Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 17ರಿಂದ 23ರ ತನಕ ವಾರಭವಿಷ್ಯ  

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 17ರಿಂದ 23ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 17ರಿಂದ 23ರ ತನಕ ವಾರಭವಿಷ್ಯ  
ಸಂಖ್ಯಾಶಾಸ್ತ್ರ
Follow us
ಸ್ವಾತಿ ಎನ್​ಕೆ
| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 17, 2023 | 1:39 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 17ರಿಂದ 23ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಮನಸ್ಸಿನಲ್ಲಿ ಒಂದು ಬಗೆಯ ಅಳುಕು ನಿಮ್ಮನ್ನು ಕಾಡಲಿದೆ. ಯಾವುದೇ ಕೆಲಸಕ್ಕೆ ಕೈ ಹಾಕುವಾಗಲೂ ಇದು ಪೂರ್ತಿ ಮಾಡುವುದಕ್ಕೆ ಸಾಧ್ಯವಾ ಎಂಬ ಪ್ರಶ್ನೆ ನಿಮ್ಮೆದುರಿಗೆ ನಿಲ್ಲಲಿದೆ. ಎಲ್ಲ ಲೆಕ್ಕ ಹಾಕಿಕೊಂಡು, ಸಿದ್ಧ ಮಾಡಿಕೊಂಡ ಮೊತ್ತ ಸಹ ಅನಿರೀಕ್ಷಿತವಾಗಿ ಉದ್ಭವಿಸುವ ಖರ್ಚಿಗೆ ಸರಿ ಹೋಗಿಬಿಡುತ್ತದೆ. ಇತರರಲ್ಲಿ ಹೇಳಿಕೊಳ್ಳಲು ಸಾಧ್ಯವಾಗದಂಥ ಅಭದ್ರತೆಯ ಭಾವವೊಂದು ನಿಮ್ಮನ್ನು ವಿಪರೀತವಾಗಿ ಕಾಡಲಿದೆ. ನಿಮ್ಮಲ್ಲಿ ಕೆಲವರಿಗೆ ಕಾಲಿಗೆ ಬಲವಾದ ಪೆಟ್ಟು ಆಗುವಂಥ ಯೋಗ ಇದ್ದು, ಎಚ್ಚರಿಕೆಯಿಂದ ಇರುವುದು ಉತ್ತಮ. ಅದರಲ್ಲೂ ದ್ವಿಚಕ್ರ ವಾಹನದಲ್ಲಿ ಹೆಚ್ಚು ಸಂಚರಿಸುತ್ತೀರಿ, ಇತರರ ಕೆಲಸಗಳನ್ನು ಮಾಡಿಕೊಡುತ್ತೀರಿ ಎಂದಾದಲ್ಲಿ ಆತುರಕ್ಕೆ ಬಿದ್ದು, ವೇಗವಾಗಿ ಚಾಲನೆ ಮಾಡುವುದಕ್ಕೆ ಹೋಗಬೇಡಿ. ನಿಮ್ಮ ಒಳಿತಿಗಾಗಿ ನೀವೇ ಕಷ್ಟಪಡಬೇಕು ಎಂಬುದನ್ನು ಮನಸ್ಸಲ್ಲಿ ಗಟ್ಟಿ ಮಾಡಿಕೊಳ್ಳಿ, ಇತರರಿಂದ ಯಾವ ಸಹಾಯವನ್ನೂ ನಿರೀಕ್ಷಿಸುವುದಕ್ಕೆ ಹೋಗಬೇಡಿ. ಮಾನಸಿಕ ಖಿನ್ನತೆ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಸೂಕ್ತ ವೈದ್ಯೋಪಚಾರವನ್ನು ಮಾಡಿಸಿಕೊಳ್ಳುವುದು ಉತ್ತಮ. ಕೃಷಿಕರಿಗೆ ಈ ಹಿಂದೆ ಮಾಡಿದ್ದ ಸಾಲವನ್ನು ಒಟ್ಟಿಗೆ ತೀರಿಸಬೇಕಾದ ಅಥವಾ ದೊಡ್ಡ ಮೊತ್ತವನ್ನು ಹಿಂತಿರುಗಿಸಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಆ ಹಣವನ್ನು ತೀರಿಸುವುದಕ್ಕಾಗಿ ಮತ್ತೆ ಸಾಲ ಮಾಡಬೇಕಾಗಲಿದೆ. ಕುಟುಂಬದಲ್ಲಿ ಹಣಕಾಸಿನ ವೆಚ್ಚದ ವಿಚಾರಕ್ಕೆ ದೊಡ್ಡ ಧ್ವನಿಯಲ್ಲಿ ವಾಗ್ವಾದಗಳು ನಡೆಯಬಹುದು. ಇಂಥ ಸಂದರ್ಭದಲ್ಲಿ ವಿಚಾರವು ದೊಡ್ಡದಾಗದಂತೆ ನೋಡಿಕೊಳ್ಳುವುದು ನಿಮ್ಮ ಕೈಯಲ್ಲೇ ಇದೆ. ವೃತ್ತಿನಿರತರಿಗೆ ಇಷ್ಟು ಸಮಯ ಆಗುತ್ತಿದ್ದ ವೆಚ್ಚಕ್ಕಿಂತ ಜಾಸ್ತಿ ಮೊತ್ತವನ್ನು ಕೈಯಿಂದ ಕಳೆದುಕೊಳ್ಳುವಂಥ ಯೋಗ ಇದೆ. ಹೊಸಬರ ಜತೆಗೆ ಕೆಲಸ ಮಾಡುವಂಥ ಪರಿಸ್ಥಿತಿ ಉದ್ಭವವಾದಲ್ಲಿ ಆರಂಭದಲ್ಲಿಯೇ ಮೊತ್ತವನ್ನು ಸರಿಯಾಗಿ ಮಾತನಾಡಿಕೊಳ್ಳಿ. ಕೆಲಸ ಆದ ಮೇಲೆ ಮಾತನಾಡಿದರಾಯಿತು ಅಂತ ಯಾರಾದರೂ ಹೇಳಿದಲ್ಲಿ ಅದಕ್ಕೆ ಒಪ್ಪಿಕೊಳ್ಳದೇ ಆರಂಭದಲ್ಲಿಯೇ ಏನು, ಎಷ್ಟು, ಎಷ್ಟು ಸಮಯದಲ್ಲಿ ಕೆಲಸ ಆಗಲಿದೆ ಎಂಬುದನ್ನು ಪಕ್ಕಾ ಮಾಡಿಕೊಂಡಿಯೇ ಕೆಲಸವನ್ನು ಒಪ್ಪಿಸುವುದು ಉತ್ತಮ. ವಿದ್ಯಾರ್ಥಿಗಳಿಗೆ ತಮ್ಮ ಕುಟುಂಬದ ಆರ್ಥಿಕ ಸ್ಥಿತಿ ಹಾಗೂ ತಮಗೆ ಬೇಕಾದದ್ದು ದೊರೆಯುತ್ತಿಲ್ಲ ಎಂಬ ಸಂಗತಿ ಚಿಂತೆಗೆ ಕಾರಣವಾಗಲಿದೆ. ಇತರರಿಗೆ ನಿಮ್ಮನ್ನು ನೀವು ಹೋಲಿಸಿಕೊಂಡು ಬೇಸರ ಮಾಡಿಕೊಳ್ಳಲಿದ್ದೀರಿ. ಆದರೆ ಈ ಸಿಟ್ಟನ್ನು ತಂದೆ- ತಾಯಿಯ ಮೇಲೋ ಅಥವಾ ನಿಮಗೆ ಹತ್ತಿರದವರ ಮೇಲೆ ತೋರಿಸಿದರೋ ಆ ನಂತರ ಪಶ್ಚಾತಾಪ ಪಡುವಂಥ ಸನ್ನಿವೇಶ ಸೃಷ್ಟಿ ಆಗಲಿದೆ, ಎಚ್ಚರ.ಮಹಿಳೆಯರಿಗೆ ತಮ್ಮ ಬಳಿ ಇರುವ ಒಡವೆಯನ್ನು ಸಾಲ ಪಡೆಯುವುದಕ್ಕಾಗಿ ನೀಡಬೇಕಾದಂಥ ಸನ್ನಿವೇಶ ಉದ್ಭವಿಸಲಿದೆ. ಇನ್ನು ನಿಮ್ಮಲ್ಲಿ ಕೆಲವರು ತವರು ಮನೆಯವರಿಗಾಗಿ ಹಣಕಾಸಿನ ಹೊಂದಾಣಿಕೆಯನ್ನು ಮಾಡಿಕೊಡಲಿದ್ದೀರಿ. ಈ ಬಗ್ಗೆ ವಿವಾಹಿತ ಸ್ತ್ರೀಯರಿಗೆ ಪತಿಯ ಮನೆಯವರ ಕಡೆಯಿಂದ ಅಥವಾ ಸ್ವತಃ ಪತಿಯ ಕಡೆಯಿಂದ ಆಕ್ಷೇಪ, ಅಸಮಾಧಾನ ವ್ಯಕ್ತ ಆಗಬಹುದು. ಯಾರಿಗೆ ಥೈರಾಯ್ಡ್ ಸಮಸ್ಯೆ ಈಗಾಗಲೇ ಇದೆಯೋ ಅಂಥವರಿಗೆ ಪರಿಸ್ಥಿತಿ ಉಲ್ಬಣಿಸುವ ಸಾಧ್ಯತೆಗಳಿವೆ. ಆದ್ದರಿಂದ ಆರೋಗ್ಯದ ಬಗ್ಗೆ ಹೆಚ್ಚು ಎಚ್ಚರಿಕೆಯನ್ನು ವಹಿಸಿ. ಮನೆಮದ್ದು ಅಥವಾ ಸ್ವಯಂ ವೈದ್ಯ ಮಾಡಿಕೊಳ್ಳುವುದಕ್ಕೆ ಹೋಗಬೇಡಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಎಷ್ಟು ಸಮಾಧಾನ, ತಾಳ್ಮೆಯಿಂದ ಇರುತ್ತೀರೋ ಅಷ್ಟು ಒಳ್ಳೆಯದು. ಸಣ್ಣ ಸಣ್ಣ ಸಂಗತಿಗಳಿಗೂ ಸಿಕ್ಕಾಪಟ್ಟೆ ರಿಯಾಕ್ಟ್ ಮಾಡುವುದಕ್ಕೆ ಹೋಗಬೇಡಿ. ಅಸಮಾಧಾನ, ಅಭಿಪ್ರಾಯ ಭೇದಗಳನ್ನು ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ. ಇನ್ನು ಪೊಲೀಸ್ ಠಾಣೆ ಕೆಲಸಗಳು, ಕೋರ್ಟ್- ಕಚೇರಿ ವ್ಯವಹಾರಗಳು ಇದ್ದಲ್ಲಿ ಈ ವಾರ ಸರಾಗವಾಗಿ ನಡೆಯಲಿದೆ. ನಿಮ್ಮ ಸುತ್ತ- ಮುತ್ತ ಆಗುತ್ತಿರುವ ಬೆಳವಣಿಗೆಗಳ ಮೇಲೆ ಕಣ್ಣು ತೆರೆದಿಟ್ಟಿರಿ. ನಿಮ್ಮ ಪಾಲಿಗೆ ಅವಕಾಶಗಳು ತೆರೆದುಕೊಳ್ಳಲಿವೆ. ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದಕ್ಕೆ ಹಿಂಜರಿಕೆ ಮಾಡಬೇಡಿ. ಇನ್ನು ಇದೇ ಅವಧಿಯಲ್ಲಿ ನಿಮಗೆ ಭವಿಷ್ಯದಲ್ಲಿ ನಡೆಯಲಿರುವ ಬೆಳವಣಿಗೆಗಳ ಬಗ್ಗೆ ಸೂಚನೆ ದೊರೆಯಲಿದೆ. ಉಳಿತಾಯ ಮಾಡಿದ್ದ ಹಣದಲ್ಲಿ ಸ್ವಲ್ಪ ಪ್ರಮಾಣದಲ್ಲಿಯಾದರೂ ಹಿಂತೆಗೆಯಬೇಕಾದ ಸನ್ನಿವೇಶ ನಿರ್ಮಾಣ ಆಗಲಿದೆ. ಕೃಷಿಕರಿಗೆ ನೀವು ಕೈಗೊಳ್ಳುವ ತೀರ್ಮಾನದ ಬಗ್ಗೆ ಕುಟುಂಬದಲ್ಲಿ ಪರ- ವಿರೋಧಗಳು ಕೇಳಿಬರಲಿವೆ. ತೀರಾ ಅಗತ್ಯ ಅಲ್ಲ ಅಂತಾದರೆ, ಇನ್ನು ಒಂದು ವೇಳೆ ಇನ್ನಷ್ಟು ಸಮಯ ಮುಂದೂಡುವುದಕ್ಕೆ ಸಾಧ್ಯ ಎಂದಾದಲ್ಲಿ ನಿಮ್ಮ ತೀರ್ಮಾನ- ನಿರ್ಧಾರಗಳನ್ನು ಮುಂದಕ್ಕೆ ಹಾಕಿ. ಈಗಾಗಲೇ ಜಮೀನು ಇದೆ, ಅದನ್ನು ಸೈಟುಗಳಾಗಿ ಮಾಡಿ, ಮಾರಾಟ ಮಾಡಬೇಕು ಅಂತಿದ್ದೀನಿ ಎನ್ನುವವರಿಗೆ ದೊಡ್ಡ ಮಟ್ಟದ ಹಣ ಬರುವಂಥ ಅವಕಾಶವೊಂದು ತೆರೆದುಕೊಳ್ಳಲಿದೆ. ನಿಮ್ಮ ಶ್ರಮಕ್ಕೆ ನಿರೀಕ್ಷೆಗೂ ಮೀರಿದಂಥ ಲಾಭ ದೊರೆಯುವ ಸಾಧ‌್ಯತೆಗಳಿವೆ. ಇದೇ ವಾರ ಮನೆಗೆ ರಾಸುಗಳನ್ನು ಖರೀದಿ ಮಾಡುವಂಥ ಸಾಧ್ಯತೆ ಸಹ ಇದೆ. ವೃತ್ತಿನಿರತರಿಗೆ ಬಿಡುವಿಲ್ಲದಷ್ಟು ಕೆಲಸಗಳು ಮೈ ಮೇಲೆ ಬರಲಿವೆ. ನೀವು ಬಹಳ ಸಮಯದಿಂದ ಖರೀದಿ ಮಾಡಬೇಕು ಎಂದಿದ್ದ ವಸ್ತುಗಳನ್ನು ಈ ವಾರ ಕೊಳ್ಳುವಂಥ ಸಾಧ್ಯತೆಗಳಿವೆ. ಪ್ರಭಾವಿಗಳ ಪರಿಚಯ ಆಗಲಿದೆ. ಈ ಹಿಂದೆ ನೀವು ಕಷ್ಟಪಟ್ಟು ಬೆಳೆಸಿಕೊಂಡಿದ್ದ ಸಾಮರ್ಥ್ಯ, ಪರಿಚಯ ಈಗ ನಿಮಗೆ ಉಪಯೋಗಕ್ಕೆ ಆಗಲಿದೆ. ಊಟ- ತಿಂಡಿ ಸಮಯಕ್ಕೆ ಸರಿಯಾಗಿ ಮಾಡಲಿಕ್ಕೆ ಆಗದೆ ಗ್ಯಾಸ್ಟ್ರಿಕ್ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಆದ್ದರಿಂದ ಸಮಯಕ್ಕೆ ಸರಿಯಾಗಿ ಊಟ- ತಿಂಡಿ ಮಾಡಿ. ವಿದ್ಯಾರ್ಥಿಗಳ ಕಡೆಗೆ ಗಮನ ಹರಿಸುವುದಾದರೆ, ಯಾರು ಹಾಸ್ಟೆಲ್ ಗಳಲ್ಲಿ ಓದುತ್ತಿದ್ದೀರೋ ಅಂಥವರಿಗೆ ಈ ವಾರ ಏಕಾಂಗಿತನ ಕಾಡಬಹುದು. ಈ ಹಿಂದೆ ನೀವು ತೆಗೆದುಕೊಂಡ ನಿರ್ಧಾರದ ಬಗ್ಗೆ ಪರಾಮರ್ಶೆ ಮಾಡಲಿದ್ದೀರಿ. ಮನೆಯಿಂದ ದೂರದಲ್ಲಿ ಓದುವುದು ಬೇಡ ಎಂದೆನಿಸಬಹುದು, ಅದೇ ವೇಳೆ ಬಿಟ್ಟು ಹೋಗಲಾರಿರಿ ಎಂಬಂಥ ಒತ್ತಡದ ಸನ್ನಿವೇಶ ಇರಲಿದೆ. ಕುಟುಂಬದ ಸದಸ್ಯರು ನಿಮ್ಮ ಸಲುವಾಗಿ ಕೆಲವು ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಹಣ ಖರ್ಚು ಮಾಡುವಂಥ ಯೋಗ ಇದೆ. ಹೊರಗಿನ ಆಹಾರ ಸೇವನೆ ಮಾಡುವಾಗ ನಿಮಗೆ ಅಲರ್ಜಿ ಆಗುವಂಥ ಪದಾರ್ಥಗಳಿಂದ ದೂರ ಇರುವುದು ಕ್ಷೇಮ. ಮಹಿಳೆಯರಾಗಿದ್ದಲ್ಲಿ, ಅದರಲ್ಲೂ ನೀವು ಉದ್ಯೋಗಸ್ಥರು ಅಂತಾದಲ್ಲಿ ವಿಪರೀತ ಕೆಲಸದ ಒತ್ತಡ ಅನುಭವಕ್ಕೆ ಬರಲಿದೆ. ನಿಮ್ಮ ಮೇಲಧಿಕಾರಿಗಳಿಂದ ಮಾನಸಿಕ ಕಿರುಕುಳ ಅನುಭವಕ್ಕೆ ಬರಲಿದೆ. ಈಗಿಂದ ಈಗಲೇ ಕೆಲಸಗಳು ಆಗಬೇಕು ಎಂದು ಕುತ್ತಿಗೆ ಮೇಲೆ ಕೂತಂತೆ ವರ್ತಿಸುವುದಕ್ಕೆ ಆರಂಭಿಸುತ್ತಾರೆ. ನಿಮ್ಮಲ್ಲಿ ಕೆಲವರು ಈಗಿನ ಉದ್ಯೋಗ ಬಿಟ್ಟು, ಬೇರೆಯದನ್ನು ಹುಡುಕಿಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಸ್ನಾನದ ನಂತರದಲ್ಲಿ ಹನ್ನೊಂದು ಬಾರಿ ಓಂ ನಮೋ ನಾರಾಯಣಾಯ ಎಂದು ಹೇಳಿಕೊಳ್ಳಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನಿಮ್ಮ ಆತ್ಮಸಾಕ್ಷಿ ಅಷ್ಟೇನೂ ಸ್ಪಂದಿಸದ ಅಥವಾ ಅದಕ್ಕೆ ನೀವು ಸರಿಯಾಗಿ ಪ್ರತಿಕ್ರಿಯೆ ನೀಡದಂಥ ವಾರ ಇದಾಗಿರುತ್ತದೆ. ನೆನಪಿನಲ್ಲಿ ಇರಿಸಿಕೊಳ್ಳಿ. ಒಂದು ವೇಳೆ ಯಾವುದೇ ಆದರೂ ಅದು ನಿಮ್ಮದಲ್ಲ ಎಂದು ಆದ ಮೇಲೆ, ಅಂದರೆ ನಿಮ್ಮದಲ್ಲದ್ದು ಅಂತ ಗೊತ್ತಾದ ಮೇಲೆ ಅದಕ್ಕೆ ಆಸೆ ಪಡಬೇಡಿ. ಯಾರಿಗೂ ಗೊತ್ತಾಗಲ್ಲ, ನಾನು ಬುದ್ಧಿವಂತಿಕೆಯಿಂದ ಎಲ್ಲವನ್ನೂ ನಿಭಾಯಿಸಬಲ್ಲೆ ಎಂಬ ಧೋರಣೆ ನಿಮ್ಮನ್ನು ಸಂಕಷ್ಟಕ್ಕೆ ದೂಡಲಿದೆ. ಹಣದ ಪ್ರಾಮುಖ್ಯ ವಿಪರೀತ ಹೆಚ್ಚಾಗುತ್ತದೆ. ನಿಮ್ಮ ಸಾಮರ್ಥ್ಯಕ್ಕೂ ಮೀರಿ ಹೊಸ ಹೊಸ ಕೆಲಸಗಳನ್ನು ಒಪ್ಪಿಕೊಳ್ಳುವುದಕ್ಕೆ ಮುಂದಾಗಲಿದ್ದೀರಿ. ಮುಂಚಿನ ರೀತಿಯಲ್ಲಿ ಹೇಳಿದ ತಕ್ಷಣ ಕೆಲಸಗಳು ಆಗುವುದಿಲ್ಲ. ಇದೇ ಕಾರಣಕ್ಕೆ ನಿಮ್ಮ ಪ್ರಾಶಸ್ತ್ಯ ಕಡಿಮೆ ಆಗುತ್ತಿದೆಯೇನೋ ಎಂಬಂತೆ ಅನಿಸುತ್ತದೆ. ಅದು ಮನೆ ಇರಲಿ ಅಥವಾ ಹೊರಗಿರಲಿ. ಹೀಗೆ ಅನಿಸಿದ ತಕ್ಷಣ ಎಲ್ಲರ ಗಮನ ಸೆಳೆಯುವ ಸಲುವಾಗಿ ವಿಪರೀತದ ಕೆಲಸಗಳೇನೋ ಮಾಡುವುದಕ್ಕೆ ತೊಡಗಬೇಡಿ. ಈ ಸಮಯ ಕಳೆಯಲು ಬಿಡಿ. ಸಣ್ಣ- ಪುಟ್ಟ ವಿಚಾರಗಳನ್ನೂ ಮರೆಯದಿರಿ. ಮಡ್‌ಬಾತ್, ಸ್ಟೀಮ್‌ಬಾತ್ ಹೀಗೆ ದೇಹಕ್ಕೆ ಆರಾಮದಾಯಕ ಆಗುವಂಥದ್ದನ್ನು ಮಾಡಿಸಲು ಸಾಧ್ಯವಾದಲ್ಲಿ ಮಾಡಿಸಿಕೊಳ್ಳಿ. ಉದ್ಯೋಗ ಮಾಡುವ ಕಡೆ ಎಲ್ಲರ ಸಾಮರ್ಥ್ಯವೂ ಒಂದೇ ಥರ ಇರುವುದಿಲ್ಲ. ಅದೇ ರೀತಿ ಉದ್ದೇಶ ಸಹ ಒಂದೇ ಇರುವುದಿಲ್ಲ. ಮೇಲ್ನೋಟಕ್ಕೆ ಅವರು ನಡೆದುಕೊಳ್ಳುವ ರೀತಿಯನ್ನು ನೋಡಿ ಪಿಗ್ಗಿ ಬೀಳಬೇಡಿ. ಕೃಷಿಕರು ಖಾಸಗಿ ಹಣಕಾಸು ಸಂಸ್ಥೆಗಳಿಂದ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಕೆಲಸದಲ್ಲಿ ಆಗುವ ಪ್ರಗತಿಯಿಂದ ಸಂತೋಷವನ್ಬು ಪಡಲಿದ್ದೀರಿ. ಈಗಾಗಲೇ ನೀವೇ ಮಾರಾಟದ ವ್ಯವಹಾರವನ್ನು ನಡೆಸುತ್ತಿದ್ದೀರಿ ಎಂದಾದಲ್ಲಿ ಕೆಲವು ವ್ಯಕ್ತಿಗಳು ಹೊಸ ಪ್ರಸ್ತಾವದೊಂದಿಗೆ ಬರಬಹುದು. ಮೇಲುನೋಟಕ್ಕೆ ಆಕರ್ಷಣೀಯವಾಗಿ ಕಂಡರೂ ಪೂರ್ವಾಪರವಾಗಿ ಆಲೋಚಿಸದೆ ಏನನ್ನೂ ಹೇಳದಿರಿ. ವೃತ್ತಿ ನಿರತರಿಗೆ ದೀರ್ಘಕಾಲದಿಂದ ಕಾಡುತ್ತಿದ್ದ ಸವಾಲೊಂದು ರಾಜೀ- ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಅವಕಾಶ ಒದಗಿ ಬರುತ್ತದೆ. ಅನುಭವಿಗಳು, ನೀವು ಗೌರವಿಸುವಂಥ ವ್ಯಕ್ತಿಗಳು ಏನಾದರೂ ಸಲಹೆ ನೀಡಿದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿ. ದಾಕ್ಷಿಣ್ಯದ ಮಾತಿಗೆ ಸಿಲುಕಿಕೊಂಡು, ನಿಮ್ಮ ಕೈಯಿಂದ ಹಣ ಕಳೆದುಕೊಳ್ಳುವಂಥ ಸನ್ನಿವೇಶ ಸೃಷ್ಟಿಯಾಗಲಿದೆ. ವಿದ್ಯಾರ್ಥಿಗಳಿಗೆ ನಿಮ್ಮ ಸ್ವಭಾವದಲ್ಲಿ ತಪ್ಪುಗಳನ್ನು ಹೇಳುವವರು ಈ ವಾರ ಹೆಚ್ಚಾಗಬಹುದು. ಸಣ್ಣ- ಪುಟ್ಟ ವೈಫಲ್ಯಕ್ಕೂ ನಿಮ್ಮ ನಿರ್ಧಾರ ಹಾಗೂ ಬೇಜವಾಬ್ದಾರಿ ಕಾರಣ ಎಂದು ಏನೇನೋ ಉದಾಹರಣೆಗಳನ್ನು ಸಹ ಎದುರಿಗೆ ಇಟ್ಟು, ಕೆಲವರು ದೂರಬಹುದು. ಆದರೆ ಇದ್ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳಬೇಡಿ. ಈ ಹಿಂದೆ ನೀವು ಮಾಡಿದ್ದ ಕೆಲಸ ಹಾಗೂ ತೆಗೆದುಕೊಂಡಿದ್ದ ನಿರ್ಧಾರಗಳು ಮತ್ತು ಪಟ್ಟ ಶ್ರಮದ ಫಲವಾಗಿ ನಿಮ್ಮ ವರ್ಚಸ್ಸು ಉಳಿಯಲಿದೆ. ಮಹಿಳೆಯರಿಗೆ ಕೌನ್ಸೆಲಿಂಗ್‌ನ ಅಗತ್ಯ ಇದೆ, ಸಣ್ಣ- ಪುಟ್ಟ ವಿಚಾರಗಳಿಗೂ ವಿಪರೀತ ರಿಯಾಕ್ಟ್‌ ಮಾಡುತ್ತಿದ್ದೀರಿ ಎಂದು ಯಾರಾದರೂ ನಿಮಗೆ ಹೇಳಿದಲ್ಲಿ ಅದನ್ನು ಗಂಭೀರವಾಗಿ ಆಲೋಚಿಸಿ. ಮನಸ್ಸು ಪ್ರಶಾಂತವಾಗಿ ಇಟ್ಟುಕೊಳ್ಳುವುದಕ್ಕೆ ಪ್ರಯತ್ನಿಸಿ. ನನ್ನಿಂದ ಎಲ್ಲರೂ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ, ನನ್ನ ಸಾಮರ್ಥ್ಯ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಅಂತ ನಿಮಗೆ ಅನಿಸುವ ಸಾಧ್ಯತೆ ಇದೆ. ಈ ವಾರ ಸ್ಫಟಿಕ ಮಾಲೆಯನ್ನು ಧರಿಸಿದಲ್ಲಿ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುವುದಕ್ಕೆ ಸಾಧ್ಯವಾಗುತ್ತದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಮನೆ, ಆಸ್ತಿ ಮಾರಾಟಕ್ಕೆ ಇಟ್ಟಲ್ಲಿ ಖರೀದಿಗೆ, ಅದರಲ್ಲೂ ನೀವು ನಿರೀಕ್ಷೆ ಮಾಡಿದಂಥವರು ಬರುವಂಥ ಸಾಧ್ಯತೆಗಳು ಹೆಚ್ಚಿವೆ. ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಹಿಂಜರಿಕೆ ಅನುಭವಿಸುತ್ತಿದ್ದವರಿಗೆ ಒಂದು ಬಗೆಯಲ್ಲಿ ಆತ್ಮಸ್ಥೈರ್ಯ ಮೂಡುತ್ತದೆ. ಇನ್ನು ಯಾವ ಹಣಕಾಸಿನ ವಿಚಾರಕ್ಕೆ ಸುಭದ್ರವಾಗಿ ಇರಬೇಕು ಎಂದು ನೀವಂದುಕೊಳ್ಳುತ್ತೀರೋ ಅದು ಈ ವಾರ ಸಾಧ್ಯವಾಗಲಿದೆ. ಹಾಗೆ ಸಾಧ್ಯ ಆಗುತ್ತದೆ ಎಂಬ ಸಂಗತಿಯೇ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡುತ್ತದೆ. ನಿಮ್ಮ ಶತ್ರುಗಳು ತಮ್ಮತಮ್ಮಲ್ಲೇ ಭಾರೀ ಗೊಂದಲಕ್ಕೆ ಈಡಾಗುತ್ತಾರೆ. ಇನ್ನು ನೀವೇನಾದರೂ ಆಸ್ತಿಯನ್ನು ಮಾರಿ, ಅದನ್ನು ಬೇರೆ ಕಡೆ ಹೂಡಿಕೆ ಮಾಡಬೇಕು ಎಂದಿದ್ದಲ್ಲಿ ಅದು ಸಾಧ್ಯ ಆಗುತ್ತದೆ. ಒಂದು ವೇಳೆ ಗೊಂದಲ ಎಂದಾದಲ್ಲಿ ಮಾತ್ರ ನಿರ್ಧಾರ ಮಾಡುವಾಗ ಅನುಭವಿಗಳ ಸಲಹೆ ಪಡೆಯಿರಿ. ನಿಮ್ಮ ಕೆಲಸ ಪೂರ್ಣಗೊಳಿಸುವ ಬಗ್ಗೆ ಇತರರು ಆಸಕ್ತಿ ವಹಿಸಲಿದ್ದಾರೆ. ಸ್ನೇಹಿತರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ. ದೈವಂ ಮಾನುಷ ರೂಪೇಣ ಎಂಬ ಮಾತಿನಂತೆ ನಿಮ್ಮ ಅಗತ್ಯ, ಅನಿವಾರ್ಯಗಳಿಗೆ ವ್ಯಕ್ತಿಯೊಬ್ಬರ ಮೂಲಕವಾಗಿ ನೆರವು ಒದಗಿಬರುವಂಥ ಸಾಧ್ಯತೆಗಳಿವೆ. ಗಂಭೀರವಾದ ಸಮಸ್ಯೆ ಆಗಬಹುದು ಎಂದುಕೊಂಡಿದ್ದ ವಿಚಾರಗಳು ಬಹಳ ಸಲೀಸಾಗಿ ಬಗೆಹರಿಯಲಿವೆ. ಕೃಷಿಕರಿಗೆ ದೂರ ಪ್ರಯಾಣಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಸಣ್ಣ- ಪುಟ್ಟ ಯೋಜನೆಗಳು ರೂಪಿಸುವುದಕ್ಕೆ ಅಗತ್ಯ ಸಂಪನ್ಮೂಲಗಳನ್ನು ಒಟ್ಟುಗೂಡಿಸುವುದಕ್ಕೆ ಶುರು ಮಾಡುತ್ತೀರಿ. ಈ ಮಧ್ಯೆ ದೂರದ ಊರಿನಿಂದ ಶುಭ ಸುದ್ದಿ ಕೇಳಿಬರುವಂಥ ಯೋಗ ಇದೆ. ಒಂದು ವೇಳೆ ಜಮೀನು ಮಾರಾಟಕ್ಕೆ ಇಟ್ಟಿದ್ದಲ್ಲಿ ಸೂಕ್ತ ವ್ಯಕ್ತಿಯ ಮೂಲಕ ಖರೀದಿಯ ಪ್ರಸ್ತಾವ ಬರುವ ಸಾಧ್ಯತೆಗಳಿವೆ. ಎಲ್ಲ ವಿಷಯಗಳನ್ನು ಹೃದಯದಿಂದ ಆಲೋಚನೆ ಮಾಡುವುದು ಉಪಯೋಗವಿಲ್ಲ. ಬುದ್ಧಿಯನ್ನು ಬಳಸಿ ನಿರ್ಧಾರ ಕೈಗೊಳ್ಳಿ. ಇನ್ನು ಮೇಲ್ನೋಟಕ್ಕೆ ಆದಾಯ ಬಾರದು ಎಂದು ಕಂಡುಬರುವ ಕೆಲಸಗಳಿಗೆ ಹೆಚ್ಚಿನ ಸಮಯ ಮೀಸಲಿಡದೆ ಇರುವುದು ಉತ್ತಮ. ವೃತ್ತಿನಿರತರಿಗೆ ಮೃದುವಾದ ಮಾತುಗಳಿಂದ ಎದುರಿನವರ ಜತೆಗೆ ವ್ಯವಹರಿಸಬೇಕು. ನಿಮ್ಮ ಜತೆಗೆ ವ್ಯವಹರಿಸುವವರ ವರ್ತನೆ ಹೇಗಾದರೂ ಇರಬಹುದು. ಆದರೆ ನೀವು ಮಾತ್ರ ಯಾವುದೇ ಕಾರಣಕ್ಕೆ ಸಿಟ್ಟಿನಿಂದ ಮಾತನಾಡಬೇಡಿ. ಇತರರನ್ನು ನಿಮ್ಮ ಜತೆಗೆ ಹೋಲಿಕೆ ಮಾಡಿಕೊಳ್ಳದಿರಿ. ನಿಮ್ಮ ಸೇವಾ ಶುಲ್ಕ ಹೆಚ್ಚಿಸಬೇಕು ಎಂದಿದ್ದಲ್ಲಿ ಈ ವಾರ ಸೂಕ್ತ ಸಮಯವಾಗಿದೆ. ವಿದ್ಯಾರ್ಥಿಗಳಿಗೆ ದೃಷ್ಟಿ ದೋಷ ತಾಗುವ ಸಾಧ್ಯತೆಗಳಿವೆ. ಹೀಗೆ ದೋಷ ತಾಗಿದೆ ಎಂಬುದು ಗೊತ್ತಾಗುವುದು ಹೇಗೆ ಅಂದರೆ, ಮೈ- ಕೈ ನೋವು ಕಾಡಲಿದೆ, ಊಟ ಸೇರದಂತೆ ಆಗುತ್ತದೆ. ಆದ್ದರಿಂದ ನೀವು ಧರಿಸುವ ಬಟ್ಟೆ, ಒಡವೆ ಇತ್ಯಾದಿಗಳು ಜನರ ಕಣ್ಣು ಕುಕ್ಕದಂತೆ ಇರಲಿ. ಮಹಿಳೆಯರು ಕುಟುಂಬದ ವಿಚಾರಗಳಲ್ಲಿ ನಿಮ್ಮದೇ ತಪ್ಪಿದ್ದಲ್ಲಿ ಅದನ್ನು ಒಪ್ಪಿಕೊಂಡು ಬಿಡಿ. ಅದನ್ನು ಮುಂದುವರಿಸಿಕೊಂಡು ಹೋಗದಿರಿ. ಈ ವಾರದಲ್ಲಿ ಒಮ್ಮೆ ಪಾರಿವಾಳಗಳಿಗೆ ಕಾಳುಗಳನ್ನು ಹಾಕಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಯಾವ ಸ್ಥಳದಲ್ಲಿ ಇದ್ದೀರಿ, ನಿಮ್ಮ ಸುತ್ತಮುತ್ತ ಇರುವಂಥ ಜನರ ಮನಸ್ಥಿತಿ ಎಂಥದ್ದು ಎಂಬ ಬಗ್ಗೆ ಅರಿವಿರಲಿ. ಏಕೆಂದರೆ ಯಾವುದೇ ನೆಗೆಟಿವ್ ಉದ್ದೇಶ ಇಲ್ಲದೇ ಲೋಕಾರೂಢಿಗೆ ನೀವಾಡಿದ ಮಾತು ನಿಮಗೆ ಸಮಸ್ಯೆಯಾಗಿ ಸುತ್ತಿಕೊಳ್ಳಬಹುದು. ಯಾವ ಪ್ರಶ್ನೆಗೆ ಎಂಥ ಅಭಿಪ್ರಾಯವನ್ನು ಹೇಳುತ್ತಿದ್ದೀನಿ ಎಂಬುದನ್ನು ಚೆನ್ನಾಗಿ ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಇನ್ನು ಯಾರು ಸಾರ್ವಜನಿಕ ಬದುಕಿನಲ್ಲಿ ಇದ್ದಾರೋ ಅಂಥವರು ವಿವಾದಕ್ಕೆ ಸಿಲುಕಿಕೊಳ್ಳುವ ಸಾಧ್ಯತೆಗಳಿವೆ. ನಿಮ್ಮ ಇನ್ ಟ್ಯೂಷನ್ ಈ ವಾರ ಬಹಳ ಜಾಗೃತವಾಗಿರುತ್ತದೆ. ಆದ್ದರಿಂದ ಯಾವ ವ್ಯಕ್ತಿ ಜತೆಗೆ ವ್ಯವಹರಿಸುತ್ತಿದ್ದೀರಿ ಎಂಬ ಬಗ್ಗೆ ನಿಮ್ಮ ಮನಸ್ಸಿನ ಮಾತನ್ನು ಕೇಳಿ, ತೀರ್ಮಾನವನ್ನು ಕೈಗೊಳ್ಳಿ. ಹತ್ತಾರು ಜನರು ಇರುವ ಜಾಗದಲ್ಲಿ ಮಾತಿನ ಭರಾಟೆಯಲ್ಲಿ ಹೇಳಿಕೊಂಡ ವಿಷಯಗಳಿಗೆ ದೊಡ್ಡದಾಗಿ ಬೆಲೆ ಕಟ್ಟುವಂಥ ಸನ್ನಿವೇಶ ಎದುರಾಗಬಹುದು. ಸ್ಥಾನ- ಮಾನ, ದೊಡ್ಡ ಹುದ್ದೆಯನ್ನೇ ಕಳೆದುಕೊಂಡು ಬಿಡುವಂಥ ಸಾಧ್ಯತೆಗಳು ಹೆಚ್ಚಿವೆ. ಆದ್ದರಿಂದ ಇತರರ ಮಾತನ್ನು ಹೆಚ್ಚೆಚ್ಚು ಕೇಳಿಸಿಕೊಳ್ಳಿ. ವಿವಾದ ಆಗಬಹುದು ಎಂದೆನಿಸುವ ಮಾತುಗಳನ್ನು ಯಾವುದೂ ಆಡುವುದಕ್ಕೇ ಹೋಗಬೇಡಿ. ಯಾವುದೇ ವ್ಯವಹಾರದಲ್ಲಿ ಪ್ಲಾನ್ ಬಿ ಎಂಬುದೊಂದನ್ನು ಇರಿಸಿಕೊಂಡಿದ್ದರೆ ಕ್ಷೇಮ. ಕೃಷಿಕರು ಹೊಸದಾಗಿ ತೋಟ- ಗದ್ದೆಯನ್ನು ಅಭಿವೃದ್ಧಿ ಮಾಡುವ ಬಗ್ಗೆ ತೀರ್ಮಾನವನ್ನು ಕೈಗೊಳ್ಳಲಿದ್ದೀರಿ. ತಕ್ಷಣಕ್ಕೆ ನಿಮಗೆ ಬೇಕಾಗುವಂಥ ಹಣಕಾಸಿನ ವ್ಯವಸ್ಥೆ ಸಹ ಆಗಲಿದೆ. ಅಚಾನಕ್ ಆಗಿ ಸಿಕ್ಕಂಥ ಕಾಂಟ್ಯಾಕ್ಟ್ ನಿಂದ ಬಹಳ ದೊಡ್ಡ ಮಟ್ಟದ ಅನುಕೂಲ ಒದಗಿಬರಲಿದೆ. ಕೆಲವು ತೀರ್ಮಾನಗಳನ್ನು ಮಾಡುವುದಕ್ಕೆ ನಿಮ್ಮ ಮನಸ್ಸಲ್ಲಿ ಆತಂಕ ಕಾಡಬಹುದು. ಆದರೆ ಯಾವುದಕ್ಕೂ ಅಂಜದೆ ಮುಂದಕ್ಕೆ ಹೆಜ್ಜೆಯನ್ನು ಹಾಕಿ. ಆದಾಯ ಹಾಗೂ ವೆಚ್ಚದ ಲೆಕ್ಕಾಚಾರ ಸರಿಯಾಗಿ ಹಾಕಿಟ್ಟುಕೊಳ್ಳಿ. ಶಕ್ತಿ ಮೀರಿ, ಸಾಲ ಮಾಡಿಕೊಳ್ಳಬೇಡಿ. ಆದರೆ ಈ ಯೋಜನೆಯಲ್ಲಿ ನಿಮಗೆ ಯಶಸ್ಸು ಸಿಗುತ್ತದೆ. ವೃತ್ತಿನಿರತರಿಗೆ ಸಂಗಾತಿಯ ಮೂಲಕ, ಕುಟುಂಬದಲ್ಲಿನ ಯುವ ಸದಸ್ಯರಿಗೆ ಉತ್ತಮವಾದ ಉದ್ಯೋಗ ದೊರೆಯುವ ಮೂಲಕವಾಗಿ ಒಟ್ಟಾರೆಯಾಗಿ ಕುಟುಂಬದ ಆದಾಯದಲ್ಲೇ ಹೆಚ್ಚಳ ಆಗಲಿದೆ. ವೃತ್ತಿ ಬದುಕಿನಲ್ಲೂ ಮಾಮೂಲಿಗಿಂತ ಹೆಚ್ಚಿನ ಹಣದ ಹರಿವು ಶುರುವಾಗುತ್ತದೆ. ಮಾತಿನಲ್ಲಿ ಬುದ್ಧಿವಂತಿಕೆ ಎದ್ದು ಕಾಣುತ್ತದೆ. ಕೆಲಸಗಳನ್ನು ಬಹಳ ಸಲೀಸಾಗಿ ಮಾಡಿಕೊಂಡು ಬರುವಂಥ ಚಾಕಚಕ್ಯತೆ ಬರುತ್ತದೆ. ಪ್ರಯಾಣದಲ್ಲಿ ಲಾಭಗಳಾಗಲಿವೆ. ಇನ್ನು ನಿಮ್ಮಲ್ಲಿ ಕೆಲಸವರು ಕುಟುಂಬದ ಸದಸ್ಯರ ಬಳಕೆಗಾಗಿ ಅಂತಲೇ ಹೊಸ ವಾಹನವನ್ನು ಬುಕ್ ಮಾಡುವಂಥ ಯೋಗ ಇದೆ. ವಿದ್ಯಾರ್ಥಿಗಳು ಬಹಳ ಸಮಯದಿಂದ ಎಂಬಂತೆ ಪ್ರಯತ್ನ ಮಾಡುತ್ತಿದ್ದ ವಿಲಾಸಿ ವಸ್ತುಗಳನ್ನು ತಂದೆ- ತಾಯಿಗಳು ಕೊಡಿಸುವಂಥ ಯೋಗ ಇದೆ. ನಿಮ್ಮ ಗೆಳೆಯ- ಗೆಳತಿಯರ ಮಧ್ಯೆ ಜನಪ್ರಿಯರಾಗುವಂಥ ಸಾಧನೆಯನ್ನು ಮಾಡುವ ಅವಕಾಶಗಳು ನಿಮಗೆ ದೊರೆಯಲಿವೆ. ಪಠ್ಯೇತರ ಚಟುವಟಿಕೆಗಳಲ್ಲಿ ಒಳ್ಳೆ ಹೆಸರು ಮಾಡಲಿದ್ದೀರಿ. ಮಹಿಳೆಯರಿಗೆ ಸಾಮಾಜಿಕ ಬದುಕಿನಲ್ಲಿ ಬಿಡುವಿಲ್ಲದಷ್ಟು ಕೆಲಸಗಳು ಆಗಲಿವೆ. ನಿಮ್ಮ ಮಧ್ಯಸ್ಥಿಕೆಯಲ್ಲಿ ವಿವಾಹ ಸಂಬಂಧಗಳು ಇತ್ಯರ್ಥ ಆಗಲಿವೆ. ಲಕ್ಷ್ಮೀ ದೇವಿ ವಿಗ್ರಹಕ್ಕೆ ಅಥವಾ ಫೋಟೋಗೆ ಹಾಲು, ಸಕ್ಕರೆ, ಗೋಡಂಬಿ, ಬಾದಾಮಿ ಇತ್ಯಾದಿಗಳನ್ನು ಶುಕ್ರವಾರದಂದು ನೈವೇದ್ಯ ಮಾಡಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ನೀವು ಎಂಥ ಜನರ ಜತೆಗೆ ವ್ಯವಹರಿಸುತ್ತಿದ್ದೀರಿ ಎಂಬ ಬಗ್ಗೆ ನಿಮಗೇ ಬೇಸರ ಉಂಟಾಗಲಿದೆ. ಏಕೆಂದರೆ ನೀವು ಇತರರಿಗೆ ಅನುಕೂಲ ಮಾಡಿದರೂ ನಿಮ್ಮ ಮೇಲೆ ಏಕೆ ದ್ವೇಷ ಸಾಧಿಸುವುದಕ್ಕೆ ಯತ್ನಿಸುತ್ತಾರೆ ಎಂದು ಈ ವಾರ ಮನಸ್ಸಿನಲ್ಲಿ ಬಹಳ ಕಾಡುತ್ತದೆ. ಯಾರ ಸಹವಾಸವೂ ಬೇಡ ಎಂದು ಏಕಾಂಗಿಯಾಗಿ ಸಮಯ ಕಳೆಯುವುದಕ್ಕೆ ಮನಸ್ಸು ಮಾಡುತ್ತೀರಿ. ಆದರೆ ಇದೇ ಸಮಯಕ್ಕೆ ಬೇಡ ಅಂದುಕೊಂಡರೂ ಈ ಹಿಂದೆ ನೀವು ಯಾರಿಗೆ ಸಹಾಯ ಮಾಡಿದ್ದಿರೋ ಅಂದರೆ ಹಳೇ ನೆನಪುಗಳು ವಿಪರೀತವಾಗಿ ಕಾಡಲಿದೆ. ಹಣಕಾಸು ತೀರ್ಮಾನ ಅಥವಾ ಸಂಬಂಧಗಳ ಬಗೆಗಿನ ವಿಚಾರ ಎಂದಾದಲ್ಲಿ ಧೈರ್ಯದಿಂದ ಕೆಲವು ನಿರ್ಧಾರಗಳನ್ನು ಮಾಡಬೇಕಾಗುತ್ತದೆ. ನೀವು ಬಹಳ ಭರವಸೆ ಇಟ್ಟುಕೊಂಡು, ಇತರರ ಸಲಹೆಯನ್ನು ಕೇಳಿಕೊಂಡು ಮಾಡಿದ ಕೆಲಸದಲ್ಲಿ ಸ್ವಲ್ಪ ಮಟ್ಟಿಗೆ ನಷ್ಟವಾಗುವಂಥ ಸಾಧ್ಯತೆ ಇದೆ. ಆದರೆ ಇದು ಈ ತಕ್ಷಣದ ನಷ್ಟವಾದರೂ ಭವಿಷ್ಯದಲ್ಲಿ ಅನುಕೂಲ ಆಗಬಹುದು ಎಂಬ ಗುರಿಯೊಂದಿಗೆ ಸಾಲ ಮಾಡಿಯಾದರೂ ಹೂಡಿಕೆ ಮಾಡಲಿದ್ದೀರಿ. ಇತರರ ವೈಯಕ್ತಿಕ ವಿಚಾರಗಳಿಗೆ, ಅದರಲ್ಲೂ ಮದುವೆಯ ವಿಚಾರಗಳಿಗೆ ಮೂಗು ತೂರಿಸಬೇಡಿ. ಪರಿಚಿತರು ಮತ್ತು ಕರೆದರು ಎಂದು ಅವರ ಜತೆಗೆ ಹೋದಲ್ಲಿ ಅವಮಾನಗಳನ್ನು ಎದುರಿಸಬೇಕಾದೀತು. ಇನ್ನು ನಿಮಗಿಂತ ಚಿಕ್ಕ ವಯಸ್ಸಿನವರ ಜತೆ ಸಲಹೆ- ಉಪದೇಶ ನೀಡಲು ಹೋಗದಿರಿ. ಎಚ್ಚರಿಕೆಯಿಂದ ಮಾತನಾಡಿ. ಕೃಷಿಕರು ಸಮಯಕ್ಕೆ ಸರಿಯಾಗಿ ಊಟ- ತಿಂಡಿ ಮಾಡುವುದು ಕಷ್ಟವಾಗುತ್ತದೆ. ಹೂವು, ಹಣ್ಣು ಇಂಥದ್ದನ್ನು ಬೆಳೆಯುವಂಥವರಿಗೆ ಹೊಸದಾಗಿ ದೊಡ್ಡ ಪ್ರಮಾಣದ ಆರ್ಡರ್ ದೊರೆಯಲಿದೆ. ಎಲ್ಲ ಕೆಲಸವನ್ನೂ ನಾನೇ ಮಾಡುತ್ತೇನೆ ಎಂದು ಹೊರಡಬೇಡಿ. ಹೀಗೆ ಮಾಡಿದಲ್ಲಿ ಗಡುವಿನೊಳಗೆ ಕೆಲಸ ಮುಗಿಸುವುದು ಕಷ್ಟ ಆಗಬಹುದು. ಸೋದರ- ಸೋದರಿಯಿಂದ ಸಹಾಯಕ್ಕಾಗಿ ಮನವಿ ಬರುವ ಸಾಧ್ಯತೆಗಳಿವೆ. ನಿಮಗೆ ಸಂಪೂರ್ಣ ಖಾತ್ರಿ ಆಗದ ಹೊರತು ಯಾವ ವಿಚಾರದಲ್ಲೂ ಅಂತಿಮ ತೀರ್ಮಾನವನ್ನು ಕೈಗೊಳ್ಳಬೇಡಿ. ಸಾಧ್ಯವಾದಷ್ಟು ಸಾಲವನ್ನು ಮಾಡದೇ ಇರುವುದು ಉತ್ತಮ. ಕಡಿಮೆ ಬಡ್ಡಿ ಅಥವಾ ದೀರ್ಘಾವಧಿಗೆ ಸಾಲ ಸಿಗುತ್ತದೆ ಹೀಗೆ ಏನೇ ಕಾರಣಗಳಿರಬಹುದು, ಸಾಲದ ಅಗತ್ಯ ಇಲ್ಲ ಎಂದಾದರೆ ಮಾಡದಿರುವುದು ಉತ್ತಮ. ವೃತ್ತಿನಿರತರಿಗೆ ನೇರವಂತಿಕೆ ಈ ವಾ ಕೆಲಸಕ್ಕೆ ಬರುವುದಿಲ್ಲ. ಆದ್ದರಿಂದ ಸನ್ನಿವೇಶವನ್ನು ಡಿಪ್ಲೊಮ್ಯಾಟಿಕ್ ಆಗಿ ನಿರ್ವಹಿಸುವ ಕಡೆಗೆ ಗಮನವನ್ನು ನೀಡಿ. ನಿಮ್ಮ ಕೈ ಅಳತೆಯಲ್ಲಿ ಸಾಧ್ಯವಾಗುವ ಬಹುತೇಕ ಕೆಲಸಗಳನ್ನು ಮಾಡುವುದಕ್ಕೆ ಅವಕಾಶ ದೊರೆಯಲಿದೆ. ಆದ್ದರಿಂದ ಆಮೇಲೆ ಮಾಡಿದರಾಯಿತು ಎಂಬ ಧೋರಣೆ ಬೇಡ. ಇನ್ನು ನಿದ್ದೆಯ ವಿಚಾರಕ್ಕೆ ಸ್ವಲ್ಪ ಮಟ್ಟಿಗೆ ಅಡೆತಡೆಗಳು ಎದುರಾಗಬಹುದು. ಈ ಕಾರಣಕ್ಕೆ ಏಕಾಗ್ರತೆ ಕಷ್ಟ ಆಗಲಿದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಸಂಬಂಧಿಸಿದ ಮುಖ್ಯ ಮಾಹಿತಿ ದೊರೆಯಲಿದೆ ಅಥವಾ ಪ್ರಮುಖ ವ್ಯಕ್ತಿಯಿಂದ ನೆರವು ದೊರೆಯಲಿದೆ. ಮಹಿಳೆಯರಿಗೆ ನಿಮ್ಮ ಪೋಷಕರು ಅಥವಾ ನಿಮಗೆ ತುಂಬ ಹತ್ತಿರದವರಿಗೆ ಹೆಚ್ಚಿನ ಪ್ರೀತಿ, ವಾತ್ಸಲ್ಯ, ಅಕ್ಕರೆಯ ಅಗತ್ಯ ಇದೆ ಎಂದೆನಿಸುತ್ತದೆ. ಭಾವನಾತ್ಮಕವಾಗಿ ಬಹಳ ವಿಷಯಗಳು ಈ ವಾರ ನಿಮ್ಮನ್ನು ಕಾಡಲಿವೆ. ನಿಮ್ಮಿಂದ ಸಾಧ್ಯವಾದಲ್ಲಿ ಬೆಳಗ್ಗೆ ಹಾಸಿಗೆಯಿಂದ ಏಳುತ್ತಲೇ ಸೂರ್ಯನ ದರ್ಶನ ಮಾಡಿ, ಆದಿತ್ಯ ಹೃದಯ ಸ್ತೋತ್ರವನ್ನು ಕೇಳಿಸಿಕೊಳ್ಳಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಬೇರೆಯವರ ದುಡ್ಡು ತಿನ್ನಲಿಲ್ಲ, ಉಣ್ಣಲಿಲ್ಲ. ಆದರೆ ಬಯ್ಯಿಸಿಕೊಳ್ಳುವುದು ತಪ್ಪಲಿಲ್ಲವಲ್ಲ ಎಂದು ಇಷ್ಟು ಸಮಯ ನೀವು ಅಂದುಕೊಳ್ಳತ್ತಿದ್ದಲ್ಲಿ ನಿಮ್ಮ ಚಿಂತೆ- ಬೇಸರದಿಂದ ಈ ವಾರ ಹೊರಬರಲಿದ್ದೀರಿ. ಇನ್ನು ಈ ವಾರ ಸಣ್ಣ- ಪುಟ್ಟ ತಮಾಷೆ, ಮನರಂಜನೆ, ಕುಟುಂಬದವರ ಜತೆಗೆ ಕಿರು ಪ್ರವಾಸ, ಹೋಟೆಲ್- ರೆಸ್ಟೋರೆಂಟ್ ಗಳಿಗೆ ತೆರಳುವುದು ಅಥವಾ ರೆಸಾರ್ಟ್ ಗೆ ಹೋಗುವುದು ಇವೆಲ್ಲ ಇದೆ. ಇದರಿಂದಾಗಿ ನಿಮ್ಮ ಮನಸ್ಸಿಗೆ ಸಂತೋಷ, ನೆಮ್ಮದಿಯನ್ನು ನೀಡುತ್ತದೆ. ಇದರ ಜತೆಗೆ ಮನೆಯಲ್ಲಿ, ಸಂಬಂಧಿಕರಲ್ಲಿ ನಿಮ್ಮ ಬಗ್ಗೆ ಗೌರವಾದರಗಳು ಹೆಚ್ಚಾಗಲಿವೆ. ಹೊಸ ಆದಾಯ ಮೂಲಗಳನ್ನು ಹುಡುಕಿಕೊಳ್ಳಲಿದ್ದೀರಿ. ಸಂಗಾತಿಯ ಆರೋಗ್ಯ ಸಮಸ್ಯೆಗಳು ಇಷ್ಟು ಸಮಯ ಕಾಡುತ್ತಿದ್ದಲ್ಲಿ ಚೇತರಿಕೆ- ಸುಧಾರಣೆ ಕಾಣಿಸಿಕೊಳ್ಳಲಿದೆ. ಇದರಿಂದ ಮಾನಸಿಕವಾಗಿ ನೆಮ್ಮದಿ ದೊರೆಯಲಿದ್ದು, ನಿಮ್ಮ ಚಿಂತೆ ದೂರವಾಗಲಿದೆ. ನೀವೇನಾದರೂ ಆಸ್ತಿಯನ್ನೋ ವಾಹನವನ್ನೋ ಅಥವಾ ಮತ್ಯಾವುದಾದರೂ ಮಾರಾಟಕ್ಕೆ ಅಂತ ಇಟ್ಟಿದ್ದಲ್ಲಿ ಸೂಕ್ತ ಖರೀದಿದಾರರು ಹುಡುಕಿಕೊಂಡು ಬರುವ ಸಾಧ್ಯತೆ ಇದೆ. ಎಲ್ಲರೂ ಹೇಳಿದ್ದನ್ನು ಕೇಳಿಸಿಕೊಳ್ಳಿ, ಏಕೆಂದರೆ ಆ ಎಲ್ಲವನ್ನೂ ಪಾಲಿಸಬೇಕು ಎಂದೇನೂ ಇಲ್ಲ. ಸಾಲಗಳು ಇರುವವರು ಅದನ್ನು ತೀರಿಸುವುದಕ್ಕೆ ಏನೇನು ಮಾಡಬೇಕು ಎಂಬ ಬಗ್ಗೆ ಮಾರ್ಗಗಳನ್ನು ಹುಡುಕಿಕೊಳ್ಳಲಿದ್ದೀರಿ. ಕೃಷಿಕರಿಗೆ ದೈಹಿಕ, ಮಾನಸಿಕ ವಿಶ್ರಾಂತಿಯ ಅಗತ್ಯ ಕಂಡುಬರುತ್ತದೆ. ಕುಟುಂಬದವರಿಗಾಗಿ ಹೆಚ್ಚಿನ ಸಮಯವನ್ನು ಮೀಸಲಿಡುವುದಕ್ಕೆ ಆಲೋಚನೆ ಮಾಡುತ್ತೀರಿ. ಸಂಗಾತಿಯ ಮಾತಿಗೆ ಹಾಗೂ ಸಲಹೆಗೆ ಬೆಲೆ ನೀಡಿ. ಮನೆಗೆ ಅಗತ್ಯ ಇರುವ ಕೆಲವು ವಸ್ತುಗಳನ್ನು ತರುವಂಥ ಯೋಗ ಇದೆ. ನಿಮ್ಮ ತಾಳ್ಮೆ, ಸಂಯಮ, ಆತ್ಮಸ್ಥೈರ್ಯದ ಸಹಾಯದಿಂದ ದೊಡ್ಡ ಮಟ್ಟದಲ್ಲಿ ಅನುಕೂಲ ಆಗಲಿದೆ. ಆದರೆ ಇದು ನಿಮಗೆ ನಿಧಾನವಾಗಿ ಅನುಭವಕ್ಕೆ ಬರಲಿದೆ. ವೃತ್ತಿನಿರತರಿಗೆ ಆದಾಯದಲ್ಲಿ ಇಳಿಮುಖ ಆಗುತ್ತಿದೆ ಎಂಬುದು ಆತಂಕಕ್ಕೆ ಕಾರಣ ಆಗಲಿದೆ. ವೆಚ್ಚವನ್ನು ಕಡಿಮೆ ಮಾಡುವ ಬಗ್ಗೆ ಯೋಜನೆ ರೂಪಿಸುವ ಸಾಧ್ಯತೆ ಇದೆ. ಇನ್ನು ವೃತ್ತಿ ವಿಚಾರಕ್ಕಾಗಿಯೇ ದೂರ ಪ್ರಯಾಣ ಮಾಡಬೇಕು ಎಂದಿರುವವರು ಸರಿಯಾದ ಸಿದ್ಧತೆ ಮಾಡಿಕೊಂಡ ನಂತರ ಮುಂದುವರಿಯಿರಿ. ವಿದ್ಯಾರ್ಥಿಗಳಿಗೆ ಭಾವನಾತ್ಮಕ ವಿಚಾರಗಳು ಈ ದಿನ ಮುನ್ನೆಲೆಗೆ ಬರಲಿವೆ. ನೀವು ಹೇಳಬೇಕಾದ್ದನ್ನು ಮುಲಾಜಿಲ್ಲದೆ ಹೇಳುವುದು ಬಹಳ ಕಷ್ಟವಾಗಲಿದೆ. ನಿಮ್ಮ ಬಲ ಎಂದೆನಿಸಿಕೊಂಡ ಕೆಲವು ನಿರ್ಧಾರಗಳು ಸಹಾಯಕ್ಕೆ ಬರಲಿವೆ. ಹೊಸದಾಗಿ ಏನನ್ನಾದರೂ ಕಲಿಯುವುದಕ್ಕೆ ಆರಂಭಿಸುತ್ತಿದ್ದೀರಿ ಎಂದಾದರೆ ಮಾಮೂಲಿಗಿಂತ ಹೆಚ್ಚಿನ ಶ್ರಮ ಹಾಕುವುದು ಅತ್ಯಗತ್ಯ. ಇನ್ನು ಮಹಿಳೆಯರಿಗೆ ನಿಮ್ಮಲ್ಲಿನ ಸೌಂದರ್ಯ ಪ್ರಜ್ಞೆ ಜಾಸ್ತಿ ಆಗಲಿದೆ. ಬ್ಯೂಟಿಪಾರ್ಲರ್, ಬ್ರ್ಯಾಂಡೆಡ್ ದಿರಿಸುಗಳಿಗೆ ಹೆಚ್ಚಿನ ಖರ್ಚು ಆಗಲಿದೆ. ಹಣದ ವಿಚಾರ ಬಹಳ ಪ್ರಾಮುಖ್ಯ ಪಡೆಯುತ್ತದೆ. ಬಹಳ ದೊಡ್ಡ ದೊಡ್ಡ ಸ್ಕೀಮ್‌ಗಳನ್ನು ಮಾಡುವುದಕ್ಕೆ ಮುಂದಾಗುತ್ತೀರಿ. ಆದರೆ ಇದನ್ನು ಇತರರೊಂದಿಗೆ ಸದ್ಯಕ್ಕೆ ಹಂಚಿಕೊಳ್ಳಬೇಡಿ. ಹೊಸದಾಗಿ ವಾಹನ ತೆಗೆದುಕೊಳ್ಳಬೇಕು ಎಂದಿರುವವರಿಗೆ ಹಣಕಾಸಿನ ಅನುಕೂಲ ಒದಗಿಬರಲಿದೆ. ನಿಮ್ಮ ವ್ಯಾಲೆಟ್ ನಲ್ಲಿ ಅಕ್ಕಿಕಾಳುಗಳನ್ನು ಇರಿಸಿಕೊಳ್ಳಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನನ್ನಿಂದ ಇದು ಸಾಧ್ಯವಾ, ನಾನು ಈ ಕೆಲಸನ್ನು ಮಾಡಬಲ್ಲೆನಾ ಇತ್ಯಾದಿ ಅನುಮಾನಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ. ಏಕೆಂದರೆ ನಿಮ್ಮ ಸಾಮರ್ಥ್ಯ ಸಿಕ್ಕಾಪಟ್ಟೆ ವೃದ್ಧಿ ಆಗುವ ಸಮಯ ಇದು. ಯಾರು ಊಹಿಸದ ರೀತಿಯಲ್ಲಿ ಯಶಸ್ಸಿನ ಗ್ರಾಫ್ ಮೇಲಕ್ಕೆ ಏರಲಿದೆ. ಅದೇ ವೇಳೆ ಲೆಕ್ಕಾಚಾರದಂತೆ ಆಗುವ ಆರ್ಥಿಕ ಬೆಳವಣಿಗೆಯಿಂದಾಗಿ ನಿಮ್ಮೊಳಗೆ ಒಂದು ಆತ್ಮವಿಶ್ವಾಸ ಬೆಳೆಯಲಿದೆ. ಏಕೆಂದರೆ ಹಣಕಾಸು ವಿಚಾರದಲ್ಲಿ ನೀವಂದುಕೊಂಡಂತೆ ಕೆಲವು ಬೆಳವಣಿಗೆಗಳು ಆಗಲಿವೆ. ಒಂದು ವೇಳೆ ವಿವಾಹ ವಯಸ್ಕರಾಗಿದ್ದಲ್ಲಿ, ಮದುವೆ ಮತ್ತಿತರ ಶುಭ ಕಾರ್ಯಗಳಿಗೆ ಪ್ರಯತ್ನ ಮಾಡುತ್ತಿರುವವರಿಗೆ ಒಳ್ಳೆ ವಾರ ಇದು. ಹೊಸ ಗ್ಯಾಜೆಟ್, ಲ್ಯಾಪ್‌ಟಾಪ್, ಟೀವಿ ಇಂಥದ್ದನ್ನು ಖರೀದಿ ಮಾಡುವುದಕ್ಕೆ ಹಣ ಖರ್ಚಾಗುವ ಯೋಗ ಇದೆ. ಅನಿರೀಕ್ಷಿತವಾಗಿ ಹೊಸ ಜನರ ಪರಿಚಯ ಆಗಲಿದೆ. ಇದು ದೀರ್ಘಾವಧಿಯಲ್ಲಿ ಅನುಕೂಲ ಆಗಲಿದೆ. ಈಗಾಗಲೇ ಕೆಲಸ ಆರಂಭಿಸಿ, ಅದು ಅರ್ಧಂಬರ್ಧ ಆಗಿ ನಿಂತಿದ್ದಲ್ಲಿ ಅದನ್ನು ಮುಂದುವರಿಸಿಕೊಂಡು ಹೋಗುವ ಅವಕಾಶ ಇದೆ. ಕೃಷಿಕರಾಗಿದ್ದಲ್ಲಿ ಹಣಕಾಸಿನ ಮೂಲವನ್ನು ಹೆಚ್ಚಳ ಮಾಡಿಕೊಳ್ಳುವುದಕ್ಕೆ ಅವಕಾಶ ದೊರೆಯುತ್ತದೆ. ಶುಭ ಕಾರ್ಯಗಳಿಗೆ ಆಹ್ವಾನ ಬರಲಿದೆ. ದೇವತಾರಾಧನೆಯಲ್ಲಿ ಭಾಗೀ ಆಗುವುದಕ್ಕೆ ಅವಕಾಶ ದೊರೆಯಲಿದೆ. ಹೊಸದಾಗಿ ಮನೆ ಅಥವಾ ಸೈಟು ಖರೀದಿ ಮಾಡಬೇಕು ಎಂದಿರುವವರಿಗೆ ಸೂಕ್ತ ಸ್ಥಳ, ಮನೆ ದೊರೆಯುವಂಥ ಸಾಧ್ಯತೆ ಇದೆ. ಬ್ಯಾಂಕ್ ಗಳಿಂದ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ದಾಖಲೆ ಪತ್ರಗಳನ್ನು ಹೊಂದಿಸಿಕೊಳ್ಳುವ ಪ್ರಕ್ರಿಯೆ ವೇಗವನ್ನು ಪಡೆದುಕೊಳ್ಳಲಿದೆ. ಪ್ರೇಮದಲ್ಲಿ ಇರುವಂಥವರಿಗೆ ಬಹಳ ಒಳ್ಳೆ ಸಮಯ ಇದು. ಮನೆಯಲ್ಲಿ ಮದುವೆ ಬಗ್ಗೆ ಪ್ರಸ್ತಾವ ಮಾಡುವುದಕ್ಕೆ ಅನುಕೂಲಕರವಾದ ವೇದಿಕೆ ಸಿದ್ಧಗೊಳ್ಳಲಿದೆ. ಹೆಚ್ಚಿನ ವಿರೋಧ ಇಲ್ಲದೆ ಒಪ್ಪಿಗೆ ಸಹ ಸಿಗಬಹುದು. ವೃತ್ತಿನಿರತರಿಗೆ ದೀರ್ಘ ಕಾಲದಿಂದ ಬಾರದೆ ಬಾಕಿ ಉಳಿದಿದ್ದ ಹಣ ಕೈ ಸೇರುವಂಥ ಅವಕಾಶಗಳಿವೆ. ಹಳೇ ಕಡತ, ಕಾಗದ- ಪತ್ರಗಳನ್ನು ಸರಿಯಾಗಿ ಹುಡುಕಿ ಇಟ್ಟುಕೊಳ್ಳಿ, ಅನುಕೂಲ ಆಗಲಿದೆ. ಹೊಸ ಸಂಪರ್ಕಗಳು ದೊರೆಯಲಿವೆ, ಇದರಿಂದ ನಿಮ್ಮ ವೃತ್ತಿ ವಿಸ್ತರಣೆಗೆ ಸಹಾಯ ಆಗಲಿದೆ. ಈಗಾಗಲೇ ಕೆಲಸ ಆರಂಭಿಸಿ, ಒಂದು ಹಂತ ತಲುಪಿದ ನಂತರ ಯಾಕೋ ಮುಂದುವರಿಯುತ್ತಿಲ್ಲ ಎಂದಾಗಿದ್ದಲ್ಲಿ ಈಗ ವೇಗ ಪಡೆದುಕೊಳ್ಳಲಿದೆ. ಇನ್ನು ವೃತ್ತಿಗೆ ಅಗತ್ಯ ಇರುವ ಯಂತ್ರೋಪಕರಣಗಳನ್ನು ಖರೀದಿ ಮಾಡಲಿದ್ದೀರಿ ಅಥವಾ ನಿಮ್ಮ ವೃತ್ತಿಗೆ ಅಗತ್ಯವಾದ ಕೆಲವು ವಿಮೆಗಳನ್ನು ಖರೀದಿ ಮಾಡಲಿದ್ದೀರಿ. ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಬ್ಯಾಂಕ್ ಗಳಲ್ಲಿ ಸಾಲಕ್ಕಾಗಿ ಪ್ರಯತ್ನ ಮಾಡಿದ್ದಲ್ಲಿ ಅದು ದೊರೆಯುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಆನ್ ಲೈನ್ ನಲ್ಲಿ ಬ್ಯಾಂಕಿಂಗ್ ವ್ಯವಹಾರ ಮಾಡುವಂಥವರು ಬಹಳ ಜಾಗ್ರತೆಯಿಂದ ಇರಬೇಕು. ನಿಮ್ಮಲ್ಲಿ ಕೆಲವರಿಗೆ ವಂಚನೆ ಆಗುವಂಥ ಯೋಗ ಇದೆ. ಸೋದರ- ಸೋದರಿಯರಿಗಾಗಿ ಮೀಸಲಿಟ್ಟಿದ್ದ ಹಣವನ್ನು ಸಹ ನಿಮಗಾಗಿ ಪೋಷಕರು ನೀಡಬಹುದು. ಮಹಿಳೆಯರಿಗೆ ತಮ್ಮ ಆತುರದ ಸ್ವಭಾವದಿಂದ ಕೆಲವು ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ನೀವು ಕೆಲಸ ಮಾಡಿಯೂ ಶ್ರಮ ಪಟ್ಟಿರುವುದು ಸಂಬಂಧಪಟ್ಟ ವ್ಯಕ್ತಿಗಳಿಗೆ ತಿಳಿದ ನಂತರವೂ ಹೀಗಾಗಬಹುದು. ಆದ್ದರಿಂದ ಕೆಲಸ ಆಗುವ ಮುಂಚೆ ಎಲ್ಲ ಕಡೆ ಹೇಳಿಕೊಂಡು ಬಾರದಿರಿ. ಮನೆಯಿಂದ ಹೊರಡುವಾಗ ತುಳಸಿ ದಳವನ್ನು ತೆಗೆದುಕೊಂಡು ಹೋಗಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಈ ವಾರ ಪಶ್ಚಾತ್ತಾಪ ಪಡುವುದಕ್ಕೆ ಅಂತಲೇ ಸಾಕಷ್ಟು ಸನ್ನಿವೇಶಗಳು ಉದ್ಭವ ಆಗಲಿವೆ. ನಿರುಪದ್ರವಿ ಹಾಗೂ ಏನೂ ಆಗಲಿಕ್ಕಿಲ್ಲ ಎಂದುಕೊಂಡು ನೀವು ಈ ಹಿಂದೆ ಹೇಳಿದ್ದ ಸುಳ್ಳಿನ ಫಲವನ್ನು ಈ ವಾರ ಅನುಭವಿಸಲಿದ್ದೀರಿ. ಸ್ವಲ್ಪ ಮಟ್ಟಿಗೆ ಸ್ನೇಹಿತರು- ಸಂಬಂಧಿಕರ ಮಧ್ಯೆ ಅವಮಾನ ಎದುರಿಸಬೇಕಾಗಬಹುದು. ಪ್ರಯಾಣಕ್ಕೆ ತೆರಳುತ್ತಿದ್ದೀರಿ ಎಂದಾದಲ್ಲಿ ನೀವು ಯೋಜನೆ ಮಾಡಿಕೊಂಡು ತೆರಳಿದ್ದಕ್ಕಿಂತ ಹೆಚ್ಚಿನ ಸಮಯ ಅಲ್ಲೇ ಉಳಿಯಬೇಕಾಗಿ ಬರಬಹುದು. ಇನ್ನು ಇದೇ ವೇಳೆ ಮನೆಯ ಸದಸ್ಯರ ಆರೋಗ್ಯಕ್ಕಾಗಿ ಹಣ ಖರ್ಚಾಗಲಿದೆ. ಆದರೆ ನಿಮ್ಮ ಮನೆ ದೇವರ ಆರಾಧನೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಯಾವುದೇ ನಿರ್ಧಾರ ಮಾಡುವಾಗ, ಕೆಲಸಕ್ಕೆ ತೊಡಗುವಾಗ ಎಲ್ಲರೂ ಮೆಚ್ಚುವಂತೆ ನಡೆದುಕೊಳ್ಳುತ್ತೀನಿ ಎಂದು ಅಂದುಕೊಳ್ಳದಿರಿ, ಇದರಿಂದ ಮಾನಸಿಕ ಒತ್ತಡ ಜಾಸ್ತಿ ಆಗುತ್ತದೆ. ಮನೆಯಲ್ಲಿ ನಿಮ್ಮನ್ನೇ ನೆಚ್ಚಿಕೊಂಡು ಕೆಲವು ನಿರ್ಧಾರಗಳನ್ನು ಮಾಡಿ, ಆ ನಂತರ ನಿಮ್ಮ ಬಳಿ ಕೇಳಲು ಬರಲಿದ್ದಾರೆ. ಶುಭ ಕಾರ್ಯಗಳಿಗಾಗಿ ಹಣವನ್ನು ಸಾಲ ಮಾಡಬೇಕಾಗುತ್ತದೆ. ಹೇಗಿದ್ದರೂ ಸಾಲ ಆಗುತ್ತದೆ, ಒಂದಿಷ್ಟು ಜಾಸ್ತಿಯೇ ತೆಗೆದುಕೊಂಡು, ಅದರಿಂದ ಕೆಲವು ಕಮಿಟ್ ಮೆಂಟ್ ಗಳನ್ನು ಪೂರ್ಣ ಮಾಡಿಕೊಳ್ಳೋಣ ಎಂದು ಆಲೋಚಿಸಿ, ಅಗತ್ಯಕ್ಕಿಂತ ಹೆಚ್ಚಿನ ಸಾಲವನ್ನು ಮಾಡುವುದು ಬೇಡ. ಇನ್ನು ಕೃಷಿಕರಾಗಿದ್ದಲ್ಲಿ ಈ ಎಚ್ಚರಿಕೆಯನ್ನು ಗಮನವಾಗಿ ಓದಿಕೊಳ್ಳಿ: ಮದ್ಯಪಾನ- ಧೂಮಪಾನದ ವ್ಯಸನ ಇದೆ ಅಂತಾದಲ್ಲಿ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಬಹುದು. ಈ ಹಿಂದೆ ಯಾರ ಜತೆ ಜಗಳ ಮಾಡಿಕೊಂಡಿದ್ದರೋ ಅಂಥವರ ಜತೆಗೆ ರಾಜೀ ಸಂಧಾನ ಮಾಡಿಕೊಳ್ಳಬೇಕಾಗುತ್ತದೆ. ಸಂಗಾತಿಯ ಒತ್ತಡಕ್ಕೆ ಮಣಿದು, ಹೀಗೆ ಮಾಡಲಿದ್ದೀರಿ. ಆದರೆ ಈ ಕಾರಣಕ್ಕೆ ಬೇಸರ ಮಾಡಿಕೊಳ್ಳುವ ಅಗತ್ಯ ಇಲ್ಲ. ವೃತ್ತಿನಿರತರು ನೀವೇ ಆರಂಭಿಸಿದ ಆಟವೊಂದನ್ನು ಮುಗಿಸಬೇಕಾಗುತ್ತದೆ. ಇಲ್ಲದ ಆತ್ಮವಿಶ್ವಾಸವನ್ನು ಇತರರಲ್ಲಿ ತುಂಬಿ, ಇಷ್ಟು ಸಮಯ ಅವರಿಂದ ತೆಗೆದುಕೊಂಡ ಅನುಕೂಲವನ್ನು ನಿಲ್ಲಿಸಿಬಿಡಿ. ನೇರವಾಗಿ, ಪ್ರಾಮಾಣಿಕತೆಯಿಂದ ಮಾತನಾಡಲು ಪ್ರಯತ್ನಿಸಿ. ಉಳಿತಾಯದ ಹಣವನ್ನು ಬಳಸಿಕೊಳ್ಳಲೇಬೇಕಾದ ಅನಿವಾರ್ಯ ಸೃಷ್ಟಿಯಾಗುತ್ತದೆ. ವಿದ್ಯಾರ್ಥಿಗಳು ಗುರಿಯ ಕಡೆಗೆ ಸಾಗುವ ನಿಟ್ಟಿನಲ್ಲಿ ಮಹತ್ವದ ಚರ್ಚೆ ನಡೆಸುತ್ತೀರಿ. ಸ್ನೇಹಿತರು ದೊಡ್ಡ ಮಟ್ಟದ ಬೆಂಬಲ ವ್ಯಕ್ತಪಡಿಸಲಿದ್ದಾರೆ. ದೇವತಾ ಕಾರ್ಯಗಳಿಗಾಗಿ ಸಮಯ ಮೀಸಲಿಡಲಿದ್ದೀರಿ. ಇದರಿಂದ ಮಾನಸಿಕವಾಗಿ ನೆಮ್ಮದಿ ದೊರೆಯಲಿದೆ. ಪುಷ್ಕಳವಾದ ಭೋಜನ ಸವಿಯುವ ಯೋಗ ಇದೆ. ಮಹಿಳೆಯರು ನಿಮ್ಮ ನಿರ್ದಾಕ್ಷಿಣ್ಯ ಮಾತುಗಳಿಂದ ಸಂಬಂಧಿಕರಲ್ಲಿ, ಕುಟುಂಬ ವರ್ಗದವರಲ್ಲಿ ಸಿಟ್ಟಿಗೆ ಕಾರಣರಾಗಲಿದ್ದೀರಿ. ಆದ್ದರಿಂದ ಸಣ್ಣ- ಪುಟ್ಟ ಸಂಗತಿಗಳನ್ನು ದೊಡ್ಡದು ಮಾಡಿ, ಯಾರ ಜತೆಗೂ ವಾಗ್ವಾದಕ್ಕೆ ಇಳಿಯಬೇಡಿ. ಸಾಂಸಾರಿಕ ವಿಚಾರಗಳನ್ನು ಹೊಸಬರ ಜತೆಗೆ ಹಂಚಿಕೊಳ್ಳಬೇಡಿ. ಒಂದು ಸಣ್ಣ ಪೊಟ್ಟಣದಲ್ಲಿ ಬಿಳಿ ಸಾಸಿವೆಯನ್ನು ಕಟ್ಟಿ, ಜತೆಯಲ್ಲಿ ಇಟ್ಟುಕೊಳ್ಳಿ.

ಲೇಖನ- ಎನ್‌.ಕೆ.ಸ್ವಾತಿ

ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್