ಬೆಳಗಾವಿ, ಸೆಪ್ಟೆಂಬರ್ 22: ಪಂಚಮಸಾಲಿ (Panchamasali) 2ಎ ಮೀಸಲಾತಿಗೆ ಆಗ್ರಹಿಸಿ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹಲವಾರು ರೀತಿಯ ಪ್ರತಿಭಟನೆಗಳು ನಡೆದಿವೆ. ಜನಪ್ರತಿನಿಧಿಗಳಿಂದ ಸಮಾಜಕ್ಕೆ ನ್ಯಾಯ ಸಿಗುವುದಿಲ್ಲ ಎಂದು ಮನಗಂಡ ಸ್ವಾಮೀಜಿ ಹೊಸ ದಾರಿಯಲ್ಲಿ ಹೋರಾಟ ಪ್ರಾರಂಭ ಮಾಡಿದ್ದು, ವಕೀಲರ ಮೂಲಕ ಹೋರಾಟಕ್ಕೆ ಸಜ್ಜಾಗಿದ್ದಾರೆ. ಡಿಸೆಂಬರ್ 12ರಂದು ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ.
ಈ ವಿಚಾರವಾಗಿ ನಗರದಲ್ಲಿ ಮಾತನಾಡಿರುವ ಜಯಮೃತ್ಯುಂಜಯ ಸ್ವಾಮೀಜಿ, ಸಿಎಂ ಸಿದ್ದರಾಮಯ್ಯ ನಮ್ಮ ಹೋರಾಟಕ್ಕೆ ಮಣಿದು ಬೆಳಗಾವಿಯಲ್ಲಿ ಪಂಚಮಸಾಲಿ ವಕೀಲರ ರಾಜ್ಯ ಮಟ್ಟದ ಸಭೆ ಕರೆದಿದ್ದಾರೆ. ಅಕ್ಟೋಬರ್ 15ರಂದು ಬೆಂಗಳೂರಿನಲ್ಲಿ ಸಿಎಂ ಜೊತೆಗೆ ವಕೀಲರ ಸಭೆ ಇದೆ ಎಂದಿದ್ದಾರೆ.
ರಾಜ್ಯ ಮಟ್ಟದ ವಕೀಲರ ಸಭೆಯಲ್ಲಿ ಮೂರು ನಿರ್ಣಯ ಮಂಡನೆ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು. ಪಂಚಮಸಾಲಿ ಲಿಂಗಾಯತ ಸಮಾಜ ಓಬಿಸಿ (OBC) ಪಟ್ಟಿಗೆ ಸೇರಿಸಬೇಕು. ಡಿ.12ರಂದು ಸುವರ್ಣಸೌಧ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಂಚಮಸಾಲಿ ಹೋರಾಟ ಕಡೆಗಣಿಸಿದ್ರೆ ಕುರ್ಚಿ ಅಲ್ಲಾಡುತ್ತೆ: ಸಿಎಂಗೆ ಜಯಮೃತ್ಯುಂಜಯ ಶ್ರೀ ಎಚ್ಚರಿಕೆ
ರಾಜ್ಯ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಬೆಳಗಾವಿಯಲ್ಲಿ ಇಂದು ಪಂಚಮಸಾಲಿ ಸಮಯದಾಯದ ವಕೀಲರ ಪ್ರಥಮ ಪರಿಷತ್ ನಡೆಯಿತು. ಸಭೆಯಲ್ಲಿ ಪಂಚಮಸಾಲಿ ಹೋರಾಟದ ರೂಪುರೇಷೆಗಳನ್ನು ಚರ್ಚೆ ಮಾಡಲಾಗಿದೆ. ಇದೆ ವೇಳೆ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಕಳೆದ ವರ್ಷ ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತನ್ನು ನೆನಪಿಸಿಕೊಂಡರು.
ಬೆಳಗಾವಿಯ ಅಧಿವೇಶವನದ ವೇಳೆ ಬೆಳಗಾವಿಯಿಂದ ಬೆಂಗಳೂರಿಗೆ ಹೋದ ತಕ್ಷಣ ಕಾನೂನು ತಜ್ಞರ ಸಮ್ಮುಖದಲ್ಲಿ ಸಭೆ ಕರೆಯುತ್ತೆನೆ ಎಂದು ಹೇಳಿದ್ದರು. ಆದರೆ ಈವರೆಗೆ ಸಭೆ ಕರೆದಿಲ್ಲ. ಹೀಗಾಗಿ ಇಂದು ಅವರು ದಿನಾಂಕ ನಿಗದಿ ಮಾಡಿದರೆ ನಾವು ಹೋರಾಟ ಕೈ ಬಿಡುತ್ತೇವೆ ಇಲ್ಲವಾದರೆ ಮತ್ತೆ ನಮ್ಮಹೋರಾಟ ಮುಂದುವರೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ತಕ್ಷಣ ಗಾಂಧಿ ಭವನಕ್ಕೆ ಬಂದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮತ್ತು ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಪ್ರತಿಭಟನೆ ಮಾಡದಂತೆ ಮನವಿ ಮಾಡಿಕೊಂಡರು. ಇತ್ತ ಇಂದು ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆ ಯಾವುದೇ ಅಹಿತಕರ ಘಟನೆ ಆಗದಂತೆ ಗಾಂಧಿ ಭವನದ ಸುತ್ತಮುತ್ತ ಭಾರಿ ಪೊಲೀಸ್ ಬಂದೋಬಸ್ತ್ ಕೂಡ ಒದಗಿಸಲಾಗಿತ್ತು. ಇಂದಿನ ಸಭೆ ಮುಗಿಯುವುದರೊಳಗೆ ಸಿಎಂ ಸಭೆಗೆ ದಿನಾಂಕ ನಿಗದಿ ಮಾಡಲೇಬೇಕು ಎಂದು ಪಟ್ಟು ಹಿಡಿದ್ದರು.
ಸಭೆಯಲ್ಲಿ ಮಾಜಿ ಸಚಿವರಾದ ವಿನಯ್ ಕುಲಕರ್ಣಿ, ಸಿಸಿ ಪಾಟೀಲ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಾಗಿಯಾಗಿದ್ಧರು. ಇದೇ ವೇಳೆ ಮಾಜಿ ಸಚಿವ ವಿನಯ್ ಕುಲಕರ್ಣಿ ತಮ್ಮ ಫೋನನಿಂದಲೇ ಸಿಎಂ ಗೆ ಕರೆ ಮಾಡಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕೈಗೆ ಕೊಟ್ಟರು. ಈ ವೇಳೆ ಸಿಎಂ ಜೊತೆಗೆ ಸ್ವಾಮೀಜಿ ಎರಡು ನಿಮಿಷ ಮಾತನಾಡಿದರು. ಆದಷ್ಟು ಬೇಗ ಸಭೆ ಮಾಡೋಣ ಅಂತಾ ಸಿಎಂ ಭರವಸೆ ನೀಡಿದರು. ಆದರೆ ಪಂಚಮಸಾಲಿ ಮೀಸಲಾತಿ ಹೋರಾಟದ ಕುರಿತು ಸಭೆಗೆ ದಿನಾಂಕವನ್ನು ಸಿಎಂ ನೀಡಲು ಸಮಯ ಕೇಳಿದ್ದರಿಂದ ಮತ್ತೆ ಸಭೆಯಲ್ಲಿ ಗೊಂದಲ, ಗದ್ದಲ ಉಂಟಾಯಿತು.
ಇದನ್ನೂ ಓದಿ: ವೀರಶೈವ ಲಿಂಗಾಯತ ಸಮಾವೇಶಕ್ಕೆ ಜಯಮೃತ್ಯುಂಜಯ ಸ್ವಾಮೀಜಿ ಠಕ್ಕರ್
ಸಿಎಂ ನಮಗೆ ಸಮಯ ನಿಗದಿ ಮಾಡಿ ಹೇಳುವವರಗೂ ನಾವು ಹೋರಾಟ ಕೈ ಬಿಡಲ್ಲ ಎಂದು ಸ್ವಾಮೀಜಿ ಪಟ್ಟು ಹಿಡಿದರು. ಒಂದು ವೇಳೆ ಸಿಎಂ ಇಂದು ದಿನಾಂಕ ನಿಗದಿ ಮಾಡದಿದ್ದರೆ ಚೆನ್ನಮ್ಮ ವೃತ್ತದವರೆಗೆ ವಕೀಲರೊಂದಿಗೆ ಹೋರಾಟ ಮಾಡೋಣ ಎಂದು ಸ್ವಾಮೀಜಿ ಕರೆ ನೀಡಿದರು. ವಿನಯ್ ಕುಲಕರ್ಣಿ ಸ್ವಾಮೀಜಿಯವರ ಮನವೊಲಿಸಿ ನಾಳೆ ಸಿಎಂ ಅವರ ಜೊತೆಗೆ ಚರ್ಚೆ ಮಾಡಿ ದಿನಾಂಕ ನಿಗದಿ ಮಾಡುವುದಾಗಿ ಭರವಸೆ ನೀಡಿದರು.
ಇತ್ತ ಸಭೆಯಲ್ಲಿ ಭಾಗಹಿಸಿ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದರು. ಕಾಂಗ್ರೆಸ್ ಶಾಸಕರಿಗೆ ತಿರುಗೇಟು ಕೊಟ್ಟ ಯತ್ನಾಳ್ ಮಂತ್ರಿ ಆಗುವ ಸಲುವಾಗಿ ನಾಟಕ ಮಾಡಬೇಡಿ. ಗಟ್ಟಿಯಾಗಿ ನಿಲ್ಲಿ ಅಂತಾ ಹೇಳಿದ್ದಾರೆ. ಚುನಾವಣೆಯಲ್ಲಿ ನನ್ನನ್ನು ಸೋಲಿಸಬೇಕು ಎಂದು ಬಹಳ ಪ್ರಯತ್ನಗಳು ನಡೆದವು. ಆದರೆ ಏನೂ ಆಗಲಿಲ್ಲ, ಹೀಗೆ ನೀನು ಗಟ್ಟಿಯಾಗಿ ನಿಲ್ಲು ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಕಿವಿ ಮಾತು ಹೇಳಿದರು. ಮೀಸಲಾತಿ ವಿಚಾರದಲ್ಲಿ ಹಿಂದೆ ಆದ ಘಟನಾವಳಿ ಪ್ರಸ್ತಾಪಿಸಿ ಈ ಬಾರಿ ಬೆಳಗಾವಿ ಅಧಿವೇಶನದಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡುವುದಾಗಿ ಹೇಳಿದ್ದಾರೆ.
ಒಟ್ಟಿನಲ್ಲಿ ಇಷ್ಟು ದಿನ ರಾಜಕಾರಣಿಗಳ ಸಮ್ಮುಖದಲ್ಲಿ ನಡೆಯುತ್ತಿದ್ದ ಪಂಚಮಸಾಲಿ ಮೀಸಲಾತಿ ಹೋರಾಟ ಸದ್ಯ ವಕೀಲರ ನೇತೃತ್ವದಲ್ಲಿ ಇನ್ನು ಮುಂದೆ ರಾಜ್ಯದಲ್ಲಿ ಮುಂದುವರೆಯಲಿದ್ದು, ಸಿಎಂ ಸಹ ಓರ್ವ ವಕೀಲರೇ ಆಗಿರೋದ್ರಿಂದ ವಕೀಲರ ಒಕ್ಕೂರಲಿನ ಕೂಗನ್ನು ಸಿದ್ದರಾಮಯ್ಯ ಪರಿಗಣಿಸ್ತಾರೆ ಎನ್ನುವ ವಿಶ್ವಾಸ ಸ್ವಾಮೀಜಿ ಮತ್ತು ಪಂಚಮಸಾಲಿ ಸಮುದಾಯ ನಿರೀಕ್ಷೆ ಇಟ್ಟುಕೊಂಡಿದ್ದು ಇದನ್ನ ರಾಜ್ಯ ಸರ್ಕಾರ ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತೆ ಎಂಬುದನ್ನು ಕಾದು ನೋಡಬೇಕು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.