ಮಾದಪ್ಪನ ರಥಕ್ಕಾಗಿ ಬೆಳ್ಳಿ ಕರಗಿಸುವ ಕಾರ್ಯ ಆರಂಭ; 40 ವರ್ಷಗಳಿಂದ ಸಂಗ್ರಹವಾಗಿದ್ದ 400 ಕೆಜಿ ಬೆಳ್ಳಿ ಬಳಕೆ
ಏಪ್ರೀಲ್ 12ರಿಂದ ಬೆಳ್ಳಿಯನ್ನ ಕರಗಿಸಿ ಗಟ್ಟಿ ಮಾಡುವ ಕಾರ್ಯ ಆರಂಭವಾಗಿದೆ. ಮಾದಪ್ಪನ ಬೆಳ್ಳಿ ರಥಕ್ಕೆ 450 ಕೆಜಿ ಶುದ್ಧ ಬೆಳ್ಳಿಯ ಅವಶ್ಯಕತೆ ಇದ್ದು, ಭಕ್ತರು ನೀಡಿರುವ ಬೆಳ್ಳಿಯನ್ನ ಕರಗಿಸಿದರೆ ಅದರಲ್ಲಿ ಶೇಕಡಾ 70 ರಿಂದ 80 ರಷ್ಟು ಶುದ್ಧ ಬೆಳ್ಳಿ ಸಿಗುವ ಸಾಧ್ಯತೆ ಇದೆ.
ಚಾಮರಾಜನಗರ: ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರು ಕಾಣಿಕೆ ರೂಪದಲ್ಲಿ ನೀಡಿದ ಬೆಳ್ಳಿ ಪದಾರ್ಥಗಳನ್ನ ಕರಗಿಸಿ ಬೆಳ್ಳಿ ರಥಕ್ಕೆ ಉಪಯೋಗಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಏಪ್ರಿಲ್ 12ರಿಂದ ಬೆಳ್ಳಿ ಕರಗಿಸಿ ಗಟ್ಟಿಯನ್ನಾಗಿ ಮಾಡುವ ಕಾರ್ಯ ಆರಂಭವಾಗಿದ್ದು, ಮಾದಪ್ಪನ ಬೆಳ್ಳಿ ರಥಕ್ಕೆ ಭಕ್ತರು ಬೆಳ್ಳಿಯನ್ನ ಧಾನವಾಗಿ ಕೊಡಬಹುದಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಸಾಕಷ್ಟು ಭಕ್ತರು ಮಾದಪ್ಪನ ಸನ್ನಿಧಿಗೆ ಭೇಟಿ ನೀಡಿ ಮಾದಪ್ಪನ ದರ್ಶನ ಪಡೆದು ಇಷ್ಟಾರ್ಥಗಳನ್ನ ಇಡೇರಿಸುವಂತೆ ಹರಕೆ ಕಟ್ಟಿಕೊಳ್ಳುತ್ತಾರೆ. ನಂಬಿದವರನ್ನ ಮಾದಪ್ಪನ ಎಂದಿಗೂ ಕೈಬಿಡುವುದಿಲ್ಲ ಎಂಬುವುದು ಇಲ್ಲಿನ ನಂಬಿಕೆ.
ತಮ್ಮ ಇಷ್ಟಾರ್ಥಗಳು ಇಡೇರಿದ ಮೇಲೆ ಭಕ್ತರು ಕಾಣಿಕೆ ರೂಪದಲ್ಲಿ ಹಣ, ಚಿನ್ನ ಮತ್ತು ಬೆಳ್ಳಿಯನ್ನ ಹುಂಡಿಗೆ ಹಾಕುತ್ತಾರೆ. ಪ್ರತಿ ತಿಂಗಳು ಮಾದಪ್ಪನ ಸನ್ನಧಿಯಲ್ಲಿ ಕೋಟಿ ಕೋಟಿ ಹಣ ಸಂಗ್ರಹವಾಗುತ್ತದೆ. ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ಚಿನ್ನ ಮತ್ತು ಬೆಳ್ಳಿಯೂ ಸಂಗ್ರಹವಾಗುತ್ತದೆ. ಸದ್ಯ ಕಳೆದ 40 ವರ್ಷಗಳಿಂದ ಖಜಾನೆಯಲ್ಲಿ ಸಂಗ್ರಹವಾಗಿದ್ದ ಬೆಳ್ಳಿ ವಸ್ತುಗಳನ್ನ ಮಾದಪ್ಪನ ಬೆಳ್ಳಿ ರಥಕ್ಕೆ ಬಳಸಿಕೊಳ್ಳಲು ಮಲೆ ಮಹದೇಶ್ವರ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರ ತೀರ್ಮಾನ ಕೈಗೊಂಡಿದೆ.
ಏಪ್ರಿಲ್ 12 ರಿಂದ ಬೆಳ್ಳಿಯನ್ನ ಕರಗಿಸಿ ಗಟ್ಟಿ ಮಾಡುವ ಕಾರ್ಯ ಆರಂಭವಾಗಿದೆ. ಮಾದಪ್ಪನ ಬೆಳ್ಳಿ ರಥಕ್ಕೆ 450 ಕೆಜಿ ಶುದ್ಧ ಬೆಳ್ಳಿಯ ಅವಶ್ಯಕತೆ ಇದ್ದು, ಭಕ್ತರು ನೀಡಿರುವ ಬೆಳ್ಳಿಯನ್ನ ಕರಗಿಸಿದರೆ ಅದರಲ್ಲಿ ಶೇಕಡಾ 70 ರಿಂದ 80 ರಷ್ಟು ಶುದ್ಧ ಬೆಳ್ಳಿ ಸಿಗುವ ಸಾಧ್ಯತೆ ಇದೆ. ಇದನ್ನ ಸರ್ಕಾರಕ್ಕೆ ನೀಡಿ ಅದಕ್ಕೆ ಸರಿ ಸಮನಾದ ಶೇಕಡಾ 100ರಷ್ಟು ಶುದ್ಧ ಬೆಳ್ಳಿಯನ್ನ ಪಡೆದು ರಥದ ನಿರ್ಮಾಣಕ್ಕೆ ಬಳಸಿಕೊಳ್ಳಲು ಪ್ರಾಧಿಕಾರ ತೀರ್ಮಾನಿಸಿದೆ. ಇನ್ನು ಶುದ್ಧ ಬೆಳ್ಳಿಯನ್ನು ಭಕ್ತರು ಈಗಲೂ ಕೂಡ ದಾನ ಮಾಡುಬಹುದಾಗಿದೆ.
ಇನ್ನು ಬೆಳ್ಳಿ ಗಟ್ಟಿ ತಯಾರಿಸುವ ಕಾರ್ಯಕ್ಕಾಗಿ ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಉಪ ಸಮಿತಿಯೊಂದನ್ನ ರಚಿಸಲಾಗಿದೆ. ಸಿಸಿಟಿವಿ ಕಣ್ಗಾವಲಿನಲ್ಲಿ ಬೆಳ್ಳಿ ಕರಗಿಸುವ ಕಾರ್ಯ ನಡೆಯುತ್ತಿದ್ದು, ಮಾದಪ್ಪನ ಸನ್ನಿಧಿಯಲ್ಲಿ 17 ಅಡಿ ಎತ್ತರದ ತೇಗದ ರಥ ಈಗಾಗಲೇ ಸಿದ್ಧವಾಗಿದೆ. ಇದಕ್ಕೆ ಬೆಳ್ಳಿ ಕವಚ ಅಳವಡಿಸಬೇಕಾಗಿದ್ದು, ಈ ಕಾರ್ಯಕ್ಕೆ 20 ಲಕ್ಷ ರೂಪಾಯಿ ಬೇಕಾಗುತ್ತದೆ. ಈ ವೆಚ್ಚವನ್ನ ಭರಿಸಲು ಬೆಂಗಳೂರಿನ ಉದ್ಯಮಿಗಳು ಮುಂದೆ ಬಂದಿದ್ದಾರೆ ಎಂದು ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಹೇಳಿದ್ದಾರೆ. ಇನ್ನು ಹಳೆಯ ನಾಣ್ಯಗಳು ಹಾಗೂ ಪುರಾತನ ಕಾಲದ ಬೆಳ್ಳಿ ವಸ್ತುಗಳನ್ನ ಹಾಗೆಯೇ ಸಂಗ್ರಹಿಸಡಲು ಪ್ರಾಧಿಕಾರ ನಿರ್ಧರಿಸಿದೆ.
ಒಟ್ಟಾರೆ ಅಂದುಕೊಂಡಂತೆ ಬೆಳ್ಳಿ ರಥ ಪೂರ್ಣಗೊಂಡರೆ ಜೂನ್ ಅಥವಾ ಜೂಲೈಗೆ ಮಾದಪ್ಪನ ಸನ್ನಿಧಿಯಲ್ಲಿ ಭಕ್ತರು ಬೆಳ್ಳಿ ರಥದ ದರ್ಶನ ಪಡೆಯಬಹುದಾಗಿದೆ.
ಇದನ್ನೂ ಓದಿ:
ಯಾದಗಿರಿ ಜಿಲ್ಲೆಯಲ್ಲಿದೆ 101 ದೇವಸ್ಥಾನ; ಪುರಾಣ ಪ್ರಸಿದ್ಧ ದೇವಾಲಯವನ್ನು ಸಂರಕ್ಷಿಸುವಂತೆ ಗ್ರಾಮಸ್ಥರ ಒತ್ತಾಯ
ದೇವಸ್ಥಾನಕ್ಕೆ ಕೂಡಿಟ್ಟ ಹಣವನ್ನೂ ಸರ್ಕಾರಿ ಶಾಲೆಗೆ ಕೊಟ್ಟ ಗ್ರಾಮಸ್ಥರು; ಶಿಥಿಲಗೊಂಡಿದ್ದ ಶಾಲೆಗೆ ಮರುಜೀವ
(400KG Silver collected from last 4 decade to liquefying now to prepare chariot for Madappa swamy )