ಬೆಂಗಳೂರು: ಜೆಡಿಎಸ್ ಪಕ್ಷ ತ್ಯಜಿಸಲು ಬಿಜೆಪಿ ಶಾಸಕರು 5 ಕೋಟಿ ಆಮಿಷವೊಡ್ಡಿದ್ದ ವಿಚಾರಕ್ಕೆ ಸಂಬಂಧಿಸಿ, ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ, ಸಚಿವ ಯೋಗೇಶ್ವರ್ ಹಾಗೂ ಶಾಸಕ ಎಸ್.ಆರ್.ವಿಶ್ವನಾಥ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಐವರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಿಂದ ಸಮನ್ಸ್ ಕೂಡ ಜಾರಿಯಾಗಿದೆ.
ಜೆಡಿಎಸ್ ತ್ಯಜಿಸಲು ₹ 5 ಕೋಟಿ ರೂಪಾಯಿಗಳ ಆಮಿಷ ಒಡ್ಡಲಾಗಿತ್ತು ಎಂದು ಐವರು ರಾಜಕಾರಣಿಗಳ ವಿರುದ್ಧ ಟಿ.ಜೆ.ಅಬ್ರಹಾಂ ಖಾಸಗಿ ದೂರು ದಾಖಲಿಸಿದ್ದರು. ವಿಧಾನಸಭೆಯಲ್ಲಿ ಕೆ. ಶ್ರೀನಿವಾಸ ಗೌಡ ಆರೋಪಿಸಿದ್ದರು. ಅಲ್ಲದೆ, ಬಿಜೆಪಿ ಶಾಸಕರಿಂದ ₹ 5 ಕೋಟಿ ಆಮಿಷವಿದೆ ಎಂಬ ಬಗ್ಗೆ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿಗೆ ವಿಷಯ ತಿಳಿಸಿದ್ದಾಗಿ ಹೇಳಿಕೆ ನೀಡಿದ್ದರು. ಅಪರಾಧದ ಬಗ್ಗೆ ಮಾಹಿತಿ ಇದ್ದರೂ ಪೊಲೀಸರಿಗೆ ತಿಳಿಸಿಲ್ಲ ಎಂಬ ಕಾರಣಕ್ಕೆ ಹೆಚ್.ಡಿ. ಕುಮಾರಸ್ವಾಮಿ ವಿರುದ್ದವೂ ದೂರುದಾರರು ಆರೋಪ ಮಾಡಿದ್ದರು. ಹೀಗಾಗಿ, ಕೋರ್ಟ್ ಐವರಿಗೂ ಸಮನ್ಸ್ ಜಾರಿಗೊಳಿಸಿದೆ. ನ್ಯಾಯಾಧೀಶ ತ್ಯಾಗರಾಜ ಎನ್. ಇನವಳ್ಳಿ ಈ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಆಪರೇಷನ್ ಕಮಲಕ್ಕಾಗಿ ಆಮಿಷ ಪ್ರಕರಣ; ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ತನಿಖೆಗೆ ಹೈಕೋರ್ಟ್ ಅಸ್ತು
ಇದನ್ನೂ ಓದಿ: ‘ರಾಜ್ಯದಲ್ಲಿ 17 ಕಾಂಗ್ರೆಸ್, ಜೆಡಿಎಸ್ ಶಾಸಕರು ರಾಜೀನಾಮೆ ಕೊಟ್ಟರು; ತಮ್ಮನ್ನು ಗೆಲ್ಲಿಸಿದ ಪಕ್ಷಕ್ಕೆ ದ್ರೋಹ ಬಗೆದರು’
Published On - 3:00 pm, Wed, 31 March 21