10X10 ಪುಟ್ಟ ರೂಮ್​ನಲ್ಲಿದ್ದ ಆತ, ಇಂದು 1000 ಕೋಟಿ ರೂ. ಒಡೆಯ! ಯಾರದು?

ಬದುಕಲ್ಲಿ ಯಶಸ್ಸಿನ ಹಾದಿ ಬಲು ದುರ್ಗಮ. ಆದರೆ, ಸಾಧಿಸುವ ಛಲವೊಂದಿದ್ದರೆ ಎಂಥದ್ದೇ ಕಠಿಣ ಪರಿಸ್ಥಿತಿಯನ್ನ ಎದುರಿಸಿ ಗೆಲ್ಲಬಹುದು. ಇದಕ್ಕೆ ತಕ್ಕ ಉದಾಹರಣೆ ಹನುಮಂತ್​ ರಾಮದಾಸ್​ ಗಾಯ​ಕ್​ವಾಡ್​. 10×10 ವಿಸ್ತೀರ್ಣದ ಪುಟ್ಟ ರೂಮ್​ನ ಬಾಡಿಗೆದಾರನಾಗಿದ್ದ ಈತ ಇದೀಗ 1,000 ಕೋಟಿ ಮೌಲ್ಯದ ಕಂಪನಿಯ ಒಡೆಯ. ಈತನ ಯಶೋಗಾಥೆಯೇ ಬಲು ರೋಚಕ. ಮೂಲತಃ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕೋರೆಗಾವ್​ ಗ್ರಾಮದವರಾದ ಹನುಮಂತ್​ ಗಾಯಕ್​ವಾಡ್ ತೀರ ಬಡಕುಟುಂಬದಲ್ಲಿ ಜನಿಸಿದವರು. ಸ್ಥಳೀಯ ಕೋರ್ಟ್​ನಲ್ಲಿ ಗುಮಾಸ್ತನಾಗಿದ್ದ ತಂದೆಯ ಸಂಬಳದಲ್ಲೇ ಕುಟುಂಬ ಬದುಕು ಸಾಗಿಸಬೇಕಿತ್ತು. ಆದರೆ, […]

10X10 ಪುಟ್ಟ ರೂಮ್​ನಲ್ಲಿದ್ದ ಆತ, ಇಂದು 1000 ಕೋಟಿ ರೂ. ಒಡೆಯ! ಯಾರದು?
Follow us
KUSHAL V
| Updated By: ಆಯೇಷಾ ಬಾನು

Updated on:Nov 23, 2020 | 11:51 AM

ಬದುಕಲ್ಲಿ ಯಶಸ್ಸಿನ ಹಾದಿ ಬಲು ದುರ್ಗಮ. ಆದರೆ, ಸಾಧಿಸುವ ಛಲವೊಂದಿದ್ದರೆ ಎಂಥದ್ದೇ ಕಠಿಣ ಪರಿಸ್ಥಿತಿಯನ್ನ ಎದುರಿಸಿ ಗೆಲ್ಲಬಹುದು. ಇದಕ್ಕೆ ತಕ್ಕ ಉದಾಹರಣೆ ಹನುಮಂತ್​ ರಾಮದಾಸ್​ ಗಾಯ​ಕ್​ವಾಡ್​. 10×10 ವಿಸ್ತೀರ್ಣದ ಪುಟ್ಟ ರೂಮ್​ನ ಬಾಡಿಗೆದಾರನಾಗಿದ್ದ ಈತ ಇದೀಗ 1,000 ಕೋಟಿ ಮೌಲ್ಯದ ಕಂಪನಿಯ ಒಡೆಯ. ಈತನ ಯಶೋಗಾಥೆಯೇ ಬಲು ರೋಚಕ.

ಮೂಲತಃ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕೋರೆಗಾವ್​ ಗ್ರಾಮದವರಾದ ಹನುಮಂತ್​ ಗಾಯಕ್​ವಾಡ್ ತೀರ ಬಡಕುಟುಂಬದಲ್ಲಿ ಜನಿಸಿದವರು. ಸ್ಥಳೀಯ ಕೋರ್ಟ್​ನಲ್ಲಿ ಗುಮಾಸ್ತನಾಗಿದ್ದ ತಂದೆಯ ಸಂಬಳದಲ್ಲೇ ಕುಟುಂಬ ಬದುಕು ಸಾಗಿಸಬೇಕಿತ್ತು. ಆದರೆ, ಮಗನ ಓದಿನ ಮೇಲೆ ಇದರ ಪರಿಣಾಮ ಬೀರದಂತೆ ಹನುಮಂತ್​ ತಂದೆ ನೋಡಿಕೊಂಡರು.

10X10 ರೂಮ್​ನಲ್ಲೇ ಬದುಕು ಸಾಗಿಸಿದ ಕುಟುಂಬ ಅಂತೆಯೇ ಹನುಮಂತ್​ ಕೂಡ ಒಳ್ಳೆಯ ವಿದ್ಯಾರ್ಥಿಯಾಗಿದ್ದು ಶಿಷ್ಯವೇತನ ಗಿಟ್ಟಿಸಿಕೊಂಡು ತಂದೆಯ ಮೇಲೆ ಆರ್ಥಿಕ ಹೊರೆಯನ್ನ ಕಡಿಮೆ ಮಾಡಿದ್ದರು. 10X10 ವಿಸ್ತೀರ್ಣದ, ಕರೆಂಟ್​ ಸೌಕರ್ಯ ಇಲ್ಲದ ಪುಟ್ಟ ರೂಮ್​ನಲ್ಲಿ ಇಡೀ ಕುಟುಂಬ ವಾಸವಿದ್ದರೂ ಅವರಿಗೆ ಅದೇ ಸ್ವರ್ಗ. ಆದರೆ, ಅದೃಷ್ಟ ಅವರ ಕೈ ಹಿಡಿಯಲಿಲ್ಲ.

ಕೆಲಸದ ನಿಮಿತ್ತ ಗಾಯಕ್​ವಾಡ್​ ತಂದೆಗೆ ಮುಂಬೈಗೆ ವರ್ಗಾವಣೆಯಾಯ್ತು. ಆದರೆ, ಅಲ್ಲಿನ ಹವಾಮಾನಕ್ಕೆ ಒಗ್ಗದ ಅವರ ತಂದೆ ಬಲು ಬೇಗ ಕಾಯಿಲೆಗ್ರಸ್ಥರಾಗಿ ಕೊನೆಯುಸಿರೆಳೆದರು. ಆಧಾರಸ್ತಂಭವನ್ನೇ ಕಳೆದುಕೊಂಡ ಕುಟುಂಬದ ಪರಿಸ್ಥಿತಿ ದುಸ್ತರವಾಯ್ತು. ಆದರೆ ಇದ್ಯಾವುದಕ್ಕೂ ಎದೆಗುಂದದ ಹನುಮಂತ್​ ಛಲಬಿಡದೆ ಓದು ಮುಂದುವರೆಸಿದರು.

ಮಕ್ಕಳಿಗೆ ಟ್ಯೂಷನ್​ ಕಲಿಸಿ ಹಾಗೂ ತಮ್ಮ ತಾಯಿ ಹೊಲಿದ ಬಟ್ಟೆಗಳನ್ನ ಮಾರಿ ಬಂದ ಹಣದಲ್ಲೇ ಇಂಜಿನಿಯರಿಂಗ್​ ಪದವಿ ಗಳಿಸಿದರು. ನಂತರ 1994ನಲ್ಲಿ ಪುಣೆಯ ಟಾಟಾ ಮೋಟರ್ಸ್​ನಲ್ಲಿ ಟ್ರೈನಿಯಾಗಿ ಸೇರಿಕೊಂಡ ಹನುಮಂತ್​ ತಮ್ಮ ಶ್ರದ್ಧೆ ಹಾಗೂ ನಿಷ್ಠೆಯಿಂದ ಬಹುಬೇಗ ಕಂಪನಿಯಲ್ಲಿ ಗುರುತಿಸಿಕೊಂಡರು.

ಛಲವಾದಿಗೆ ದೊರಕಿತು ಟಾಟಾ ಸಂಸ್ಥೆಯ ನೆರವು ಈ ಮಧ್ಯೆ ಅವರ ಗ್ರಾಮಸ್ಥರು ಟಾಟಾ ಕಂಪನಿಯಲ್ಲಿ ನೌಕರಿ ಕೊಡಿಸಲು ಮನವಿ ಮಾಡಲಾರಂಭಿಸಿದರು. ಆದರೆ, ಕಂಪನಿಯ ನಿಯಮಾವಳಿಯಿಂದ ಅದು ಸಾಧ್ಯವಾಗಲಿಲ್ಲ. ಹೀಗಾಗಿ, ತಾನೇ ಯಾಕೆ ಇವರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡಬಾರದು ಎಂಬ ಆಲೋಚನೆ ಹುಟ್ಟಿತು. ಇವರ ಈ ಯೋಚನೆಗೆ ಸಾಥ್​ ನೀಡಿದ ಟಾಟಾ ಮೋಟರ್ಸ್​ ತಮ್ಮದೇ ಫೈನಾನ್ಸ್​ ಸಂಸ್ಥೆಯಿಂದ 60 ಲಕ್ಷ ರೂಪಾಯಿ ಸಾಲ ಸಹ ಕೊಡಿಸಿತು. ಅಲ್ಲಿಂದ ಶುರುವಾಯ್ತು ಹನುಮಂತ್​ರ ಯಶೋಮಾರ್ಗ. 65 ಸಾವಿರ ಜನರಿಗೆ ಉದ್ಯೋಗಾವಕಾಶ 2000ದಲ್ಲಿ ಭಾರತ್​ ವಿಕಾಸ್​ ಪ್ರತಿಷ್ಠಾನ ಎಂಬ ಸಂಸ್ಥೆಯನ್ನ ಹುಟ್ಟುಹಾಕಿದ ಹನುಮಂತ್​ ಯುವಕರಲ್ಲಿ ಕೌಶಲ್ಯಾಭಿವೃದ್ಧಿಗೆ ಪೂರಕವಾಗುವಂಥ ವ್ಯವಸ್ಥೆ ಕಲ್ಪಿಸಿದರು. ಕೇವಲ 8 ಸಿಬ್ಬಂದಿಯಿಂದ ಶುರುವಾದ ಸಂಸ್ಥೆ ಇದೀಗ ಸುಮಾರು 65 ಸಾವಿರ ಜನಕ್ಕೆ ಉದ್ಯೋಗ ನೀಡಿದೆ.

700 ಕಸ್ಟಮರ್​ಗಳನ್ನು ಹೊಂದಿರುವ ಭಾರತ್​ ವಿಕಾಸ್​ ಗ್ರೂಪ್​ ಇದೀಗ ರಾಷ್ಟ್ರಪತಿ ಭವನ, ಲೋಕಸಭೆ, ಪ್ರಧಾನಿ ಮೋದಿ ನಿವಾಸ ಸೇರಿದಂತೆ ಹಲವಾರು ಸರ್ಕಾರಿ ಸಂಸ್ಥೆಗಳ ನಿರ್ವಹಣೆ ಮತ್ತು ಹೌಸ್​ಕೀಪಿಂಗ್​ನ ಗುತ್ತಿಗೆ ಪಡೆದಿದೆ. ಜೊತೆಗೆ ಏಷಿಯಾದಲ್ಲೇ ಅತಿ ದೊಡ್ಡ ತುರ್ತು ವೈದ್ಯಕೀಯ ಸೇವೆ ಒದಗಿಸುವ ಕಂಪನಿಯೆಂಬ ಖ್ಯಾತಿ ಸಹ ಪಡೆದಿದೆ.

ಅಂದ ಹಾಗೆ, ತನ್ನ ಸ್ವಂತ ಪರಿಶ್ರಮದಿಂದ ಇಷ್ಟೆಲ್ಲಾ ಗಳಿಸಿರುವ ಹನುಮಂತ್​ ಗಾಯಕ್​ವಾಡ್​ರ ಕಂಪನಿಯ ನಿವ್ವಳ ಮೌಲ್ಯ ಎಷ್ಟು ಗೊತ್ತಾ? ಬರೋಬ್ಬರಿ 1,000 ಕೋಟಿ ರೂಪಾಯಿಗಳು.

Published On - 4:54 pm, Wed, 15 July 20