AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hallmark: ಕಷ್ಟದ ಹಾಲ್​ಮಾರ್ಕಿಂಗ್ ಪ್ರಕ್ರಿಯೆ, ದಂಡದ ತೂಗುಗತ್ತಿ: ದೇಶವ್ಯಾಪಿ ಆಭರಣ ತಯಾರಕರು ಮುಷ್ಕರಕ್ಕೆ ಮುಂದಾಗಿರುವುದು ಏಕೆ?

ಚಿನ್ನದ ಆಭರಣ ತಯಾರಕರು ಸೋಮವಾರ ದೇಶಾದ್ಯಂತ ಸಾಂಕೇತಿಕ ಮುಷ್ಕರ ನಡೆಸುವುದಾಗಿ ಘೋಷಿಸಿದ್ದಾರೆ.

Hallmark: ಕಷ್ಟದ ಹಾಲ್​ಮಾರ್ಕಿಂಗ್ ಪ್ರಕ್ರಿಯೆ, ದಂಡದ ತೂಗುಗತ್ತಿ: ದೇಶವ್ಯಾಪಿ ಆಭರಣ ತಯಾರಕರು ಮುಷ್ಕರಕ್ಕೆ ಮುಂದಾಗಿರುವುದು ಏಕೆ?
ಚಿನ್ನಾಭರಣ (ಪ್ರಾತಿನಿಧಿಕ ಚಿತ್ರ)
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Aug 22, 2021 | 7:43 PM

Share

ಬೆಂಗಳೂರು: ಚಿನ್ನದ ಆಭರಣ ತಯಾರಕರು ಸೋಮವಾರ ದೇಶಾದ್ಯಂತ ಸಾಂಕೇತಿಕ ಮುಷ್ಕರ ನಡೆಸುವುದಾಗಿ ಘೋಷಿಸಿದ್ದಾರೆ. ಭಾರತೀಯ ಮಾನಕಗಳ ಸಂಸ್ಥೆಯು (Bureau of Indian Standards – BIS) ಏಕಪಕ್ಷೀಯವಾಗಿ ಚಿನ್ನದ ಪರಿಶುದ್ಧತೆ ಖಾತ್ರಿಪಡಿಸುವ ಹಾಲ್​ಮಾರ್ಕಿಂಗ್ ಕಡ್ಡಾಯಗೊಳಿಸುವುದನ್ನು ಖಂಡಿಸಿ ನಮ್ಮ ಪ್ರತಿಭಟನೆ ದಾಖಲಿಸುತ್ತಿದ್ದೇವೆ ಎಂದು ದೇಶದ ವಿವಿಧ ರಾಜ್ಯಗಳಲ್ಲಿ ಇರುವ 350ಕ್ಕೂ ಹೆಚ್ಚು ಚಿನ್ನಾಭರಣ ತಯಾರಕರ ಸಂಘಟನೆಗಳು ಹೇಳಿವೆ.

ಹೊಸ ಹಾಲ್​ಮಾರ್ಕಿಂಗ್​ ನಿಯಮಗಳ ಪ್ರಕಾರ ಚಿನ್ನಾಭರಣ ತಯಾರಕರು ಕೇವಲ 14, 18 ಮತ್ತು 22 ಕ್ಯಾರಟ್ ಚಿನ್ನವನ್ನು ಮಾತ್ರ ಮಾರಾಟ ಮಾಡಲು ಅವಕಾಶವಿದೆ. ಎಲ್ಲ ಬಗೆಯ ಚಿನ್ನಾಭರಣಗಳಿಗೂ ಹಾಲ್​ಮಾರ್ಕಿಂಗ್ ಕಡ್ಡಾಯವಾಗಿರುತ್ತದೆ. ಒಂದು ವೇಳೆ ಹಾಲ್​ಮಾರ್ಕ್ ಮಾಡಿರದಿದ್ದರೆ ಆಭರಣ ಮೊತ್ತದ ಐದು ಪಟ್ಟು ದಂಡ ಅಥವಾ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿರುತ್ತದೆ.

ಚಿನ್ನದ ಶುದ್ಧತೆ ಮತ್ತು ಗುಣಮಟ್ಟವನ್ನು ಖಾತ್ರಿಪಡಿಸಬೇಕಾದ ಸಂಸ್ಥೆಯಾದ ಬಿಐಎಸ್ ತೆರಿಗೆ ಇಲಾಖೆಯ ಕೆಲಸ ಮಾಡುತ್ತಿದೆ. ಚಿನ್ನ ಮತ್ತು ವಜ್ರದ ವ್ಯಾಪಾರ ಉದ್ಯಮ ಅವರ ಪಾಲಿಗೆ ಸುಲಭದ ಗುರಿಯಾಗಿದೆ. ಈ ಸಮಸ್ಯೆ ಇಂದಲ್ಲದಿದ್ದರೆ ನಾಳೆ ಸರಿಯಾಗಬಹುದು ಎಂದು ಎರಡು ತಿಂಗಳುಗಳಿಂದ ಚಿನ್ನಾಭರಣ ತಯಾರಕರು ಕಾಯುತ್ತಿದ್ದರು. ಆದರೆ, ಸಂಕೀರ್ಣ ನಿಯಮಗಳಿಂದಾಗಿ ಉದ್ಯಮವೇ ಕುಸಿಯುವ ಭೀತಿ ಇದೀಗ ಎದುರಾಗಿದೆ ಎಂದು ಚಿನ್ನ ಮತ್ತು ವಜ್ರದ ವ್ಯಾಪಾರಿಗಳ 300ಕ್ಕೂ ಹೆಚ್ಚು ಸಂಘಟನೆಗಳ ಒಕ್ಕೂಟ ‘ನ್ಯಾಷನಲ್ ಟಾಸ್ಕ್​ ಫೋರ್ಸ್​’ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಹಾಲ್​ಮಾರ್ಕಿಂಗ್ ಕಡ್ಡಾಯಗೊಳಿಸುವ ಬಗ್ಗೆ ಚಿನ್ನಾಭರಣ ವ್ಯಾಪಾರಿಗಳಿಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಹಾಲ್​ಮಾರ್ಕಿಂಗ್ ಪ್ರಕ್ರಿಯೆನ್ನು ಸಂಕೀರ್ಣಗೊಳಿಸಿರುವ ಬಗ್ಗೆ ಅವರಿಗೆ ಅಸಮಾಧಾನವಿದೆ ಎಂದು ಹೇಳಿಕೆಯು ತಿಳಿಸಿದೆ.

Gold-Hallmarking

ಹಾಲ್​ಮಾರ್ಕಿಂಗ್ ಈಗ ಕಡ್ಡಾಯ

ಏನಿದು ವಿವಾದ? ಹಾಲ್​ಮಾರ್ಕಿಂಗ್​ಗೆ ಅನುಸರಿಸುವ ಪ್ರಕ್ರಿಯೆಯಲ್ಲಿ ಹಲವು ಸಮಸ್ಯೆಗಳಿವೆ ಎಂದು ಪತ್ರಿಕಾ ಹೇಳಿಕೆಯು ಪ್ರತಿಪಾದಿಸಿದೆ. ಈ ಮೊದಲೂ ಅವರು (ಹಾಲ್​ಮಾರ್ಕಿಂಗ್​ ಕೇಂದ್ರಗಳು) ಒಂದು ಲಾಟ್​ನಿಂದ ಒಂದು ಆಭರಣ ಹೊರತೆಗೆದು, ಉಜ್ಜಿ, ಕತ್ತರಿಸಿ, ಕರಗಿಸಿ ಲೋಹದ ಶುದ್ಧತೆಯನ್ನು ಪರಿಶೀಲಿಸುತ್ತಿದ್ದರು. ಇದೀಗ ಹೊಸ ನಿಯಮಗಳ ಪ್ರಕಾರ ಪ್ರತಿ ಆಭರಣಗಳಿಗೂ ಹಾಲ್​ಮಾರ್ಕಿಂಗ್​ನ ವಿಶಿಷ್ಟ ಸಂಖ್ಯೆ (Hallmarking Unique ID – HUID) ನೀಡಲಾಗುತ್ತದೆ. ಎಲ್ಲ ಪ್ರಕ್ರಿಯೆಗಳೂ ಮೊದಲಿನಂತೆಯೇ ಇವೆ. ಆದರೆ ಆದರೆ ಚಿನ್ನಾಭರಣ ತಯಾರಕರು ಪೋರ್ಟಲ್​ನಲ್ಲಿ ಆಭರಣಗಳ ತೂಕ ಸೇರಿದಂತೆ ಇತರ ವಿವರಗಳನ್ನು ಅಪ್​ಡೇಟ್ ಮಾಡಿ ಹಾಲ್​ಮಾರ್ಕ್​ ಕೇಂದ್ರಗಳಿಗೆ ಕಳುಹಿಸಿಕೊಡಬೇಕಾಗುತ್ತದೆ. ಇದೊಂದು ಸಂಕೀರ್ಣ ಪ್ರಕ್ರಿಯೆಯಾಗಿದೆ ಎಂದು ವಜ್ರ ಮತ್ತು ಚಿನ್ನಾಭರಣ ಕೌಶಲ ಮಂಡಳಿಯ ನಿರ್ದೇಶಕ ದಿನೇಶ್ ಜೈನ್ ಪ್ರತಿಕ್ರಿಯಿಸಿದ್ದಾರೆ.

ದೊಡ್ಡ ಮತ್ತು ಮಧ್ಯಮ ಗಾತ್ರದ ಆಭರಣ ವ್ಯಾಪಾರಿಗಳಿಗೆ ಈ ಪ್ರಕ್ರಿಯೆ ನಿರ್ವಹಿಸುವುದು ಸುಲಭ. ಆದರೆ ಗ್ರಾಮೀಣ ಪ್ರದೇಶದ ಚಿನ್ನಾಭರಣ ತಯಾರಕರ ಬಳಿ ಕಂಪ್ಯೂಟರ್​ಗಳಿಲ್ಲ. ಅವರಿಗೆ ಈ ನಿಯಮ ಪಾಲನೆ ಕಷ್ಟವಾಗುತ್ತಿದೆ ಎನ್ನುತ್ತಾರೆ ಅವರು.

‘ಹಾಲ್​ಮಾರ್ಕಿಂಗ್ ಮಾಡಬೇಕು. ಆದರೆ ಯುಐಡಿ ಹೆಸರಿನಲ್ಲಿ ನಮ್ಮನ್ನು ಗುಮಾಸ್ತರನ್ನಾಗಿಸಿದ್ದಾರೆ. ಈ ಪ್ರಕ್ರಿಯೆಗೆ ಐದಾರು ದಿನಗಳು ಬೇಕಾಗುತ್ತವೆ. ಅಷ್ಟೂ ದಿನಗಳ ಅವಧಿಗೆ ನಮ್ಮ ಉತ್ಪನ್ನಗಳು ಮಾರಾಟವಾಗುವುದಿಲ್ಲ’ ಎಂದು ಅಖಿಲ ಭಾರತ ಚಿನ್ನಾಭರಣ ವರ್ತಕರ ಒಕ್ಕೂಟದ ಅಧ್ಯಕ್ಷ ಯೋಗೇಶ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.

ಹಾಲ್​ಮಾರ್ಕಿಂಗ್ ಪ್ರಕ್ರಿಯೆಯಲ್ಲಿ ಹಲವು ಲೋಪಗಳು ವರದಿಯಾಗುತ್ತಿವೆ. ಒಂದೇ ಉತ್ಪನ್ನಕ್ಕೆ ಎರಡು ಐಡಿಗಳು ಅಥವಾ ಒಂದೆ ಐಡಿಯನ್ನು ಹಲವು ಉತ್ಪನ್ನಗಳಿಗೆ ನೀಡಿರುವ ಉದಾಹರಣೆಗಳೂ ಇವೆ. ದೇಶದಲ್ಲಿ ಹಾಲ್​ಮಾರ್ಕಿಂಗ್​ ಕೇಂದ್ರಗಳ ಸಂಖ್ಯೆ ಸೀಮಿತ ಸಂಖ್ಯೆಯಲ್ಲಿರುವುದು ಮತ್ತೊಂದು ಸಮಸ್ಯೆ ಎನಿಸಿದೆ ಎಂದು ಅವರು ವಿಷಾದಿಸುತ್ತಾರೆ.

ಭಾರತೀಯ ಮಾನಕ ಸಂಸ್ಥೆಯು (ಬಿಐಎಸ್) ಈ ವ್ಯವಸ್ಥೆಯನ್ನು ಪ್ರಬಲವಾಗಿ ಸಮರ್ಥಿಸಿಕೊಂಡಿದೆ. ‘ಇದು ಎಲ್ಲರೂ ಗೆಲ್ಲುವ ಸಾಧ್ಯತೆಯನ್ನು ಮುಕ್ತವಾಗಿರಿಸಿರುವ ಅವಕಾಶ. ಗ್ರಾಹಕರ ಹಿತಾಸಕ್ತಿ ಸಂರಕ್ಷಿಸುವ ಜೊತೆಗೆ ಚಿನ್ನಾಭರಣ ವ್ಯಾಪಾರಿಗಳಿಗೂ ಹಲವು ತೊಡಕುಗಳಲ್ಲಿ ಸಿಲುಕುವುದನ್ನು ತಪ್ಪಿಸುತ್ತದೆ. ಹಾಲ್​ಮಾರ್ಕಿಂಗ್ ವ್ಯವಸ್ಥೆ ಸದೃಢವಾಗಿದೆ’ ಎಂದು ಬಿಐಎಸ್​ನ ಮಹಾ ನಿರ್ದೇಶಕ ಪ್ರಮೋದ್ ಕುಮಾರ್ ತಿವಾರಿ ತಿಳಿಸುತ್ತಾರೆ.

(Jewelers Across India Call for a Token Strike tomorrow to Oppose Complex Hallmarking Procedure)

ಇದನ್ನೂ ಓದಿ: Gold Price: 1950ರಲ್ಲಿ 10 ಗ್ರಾಮ್​ಗೆ 99 ರೂಪಾಯಿ ಇದ್ದ ಚಿನ್ನದ ದರ ಪ್ರತಿ ಹತ್ತು ವರ್ಷದಂತೆ ಎಷ್ಟು ಏರಿಕೆ ಆಗಿದೆ ಗೊತ್ತಾ?

ಇದನ್ನೂ ಓದಿ: Gold investments: ಭಾರತದ ಯುವಜನತೆಗೆ ಚಿನ್ನದ ಹೂಡಿಕೆ ಮೇಲಿನ ವ್ಯಾಮೋಹ ಉಳಿದಿದೆಯಾ?