ರಾಜ್ಯದ 1,800 ಹಳ್ಳಿಗಿಲ್ಲ ಬಸ್​​ ಸಂಪರ್ಕ: ಸಾರಿಗೆ ಸಚಿವರೇ ಕೊಟ್ರು ಶಾಕಿಂಗ್​​ ಮಾಹಿತಿ

ರಾಜ್ಯದ 1800ಕ್ಕೂ ಹೆಚ್ಚು ಗ್ರಾಮಗಳಿಗೆ ಬಸ್ ಸಂಪರ್ಕವಿಲ್ಲ, ಇದರಿಂದ ಜನರು, ವಿಶೇಷವಾಗಿ ಮಹಿಳೆಯರು, ಬಸ್​​ಗಳಿಗಾಗಿ 2 ಕಿ.ಮೀ. ನಡೆಯಬೇಕಿದೆ. ರಸ್ತೆಗಳ ದುಸ್ಥಿತಿ ಇದಕ್ಕೆ ಪ್ರಮುಖ ಕಾರಣ. ಸಾರಿಗೆ ಸಚಿವರು ಈ ಮಾಹಿತಿ ಬಹಿರಂಗಪಡಿಸಿದ್ದು, KSRTC ವ್ಯಾಪ್ತಿಯಲ್ಲಿರುವ ಈ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿ ಸೇವೆ ವಿಸ್ತರಿಸುವುದಾಗಿ ಭರವಸೆ ನೀಡಿದ್ದಾರೆ. ಶಕ್ತಿ ಯೋಜನೆಯ ಲಾಭ ಪಡೆಯಲು ಸಹ ಇದು ಅಡ್ಡಿಯಾಗಿದೆ.

ರಾಜ್ಯದ 1,800 ಹಳ್ಳಿಗಿಲ್ಲ ಬಸ್​​ ಸಂಪರ್ಕ: ಸಾರಿಗೆ ಸಚಿವರೇ ಕೊಟ್ರು ಶಾಕಿಂಗ್​​ ಮಾಹಿತಿ
ಸರ್ಕಾರಿ ಬಸ್​​

Updated on: Dec 18, 2025 | 3:19 PM

ಬೆಂಗಳೂರು, ಡಿಸೆಂಬರ್​​ 18: ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನಗಳಲ್ಲೊಂದಾದ ಮಹಿಳೆಯರಿಗೆ ಸಾಮಾನ್ಯ ಸಾರಿಗೆ ಬಸ್​​ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯ ಪ್ರಯೋಜನವನ್ನು ಪ್ರತಿನಿತ್ಯ ಲಕ್ಷಾಂತರ ಮಂದಿ ಪಡೆಯುತ್ತಿದ್ದಾರೆ. ಈ ನಡುವೆಯೂ ಸುಮಾರು 1,800 ಗ್ರಾಮಗಳಲ್ಲಿ ಮಹಿಳೆಯರು ಬಸ್ ಏರಲು ಕನಿಷ್ಠ 2 ಕಿಲೋಮೀಟರ್ ನಡೆದು ಹೋಗುವ ಪರಿಸ್ಥಿತಿ ಇದೆ ಎಂಬ ಮಾಹಿತಿ ಬಹಿರಂಗೊಂಡಿದೆ.

ಬಹುತೇಕ ಪ್ರದೇಶಗಳಲ್ಲಿ ಬಸ್​​ಗಳ ಲಾಸ್ಟ್​​ ಸ್ಟಾಪ್​​ ಕನೆಕ್ಟಿವಿಟಿ ಇಲ್ಲದ ಕಾರಣ ವಿದ್ಯಾರ್ಥಿಗಳನ್ನು ಸೇರಿದಂತೆ ಪ್ರಯಾಣಿಕರು ಪ್ರತಿದಿನ ಕಿಲೋಮೀಟರ್​​ಗಟ್ಟಲೆ ದೂರವನ್ನು ನಡೆಯಬೇಕಾದ ಸ್ಥಿತಿ ಇದೆ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಸ್‌ಗಳ ಸಂಚಾರ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ರಸ್ತೆ ದುಃಸ್ಥಿತಿಯ ಕಾರಣ KSRTC, NERTC ಮತ್ತು NWRTC ಅಧಿಕಾರಿಗಳು ಈ ಪ್ರದೇಶಗಳಲ್ಲಿ ಬಸ್​​ ಸಂಚಾರಕ್ಕೆ ಅವಕಾಶ ನೀಡಿಲ್ಲ ಎನ್ನಲಾಗಿದೆ. ತುಮಕೂರು, ಚಿಕ್ಕಮಗಳೂರು, ಉಡುಪಿ, ಮಂಡ್ಯ, ಚಿಕ್ಕಬಳ್ಳಾಪುರ, ಕೊಡಗು, ದಕ್ಷಿಣ ಕನ್ನಡ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಚಾಮರಾಜನಗರ, ಕಲಬುರಗಿ ಮತ್ತು ವಿಜಯನಗರ ಜಿಲ್ಲೆಗಳ ಬಹುತೇಕ ಗ್ರಾಮಗಳಲ್ಲಿ ಸಾರ್ವಕನಿಕರು ಈ ಸಮಸ್ಯೆ ಎದುರಿಸುತ್ತಿದ್ದಾರೆ.

ಇದನ್ನೂ ಓದಿ:  ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಸಾರಿಗೆ ನಿಗಮಗಳಿಗೆ ಶಕ್ತಿ ಅಲ್ಲ, ಶಾಪ! 4 ಸಾವಿರ ಕೋಟಿ ರೂ.ಗೂ ಹೆಚ್ಚು ಮೊತ್ತ ಬಾಕಿ

ಈ ಬಗ್ಗೆ ವಿಧಾನ ಪರಿಷತ್​​ನಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೇ ಉತ್ತರಿಸಿದ್ದು, KSRTC 17 ಜಿಲ್ಲೆಗಳಲ್ಲಿ ಬಸ್ ಸೇವೆ ನೀಡುತ್ತಿದೆ. ಒಟ್ಟು 21,748 ಗ್ರಾಮಗಳ ಪೈಕಿ 20,090 ಗ್ರಾಮಗಳಿಗೆ KSRTC ಬಸ್ ಸೇವೆ ಒದಗಿಸುತ್ತಿದೆ. ಉಳಿದ 1,658 ಗ್ರಾಮಗಳಲ್ಲಿ ಬಸ್​​ಗಾಗಿ ಜನರು 2 ಕಿಲೋಮೀಟರ್​​ ನಡೆದೇ ಹೋಗಬೇಕಿದೆ. ಅದೇ ರೀತಿ, NWRTC ವ್ಯಾಪ್ತಿಯಲ್ಲಿ ಇರುವ 4,610 ಗ್ರಾಮಗಳಲ್ಲಿ 4,565 ಗ್ರಾಮಗಳಿಗೆ ನೇರ ಬಸ್ ಸೇವೆ ಲಭ್ಯವಿದೆ. NERTC ವ್ಯಾಪ್ತಿಯ 5,283 ಗ್ರಾಮಗಳಲ್ಲಿ 5,237 ಗ್ರಾಮಗಳಿಗೆ ಬಸ್​​ಗಳು ಸಂಪರ್ಕ ಕಲ್ಪಿಸುತ್ತಿವೆ. ಜನರ ಬೇಡಿಕೆಯನ್ನು ಆಧಾರದಲ್ಲಿ ಸಮೀಕ್ಷೆ ನಡೆಸಿ, ಬಸ್ ಸೇವೆ ವಿಸ್ತರಿಸಲಾಗುವುದು ಎಂದು ಅವರು ತಿಳಿಸಿರೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:18 pm, Thu, 18 December 25