Weekly Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಮೇ 21ರಿಂದ 27ರ ತನಕ ವಾರಭವಿಷ್ಯ
ಸಂಖ್ಯಾಶಾಸ್ತ್ರ ವಾರ ಭವಿಷ್ಯ: 2023ರ ಮೇ 21 ರಿಂದ ಮೇ 27ರ ವರೆಗಿನ ವಾರಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಜನ್ಮಸಂಖ್ಯೆಯನ್ನು ಹಾಗೂ ಆ ನಂತರ ಈ ವಾರ ಹೇಗಿರುತ್ತದೆ ತಿಳಿಯಿರಿ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿಯೇ ಮಾಹಿತಿಯೂ ಇದೆ. ಮೇ 21ರಿಂದ 27ರ ತನಕ ವಾರಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಜನ್ಮಸಂಖ್ಯೆಯನ್ನು ಹಾಗೂ ಆ ನಂತರ ಈ ವಾರ ಹೇಗಿರುತ್ತದೆ ತಿಳಿಯಿರಿ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಆದಾಯದಲ್ಲಿ ಹೆಚ್ಚಳ ಮಾಡಿಕೊಳ್ಳುವುದಕ್ಕೆ ಶತಾಯಗತಾಯ ಪ್ರಯತ್ನ ಮಾಡಲಿದ್ದೀರಿ. ನಿಮ್ಮ ಸೋಷಿಯಲ್ ಕಾಂಟ್ಯಾಕ್ಟ್ ಗಳನ್ನು ವಿಸ್ತರಿಸಿಕೊಳ್ಳುವುದಕ್ಕೆ ಇದು ಉತ್ತಮ ಸಮಯ. ನಿಮ್ಮ ವೈಯಕ್ತಿಕ ನಿಲವು, ಸಿದ್ಧಾಂತಗಳು ಏನೇ ಇರಲಿ, ಹೊಸಬರು ಪರಿಚಯ ಆದಾಗ ದೀರ್ಘ ಕಾಲದ ಒಡನಾಟವನ್ನು ಅವರ ಜತೆಗೆ ಮುಂದುವರಿಸುವ ಬಗ್ಗೆ ಪ್ರಯತ್ನವನ್ನು ಮಾಡಿ. ಸಿನಿಮಾ ರಂಗದಲ್ಲಿ ಇರುವವರು ಕೆಲವು ಟೀಕೆ– ಟಿಪ್ಪಣಿಗಳನ್ನು ಕೇಳಬೇಕಾಗುತ್ತದೆ. ಇದರಿಂದ ಮಾನಸಿಕವಾಗಿ ಕುಗ್ಗದಿರಿ. ಹೊಸ ಪ್ರಾಜೆಕ್ಟ್ ಗಳು ಬಂದಾಗ ಮುಕ್ತ ಮನಸ್ಸಿನಿಂದ ಕೇಳಿಸಿಕೊಳ್ಳಿ. ಆ ನಂತರ ಸಾಧಕ– ಬಾಧಕಗಳ ಬಗ್ಗೆ ಆಲೋಚನೆಯನ್ನು ಮಾಡಿ. ವಿದೇಶ ಪ್ರಯಾಣಗಳನ್ನು ಮಾಡುತ್ತಿರುವವರು ಅಥವಾ ಮಾಡಬೇಕೆಂದು ಇರುವವರು ಹಣಕಾಸು ಅಗತ್ಯವನ್ನು ಸರಿಯಾಗಿ ಲೆಕ್ಕ ಹಾಕಿಕೊಂಡು, ಆ ನಂತರ ಯೋಜನೆಯನ್ನು ರೂಪಿಸಿ. ಕೃಷಿಕರಿಗೆ ಆಪ್ತ ಸ್ನೇಹಿತರು, ತುಂಬ ನಂಬಿರುವಂಥ ವ್ಯಕ್ತಿಗಳ ಜತೆಗೆ ಅಭಿಪ್ರಾಯ ಭೇದಗಳು, ಮನಸ್ತಾಪಗಳು ಆಗುವಂಥ ಯೋಗ ಇದೆ. ಮದ್ಯಪಾನದ ಅಭ್ಯಾಸ ಇರುವಂಥವರು ಸಾಧ್ಯವಾದಷ್ಟೂ ಮೌನವಾಗಿರುವುದಕ್ಕೆ ಪ್ರಯತ್ನಿಸಿ. ಕಟ್ಟಡ ಕಾಂಟ್ರಾಕ್ಟರ್ ಗಳಿಗೆ ಹೊಸ ಪ್ರಾಜೆಕ್ಟ್ ಗಳು ಬರಲಿವೆ. ಸರಿಯಾಗಿ ಲೆಕ್ಕಾಚಾರ ಹಾಕಿಕೊಂಡ ನಂತರವಷ್ಟೇ ಒಪ್ಪಿಕೊಳ್ಳಿ. ಇಲ್ಲದಿದ್ದಲ್ಲಿ ನಷ್ಟವನ್ನು ಅನುಭವಿಸಬೇಕಾಗುತ್ತದೆ. ವಿದ್ಯಾರ್ಥಿಗಳ ನಿಂದೆಯನ್ನು ಎದುರಿಸಬೇಕಾಗುತ್ತದೆ. ಒಂದು ವೇಳೆ ನಿಮ್ಮದೇ ತಪ್ಪು ಎಂದು ಖಾತ್ರಿ ಆದಲ್ಲಿ ಯಾವುದೇ ಹಿಂಜರಿಕೆ ಮಾಡದೆ ಕ್ಷಮೆಯನ್ನು ಕೇಳುವುದು ಉತ್ತಮ. ಮಹಿಳೆಯರಿಗೆ ಉದ್ಯೋಗ ಬದಲಾವಣೆ ಮಾಡುವುದಕ್ಕೆ ಸೂಕ್ತ ಅವಕಾಶಗಳು ದೊರೆಯಲಿವೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಹೊಸ ವ್ಯವಹಾರ, ಉದ್ಯಮ ಆರಂಭಿಸುವ ಬಗ್ಗೆ ಸ್ನೇಹಿತರು, ಸಂಬಂಧಿಗಳ ಜತೆಗೆ ಚರ್ಚೆ ನಡೆಸಲಿದ್ದೀರಿ. ಈಗಾಗಲೇ ಮಾಡಿಟ್ಟುಕೊಂಡಿರುವ ಪ್ರಾಜೆಕ್ಟ್ ರಿಪೋರ್ಟ್ ಗಳು, ಲೆಕ್ಕಾಚಾರಗಳು ನಿಮಗೆ ಸಹಾಯಕ್ಕೆ ಬರಲಿವೆ. ಆನ್ ಲೈನ್ ನಲ್ಲಿ ವ್ಯವಹಾರ ಮಾಡುವಂಥವರು ಬಹಳ ಜಾಗ್ರತೆಯಿಂದ ಇರಬೇಕು. ನಿಮ್ಮಲ್ಲಿ ಕೆಲವರಿಗೆ ವಂಚನೆ ಆಗುವಂಥ ಯೋಗ ಇದೆ. ಆದ್ದರಿಂದ ಹೊಸ ಇ– ಕಾಮರ್ಸ್ ಸೈಟ್ ಗಳು ಅಥವಾ ವಿದೇಶದ ಆನ್ ಲೈನ್ ಮಾರಾಟ ಪೋರ್ಟಲ್ ಗಳಿಂದ ಏನನ್ನಾದರೂ ಖರೀದಿಸುತ್ತಿದ್ದೀರಿ ಅಂತಾದರೆ ಅದರ ವಿಶ್ವಾಸಾರ್ಹತೆಯನ್ನು ಸರಿಯಾಗಿ ತಿಳಿದುಕೊಂಡು, ಆ ನಂತರ ಮುಂದುವರಿಯಿರಿ. ಸಂತಾನ ಅಪೇಕ್ಷಿತರಿಗೆ ಶುಭ ಬೆಳವಣಿಗೆಗಳು ಆಗಲಿವೆ. ಸಂಗಾತಿ ಜತೆಗೆ ಈ ವಿಚಾರವಾಗಿ ಕೆಲವು ಅಭಿಪ್ರಾಯ ಭೇದಗಳು ಕಾಣಿಸಿತು ಎಂಬ ಕಾರಣಕ್ಕೆ ಮುಂದಕ್ಕೆ ಹಾಕಬೇಡಿ. ವಿವರಿಸಿ ಹೇಳುವುದಕ್ಕೆ ಅಥವಾ ಸಂದೇಹಗಳನ್ನು ತಜ್ಞರಿಂದಲೇ ಪರಿಹರಿಸಿಕೊಳ್ಳುವುದಕ್ಕೆ ಪ್ರಯತ್ನವನ್ನು ಮಾಡಿ. ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ವೃತ್ತಿಯಲ್ಲಿ ತೊಡಗಿಕೊಂಡವರಿಗೆ ಹಣಕಾಸಿನ ಅಗತ್ಯಕ್ಕಾಗಿ ಭೂಮಿಯನ್ನೋ ಅಥವಾ ವಾಹನಗಳನ್ನೋ ಅಥವಾ ಸಾಕು ಪ್ರಾಣಿಗಳನ್ನೋ ಮಾರಾಟ ಮಾಡುವಂಥ ಪರಿಸ್ಥಿತಿ ಬರಲಿದೆ. ಮೀನು– ಕುರಿ ಸಾಕಾಣಿಕೆ ಮಾಡುವಂಥವರಿಗೆ ಮಾತ್ರ ಆದಾಯದಲ್ಲಿ ಹೆಚ್ಚಳ ಆಗಲಿದೆ. ಹೊಸಬರು ಪರಿಚಯ ಆದಾಗ ಏಕಾಏಕಿ ಅವರು ಹೇಳಿದ್ದನ್ನೆಲ್ಲ ಅನುಸರಿಸುವುದಕ್ಕೆ ಹೋಗದಿರಿ. ವೃತ್ತಿನಿರತರಿಗೆ ನೇರವಂತಿಕೆಯಿಂದ ಅನುಕೂಲ ಆಗಲಿದೆ. ಸಾಧ್ಯವಾದಷ್ಟೂ ಪಾರದರ್ಶಕತೆಯಿಂದ ಇರುವುದಕ್ಕೆ ಪ್ರಯತ್ನಿಸಿ. ಕ್ರಿಯೇಟಿವ್ ಕ್ಷೇತ್ರದಲ್ಲಿ ಇರುವವರಿಗೆ ಒತ್ತಡದ ಸನ್ನಿವೇಶಗಳು ಎದುರಾಗಲಿವೆ. ವಿದ್ಯಾರ್ಥಿಗಳು ತಮ್ಮ ಆತುರದ ಸ್ವಭಾವದಿಂದ ಕೆಲವು ಅವಕಾಶಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಸ್ತ್ರೀಯರು ಗೆಳೆಯ– ಗೆಳತಿಯರ ಕಷ್ಟಕ್ಕೆ ದೊಡ್ಡ ಮಟ್ಟದಲ್ಲಿ ನೆರವನ್ನು ನೀಡಲಿದ್ದೀರಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ವಿಮಾ ಏಜೆಂಟರು, ಸೆಕೆಂಡ್ ಹ್ಯಾಂಡ್ ವಾಹನಗಳ ಡೀಲರ್ ಗಳು, ಮನೆ– ಸೈಟುಗಳ ದಲ್ಲಾಳಿಗಳಿಗೆ ಆದಾಯ ಹೆಚ್ಚಾಗಲಿದೆ. ಈ ಹಿಂದೆ ನೀವು ಮಾಡಿದ ಸಹಾಯ, ನೀಡಿದ ಸಲಹೆ– ಸೂಚನೆಗಳಿಂದ ಲಾಭವಾದಂಥವರು ಈಗ ಮತ್ತೆ ನಿಮ್ಮನ್ನು ಹುಡುಕಿಕೊಂಡು ಬಂದು, ಕೆಲವು ಕೆಲಸಗಳನ್ನು ನೀಡಲಿದ್ದೀರಿ. ಪರ್ಫಾರ್ಮೆನ್ಸ್ ಅಪ್ರೈಸಲ್ ನಿರೀಕ್ಷೆಯಲ್ಲಿ ಇರುವವರಿಗೆ ನೀವು ಅಂದುಕೊಂಡಂತೆಯೇ ಬೆಳವಣಿಗೆಗಳು ಆಗಲಿವೆ. ಎಲೆಕ್ಟ್ರಿಕಲ್ ವಾಹನ ಖರೀದಿ ಮಾಡಬೇಕು ಎಂಬ ಕಾರಣಕ್ಕೆ ಹಣಕಾಸಿಗೆ ಪ್ರಯತ್ನ ಮಾಡುತ್ತಿದ್ದಲ್ಲಿ ಅದು ಒದಗಿ ಬರುವ ಸಾಧ್ಯತೆ ಇದೆ. ನೀವು ತೆಗೆದುಕೊಂಡ ಕೆಲವು ನಿರ್ಧಾರಗಳು ತಕ್ಷಣವೇ ಫಲ ನೀಡುವುದಕ್ಕೆ ಆರಂಭಿಸಲಿವೆ. ಸೋದರಮಾವ, ತಾಯಿಯ ತಂದೆ ಇವರ ಆರೋಗ್ಯದ ಬಗ್ಗೆ ಮಾತ್ರ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ. ಸಣ್ಣ– ಪುಟ್ಟ ಅನಾರೋಗ್ಯ ಎಂದು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ವಿಜ್ಞಾನಿಗಳಿಗೆ ಹೊಸ ಪ್ರಾಜೆಕ್ಟ್ ವೊಂದರ ಸಲುವಾಗಿ ದೂರ ಪ್ರಯಾಣ ಮಾಡಬೇಕಾಗುತ್ತದೆ. ಇದರಿಂದ ಹೆಸರು, ಸ್ಥಾನ– ಮಾನ ದೊರೆಯಲಿದೆ. ಕೃಷಿ ವೃತ್ತಿಯಲ್ಲಿ ಇರುವವರು ಹೋಮ್ ಸ್ಟೇಯಂಥದ್ದನ್ನು ಆರಂಭಿಸುವ ಬಗ್ಗೆ ಚಿಂತನೆ ಮಾಡಲಿದ್ದೀರಿ. ಇದಕ್ಕಾಗಿ ಬೇಕಾದ ಸಿದ್ಧತೆಗಳನ್ನು ಆರಂಭಿಸಿದ್ದೀರಿ ಎಂದಾದರೆ ಅದು ಇನ್ನಷ್ಟು ವೇಗ ಪಡೆದುಕೊಳ್ಳಲಿದೆ. ವೃತ್ತಿನಿರತರಿಗೆ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಚಿಂತೆ ಕಾಡಲಿದೆ. ಅಂದುಕೊಂಡಂಥ ಅಥವಾ ಪ್ರಯತ್ನ ಮಾಡಿದ ಸಂಸ್ಥೆಯಲ್ಲಿ ಪ್ರವೇಶ ದೊರಕದೆ ಮನಸ್ಸಿಗೆ ಬೇಸರ ಕೂಡ ಆಗಬಹುದು. ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಬ್ಯಾಂಕ್ ಗಳಲ್ಲಿ ಸಾಲಕ್ಕಾಗಿ ಪ್ರಯತ್ನ ಮಾಡಿದ್ದಲ್ಲಿ ಅದು ದೊರೆಯುವ ಸಾಧ್ಯತೆಗಳು ಹೆಚ್ಚಿವೆ. ಮಹಿಳೆಯರಿಗೆ ತವರು ಮನೆಯಲ್ಲಿ ನಡೆಯುವ ಕೆಲವು ಬೆಳವಣಿಗೆಗಳು, ವಿದ್ಯಮಾನಗಳು ಆತಂಕಕ್ಕೆ ಕಾರಣ ಆಗಲಿದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಚೀಟಿ ವ್ಯವಹಾರ ನಡೆಸುತ್ತಿರುವವರಿಗೆ ಹಣಕಾಸಿನ ಮುಗ್ಗಟ್ಟು ಎದುರಾಗಬಹುದು. ಅಥವಾ ನಿಮ್ಮದೇ ಅತಿಯಾದ ಆತ್ಮವಿಶ್ವಾಸದ ಕಾರಣಕ್ಕೆ ಕೆಲವು ಎಡವಟ್ಟುಗಳನ್ನು ಮಾಡಿಕೊಳ್ಳಲಿದ್ದೀರಿ. ಯಾವುದೇ ನಿರ್ಧಾರವನ್ನು ಆತುರವಾಗಿ ಮಾಡದಿರಿ. ಅತಿಯಾದ ಲಾಭ ಅಥವಾ ಆದಾಯದ ಆಸೆಗೆ ಬಿದ್ದು, ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳುವಂತಾಗಲಿದೆ. ಯಾರು ಉದ್ಯೋಗದಲ್ಲಿ ಉನ್ನತ ಹುದ್ದೆಯಲ್ಲಿ ಇದ್ದೀರಿ, ಅಂಥವರು ನಿಮ್ಮ ಕೈ ಕೆಳಗೆ ಕೆಲಸ ಮಾಡುವವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ನಿಮ್ಮ ಜತೆಗೆ ಮಾತನಾಡಬೇಕು ಎಂದು ಕೇಳಿಕೊಂಡರೆ ಅವರಿಗೆ ಸಮಯವನ್ನು ಕೊಡಿ. ಇನ್ನು ನಿಮ್ಮ ವೈಯಕ್ತಿಕ ಕೆಲಸಗಳು ಎಷ್ಟೇ ಇರಲಿ, ಏನೇ ಇರಲಿ ಉದ್ಯೋಗಕ್ಕೆ ಸಂಬಂಧಿಸಿದ ಜವಾಬ್ದಾರಿಗಳನ್ನು ಮುಂದಕ್ಕೆ ಹಾಕದಿರಿ. ಒಂದು ವೇಳೆ ಹಾಗೆ ಮಾಡಿದರೆ ಇದಕ್ಕೆ ಭಾರೀ ಬೆಲೆಯನ್ನು ತೆರಬೇಕಾಗುತ್ತದೆ,. ಕೃಷಿಗೆ ಸಂಬಂಧಿಸಿದ ವೃತ್ತಿಯಲ್ಲಿ ಇರುವವರಿಗೆ ಆದಾಯದ ಹರಿವು ಹೆಚ್ಚಾಗಲಿದೆ. ಒಂದಕ್ಕಿಂತ ಹೆಚ್ಚಿನ ಮೂಲಗಳು ಗೋಚರಿಸುತ್ತವೆ. ಕೆಲವು ಶುಭ ಕಾರ್ಯಗಳು ಅಥವಾ ಸಮಾರಂಭಗಳ ಕಾರಣಕ್ಕಾಗಿ ದೂರ ಪ್ರಯಾಣ ಮಾಡಬೇಕಾಗಬಹುದು. ಒಬ್ಬೊಬ್ಬರೇ ಪ್ರಯಾಣ ಮಾಡುತ್ತಿದ್ದೀರಿ ಅಂತಾದಲ್ಲಿ ಬೆಲೆಬಾಳುವ ವಸ್ತುಗಳ ಕಡೆಗೆ ಜಾಸ್ತಿ ನಿಗಾ ಮಾಡಿ, ಅದರಲ್ಲೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಪ್ರಯಾಣಿಸುತ್ತಿದ್ದೀರಿ ಎಂದಾದರೆ ಮತ್ತೂ ಎಚ್ಚರ. ವೃತ್ತಿ ನಿರತರಿಗೆ ಹೊಸ ಹೊಸ ಆಲೋಚನೆಗಳು, ಕೆಲಸಗಳು ದೊರೆಯಲಿವೆ. ಇದರಿಂದ ಆತ್ಮವಿಶ್ವಾಸ ಹೆಚ್ಚಾಗಲಿದೆ. ವಿದ್ಯಾರ್ಥಿಗಳು ಕೆಲವು ವಸ್ತುಗಳನ್ನು ಖರೀದಿಸುವಂಥ ಯೋಗ ಇದೆ. ಇದು ಉಡುಗೊರೆ ರೂಪದಲ್ಲಿಯಾದರೂ ದೊರೆಯಬಹುದು. ಒಟ್ಟಾರೆ ಇದರಿಂದ ಸಂತೋಷ ಪಡುತ್ತೀರಿ. ಮಹಿಳೆಯರು ಸಾಮಾಜಿಕವಾಗಿ ಮನ್ನಣೆ ಹಾಗೂ ಸ್ಥಾನ– ಮಾನಗಳನ್ನು ಪಡೆಯುವ ಸಾಧ್ಯತೆ ಇದೆ. ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸುವವರಿಗೆ ಬಡ್ತಿ ದೊರೆಯಬಹುದು.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಯಾರದೋ ತಪ್ಪಿಗೆ ನೀವು ಬೆಲೆ ತೆರಬೇಕಾದಂಥ ಸನ್ನಿವೇಶ ಎದುರಾಗಲಿದೆ. ಈ ಹಿಂದೆ ನೀವು ಆಡಿದ್ದ ಮಾತುಗಳೇ ಸಮಸ್ಯೆಗಳಾಗಿ ಎದ್ದು ನಿಲ್ಲುತ್ತವೆ. ಆದ್ದರಿಂದ ಯಾವುದೇ ಮಾತನಾಡುವ ಮುನ್ನ ಈ ಹಿಂದೆ ಅದಕ್ಕೆ ಸಂಬಂಧಿಸಿದಂತೆ ಏನು ಹೇಳಿದ್ದಿರಿ ಎಂಬುದನ್ನು ಒಮ್ಮೆ ನೆನಪಿಸಿಕೊಂಡು ಬಿಡಿ. ರಾಜಕಾರಣಿಗಳಿಗೆ ಬಹಳ ಒತ್ತಡದ ಸನ್ನಿವೇಶ ಸೃಷ್ಟಿ ಆಗಲಿದೆ. ಕೆಲ ಕಾಲ ಸಾರ್ವಜನಿಕ ಜೀವನದಿಂದಲೇ ದೂರ ಇರಬೇಕಾದಂಥ ಅನಿವಾರ್ಯ ಸೃಷ್ಟಿ ಆಗಬಹುದು. ನಿಮಗೆ ಸಂಬಂಧಿಸಿದ ಆಕ್ಷೇಪಾರ್ಹ ಆಡಿಯೋ– ವಿಡಿಯೋ ಹೊರಬಂದು ಮುಜುಗುರದ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ದುರ್ಗಾದೇವಿಯ ಆರಾಧನೆಯನ್ನು ಮಾಡಿ, ಮಾನಸಿಕ ಸ್ಥೈರ್ಯಕ್ಕಾಗಿ ಪ್ರತಿ ದಿನ ಕೆಲ ಸಮಯವಾದರೂ ಧ್ಯಾನ ಮಾಡುವುದಕ್ಕೆ ಸಮಯವನ್ನು ಮೀಸಲಿಡುವುದು ಉತ್ತಮ. ಕೃಷಿಕರು ಹೊಸ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವಂಥ ಯೋಗ ಇದೆ. ಮಾರುಕಟ್ಟೆಯ ವಿಭಾಗವನ್ನು ಸಹ ಆರಂಭಿಸುವ ಬಗ್ಗೆ ಅಥವಾ ಕೆಲವು ಮುಖ್ಯ ಸ್ಥಳಗಳಲ್ಲಿ ಮಳಿಗೆ ತೆರೆಯುವ ಬಗ್ಗೆ ಕೂಡ ಆಲೋಚಿಸುವ ಸಾಧ್ಯತೆ ಇದೆ. ಇದನ್ನು ಒಬ್ಬ ವ್ಯಕ್ತಿಯೇ ಮಾಡಬೇಕು ಎಂದಿಲ್ಲ. ಒಂದು ಗುಂಪಾಗಿ ಮಾಡಬಹುದು, ಇದರ ಮುಂದಾಳತ್ವವನ್ನು ನೀವು ವಹಿಸಿಕೊಳ್ಳುವಂಥ ಸಾಧ್ಯತೆ ಇದೆ. ವೃತ್ತಿನಿರತರಿಗೆ ಡೆಡ್ ಲೈನ್ ನೊಳಗೆ ಕೆಲಸ ಮಾಡಿ ಮುಗಿಸುವುದಕ್ಕೆ ನಾನಾ ಬಗೆಯಲ್ಲಿ ಸವಾಲುಗಳು ಎದುರಾಗಲಿವೆ. ಕೆಲವರಿಗೆ ಇದರಿಂದ ಆರ್ಥಿಕ ನಷ್ಟಗಳು ಸಹ ಎದುರಾಗಬಹುದು. ಇನ್ನು ವಿದ್ಯಾರ್ಥಿಗಳಿಗೆ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆಹಾರ– ನೀರು ಸೇವನೆ ವಿಚಾರದಲ್ಲಿ ಬಹಳ ಜಾಗ್ರತೆಯಿಂದ ಇರಬೇಕು. ಮಹಿಳೆಯರಿಗೆ ಪರಿಚಯಸ್ಥರು, ಆತ್ಮೀಯರಿಂದಲೇ ಬಹಳ ವಿರೋಧದ ಮಾತುಗಳನ್ನು ಕೇಳಬೇಕಾದ ಸನ್ನಿವೇಶ ಎದುರಾಗಲಿದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಕುಟುಂಬ ಸದಸ್ಯರ ಜತೆಗೆ ಪ್ರವಾಸ ತೆರಳುವಂಥ ಯೋಗ ಇದೆ. ದಂಪತಿ ಮಧ್ಯೆ ಸಣ್ಣ– ಪುಟ್ಟ ಮನಸ್ತಾಪಗಳು ಇದ್ದಲ್ಲಿ ಬಗೆಹರಿಸಿಕೊಳ್ಳುವುದಕ್ಕೆ ಉತ್ತಮ ವೇದಿಕೆ ದೊರೆಯಲಿದೆ. ನಿಮ್ಮಲ್ಲಿ ಕೆಲವರು ಮನೆಯನ್ನು ಬದಲಿಸಿ, ಬೇರೆಡೆ ತೆರಳುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಈ ಓಡಾಟದಲ್ಲಿ ಹೆಚ್ಚಿನ ಸಮಯ ಹೋಗಲಿದೆ. ಇನ್ನು ಮನೆಗೆ ದೊಡ್ಡ ಅಳತೆಯ ಟೀವಿ, ಹೋಮ್ ಥಿಯೇಟರ್ ಇಂಥದ್ದನ್ನು ಕೊಳ್ಳುವುದಕ್ಕೆ ಹಣ ಖರ್ಚು ಮಾಡಲಿದ್ದೀರಿ. ಒಟ್ಟಾರೆಯಾಗಿ ನೋಡಿದಾಗ ಕುಟುಂಬ– ಮನೆಯ ಸಲುವಾಗಿಯೇ ಹೆಚ್ಚು ಖರ್ಚು ಮಾಡುವಂಥ ಯೋಗ ಕಂಡುಬರುತ್ತಿದೆ. ಮಕ್ಕಳ ಶಿಕ್ಷಣದ ಸಲುವಾಗಿ ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿಕೆ ಸಹ ಆರಂಭಿಸುವುದಕ್ಕೆ ಮುಂದಾಗಲಿದ್ದೀರಿ. ಸಾಕುಪ್ರಾಣಿಗಳ ಆರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯ ನೀಡಿ. ಉದ್ಯೋಗ ಸ್ಥಳದಲ್ಲಿ ಇತರರು ಆಗುವುದಿಲ್ಲ ಎಂದು ಕೈ ಬಿಟ್ಟ ಕೆಲಸದ ಹೊಣೆಯನ್ನು ನಿಮಗೆ ವಹಿಸುವ ಸಾಧ್ಯತೆ ಹೆಚ್ಚಿದೆ. ಕೃಷಿಕರು ಮನೆಗೆ ರಾಸುಗಳನ್ನು, ಯಂತ್ರೋಪಕರಣಗಳನ್ನು ಅಥವಾ ನಿಮ್ಮ ವೃತ್ತಿಗೆ ಅಗತ್ಯವಾದ ಕೆಲವು ವಿಮೆಗಳನ್ನು ಖರೀದಿ ಮಾಡಲಿದ್ದೀರಿ. ಕುಟುಂಬದ ವಿಚಾರದಲ್ಲಿ ನೀವು ತೆಗೆದುಕೊಂಡಂಥ ಸಮಯೋಚಿತ ನಿರ್ಧಾರಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿವೆ. ಚಾರ್ಟರ್ಡ್ ಅಕೌಂಟೆಂಟ್, ವಕೀಲರು ಇಂಥ ವೃತ್ತಿಯಲ್ಲಿ ಇರುವವರಿಗೆ ಕ್ಲೈಂಟ್ ಗಳ ಜತೆಗೆ ಮನಸ್ತಾಪ ಏರ್ಪಡುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ವಿಚಾರವನ್ನು ಮೇಲ್ ಮಾಡುವುದೋ ಅಥವಾ ದಾಖಲೆ ಸಹಿತವಾಗಿ ಅವರಿಗೆ ತಲುಪಿಸುವುದಕ್ಕೆ ಪ್ರಯತ್ನ ಮಾಡಿ. ವಿದ್ಯಾರ್ಥಿಗಳು ಈಜು, ಅಥ್ಲೆಟಿಕ್ಸ್, ಜಿಮ್ ಇಂಥದ್ದಕ್ಕೆ ಸೇರ್ಪಡೆ ಆಗುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಒಟ್ಟಿನಲ್ಲಿ ಚಟುವಟಿಕೆಯಿಂದ ಇರುವುದಕ್ಕೆ ಪ್ರಯತ್ನ ಮಾಡಲಿದ್ದೀರಿ. ಪ್ರೀತಿ– ಪ್ರೇಮದಲ್ಲಿ ಇರುವ ಯುವತಿಯರ ಮನೆಯಲ್ಲಿ ಈ ವಿಚಾರ ತಿಳಿಯುವ ಸಾಧ್ಯತೆ ಹೆಚ್ಚಿದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಏಕಾಏಕಿ ಖರ್ಚಿನ ಪ್ರಮಾಣ ಜಾಸ್ತಿ ಆಗಲಿವೆ. ಬ್ಯಾಂಕ್ ಗಳಿಂದ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ದಾಖಲೆ ಪತ್ರಗಳನ್ನು ಹೊಂದಿಸಿಕೊಳ್ಳುವ ಪ್ರಕ್ರಿಯೆ ವೇಗವನ್ನು ಪಡೆದುಕೊಳ್ಳಲಿದೆ. ಐಟಿ– ಬಿಪಿಒಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಹೊಸದಾಗಿ ಪ್ರಾಜೆಕ್ಟ್ ಗಳು ನಿಮ್ಮ ಶ್ರಮದ ಬಲವೂ ಸೇರಿಕೊಂಡು ಯಶಸ್ಸು ಕಾಣುವ ಯೋಗ ಇದೆ. ಕುಟುಂಬ ಸದಸ್ಯರ ಅನಾರೋಗ್ಯವು ಸ್ವಲ್ಪ ಮಟ್ಟಿಗೆ ಆತಂಕ ಸೃಷ್ಟಿಸುವ ಸಾಧ್ಯತೆ ಇದೆ. ದೂರ ಪ್ರಯಾಣ ಅಥವಾ ವಿದೇಶ ಪ್ರಯಾಣ ಮಾಡುವವರು ಅಥವಾ ಈಗಾಗಲೇ ಪ್ರಯಾಣ ಮಾಡುತ್ತಿರುವವರು ನಿಮ್ಮ ವಸ್ತುಗಳ ಕಡೆಗೆ ಹೆಚ್ಚಿನ ನಿಗಾ ವಹಿಸುವುದು ಮುಖ್ಯವಾಗುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಫೋಟೋ ಅಥವಾ ವಿಡಿಯೋ ಹಾಕುವ ಮುನ್ನ ಜಾಗ್ರತೆ ವಹಿಸಿ. ಹೊಸದಾಗಿ ಪರಿಚಯ ಆದವರ ಸಲಹೆ– ಸೂಚನೆಗಳನ್ನು ಪಾಲಿಸುವ ಮುನ್ನ ಒಂದಕ್ಕೆ ನಾಲ್ಕು ಬಾರಿ ಆಲೋಚನೆ ಮಾಡಿ. ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಚಟುವಟಿಕೆಯಲ್ಲಿ ಇರುವವರಿಗೆ ಆದಾಯ ಮೂಲ ಹೆಚ್ಚಾಗುವಂಥ ಸಾಧ್ಯತೆ ಇದೆ. ದೀರ್ಘ ಕಾಲದಿಂದ ಬಾರದೆ ಬಾಕಿ ಉಳಿದಿದ್ದ ಹಣ ನಿಮ್ಮ ಕೈ ಸೇರುವಂಥ ಅವಕಾಶಗಳಿವೆ. ಹಳೇ ಕಡತ, ಕಾಗದ– ಪತ್ರಗಳನ್ನು ಸರಿಯಾಗಿ ಹುಡುಕಿ ಇಟ್ಟುಕೊಳ್ಳಿ, ಅನುಕೂಲ ಆಗಲಿದೆ. ವೃತ್ತಿನಿರತರಿಗೆ ಹೊಸ ಸಂಪರ್ಕಗಳು ದೊರೆಯಲಿವೆ, ಇದರಿಂದ ನಿಮ್ಮ ವೃತ್ತಿ ವಿಸ್ತರಣೆಗೆ ಸಹಾಯ ಆಗಲಿದೆ. ವಿದ್ಯಾರ್ಥಿಗಳು ಅನಿರೀಕ್ಷಿತವಾಗಿ ಪ್ರಯಾಣಗಳನ್ನು ಕೈಗೊಳ್ಳಬೇಕಾಗಬಹುದು. ಹೆಣ್ಣುಮಕ್ಕಳು ಚೂಪಾದ ವಸ್ತುಗಳನ್ನು ಬಳಸುವಾಗ ಸಾಧ್ಯವಾದಷ್ಟೂ ಜಾಗ್ರತೆಯಿಂದ ಇರಬೇಕು.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಕೆಲಸ ಮಾಡುವ ಮುಂಚೆಯೇ ಅದರಿಂದ ಸಿಗುವುದು ಏನು ಎಂಬ ಬಗ್ಗೆ ಮಾತನಾಡಿ. ಅಡ್ವಾನ್ಸ್ ಪಡೆದುಕೊಂಡು ನಂತರವೇ ಮುಂದುವರಿಯುವುದು ಉತ್ತಮ. ಇನ್ನು ಇತರರು ಗಾಸಿಪ್ ಗಳನ್ನು ಮಾತನಾಡುತ್ತಿರುವ ಕಡೆಯಲ್ಲಿ ಸುಮ್ಮನೆ ಕೂತಿದ್ದರೂ ನಿಮ್ಮ ಮೇಲೆ ಆರೋಪ ಬರಬಹುದು. ಆದ್ದರಿಂದ ಸಮಯ ಕಳೆಯುತ್ತಿಲ್ಲ ಎಂದಾದರೂ ಇಂಥ ಕಡೆಗಳಲ್ಲಿ ಕೂರುವುದು ಹಾಗೂ ತಮಾಷೆಗೆಂದು ಮಾತನಾಡುವುದು ಬೇಡ. ಸ್ನೇಹಿತರು– ಸಂಬಂಧಿಗಳ ಮನೆಯ ಶುಭ ಕಾರ್ಯಗಳಿಗಾಗಿ ನಿಮಗೆ ಓಡಾಟ ಹೆಚ್ಚಾಗಬಹುದು. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ಒಂದೋ ಆ ಉದ್ಯೋಗ ಕಾಯಂ ಆಗಬಹುದು ಅಥವಾ ಇದಕ್ಕಿಂತ ಒಳ್ಳೆ ಕೆಲಸ ಸಿಗಲಿದೆ. ಕೃಷಿ ವೃತ್ತಿಯಲ್ಲಿ ಇರುವಂಥವರು ಕೆಲವು ಕೆಲಸಗಳನ್ನು ಪದೇಪದೇ ಮಾಡಬೇಕಾದಂಥ ಸನ್ನಿವೇಶ ಸೃಷ್ಟಿ ಆಗಲಿದೆ. ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವವರಿಗೆ ಖರ್ಚಿನ
ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ಬೆನ್ನಿನ ನೋವು ಕಾಡುತ್ತಿದ್ದಲ್ಲಿ ಅದು ಉಲ್ಬಣ ಆಗುವಂಥ ಸಾಧ್ಯತೆ ಇದೆ. ಆದ್ದರಿಂದ ಸೂಕ್ತ ವೈದ್ಯರಲ್ಲಿ ಪರೀಕ್ಷೆ ಮಾಡಿಸುವುದು ಮುಖ್ಯ ಆಗುತ್ತದೆ. ವೃತ್ತಿನಿರತರು ಹೊಸದಾಗಿ ಕಚೇರಿಯನ್ನು ಬಾಡಿಗೆಗೆ ಪಡೆದುಕೊಳ್ಳುವುದಕ್ಕೆ ಅಥವಾ ಸ್ವಂತಕ್ಕೆ ಖರೀದಿ ಮಾಡುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಕೆಲವರು ಅಡ್ವಾನ್ಸ್ ಅಂತ ಪಾವತಿ ಮಾಡುವಂಥ ಸಾಧ್ಯತೆ ಸಹ ಇದೆ. ವಿದ್ಯಾರ್ಥಿಗಳಿಗೆ ಮೈಗ್ರೇನ್ ನಂಥ ಸಮಸ್ಯೆಗಳಿದ್ದಲ್ಲಿ ಅದು ಹೆಚ್ಚಾಗುವ ಅವಕಾಶ ಇದೆ. ಈ ವಿಚಾರದಲ್ಲಿ ಮುಂಜಾಗ್ರತೆ ವಹಿಸಿ. ಉದ್ಯೋಗಸ್ಥ ಮಹಿಳೆಯರಿಗೆ ಸವಾಲುಗಳು ಹೆಚ್ಚಾಗಲಿವೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಈಗಾಗಲೇ ಕೆಲಸ ಆರಂಭಿಸಿ, ಒಂದು ಹಂತ ತಲುಪಿದ ನಂತರ ಯಾಕೋ ಮುಂದುವರಿಯುತ್ತಿಲ್ಲ ಎಂದಾಗಿದ್ದಲ್ಲಿ ಈಗ ವೇಗ ಪಡೆದುಕೊಳ್ಳಲಿದೆ. ಕೆಲಸ ಬದಲಾವಣೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸ್ನೇಹಿತರ ಮೂಲಕ ಮುಖ್ಯ ಸಲಹೆ, ಸೂಚನೆ ಹಾಗೂ ಮಾಹಿತಿ ದೊರೆಯಲಿದೆ. ಇನ್ನು ಹೊಸ ಬಟ್ಟೆಗಳನ್ನು ಖರೀದಿಸುವಂಥ ಯೋಗ ಇದೆ. ನಿಮ್ಮಲ್ಲಿ ಕೆಲವರು ಪ್ರೀತಿಪಾತ್ರರಿಗೆ ಅಥವಾ ಆಪ್ತರಿಗೆ ಉಡುಗೊರೆಯಾಗಿ ನೀಡಲಿದ್ದೀರಿ. ಮನೆಗೆ ಗೃಹೋಪಯೋಗಿ ವಸ್ತುಗಳನ್ನು ಸಹ ಖರೀದಿ ಮಾಡಲಿದ್ದೀರಿ. ಕ್ರೆಡಿಟ್ ಕಾರ್ಡ್ ಬಳಸುವಂತಿದ್ದಲ್ಲಿ ಹಾಗೂ ಅದರಲ್ಲಿ ಇಎಂಐಗೆ ಏನನ್ನಾದರೂ ಖರೀದಿಸುತ್ತಿದ್ದೀರಿ ಎಂದಾದರೆ ಯಾವುದು ಹಾಗೂ ಎಷ್ಟು ವಸ್ತುಗಳು ಅಗತ್ಯ ಎಂಬ ಬಗ್ಗೆ ನಿಗಾ ಇರಲಿ. ಸಾಲ ಸಿಗುತ್ತದೆ ಎಂಬ ಕಾರಣಕ್ಕೆ ಸುಖಾಸುಮ್ಮನೆ ಕೊಂಡುಕೊಳ್ಳುವುದು ಭಾರವಾಗಿ ಪರಿಣಮಿಸಲಿದೆ. ಕೃಷಿಕರು ವಂಚಕರಿಂದ ಭಾರೀ ಎಚ್ಚರಿಕೆಯಿಂದ ಇರಬೇಕು. ಒಂದು ನಿಮ್ಮ ವಸ್ತುವನ್ನು ಖರೀದಿಸಿ, ಹಣ ನೀಡದೆ ವಂಚನೆ ಮಾಡುವುದು ಒಂದು ಬಗೆಯಲ್ಲಾದರೆ, ಕಳಪೆ ಅಥವಾ ನಕಲಿ ವಸ್ತುಗಳನ್ನು ನಿಮಗೆ ಮಾರಾಟ ಮಾಡುವಂಥ ಸಾಧ್ಯತೆಯೂ ಇದೆ. ಆದ್ದರಿಂದ ಕೊಡು– ಕೊಳ್ಳುವ ಯಾವುದೇ ವ್ಯವಹಾರ ಇರಲಿ, ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ವೃತ್ತಿನಿರತರು ಆಲಸ್ಯದ ಕಾರಣಕ್ಕೆ ಕೆಲವು ಅವಕಾಶಗಳನ್ನು ಕಳೆದುಕೊಳ್ಳಲಿದ್ದೀರಿ. ಆದ್ದರಿಂದ ಯಾವುದೇ ಕೆಲಸಕ್ಕೆ ಕೊನೆ ಕ್ಷಣದ ತನಕ ಕಾಯುತ್ತಾ ಕೂರಬೇಡಿ. ವಿದ್ಯಾರ್ಥಿಗಳು ಇಂಟರ್ನ್ ಷಿಪ್ ಗೆ ಪ್ರಯತ್ನಿಸುತ್ತಿದ್ದಲ್ಲಿ ಉತ್ತಮವಾದ ಕಡೆ ದೊರೆಯುವ ಯೋಗ ಇದೆ. ಇದರಿಂದ ಭವಿಷ್ಯದಲ್ಲಿ ಅನುಕೂಲ ಆಗಲಿದೆ. ವಿವಾಹ ವಯಸ್ಕ ಯುವತಿಯರಿಗೆ ಸೂಕ್ತ ಸಂಬಂಧಗಳು ದೊರೆಯುವ ಯೋಗ ಇದೆ.
ಲೇಖನ– ಎನ್.ಕೆ.ಸ್ವಾತಿ