TDS on PF withdrawal: ಪಿಎಫ್ ಖಾತೆದಾರರು ಹಣ ವಿಥ್ ಡ್ರಾ ವೇಳೆ ಟಿಡಿಎಸ್ ಕಡಿತ ಉಳಿಸುವುದು ಹೇಗೆ?
5 ವರ್ಷದ ಅವಧಿ ಪೂರ್ಣಗೊಳ್ಳುವ ಮುಂಚೆ ಪಿಎಫ್ ವಿಥ್ ಡ್ರಾ ಮಾಡಿದರೆ ಟಿಡಿಎಸ್ ಅಥವಾ ತೆರಿಗೆ ಕಡಿತ ಆಗುತ್ತದೆ. ಅದು ಆಗದಿರುವಂತೆ ಮಾಡಬಹುದಾ? ಈ ಲೇಖನದಲ್ಲಿ ಆ ಬಗ್ಗೆ ವಿವರಗಳು ಇಲ್ಲಿವೆ.
ಕೋವಿಡ್- 19 ಪರಿಹಾರದ ಭಾಗವಾಗಿ ಸರ್ಕಾರವು ಉದ್ಯೋಗಿಗಳಿಗೆ ತಮ್ಮ ಕಾರ್ಮಿಕ ಭವಿಷ್ಯ ನಿಧಿ (ಇಪಿಎಫ್) ಖಾತೆಯಲ್ಲಿನ ಮೊತ್ತವನ್ನು ಭಾಗಶಃ ವಿಥ್ ಡ್ರಾ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಈಗಿನ ಕೋವಿಡ್- 19 ಆರೋಗ್ಯ ತುರ್ತು ಸಂದರ್ಭದಲ್ಲಿ ದೇಶದಲ್ಲಿ ಬಹಳ ಮಂದಿ ಹಣಕಾಸು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದೇ ರೀತಿ ಹಣದ ತುರ್ತು ನಿಮಗೂ ಇದ್ದು, ಒಂದು ವೇಳೆ ಪಿಎಫ್ ಖಾತೆಯಿಂದ ಹಣ ವಿಥ್ಡ್ರಾ ಮಾಡುವಂತಿದ್ದರೆ ತೆರಿಗೆ ಎಷ್ಟಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಸಹ ಮುಖ್ಯ. ಏಕೆಂದರೆ ಇಪಿಎಫ್ ಎಂಬುದು ದೀರ್ಘಾವಧಿ ಹೂಡಿಕೆ. ನಿವೃತ್ತಿಯ ನಿಧಿಗಾಗಿ ಇರುವಂಥದ್ದು. ಇಪಿಎಫ್ನ ಉದ್ದೇಶವು ಚಂದಾದಾರರ ನಿವೃತ್ತಿ ಹೊತ್ತಿಗೆ ಉತ್ತಮ ಮೊತ್ತದ ನಿಧಿ ಸೃಷ್ಟಿ ಆಗಬೇಕು ಎಂಬುದೇ. ಆದರೆ ಅದರಿಂದ ಹಣ ತೆಗೆದರೆ ಆ ಉದ್ದೇಶವು ಆಚೀಚೆ ಆದಂತಾಗುತ್ತದೆ. ಆ ಕಾರಣದಿಂದಲೇ ನಿರ್ದಿಷ್ಟ ಕಾರಣವಲ್ಲದ ಹೊರತು ಬೇರೆ ಸಂದರ್ಭದಲ್ಲಿ ಹಣ ವಿಥ್ ಡ್ರಾ ಮಾಡಲು ಅವಕಾಶ ನೀಡುವುದಿಲ್ಲ. ಕೋವಿಡ್- 19 ತುರ್ತು ಅಗತ್ಯ ಬಿಟ್ಟರೆ ಮದುವೆ ಅಥವಾ ಶಿಕ್ಷಣ, ವೈದ್ಯಕೀಯ ವೆಚ್ಚ, ಗೃಹ ಸಾಲ ಮರು ಪಾವತಿ, ಮನೆ- ಸೈಟು ಖರೀದಿ ಅಥವಾ ಮನೆ ನವೀಕರಣಕ್ಕೆ ಹಣ ವಿಥ್ ಡ್ರಾ ಮಾಡಬಹುದು. ಸ್ವಂತ ಅಥವಾ ಸಂಬಂಧಿಕರಿಗಾಗಿ ಈ ಮೇಲ್ಕಂಡ ಉದ್ದೇಶಗಳಿಗಾಗಿ ವಿಥ್ ಡ್ರಾ ಮಾಡಬಹುದು.
ಉದ್ಯೋಗದಲ್ಲಿ ಐದು ವರ್ಷ ಪೂರ್ತಿ ಆಗುವ ಮುನ್ನ ಪಿಎಫ್ ವಿಥ್ ಡ್ರಾ ಮಾಡಿದಲ್ಲಿ 50,000 ರೂಪಾಯಿ ಮೇಲ್ಪಟ್ಟು ಮೊತ್ತವಾಗಿದ್ದರೆ ಆದಾಯ ತೆರಿಗೆ ಮತ್ತು ಟಿಡಿಎಸ್ ಕಡಿತ ಆಗಲಿದೆ. ಯಾರಿಗೆ ರೂ. 2.5 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಇರುತ್ತದೋ ಅಂಥವರು 15G/15H ಫಾರ್ಮ್ ಸಲ್ಲಿಸುವ ಮೂಲಕ ಟಿಡಿಎಸ್ ಕಡಿತವನ್ನು ಉಳಿತಾಯ ಮಾಡಬಹುದು. ಯಾರಿಗೆ ಈ ಬಗ್ಗೆ ಗೊತ್ತಿರುವುದಿಲ್ಲವೋ ಅಂಥವರು 15G ಮತ್ತು 15H ಫಾರ್ಮ್ ಸಲ್ಲಿಸಿ, ಟಿಡಿಎಸ್ ಕಡಿತವನ್ನು ಉಳಿಸಬಹುದು. ಇದಕ್ಕೆ ಅರ್ಜಿ ಸಲ್ಲಿಸಲು ನಿಮ್ಮ ಬಳಿ ಪ್ಯಾನ್ (ಪರ್ಮನೆಂಟ್ ಅಕೌಂಟ್ ನಂಬರ್) ಇರಲೇಬೇಕು. ಬ್ಯಾಂಕ್ ವೆಬ್ಸೈಟ್ ಮೂಲಕ ಕೂಡ ಈ ಫಾರ್ಮ್ಗಳನ್ನು ಸಲ್ಲಿಸಬಹುದು.
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್ (ಡಿಎಸ್ಸಿ) ಬೇಕಾಗುತ್ತದೆ. ಪಿಎಫ್ ವಿಥ್ ಡ್ರಾ ಮಾಡುತ್ತಿದ್ದೀರಿ ಎಂದಾದಲ್ಲಿ 15G/15H ಫಾರ್ಮ್ ಅನ್ನು ಪಿಎಫ್ ವಿಥ್ ಡ್ರಾ ವೇಳೆಯಲ್ಲಿ ಸಲ್ಲಿಸಿದಲ್ಲಿ ಹಣ ತೆಗೆದುಕೊಳ್ಳುವ ಮೊತ್ತದ ಮೇಲೆ ಟಿಡಿಎಸ್ ಕಡಿತ ಆಗುವುದಿಲ್ಲ. ಈ ಸಂದರ್ಭದಲ್ಲಿ ನೆನಪಿಟ್ಟುಕೊಳ್ಳಬೇಕಾದ ಅಂಶಗಳು ಇನ್ನೂ ಇವೆ. 15H ಫಾರ್ಮ್ ಇರುವುದು ಹಿರಿಯ ನಾಗರಿಕರಿಗೆ. ಅಂದರೆ 60 ವರ್ಷ ಮೇಲ್ಪಟ್ಟವರಿಗೆ ಇರುವಂಥದ್ದು. 15G ಫಾರ್ಮ್ ಎಲ್ಲರಿಗೂ ಅನ್ವಯ ಆಗುತ್ತದೆ. ಈ ಫಾರ್ಮ್ ಒಂದು ಹಣಕಾಸು ವರ್ಷಕ್ಕೆ ಮಾತ್ರ ಆಗುತ್ತದೆ. ಒಂದು ವೇಳೆ ನೀವು ಅರ್ಹರಿದ್ದಲ್ಲಿ ಪ್ರತಿ ವರ್ಷವೂ ಈ ಫಾರ್ಮ್ ಸಲ್ಲಿಸುತ್ತಲೇ ಇರಬೇಕು.
ಇದನ್ನೂ ಓದಿ: Covid- 19 PF Withdrawal: ಕೋವಿಡ್-19 ಕಾರಣಕ್ಕೆ ಎರಡನೇ ಬಾರಿಗೆ ಪಿಎಫ್ ವಿಥ್ಡ್ರಾ ಅವಕಾಶ; ಎಷ್ಟು, ಹೇಗೆ ಮಾಹಿತಿ ಇಲ್ಲಿದೆ
ಇದನ್ನೂ ಓದಿ: EPF account: ಇಪಿಎಫ್ ಖಾತೆ ವರ್ಗಾವಣೆ, ವಿಥ್ಡ್ರಾ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಸಂಗತಿಗಳಿವು
(If PF withdraws before completion of 5 years, there is deduction of TDS and tax. Know how to save TDS?)
Published On - 1:27 pm, Fri, 4 June 21