ವಿಧಾನಸಭೆಯಲ್ಲಿ ಪೂರಕ ಅಂದಾಜು ಮಂಡನೆ: ಸಾಧನಾ ಸಮಾವೇಶಕ್ಕೆ 10 ಕೋಟಿ ರೂ. ಖರ್ಚು
ಕರ್ನಾಟಕ ಸರ್ಕಾರವು 3,352.57 ಕೋಟಿ ರೂಪಾಯಿಗಳ ಪೂರಕ ಅಂದಾಜನ್ನು ಮಂಡಿಸಿದೆ. ವಿಜಯನಗರದಲ್ಲಿ ನಡೆದ ಸಾಧನಾ ಸಮಾವೇಶಕ್ಕೆ 10 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ತಿಳಿಸಲಾಗಿದೆ. ಇದರ ಜೊತೆಗೆ, ಸಚಿವ ಸಂಪುಟದ ವೆಚ್ಚ, ಐಟಿ ಉಪಕರಣಗಳು, ನೆರೆ ಪರಿಹಾರ ಮತ್ತು ಶಾಸಕರ ವಾಹನ ಖರೀದಿಗೆ ಹಣವನ್ನು ಮೀಸಲಿಡಲಾಗಿದೆ. ಈ ಖರ್ಚು ವೆಚ್ಚಗಳ ಕುರಿತು ವಿರೋಧ ಪಕ್ಷದಿಂದ ಆಕ್ಷೇಪಣೆಗಳು ವ್ಯಕ್ತವಾಗಿವೆ.

ಬೆಂಗಳೂರು, ಆಗಸ್ಟ್ 20: ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್.ಸಿ ಮಹದೇವಪ್ಪ (HC Mahadevappa) ಅವರು ಬುಧವಾರ (ಆ.20) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಪರವಾಗಿ 3,352.57 ಕೋಟಿ ರೂಪಾಯಿ ಮೊತ್ತದ ರಾಜ್ಯದ ಪೂರಕ ಅಂದಾಜು (ಮೊದಲನೇ ಕಂತು) ವಿಧಾನ ಸಭೆಯಲ್ಲಿ (Legislative Assembly )ಮಂಡಿಸಿದರು. ರಾಜ್ಯ ಸರ್ಕಾರವು ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯಲ್ಲಿ ಸಾಧಾನಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಸಾಧಾನಾ ಸಮಾವೇಶಕ್ಕೆ 10 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಸಭೆಗೆ ತಿಳಿಸಿದರು.
ಯಾವುದಕ್ಕೆಲ್ಲ ಏಷ್ಟು ಖರ್ಚು?
ನಂದಿ ಗಿರಿಧಾಮದಲ್ಲಿ ಜರುಗಿದ ಸಚಿವ ಸಂಪುಟಕ್ಕೆ 3.69 ಕೋಟಿ ರೂ. ಹೆಚ್ಚುವರಿಯಾಗಿ ನೀಡಲಾಗಿದೆ. ರಾಜ್ಯದ ಎಲ್ಲ ಒದಗಿಸಲಾಗಿದೆ. ರಾಜ್ಯದ ಎಲ್ಲ ನೋಂದಣಿ ಮತ್ತು ಮುದ್ರಾಂಕ ಕಚೇರಿಗಳಿಗೆ ಐಟಿ ಉಪಕರಣಗಳ ಪೂರೈಕೆ, ಅಳವಡಿಕೆ ಕಾರ್ಯಾಚರಣೆ ಮತ್ತು ನಿರ್ವಹಣೆ ಹಾಗೂ ಅಗತ್ಯವಿರುವ ಮಾನವ ಸಂಪನ್ಮೂಲ ವೆಚ್ಚಗಳ ಪಾವತಿಯನ್ನು ಪಾವತಿಸಲು 50 ಕೋಟಿ ರೂ. ನೀಡಲಾಗಿದೆ ಎಂದು ತಿಳಿಸಿದರು.
ರಾಜ್ಯದಿಂದ ಉತ್ತರಾಖಂಡಕ್ಕೆ ತೆರಳಿ ಪ್ರಕೃತಿ ವೈಪರೀತ್ಯದಿಂದ ಸಂಕಷ್ಟಕ್ಕೆ ಸಿಲುಕಿದ್ದ ಜನರನ್ನು ರಕ್ಷಿಸಲು ನಿಯೋಜಿಸಲಾದ ಅಧಿಕಾರಿಗಳ ವೆಚ್ಚಕ್ಕಾಗಿ 56.64 ಲಕ್ಷ ರೂ. ವೆಚ್ಚ ಮಾಡಲಾಗಿದೆ. ನೆರೆ ಸಂತ್ರಸ್ತರ ಪುನರ್ವಸತಿ ಯೋಜನೆಯಡಿ 2019-2023ರವರೆಗಿನ ಮನೆಗಳ ದುರಸ್ತಿ ಮತ್ತು ಪುನರ್ ನಿರ್ಮಾಣಕ್ಕಾಗಿ 42 ಕೋಟಿ ರೂ. ಎಸ್ಡಿಆರ್ಎಫ್ ಅಡಿಯಲ್ಲಿ ನೀಡಲಾಗಿದೆ ಎಂದರು.
ಇದನ್ನೂ ಓದಿ: ಸಹಕಾರಕ್ಕೆ ಅಸಹಕಾರ: 3 ಮತಗಳಿಂದ ವಿಧೇಯಕ ತಿರಸ್ಕೃತ, ಸರ್ಕಾರಕ್ಕೆ ಮುಖಭಂಗ
ಶಾಸಕರ ವಾಹನ ಖರೀದಿಗಾಗಿ 3.20 ಕೋಟಿ ರೂ. ವೆಚ್ಚ ಮಡಲಾಗಿದೆ. ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಉಪಯೋಗಕ್ಕೆ ಹೊಸ ವಾಹನ ಖರೀದಿಗೆ 30 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಪ್ರತಿಪಕ್ಷದ ಮುಖ್ ಸಚೇತಕರಿಗೆ ಹೊಸ ವಾಹನವನ್ನು ಖರೀದಿಸಲು 31 ಲಕ್ಷ ರೂ. ಒದಗಿಸಲಾಗಿದೆ. ವಿಧಾನಪರಿಷತ್ ಸಚಿವಾಲುದ ಅಧಿಕಾರಿ/ ಸಿಬ್ಬಂದಿ ಪ್ರಯಾಣ ವೆಚ್ಚವನ್ನು ಪಾವತಿಸಲು 1.31 ಕೋಟಿ ರೂ., ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಅವರ ವೈದ್ಯಕೀಯ ವೆಚ್ಚದ ಬಿಲ್ಗಳನ್ನು ಮರುಪಾವತಿಸಲು 21 ಲಕ್ಷ ರೂ. ನೀಡಲಾಗಿದೆ. ಬೆಳಗಾವಿ ಅಧಿವೇಶನದ ಬಾಕಿ ಬಿಲ್ 1.72 ಕೋಟಿ ರೂ. ನೀಡಲಾಗಿದೆ ಎದು ಹೇಳಿದರು.
ತೆರಿಗೆ ಹಣದಲ್ಲಿ ಕಾಂಗ್ರೆಸ್ ಜಾತ್ರೆ: ಸಿಟಿ ರವಿ
ಸಾಧನೆ ಸೊನ್ನೆ, ಜನರ ತೆರಿಗೆ ಹಣದಲ್ಲಿ ಕಾಂಗ್ರೆಸ್ ಜಾತ್ರೆ ಮಾಡುತ್ತಿದೆ. ನಾವು ಖಜಾನೆಗೆ ಮಾಲೀಕರಲ್ಲ, ನಾವು ಖಜಾನೆಯ ಟ್ರಸ್ಟಿ. ಒಂದೊಂದೂ ರೂಪಾಯಿಯನ್ನೂ ಜನರ ಹಿತಕ್ಕೆ ಬಳಸಬೇಕು. ಆದರೆ, ಈ ಸರ್ಕಾರ ಸಾಧನೆ ಮಾಡದೇ ಜನರ ಹಣ ಪೋಲು ಮಾಡಿದೆ. ವಿಜಯನಗರ ಸಮಾವೇಶ ನಿಮ್ಮ ಪಕ್ಷದ ಸಮಾವೇಶವಾಗಿತ್ತು. ಪಕ್ಷದ ಹಣದಲ್ಲಿ ಸಮಾವೇಶ ಮಾಡಿ, ಅದಬಿಟ್ಟು ಸರ್ಕಾರದ ಹಣ ಏಕೆ, ಜನರ ಹಣ ಏಕೆ? ರಸ್ತೆಗುಂಡಿ ಮುಚ್ಚುವ ಯೋಗ್ಯತೆ ಇಲ್ಲ, ಸ್ಕಾಲರ್‌ಶಿಪ್ ನಿಲ್ಲಿಸಿದ್ದೀರಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿಕೆ ಹೇಳಿದರು.



