ವಾಷಿಂಗ್ಟನ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ಎರಡು ಆತ್ಮಾಹುತಿ ಬಾಂಬ್ ದಾಳಿಯ ಸದ್ದಿಗೆ ಅಮೆರಿಕದ ಷೇರುಪೇಟೆ ಕಂಪಿಸಿದೆ. ಅಮೆರಿಕದ ಪ್ರಮುಖ ಷೇರುಸಂವೇದಿ ಸೂಚ್ಯಂಕಗಳು ಇಳಿಕೆ ದಾಖಲಿಸಿದವು. ಬಹುತೇಕ ಟ್ರೇಡರ್ಗಳು ಕಾಬೂಲ್ ಸ್ಫೋಟದ ನಂತರ ತರಾತುರಿಯಲ್ಲಿ ಷೇರುಗಳ ಮಾರಾಟಕ್ಕೆ ಮುಂದಾಗಿದ್ದು ಕಂಡುಬಂತು.
ಅಮೆರಿಕದ ಕೇಂದ್ರೀಯ ಬ್ಯಾಂಕ್ನ ವಾರ್ಷಿಕ ಸಭೆ ಸಹ ಶೀಘ್ರದಲ್ಲಿಯೇ ನಡೆಯಲಿದ್ದು, ಹಣಕಾಸು ನಿಯಂತ್ರಣ ವಿಚಾರದಲ್ಲಿ ಇರುವ ಉದಾರ ನೀತಿ ಮುಂದಿನ ದಿನಗಳಲ್ಲಿ ಬಿಗಿಯಾಗಬಹುದು, ಬಾಂಡ್ ಖರೀದಿ ಯೋಜನೆಗೆ ನಿರ್ಬಂಧಗಳು ಜಾರಿಯಾಗಬಹುದು ಎಂದು ವಿಶ್ಲೇಷಿಸಲಾಗಿದೆ. ಷೇರುಪೇಟೆ ಕಳಾಹೀನವಾಗಲು ಇದೂ ಸಹ ಒಂದು ಕಾರಣ ಎಂದು ವಿಶ್ಲೇಷಿಸಲಾಗಿದೆ.
ಅಮೆರಿಕ ಕಾಲಮಾನ ಬೆಳಿಗ್ಗೆ 10.48ಕ್ಕೆ ಡೊ ಜೋನ್ಸ್ ಕೈಗಾರಿಕಾ ಸರಾಸರಿ ವಹಿವಾಟು 58.96 ಅಂಶ (ಶೇ 0.17) ಕುಸಿತ ಕಂಡು, 35,346.54ರಲ್ಲಿ ವಹಿವಾಟು ನಡೆಸುತ್ತಿತ್ತು. ಎಸ್ಅಂಡ್ಪಿ 500 17.12 ಅಂಶಗಳಷ್ಟು ಕುಸಿತ ಕಂಡು 4,479.07ರಲ್ಲಿ ವಹಿವಾಟು ನಡೆಸುತ್ತಿತ್ತು. ಪ್ರತಿಷ್ಠಿತ ನಾಸ್ಡಾಕ್ ಸಹ 56.33 ಅಂಶಗಳನ್ನು ಕಳೆದುಕೊಂಡು 14,985.53ರಲ್ಲಿ ವಹಿವಾಟು ನಡೆಸುತ್ತಿತ್ತು.
ಅಮೆರಿಕ ಮೂರೂ ಪ್ರಮುಖ ಸೂಚ್ಯಂಕಗಳು ಮುಂಜಾನೆ ಫ್ಲಾಟ್ ಆಗಿಯೇ ವಹಿವಾಟು ಆರಂಭಿಸಿದವು. ಕಾಬೂಲ್ ಸ್ಫೋಟದ ಸುದ್ದಿ ಅಪ್ಪಳಿಸುತ್ತಿದ್ದಂತೆಯೇ ಸೂಚ್ಯಂಕಗಳು ಇಳಿಕೆ ದಾಖಲಿಸಲು ಶುರು ಮಾಡಿದವು. ‘ಜಿಯೊ ಪಾಲಿಟಿಕ್ಸ್ ವಿದ್ಯಮಾನಗಳು ಸಾಮಾನ್ಯವಾಗಿ ಷೇರುಪೇಟೆಯಲ್ಲಿ ತೀವ್ರವಾಗಿ ಪ್ರಭಾವಿಸುವುದಿಲ್ಲ. ಆದರೆ ಅಭದ್ರತೆಯ ಭಾವನೆ ಮೂಡಿದಾಗ ಹೂಡಿಕೆದಾರರು ಹೀಗೆ ಪ್ರತಿಕ್ರಿಯಿಸುವುದು ಸಾಮಾನ್ಯ’ ಎಂದು ಅಮೆರಿಕದ ಫೈನಾನ್ಷಿಯಲ್ ರಿಸರ್ಚ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಾಂಡಿ ಫ್ರೆಡರಿಕ್ ವಿಶ್ಲೇಷಿಸಿದ್ದಾರೆ.
ಅಮೆರಿಕದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ನಿಯಂತ್ರಿಸಲು ಅಮೆರಿಕ ಫೆಡರಿಲ್ ರಿಸರ್ವ್ ಬಾಂಡ್ ಖರೀದಿ ಮಿತಿಯನ್ನು ತಿಂಗಳಿಗೆ 120 ಶತಕೋಟಿ ಡಾಲರ್ಗೆ ಸೀಮಿತಗೊಳಿಸಲು ಚಿಂತನೆ ನಡೆಸಿದೆ. ಈ ಸುದ್ದಿಯೂ ಅಮೆರಿಕ ಪೇಟೆಯ ವಹಿವಾಟನ್ನು ಪ್ರಭಾವಿಸಿದೆ.
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಗುರುವಾರ ಸಂಜೆ ಎರಡು ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, 13 ಜನರು ಸಾವನ್ನಪ್ಪಿ, 15 ಜನರು ಗಾಯಗೊಂಡಿದ್ದಾರೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕದ ನಾಗರಿಕರು ಮತ್ತು ಭದ್ರತಾ ಸಿಬ್ಬಂದಿ ಸಹ ಗಾಯಗೊಂಡಿದ್ದಾರೆ.
(Impact of Kabul blast wall street of America hits session low traders panic)
ಇದನ್ನೂ ಓದಿ: Kabul Blast: 2 ಆತ್ಮಾಹುತಿ ದಾಳಿಯಲ್ಲಿ 13 ಸಾವು, 15 ಮಂದಿಗೆ ಗಾಯಗೊಂಡಿದ್ದಾರೆ ಎಂದ ರಷ್ಯಾ
Published On - 10:13 pm, Thu, 26 August 21