Tata Tigor EV: ಎಲೆಕ್ಟ್ರಿಕ್ ಕಾರು ಪರಿಚಯಿಸಿದ ಟಾಟಾ: ಮೈಲೇಜ್ ಬರೋಬ್ಬರಿ 212 ಕಿ.ಮೀ
Tata Motors electric car Tigor EV: ಟಾಟಾ ಟಿಗೋರ್ ಇವಿಯಲ್ಲೂ ನೆಕ್ಸಾನ್ ಕಾರಿನಲ್ಲಿ ಬಳಸಲಾದ ಜಿಪ್‌ಟ್ರಾನ್ ಪವರ್‌ಟ್ರೇನ್ ಬಳಸಿರುವುದು ಮತ್ತೊಂದು ವಿಶೇಷ.
Updated on: Aug 18, 2021 | 9:00 PM

ಟಾಟಾ ಮೋಟಾರ್ಸ್ ತನ್ನ ಎರಡನೇ ಎಲೆಕ್ಟ್ರಿಕ್ ಕಾರು ಟಿಗೋರ್ ಇವಿ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೊಸ ಟಿಗೋರ್ XE ವೇರಿಯೆಂಟ್ನಿಂದ ಆರಂಭವಾಗುತ್ತಿದ್ದು, ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಅದರಂತೆ ಗ್ರಾಹಕರು XE, XM, XZ+ ಮತ್ತು XZ+ ಡ್ಯುಯಲ್ ಟೋನ್ ಟ್ರಿಮ್‌ಗಳಲ್ಲಿ ಈ ಕಾರನ್ನು ಖರೀದಿಸ ಬಹುದಾಗಿದೆ. ಇಲ್ಲಿ ಅಪ್ಗ್ರೇಡ್ ಆಯ್ಕೆಯಂತೆ ಬೆಲೆಯಲ್ಲೂ ಬದಲಾವಣೆ ಕಂಡು ಬರಲಿದೆ.

ಟಾಟಾ ಟಿಗೊರ್ನಲ್ಲಿ ಜಿಪ್ಟ್ರಾನ್ ತಂತ್ರಜ್ಞಾನವನ್ನು ಬಳಸಲಾಗಿದೆ. ಅದರಂತೆ ಈ ಕಾರಿನಲ್ಲಿ ಸುಧಾರಿತ ವೈಶಿಷ್ಟ್ಯತೆಗಳು ಲಭ್ಯವಿರಲಿದೆ. ಜಿಪ್ಟ್ರಾನ್ ತಂತ್ರಜ್ಞಾನವು ರೀಜನರೇಟಿವ್ ಬ್ರೇಕಿಂಗ್ ಸಿಸ್ಟಂ ಹೊಂದಿದ್ದು, ಇದರಿಂದ ಕಾರು ಚಾಲನೆ ವೇಳೆ ನೀರ್ದಿಷ್ಟ ಪ್ರಮಾಣದಲ್ಲಿ ಬ್ಯಾಟರಿ ಚಾರ್ಜಿಂಗ್ ಪ್ರಕ್ರಿಯೆಯು ಮರಳಿ ಪಡೆಯಬಹುದಾಗಿದೆ. ಇದೇ ಕಾರಣಕ್ಕೆ ಹೊಸ ತಂತ್ರಜ್ಞಾನವು ಬ್ಯಾಟರಿ ದೀರ್ಘಕಾಲದ ಬಾಳಿಕೆಗೆ ಸಹಕರಿಸಲಿದೆ ಎಂದು ಟಾಟಾ ಕಂಪೆನಿ ತಿಳಿಸಿದೆ.

ಇನ್ನು ಹೊಸ ಟಿಗೋರ್ನಲ್ಲಿ ನೀಡಲಾಗಿರುವ ಎಲೆಕ್ಟ್ರಿಕ್ ಮೋಟಾರ್ 74 ಪಿಎಸ್ ಮತ್ತು 170 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಹಾಗೆಯೇ ಈ ಕಾರು 5.7 ಸೆಕೆಂಡುಗಳಲ್ಲಿ 0-60 ಕಿಮೀ ವೇಗ ಪಡೆಯುತ್ತದೆ. ಇದರಲ್ಲಿ 26 kWh ಲಿಥಿಯಂ ಐಯಾನ್ ಬ್ಯಾಟರಿ ನೀಡಲಾಗಿದ್ದು, ಇದು AC ಮತ್ತು DC ಚಾರ್ಜಿಂಗ್ ಎರಡನ್ನೂ ಬೆಂಬಲಿಸುತ್ತದೆ.

ಟಿಗೋರ್ ಇವಿ ವಿನ್ಯಾಸವು ಪೆಟ್ರೋಲ್ ಆವೃತ್ತಿಯಂತೆಯೇ ಇದ್ದು, ಇದು ಮೊದಲ ಎಲೆಕ್ಟ್ರಿಕ್ ಸೆಡಾನ್ ಕಾರು ಎಂಬುದು ವಿಶೇಷ. ಈ ಹಿಂದಿನ ಟಾಟಾ ಟಿಗೋರ್‌ಗೆ ಹೋಲಿಸಿದರೆ ಹೊಸ ಟಿಗೋರ್‌ಗೆ ಗ್ಲೋಸ್ ಬ್ಲಾಕ್ ಮತ್ತು ಎಲೆಕ್ಟ್ರಿಕ್ ಬ್ಲೂ ಟ್ರಿಮ್‌ಗಳನ್ನು ನೀಡಿದ್ದು, ಅದು ಕಾರಿನ ಔಟ್ಲುಕ್ ಅನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಬಹುದು.

ಈ ಕಾರಿನ ಬ್ಯಾಟರಿಯನ್ನು ಫಾಸ್ಟ್ ಚಾರ್ಜರ್ ಬಳಸಿ 60 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ಶೇಕಡ 0 ರಿಂದ 80 ರಷ್ಟು ಚಾರ್ಜ್ ಮಾಡಬಹುದು. ಹಾಗೆಯೇ ಹೋಮ್ ಚಾರ್ಜರ್ ಬಳಸಿ ಬ್ಯಾಟರಿ ಫುಲ್ ಚಾರ್ಜ್ ಮಾಡಿಕೊಳ್ಳಲು 8.5 ಗಂಟೆಗಳನ್ನು ತೆಗೆದುಕೊಳ್ಳಲಿದೆ. ಒಂದು ಬಾರಿ ಸಂಪೂರ್ಣ ಚಾರ್ಜ್ ಆದರೆ ಟಿಗೋರ್ ಇವಿ 312 ಕಿ.ಮೀವರೆಗೆ ಚಲಿಸಲಿದೆ ಎಂದು ಕಂಪೆನಿ ತಿಳಿಸಿದೆ. ಇನ್ನು ಈ ಕಾರನ್ನು ಅಪ್ಗ್ರೇಡ್ ಆಯ್ಕೆಗಳಂತೆ 11.99 ಲಕ್ಷದಿಂದ 14 ಲಕ್ಷ ರೂ. ಒಳಗೆ ಖರೀದಿಸಬಹುದು.

ಪೆಟ್ರೋಲ್ ಟಿಗೋರ್‌ನಲ್ಲಿರುವಂತೆ ಇದಕ್ಕೂ ಇಳಿಜಾರಾದ ರೂಫ್ ಟಾಪ್ ನೀಡಲಾಗಿದೆ. ಹಾಗೆಯೇ ಸ್ಪಷ್ಟವಾದ ಲೆನ್ಸ್ ಟೈಲ್ ಲ್ಯಾಂಪ್‌ಗಳು ಹಿಂಭಾಗದಲ್ಲಿ ಲಭ್ಯವಿದ್ದು ಇದು ಟಿಗೋರ್ ಇವಿ ಬ್ಯಾಡ್ಜಿಂಗ್ ಅನ್ನು ಪಡೆಯುತ್ತದೆ. ಇನ್ನು ಕಂಪೆನಿಯು ಒಳ ವಿನ್ಯಾಸದಲ್ಲೂ ಹೆಚ್ಚಿನ ಬದಲಾವಣೆ ಮಾಡಿಲ್ಲ. ಡ್ಯುಯಲ್ ಟೋನ್ ಕ್ಯಾಬಿನ್ ಹೊಂದಿರುವ ಈ ಕಾರಿನಲ್ಲಿ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಏರ್ ಬ್ಯಾಗ್ ಮತ್ತು ಸ್ವಯಂಚಾಲಿತ ಎಸಿ ಮುಂತಾದ ವೈಶಿಷ್ಟ್ಯಗಳನ್ನು ನೀಡಲಾಗಿದೆ.



















