Petrol price: ಅಮೆರಿಕದ ದುಬಾರಿ ನಗರ ನ್ಯೂಯಾರ್ಕ್​​ಗಿಂತ ಮುಂಬೈನಲ್ಲಿ ಪೆಟ್ರೋಲ್ ರೇಟ್ ಹತ್ತಿರಹತ್ತಿರ ಡಬ್ಕುಡಬಲ್

| Updated By: Srinivas Mata

Updated on: Jun 01, 2021 | 8:18 PM

ಭಾರತದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ ದರ 100 ರೂಪಾಯಿ ದಾಟಿಹೋಗಿದೆ. ವಿಶ್ವದ ಅತ್ಯಂತ ದುಬಾರಿ ನಗರಗಳಲ್ಲಿ ಒಂದಾದ ಅಮೆರಿಕದ ನ್ಯೂಯಾರ್ಕ್​ಗೆ ಹೋಲಿಸಿದರೆ ಮುಂಬೈನಲ್ಲಿ ಪೆಟ್ರೋಲ್ ದರ ಹತ್ತಿರತ್ತಿರ ಡಬಲ್ ಆಗಿದೆ.

Petrol price: ಅಮೆರಿಕದ ದುಬಾರಿ ನಗರ ನ್ಯೂಯಾರ್ಕ್​​ಗಿಂತ ಮುಂಬೈನಲ್ಲಿ ಪೆಟ್ರೋಲ್ ರೇಟ್ ಹತ್ತಿರಹತ್ತಿರ ಡಬ್ಕುಡಬಲ್
ಸಾಂದರ್ಭಿಕ ಚಿತ್ರ
Follow us on

ಭಾರತದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್ ದರ ಲೀಟರ್​ಗೆ 100 ರೂಪಾಯಿ ದಾಟಿದೆ. ಇದು ದೇಶದಲ್ಲೇ ಅತಿ ಹೆಚ್ಚಿನ ದರವಾಗಿದೆ. ನಿಮಗೆ ಗೊತ್ತಿರಲಿ ವಿಶ್ವದ ದುಬಾರಿ ನಗರಗಳಲ್ಲಿ ಒಂದು ಎನಿಸಿಕೊಂಡಿರುವ ನ್ಯೂಯಾರ್ಕ್​ಗಿಂತಲೂ ಮುಂಬೈನಲ್ಲಿ ಪೆಟ್ರೋಲ್ ದರ ಹತ್ತಿರಹತ್ತಿರ ಡಬಲ್ ಇದೆ. ಮುಂಬೈನಲ್ಲಿ ಪೆಟ್ರೋಲ್ ಚಿಲ್ಲರೆ (ರೀಟೇಲ್) ಮಾರಾಟ ದರ ಈ ವರ್ಷದಲ್ಲೇ (2021ರಲ್ಲಿ) ಶೇ 11ರಷ್ಟು ಏರಿಕೆ ಕಂಡು, ಮಂಗಳವಾರಂದು (ಜೂನ್ 1, 2021) ಒಂದು ಲೀಟರ್​ಗೆ ರೂ. 100.72 (1.39 ಅಮೆರಿಕನ್ ಡಾಲರ್) ತಲುಪಿದೆ ಎಂಬುದನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್​ನ ಅಂಕಿ-ಅಂಶಗಳು ತೆರೆದಿಟ್ಟಿವೆ. ಇದೇ ರೀತಿ ಅಮೆರಿಕದ ವಾಣಿಜ್ಯ ರಾಜಧಾನಿ ನ್ಯೂಯಾರ್ಕ್​ನಲ್ಲಿ ಒಂದು ಲೀಟರ್​ ಪೆಟ್ರೋಲ್​ ಎಷ್ಟು ಗೊತ್ತಾ? 0.79 ಸೆಂಟ್ಸ್. ಅಂದರೆ ಒಂದು ಡಾಲರ್​ಗೆ 100 ಸೆಂಟ್ಸ್. ಇವತ್ತಿನ ಲೆಕ್ಕಕ್ಕೆ ಭಾರತದ ರೂಪಾಯಿಯಲ್ಲಿ 57.54 ಆಗುತ್ತದೆ.

ನ್ಯೂಯಾರ್ಕ್ ಸ್ಟೇಟ್ ಎನರ್ಜಿ ರೀಸರ್ಚ್ ಅಂಡ್ ಡೆವಲಪ್​ಮೆಂಟ್ ಅಥಾರಿಟಿಯ ಅಂಕಿ- ಅಂಶವನ್ನು ಆಧರಿಸಿ, ಬ್ಲೂಮ್​ಬರ್ಗ್​ನಿಂದ ಲೆಕ್ಕಾಚಾರ ಮುಂದಿಡಲಾಗಿದೆ. ಸಾರ್ವಜನಿಕ ಹಣಕಾಸು ವ್ಯವಸ್ಥೆ ಹಳಿ ತಪ್ಪಿದ ಮೇಲೆ ಅದನ್ನು ಸರಿತೂಗಿಸುವ ಕಾರಣಕ್ಕೆ ಭಾರತದಲ್ಲಿ ಕೇಂದ್ರ ಸರ್ಕಾರದಿಂದ ತೈಲದ ಮೇಲೆ ಪದೇಪದೇ ಮಾರಾಟ ತೆರಿಗೆಯನ್ನು ಏರಿಸಲಾಯಿತು. ಈಗ ಪರಿಸ್ಥಿತಿ ಹೇಗಿದೆ ಅಂದರೆ, ಪೆಟ್ರೋಲ್​ನ ಒಟ್ಟು ಚಿಲ್ಲರೆ ದರದಲ್ಲಿ ಶೇ 60ರಷ್ಟು ಸುಂಕಗಳಿಗೆ ಹೋಗುತ್ತದೆ. 2013ರಿಂದ ಈಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕವು ಭಾರತದಲ್ಲಿ ಹತ್ತಿರಹತ್ತಿರ ಆರು ಪಟ್ಟು ಹೆಚ್ಚಾಗಿದೆ.

ಭಾರತದಲ್ಲಿ ಒಟ್ಟಾರೆ ಎಲ್ಲ ಇಂಧನವನ್ನು ಸೇರಿ ನೋಡಿದಾಗ ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಪ್ರಮಾಣವು ಅರ್ಧಕ್ಕಿಂತ ಹೆಚ್ಚಾಗಿದೆ. ಆದರೆ ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ತೈಲ ಆಮದು ದೇಶವಾದ ಭಾರತದಲ್ಲಿ ಕೋವಿಡ್- 19 ಹಿನ್ನೆಲೆಯಲ್ಲಿ ಬೇಡಿಕೆ ಕಡಿಮೆ ಆಗಿದೆ. ಮೇ ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಪ್ರಮಾಣವು ಕೊರೊನಾ ಬಿಕ್ಕಟ್ಟಿನ ಹಿಂದಿನ 2019ರಿಂದ ಈಚೆಗೆ ನೋಡಿದರೆ ಶೇ 33ಕ್ಕಿಂತ ಕಡಿಮೆ ಇದೆ. ಏಕೆಂದರೆ ದೇಶದ ಬಹುತೇಕ ಕಡೆ ಲಾಕ್​ಡೌನ್ ಪರಿಣಾಮ ಗಂಭೀರವಾಗಿ ಆಗಿದೆ.

ಬೆಲೆ ಕಡಿಮೆ ಆಗಲಿ ಅಥವಾ ಸರ್ಕಾರದಿಂದ ತೆರಿಗೆ ಕಡಿಮೆ ಮಾಡಲಿ ಎಂದು ಪ್ರಾರ್ಥಿಸ್ತೀನಿ. ಆದರೆ ನಮಗೆ ರೀಟೇಲ್ ಪೆಟ್ರೋಲ್ ದರ ಏರಿಕೆ ಮಾಡದೆ ಬೇರೆ ಆಯ್ಕೆಗಳು ಇಲ್ಲ ಎಂದು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಹಣಕಾಸು ನಿರ್ದೇಶಕ ಎನ್​. ವಿಜಯ್​ಗೋಪಾಲ್ ಹೇಳಿದ್ದಾರೆ. ಈ ಬಗ್ಗೆ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಇದನ್ನೂ ಓದಿ: ಅಮೆರಿಕದಲ್ಲಿ 7 ವರ್ಷಗಳ ಗರಿಷ್ಠ ಮಟ್ಟ ತಲುಪುತ್ತಿದೆ ಇಂಧನದ ಬೆಲೆ; ಭಾರತಕ್ಕೆ ಹೋಲಿಸಿದರೆ ಎಷ್ಟು ವ್ಯತ್ಯಾಸ ಗೊತ್ತಾ?

(Petrol price in Mumbai almost double when compare to America’s New York city gasoline rate. Here is the comparison)

Published On - 8:15 pm, Tue, 1 June 21