ಗದಗ: ಕೊರೊನಾ ಎರಡನೇ ಅಲೆ ಮಾನವ ಕುಲಕ್ಕೆ ಕಂಟಕವಾಗಿ ಪರಿಣಮಿಸಿದೆ. ಅದೇಷ್ಟೋ ಕುಟುಂಬಗಳು ನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ. ಉದ್ಯೋಗ ಕಳೆದುಕೊಂಡು ಜೀವನ ನಡೆಸಲಾಗದೆ ದುರ್ಬಲವಾಗಿದೆ. ಆದರೆ ಗದಗದ ಬಾಲಕನೊಬ್ಬ ಕರೊನಾದಿಂದ ಉದ್ಯೋಗ ಕಳೆದುಕೊಂಡ ತಾಯಿಗೆ ಸಾಥ್ ನೀಡಿದ್ದು, ಲಾಕ್ಡೌನ್ ನಂತಹ ಸಮಯದಲ್ಲಿ ಮಾಸ್ಕ್ ಮಾರಾಟ ಮಾಡಿ, ಕುಟುಂಬ ನಿರ್ವಹಣೆಗೆ ಸಹಾಯ ಮಾಡುತ್ತಿದ್ದಾನೆ.
ಗದಗ ನಗರದ ಮಹೇಂದ್ರಕರ್ ಸರ್ಕಲ್ ನಿವಾಸಿಯಾದ ಮಹಮ್ಮದ್ ರಿಯಾಜ್ ಎನ್ನುವ 10 ವರ್ಷದ ಬಾಲಕ ಕೊರೊನಾ ಅಲೆಗೆ ಮನೆಯಿಂದ ಹೊರಗೆ ಬರಲು ಹೆದರುವ ಈ ಸಮಯದಲ್ಲಿ ಮಾಸ್ಕ್ ಮಾರಾಟ ಮಾಡಿ ಸ್ವಾಭಿಮಾನಿ ಜೀವನ ನಡೆಸುತ್ತಿದ್ದಾನೆ. ಈ ಬಾಲಕನ ಆತ್ಮಸ್ಥೈರ್ಯ ಹಾಗೂ ಧೈರ್ಯ ಮೆಚ್ಚುವಂತದ್ದೆ. ಬಾಲಕನಾಗಿರುವುದರಿಂದ ಕಾನೂನು ಪ್ರಕಾರ ಇಂತಹ ಕೆಲಸ ಮಾಡಬಾರದು. ಆದರೆ, ಕೊರೊನಾದಿಂದ ನಲುಗಿದ ಸಂಸಾರಕ್ಕೆ ಆಸರೆಯಾಗುವುದು ಅಷ್ಟೇ ಮುಖ್ಯವಾಗಿದೆ.
ಗದಗದ ಭೂಮರೆಡ್ಡಿ ಸರ್ಕಲ್ನಲ್ಲಿ ತಾತ್ಕಾಲಿಕವಾಗಿ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದ್ದು, ಈ ವೇಳೆ ಮಾರುಕಟ್ಟೆಗೆ ಬರುವ ಗ್ರಾಹಕರು ಹಾಗೂ ವ್ಯಾಪಾರಸ್ಥರಿಗೆ ಮಾಸ್ಕ್ ಮಾರಾಟ ಮಾಡಿ ಬಂದ ಹಣದಿಂದ ಕುಟುಂಬ ನಿರ್ವಹಣೆ ಮಾಡುತ್ತಿದ್ದಾನೆ. ಲಾಕ್ಡೌನ್ ಸಮಯವಾಗಿರುವುದರಿಂದ ಈಗ ಮುಂಜಾನೆ 6 ಗಂಟೆಯಿಂದ 10 ಗಂಟೆಯವರೆಗೆ ಮಾಸ್ಕ್ ಮಾರಾಟದಲ್ಲಿ ಮಹಮ್ಮದ್ ರಿಯಾಜ್ ತೊಡಗಿಕೊಂಡಿದ್ದಾನೆ.
ಗದಗದ ವಿಡಿಎಸ್ ಶಾಲೆಯಲ್ಲಿ ನಾಲ್ಕನೇಯ ತರಗತಿ ಓದುತ್ತಿರುವ ಬಾಲಕ, ಶಾಲೆಯಲ್ಲಿ ಕೂಡಾ ಚೂರುಕಾಗಿಯೇ ಇದ್ದಾನೆ. ಮಹಮ್ಮದ್ ಹಾಗೂ ಅವರ ತಾಯಿಯನ್ನು ಅವರ ತಂದೆ ಹಲವು ವರ್ಷಗಳ ಹಿಂದೆ ಬಿಟ್ಟು ಹೋಗಿದ್ದಾರೆ. ಹೀಗಾಗಿ ಮಹಮ್ಮದ್ ರಿಯಾಜ್ ಅವರ ತಾಯಿ ಗದಗದ ಜುವೆಲರ್ಸ್ನಲ್ಲಿ ಕೆಲಸ ಮಾಡುತ್ತಾ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಆದರೆ ಕಳೆದ ವರ್ಷದ ಲಾಕ್ಡೌನ್ ಸಮಯದಲ್ಲಿ ಕೆಲಸವನ್ನು ಕಳೆದುಕೊಂಡು ಜೀವನ ನಿರ್ವಹಣೆ ಕಷ್ಟವಾಗಿತ್ತು. ನಂತರ ತಾಯಿ ಬಟ್ಟೆ ಹೊಲಿಯುವ ಕೆಲಸವನ್ನು ಮಾಡುತ್ತಿದ್ದರು. ಆದರೆ ಈಗ ಮತ್ತೆ ಲಾಕ್ಡೌನ್ ಜಾರಿ ಮಾಡಿರೋದರಿಂದ ಜೀವನ ನಡೆಸುವುದು ಕಷ್ಟಸಾಧ್ಯವಾಗಿದೆ.
ಹೀಗಾಗಿ ಮಹಮ್ಮದ್ ಅವರ ತಾಯಿ ಮನೆಯಲ್ಲಿ ಮಾಸ್ಕ್ ತಯಾರಿಸಿ ಕೊಡುತ್ತಾರೆ. ಅದನ್ನು ನಿತ್ಯ ಮಾರುಕಟ್ಟೆಗೆ ತಂದು ಮಾರಾಟ ಮಾಡಿ ಬಂದ ಹಣದಿಂದ ಜೀವನ ನಡೆಸುತ್ತಿದ್ದಾರೆ. ಈ ಬಾಲಕನನ್ನು ಕಂಡರೆ ಸ್ಥಳೀಯರಿಗೂ ಬಹಳ ಪ್ರೀತಿ ಹಾಗೇ ಹಣವನ್ನು ಕೊಟ್ಟರು ಹಣವನ್ನು ತೆಗೆದುಕೊಳ್ಳುವುದಿಲ್ಲಾ. ಮಾಸ್ಕ್ ನೀಡಿ ಅದರ ಬೆಲೆಯನ್ನು ಮಾತ್ರ ತೆಗೆದುಕೊಳ್ಳುತ್ತಾನೆ, ಈ ಬಾಲಕನ ಸ್ವಾಭಿಮಾನ ಮೆಚ್ಚುವಂತದ್ದೆ ಎಂದು ಸ್ಥಳಿಯರಾದ ಅಮರನಾಥ ಹೇಳಿದ್ದಾರೆ.
ಇದನ್ನೂ ಓದಿ: