾ ಸನ್ನಿವೇಶಗಳಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳದಿರುವುದು ಉತ್ತಮ. ಕುಟುಂಬದಲ್ಲಿ ನಿಮ್ಮ ಪ್ರಾಮುಖ್ಯ ಹೆಚ್ಚಾಗುತ್ತಿರುವುದು ಅನುಭವಕ್ಕೆ ಬರುತ್ತದೆ. ಮಕ್ಕಳ ಮದುವೆಗೋ ಅಥವಾ ಶುಭ ಸಮಾರಂಭಗಳಿಗಾಗಿಯೋ ಹೊಸ ವಸ್ತ್ರಾಭರಣಗಳನ್ನು ಖರೀದಿ ಮಾಡುವುದರ ಸಲುವಾಗಿ ಹಣವನ್ನು ಖರ್ಚು ಮಾಡಲಿದ್ದೀರಿ. ಇದಕ್ಕಾಗಿ ಸ್ವಲ್ಪ ಮಟ್ಟಿಗೆ ಸಾಲ ಕೂಡ ಮಾಡಬೇಕಾಗಬಹುದು. ಇನ್ನು ಕೃಷಿಗೆ ಸಂಬಂಧಿಸಿದ ವಿಚಾರಗಳಿಗಾಗಿಯೇ ದೂರ ಪ್ರಯಾಣ ಇದೆ. ಈ ಮಧ್ಯೆ ಒಂದಿಷ್ಟು ಒತ್ತಡ ಹಾಗೂ ಉದ್ವೇಗದ ಸನ್ನಿವೇಶಗಳು ಎದುರಾಗುತ್ತವೆ. ವೃತ್ತಿನಿರತರು ಆದಾಯ ಹೆಚ್ಚಳ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಾಡುವ ಪ್ರಯತ್ನಗಳಿಗೆ ಫಲ ನೀಡಲಿವೆ. ಲೆಕ್ಕ- ಪತ್ರಗಳಲ್ಲಿ ಆಗಿರುವಂಥ ಪ್ರಮುಖ ದೋಷಗಳನ್ನು ಕಂಡುಹಿಡಿದು, ನಿಮ್ಮ ನಿಷ್ಠೆ- ಪ್ರಾಮಾಣಿಕತೆಗೆ ಮೆಚ್ಚುಗೆಯನ್ನು ಪಡೆಯಲಿದ್ದೀರಿ. ಬಹಳ ಸಮಯದಿಂದ ಖರೀದಿ ಮಾಡಬೇಕು ಎಂದುಕೊಳ್ಳುತ್ತಿದ್ದ ವಾಹನವೊಂದನ್ನು ಖರೀದಿಸುವಂಥ ಯೋಗ ನಿಮ್ಮ ಪಾಲಿಗೆ ಇದೆ. ವಿದ್ಯಾರ್ಥಿಗಳು ದಾಕ್ಷಿಣ್ಯಕ್ಕೆ ಸಿಲುಕಿಕೊಂಡು ಸಮಯ ವ್ಯರ್ಥ ಮಾಡಿಕೊಳ್ಳುವ ಸಾಧ್ಯತೆಗಳಿವೆ. ನಿಮ್ಮ ಕೆಲಸ ಅಥವಾ ಜವಾಬ್ದಾರಿ ಮುಗಿಯುವ ತನಕ ಇತರರಿಗೆ ಸಹಾಯ ಮಾಡುವುದಾಗಿ ಮಾತು ನೀಡದೆ ಇರುವುದು ಉತ್ತಮ. ಇಲ್ಲದಿದ್ದಲ್ಲಿ ನೀವೇ ಸಮಸ್ಯೆಗೆ ಸಿಲುಕಿಕೊಳ್ಳುವ ಸಾಧ್ಯತೆಗಳಿರುತ್ತದೆ. ಮಹಿಳೆಯರು ವೈದ್ಯಕೀಯ ವೃತ್ತಿಯಲ್ಲಿ ಇದ್ದರೆ ಸ್ವಂತವಾಗಿ ವೃತ್ತಿಯನ್ನು ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಿದ್ದೀರಿ. ಇದಕ್ಕಾಗಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ನೆರವು ನೀಡಲಿದ್ದಾರೆ. ನಿಮ್ಮದೇ ಹೆಸರಲ್ಲಿ ಸೈಟು, ಮನೆ, ಅಪಾರ್ಟ್ ಮೆಂಟ್ ಖರೀದಿಸುವ ಯೋಗ ಇದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಈ ಹಿಂದೆ ಯಾವಾಗಲೋ ನೀಡಿದ್ದ ಮಾತಿನಂತೆ ನಡೆದುಕೊಳ್ಳಲೇಬೇಕಾದ ಪರಿಸ್ಥಿತಿ ಉದ್ಭವಿಸಲಿದೆ. ನಿಮ್ಮ ಆರ್ಥಿಕ ಸ್ಥಿತಿಯನ್ನೋ ಅಥವಾ ಪರಿಸ್ಥಿತಿಯನ್ನೋ ಹೇಳಿಕೊಂಡು, ಇನ್ನೊಂದಿಷ್ಟು ಸಮಯ ಕೇಳಿದರೂ ಯಾವುದೇ ಪ್ರಯೋಜನ ಆಗುವುದಿಲ್ಲ. ಆದರೆ ಈ ವಾರದಲ್ಲಿ ಅದಕ್ಕಾಗಿ ಪ್ರಯತ್ನಿಸಿದಲ್ಲಿ ನಿಮ್ಮ ಜವಾಬ್ದಾರಿಯನ್ನು ಮುಗಿಸಿಕೊಂಡು ಬಿಡಬಹುದು. ಆರೋಗ್ಯದ ವಿಚಾರದಲ್ಲಿ ಜಾಗ್ರತೆಯನ್ನು ವಹಿಸಿ. ನೀರು ಅಥವಾ ಆಹಾರದಲ್ಲಿ ವ್ಯತ್ಯಾಸವಾಗಿ ಫುಡ್ ಪಾಯಿಸನ್ ಆಗಬಹುದು ಅಥವಾ ಬೆನ್ನು ನೋವಿನ ಸಮಸ್ಯೆ ವಿಪರೀತವಾಗಿ ಕಾಡಬಹುದು. ಈಗಾಗಲೇ ಈ ರೀತಿ ನೋವನ್ನು ಅನುಭವಿಸುತ್ತಿದ್ದೀರಿ ಅಂತಾದಲ್ಲಿ ಸರಿಯಾದ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ವೈದ್ಯೋಪಚಾರ ಮಾಡಿಕೊಳ್ಳುವುದು ಸೂಕ್ತ. ಇಟ್ಟಿಗೆ, ಸಿಮೆಂಟ್, ಕಬ್ಬಿಣದ ಮಾರಾಟವನ್ನು ಮಾಡುತ್ತಿರುವವರಿಗೆ ಆದಾಯದಲ್ಲಿ ಹೆಚ್ಚಳ ಮಾಡಿಕೊಳ್ಳುವುದಕ್ಕೆ ಮಾರ್ಗ ಗೋಚರ ಆಗುತ್ತದೆ. ಖಾಸಗಿ ಕಂಪನಿಯಲ್ಲಿ ಇರುವವರಿಗೆ ಉತ್ತಮವಾದ ಸ್ಥಾನ- ಮಾನ ಅಥವಾ ಹುದ್ದೆಗಳು ದೊರೆಯುವ ಯೋಗ ಇದೆ. ಕೃಷಿಕರಿಗೆ ಯಾವುದೋ ಉತ್ಸಾಹದಲ್ಲಿ ನೀವಾಗಿಯೇ ಸ್ನೇಹಿತರಿಗೆ ಅಥವಾ ಸಂಬಂಧಿಕರಿಗೆ ಹೇಳಿದ ವಿಚಾರವೊಂದು ಕೊರಳಿಗೆ ಉರುಳಾಗಿ ಸುತ್ತಿಕೊಳ್ಳುವ ಸಾಧ್ಯತೆ ಇದೆ. ಇದನ್ನು ಹೇಳಬಾರದಿತ್ತು ಎಂದು ಆ ನಂತರ ಆಲೋಚನೆ ಮಾಡಿದರೆ ಏನೂ ಉಪಯೋಗ ಆಗುವುದಿಲ್ಲ. ಇನ್ನು ಮೊದಲಿಗೆ ನಿಮ್ಮ ಜತೆಗೆ ಬಹಳ ಚೆನ್ನಾಗಿ, ಗೌರವಯುತವಾಗಿ ಮಾತನಾಡುತ್ತಿದ್ದವರು ಏಕಾಏಕಿ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದೆನಿಸುವುದಕ್ಕೆ ಶುರುವಾಗುತ್ತದೆ. ಆಸ್ತಿ- ಹಣಕಾಸಿನ ವಿಚಾರವು ಪ್ರಾಶಸ್ತ್ಯ ಪಡೆದುಕೊಳ್ಳುತ್ತದೆ. ಕುಟುಂಬ ಸದಸ್ಯರಿಗೆ ಹಣಕಾಸಿನ ಅಗತ್ಯ ತೀವ್ರ ಆಗುವುದರಿಂದ ಆಸ್ತಿ ಅಡಮಾನ ಮಾಡಿಯಾದರೂ ಅವರಿಗೆ ನೆರವು ನೀಡಬೇಕಾಗುತ್ತದೆ. ಯಾವುದಾದರೂ ಕೆಲಸ ಒಪ್ಪಿಕೊಳ್ಳುವುದಕ್ಕೆ ಧೈರ್ಯ ಸಾಕಾಗುವುದಿಲ್ಲ. ನಿಮ್ಮಲ್ಲಿ ಕೆಲವರು ವಿಟಮಿನ್ -ಡಿ ಕೊರತೆಯನ್ನು ಅನುಭವಿಸಲಿದ್ದೀರಿ. ವೃತ್ತಿನಿರತರು ಬಹಳ ಸಲೀಸಾಗಿ ಬಗೆಹರಿಯಬಹುದು ಎಂದು ಅಂದಾಜಿಸಿದ್ದ ಕೆಲಸಗಳು, ಯೋಜನೆಗಳು ಗೋಜಲು ಗೋಜಲಾಗಿ ಆತಂಕಕ್ಕೆ ಕಾರಣ ಆಗುವಂಥ ಸಾಧ್ಯತೆ ಇದೆ. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರು ವಿಪರೀತ ನಿರೀಕ್ಷೆ ಮಾಡುತ್ತಿದ್ದಾರೆ ಎಂದೆನಿಸುತ್ತದೆ. ಮನೆ ದೇವರ ಸ್ಮರಣೆ, ಆರಾಧನೆಯಿಂದ ಕೆಲವು ಸಮಸ್ಯೆಗಳನ್ನು ಎದುರಿಸುವುದಕ್ಕೆ ಬಲ ದೊರೆಯುತ್ತದೆ. ಹಣಕಾಸನ್ನು ಹೊಂದಿಕೆ ಮಾಡುವುದಕ್ಕೆ ಸಮಯ ಮೀಸಲಿಡಬೇಕಾಗುತ್ತದೆ. ವಿದ್ಯಾರ್ಥಿಗಳು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಥವಾ ಮಶೀನ್ ಲರ್ನಿಂಗ್ ರೀತಿಯ ಹೊಸ ಕೋರ್ಸ್ ಗೆ ಸೇರ್ಪಡೆ ಆಗುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಸೋದರ ಸಂಬಂಧಿಗಳ ಭೇಟಿಯಿಂದ ಮನಸ್ಸಿಗೆ ಖುಷಿ ಇದೆ. ಶೈಕ್ಷಣಿಕ ವಿಚಾರದಲ್ಲಿ ಅಂದುಕೊಳ್ಳದ ರೀತಿಯಲ್ಲಿ ಕೆಲವು ಬೆಳವಣಿಗೆಗಳು ನಡೆಯಲಿವೆ. ಮಹಿಳೆಯರು ಆಕರ್ಷಕವಾದ ಲಾಭ ದೊರೆಯುತ್ತದೆ ಎಂದು ಕಾಗದದ ಮೇಲೆ ನಿಮಗೆ ಲೆಕ್ಕಾಚಾರ ತೋರಿಸಿದರು ಎಂಬ ಕಾರಣಕ್ಕೆ ಬಂಡವಾಳ ಹಾಕುವುದಕ್ಕೆ ಮುಂದಾಗಬೇಡಿ. ಹೆಚ್ಚಿನ ಹಣಕ್ಕೆ ಆಸೆ ಪಟ್ಟು ಹೂಡಿಕೆ ಮಾಡಿದರೆ ನಂತರ ಪರಿತಪಿಸುವಂತಾಗುತ್ತದೆ. ಮಂಗಳವಾರದಂದು ನಿಮ್ಮ ಮನೆಯ ಹತ್ತಿರ ಇರುವ ನರಸಿಂಹ ದೇವರ ದೇವಸ್ಥಾನದಲ್ಲಿ ದರ್ಶನ ಪಡೆದುಕೊಂಡಲ್ಲಿ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಹಣಕಾಸಿನ ವಿಚಾರದಲ್ಲಿ ಇರಬಹುದು ಅಥವಾ ಜವಾಬ್ದಾರಿಗೆ ಸಂಬಂಧಿಸಿದಂತೆ ಇರಬಹುದು, ಇತರರು ನೆರವಾಗುತ್ತೀನಿ ಎಂದಿದ್ದಾರೆ ಎಂಬ ಮಾತನ್ನೇ ನಂಬಿಕೊಂಡು, ಯಾವುದೇ ಕೆಲಸಕ್ಕೆ ಕೈ ಹಾಕಬೇಡಿ. ನಿಮ್ಮ ಸಾಮರ್ಥ್ಯ, ನಿಮ್ಮ ಬಳಿ ಇರುವ ಸಂಪನ್ಮೂಲ ಲಭ್ಯತೆ ಇತ್ಯಾದಿಗಳನ್ನು ಗಮನದಲ್ಲಿ ಇಟ್ಟುಕೊಂಡೇ ಮುಂದುವರಿಯಿರಿ. ಯಾರಾದರೂ ನಿಮ್ಮ ವಿರುದ್ಧ ಹಳೇ ದ್ವೇಷ ಸಾಧನೆ ಮಾಡುತ್ತಿದ್ದಾರೆ ಎಂಬ ಗುಮಾನಿ ಬಂದಲ್ಲಿ ಈ ವಾರ ಕೂಡಲೇ ಎಚ್ಚೆತ್ತುಕೊಳ್ಳುವುದು ಮುಖ್ಯ. ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಪ್ರಮುಖವಾದ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ನೀವು ಅಂದುಕೊಂಡಷ್ಟು ಬಿಡುವು ಸಿಗದಷ್ಟು ಮೇಲಿಂದ ಮೇಲೆ ಕೆಲಸಗಳು ಬರಲಿವೆ. ಆದ್ದರಿಂದ ಯಾವುದು ಮೊದಲು ಹಾಗೂ ಯಾವುದು ನಂತರ ಎಂಬ ಬಗ್ಗೆ ಸ್ಪಷ್ಟತೆ ಇರಲಿ. ಸಹೋದ್ಯೋಗಿಗಳು ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ಕೆಲವು ಸಂಗತಿಗಳನ್ನು ನೀವೂ ಒಪ್ಪಲೇಬೇಕು ಎಂಬ ಒತ್ತಡ ಬರಬಹುದು. ಆದರೆ ಯಾವುದನ್ನೂ ತಕ್ಷಣವೇ ಒಪ್ಪಿಕೊಳ್ಳುವುದಕ್ಕೆ ಹೋಗಬೇಡಿ. ನಿಧಾನವಾಗಿ ಆಲೋಚನೆ ಮಾಡಿ, ಆ ನಂತರ ತೀರ್ಮಾನವನ್ನು ಕೈಗೊಳ್ಳಿ. ಕೃಷಿಕರು ನೀವು ಎಷ್ಟೇ ಶ್ರಮ ಹಾಕಿದರೂ ಕೆಲವು ಕೆಲಸಗಳನ್ನು ಈ ವಾರ ಪೂರ್ಣ ಮಾಡುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಇತರರ ಸಾಮರ್ಥ್ಯವನ್ನು ಈ ಕಾರಣದಿಂದ ನಿಮ್ಮ ಜತೆಗೆ ಹೋಲಿಕೆ ಮಾಡಿಕೊಳ್ಳದಿರಿ. ಹಣ- ಸಮಯ, ಶಿಫಾರಸು ಎಂದು ಹಠಕ್ಕೆ ಬಿದ್ದು, ಕೆಲಸ ಮುಗಿಸಲೇ ಬೇಕು ಎಂದು ಹೊರಟರೆ ನಿಮಗೆ ನಷ್ಟವಾದೀತು. ಹೊಂದಾಣಿಕೆ ಮಾಡಿಕೊಂಡಲ್ಲಿ ನೆಮ್ಮದಿಯಿಂದ ಇರಬಹುದು. ಅನಿಸಿದ್ದನ್ನು ನೇರಾನೇರ ಹೇಳಿಬಿಡ್ತೀನಿ ಎಂದುಕೊಳ್ಳದಿರಿ, ಎಚ್ಚರ. ವೃತ್ತಿನಿರತರು ನಿಮ್ಮ ಧ್ವನಿ, ಬಾಡಿ ಲಾಂಗ್ವೇಜ್ ಮೇಲೆ ಲಕ್ಷ್ಯ ಇರಿಸಿಕೊಳ್ಳಿ. ಇದರ ಆಧಾರದ ಮೇಲೆ ನಿಮ್ಮ ನಡವಳಿಕೆ ಹಾಗೂ ಸ್ವಭಾವದ ಬಗ್ಗೆ ಇತರರು ತೀರ್ಪು ನೀಡುವುದಕ್ಕೆ ಅವಕಾಶ ನೀಡದಿರಿ. ಉಳಿತಾಯ ಮಾಡಬೇಕು ಎಂಬುದು ನಿಮ್ಮ ಉದ್ದೇಶವೇ ಆಗಿದ್ದಲ್ಲಿ ದುಡಿಮೆಯ ಹಣವನ್ನು ಉಳಿಸಿ. ಅದನ್ನು ಬಿಟ್ಟು ಕೊಡಬೇಕಾದ ಸಾಲವನ್ನು ಉಳಿಸಿಕೊಂಡು, ಅದನ್ನು ಉಳಿತಾಯ ಅಂತ ಮಾಡದಿರಿ. ಇನ್ನು ಸಣ್ಣ-ಪುಟ್ಟ ಕೆಲಸಗಳನ್ನೂ ಶ್ರದ್ಧೆಯಿಂದ ಮಾಡಿ. ವಿದ್ಯಾರ್ಥಿಗಳು ಸ್ನೇಹಿತರ ಜತೆಗೆ ಪ್ರವಾಸಕ್ಕೆ ತೆರಳುವಂಥ ಯೋಗ ಇದೆ. ಹಣ ಖರ್ಚು ಮಾಡುವ ವಿಚಾರದಲ್ಲಿ ನಿಯಂತ್ರಣ ಮುಖ್ಯವಾಗುತ್ತದೆ. ಇನ್ನು ತಂದೆ- ತಾಯಿಯಿಂದ ಪಡೆದುಕೊಂಡ ಹಣಕ್ಕೆ ಸರಿಯಾದ ಲೆಕ್ಕಾಚಾರವನ್ನು ಇಟ್ಟುಕೊಳ್ಳುವುದು ಮುಖ್ಯವಾಗುತ್ತದೆ. ಇಲ್ಲದಿದ್ದಲ್ಲಿ ನಿಮ್ಮ ಬಗ್ಗೆ ಇರುವಂಥ ವಿಶ್ವಾಸವನ್ನು ಕಳೆದುಕೊಳ್ಳುತ್ತೀರಿ, ಜಾಗ್ರತೆ. ಅಷ್ಟೇ ಅಲ್ಲ, ನಿಮಗಿಂತ ಹಿರಿಯರ ಜತೆಗೆ ಮಾತನಾಡುವಾಗ ನಿಮ್ಮ ಧೋರಣೆ ಬಗ್ಗೆ ಕುಟುಂಬ ಸದಸ್ಯರಿಂದ ಆಕ್ಷೇಪ ಕೇಳಿಬರಲಿದೆ. ಸ್ತ್ರೀಯರು ವಿವಾಹಕ್ಕೆ ಪ್ರಯತ್ನಿಸುತ್ತಿದ್ದಲ್ಲಿ ತಮ್ಮ ಮನಸ್ಸಿಗೆ ಮೆಚ್ಚುವಂಥ ಸಂಗಾತಿ ದೊರೆಯುವ ಯೋಗ ಇದೆ. ಅದೇ ರೀತಿ ಉದ್ಯೋಗಸ್ಥರಾಗಿದ್ದಲ್ಲಿ ಕೆಲಸ ಮಾಡುವ ಸ್ಥಳದಲ್ಲಿಯೇ ನಿಮ್ಮಲ್ಲಿ ಕೆಲವರು ಪ್ರೀತಿ- ಪ್ರೇಮದಲ್ಲಿ ಬೀಳುವಂಥ ಸಾಧ್ಯತೆಗಳಿವೆ.
ಲೇಖನ- ಎನ್.ಕೆ.ಸ್ವಾತಿ