102 ವರ್ಷ ವಯಸ್ಸಾದರೂ ಉತ್ಸಾಹ ಕಳೆದುಕೊಳ್ಳದ ಬಾಗಲಕೋಟೆ ಮಹಿಳೆ; ತಮ್ಮ ಕಾರ್ಯದ ಮೂಲಕ ಇತರರಿಗೆ ಮಾದರಿ

ಪಾರ್ವತಿ ಅವರಿಗೆ ಒಟ್ಟು 12 ಜನ ಮಕ್ಕಳಿದ್ದಾರೆ. 12 ಜನ ಮಕ್ಕಳಲ್ಲಿ ಸದ್ಯ ಎಂಟು ಜನ ಬದುಕಿದ್ದು, ಇನ್ನು ನಾಲ್ಕು ಜನ ಮೃತಪಟ್ಟಿದ್ದಾರೆ. ಇನ್ನು ಪಾರ್ವತಿ ಅವರಿಗೆ 45 ಜನ ಮೊಮ್ಮಕ್ಕಳಿದ್ದು, ಪಾರ್ವತಿ ಅವರದ್ದು ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು, ಗಿರಿ ಮೊಮ್ಮಕ್ಕಳು ಎಲ್ಲರನ್ನು ಕಂಡ ಪರಿಪೂರ್ಣ ಜೀವನ.

102 ವರ್ಷ ವಯಸ್ಸಾದರೂ ಉತ್ಸಾಹ ಕಳೆದುಕೊಳ್ಳದ ಬಾಗಲಕೋಟೆ ಮಹಿಳೆ; ತಮ್ಮ ಕಾರ್ಯದ ಮೂಲಕ ಇತರರಿಗೆ ಮಾದರಿ
102 ವರ್ಷದ ಪಾರ್ವತಿ


ಬಾಗಲಕೋಟೆ: ಇತ್ತೀಚಿನ ದಿನದಲ್ಲಿ ಯಾವುದೇ ರೀತಿಯ ವ್ಯಾಯಾಮ, ಪೋಷಕಾಂಶ ಭರಿತ ಆಹಾರ ಏನೇ ತಿಂದರು ಕೂಡ ಆರೋಗ್ಯ ಯಾವಾಗ ಕೈ ಕೊಡುತ್ತೋ ಯಾವಾಗ ಕಾಯಿಲೆ ಬರುತ್ತದೆಯೋ ಗೊತ್ತಾಗುವುದಿಲ್ಲ. ಏಕೆಂದರೆ ಸದ್ಯ ನಾವು ತಿನ್ನುವ ಪ್ರತಿ ಆಹಾರ ಕೂಡ ಒಂದರ್ಥದಲ್ಲಿ ಸುರಕ್ಷಿತವಲ್ಲ. ಇದಕ್ಕೆ ಕಾಲ ಹಾಗೂ ಜೀವನ ಶೈಲಿ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಓಲ್ಡ್ ಈಸ್​ ಗೋಲ್ಡ್ ಎನ್ನುವ ಹಾಗೇ 102 ವರ್ಷ ವಯಸ್ಸಿನ ಅಜ್ಜಿ ಒಬ್ಬರು ಇಂದಿಗೂ ಕೂಡ ಯೌವ್ವನ ಹುಡುಗ ಹುಡುಗಿಯನ್ನು ನಾಚಿಸುವಂತೆ ಜೀವನ ನಡೆಸುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಜಂಬಗಿ ಕೆ ಡಿ ಗ್ರಾಮದ ಪಾರ್ವತಿ ಅಂಬಿಗೇರ 102 ವರ್ಷ ವಯಸ್ಸಾದರೂ ಇಂದಿಗೂ ಮನೆಯಲ್ಲಿ ರೊಟ್ಟಿ ಬಡಿಯುತ್ತಾರೆ. ದನಕರುಗಳಿಗೆ ಮೇವು ಹಾಕೋದು, ನೀರು ಕುಡಿಸೋದು ಮಾಡುತ್ತಾ ದನಗಳ ಆರೈಕೆ ಮಾಡುತ್ತಾರೆ. ಮನೆಯ ಹಿತ್ತಲಲ್ಲಿ ಒಂದಿಲ್ಲೊಂದು ಕೆಲಸ ಮಾಡುತ್ತಲೇ ಇರುತ್ತಾರೆ. ಇಂದಿಗೂ ಯಾರ ಆಸರೆ ಬಯಸದೆ ತಮ್ಮೆಲ್ಲ ಕ್ರಿಯಾಕರ್ಮ ಮಾಡುವದರ ಜೊತೆಗೆ ನಿತ್ಯ ಎಲ್ಲರಂತೆ ಕೆಲಸ ಮಾಡಿ ಹೊಟ್ಟೆ ತುಂಬಾ ಊಟ ಮಾಡಿ ಕಣ್ತುಂಬ ನಿದ್ದೆ ಮಾಡುವ ಮೂಲಕ ಆರೋಗ್ಯವನ್ನು ಸದೃಢವಾಗಿ ಕಾಪಾಡಿಕೊಂಡು ಬಂದಿದ್ದಾರೆ.

ವಯಸ್ಸು ನಲವತ್ತು ದಾಟಿದರೆ ಸಾಕು ಮೊದಲು ಮೊಳಕಾಲು ಹಿಡಿಯೋಕೆ ಶುರುವಾಗುತ್ತವೆ. ಬಿಪಿ ಹಾಗೂ ಶುಗರ್ ಎಲ್ಲವೂ ಬಳುವಳಿ ರೀತಿಯಲ್ಲಿ ವಕ್ಕರಿಸಿಕೊಂಡು ಎಷ್ಟೋ ಜನರು ಪ್ರತಿನಿತ್ಯ ಮಾತ್ರೆಗಳ ಆಸರೆಯಲ್ಲೇ ಬದುಕುತ್ತಾರೆ. ಆದರೆ ಪಾರ್ವತಿ ಅವರು 102 ವರ್ಷ ವಯಸ್ಸು ಆದರೂ ಇಂದಿಗೂ ಕೆಲಸ ಮಾಡುತ್ತಾರೆ. ಇಂದಿಗೂ ಇವರಿಗೆ ಕನ್ನಡಕ ಬಂದಿಲ್ಲ. ಇಂದಿಗೂ ಕಣ್ಣು ಸ್ಪಷ್ಟವಾಗಿ ಕಾಣುತ್ತದೆ. ಕಿವಿ ಕೂಡ ಮಂದಾಗಿಲ್ಲ. ಮಾತು ಕೂಡ ಸ್ಪಷ್ಟವಾಗಿದ್ದು, ಯುವಕ ಯುವತಿಯರಂತೆ ಕ್ರಿಯಾಶೀಲರಾಗಿದ್ದಾರೆ ಎಂಬುದೇ ಅಚ್ಚರಿ.

ನಮ್ಮದು ಕೃಷಿ ಕುಟುಂಬ ಹೊಲಮನೆ ದುಡಿಮೆ, ದನಕರುಗಳ ಸಾಕಾಣಿಕೆ ಬಿಟ್ಟರೆ ನಮಗೇನು ಗೊತ್ತಿಲ್ಲ, ಚಿಕ್ಕಂದಿನಿಂದಲೂ ಹೊಲದಲ್ಲಿ ದುಡಿಯುತ್ತಾ ಬಂದಿದ್ದೇನೆ. ತವರುಮನೆ ಗಂಡನ ಮನೆ ಎರಡು ಕಡೆ ವ್ಯವಸಾಯ,ಕೃಷಿ ಕೂಲಿ ಮಾಡುವಂತಹ ಕುಟುಂಬ ನಮ್ಮದು. ಹೊಟ್ಟೆ ತುಂಬಾ ರೊಟ್ಟಿ ಅನ್ನ, ಹಾಲು, ಮೊಸರು ಜವಾರಿ ಊಟ ಸವಿದು, ಮೈ ತುಂಬಾ ಬೆವರು ಹರಿಸಿ ನಿತ್ಯ ಹೊಲದಲ್ಲಿ ಕೆಲಸ ಮಾಡುತ್ತಿದ್ದೆ. ಇದರಿಂದ ದೇಹ ಇಷ್ಟೊಂದು ಆರೋಗ್ಯದಿಂದ ಇರೋದಕ್ಕೆ ಸಾಧ್ಯವಾಗಿದೆ. ಈಗಿನ ಮಂದಿಗೆ ಹೊಟ್ಟೆ ತುಂಬ ತಿನ್ನುವುದು ಗೊತ್ತಿಲ್ಲ. ಇನ್ನು ದುಡಿಯುವುದು ದೂರದ ಮಾತು ಹೀಗಾದರೆ ಹೇಗೆ ದೇಹ ಗಟ್ಟಿ ಇರುತ್ತದೆ. ಯಾವಾಗಲೂ ಮನುಷ್ಯ ಹೊಟ್ಟೆ ತುಂಬ ಊಟ ಮಾಡಬೇಕು ದೇಹದಲ್ಲಿ ಬೆವರು ಹರಿಯುವಂತೆ ಕೆಲಸ ಮಾಡಬೇಕು. ಆಗ ಮಾತ್ರ ದೇಹ ಸದೃಢವಾಗುತ್ತದೆ ಎಂದು ಪಾರ್ವತಿ ಅವರು ಹೇಳಿದ್ದಾರೆ.

ಪಾರ್ವತಿ ಅವರಿಗೆ ಒಟ್ಟು 12 ಜನ ಮಕ್ಕಳಿದ್ದಾರೆ. 12 ಜನ ಮಕ್ಕಳಲ್ಲಿ ಸದ್ಯ ಎಂಟು ಜನ ಬದುಕಿದ್ದು, ಇನ್ನು ನಾಲ್ಕು ಜನ ಮೃತಪಟ್ಟಿದ್ದಾರೆ. ಇನ್ನು ಪಾರ್ವತಿ ಅವರಿಗೆ 45 ಜನ ಮೊಮ್ಮಕ್ಕಳಿದ್ದು, ಪಾರ್ವತಿ ಅವರದ್ದು ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು, ಗಿರಿ ಮೊಮ್ಮಕ್ಕಳು ಎಲ್ಲರನ್ನು ಕಂಡ ಪರಿಪೂರ್ಣ ಜೀವನ. ನಗು ನಗುತ್ತಾ ಶತಕ ದಾಟಿದ ಪಾರ್ವತವ್ವ ಅವರು ಇಡೀ ಊರಿಗೆ ಹಿರಿಜೀವ. ಇಂದಿಗೂ ಇವರು ಮಾಡುವ ಕೆಲಸ ,ಇವರ ಉತ್ಸಾಹ ,ಇವರ ಕ್ರಿಯಾಶೀಲ ಚಟುವಟಿಕೆ ಕಂಡು ಗ್ರಾಮಸ್ಥರು ಹೈರಾಣಾಗಿದ್ದಾರೆ.

old women

ಕೆಲಸದಲ್ಲಿ ನಿರತರಾಗಿರುವ ಪಾರ್ವತಿ ಅವರು

ಇಂತಹ ಗಟ್ಟಿ ದೇಹ ಹೊಂದಿದ ಅಜ್ಜಿ ಇಡೀ ಊರ ಜನರಿಗೆ ಹಿರಿಜೀವ ಅವರ ಜೀವನಶೈಲಿ ಮುಂದೆ ಏನೂ ಇಲ್ಲ, ಅವರ ಜೀವನ ವಿಧಾನ ಎಲ್ಲರಿಗೂ ಆದರ್ಶವಾಗಿದೆ. ಅಜ್ಜಿ ಹಲವಾರು ವರ್ಷಗಳ ಕಾಲ ಇದೇ ರೀತಿ ಸಂತಸದಿಂದ ಬದುಕಲಿ ಎಂದು ಸ್ಥಳೀಯರಾದ ಅವಿನಾಶ್ ಕೋಷ್ಟಿ ಹೇಳಿದ್ದಾರೆ.

ಒಟ್ಟಾರೆ ನಲವತ್ತು ದಾಟಿದರೆ ಸಾಕು ನಮ್ಮದೇನಿದೆ ಇನ್ನು ಎಲ್ಲವೂ ಮುಗಿತು. ಎಂದು ಭಾವಿಸುವವರ ನಡುವೆ ಪಾರ್ವತಮ್ಮ ಇತರರಿಗೆ ಮಾದರಿಯಾಗಿದ್ದು, ಯುವಕ-ಯುವಕರಿಗೆ ನವ ಚೈತನ್ಯ ತುಂಬಿದ್ದಾರೆ.

 

ಇದನ್ನೂ ಓದಿ:

ಬಿತ್ತನೆಗೂ ಸೈ, ಕುಂಟೆ ಹೊಡೆಯೋದ್ದಕ್ಕೂ ಜೈ; ಯಾದಗಿರಿಯ 70ರ ಇಳಿವಯಸ್ಸಿನ ವೃದ್ಧೆಯ ಕೃಷಿ ಕಾಯಕ ಇತರರಿಗೆ ಮಾದರಿ

ದುಡಿದ ಹಣ ಸೇನೆಗೆ ಜಮಾ; ಇಂದಿಗೂ ಲಾಲ್ ಬಹದ್ದೂರ್ ಶಾಸ್ತ್ರಿ ಆದರ್ಶ ಪಾಲಿಸುತ್ತಿರುವ ಮೂಡಿಗೆರೆ ಹಿರಿಯ

(102 year old women roll model to evryone in Bagalkot)

Click on your DTH Provider to Add TV9 Kannada