Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 24ರಿಂದ 31ರ ತನಕ ವಾರಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 24ರಿಂದ 31ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 24ರಿಂದ 31ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ನಿಮ್ಮ ಆರ್ಥಿಕ ಸ್ಥಿಯ ಬಗ್ಗೆ ಗಂಭೀರವಾದ ಅವಲೋಕನವನ್ನು ಮಾಡಲಿದ್ದೀರಿ. ಈ ಸಂದರ್ಭದಲ್ಲಿ ನಿಮಗೆ ಬರುತ್ತಿರುವ ಆದಾಯ ಎಷ್ಟು ಹಾಗೂ ಎಷ್ಟು ಖರ್ಚು ಮಾಡುತ್ತಿದ್ದೀರಿ ಎಂಬ ಬಗ್ಗೆ ಸರಿಯಾದ ಲೆಕ್ಕಾಚಾರ ಹಾಕಿಟ್ಟುಕೊಂಡು, ಒಂದು ಬಜೆಟ್ ಮಾಡಿಟ್ಟುಕೊಳ್ಳುವುದು ತುಂಬಾ ಮುಖ್ಯವಾಗುತ್ತದೆ. ಇನ್ನು ಉದ್ಯೋಗದ ವಿಚಾರದಲ್ಲಿ ಯಾರು, ಯಾವುದೇ ಪ್ರಶ್ನೆಯನ್ನು ಕೇಳಿದರೂ ಅದಕ್ಕೆ ಉತ್ತರ ಹೇಳುವುದಕ್ಕೆ ಸಿದ್ಧರಾಗಿರಿ. ಇದು ನನಗೆ ಸಂಬಂಧಿಸಿದ್ದಲ್ಲ, ನಾನು ಈ ಕೆಲಸ ಮಾಡಿದ್ದಲ್ಲ ಹೀಗೆ ಉತ್ತರ ಹೇಳುವುದಕ್ಕೆ ಹೋಗಬೇಡಿ. ನೀವು ಎಚ್ಚರವಿಟ್ಟು ಗಮನಿಸಬೇಕಾದದ್ದು ಏನೆಂದರೆ, ಈಗಿರುವ ಕೆಲಸಗಳ ಜೊತೆಗೆ ಹೊಸ ಜವಾಬ್ದಾರಿಯನ್ನು ಏನಾದರೂ ನೀಡಿದರೆ ಅದನ್ನು ಒಂದೇ ಮನಸ್ಸಿನಿಂದ ವಹಿಸಿಕೊಳ್ಳಿ. ಇದರಿಂದ ಭವಿಷ್ಯದಲ್ಲಿ ನಿಮಗೆ ತುಂಬಾ ದೊಡ್ಡ ಅನುಕೂಲ ಆಗಲಿದೆ. ಸಹೋದ್ಯೋಗಿಗಳಿಗೆ ನೀವು ನೀಡುವ ಸಲಹೆಯಿಂದ ಅನುಕೂಲ ಆಗಲಿದ್ದು, ಅವರು ನಿಮಗೆ ಪ್ರತಿಯಾಗಿ ಏನಾದರೂ ನೆರವು ನೀಡುವಂತಹ ಸಾಧ್ಯತೆಗಳಿವೆ. ಕೃಷಿಕರಿಗೆ ಮನೆಯಲ್ಲಿ ಮಕ್ಕಳ ಶಿಕ್ಷಣದ ವಿಚಾರವು ಪ್ರಾಮುಖ್ಯ ಪಡೆದುಕೊಳ್ಳಲಿದೆ. ಇದಕ್ಕಾಗಿ ಜಮೀನು ಅಥವಾ ಚಿನ್ನವನ್ನು ಅಡಮಾನ ಮಾಡಿ ಹಣವನ್ನು ಸಾಲ ಪಡೆಯುವ ಸಾಧ್ಯತೆಗಳಿವೆ. ಮನೆಯ ಸದಸ್ಯರ ಅಗತ್ಯ ಹಾಗೂ ಅನುಕೂಲವನ್ನು ಗಮನದಲ್ಲಿ ಇಟ್ಟುಕೊಂಡು, ಹೆಚ್ಚುವರಿಯಾಗಿ ಕೋಣೆಗಳು ಸೇರಿದಂತೆ ಇತರ ನಿರ್ಮಾಣ ಕಾರ್ಯವನ್ನು ಕೈಗೊಳ್ಳುವುದಕ್ಕೆ ತೀರ್ಮಾನ ಮಾಡಲಿದ್ದೀರಿ. ಮನೆಯಲ್ಲಿನ ಇತರ ಸದಸ್ಯರು ತಮ್ಮಿಂದ ಸಾಧ್ಯವಿಲ್ಲ ಎಂದು ಹೇಳಿದ ಆರ್ಥಿಕ ವಿಚಾರಗಳನ್ನು ನಿಮ್ಮ ಹೆಗಲ ಮೇಲೆ ಹಾಕಿಕೊಂಡು ಯಶಸ್ವಿಯಾಗಿ ಮಾಡಿ ಮುಗಿಸಲಿದ್ದೀರಿ. ಮದುವೆಗಾಗಿ ಪ್ರಯತ್ನ ಮಾಡುತ್ತಿರುವ ವಿವಾಹ ವಯಸ್ಕರಿಗೆ ಮನಸ್ಸಿಗೆ ಒಪ್ಪುವಂತಹ ಸೂಕ್ತ ಸಂಬಂಧ ದೊರೆಯುವ ಅವಕಾಶಗಳು ಹೆಚ್ಚಿವೆ. ವೃತ್ತಿ ನಿರತರಿಗೆ ಹೊಸ ಕ್ಲೈಂಟ್ ಗಳು ದೊರೆಯುವ ಅವಕಾಶಗಳು ಹೆಚ್ಚಿವೆ. ಇದರೊಂದಿಗೆ ಆದಾಯದ ಮೂಲಗಳು ಜಾಸ್ತಿಯಾಗಲಿವೆ. ನಿಮ್ಮದೇ ವೃತ್ತಿಗೆ ಸಂಬಂಧಿಸಿದ ಸಂಘ ಅಥವಾ ಸಂಸ್ಥೆಗಳಲ್ಲಿ ನಿಮ್ಮನ್ನು ಯಾವುದಾದರೂ ಪ್ರಮುಖ ಹುದ್ದೆಗೆ ನೇಮಿಸುವಂತಹ ಯೋಗ ಇದೆ. ಕ್ರೆಡಿಟ್ ಕಾರ್ಡ್ ಬಳಸಿ ಯಾವುದಕ್ಕಾದರೂ ಖರ್ಚು ಮಾಡುತ್ತಿದ್ದೀರಿ ಎಂದಾದಲ್ಲಿ ಆ ಬಗ್ಗೆ ಹೆಚ್ಚಿನ ಗಮನ ಇರಲಿ. ಏಕೆಂದರೆ ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡುವಂತಹ ಸಾಧ್ಯತೆಗಳಿವೆ. ವಿದ್ಯಾರ್ಥಿಗಳು ತಮ್ಮ ಸ್ನೇಹಿತರ ಜೊತೆಗೂಡಿ ಪ್ರವಾಸಕ್ಕೆ ತೆರಳುವಂತಹ ಯೋಗ ಇದೆ. ಈ ಸಂದರ್ಭದಲ್ಲಿ ಕೊನೆ ಕ್ಷಣದ ಸಿದ್ಧತೆ ಎಂದು ವಿಪರೀತ ಒತ್ತಡಕ್ಕೆ ಸಿಲುಕಿಕೊಳ್ಳಲಿದ್ದೀರಿ. ಆದರೆ ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿ, ಉತ್ತಮವಾದ ಸಮಯವನ್ನು ಕಳೆಯಲಿದ್ದೀರಿ. ಮಹಿಳೆಯರು ಬಹಳ ಸಮಯದಿಂದ ಖರೀದಿ ಮಾಡಬೇಕು ಎಂದುಕೊಳ್ಳುತ್ತಿದ್ದ ಒಡವೆ ಅಥವಾ ವಸ್ತ್ರವನ್ನು ಖರೀದಿ ಮಾಡಲಿದ್ದೀರಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಏಕಾಗ್ರತೆಯನ್ನು ಕಾಪಾಡಿಕೊಳ್ಳುವುದು ಹಾಗೂ ನಿಮ್ಮ ಕೆಲಸದಲ್ಲಿ ಅದು ಎದ್ದು ಕಾಣುವುದು ಬಹಳ ಮುಖ್ಯವಾಗುತ್ತದೆ. ಏಕೆಂದರೆ ನಿಮಗೆ ವಹಿಸಿದ ಮುಖ್ಯವಾದ ಕೆಲಸ ಒಂದರಲ್ಲಿ ದೊಡ್ಡ ತಪ್ಪು ಆಗಿ, ಇದರಿಂದ ನಿಮ್ಮ ವರ್ಚಸ್ಸಿಗೆ ಹಾನಿಯಾಗಲಿದೆ. ನಗುವವರ ಎದುರಿಗೆ ಎಡವಿ ಬಿದ್ದರು ಎಂಬ ಪರಿಸ್ಥಿತಿ ಈ ವಾರ ನಿಮ್ಮದಾಗಲಿದೆ. ಇನ್ನು ಯಾರು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾ ಇದ್ದೀರೋ ಅಂಥವರಿಗೆ ಕೆಲಸದ ಒತ್ತಡ ವಿಪರೀತ ಆಗಲಿದೆ. ಈ ವಾರದ ಒಂದೇ ಸಮಯಕ್ಕೆ ಹಲವು ಕೆಲಸಗಳನ್ನು ಮಾಡುತ್ತೇನೆ ಎಂದು ಹೊರಡಬೇಡಿ. ಯಾವ ಕೆಲಸಕ್ಕೆ ಎಷ್ಟು ಆದ್ಯತೆ ಎಂಬುದರ ಬಗ್ಗೆ ಒಂದು ಸ್ಪಷ್ಟತೆ ಇಟ್ಟುಕೊಂಡು ಆರಂಭಿಸಿ. ನಿಮ್ಮ ಸ್ನೇಹಿತರು ಹಾಗೂ ಒಳಿತನ್ನು ಬಯಸುವ ಹಿತೈಶಿ ಯಾರು ಎಂಬುದನ್ನು ಸರಿಯಾಗಿ ನಿರ್ಧರಿಸುವುದು ಮುಖ್ಯವಾಗುತ್ತದೆ. ಏಕೆಂದರೆ ನಿಮ್ಮ ಎದುರಿಗೆ ಚೆನ್ನಾಗಿದ್ದು, ನಗುತ್ತಾ ಮಾತನಾಡುತ್ತಾ ಬೆನ್ನಿಗೆ ನಿಮ್ಮ ವಿರುದ್ಧವೇ ಚಾಡಿ ಹೇಳುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಇಂಥವರ ಬಗ್ಗೆ ತುಂಬಾ ಎಚ್ಚರಿಕೆ ವಹಿಸುವುದು ಮುಖ್ಯ. ನಿಮಗೆ ಸಂಬಂಧ ಇಲ್ಲದ ವಿಷಯಗಳಲ್ಲಿ ಅಭಿಪ್ರಾಯವನ್ನು ಹಂಚಿಕೊಳ್ಳಬೇಡಿ. ಕೃಷಿಕರಿಗೆ ರಾಜಕೀಯ ಕಾರಣಗಳಿಗಾಗಿ ವಿರೋಧ ಕಟ್ಟಿಕೊಳ್ಳಬೇಕಾದ ಸನ್ನಿವೇಶ ಎದುರಾಗಲಿದೆ. ಮನೆಗೆ ಅಗತ್ಯ ಇದೆಯೋ ಇಲ್ಲವೋ ತೆಲುಗು ವಸ್ತುಗಳನ್ನು ಸಾಲ ಮಾಡಿಯಾದರೂ ತರಲಿದ್ದೀರಿ. ಅವುಗಳನ್ನು ತಂದ ನಂತರದಲ್ಲಿ ಯಾಕಾದರೂ ತಂದೆ ಎಂದು ಯೋಚನೆ ಮಾಡುವಂತಹ ಪರಿಸ್ಥಿತಿ ಬರಲಿದೆ. ಜಮೀನಿಗೆ ಸಂಬಂಧಪಟ್ಟಂತೆ ನೆರೆಹೊರೆಯವರೊಂದಿಗೆ ವಿನಾಕಾರಣದ ವ್ಯಾಜ್ಯಗಳು ಏರ್ಪಡಬಹುದು. ಮಾತಿಗೆ ಮಾತು ಬೆಳೆದು, ಪೊಲೀಸ್ ಠಾಣೆ, ಕೋರ್ಟು- ಕಚೇರಿ ಎಂದು ಸುತ್ತಾಡುವ ಸಂದರ್ಭಗಳು ಎದುರಾಗಬಹುದು. ಮನೆಯಿಂದ ಹೊರಗಡೆಯ ಆಹಾರ, ನೀರು ಸೇವನೆ ಮಾಡುವ ವಿಚಾರದಲ್ಲಿ ಮಾಮೂಲಿ ದಿನಗಳಿಗಿಂತ ಎಚ್ಚರಿಕೆಯಿಂದ ಇರುವುದು ಮುಖ್ಯ. ಹಣಕಾಸು ಸಾಲ ಮಾಡುತ್ತಿದ್ದೀರಿ ಎಂದಾದಲ್ಲಿ ಈ ವಿಚಾರವನ್ನು ಸಂಗಾತಿಯ ಜೊತೆಗೆ ಚರ್ಚಿಸುವುದು ಒಳ್ಳೆಯದು. ಇಲ್ಲದಿದ್ದಲ್ಲಿ ಮನಸ್ತಾಪಗಳು ಏರ್ಪಡಬಹುದು. ವೃತ್ತಿ ನಿರತರು ಖರ್ಚಿನ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಒಂದು ರೂಪಾಯಿಯಲ್ಲಿ ಆಗುವಂಥ ಕೆಲಸಕ್ಕೆ ನಾಲ್ಕು ರೂಪಾಯಿ ಖರ್ಚು ಆಗಬಹುದು. ನೀವು ಸಹ ಪ್ರತಿಷ್ಠೆಗೆ ಬಿದ್ದು, ಕೈಯಿಂದ ಹಣವನ್ನು ಕಳೆದುಕೊಳ್ಳುವಂತಹ ಸಾಧ್ಯತೆಗಳಿವೆ. ಭೂ ವರಾಹ ಸ್ವಾಮಿ ಆರಾಧನೆ ಮಾಡುವುದರಿಂದ ಕೆಲವು ಸಮಸ್ಯೆಗಳು ದೂರವಾಗಲಿವೆ. ವಿದ್ಯಾರ್ಥಿಗಳಿಗೆ ಆರೋಗ್ಯದಲ್ಲಿ ವ್ಯತ್ಯಾಸ ಆಗಿ, ಪಾಠಗಳು ತಪ್ಪಿ ಹೋಗುವಂತಹ ಸಾಧ್ಯತೆಗಳಿವೆ. ಯಾವುದೇ ಸಣ್ಣಪುಟ್ಟ ಅನಾರೋಗ್ಯ ಸಮಸ್ಯೆಗಳು ಎದುರಾದರೂ ಕೂಡಲೇ ಸೂಕ್ತ ವೈದ್ಯೋಪಚಾರಗಳನ್ನು ಪಡೆಯುವ ಕಡೆಗೆ ಗಮನವನ್ನು ಹರಿಸಿ. ಮಹಿಳೆಯರು ಸಾರ್ವಜನಿಕ ಸಾರಿಗೆಯಲ್ಲಿ ಸಂಚಾರ ಮಾಡುವಾಗ ಬೆಲೆಬಾಳುವ ವಸ್ತುಗಳ ಕಡೆಗೆ ಗಮನವನ್ನು ನೀಡಿ. ಇಲ್ಲದಿದ್ದಲ್ಲಿ ನಷ್ಟವನ್ನು ಅನುಭವಿಸಬೇಕಾಗುತ್ತದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಹೊಸ ಬಟ್ಟೆ ಖರೀದಿ, ವಾಚ್, ಬಡವೆ- ವಸ್ತುಗಳ ಖರೀದಿಗಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಇನ್ನು ಶುಭ ಕಾರ್ಯಗಳಲ್ಲಿ ಭಾಗವಹಿಸುವ ಸಲುವಾಗಿ ದೂರ ಪ್ರಯಾಣವನ್ನು ಮಾಡಲಿದ್ದೀರಿ. ಇದೇ ವೇಳೆ ನಿಮ್ಮ ಇತರ ವೈಯಕ್ತಿಕ ಕೆಲಸಗಳು ಸಹ ಮುಗಿಯುವಂತಹ ಸಾಧ್ಯತೆ ಇದೆ. ಈ ಹಿಂದೆ ಯಾವುದೋ ಸಮಯದಲ್ಲಿ ನೀವು ಸಹಾಯ ಮಾಡಿದವರು ಈ ವಾರ ನಿಮಗೆ ಸಹಾಯ ಮಾಡಲು ಮುಂದೆ ಬರಲಿದ್ದಾರೆ. ಇದೇ ವೇಳೆ ಮಕ್ಕಳ ಶಿಕ್ಷಣ, ಭವಿಷ್ಯದ ಬಗ್ಗೆ ಸಂಗಾತಿ ಜೊತೆಗೆ ಚರ್ಚೆ ಮಾಡಲಿದ್ದೀರಿ. ಸ್ವಲ್ಪ ಮಟ್ಟಿಗೆ ಹಣಕಾಸಿನ ಮುಗ್ಗಟ್ಟು ಕಾಣಿಸಿಕೊಳ್ಳಬಹುದು. ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಖರ್ಚು ಆಗಲಿದೆ. ಇನ್ನು ಆರೋಗ್ಯದ ವಿಚಾರ ಹೇಳಬೇಕೆಂದರೆ ನಿಮ್ಮಲ್ಲಿ ಕೆಲವರಿಗೆ ಎದೆಯುರಿ, ಗ್ಯಾಸ್ಟ್ರಿಕ್ ನಂಥ ಸಮಸ್ಯೆಗಳು ತೀವ್ರವಾಗಿ ಕಾಡಬಹುದು. ನಿಮಗೆ ಎಷ್ಟೇ ಹತ್ತಿರದವರು, ಆಪ್ತರೇ ಆದರೂ ಅವರು ಹೇಳಿದ ಸಂಗತಿಗಳು ಸರಿಯೋ ತಪ್ಪೋ ಎಂಬ ಬಗ್ಗೆ ವಿವೇಚನೆಯನ್ನು ಇಟ್ಟುಕೊಂಡು ಆ ನಂತರ ತೀರ್ಮಾನವನ್ನು ತೆಗೆದುಕೊಳ್ಳಿ. ಅದರಲ್ಲೂ ಹೂಡಿಕೆ ವಿಚಾರ ಇದ್ದರೆ ಯಾವುದೇ ಕಾರಣಕ್ಕೂ ಆತುರ ಮಾಡಲು ಹೋಗಬೇಡಿ. ಕೃಷಿಕರಿಗೆ ಇಷ್ಟವಿಲ್ಲದಿದ್ದರೂ ಕೆಲವು ಕೆಲಸಗಳನ್ನು ಮಾಡಲೇಬೇಕಾದಂತಹ ಸನ್ನಿವೇಶ ಎದುರಾಗಲಿದೆ. ಸೋದರ ಸಂಬಂಧಿಗಳು ನಿಮ್ಮ ಮೇಲೆ ಆಪಾದನೆಗಳನ್ನು ಮಾಡಲಿದ್ದಾರೆ. ಯಾರಿಂದಲೋ ಉತ್ತೇಜಿತರಾಗಿ ಸುಮ್ಮನೆ ಒಮ್ಮೆ ಪ್ರಯತ್ನ ಮಾಡೋಣ ಎಂದುಕೊಂಡು ಕೂಡ ಜೂಜು, ಸಟ್ಟಾ ವ್ಯವಹಾರಗಳಲ್ಲಿ ಹಣ ತೊಡಗಿಸಬೇಡಿ. ಆರಂಭದಲ್ಲಿ ಸ್ವಲ್ಪ ಮಟ್ಟಿಗೆ ಹಣ ಬಂದರೂ ಬಂದು ಬಿಡಬಹುದು. ಆದರೆ ಆ ನಂತರದಲ್ಲಿ ತುಂಬಾ ದೊಡ್ಡ ಮೊತ್ತದ ಹಣವನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಮಕ್ಕಳ ಮದುವೆ ಸಲುವಾಗಿ ಹಣ ಹೊಂದಿಸುವುದಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಅನುಕೂಲ ಒದಗಿ ಬರಲಿದೆ. ವೃತ್ತಿ ನಿರತರಿಗೆ ಅಂದುಕೊಂಡ ಹಣ ಬಾರದೆ ಒತ್ತಡದ ಸನ್ನಿವೇಶಗಳು ಎದುರಾಗಲಿವೆ. ತಿಂಗಳಾ ತಿಂಗಳು ಮಾಡುವಂತಹ ಖರ್ಚು, ವೆಚ್ಚಗಳಿಗೆ ಸಾಲ ಮಾಡಬೇಕಾದಂತಹ ಪರಿಸ್ಥಿತಿ ಎದುರಾಗಬಹುದು. ಯಾವುದೇ ಕೆಲಸ ಪೂರ್ತಿ ಆಗುವ ತನಕ ಎಲ್ಲ ಕಡೆ ಹೇಳಿಕೊಂಡು ಬರಬೇಡಿ. ವಿದ್ಯಾರ್ಥಿಗಳು ಯಾವುದಾದರೂ ಒಂದು ವಸ್ತುವನ್ನು ಕೊಡಿಸಲೇಬೇಕು ಎಂದು ಮನೆಯಲ್ಲಿ ಪಟ್ಟು ಹಿಡಿಯಲಿದ್ದೀರಿ. ಪೋಷಕರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ವರ್ತಿಸುವುದು ಈ ಸಂದರ್ಭದಲ್ಲಿ ತುಂಬಾ ಮುಖ್ಯ. ಈಗ ಹಠ ಹಿಡಿದು ಅದನ್ನು ತೆಗೆಸಿಕೊಂಡುಬಿಡಬಹುದು, ಆದರೆ ಆ ನಂತರದಲ್ಲಿ ಪರಿತಪಿಸುವಂತಾಗುತ್ತದೆ, ಪಶ್ಚಾತಾಪ ಪಡುವಂತಾಗುತ್ತದೆ. ಈಗಾಗಲೇ ಮದುವೆ ನಿಶ್ಚಯ ಆಗಿರುವ ಮಹಿಳೆಯರಿಗೆ ಅದು ಮುಂದಕ್ಕೆ ಹೋಗುವ ಅಥವಾ ಈ ಸಂಬಂಧ ಮುರಿದು ಬೀಳುವ ಸಾಧ್ಯತೆಗಳಿವೆ. ಸಾಧ್ಯವಾದಷ್ಟು ಮಾತಿನ ಮೇಲೆ ಹಿಡಿತ ಇರಿಸಿಕೊಳ್ಳಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಸ್ವಂತ ವ್ಯವಹಾರಗಳು, ಉದ್ಯಮ, ವ್ಯಾಪಾರ- ವ್ಯವಹಾರಗಳನ್ನು ಮಾಡುವಂಥವರಿಗೆ ಉತ್ತಮವಾದ ವಾರ ಇದು. ಅದರಲ್ಲೂ ನಿರ್ದಿಷ್ಟವಾಗಿಯೇ ಹೇಳಬೇಕು ಅಂತಾದರೆ ನಿಮ್ಮಲ್ಲಿ ಯಾರು ಮನೆ ಕಟ್ಟುವುದಕ್ಕೆ ಬೇಕಾದ ಇಟ್ಟಿಗೆ, ಸಾಲಿಡ್ ಬ್ಲಾಕ್ ಇಂಥದ್ದರ ವ್ಯವಹಾರ ಮಾಡುವಂಥವರು ಇದ್ದೀರಿ ಅಂಥವರಿಗೆ ಆದಾಯದ ಪ್ರಮಾಣ ಜಾಸ್ತಿಯಾಗಲಿದೆ. ದೊಡ್ಡ ಆರ್ಡರ್ ಗಳು ಬರುವಂತಹ ಸಾಧ್ಯತೆಗಳಿವೆ. ಹೊಸದಾಗಿ ಫೈನಾನ್ಸ್ ವ್ಯವಹಾರ ಆರಂಭಿಸಬೇಕು ಎಂದಿರುವವರಿಗೆ ಸ್ನೇಹಿತರು, ಸಂಬಂಧಿಕರು ನೆರವಿಗೆ ನಿಲ್ಲಲಿದ್ದಾರೆ. ಈಗಾಗಲೇ ಪೊಲೀಸ್ ಸ್ಟೇಷನ್ ಅಥವಾ ಕೋರ್ಟ್ ಮೆಟ್ಟಿಲೇರಿರುವ ವ್ಯಾಜ್ಯಗಳು ಇದ್ದಲ್ಲಿ ಅವುಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ವೇದಿಕೆ ಸಿದ್ಧವಾಗಲಿದೆ. ನಿಮ್ಮ ಹಣಕಾಸು ಅಗತ್ಯಗಳಿಗೆ ನೀವು ನಿರೀಕ್ಷೆಯೇ ಮಾಡಿರದಂತಹ ವ್ಯಕ್ತಿಗಳಿಂದ ಸಹಾಯ ಒದಗಿ ಬರಲಿದೆ. ಧಾರ್ಮಿಕ ಪ್ರವಚನಕಾರರು, ಪುರೋಹಿತರು ಅಥವಾ ಜ್ಯೋತಿಷಿಗಳ ಆದಾಯದಲ್ಲಿ ಹೆಚ್ಚಳ ಆಗಲಿದೆ. ಕೃಷಿಕರು ಜಮೀನಿನ ಅಭಿವೃದ್ಧಿಗಾಗಿ ಹೆಚ್ಚಿನ ಹೂಡಿಕೆಯನ್ನು ಮಾಡಲಿದ್ದೀರಿ. ಬ್ಯಾಂಕ್, ಹಣಕಾಸು ಸಂಸ್ಥೆಗಳಲ್ಲಿ ಸಾಲವನ್ನು ಪಡೆದು, ಟ್ರ್ಯಾಕ್ಟರ್, ಸೋಲಾರ್ ವಾಟರ್ ಪಂಪ್ ಇವೇ ಮೊದಲಾದ ವ್ಯವಸ್ಥೆಗಳನ್ನು ಮಾಡುವುದಕ್ಕೆ ಹಣವನ್ನು ತೊಡಗಿಸಲಿದ್ದೀರಿ. ನಿಮ್ಮಲ್ಲಿ ಕೆಲವರಿಗೆ ಇದಕ್ಕಾಗಿ ಸರ್ಕಾರದಿಂದ ಸಬ್ಸಿಡಿ ಸಹ ದೊರೆಯಲಿದೆ. ನೀವು ಅಂದಾಜು ಮಾಡಿದ್ದಕ್ಕಿಂತ ಕಡಿಮೆ ಖರ್ಚಿನಲ್ಲಿ ಕೆಲಸಗಳು ಮುಗಿಯಲಿದ್ದು, ಇದರಿಂದ ಮನಸ್ಸಿನಲ್ಲಿ ಒಂದು ಬಗೆಯ ಸಂತಸ ಇರಲಿದೆ. ನಿಮ್ಮ ಅಕ್ಕ ಪಕ್ಕದ ಜಮೀನಿನವರು ತಮ್ಮ ಜಾಗವನ್ನು ಮಾರಾಟ ಮಾಡುತ್ತಿರುವುದಾಗಿಯೂ ಅದನ್ನು ಕೊಳ್ಳುವುದಕ್ಕೆ ತಮಗೇನಾದರೂ ಆಸಕ್ತಿ ಇದೆಯಾ ಎಂದು ಕೇಳಿಕೊಂಡು ಬರಬಹುದು. ಒಂದು ವೇಳೆ ಆರ್ಥಿಕವಾಗಿ ನಿಮ್ಮಿಂದ ಸಾಧ್ಯವಿದೆ ಅಥವಾ ಹಣವನ್ನು ಹೊಂದಾಣಿಕೆ ಮಾಡುವುದಕ್ಕೆ ಆಗುತ್ತದೆ ಎಂದಾದಲ್ಲಿ ಖಂಡಿತಾ ಇದಕ್ಕಾಗಿ ಪ್ರಯತ್ನಿಸಿ, ಇದರಿಂದ ಭವಿಷ್ಯದಲ್ಲಿ ಅನುಕೂಲ ಆಗಲಿದೆ. ವೃತ್ತಿ ನಿರತರಿಗೆ ತಮ್ಮದೇ ವೃತ್ತಿಯ ಸಲುವಾಗಿ ಕೆಲವು ಸೆಮಿನಾರ್ ಗಳಲ್ಲಿ ಭಾಗಿ ಆಗುವುದಕ್ಕೆ ದೂರದ ಪ್ರದೇಶಕ್ಕೆ ತೆರಳಬೇಕಾಗುತ್ತದೆ. ಇದರಿಂದ ಸ್ವಲ್ಪ ಮಟ್ಟಿಗೆ ದೇಹಾಯಾಸ ಕಾಡಲಿದೆ. ಆದರೆ ನೀವು ಯಾವ ಉದ್ದೇಶಕ್ಕೆ ತೆರಳಲಿದ್ದೀರೋ ಅದು ಈಡೇರಲಿದೆ. ವಿದ್ಯಾರ್ಥಿಗಳಿಗೆ ಸೈಕಲ್, ಮೊಪೆಡ್ ಅಥವಾ ಬೈಕ್ ಖರೀದಿಸುವಂತಹ ಯೋಗ ಕಂಡುಬರುತ್ತದೆ. ಇದರಿಂದ ಶಿಕ್ಷಣಕ್ಕೆ ತುಂಬಾ ದೊಡ್ಡ ಮಟ್ಟದಲ್ಲಿ ಸಹಾಯ ಆಗಲಿದೆ, ನಿಮ್ಮ ಮನಸ್ಸಿಗೂ ತೃಪ್ತಿಯಾಗಲಿದೆ. ಈ ಅವಧಿಯಲ್ಲಿ ನೀವು ಕೇಳಿದ ವಸ್ತುಗಳನ್ನು ಪೋಷಕರು ಕೊಡಿಸುವ ಸಾಧ್ಯತೆಗಳು ಹೆಚ್ಚಿವೆ. ಮಹಿಳೆಯರಿಗೆ ಇಷ್ಟು ಸಮಯ ನಿಮ್ಮ ಕೆಲಸದಲ್ಲಿ ತಪ್ಪುಗಳನ್ನೇ ಕಂಡುಹಿಡಿದು, ಆತ್ಮವಿಶ್ವಾಸವನ್ನು ಕಡಿಮೆ ಮಾಡುವುದಕ್ಕೆ ಪ್ರಯತ್ನಿಸುತ್ತಿರುವವರು ತಾವೇ ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ, ಇಷ್ಟು ದಿನ ತಮ್ಮಿಂದ ಆದ ತಪ್ಪಿಗೆ ಕ್ಷಮೆ ಸಹ ಕೇಳಬಹುದು. ಈ ಬೆಳವಣಿಗೆಯಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿದೆ. ಕುಟುಂಬದ ಜತೆಗೆ ಸಂತೋಷವಾಗಿ ಸಮಯ ಕಳೆಯಲಿದ್ದೀರಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಭವಿಷ್ಯದಲ್ಲಿ ನಿಮಗೆ ಬೇಕಾದ ಹಣಕಾಸಿನ ಅಗತ್ಯಗಳನ್ನು ಹೇಗೆ ಹೊಂದಿಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಯೋಜನೆ ರೂಪಿಸುವುದಕ್ಕೆ ಅಂತಲೇ ಹೆಚ್ಚು ತೊಡಗಿಸಿಕೊಳ್ಳಲಿದ್ದೀರಿ. ಈ ಅವಧಿಯಲ್ಲಿ ನಿಮಗೆ ಬಹಳ ಸಮಾಧಾನ ನೀಡುವ ಸಂಗತಿ ಏನೆಂದರೆ, ಹಣಕಾಸಿನ ಲೆಕ್ಕಾಚಾರಗಳು ನೀವು ಅಂದುಕೊಂಡಂತೆಯೇ ನಡೆಯಲಿವೆ. ನೀವು ಈಗಾಗಲೇ ಮಾಡಿದಂತಹ ಹೂಡಿಕೆಗಳು ಒಳ್ಳೆ ರಿಟರ್ನ್ಸ್ ನೀಡಲಿವೆ. ಷೇರುಪೇಟೆ, ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿದಂತಹವರು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಲಿದ್ದೀರಿ. ನಿಮ್ಮ ಕೈಗೆ ಹಣ ಬರುವುದು ಖಾತ್ರಿ ಅಥವಾ ಈಗಾಗಲೇ ಚೆಕ್ ನೀಡಿದ್ದಾರೆ, ಅದನ್ನು ಬ್ಯಾಂಕ್ ಗೆ ಹಾಕಿಯಾಗಿದೆ ಆ ಹಣ ಕ್ರೆಡಿಟ್ ಆಗುವುದಷ್ಟೇ ಬಾಕಿ ಎಂಬ ಸ್ಥಿತಿ ಇದ್ದರೂ ಇನ್ನೂ ನಿಮ್ಮ ಕೈ ಸೇರದ ಹಣಕ್ಕೆ ಯಾವುದೇ ಕಾರಣಕ್ಕೂ ಕಮಿಟ್ ಆಗುವುದಕ್ಕೆ ಹೋಗಬೇಡಿ. ಅಂದರೆ, ಇನ್ನು ನಿಮ್ಮ ಕೈಗೆ ಹಣವೇ ಬಾರದೆ ಅದರಿಂದ ಸಹಾಯ ಮಾಡುವುದಾಗಿ ಯಾರಿಗೂ ಮಾತು ನೀಡುವುದಕ್ಕೆ ಹೋಗಬೇಡಿ. ಪುಸ್ತಕ ಪ್ರಕಾಶಕರು ಅಥವಾ ಲೇಖಕರಿಗೆ ತಮ್ಮ ಆದಾಯದಲ್ಲಿ ಹೆಚ್ಚು ಮಾಡಿಕೊಳ್ಳುವ ಮಾರ್ಗೋಪಾಯಗಳು ಗೋಚರ ಆಗಲಿವೆ. ಇಲ್ಲಿಗೆ ಕೆಲಸ ಮಾಡಿಕೊಟ್ಟಿದ್ದು ಸಾಕು ಎಂದವರು ಸಹ ನಿಮ್ಮ ಜೊತೆಗಿನ ಒಪ್ಪಂದವನ್ನು ಮುಂದುವರಿಸಿಕೊಂಡು ಹೋಗುವ ಸಾಧ್ಯತೆಗಳು ಇವೆ. ಕೃಷಿಕರಾಗಿದ್ದು ಡೇರಿ ವ್ಯವಹಾರಗಳನ್ನು ಮಾಡುತ್ತಿದ್ದಲ್ಲಿ ಆದಾಯದ ಪ್ರಮಾಣ ಹೆಚ್ಚಳ ಆಗಲಿದೆ. ಪಶು ಸಾಕಣೆಯನ್ನು ಮಾಡುತ್ತಿರುವವರು ಅದರ ಪ್ರಮಾಣವನ್ನು ವಿಸ್ತರಣೆ ಮಾಡುವುದಕ್ಕೆ ಮುಂದಾಗಲಿದ್ದೀರಿ. ಇಷ್ಟು ಸಮಯ ಒಂದೇ ಆದಾಯ ಎಂದು ನೆಚ್ಚಿಕೊಂಡಿರುವವರಿಗೆ ನಾಲ್ಕಾರು ಆದಾಯ ಮಾಡಿಕೊಳ್ಳುವುದಕ್ಕೆ ಇತರರಿಂದ ಸಹಾಯ ದೊರೆಯಲಿದೆ. ಆದರೆ ಎತ್ತರದ ಸ್ಥಳಗಳಲ್ಲಿ ನಿಂತು ಕೆಲಸ ಮಾಡುವಾಗ ಮಾಮೂಲಿಗಿಂತ ಹೆಚ್ಚು ಎಚ್ಚರಿಕೆಯನ್ನು ವಹಿಸಿ. ನೀವೇನಾದರೂ ಜಮೀನು- ಸೈಟಿಗೆ ಸಂಬಂಧಪಟ್ಟಂತೆ ಖರೀದಿ- ಮಾರಾಟದ ವ್ಯವಹಾರವನ್ನು ಏನಾದರೂ ಮಾಡಿದ್ದಲ್ಲಿ ಅದು ಪೂರ್ತಿ ಆಗುವ ತನಕ ಯಾರ ಜತೆಗೂ ಈ ಬಗ್ಗೆ ಚರ್ಚೆ ಮಾಡುವುದಕ್ಕೆ ಹೋಗಬೇಡಿ. ವ್ಯವಹಾರ ಪೂರ್ತಿ ಆಗುವವರೆಗೂ ಎಲ್ಲೂ ಹೇಳಿಕೊಂಡು ಬರಬೇಡಿ. ವೃತ್ತಿ ನಿರತರಿಗೆ ಏಕಾಗ್ರತೆ ಬಹಳ ಕಷ್ಟ ಎನಿಸಲಿದೆ. ಮನೆಯಲ್ಲಿ ಆಗುವಂಥ ಕೆಲವು ಬೆಳವಣಿಗೆಗಳಿಂದ ಒತ್ತಡದ ಸನ್ನಿವೇಶಗಳು ಸೃಷ್ಟಿಯಾಗಲಿವೆ. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರು ಎದುರುತ್ತರ ನೀಡುವುದರಿಂದ ನೀವು ವೃತ್ತಿ ನಿರ್ವಹಿಸುವ ಸ್ಥಳದಲ್ಲಿ ಒಂದು ಬಗೆಯ ಅಸಮಾಧಾನ ಇರಲಿದೆ. ಸಾಧ್ಯವಾದಷ್ಟು ಇದನ್ನು ಮುಂದುವರಿಸಿಕೊಂಡು ಹೋಗದಿರುವುದು ಉತ್ತಮ. ಎಲೆಕ್ಟ್ರಿಕ್ ಅಥವಾ ಎಲೆಕ್ಟ್ರಾನಿಕ್ ವಸ್ತುಗಳನ್ನು ಏನಾದರೂ ಖರೀದಿ ಮಾಡಬೇಕು ಎಂದಿದ್ದಲ್ಲಿ ಅದರ ಗುಣಮಟ್ಟವನ್ನು ಒಂದಕ್ಕೆ ನಾಲ್ಕು ಬಾರಿ ಪರೀಕ್ಷಿಸಿದ ನಂತರವೇ ಖರೀದಿ ಮಾಡಿ. ವಿದ್ಯಾರ್ಥಿಗಳಿಗೆ ಕ್ರೀಡಾ ಕ್ಷೇತ್ರದಲ್ಲಿ ಉತ್ತಮವಾದ ಸಾಧನೆ ಮಾಡುವಂಥ ಯೋಗ ಇದೆ. ಇದಕ್ಕೆ ನಿಮ್ಮ ಶಿಕ್ಷಣ ಸಂಸ್ಥೆ ಸಹ ಉತ್ತಮ ಪ್ರೋತ್ಸಾಹ ನೀಡಲಿದೆ. ಈ ವಾರ ನಿಮ್ಮ ಜನಪ್ರಿಯತೆ ಹೆಚ್ಚಾಗಲಿದೆ. ವಿವಾಹ ವಯಸ್ಕ ಯುವತಿಯರಿಗೆ ಸೂಕ್ತ ಸಂಬಂಧಗಳು ಹುಡುಕಿಕೊಂಡು ಬರುವ ಯೋಗ ಇದೆ. ಒಂದು ವೇಳೆ ಈಗಾಗಲೇ ಪ್ರೀತಿಯಲ್ಲಿ ಇದ್ದಲ್ಲಿ, ಅದನ್ನು ಮನೆಯಲ್ಲಿ ಪ್ರಸ್ತಾವ ಮಾಡಿದರೆ ಒಪ್ಪಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ನಿಮಗೆ ಮೇಲುನೋಟಕ್ಕೆ ಏನು ಕಾಣಿಸುತ್ತದೋ ಅಥವಾ ಅನಿಸುತ್ತದೋ ಅದೇ ನಿಜ ಎಂದು ಅಂದುಕೊಳ್ಳಬೇಡಿ. ಏಕೆಂದರೆ ವಾಸ್ತವ ಸಂಗತಿಗಳು ನೀವು ಅಂದುಕೊಂಡಂತೆ ಇರುವುದಿಲ್ಲ. ಇದು ಎಲ್ಲ ಸಂಗತಿಗಳಿಗೂ ಅನ್ವಯ ಆಗುತ್ತದೆ. ಆದ್ದರಿಂದ ನಿಮ್ಮ ಗಮನದಲ್ಲಿ ಇರಬೇಕಾದದ್ದು ಏನೆಂದರೆ ಯಾವುದಾದರೂ ವಿಚಾರವನ್ನು ನಿಮ್ಮ ಪರಿಚಿತರು ಅಥವಾ ಸ್ನೇಹಿತರು ನಿಮ್ಮ ಮುಂದೆ ತೆಗೆದುಕೊಂಡು ಬಂದರೆ ಅವರಿಂದ ಪೂರ್ತಿಯಾಗಿ ಕೇಳಿಸಿಕೊಂಡ ನಂತರ ವಾಸ್ತವ ಸ್ಥಿತಿ ಏನಿದೆ ಎಂಬುದನ್ನು ನೀವು ಒಮ್ಮೆ ಪರಾಮರ್ಶೆ ಮಾಡಿದರೆ ಒಳಿತು. ಹಣದ ವಿಚಾರ ಪ್ರಾಮುಖ್ಯ ಪಡೆಯುತ್ತಿದೆ ಎಂದಾದರೆ ಅದನ್ನು ಆರಂಭದಲ್ಲೇ ಗುರುತಿಸಿ. ನೀವು ಒಂದು ವೇಳೆ ಸ್ವಂತ ಕೆಲಸ ಮಾಡುವಂಥವರು ಅಂತಾದರೆ, ಉದಾಹರಣೆಗೆ ಪ್ಲಂಬಿಂಗ್, ಕಾರ್ಪೆಂಟರ್ ಕೆಲಸ ಅಥವಾ ಟೈಲ್ಸ್ ಅಥವಾ ಗ್ರಾನೈಟ್ ಹಾಕುವಂತಹವರು ಅಂತಾದಲ್ಲಿ ಈಗಾಗಲೇ ಅರ್ಧ ಮುಗಿದ ಕೆಲಸಗಳು ಯಾವುದಾದರೂ ಬಂದಲ್ಲಿ ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿ ಆನಂತರ ಕೆಲಸವನ್ನು ಒಪ್ಪಿಕೊಳ್ಳಿ. ಏಕೆಂದರೆ, ಬಹಳ ಕಡಿಮೆ ಸಮಯದಲ್ಲಿ ಮುಗಿದುಹೋಗುತ್ತದೆ ಅಂದುಕೊಂಡಿದ್ದು ಬಹಳ ಸಮಯ, ಶ್ರಮವನ್ನು ಬೇಡುವಂತಾಗುತ್ತದೆ. ಯಾಕಾದರೂ ಕೆಲಸ ಒಪ್ಪಿಕೊಂಡೆ ಎಂದು ಚಿಂತಿಸುವಂತಾಗುತ್ತದೆ. ಕೃಷಿಕರಾಗಿದ್ದಲ್ಲಿ ಸಣ್ಣ ಮೊತ್ತದಲ್ಲಿ ಕೆಲಸ ಮುಗಿಸಿಕೊಂಡುಬಿಡಬಹುದು ಎಂದು ಆರಂಭಿಸಿದ್ದು ತುಂಬಾ ದೊಡ್ಡ ಮಟ್ಟದ ಖರ್ಚು ಮಾಡಿಸಲಿದೆ. ಆದ್ದರಿಂದ ಯಾವ ಕೆಲಸವನ್ನು ಶುರು ಮಾಡುವ ಮುಂಚೆ ಸರಿಯಾದ ಬಜೆಟ್ ಹಾಕಿಕೊಳ್ಳಿ. ನಿಮಗಿಂತ ಚಿಕ್ಕ ವಯಸ್ಸಿನವರು ಹಾಗೂ ಅನುಭವದಲ್ಲಿ ಕಡಿಮೆ ಇರುವಂತಹವರೇ ಆದರೂ ಯಾವುದಾದರೂ ಸಲಹೆಯನ್ನು ನೀಡಿದಲ್ಲಿ ಗಂಭೀರವಾಗಿ ಪರಿಗಣಿಸಿ. ಸರ್ಕಾರದಿಂದ ಪಡೆದುಕೊಳ್ಳಬೇಕಾದ ಲೈಸೆನ್ಸ್ ಅಥವಾ ಇನ್ಯಾವುದೇ ಅನುಮತಿಗಳನ್ನು ಪಡೆದುಕೊಂಡಿದ್ದೀರಿ ಎಂಬುದನ್ನು ಖಾತ್ರಿ ಮಾಡಿಕೊಂಡ ನಂತರವೇ ಕೆಲಸಗಳನ್ನು ಮುಂದುವರಿಸಿ. ಮೃತ್ಯು ನಿರತರು ಯಾವುದೇ ಪ್ರಮುಖ ಕೆಲಸಗಳನ್ನು ನಿಮ್ಮ ಸಹಾಯಕರಿಗೆ ವಹಿಸದಿರುವುದು ಈ ವಾರ ಬಹಳ ಮುಖ್ಯ. ಹಣಕಾಸಿನ ವಿಚಾರಗಳು ಏನೇ ಇದ್ದರೂ ನೀವೇ ಖುದ್ದಾಗಿ ನಿಂತು ಮಾತನಾಡುವುದು ಒಳ್ಳೆಯದು. ವಿದ್ಯಾರ್ಥಿಗಳಿಗೆ ಯಾರೋ ಮಾಡಿದ ತಪ್ಪು ನಿಮ್ಮ ತಲೆಯ ಮೇಲೆ ಬರಲಿದೆ. ನಿಮ್ಮದು ತಪ್ಪಿಲ್ಲ ಎಂದು ಏನೇ ಸಮರ್ಥನೆ ಮಾಡಿಕೊಂಡರೂ ಅದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಎದುರಿನವರು ಇರುವುದಿಲ್ಲ. ಮಹಿಳೆಯರಿಗೆ ಚರ್ಮಕ್ಕೆ ಸಂಬಂಧಪಟ್ಟಂತೆ ಕೆಲವು ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ಚರ್ಮಕ್ಕೆ ಬಳಸುವಂತಹ ಲೋಶನ್ ಅಥವಾ ಕ್ರೀಮ್ ಬಗ್ಗೆ ಎಚ್ಚರಿಕೆಯನ್ನು ವಹಿಸಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ನಿಮ್ಮಲ್ಲಿ ಕೆಲವರು ಬ್ಯಾಂಕ್ ಅಥವಾ ಹಣಕಾಸೇತರ ಸಂಸ್ಥೆಗಳಲ್ಲಿ ಸಾಲವನ್ನು ಪಡೆಯುವುದಕ್ಕೆ ಪ್ರಯತ್ನ ಮಾಡಲಿದ್ದೀರಿ. ಆ ರೀತಿ ಸಾಲವನ್ನು ಪಡೆದುಕೊಂಡು ಸ್ವಂತ ವ್ಯವಹಾರ ಉದ್ಯಮ ಅಥವಾ ವ್ಯಾಪಾರವನ್ನು ಆರಂಭಿಸುವ ಬಗ್ಗೆ ಆಲೋಚನೆಯನ್ನು ಮಾಡಲಿದ್ದೀರಿ. ಸಾಫ್ಟ್ ವೇರ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಮಶೀನ್ ಲರ್ನಿಂಗ್ ಇಂಥ ಕ್ಷೇತ್ರಗಳಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಮೇಲಧಿಕಾರಿಗಳಿಂದ ಮೆಚ್ಚುಗೆಯ ಮಾತುಗಳನ್ನು ಕೇಳಿಸಿಕೊಳ್ಳಲಿದ್ದೀರಿ. ಬಡ್ತಿಯ ನಿರೀಕ್ಷೆಯಲ್ಲಿ ಇರುವವರಿಗೆ ಅದು ಖಾತ್ರಿ ಆಗಲಿದೆ. ವೇತನ ಹೆಚ್ಚಳದ ಬಗ್ಗೆ ಸೂಚನೆ ಸಹ ದೊರೆಯಬಹುದು. ಮನೆಯ ಗಾರ್ಡನಿಂಗ್ ಗೆ ಸಂಬಂಧಿಸಿದಂತಹ ವಸ್ತುಗಳನ್ನು ವ್ಯಾಪಾರ ಮಾಡುವಂಥವರಿಗೆ ದೊಡ್ಡಮಟ್ಟದ ಆರ್ಡರ್ ದೊರೆಯುವಂತಹ ಯೋಗ ಇದೆ. ಚಿನ್ನದ ಚೀಟಿಯನ್ನು ಹಾಕುವ ಬಗ್ಗೆ ಸಂಗಾತಿ ಜೊತೆಗೆ ಚರ್ಚೆಯನ್ನು ಮಾಡಲಿದ್ದೀರಿ. ಮಕ್ಕಳ ಶಿಕ್ಷಣದ ವಿಚಾರವಾಗಿ ಒಂದಿಷ್ಟು ಗೊಂದಲ ಕಾಡಬಹುದು. ಕುಟುಂಬ ಸದಸ್ಯರು ಈ ವಿಚಾರವಾಗಿ ತಮ್ಮ ಆಕ್ಷೇಪ ವ್ಯಕ್ತಪಡಿಸುವ ಸಾಧ್ಯತೆ ಇದೆ. ಕೃಷಿಕರು ಈಗಿರುವ ಭೂಮಿಯ ಜೊತೆ ಇನ್ನೊಂದಿಷ್ಟು ಭೂಮಿಯನ್ನು ಖರೀದಿ ಮಾಡುವ ಬಗ್ಗೆ ಅಥವಾ ಭೋಗ್ಯಕ್ಕೆ ಪಡೆಯುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಈ ತೀರ್ಮಾನಕ್ಕೆ ಕುಟುಂಬದಿಂದಲೂ ಬೆಂಬಲ ದೊರೆಯಲಿದೆ. ಕೃಷಿ ಯಂತ್ರೋಪಕರಣಗಳು ಅಥವಾ ರಾಸುಗಳನ್ನು ಮನೆಗೆ ಖರೀದಿಸಿ ತರುವಂತಹ ಯೋಗ ಇದೆ. ಸ್ನೇಹಿತರು ಕೆಲವು ಹೊಸ ಪ್ರಾಜೆಕ್ಟ್ ಗಳನ್ನು ತರಲಿದ್ದಾರೆ. ಈಗಿರುವ ಸಂಪನ್ಮೂಲದಲ್ಲಿ ಎಲ್ಲವನ್ನೂ ಒಪ್ಪಿಕೊಳ್ಳಲು ಸಾಧ್ಯವೇ ಎಂಬಂಥ ಸಣ್ಣದೊಂದು ಅನುಮಾನ ನಿಮ್ಮಲ್ಲಿ ಮೂಡಲಿದೆ. ಆದರೆ ಯಾವುದೇ ಸಂದೇಹವನ್ನು ಇಟ್ಟುಕೊಳ್ಳದೆ ಧೈರ್ಯವಾಗಿ ಮುನ್ನುಗ್ಗಿ, ಯಶಸ್ಸು ನಿಮ್ಮದಾಗಲಿದೆ. ವೃತ್ತಿ ನಿರತರು ನಿಮ್ಮ ಸೇವಾ ಶುಲ್ಕಗಳನ್ನು ಹೆಚ್ಚು ಮಾಡುವ ಬಗ್ಗೆ ತೀರ್ಮಾನವನ್ನು ಈ ವಾರ ಕೈಗೊಳ್ಳಲಿದ್ದೀರಿ. ಶಾಖೆಗಳನ್ನು ವಿಸ್ತರಿಸುವುದಕ್ಕೆ ಕೆಲವು ಕಡೆ ಸ್ಥಳವನ್ನು ಬಾಡಿಗೆಗೆ ಅಥವಾ ಕ್ರಯಕ್ಕೆ ಅಥವಾ ಭೋಗ್ಯಕ್ಕೆ ಪಡೆಯುವ ಸಾಧ್ಯತೆಗಳಿವೆ. ಕೆಲವರು ನಿಮ್ಮ ವೃತ್ತಿಗೆ ಸಹಾಯ ಆಗುವಂತೆ ಹೂಡಿಕೆ ಮಾಡುವುದಕ್ಕೆ ಮುಂದೆ ಬರಲಿದ್ದಾರೆ. ತಂದೆ- ತಾಯಿಯಿಂದಲೂ ಹಣಕಾಸಿನ ನೆರವು ನಿಮಗೆ ಒದಗಿ ಬರಲಿದೆ. ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಇಂಟರ್ನ್ ಷಿಪ್ ದೊರೆಯುವಂತಹ ಅವಕಾಶಗಳಿವೆ. ನಿಮಗೆ ಸರಿ ಎಂದೆನಿಸುವ ಸಂಗತಿಯನ್ನು ಎಷ್ಟೇ ಕಷ್ಟವಾದರೂ ಅನುಸರಿಸಿ. ಇದರಿಂದ ಭವಿಷ್ಯದಲ್ಲಿ ನಿಮಗೆ ಅನುಕೂಲಗಳು ಒದಗಿ ಬರಲಿವೆ. ಮಹಿಳೆಯರು ಉದ್ಯೋಗ ಬದಲಾವಣೆಗಾಗಿ ಪ್ರಯತ್ನ ಪಡುತ್ತಿದ್ದಲ್ಲಿ ಶುಭ ಸುದ್ದಿ ಕೇಳುವಂತಹ ಯೋಗ ಇದೆ. ಸ್ನೇಹಿತರು ನೀಡುವಂತಹ ಸಲಹೆಗಳನ್ನು ಅನುಸರಿಸುವುದಕ್ಕೆ ಪ್ರಯತ್ನಿಸಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ನೀವು ಹಾಕಿಕೊಂಡ ಗುರಿಯಂತೆ ಬೆಳವಣಿಗೆಗಳು ನಡೆಯಲಿವೆ. ನಿಮ್ಮಲ್ಲಿ ಯಾರು ಬ್ಯಾಂಕಿಂಗ್ ಪರೀಕ್ಷೆಗಳು ಸೇರಿದಂತೆ ಯಾವುದೇ ಸರಕಾರಿ ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಉತ್ತಮವಾದ ಮಾರ್ಗದರ್ಶನ ದೊರೆಯಲಿದೆ. ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದವರಿಗೆ ಅಥವಾ ಸಂದರ್ಶನಗಳನ್ನು ನೀಡಿದವರಿಗೆ ಅದರಲ್ಲಿ ಯಶಸ್ಸು ದೊರೆಯುವಂಥ ಯೋಗ ಇದೆ. ಹೊಸದಾಗಿ ಪರಿಚಯ ಆದವರು ನಿಮಗೆ ತುಂಬಾ ದೊಡ್ಡ ಮಟ್ಟದಲ್ಲಿ ಸಹಾಯವನ್ನು ಮಾಡಲಿದ್ದಾರೆ. ನಿಮ್ಮಲ್ಲಿ ಕೆಲವರು ದ್ವಿಚಕ್ರ ವಾಹನವನ್ನೋ ಅಥವಾ ಕಾರನ್ನೋ ಖರೀದಿಸುವ ಸಾಧ್ಯತೆಗಳಿವೆ. ಯಾರು ನಿಮ್ಮ ಸಾಮರ್ಥ್ಯದ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿರುತ್ತಾರೋ ಅಂಥವರೇ ನಿಮ್ಮ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಲಿದ್ದಾರೆ. ತಂದೆ ತಾಯಿಗಳ ಜೊತೆಗೆ ತೀರ್ಥಕ್ಷೇತ್ರಗಳಿಗೆ ತೆರಳುವಂಥ ಯೋಗ ನಿಮ್ಮ ಪಾಲಿಗೆ ಇದೆ. ಇದೇ ವೇಳೆ ಮನೆಯಲ್ಲಿ ದೇವತಾ ಕಾರ್ಯಗಳನ್ನು ಸಹ ಆಯೋಜಿಸುವ ಸಾಧ್ಯತೆ ಇದೆ. ಇದೇ ಮೊದಲ ಬಾರಿಗೆ ಎಂಬಂತೆ ನೀವು ಕೈಕೊಂಡ ಕೆಲಸಗಳಲ್ಲಿ ಮನಸ್ಸಿಗೆ ಸಮಾಧಾನ ದೊರೆಯುವಂತಹ ಬೆಳವಣಿಗೆಗಳು ಆಗಲಿವೆ. ಕೃಷಿಕ ವೃತ್ತಿಯಲ್ಲಿ ಇರುವವರಿಗೆ ಪ್ರತಿಷ್ಠಿತ ಸಂಘ- ಸಂಸ್ಥೆಗಳಿಂದ ಸನ್ಮಾನಗಳು ಆಗುವಂಥ ಯೋಗಗಳಿವೆ. ಕೃಷಿ ಕೂಲಿ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಅಲ್ಪ ಪ್ರಮಾಣದ ಭೂಮಿಯಾದರೂ ದೊರೆಯುವಂತಹ ಯೋಗ ಇದೆ. ಈ ಹಿಂದೆ ಯಾವಾಗಲೋ ಸರ್ಕಾರಕ್ಕೆ ಇದಕ್ಕೆ ಸಂಬಂಧಪಟ್ಟಂತೆ ಅರ್ಜಿಯನ್ನು ಹಾಕಿಕೊಂಡಿದ್ದಲ್ಲಿ ಈಗ ಅದೊಂದು ವೇಗ ಪಡೆದುಕೊಂಡು, ನಿಮಗೆ ಅನುಕೂಲಕರವಾಗಿ ಮಾರ್ಪಡಲಿದೆ. ಪ್ರಭಾವಿಗಳು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ. ನಿಮ್ಮ ಅನುಭವದ ಆಧಾರದಲ್ಲಿ ತೆಗೆದುಕೊಂಡ ತೀರ್ಮಾನಗಳು ಉತ್ತಮ ಫಲಗಳನ್ನು ನೀಡಲು ಆರಂಭಿಸುತ್ತವೆ. ವೃತ್ತಿ ನಿರತರು ಹೊಸಬರನ್ನು ನಿಮ್ಮ ಪಾರ್ಟನರ್ ಆಗಿ ತೆಗೆದುಕೊಳ್ಳುವುದಕ್ಕೆ ಗಂಭೀರವಾಗಿ ಆಲೋಚನೆ ಮಾಡಲಿದ್ದೀರಿ. ಏಕಾಏಕಿ ನಿಮಗೆ ಬರುವಂತಹ ಕೆಲಸಗಳ ಪ್ರಮಾಣ ತುಂಬಾ ಹೆಚ್ಚಾಗಿ, ಕೆಲವು ಕೆಲಸಗಳನ್ನು ಇತರರಿಗೆ ನೀವಾಗಿಯೇ ಬಿಟ್ಟುಕೊಡಲಿದ್ದೀರಿ. ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ತುಂಬಾ ದೊಡ್ಡ ಮಟ್ಟದ ಯಶಸ್ಸು ದೊರೆಯಲಿದೆ. ನಿಮ್ಮ ಸಹಪಾಠಿಗಳು ಅಚ್ಚರಿಯಿಂದ ನೋಡುವಂಥ ಸಾಧನೆಯನ್ನು ನೀವು ಮಾಡಲಿದ್ದೀರಿ. ಉದ್ಯೋಗಸ್ಥ ಮಹಿಳೆಯರಿಗೆ ಈಗಿರುವ ಹುದ್ದೆಗಿಂತ ಹೆಚ್ಚಿನ ಜವಾಬ್ದಾರಿ ಹಾಗೂ ವೇತನ ಕೂಡ ಹೆಚ್ಚು ದೊರೆಯುವಂತಹ ಹುದ್ದೆ ದೊರೆಯುವ ಅವಕಾಶಗಳು ಹೆಚ್ಚಿವೆ. ತಂದೆ ತಾಯಿ ಅಥವಾ ಅತ್ತೆ ಮಾವನಿಗಾಗಿ ಅವರಿಗೆ ಇಷ್ಟವಾಗುವಂತಹ ಸ್ಥಳಗಳಿಗೆ ಪ್ರವಾಸವನ್ನು ಆಯೋಜನೆ ಮಾಡಲಿದ್ದೀರಿ. ನಿಮ್ಮ ಹಳೆಯ ಸ್ನೇಹಿತರು ಅಥವಾ ಸ್ನೇಹಿತೆಯರನ್ನು ಭೇಟಿ ಮಾಡುವುದರಿಂದ ಹಲವು ಅನುಕೂಲಗಳು ನಿಮಗೆ ಒದಗಿ ಬರಲಿವೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ನಿಮಗೆ ಉತ್ಸಾಹದಲ್ಲಿ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡಬೇಕು ಎಂದೆನಿಸುವುದರಲ್ಲಿ ತಪ್ಪೇನೂ ಇಲ್ಲ. ಹಾಗಂತ ಎಲ್ಲ ಕೆಲಸವನ್ನು ನಾನೇ ಮಾಡುತ್ತೇನೆ ಎಂದು ಹೊರಡಬೇಡಿ. ಯಾವ ಕೆಲಸವನ್ನು ಯಾರು ಅಚ್ಚುಕಟ್ಟಾಗಿ ಮಾಡಬಲ್ಲರು ಎಂಬುದನ್ನು ಗುರುತಿಸಿ, ಅವರಿಗೆ ಆ ಕೆಲಸಗಳನ್ನು ವಹಿಸಿ, ಅವರಿಂದ ಅದನ್ನು ಮಾಡಿಸುವುದರ ಬಗ್ಗೆ ಗಮನವನ್ನು ನೀಡಿ. ನಿಮ್ಮ ಬಳಿ ಇರುವ ಸಂಪನ್ಮೂಲ ಏನು ಹಾಗೂ ಅದನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸರಿಯಾದ ಯೋಜನೆಯನ್ನು ರೂಪಿಸಿಕೊಳ್ಳಿ. ಇನ್ನು ನಿಮ್ಮ ಮನೆಯಲ್ಲಿ ಕುಟುಂಬ ಸದಸ್ಯರು ಸೇರಿ ನಿರ್ಧರಿಸುವಂಥ ಶುಭಕಾರ್ಯಗಳಿಗೆ ಜವಾಬ್ದಾರಿಯನ್ನು ವಹಿಸಿಕೊಂಡು, ಓಡಾಟ ವಿಪರೀತ ಹೆಚ್ಚಾಗಿರುತ್ತದೆ. ನಿಮ್ಮಲ್ಲಿ ಕೆಲವರು ವೃತ್ತಿಗೆ ಸಂಬಂಧಿಸಿದಂತೆ ಅಥವಾ ಉದ್ಯೋಗದ ವಿಚಾರವಾಗಿ ಹೊಸ ಕೋರ್ಸ್ ಗಳಿಗೆ ಸೇರ್ಪಡೆ ಆಗುವ ಬಗ್ಗೆ ಆಲೋಚನೆಯನ್ನು ಮಾಡಲಿದ್ದೀರಿ ಮತ್ತು ಈ ಕುರಿತು ಸ್ನೇಹಿತರ ಚರ್ಚಿಸಿ ಪ್ರತಿಷ್ಠಿತ ಸಂಸ್ಥೆಗೆ ಸೇರ್ಪಡೆಯಾಗುವಂತಹ ಯೋಗ ಇದೆ. ಒಂದು ವೇಳೆ ನಿಮಗೆ ಸಂಬಂಧಪಟ್ಟಂತೆ ಕೋರ್ಟು- ಕಚೇರಿಗಳಲ್ಲಿ ಏನಾದರೂ ವ್ಯಾಜ್ಯಗಳು ನಡೆಯುತ್ತಿದ್ದಲ್ಲಿ ಅವುಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ಅವಕಾಶಗಳು ತೆರೆದುಕೊಳ್ಳಲಿವೆ. ಕೃಷಿಕರಿಗೆ ಅದರಲ್ಲೂ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವ ಕೃಷಿಕರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಫಸಲು ದೊರೆಯದೆ ಆತಂಕಕ್ಕೆ ಕಾರಣ ಆಗಲಿದೆ. ನಿಮ್ಮದೇ ಆಲಸ್ಯದ ಕಾರಣಕ್ಕೆ ಲಾಭದ ಪ್ರಮಾಣದಲ್ಲಿ ಭಾರಿ ಇಳಿಕೆಯನ್ನು ಕಾಣಬೇಕಾಗುತ್ತದೆ. ಜಮೀನಿಗೆ ಸಂಬಂಧಪಟ್ಟಂತಹ ಯಾವುದೇ ಕೆಲಸ ಇರಲಿ, ತಕ್ಷಣವೇ ಮಾಡುವ ಕಡೆಗೆ ಗಮನವನ್ನು ನೀಡಿ. ನಾಳೆ ಮಾಡಿದರಾಯ್ತು ಎಂಬಂತೆ ಯಾವುದಕ್ಕೂ ಆಲಸ್ಯವನ್ನು ಮಾಡಬೇಡಿ. ಹಣಕಾಸು ಸಂಸ್ಥೆಗಳಲ್ಲಿ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಪ್ರಭಾವಿಗಳ ಸಹಾಯ ನಿಮಗೆ ದೊರೆಯಲಿದೆ. ವೃತ್ತಿ ನಿರತರಿಗೆ ಪ್ರತಿಸ್ಪರ್ಧಿಗಳು ಭಾರಿ ಸಮಸ್ಯೆಗಳನ್ನು ತಂದೊಡ್ಡಲಿದ್ದಾರೆ. ನಿಮ್ಮ ವಿರುದ್ಧ ಅಪಪ್ರಚಾರ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಕೆಲವು ಸೋಷಿಯಲ್ ಮೀಡಿಯಾ ಪೋಸ್ಟ್ ಗಳ ಮೂಲಕ ಮಾಡುವಂತಹ ವರ್ಚಸ್ಸಿನ ಹಾನಿ ನಿಮ್ಮನ್ನು ಆತಂಕಕ್ಕೆ ದೂಡಲಿದೆ. ಬುಧವಾರದಂದು ವಿಷ್ಣು ಸಹಸ್ರನಾಮ ಶ್ರವಣ, ಪಠಣ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ವಿದ್ಯಾರ್ಥಿಗಳು ನಿಮಗೆ ಸಂಬಂಧ ಪಡೆದ ವಿಚಾರಗಳಿಗೆ ತಲೆಹಾಕಲು ಹೋಗಬೇಡಿ. ನಿಮಗೆ ಹೊಸದಾಗಿ ಸ್ನೇಹಿತರಾದವರ ಜೊತೆಗೆ ಅತಿಯಾದ ಸಲುಗೆ ಬೇಡ. ಒಂದೇ ವಿಷಯದ ಬಗ್ಗೆ ಪದೇ ಪದೇ ಚರ್ಚೆ ಮಾಡುವುದಕ್ಕೆ ಹೋಗಬೇಡಿ. ಮಹಿಳೆಯರು ಇತರರ ವೈಯಕ್ತಿಕ ವಿಚಾರಗಳನ್ನು ಗುಂಪುಗಳಿರುವಾಗ ಚರ್ಚೆ ಮಾಡುವುದಕ್ಕೆ ಯಾವುದೇ ಕಾರಣಕ್ಕೂ ಹೋಗಬೇಡಿ. ಹೀಗೆ ಮಾಡುವುದರಿಂದ ನೀವೇ ಅವಮಾನದ ಪಾಲಾಗಲಿದ್ದೀರಿ.
ಲೇಖನ- ಎನ್.ಕೆ.ಸ್ವಾತಿ