AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 30ರಿಂದ ಡಿಸೆಂಬರ್ 6ರ ತನಕ ವಾರಭವಿಷ್ಯ  

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 30ರಿಂದ ಡಿಸೆಂಬರ್ 6ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ವಾರ ನಿಮಗೆ ಶುಭವಾಗಲಿದೆಯೇ ಅಥವಾ ಸವಾಲುಗಳಿವೆಯೇ ಎಂದು ಇಲ್ಲಿ ತಿಳಿದುಕೊಳ್ಳಿ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 30ರಿಂದ ಡಿಸೆಂಬರ್ 6ರ ತನಕ ವಾರಭವಿಷ್ಯ  
Weekly Numerology
ಸ್ವಾತಿ ಎನ್​ಕೆ
| Edited By: |

Updated on: Nov 29, 2025 | 6:35 PM

Share

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ನಿಮಗೆ ಕುತ್ತಿಗೆ ತನಕ ಬಂದಂಥ ಸಮಸ್ಯೆಯೊಂದನ್ನು ಬಗೆಹರಿಸಿಕೊಳ್ಳಲು ಕೆಲವರು ಸಹಾಯ ಮಾಡಲಿದ್ದಾರೆ. ನಿಮ್ಮ ಪ್ರಭಾವವನ್ನು ಬಳಸಿಕೊಂಡು, ಕೆಲವು ಕಾಂಟ್ರಾಕ್ಟ್ ಗಳು, ಪ್ರಾಜೆಕ್ಟ್ ಗಳನ್ನು ಪಡೆದುಕೊಳ್ಳುವುದಕ್ಕೆ ಪ್ರಯತ್ನಿಸುತ್ತೀರಿ. ರಾಜಕಾರಣದಲ್ಲಿ ಸಕ್ರಿಯರಾಗಿ ಇರುವವರಿಗೆ ಮೊದಲಿನ ಉತ್ಸಾಹದಲ್ಲಿ ತೊಡಗಿಕೊಳ್ಳಲು ಸಾಧ್ಯವಾಗದೇ ಹೋಗಬಹುದು. ನಿಮ್ಮ ನಿಷ್ಠೆಗೆ ಬೆಲೆ ಇಲ್ಲ ಎಂದು ಬಲವಾಗಿ ಅನ್ನಿಸುವುದಕ್ಕೆ ಶುರು ಆಗಲಿದೆ. ಜೊತೆಗೆ ಕೆಲವು ಅನಾರೋಗ್ಯ ಸಮಸ್ಯೆಗಳು ತಲೆದೋರುವುದರಿಂದ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಲೇಬೇಕು ಎಂದು ವೈದ್ಯರು ನೀಡುವ ಸೂಚನೆಯಂತೆ ನಡೆದುಕೊಳ್ಳ ಬೇಕಾಗುವುದು.

ಕೃಷಿಕರು:

ಕುಟುಂಬದಲ್ಲಿ ಹಣಕಾಸಿನ ಸಮಸ್ಯೆಗಳು ಹಾಗೂ ಈಗಾಗಲೇ ಇರುವಂಥ ಕೆಲವು ಸಾಲಗಳನ್ನು ಚುಕ್ತಾ ಮಾಡಬೇಕು ಎಂಬ ಗಟ್ಟಿ ನಿರ್ಧಾರ ತೆಗೆದುಕೊಳ್ಳಲಿದ್ದೀರಿ. ಅದೇ ಕಾರಣಕ್ಕೆ ಹೂಡಿಕೆ ಉದ್ದೇಶದಿಂದ ಹಾಕುತ್ತಾ ಬಂದಿದ್ದ ಹಣವನ್ನು ಹಿಂತೆಗೆದುಕೊಳ್ಳಲಿದ್ದೀರಿ. ನಿಮ್ಮ ನಿರ್ಧಾರಕ್ಕೆ ಕುಟುಂಬದ ಇತರ ಸದಸ್ಯರು ಸಹ ಕೈ ಜೋಡಿಸಲಿದ್ದಾರೆ. ನಿಮ್ಮಲ್ಲಿ ಕೆಲವರನ್ನು ಸರ್ಕಾರದಿಂದ ಅಧ್ಯಯನ ಪ್ರವಾಸಕ್ಕೆ ಎಂದು ದೂರದ ಪ್ರದೇಶಗಳಿಗೆ ಕಳುಹಿಸುವ ಸಾಧ್ಯತೆ ಇದೆ. ಇದು ದೂರದ ದೇಶಕ್ಕೆ ಸಹ ಆಗಬಹುದು. ನೀವು ಅಳವಡಿಕೆ ಮಾಡಿಕೊಂಡ ಹೊಸ ಕೃಷಿ ವಿಧಾನವೊಂದಕ್ಕೆ ವ್ಯಾಪಕ ಮೆಚ್ಚುಗೆ ಕೇಳಿಬರಲಿದೆ. ನಿಮಗೆ ಜನಪ್ರಿಯತೆ ಸಹ ಸಿಗುವ ಯೋಗ ಇದೆ.

ವೃತ್ತಿನಿರತರು:

ನಿಮ್ಮ ತನಕ ಬಂದಂಥ ದೂರು- ಆಕ್ಷೇಪಗಳ ಬಗ್ಗೆ ಮಾತ್ರ ಆಲೋಚಿಸುವುದು ಒಳ್ಳೆಯದು. ನಿಮ್ಮ ಜೊತೆಗೆ ಕಾರ್ಯ ನಿರ್ವಹಿಸುವವರ ಮೇಲೆ ಒಂದು ವೇಳೆ ವೈಯಕ್ತಿಕ ನೆಲೆಯಲ್ಲಿ ಯಾರಿಂದಲೋ ಗಾಸಿಪ್ ಎಂಬ ರೀತಿಯಲ್ಲಿ ಮಾತುಗಳು ಬಂದರೆ ಅದರ ಬಗ್ಗೆ ಶೀಘ್ರವಾಗಿ ಯಾವುದೇ ನಿರ್ಧಾರಕ್ಕೆ ಬರಬೇಡಿ. ನಿಮ್ಮ ಬ್ರ್ಯಾಂಡ್ ಮೌಲ್ಯವನ್ನು ಹೆಚ್ಚು ಮಾಡಿಕೊಳ್ಳುವುದಕ್ಕೆ ಹಲವಾರು ದಾರಿಗಳು ತೆರೆದುಕೊಳ್ಳಲಿವೆ.

ವಿದ್ಯಾರ್ಥಿಗಳು:

ನಿಮಗೆ ಇಷ್ಟವಿಲ್ಲದಿದ್ದರೂ ಕೆಲವು ಕೋರ್ಸ್ ಗಳಿಗೆ ಅಥವಾ ಟ್ಯೂಷನ್ ಗೆ ಸೇರುವಂತೆ ಆಗಲಿದೆ. ನಿಮ್ಮ ಕೆಲವು ಸ್ನೇಹಿತರ ಮಾತನ್ನು ನಂಬಿಕೊಂಡು, ನೀವು ತೆಗೆದುಕೊಂಡ ತೀರ್ಮಾನಗಳಿಂದಾಗಿ ಪರಿತಪಿಸುವಂತೆ ಆಗಲಿದೆ. ಇತರರಿಂದ ಕೇಳಿ ಪಡೆದುಕೊಂಡು ಬಂದಂಥ ವಸ್ತುಗಳನ್ನು ಅದು ಇದ್ದ ಸ್ಥಿತಿಯಲ್ಲಿಯೇ ಹಿಂತಿರುಗಿಸುವುದಕ್ಕೆ ಪ್ರಯತ್ನಿಸಿ. ಏಕೆಂದರೆ ಅವುಗಳಲ್ಲಿ ಏನಾದರೂ ಸಮಸ್ಯೆಯಾಗಿ ಕೈಯಿಂದ ದುಡ್ಡು ಹಾಕಿ ಸರಿಪಡಿಸಬೇಕಾದ ಸ್ಥಿತಿ ಬರುತ್ತದೆ.

ಮಹಿಳೆಯರು:

ವಿದೇಶಗಳಲ್ಲಿ ಮ್ಯಾನೇಜ್ ಮೆಂಟ್ ಗೆ ಸಂಬಂಧಿಸಿದ ಕೋರ್ಸ್ ಗಳನ್ನು ಮಾಡುತ್ತಾ ಇರುವವರಿಗೆ ಜಾಬ್ ಪ್ಲೇಸ್ ಮೆಂಟ್ ದೊರೆಯುವ ಯೋಗ ಇದೆ. ಹೆಚ್ಚಿನ ಶ್ರಮ ಇಲ್ಲದೆ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಉದ್ಯೋಗ ಸಿಕ್ಕಿಬಿಡಬಹುದು. ಪ್ಲಾನ್ ಬಿ ಇಟ್ಟುಕೊಂಡು ಪ್ರಾಜೆಕ್ಟ್ ಮುನ್ನಡೆಸುತ್ತಾ ಇರುವ ನಾಯಕತ್ವ ಸ್ಥಾನದಲ್ಲಿ ಇರುವವರಿಗೆ ಹೆಮ್ಮೆ ಮೂಡುವಂಥ ಕ್ಷಣಗಳು ಎದುರಾಗಲಿವೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಇತರರ ಮೇಲಿನ ಅನುಕಂಪದಿಂದ ಸಹಾಯ ಮಾಡಲಿದ್ದೀರಿ. ಮುಖ್ಯವಾಗಿ ಉದ್ಯೋಗ ಇಲ್ಲದೆ ಅಥವಾ ಕೆಲಸ ಬಿಡಲೇಬೇಕಾದ ಸ್ಥಿತಿಯಲ್ಲಿ ಇರುವವರಿಗೆ ನಿಮ್ಮ ಶಿಫಾರಸಿನ ಮೂಲಕ ಅನುಕೂಲ ಮಾಡಿಕೊಡಲಿದ್ದೀರಿ. ಕೆಲವು ತಪ್ಪು ಮಾಹಿತಿ ನೀಡಿ, ನಿಮ್ಮನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಿದವರ ಹುನ್ನಾರ ಏನು ಎಂಬುದನ್ನು ಬಹಳ ವೇಗವಾಗಿ ಪತ್ತೆ ಹಚ್ಚಲಿದ್ದೀರಿ. ಚರ್ಮದ ಸುರಕ್ಷತೆ, ಆರೈಕೆಗೆ ಹೆಚ್ಚು ಲಕ್ಷ್ಯವನ್ನು ನೀಡಲಿದ್ದೀರಿ. ನಿಮ್ಮಲ್ಲಿ ಕೆಲವರು ಮನೆಯ ಪೇಂಟಿಂಗ್ ಮಾಡಿಸುವ ಸಲುವಾಗಿ ಅದಕ್ಕೆ ಸಂಬಂಧಿಸಿದ ವೃತ್ತಿಯಲ್ಲಿ ಇರುವವರನ್ನು ಭೇಟಿ ಮಾಡಿ, ಹಣಕಾಸಿನ ವಿಚಾರವನ್ನು ಮಾತನಾಡಲಿದ್ದೀರಿ.

ಕೃಷಿಕರು:

ನಿಮ್ಮಲ್ಲಿ ಕೆಲವರಿಗೆ ಕಣ್ಣಿನ ಪೊರೆ ಅಥವಾ ಕಣ್ಣಿನ ಪವರ್ ಕಡಿಮೆ ಆಗುವುದು ಈ ರೀತಿಯ ತೊಂದರೆಗಳು ಕಾಣಿಸಿಕೊಳ್ಳಬಹುದು. ರೇಷ್ಮೆ ಕೃಷಿಕರಿಗೆ ನಿರೀಕ್ಷೆಗಿಂತ ಹೆಚ್ಚಿನ ಆದಾಯ ಮತ್ತು ಲಾಭ ಬರಲಿದೆ. ತಮ್ಮ ಕೃಷಿ ಭೂಮಿಯನ್ನು ನೀವೇ ನೋಡಿಕೊಳ್ಳುವಂತೆ, ಬಂದ ಫಸಲಿನಲ್ಲಿ ಇಷ್ಟು ಭಾಗವೆಂದು ಕೊಡುವಂತೆ ನಿಮ್ಮ ಸ್ನೇಹಿತರ ಪೈಕಿ ಕೆಲವರು ಹೇಳಲಿದ್ದಾರೆ. ಈ ಪ್ರಸ್ತಾವಕ್ಕೆ ನೀವೂ ಒಪ್ಪುವ ಸಾಧ್ಯತೆ ಹೆಚ್ಚಿದೆ. ಕೊಟ್ಟಿಗೆ ನಿರ್ಮಾಣ, ನೀರಿನ ತೊಟ್ಟಿ ನಿರ್ಮಾಣ ಇಂಥ ಕೆಲಸಗಳನ್ನು ಮಾಡಿಸಬೇಕು ಎಂಬ ಉದ್ದೇಶ ಬಹು ಕಾಲದಿಂದ ಇದ್ದಲ್ಲಿ ಅದನ್ನು ಕಾರ್ಯರೂಪಕ್ಕೆ ತರಲು ಬೇಕಾದ ಸಂಪನ್ಮೂಲ ಕ್ರೋಡೀಕರಣ ಆಗಲಿದೆ.

ವೃತ್ತಿನಿರತರು:

ನಿಮ್ಮ ಪ್ರಾಮಾಣಿಕತೆಗೆ ಹಲವು ಪರೀಕ್ಷೆಗಳು ಎದುರಾಗಲಿವೆ. ಆದಾಯಕ್ಕೆ ಮೀರಿದ್ದನ್ನು ಅಥವಾ ಅದರ ಆಚೆಗಿನದನ್ನು ಆಸೆ ಪಡಬೇಡಿ. ನಿರ್ದಿಷ್ಟ ಉದ್ದೇಶದಿಂದ ಉಳಿತಾಯ ಮಾಡುತ್ತಾ ಬಂದಿದ್ದ ಹಣವನ್ನು ತೆಗೆದುಕೊಂಡು, ನಿಮ್ಮಲ್ಲಿ ಕೆಲವರು ಕಾರು ಖರೀದಿಸುವ ಯೋಗ ಇದೆ. ಸೆಕೆಂಡ್ ಹ್ಯಾಂಡ್ ಕಾರನ್ನಾದರೂ ಕೊಳ್ಳುವಂಥ ಸಾಧ‌್ಯತೆ ಇದೆ. ಈ ವಾರ ನಿಮ್ಮ ಫೋಕಸ್ ಆಚೀಚೆ ಆಗದಂತೆ ನೋಡಿಕೊಳ್ಳುವುದು ಮುಖ್ಯ.

ವಿದ್ಯಾರ್ಥಿಗಳು:

ನಿಮ್ಮಲ್ಲಿ ಕೆಲವರು ಓದಿನ ಜೊತೆಗೆ ಸ್ವಲ್ಪ ಪ್ರಮಾಣದಲ್ಲಿ ಆದರೂ ಆದಾಯ ಬರುವಂತೆ ಪಾರ್ಟ್ ಟೈಮ್ ಕೆಲಸಕ್ಕೆ ಸೇರಿಕೊಳ್ಳುವ ಸಾಧ್ಯತೆ ಇದೆ. ಈ ನಿಮ್ಮ ನಿರ್ಧಾರಕ್ಕೆ ಕುಟುಂಬದವರು- ಸ್ನೇಹಿತರ ಬೆಂಬಲ ಕೂಡ ದೊರೆಯಲಿದೆ. ಮನೆಯಲ್ಲಿ ನಡೆಸಬೇಕಾದ ಕಾರ್ಯಕ್ರಮದ ಆಯೋಜನೆ ಹಾಗೂ ಅದಕ್ಕೆ ಸಂಬಂಧಿಸಿದ ಸಿದ್ಧತೆಗೆ ನಿಮ್ಮ ಹೆಚ್ಚಿನ ಸಮಯ ಮೀಸಲಿಡಬೇಕಾಗುತ್ತದೆ. ಇದರಿಂದ ನಿಮ್ಮ ವ್ಯಾಸಂಗದಲ್ಲಿ ಹಿನ್ನಡೆ ಆಗಲಿದೆ.

ಮಹಿಳೆಯರು:

ನಿಮ್ಮ ಭವಿಷ್ಯಕ್ಕೆ ಆಗುತ್ತದೆ ಎಂದುಕೊಂಡು ಇಟ್ಟುಕೊಂಡಿದ್ದ ಆಪದ್ಧನದ ಪೈಕಿ ಸ್ವಲ್ಪ ಮೊತ್ತವನ್ನು ಕುಟುಂಬ ಸದಸ್ಯರೊಬ್ಬರು ತುರ್ತಿಗಾಗಿ ನೀಡಬೇಕಾಗುತ್ತದೆ. ನಿಮ್ಮ ಸೋದರ ಅಥವಾ ಸೋದರಿಗೆ ಈಗ ಇರುವಂಥ ಕೆಲವು ತಪ್ಪು ಕಲ್ಪನೆಗಳನ್ನು ದೂರ ಮಾಡುವುದಕ್ಕೆ ಈ ವಾರ ಹೆಚ್ಚಿನ ಸಮಯವನ್ನು ಮೀಸಲಿಡಲಿದ್ದೀರಿ. ಸಂಗೀತಗಾರ್ತಿಯರು, ನೃತ್ಯಗಾರ್ತಿಯರಿಗೆ ಬಹಳ ಉತ್ತಮವಾದ ವಾರ ಇದು.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಅದು ಅವಕಾಶದ ವಿಚಾರ ಆಗಿರಲಿ ಅಥವಾ ಊಟ- ತಿಂಡಿ ಇಂಥವೇ ಆಗಿರಲಿ ಸಮೃದ್ಧತೆ ಎಂಬುದು ನಿಮ್ಮ ಅನುಭವಕ್ಕೆ ಬರಲಿದೆ. ಹೆಚ್ಚು ಚಟುವಟಿಕೆ ಹಾಗೂ ಉತ್ಸಾಹದಿಂದ ಎಲ್ಲ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ಎನ್ ಜಿಒಗಳು, ಟ್ರಸ್ಟ್ ಗಳು, ದಾನ- ದತ್ತಿ ಸಂಸ್ಥೆಗಳಲ್ಲಿ ಮಾರ್ಗದರ್ಶಕರಾಗಿ ನೀವು ಕೆಲಸ ಮಾಡಬೇಕು ಎಂದು ಪ್ರಸ್ತಾವ ಮುಂದಿಡಲಿದ್ದಾರೆ. ಕೆಲವು ಸೂಕ್ಷ್ಮ ಸಂಗತಿಗಳನ್ನು ಬಹಳ ವೇಗವಾಗಿ ಅರ್ಥ ಮಾಡಿಕೊಳ್ಳುವ ನೀವು, ಉದ್ಯೋಗ ಸ್ಥಳದಲ್ಲಿ ಇತರರಿಗಿಂತ ಬೇಗ ಬದಲಾಗುವ ಪರಿಸ್ಥಿತಿಗೆ ಹೊಂದಿಕೊಳ್ಳಲಿದ್ದೀರಿ.

ಕೃಷಿಕರು:

ಪಿತ್ರಾರ್ಜಿತವಾಗಿ ನಿಮಗೆ ಬರಬೇಕಾದಂಥ ಭೂಮಿ- ಕಾಣಿ, ಹಣದ ಪಾಲಿನ ವಿಚಾರವಾಗಿ ವ್ಯಾಜ್ಯ ಕೋರ್ಟ್- ಕಚೇರಿ ಮೆಟ್ಟಿಲೇರಬಹುದು ಎಂಬ ಪರಿಸ್ಥಿತಿ ಏನಾದರೂ ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳಲು ಅವಕಾಶ ಸಿಗಲಿದೆ. ಆದರೆ ನಿಮ್ಮ ಪೂರ್ವಗ್ರಹದಿಂದ ಹೊರಬರುವುದು ಬಹಳ ಮುಖ್ಯ. ಮಕ್ಕಳು ಅಥವಾ ಸೋದರ- ಸೋದರಿಯರ ಮದುವೆಗಾಗಿ ಪ್ರಯತ್ನ ಮಾಡುತ್ತಾ ಇರುವವರಿಗೆ ಸೂಕ್ತ ಸಂಬಂಧ ದೊರೆಯುವ ಯೋಗ ಇದೆ. ಅಡಿಕೆ ಬೆಳೆಗಾರರಿಗೆ ಭವಿಷ್ಯದ ಬಗ್ಗೆ ಆತಂಕ ಮೂಡಲಿದ್ದು, ಪರ್ಯಾಯ ಬೆಳೆಯ ಬಗ್ಗೆ ಗಂಭೀರ ಆಲೋಚನೆ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ.

ವೃತ್ತಿನಿರತರು:

ನಿಮ್ಮ ವೃತ್ತಿಪರತೆ ಬಗ್ಗೆ ಕೆಲವರು ನೆಗೆಟಿವ್ ಅಭಿಪ್ರಾಯ ಮೂಡಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂಬುದು ಗಮನಕ್ಕೆ ಬರಲಿದೆ. ಒಂದು ವೇಳೆ ಈ ಬಗ್ಗೆ ದೂರು ದಾಖಲಿಸಬೇಕು ಎಂದೆನಿಸಿದಲ್ಲಿ ಹಾಗೆ ಮಾಡುವುದು ಉತ್ತಮ. ನೀವು ಕೆಲವು ಕ್ಲೈಂಟ್ ಗಳ ಜತೆಗಿನ ಒಪ್ಪಂದದಿಂದ ಹೊರಬರುವುದಕ್ಕೆ ನಿರ್ಧಾರ ಮಾಡಬಹುದು. ಅಥವಾ ಈಗ ವಿಧಿಸುತ್ತಿರುವ ಶುಲ್ಕವನ್ನು ಏರಿಸುವುದಾಗಿ ಅವರಿಗೆ ತಿಳಿಸುವ ಸಾಧ್ಯತೆ ಇದೆ.

ವಿದ್ಯಾರ್ಥಿಗಳು:

ನಿಮ್ಮಲ್ಲಿ ಕೆಲವರಿಗೆ ಉಡುಗೊರೆ ಸಿಗುವಂಥ ಯೋಗ ಇದೆ. ದೂರದ ದೇಶ ಅಥವಾ ಊರಿನಿಂದ ಬರುವಂಥ ಸಂಬಂಧಿಗಳು ಸಹ ನಿಮಗೆ ಏನು ಬೇಕು ಎಂದು ಸ್ವತಃ ಬಾಯಿ ಬಿಟ್ಟು ಕೇಳಿ, ಕೆಲವು ವಸ್ತುಗಳನ್ನು ತಂದುಕೊಡಬಹುದು. “ನನಗೆ ಗೊತ್ತು ಬಿಡು, ಅದು ಬಹಳ ಸುಲಭ” ಎಂದು ಯಾವುದೇ ಸಬ್ಜೆಕ್ಟ್ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ಇಂಥದ್ದೊಂದು ಧೋರಣೆ ನಿಮ್ಮ ಆತ್ಮವಿಶ್ವಾಸವನ್ನೇ ಕುಗ್ಗಿಸುವ ಸಾಧ್ಯತೆ ಇದೆ, ಜಾಗ್ರತೆ.

ಮಹಿಳೆಯರು:

ನಿಮ್ಮ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚು ಗಮನ ನೀಡುವುದಕ್ಕೆ ಸಾಧ್ಯವಿಲ್ಲದಷ್ಟರ ಮಟ್ಟಿಗೆ ಕೆಲಸಗಳನ್ನು ಮೈ ಮೇಲೆ ಹಾಕಿಕೊಳ್ಳುವಿರಿ. ಉದ್ಯೋಗಸ್ಥರಾಗಿದ್ದಲ್ಲಿ ಆ ಕ್ಷಣಕ್ಕೆ ಏನು ಅನ್ನಿಸುತ್ತದೆ ಅದನ್ನು ಹೇಳಿ ಸಮಸ್ಯೆಯಿಂದ ತಪ್ಪಿಸಿಕೊಂಡರಾಯಿತು ಎಂಬ ಧೋರಣೆಯಿಂದ ಹೊರಗೆ ಬನ್ನಿ. ಸರ್ಕಾರದಿಂದ ಬರಬೇಕಾದ ಸಬ್ಸಿಡಿ ಹಣವು ನಿಮ್ಮ ಖಾತೆಗೆ ಜಮೆ ಆಗುವ ದಿನಾಂಕದ ಮಾಹಿತಿ ದೊರೆಯಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ನಿಮ್ಮಲ್ಲಿ ಕೆಲವರಿಗೆ ನೆಗೆಟಿವ್ ಎನರ್ಜಿ ಪ್ರಭಾವ ನಿಮ್ಮ ಮೇಲೆ ಆಗಿದೆ ಎಂಬ ಭಾವನೆ ಬರಲಿದೆ. ಈ ವಾರ ಸಾಧ್ಯವಾದಷ್ಟೂ ಚಿನ್ನದ ಒಡವೆಗಳು, ದುಬಾರಿ ಬಟ್ಟೆಗಳನ್ನು ಹಾಕುವುದು ಕಡಿಮೆ ಮಾಡಿ. ಯಾವ ಕೆಲಸದಲ್ಲೂ ಏಕಾಗ್ರತೆಯಿಂದ ತೊಡಗಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಾದರೆ ಸುದರ್ಶನ ಮಂತ್ರವನ್ನು ಯೂಟ್ಯೂಬ್ ಮೊದಲಾದವುಗಳಲ್ಲಿ ಕೇಳಿಸಿಕೊಳ್ಳಿ. ನರಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ಅಥವಾ ಈಗಾಗಲೇ ಇರುವ ತೊಂದರೆ ಉಲ್ಬಣ ಆದಲ್ಲಿ ಕೂಡಲೇ ವೈದ್ಯರ ಬಳಿ ತೋರಿಸಿಕೊಂಡು, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.

ಕೃಷಿಕರು:

ನೀವು ಮಾಡಿಕೊಂಡ ವ್ಯವಸ್ಥೆಯಲ್ಲಿ ತೊಂದರೆಗಳು ಕಾಣಿಸಿಕೊಳ್ಳಲಿವೆ. ಸಂಪ್ ಕೆಟ್ಟು ಹೋಗುವುದು, ಬೋರ್ ವೆಲ್ ನಿಂದ ನೀರು ಬಾರದೆ ಇರುವುದು, ವಿದ್ಯುತ್ ಸಮಸ್ಯೆ ಹೀಗೆ ಒಂದಲ್ಲಾ ಒಂದು ಕಾರಣಕ್ಕೆ ಕೆಲಸಕ್ಕೆ ಅಡಚಣೆಗಳು ಎದುರಾಗಲಿವೆ. ಈಗಾಗಲೇ ಹಣ ಖರ್ಚು ಮಾಡಿ, ತೆಗೆದುಕೊಂಡ ನಿಮ್ಮ ಜಮೀನಿಗೆ ಸಂಬಂಧಿಸಿದ ಪ್ಲಾನ್ ಗಳಲ್ಲಿ ಬದಲಾವಣೆ ಆಗಬೇಕು ಎಂಬುದು ಗಮನಕ್ಕೆ ಬರಲಿದ್ದು, ಈ ತನಕ ಮಾಡಿದ ವೆಚ್ಚ ವ್ಯರ್ಥ ಆಗಲಿದೆ. ನಿಮ್ಮ ಸಾಮರ್ಥ್ಯಕ್ಕೆ ಮೀರಿದ ವಿಚಾರಗಳಿಗೆ ಸಂಬಂಧಿಸಿದಂತೆ ಯಾವುದೇ ಪ್ರಯೋಗಕ್ಕೆ ಇಳಿಯಬೇಡಿ. ಕೃಷಿ ಕೂಲಿ ಕಾರ್ಮಿಕರನ್ನು ಹುಡುಕುತ್ತಾ ಇದ್ದೀರಿ ಅಂತಾದಲ್ಲಿ ನಿಮ್ಮ ಪ್ರಯತ್ನಕ್ಕೆ ಹಿನ್ನಡೆ ಆಗಲಿದೆ.

ವೃತ್ತಿನಿರತರು:

ನಿಮ್ಮ ಜವಾಬ್ದಾರಿ ಮುಗಿದರೆ ಆಯಿತು ಎಂದಷ್ಟೇ ಅಲ್ಲದೆ ಇಡೀ ತಂಡವನ್ನು ಒಟ್ಟಾರೆ ಮುನ್ನಡೆಸುವ ಕಡೆಗೆ ಲಕ್ಷ್ಯ ಇರಬೇಕು. ಜತೆಯಲ್ಲಿ ಕೆಲಸ ಮಾಡುವವರಿಗೆ ವಹಿಸಿದ್ದನ್ನು ಎಷ್ಟು ಪೂರ್ಣ ಮಾಡಿದ್ದಾರೆ ಎಂಬುದರ ಫಾಲೋ ಅಪ್ ಸರಿಯಾಗಿ ಮಾಡಿ. ಗಡುವಿನೊಳಗೆ ಮುಗಿಯ ಬೇಕಾದ ಕೆಲಸಗಳನ್ನು ಪದೇಪದೇ ನೆನಪಿಸುವುದು ಒಳ್ಳೆಯದು. ರಕ್ತದೊತ್ತಡದ ಏರುಪೇರು ಇದ್ದಲ್ಲಿ ಸೂಕ್ತ ವೈದ್ಯಕೀಯ ಔಷಧೋಪಚಾರ ಮಾಡಿಕೊಳ್ಳಿ.

ವಿದ್ಯಾರ್ಥಿಗಳು:

ಮರೆವು ನಿಮಗೆ ದೊಡ್ಡ ಸಮಸ್ಯೆಯಾಗಿ ಕಾಡಲಿದೆ. ಅಥವಾ ಒಂದೇ ಸಮಯಕ್ಕೆ ಹಲವು ಕೆಲಸ- ಕಾರ್ಯಗಳನ್ನು ಪೂರ್ಣ ಮಾಡುವ ನಿಮ್ಮ ಇರಾದೆಯು ಕೈ ಕೊಡುವ ಸಾಧ್ಯತೆ ಇದೆ. ನಿಮ್ಮ ಪೋಷಕರು ಸೂಚಿಸುವ ವಿಚಾರಗಳ ಕಡೆಗೂ ಗಮನವನ್ನು ನೀಡಿ. ಇತ್ತೀಚೆಗೆ ದೇಹದ ತೂಕ ವಿಪರೀತ ಜಾಸ್ತಿ ಆಗುತ್ತಿದೆ ಎಂದು ನಿಮಗೇ ಅನಿಸುವುದಕ್ಕೆ ಶುರುವಾಗಲಿದೆ. ದೈಹಿಕವಾಗಿ ಚಟುವಟಿಕೆಯಿಂದ ಇರುವುದಕ್ಕೆ, ವ್ಯಾಯಾಮ ಮಾಡುವುದಕ್ಕೆ ಆದ್ಯತೆ ನೀಡಿ.

ಮಹಿಳೆಯರು:

ಬಟ್ಟೆಗಳ ಖರೀದಿಗೆ ದೊಡ್ಡ ಮೊತ್ತವನ್ನು ಖರ್ಚು ಮಾಡಲಿದ್ದೀರಿ. ನೀವೇನಾದರೂ ಉದ್ಯೋಗಸ್ಥರಾಗಿದ್ದಲ್ಲಿ ಅದರ ಸಲುವಾಗಿಯೇ ದೂರದ ಪ್ರದೇಶಗಳಿಗೆ ಪ್ರಯಾಣ ಮಾಡಬೇಕಾಗಲಿದೆ. ನಿಮ್ಮಲ್ಲಿ ಕೆಲವರು ಸ್ವಂತ ವ್ಯವಹಾರ- ವ್ಯಾಪಾರ ಶುರು ಮಾಡುವ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಪ್ರೀತಿಯಲ್ಲಿ ಇರುವವರಿಗೆ ಮನಸ್ತಾಪ- ಅಭಿಪ್ರಾಯ ಭೇದ ಕಾಣಿಸಿಕೊಳ್ಳಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಸ್ವಂತ ಮನೆ ನಿರ್ಮಾಣ ಮಾಡಬೇಕು ಎಂಬ ಉದ್ದೇಶ ಇರುವವರು ಇದಕ್ಕಾಗಿ ಬೇಕಾದ ಸಿದ್ಧತೆ ಆರಂಭಿಸಲಿದ್ದೀರಿ. ಮನೆಯ ಪ್ಲಾನ್ ಮಾಡಿಸುವುದು, ಅದಕ್ಕೆ ಬೇಕಾದ ಬಜೆಟ್ ಎಷ್ಟು, ಬೋರ್ ವೆಲ್ ಯಾವಾಗ ತೋಡಿಸಬೇಕು ಎಂಬ ತೀರ್ಮಾನ ಹೀಗೆ ಇತರ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಪಾರಂಪರಿಕವಾಗಿ ಬಂದಂಥ ವ್ಯಾಪಾರ ಅಥವಾ ಕಲೆ ಮುಂದುವರಿಸುತ್ತಾ ಇರುವವರು ಅದನ್ನು ದೊಡ್ಡ ಮಟ್ಟದಲ್ಲಿ ಹಾಗೂ ಇನ್ನೂ ಹೆಚ್ಚು ವ್ಯವಸ್ಥಿತವಾಗಿ ಮಾಡುವ ಬಗ್ಗೆ ಆಲೋಚನೆ ಮಾಡುತ್ತೀರಿ. ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರು ಜನಪ್ರಿಯತೆ ಹೆಚ್ಚಾಗಲಿದೆ.

ಕೃಷಿಕರು:

ನೀವು ನಿರೀಕ್ಷೆ ಸಹ ಮಾಡಿರದಿದ್ದ ಕೆಲವು ಉತ್ತಮ ಬೆಳವಣಿಗೆಗಳು ಆಗಲಿವೆ. ಆದಾಯದ ಪ್ರಮಾಣ ಹಾಗೂ ಆದಾಯದ ಮೂಲ ಎರಡರಲ್ಲೂ ಹೆಚ್ಚಳ ಆಗುವಂಥ ಯೋಗ ಇದೆ. ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಆದಾಯ ಎಂಬಂತೆ ಯೋಜನೆ ರೂಪಿಸಿಕೊಂಡು, ಜಮೀನಿನಲ್ಲಿ ಕೆಲಸ ಕೈಗೊಳ್ಳಲಿದ್ದೀರಿ. ಕುಟುಂಬ ಸದಸ್ಯರಿಂದ ನಿಮಗೆ ಬೇಕಾದ ಬೆಂಬಲ ಸಹ ದೊರೆಯಲಿದೆ. ಅಕ್ಕಪಕ್ಕದ ಜಮೀನಿನವರ ಜೊತೆ ವ್ಯಾಜ್ಯಗಳು ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳಲಿದ್ದೀರಿ. ವಿವಿಧ ತಳಿಯ ರಾಸುಗಳನ್ನು ಖರೀದಿ ಮಾಡುವಂಥ ಯೋಗ ನಿಮ್ಮ ಪಾಲಿಗೆ ಇದೆ. ಈಗಾಗಲೇ ಇವೆಲ್ಲ ಜಾರಿಗೆ ತಂದಿದ್ದಲ್ಲಿ ಯೋಜನೆಗಳು ಲಾಭದಾಯಕ ಆಗುವ ಹಾದಿಯಲ್ಲಿ ಸಾಗಲಿದೆ.

ವೃತ್ತಿನಿರತರು:

ನಿಮಗೆ ಬರುವಂಥ ಹೊಸ ಕ್ಲೈಂಟ್ ಗಳ ಪ್ರಸ್ತಾವವನ್ನು ಒಪ್ಪಿಕೊಳ್ಳುವುದಕ್ಕೆ ಹಿಂಜರಿಕೆ ಕಾಡಲಿದೆ. ಈಗ ನಿಮ್ಮ ಬಳಿ ಕೆಲಸ ಮಾಡುವಂಥ ಸಿಬ್ಬಂದಿ ಎಷ್ಟಿದ್ದಾರೋ ಅಷ್ಟೇ ಸಂಖ್ಯೆಯಲ್ಲಿ ಅಂದುಕೊಂಡಂಥ ಫಲಿತಾಂಶ ನೀಡುವುದು ಸಾಧ್ಯವಿಲ್ಲ ಎಂದು ನಿಮಗೆ ಬಲವಾಗಿ ಅನಿಸಲಿದೆ. ಮಕ್ಕಳ ಶಿಕ್ಷಣದ ಸಲುವಾಗಿ ಕೆಲವು ಕಾಲದ ಮಟ್ಟಿಗೆ ಬಾಡಿಗೆಗೆ ಮನೆ ಪಡೆಯಬೇಕು ಎಂದು ನಿಮ್ಮಲ್ಲಿ ಕೆಲವರು ಅಂದುಕೊಳ್ಳಲಿದ್ದೀರಿ.

ವಿದ್ಯಾರ್ಥಿಗಳು:

ನಿಮ್ಮಲ್ಲಿ ಕೆಲವರಿಗೆ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅಲ್ಪಾವಧಿ ಇಂಟರ್ನ್ ಷಿಪ್ ಅವಕಾಶ ದೊರೆಯಲಿದೆ. ಅದರಲ್ಲೂ ವಿಜ್ಞಾನಕ್ಕೆ ಸಂಬಂಧಿಸಿದ ಕೋರ್ಸ್ ಗಳನ್ನು ಮಾಡುತ್ತಾ ಇರುವವರಿಗೆ ಬಹಳ ಒಳ್ಳೆ ಸಮಯ ಇದಾಗಿದೆ. ತುಂಬ ಚುರುಕಾಗಿ ನಿರ್ಧಾರಗಳನ್ನು ಮಾಡಲಿದ್ದೀರಿ. ಖರ್ಚಿಗೆ ಸಂಬಂಧಿಸಿದಂತೆ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಮುಖ್ಯ. ಸಿದ್ಧತೆ ಇಲ್ಲದೆ ದೂರ ಪ್ರಯಾಣ ಮಾಡದಿರುವುದು ಕ್ಷೇಮ. ವ್ಯಾಸಂಗಕ್ಕೆ ಅನುಕೂಲ ಆಗುತ್ತದೆ ಎಂದು ಹೊಸ ಗ್ಯಾಜೆಟ್ ಗಳನ್ನು ಖರೀದಿ ಮಾಡಲಿದ್ದೀರಿ.

ಮಹಿಳೆಯರು:

ಹೊಸ ಉದ್ಯೋಗದಲ್ಲಿ ಹೊಂದಾಣಿಕೆ ಆಗುವುದಕ್ಕೆ ಕಷ್ಟ ಆಗುತ್ತಿದೆ ಎಂಬ ಸ್ಥಿತಿ ಇರುವವರಿಗೆ ಆತ್ಮಸ್ಥೈರ್ಯ ಹೆಚ್ಚಿಸುವಂಥ ಬೆಳವಣಿಗೆಗಳು ಆಗಲಿವೆ. ಅಪ್ಪ- ಅಮ್ಮನ ಆರೋಗ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಲಿದ್ದೀರಿ. ದೀರ್ಘಕಾಲದ ಗೆಳೆಯ- ಗೆಳತಿಯರ ಭೇಟಿ ಆಗುವ ಯೋಗ ಇದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಈಗ ನಿಮಗೆ ಇರುವಂಥ ಕೆಲವು ಸ್ನೇಹಿತರು ಮತ್ತು ಸಂಬಂಧಿಗಳಿಂದೇ ಒಂದು ಅಂತರ ಕಾಯ್ದುಕೊಳ್ಳಲು ನಿರ್ಧಾರ ಮಾಡುತ್ತೀರಿ. ಮುಖ್ಯವಾಗಿ ಬೇರೆಯವರ ಕೆಲಸಗಳಿಗೆ ಹೆಚ್ಚು ಸಮಯ ಹೋಗುತ್ತಿದೆ ಎಂದೆನಿಸಲು ಶುರು ಆಗುತ್ತದೆ. ಅದೇ ರೀತಿ ನಿಮ್ಮ ಆದಾಯದ ಮೂಲ ಯಾವುದೋ ಅದನ್ನು ಸ್ನೇಹ- ಸಂಬಂಧದ ಕಾರಣಕ್ಕೆ ಕಡಿಮೆ ಆಗುವಂತೆ ಮಾಡಿಕೊಳ್ಳುತ್ತಾ ಇದ್ದೀರಿ ಅಂತಲೂ ಅನ್ನಿಸಲಿದೆ. ಸೋಷಿಯಲ್ ಕಾಂಟ್ಯಾಕ್ಟ್ ವೃದ್ಧಿಗೆ ಹಾಗೂ ಆದಾಯ ಹೆಚ್ಚು ಮಾಡಿಕೊಳ್ಳಲು ಕೆಲವು ಬದಲಾವಣೆಗಳು ಅನಿವಾರ್ಯ ಎಂದೆನಿಸಿ ಆ ಕಡೆಗೆ ಪ್ರಯತ್ನಗಳನ್ನು ಆರಂಭ ಮಾಡಲಿದ್ದೀರಿ.

ಕೃಷಿಕರು:

ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಆದ್ಯತೆ ನೀಡಿ. ಅದರಲ್ಲೂ ಸಾಲ ಪಡೆದುಕೊಂಡಿದ್ದಲ್ಲಿ ಹೇಳಿದ ಸಮಯಕ್ಕೆ ಹಣ ಹಿಂತಿರುಗಿಸುವುದಕ್ಕೆ ಗಮನ ನೀಡಿ. ಹೊಸದಾಗಿ ಹಣವನ್ನು ಹೂಡಿಕೆ ಮಾಡಿ, ಯಂತ್ರೋಪಕರಣ ಖರೀದಿ ಮಾಡಬೇಕು ಅಥವಾ ಹೈನುಗಾರಿಕೆ ಮೊದಲಾದವನ್ನು ದೊಡ್ಡ ಪ್ರಮಾಣದಲ್ಲಿ ಮಾಡಬೇಕು ಎಂಬ ಆಲೋಚನೆ ಇದ್ದಲ್ಲಿ ನಿಮ್ಮ ಸಾಮರ್ಥ್ಯ ಹಾಗೂ ಮಿತಿಯನ್ನು ಅಳೆದು ತೂಗಿ ನೋಡಿ ತೀರ್ಮಾನಕ್ಕೆ ಬನ್ನಿ. ಇನ್ನು ನಿಮ್ಮಲ್ಲಿ ಕೆಲವರು ನಿಮಗಿರುವ ಭೂಮಿಯ ಪೈಕಿ ಸ್ವಲ್ಪ ಭಾಗವನ್ನು ಮಾರಾಟ ಮಾಡಬೇಕು ಎಂದುಕೊಳ್ಳುವ ಸಾಧ್ಯತೆ ಕೂಡ ಇದೆ. ಕಾಗದ- ಪತ್ರ, ದಾಖಲೆಗಳನ್ನು ಹೊಂದಿಸುವುದಕ್ಕೆ ಕಚೇರಿಗಳಿಗೆ ಓಡಾಟ ಮಾಡುವುದಕ್ಕೆ ಹೆಚ್ಚಿನ ಸಮಯವನ್ನು ಇಡುವಂತೆ ಆಗಲಿದೆ.

ವೃತ್ತಿನಿರತರು:

ನಿಮ್ಮನ್ನು ಯಾರಾದರೂ ಹೊಗಳುತ್ತಿದ್ದಾರೆ ಎಂದಾದಲ್ಲಿ ಅದರ ಹಿಂದಿನ ಕಾರ್ಯ- ಕಾರಣ ಏನು ಎಂಬುದನ್ನು ತಿಳಿಯುವುದಕ್ಕೆ ಪ್ರಯತ್ನಿಸಿ. ಸಂಬಂಧಿಗಳು ನಿಮ್ಮಲ್ಲಿ ಕೆಲವರ ಬಳಿ ತಾತ್ಕಾಲಿಕವಾಗಿ ಹಣಕಾಸಿನ ಹೊಂದಾಣಿಕೆ ಮಾಡಿಕೊಡುವಂತೆ ಕೇಳಿಕೊಂಡು ಬರುವ ಸಾಧ್ಯತೆ ಇದೆ. ದಾಕ್ಷಿಣ್ಯಕ್ಕೆ ಸಿಲುಕಿಕೊಂಡು ಯಾವುದೇ ನಿರ್ಧಾರ ಮಾಡುವುದಕ್ಕೆ ಹೋಗಬೇಡಿ. ನಿಮ್ಮ ಪ್ರಭಾವ ಬಳಸಿ ಬ್ಯಾಂಕ್ ಅಥವಾ ಕೋ ಆಪರೇಟಿವ್ ಸೊಸೈಟಿಗಳಲ್ಲಿ ಯಾರಿಗೂ ಹುದ್ದೆ- ಸ್ಥಾನಮಾನ ಕೊಡಿಸದಿರುವುದು ಕ್ಷೇಮ.

ವಿದ್ಯಾರ್ಥಿಗಳು:

ಇತರರ ಮಾತನ್ನು ಯಾಕೆ ಕೇಳಬೇಕು- ಯಾಕೆ ಕೇಳಿಸಿಕೊಳ್ಳಬೇಕು ಎಂಬ ಮನಸ್ಥಿತಿಯಲ್ಲಿ ನೀವು ಇರುತ್ತೀರಿ. ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವುದಕ್ಕೆ ಬೇಕಾದ ಅವಕಾಶಗಳು ನಿಮಗೆ ದೊರೆಯಲಿವೆ. ಸಿಟ್ಟನ್ನು ಕಡಿಮೆ ಮಾಡಿಕೊಳ್ಳಿ. ಮೇಲ್ನೋಟಕ್ಕೆ ಏನು ಕಾಣಿಸುತ್ತದೋ ಅದನ್ನೇ ನಿಜವೆಂದು ಯಾರ ಜೊತೆಗೂ ವಾದಕ್ಕೆ ಅಥವಾ ಜಗಳಕ್ಕೆ ಇಳಿಯಬೇಡಿ. ನಿಮ್ಮಲ್ಲಿ ಕೆಲವರ ಸೋದರ- ಸೋದರಿಗೆ ಸಹಾಯದ ಅಗತ್ಯ ಬೀಳಲಿದ್ದು, ನಿಮ್ಮಿಂದ ಸಾಧ್ಯವಾದಷ್ಟೂ ನೆರವಾಗಿ.

ಮಹಿಳೆಯರು:

ನಿಮ್ಮಲ್ಲಿ ಕೆಲವರು ಪಟ್ಟು ಹಿಡಿದು ಕೆಲವು ಕೆಲಸಗಳನ್ನು ಮಾಡಿಸಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಏನೂ ಲೆಕ್ಕಾಚಾರ ಇಲ್ಲದೆ ಮುಂದುವರಿದಲ್ಲಿ ವ್ಯವಹಾರದಲ್ಲಿ ಗೊಂದಲ ಕಾಣಿಸಿಕೊಳ್ಳಲಿದೆ. ಆದ್ದರಿಂದ ಮುಖ್ಯ ತೀರ್ಮಾನಗಳನ್ನು ಕೆಲ ಸಮಯ ಮುಂದಕ್ಕೆ ಹಾಕಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಿಮ್ಮ ಉತ್ಸಾಹ, ಕೆಲಸದಲ್ಲಿ ತೊಡಗಿಕೊಳ್ಳುವ ರೀತಿ ಉತ್ತಮ ಫಲವನ್ನು ನೀಡುವ ವಾರ ಇದಾಗಿದೆ. ಕಡ್ಡಿ ತುಂಡು ಮಾಡುವಂತೆ ಕೆಲವು ವಿಷಯಗಳು ನಿಮ್ಮಿಂದ ಮಾಡಲು ಆಗುವುದಿಲ್ಲ ಎಂದು ಹೇಳಲಿದ್ದೀರಿ. ಕೆಲವರು ನಿಮಗೆ ಅಹಂಕಾರಿ ಎಂಬ ಪಟ್ಟ ಕಟ್ಟಲಿದ್ದಾರೆ. ಆದರೆ ನಿಮಗೆ ಸರಿ ಎಂದೆನಿಸಿದ ವಿಚಾರುದಲ್ಲಿ ಯಾವುದೇ ಕಾರಣಕ್ಕೂ ರಾಜೀ ಮಾಡಿಕೊಳ್ಳಬೇಡಿ. ಉದ್ಯೋಗಕ್ಕೆ ಪ್ರಯತ್ನ ಮಾಡುತ್ತಾ ಇರುವವರಿಗೆ ಕೆಲವು ಆಫರ್ ದೊರೆಯಲಿದ್ದು, ಸಂಬಳಕ್ಕೆ ಸಂಬಂಧಿಸಿದಂತೆ ಬಹಳ ನೆಗೋಷಿಯೇಟ್ ಮಾಡಬೇಕಾಗುತ್ತದೆ. ಉಳಿತಾಯ- ಹೂಡಿಕೆಗೆ ಆದ್ಯತೆ ಹೆಚ್ಚು ನೀಡಲಿದ್ದೀರಿ.

ಕೃಷಿಕರು:

ನಿಮ್ಮಲ್ಲಿ ಕೆಲವರಿಗೆ ಫಸಲು ನಷ್ಟವಾಗುವ ಯೋಗ ಇದೆ. ಮುಖ್ಯವಾಗಿ ತಪ್ಪು ತಿಳಿವಳಿಕೆಯಿಂದ ಕೆಲವು ಅನಾಹುತ ಆಗುವ ಸಾಧ್ಯತೆಗಳಿವೆ. ಹೊಸ ಪ್ರಯತ್ನಗಳನ್ನು ಮಾಡುತ್ತಾ ಇದ್ದೀರಿ, ಹೊಸ ವಿಧಾನಗಳನ್ನು ಅಳವಡಿಸಿಕೊಂಡಿದ್ದೀರಿ ಅಂತಾದಲ್ಲಿ ಹಿರಿಯರು- ಅನುಭವಿಗಳ ಮಾರ್ಗದರ್ಶನ ಪಡೆದುಕೊಳ್ಳಿ. ನೀವು ಬಳಸುವ ಕ್ರಿಮಿನಾಶಕಗಳು, ಗೊಬ್ಬರು, ಬೀಜಗಳು, ಸಸಿಗಳು ಹೀಗೆ ಯಾವುದೇ ಆದರೂ ಗುಣಮಟ್ಟದ ಬಗ್ಗೆ ಒಂದಕ್ಕೆ ನಾಲ್ಕು ಬಾರಿಗೆ ಎಂಬಂತೆ ಪರೀಕ್ಷಿಸಿಕೊಳ್ಳಿ. ಮೇಲುನೋಟದ ಭರವಸೆ ಹಾಗೂ ಸ್ನೇಹಿತರು ಹೇಳಿದರು ಎಂದುಕೊಂಡು ಪರೀಕ್ಷೆ ಮಾಡದೆ ಯಾವುದನ್ನೂ ಖರೀದಿಸಬೇಡಿ. ಕೋಳಿ ಸಾಕಣೆ, ಮೀನು ಸಾಕಣೆ ಮಾಡುವವರಿಗೆ ಆದಾಯದಲ್ಲಿ ಹೆಚ್ಚಳ ಆಗುವ ಯೋಗ ಇದೆ.

ವೃತ್ತಿನಿರತರು:

ಆತುರ ಕಡಿಮೆ ಮಾಡಿಕೊಳ್ಳಿ. ಆಲೋಚನೆಗೆ ಆದ್ಯತೆಯನ್ನು ನೀಡಿ. ನೀವು ಒಂದು ವಿಷಯದಲ್ಲಿ ಪರಿಣತರೇ ಆಗಿದ್ದರೂ ಅದರಲ್ಲಿ ಆಗಿರುವ ಹೊಸ ಬದಲಾವಣೆಗಳನ್ನು ತಿಳಿಯಲು ಸಮಯ ಇಡಿ. ಅನುಮಾನ ಮೂಡುವಂಥ ಪರಿಸರದಲ್ಲಿ ಕೆಲಸ ಮುಂದುವರಿಸಬೇಡಿ. ಸೂಕ್ತ ದಾಖಲಾತಿಗಳು ಇಲ್ಲದಿದ್ದಲ್ಲಿ ಅದು ದೊರೆಯುವ ತನಕ ಯಾವುದೇ ಪ್ರಕ್ರಿಯೆ ಮುಂದುವರಿಸದೆ ಇರುವುದು ಉತ್ತಮ. ಪದೇಪದೇ ಕಿರಿಕಿರಿ ಮಾಡುತ್ತಿರುವವರಿಂದ ಅಂತರ ಕಾಯ್ದುಕೊಳ್ಳುವುದಕ್ಕೆ ತೀರ್ಮಾನ ಮಾಡಲಿದ್ದೀರಿ.

ವಿದ್ಯಾರ್ಥಿಗಳು:

ನನಗೆ ಅನುಕೂಲ ಆದಲ್ಲಿ ಆಯಿತು, ನನ್ನ ಕೆಲಸವಾದರೆ ಸಾಕು ಈ ರೀತಿಯ ಮನೋಭಾವದಿಂದ ಹೊರಗೆ ಬನ್ನಿ. ಏಕೆಂದರೆ ಇದೇ ಧೋರಣೆಯಿಂದಾಗಿ ಹಲವರು ನಿಮ್ಮಿಂದ ದೂರ ಆಗುತ್ತಾ ಇದ್ದಾರೆ ಎಂಬುದು ಗಮನಕ್ಕೆ ಬರಲಿದೆ. ಆ ನಂತರವೂ ನೀವು ಮಾಡುತ್ತಿರುವುದೇ ಸರಿ ಎಂದು ಮುಂದುವರಿಯುವುದು ತೊಂದರೆ ತಂದೊಡ್ಡಲಿದೆ. ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಾ ಇರುವವರಿಗೆ ಏಕಾಗ್ರತೆ ಸಾಧಿಸುವುದು ಕಷ್ಟವಾಗಲಿದ್ದು, ಆತ್ಮವಿಶ್ವಾಸ ಕಡಿಮೆಯಾಗಲಿದೆ.

ಮಹಿಳೆಯರು:

ನಿಮಗೆ ಒಂದು ಅಗತ್ಯ ಎಂದಾದರೆ ತಕ್ಷಣಕ್ಕೆ ನೆರವಿಗೆ ಬರುವ ಗೆಳೆಯ- ಗೆಳತಿಯರಿಗೆ ದೊಡ್ಡ ಮಟ್ಟದಲ್ಲಿ ಅನುಕೂಲ ಆಗುವ ಸಹಾಯವನ್ನು ಮಾಡಲಿದ್ದೀರಿ. ಉದ್ಯೋಗಕ್ಕೆ ಸಂಬಂಧಿಸಿದಂತೆ ರೆಫರೆನ್ಸ್ ನೀಡಿ, ಆ ಕೆಲಸ ಸಿಗುವುದಕ್ಕೆ ಎಷ್ಟು ಪ್ರಯತ್ನ ಮಾಡಬೇಕೋ ಅದನ್ನು ಸಹ ಮಾಡಿಕೊಡುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಆಪತ್ತಿಗೆ ಪಾಪ ಇಲ್ಲ ಎಂದುಕೊಂಡು ಕೆಲವು ಸುಳ್ಳುಗಳನ್ನು ಹೇಳಲಿದ್ದೀರಿ. ನೆನಪಿನಲ್ಲಿ ಇಟ್ಟುಕೊಳ್ಳಿ, ನಿಮ್ಮ ಆದಾಯ ಹಾಗೂ ಆಸ್ತಿ- ಆರೋಗ್ಯಕ್ಕೆ ಸಂಬಂಧಿಸಿದಂತೆ ಸುಳ್ಳು ಹೇಳಿದಲ್ಲಿ ಭವಿಷ್ಯದಲ್ಲಿ ಅದು ಸಂಬಂಧವನ್ನೇ ಹಾಳುಗೆಡುವವ ಮಟ್ಟಕ್ಕೆ ಹೋಗಬಹುದು. ಸರ್ಕಾರಿ ಕಾಂಟ್ರಾಕ್ಟ್ ಗಳನ್ನು ಪಡೆದುಕೊಂಡು, ಅದರ ಕೆಲಸಗಳನ್ನು ಮಾಡಿಸಿ ಆದಾಯ ಪಡೆದುಕೊಳ್ಳುತ್ತಾ ಇರುವವರಿಗೆ ಕೆಲವು ಒತ್ತಡದ ಸನ್ನಿವೇಶ ಎದುರಾಗಲಿದೆ. ನಿಮ್ಮಿಂದ ದೊಡ್ಡ ಮೊತ್ತದ ಪ್ರತಿಫಲಾಕ್ಷೆ ಮಾಡುತ್ತಾ ಇರುವವರಿಗೆ ಹೇಗೆ ಸಮಾಧಾನ ಮಾಡಬೇಕು ಎಂಬುದು ತಿಳಿಯದೆ ಗೊಂದಲಕ್ಕೆ ಬೀಳುತ್ತೀರಿ.

ಕೃಷಿಕರು:

ಈ ವಾರ ಕರುಣೆ ನಿಮಗೆ ಬಹಳ ಮುಖ್ಯವಾದದ್ದು. ನಿಮಗೆ ಅನುಕೂಲ ಆಗುತ್ತದೆ ಎಂಬ ಕಾರಣಕ್ಕೆ ಹೇಳುವಂಥ ಕೆಲವು ವಿಷಯಗಳು ಇತರರಿಗೆ ಭಾರೀ ಸಮಸ್ಯೆಗಳನ್ನು ತಂದೊಡ್ಡಲಿದೆ ಎಂಬುದು ಗೊತ್ತಾದ ಮೇಲೆ ಆಲೋಚಿಸಿ, ಆ ನಂತರ ಮುಂದಕ್ಕೆ ಹೆಜ್ಜೆ ಇಡಿ. ಕೃಷಿ ಹೊಂಡಗಳನ್ನು ಮಾಡುವುದಕ್ಕೆ ಹಾಗೂ ಸೋಲಾರ್ ತಂತಿ- ಬೇಲಿ, ಸೋಲಾರ್ ವಾಟರ್ ಪಂಪ್ ಇಂಥವುಗಳನ್ನು ಅಳವಡಿಸುವುದಕ್ಕೆ ಹಣ ಖರ್ಚು ಮಾಡಲಿದ್ದೀರಿ. ದೀರ್ಘಾವಧಿಗೆ ಆದಾಯ ತರುವಂಥ ಕೆಲವು ಬೆಳೆಗಳನ್ನು ಬೆಳೆಯುವುದಕ್ಕೆ ಅಂತಲೇ ಸ್ವಲ್ಪ ಪ್ರಮಾಣದಲ್ಲಿಯಾದರೂ ಜಮೀನು ಖರೀದಿಸುವ ಯೋಗ ನಿಮ್ಮಲ್ಲಿ ಕೆಲವರಿಗೆ ಇದೆ. ಕೃಷಿ ಕೂಲಿ ಕಾರ್ಮಿಕರಿಗೆ ಆದಾಯದ ಹರಿವಿನಲ್ಲಿ ಏರಿಳಿತ ಇರುತ್ತದೆ.

ವೃತ್ತಿನಿರತರು:

ಪಾರ್ಟನರ್ ಷಿಪ್ ನಲ್ಲಿ ನಿಮ್ಮ ವೃತ್ತಿ ಮಾಡುತ್ತಾ ಇದ್ದೀರಿ ಅಂತಾದರೆ ಬಳಸುವ ಪದಗಳ ಕಡೆಗೆ ಗಮನ ಇರಲಿ. ನೀವು ಖುಷಿಯಲ್ಲಿದ್ದಾಗಲೋ ಅಥವಾ ಉತ್ಸಾಹದಲ್ಲಿ ಇದ್ದಾಗಲೋ ಆಡುವ ಮಾತಿನಿಂದ ಪಾಲುದಾರಿಕೆ ಕಿತ್ತುಹೋಗುವ ಸನ್ನಿವೇಶ ಸೃಷ್ಟಿ ಆಗಬಹುದು. ವಾಸ್ತವದಲ್ಲಿ ಸಾಧ್ಯವೇ ಇಲ್ಲದ ಭರವಸೆಯನ್ನು ನಿಮಗೆ ಯಾರಾದರೂ ನೀಡಿದಲ್ಲಿ ಅಂಥವರಿಂದ ದೂರ ಇರುವುದು ಒಳ್ಳೆಯದು. ಒಂದು ವೇಳೆ ಆಸೆಗೆ ಬಿದ್ದು ಮುಂದುವರಿದಿರೋ ದೊಡ್ಡ ಮೊತ್ತದ ಹಣ ಕಳೆದುಕೊಳ್ಳುತ್ತೀರಿ.

ವಿದ್ಯಾರ್ಥಿಗಳು:

ನಿಮ್ಮ ಮೇಲೆ ಬರುವಂಥ ಆರೋಪಗಳನ್ನು ನಿವಾರಿಸಿಕೊಳ್ಳುವುದಕ್ಕೆ ಹೆಚ್ಚಿನ ಸಮಯ ಹೋಗುತ್ತದೆ. ಒಂದು ವೇಳೆ ಅದು ಪ್ರೀತಿ- ಪ್ರೇಮ ಇಂಥ ವಿಚಾರಗಳು ಇದ್ದಲ್ಲಿ ವಿಕೋಪಕ್ಕೆ ಹೋಗಬಹುದು. ಬಹಳ ವಿಶ್ವಾಸ ಇಟ್ಟುಕೊಂಡಿದ್ದವರು ಸಹ ನಿಮ್ಮಿಂದ ಅಂತರ ಕಾಯ್ದುಕೊಳ್ಳುವುದಕ್ಕೆ ಆರಂಭಿಸಲಿದ್ದಾರೆ. ಪಾರದರ್ಶಕವಾಗಿ ನಡೆದುಕೊಳ್ಳಿ. ಒಂದು ವೇಳೆ ನೀವು ತಪ್ಪಿತಸ್ಥರು ಎಂದು ನಿಮಗೇ ಅನಿಸಿದಲ್ಲಿ ಕ್ಷಮೆ ಕೇಳಿದರೆ ಬಹಳ ಒಳ್ಳೆಯದು. ಇದರಿಂದ ನಿಮ್ಮ ವಿಶ್ವಾಸಾರ್ಹತೆ ಉಳಿಯುತ್ತದೆ.

ಮಹಿಳೆಯರು:

ನಿಮ್ಮ ಮಾತನ್ನು ನೀವೇ ಪದೇಪದೇ ಬದಲಾಯಿಸುವಂತೆ ಆಗಲಿದೆ. ಕೆಲವರು ನಿಮ್ಮನ್ನು ಬ್ಲ್ಯಾಕ್ ಮೇಲ್ ಮಾಡುವುದಕ್ಕೆ ಪ್ರಯತ್ನಿಸಲಿದ್ದಾರೆ. ಕಠಿಣ ಪರಿಸ್ಥಿತಿಯಲ್ಲಿ ಕುಟುಂಬ ಸದಸ್ಯರಿಂದ ನೆರವು ಪಡೆದುಕೊಳ್ಳುವುದು ಕ್ಷೇಮ. ಹಣಕಾಸಿನ ವ್ಯವಹಾರಗಳನ್ನು ಕುಟುಂಬದವರಿಂದ ಮುಚ್ಚಿಡಬೇಡಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಕೆಲವು ವ್ಯಕ್ತಿಗಳಿಂದ, ಒಪ್ಪಂದಗಳಿಂದ, ಕೆಲಸ- ಕಾರ್ಯಗಳಿಂದ ನಾಜೂಕಾಗಿ ಬಿಡಿಸಿಕೊಂಡು ಬರಬೇಕಾದ ಸನ್ನಿವೇಶ ಎದುರಾಗಲಿದೆ. ನಿಮ್ಮ ಭವಿಷ್ಯದ ದೃಷ್ಟಿಯಿಂದ ಬಹಳ ಮುಖ್ಯ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನಿಮ್ಮಲ್ಲಿ ಕೆಲವರಿಗೆ ಫೆಲೋಶಿಪ್ ದೊರೆಯುವಂತಹ ಯೋಗ ಇದೆ. ಈ ಹಿಂದೆ ಯಾವಾಗಲೋ ಅಪ್ಲೈ ಮಾಡಿದ್ದಿರಿ ಅಂತಾದಲ್ಲಿ ಈ ವಾರ ಆ ಬಗ್ಗೆ ಅಪ್ ಡೇಟ್ ಸಿಗಲಿದೆ. ಮನೆ ನಿರ್ಮಾಣ ಮಾಡುತ್ತಾ ಇರುವವರು ಮೂಲ ಪ್ಲಾನ್ ನಲ್ಲಿ ಇಲ್ಲದ ಕೆಲವು ಬದಲಾವಣೆಗಳನ್ನು ಮಾಡುವುದಕ್ಕೆ ಮುಂದಾಗಲಿದ್ದೀರಿ. ಖರ್ಚಿನ ಬಗ್ಗೆ ನಿಗಾ ಇರಲಿ.

ಕೃಷಿಕರು:

ಬಹಳ ಕಷ್ಟವಾಗಬಹುದು ಎಂದುಕೊಂಡ ಕೆಲಸ- ಕಾರ್ಯಗಳು ಅನಾಯಾಸವಾಗಿ ಮುಗಿಯಲಿವೆ. ಮೊಲ ಸಾಕಣೆ ಮಾಡುತ್ತಾ ಇರುವವರು ಮೂಲಸೌಕರ್ಯಕ್ಕೆ ಇನ್ನೂ ಹೆಚ್ಚಿನ ಹಣ ಖರ್ಚು ಮಾಡಿ, ವ್ಯವಹಾರದ ಗಾತ್ರ- ಪ್ರಮಾಣ ಹೆಚ್ಚಿಸಿಕೊಳ್ಳಲಿದ್ದೀರಿ. ಬಹಳ ಸಮಯದಿಂದ ನಿಮಗೆ ಅತೃಪ್ತಿ ಮೂಡಿಸುತ್ತಿದ್ದ ಕೆಲಸದ ವಿಳಂಬದ ಕಾರಣವನ್ನು ಪತ್ತೆ ಮಾಡಲಿದ್ದೀರಿ. ಹೀಗೆ ಪತ್ತೆಯಾದ ಕಾರಣವನ್ನು ಮೂಲದಲ್ಲಿಯೇ ಸರಿ ಮಾಡಲಿದ್ದೀರಿ. ದಯಾ- ದಾಕ್ಷಿಣ್ಯ ಎಂದು ಇಷ್ಟು ಸಮಯ ಕೆಲವರಿಗೆ ವಿನಾಯಿತಿ ತೋರಿಸಿಕೊಂಡು ಬಂದಿದ್ದಲ್ಲಿ ಈ ವಾರ ಇನ್ನು ಸಾಧ್ಯವಿಲ್ಲ ಎಂದು ಸಂಬಂಧಿಸಿದವರಿಗೇ ನೇರವಾಗಿ ಹೇಳಲಿದ್ದೀರಿ. ಮನೆಯ ದುರಸ್ತಿ ಕಾರ್ಯಗಳನ್ನು ಮಾಡಿಸುವುದಕ್ಕೆ ನಿಮ್ಮಲ್ಲಿ ಕೆಲವರು ಕೆಲಸ ಹಿಡಿಸಲಿದ್ದೀರಿ.

ವೃತ್ತಿನಿರತರು:

ಯಾವ ಕೆಲಸವನ್ನು ತುಂಬ ಉತ್ಸಾಹದಿಂದ ಹಾಗೂ ವೇಗವಾಗಿ ಆರಂಭಿಸಿದ್ದಿರೋ ಅದರ ಫಲಿತಾಂಶ ಅಂದುಕೊಂಡಂತೆಯೇ ಬಂದೀತೆ ಎಂಬ ಬಗ್ಗೆ ಗೊಂದಲ ಕಾಡುವುದಕ್ಕೆ ಶುರು ಆಗಲಿದೆ. ಅದರ ಯಶಸ್ಸಿನ ಬಗ್ಗೆ ಸಿಕ್ಕಾಪಟ್ಟೆ ಮಾತನಾಡಿ, ಈಗ ಅದರಲ್ಲಿ ಸಂದೇಹ ಇದೆ ಎಂಬುದನ್ನು ಚರ್ಚಿಸುವುದು ಹೇಗೆ ಎಂದುಕೊಳ್ಳಬೇಡಿ. ವಿಷಯತಜ್ಞರು, ಪರಿಣತರು, ಅನುಭವಿಗಳ ಜೊತೆಗೆ ನಿಮ್ಮ ಸಂದೇಹಗಳನ್ನು ಹೇಳಿಕೊಳ್ಳಿ. ಲಾಭದಾಯಕ ಆಗಲಿಕ್ಕಿಲ್ಲ ಅಂತಾದರೆ ಪ್ರಾಜೆಕ್ಟ್ ನಿಂದ ಹೊರಬನ್ನಿ.

ವಿದ್ಯಾರ್ಥಿಗಳು:

ಆಹಾರ ಸೇವನೆಯಲ್ಲಿ ಪೋಷಕಾಂಶಗಳ ಸಮತೋಲನಕ್ಕೆ ಆದ್ಯತೆ ನೀಡಬೇಕಾಗಲಿದೆ. ನಿಮ್ಮಲ್ಲಿ ಕೆಲವರಿಗೆ ವೈದ್ಯರೇ ಈ ಬಗ್ಗೆ ಸೂಚನೆ ನೀಡಲಿದ್ದಾರೆ. ಫಾಲೋಅಪ್ ಚೆಕಪ್ ಗಳು ಬಾಕಿ ಇದ್ದಲ್ಲಿ ಅದನ್ನು ಮಾಡಿಸುವುದು ಒಳ್ಳೆಯದು. ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆ ಅಗತ್ಯ ಇದೆ ಎಂದಾದಲ್ಲಿ ಅದನ್ನು ಮಾಡಿಕೊಳ್ಳಲು ಆದ್ಯತೆ ನೀಡಿ. ನಿಮ್ಮ ವೈಫಲ್ಯಗಳನ್ನು ಬೇರೆಯವರ ತಲೆಗೆ ಕಟ್ಟುವ ಪ್ರಯತ್ನವನ್ನು ಮಾಡಬೇಡಿ. ತಂದೆ- ತಾಯಿಯ ಜೊತೆಗೆ ಮನಸ್ತಾಪ ಆಗಬಹುದು.

ಮಹಿಳೆಯರು:

ವಿಲಾಸಿ ವಸ್ತುಗಳ ಖರೀದಿಗೆ ಹೆಚ್ಚಿನ ಖರ್ಚನ್ನು ಮಾಡಲಿದ್ದೀರಿ. ಶಾಪಿಂಗ್ ಮಾಡುವ ಉದ್ದೇಶದಿಂದಲೇ ನಿಮ್ಮಲ್ಲಿ ಕೆಲವರು ದೂರದ ಪ್ರದೇಶ- ದೇಶಗಳಿಗೆ ತೆರಳುವ ಸಾಧ್ಯತೆ ಇದೆ. ಆಹಾರ- ನೀರು ಸೇವನೆ ಮಾಡುವಲ್ಲಿ ಸ್ವಚ್ಛತೆ ಕಡೆಗೆ ಲಕ್ಷ್ಯ ನೀಡಿ.

ಲೇಖನ- ಎನ್‌.ಕೆ.ಸ್ವಾತಿ