“ಬಂಪರ್ನಿಂದ ಬಂಪರ್ ತನಕ” ಐದು ವರ್ಷಗಳ ಇನ್ಷೂರೆನ್ಸ್ ಕಡ್ಡಾಯಗೊಳಿಸಲು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ. ಇದರಿಂದಾಗಿ ವಾಹನಗಳ ವೆಚ್ಚದಲ್ಲಿ ಶೇ 8ರಿಂದ ಶೇ 10ರಷ್ಟು ಹೆಚ್ಚಳ ಆಗಲಿದೆ. ಕೊರೊನಾ ಬಿಕ್ಕಟ್ಟಿನಿಂದ ಹೊರಬರುತ್ತಿರುವ ವಾಹನೋದ್ಯಮಕ್ಕೆ ಈ ನಿರ್ಧಾರವು ಸಮಸ್ಯೆ ಉಂಟುಮಾಡುತ್ತದೆ ಎಂದು ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಶನ್ (FADA) ಅಧ್ಯಕ್ಷ ವಿಂಕೇಶ್ ಗುಲಾಟಿ ಹೇಳಿದ್ದಾರೆ. ಗುಲಾಟಿ ಅವರು ಹೇಳುವ ಪ್ರಕಾರ, ಇದರಿಂದಾಗಿ ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳ ವೆಚ್ಚ 5,000 ರುಪಾಯಿಯಿಂದ 6000 ರೂಪಾಯಿ, ಎಂಟ್ರಿ ಲೆವೆಲ್ ಕಾರುಗಳ ಬೆಲೆಯಲ್ಲಿ 50,000 ರೂಪಾಯಿ ಹಾಗೂ ಮಧ್ಯಮ ಮಾರುಕಟ್ಟೆಯ ಎಸ್ಯುವಿಗಳ ಬೆಲೆಯಲ್ಲಿ ಎರಡು ಲಕ್ಷಕ್ಕಿಂತ ಹೆಚ್ಚಾಗುತ್ತದೆ. ಇನ್ಷೂರೆನ್ಸ್ ರೆಗ್ಯುಲೇಟರಿ ಅಥಾರಿಟಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ (ಐಆರ್ಡಿಎಐ)ಯಿಂದ 2020ರ ಆಗಸ್ಟ್ನಲ್ಲಿ ಹೊಸ ವಾಹನಗಳಿಗೆ ದೀರ್ಘಾವಧಿಯ ಕಡ್ಡಾಯ ಇನ್ಷೂರೆನ್ಸ್ ಎಂಬುದನ್ನು ಹಿಂಪಡೆಯಲಾಗಿತ್ತು.
ಆದರೆ, ಈಗ ಹೈಕೋರ್ಟ್ ತೀರ್ಪಿನಂತೆ ಡೀಲರ್ಗಳು ಕಾರು ಮಾರಾಟ ಮಾಡುವಾಗಲೇ ಐದು ವರ್ಷದ ಇನ್ಷೂರೆನ್ಸ್ ಜತೆಗೆ ಮಾರಬೇಕು. ಇದರಿಂದಾಗಿ ಆರಂಭದಲ್ಲೇ ಗ್ರಾಹಕರು ಹೆಚ್ಚಿನ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಇನ್ಷೂರೆನ್ಸ್ ವಲಯದಲ್ಲಿ ವಾಹನಗಳ ಬಳಕೆ ಆಧಾರದಲ್ಲಿ ಆರಾಮದಾಯಕವಾಗಿ ತಿಂಗಳು ತಿಂಗಳು ಪಾವತಿ ಮಾಡುವಂತೆ ವ್ಯವಸ್ಥೆ ಮಾಡಿಕೊಟ್ಟರೆ ಇದರಿಂದ ಮಾರಾಟ ಸುಧಾರಿಸುತ್ತದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತವೆ. ವಾಹನ ವಲಯದ ವಿಚಾರಕ್ಕೆ ಬಂದಾಗ ಗ್ರಾಹಕರ ಆಸಕ್ತಿ, ಸುರಕ್ಷತೆ, ಖರೀದಿ ವೆಚ್ಚ, ಪರಿಸರ ಮತ್ತು ಹೊಗೆಯುಗುಳುವ ಸಮಸ್ಯೆ, ಉದ್ಯೋಗ ಸೃಷ್ಟಿ ಮತ್ತು ತಯಾರಿಕೆ ಅಂಶಗಳನ್ನು ಸಹ ಗಣನೆಗೆ ತೆಗೆದುಕೊಳ್ಳಬೇಕು ಎನ್ನುತ್ತಾರೆ ಕಾರು ತಯಾರಿಕೆ ಸಂಸ್ಥೆಯೊಂದರ ಸಿಇಒ.
ಇನ್ನು ಇನ್ಷೂರೆನ್ಸ್ ಕಂಪೆನಿಗಳಲ್ಲೇ ಕಾಂಪ್ರಹೆನ್ಸಿವ್ (ಸಮಗ್ರ) ಕವರ್ ಬಗ್ಗೆ ಭಿನ್ನವಾದ ಅಭಿಪ್ರಾಯ ಇದೆ. ಇಬ್ಬರು ವ್ಯಕ್ತಿಗಳ ಮಧ್ಯದ ಸ್ವಯಂಪ್ರೇರಿತ ಒಪ್ಪಂದ ಇದಾಗಬೇಕೇ ಹೊರತು ಗ್ರಾಹಕರ ಮೇಲೆ ಒತ್ತಡ ಹೇರಬಾರದು ಎನ್ನುವವರು ಇದ್ದಾರೆ. ಅದೇ ರೀತಿ ಇನ್ಷೂರೆನ್ಸ್ ಪ್ರಮಾಣವನ್ನು ಹೆಚ್ಚಿಸುವುದಕ್ಕೆ ಈ ರೀತಿ ಗ್ರಾಹಕರ ಮೇಲೆ ಕಡ್ಡಾಯವಾಗಿ ವಿಮೆಯನ್ನು ಹೇರುವುದು ಅನಿವಾರ್ಯ ಎನ್ನುವವರೂ ಇದ್ದಾರೆ. ಇವತ್ತಿಗೂ ಹೊಸ ವಾಹನಕ್ಕೆ ಕಾಂಪ್ರಹೆನ್ಸಿವ್ ಇನ್ಷೂರೆನ್ಸ್ ಖರೀದಿಸುವವರ ಪ್ರಮಾಣ ಶೇ 99ರಷ್ಟಿದೆ ಎನ್ನುತ್ತಾರೆ ಅಧಿಕಾರಿಗಳು.
ಹೈಕೋರ್ಟ್ನ ಆದೇಶದ ಪ್ರಕಾರ, ಸೆಪ್ಟೆಂಬರ್ 1, 2021ರ ನಂತರ ಪ್ರತಿ ವರ್ಷ ಬಂಪರ್ ಟು ಬಂಪರ್ ಇನ್ಷೂರೆನ್ಸ್ ಮಾಡಿಸುವುದು ಕಡ್ಡಾಯ. ಇದರ ಜತೆಗೆ ಐದು ವರ್ಷದ ಅವಧಿಗೆ ಚಾಲಕ, ಪ್ರಯಾಣಿಕರು ಮತ್ತು ವಾಹನದ ಮಾಲೀಕರು ಸಹ ಕವರ್ ಆಗಬೇಕು. ಅಂದಹಾಗೆ ಐದು ವರ್ಷಗಳ ಅವಧಿಗೆ ಇನ್ಷೂರೆನ್ಸ್ ಅನ್ನು ಮೊದಲಿಗೇ ವಸೂಲಿ ಮಾಡಲಾಗುತ್ತದೆಯೇ ಎಂಬುದರ ಬಗ್ಗೆ ಖಾತ್ರಿಯಾಗಿ ಏನನ್ನೂ ಇನ್ಷೂರೆನ್ಸ್ ಕಂಪೆನಿಗಳು ತಿಳಿಸಿಲ್ಲ. ಹೈಕೋರ್ಟ್ ಆದೇಶದ ಬಗ್ಗೆಯೇ ಪ್ರಶ್ನೆಗಳಿವೆ: ಬಂಪರ್ನಿಂದ ಬಂಪರ್ ವಿಮೆ ಅಂದರೆ ಸಮಗ್ರ ಇನ್ಷೂರೆನ್ಸ್ ಅಂತಲೋ ಅಥವಾ ಶೂನ್ಯ ಸವಕಳಿ (ಡಿಪ್ರಿಸಿಯೇಷನ್) ಪಾಲಿಸಿ ಅಂತಲೋ ಸ್ಪಷ್ಟವಾಗಬೇಕಿದೆ.
ಇದನ್ನೂ ಓದಿ: Insurance On Deposits: ಬ್ಯಾಂಕ್ಗಳ ಹಣಕಾಸು ನಿರ್ಬಂಧ, ವಂಚನೆಯಾದಲ್ಲಿ 90 ದಿನದೊಳಗೆ 5 ಲಕ್ಷ ರೂ. ಇನ್ಷೂರೆನ್ಸ್
(Bumper To Bumper Insurance Mandatory Order By Madras High Court Vehicles Will Become Costly Know Why)
Published On - 11:28 pm, Sat, 28 August 21