ಹಾಸನ, ಅಕ್ಟೋಬರ್ 18: ಲೋಕಸಭಾ ಚುನಾವಣೆ ವೇಳೆಯಲ್ಲಿ ಹಣ ಹಂಚಿಕೆ ಬಗ್ಗೆ ಅರಸೀಕೆರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ (shivalinge gowda) ಅವರದ್ದು ಎನ್ನಲಾದ ಆಡಿಯೊ ವೈರಲ್ ಬಗ್ಗೆ ಎಸ್ಪಿ ಕಛೇರಿಗೆ ಜೆಡಿಎಸ್ ನಾಯಕರು ದೂರು ನೀಡಿದ್ದಾರೆ. ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮಾಜಿ ಶಾಸಕ ಲಿಂಗೇಶ್ ನೇತೃತ್ವದಲ್ಲಿ ದೂರು ನೀಡಿದ್ದು, ಹಿಂಬರಹ ಪಡೆದುಕೊಂಡಿದ್ದಾರೆ. ಶಾಸಕ ಶಿವಲಿಂಗೇಗೌಡ ವಿರುದ್ದ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಮೊದಲು ದೂರು ಸ್ವೀಕರಿಸಲು ಪೊಲೀಸರು ನಿಕಾಕರಣೆ ಹಿನ್ನೆಲೆಯಲ್ಲಿ ಬಳಿಕ ಎಸ್ಪಿ ಕಛೇರಿಗೆ ದೂರು ನೀಡಲಾಗಿದೆ. ಸುಮಾರು 17 ನಿಮಿಷ ಇರುವ ಆಡಿಯೊ ಅಂಶಗಳನ್ನು ಪ್ರಸ್ತಾಪಿಸಿ ದೂರು ನೀಡಲಾಗಿದೆ.
ಇದನ್ನೂ ಓದಿ: ಲೋಕಸಭಾ ಚುನಾವಣೆ ವೇಳೆ ಹಾಸನದಲ್ಲಿ ಕೋಟಿ ಕೋಟಿ ಹಣ ಹಂಚಿಕೆ: ಶಿವಲಿಂಗೇಗೌಡರದ್ದು ಎನ್ನಲಾದ ಆಡಿಯೊ ವೈರಲ್
ಏಳು ಕೋಟಿ ರೂಪಾಯಿಗೂ ಅಧಿಕ ಹಣವನ್ನು ಮತದಾರರಿಗೆ ಹಂಚಿಕೆ ಮಾಡಿದ ಬಗ್ಗೆ ಆಡಿಯೊ ವೈರಲ್ ಆಗಿದೆ. ಶಾಸಕ ಶಿವಲಿಂಗೇಗೌಡ ಅವರದ್ದು ಎನ್ನಲಾದ ಆಡಿಯೊದಲ್ಲಿ ಹಾಸನದ ಕಾಂಗ್ರೆಸ್ ನಾಯಕರಾದ ಗೋಪಾಲಸ್ಚಾಮಿ, ಬಿ ಶಿವರಾಂ ಮತ್ತು ಸಿಎಂ, ಡಿಸಿಎಂ ಹೆಸರು ಪ್ರಸ್ತಾಪ ಆಗಿದೆ. ಹಂಚಿಕೆ ಆಗಿರುವ ಹಣ ಹವಾಲಾ ಹಣ ಆಗಿರುವ ಅನುಮಾನ ಇದೆ. ಹವಾಲಾ ಹಣ ಕಾನೂನು ಬಾಹಿರವಾಗಿದ್ದು ಈ ಬಗ್ಗೆ ತನಿಖೆ ಆಗಬೇಕು. ಕೇಸ್ ದಾಖಲಿಸಿ ತನಿಖೆ ನಡೆಸಲು ಒತ್ತಾಯಿಸಲಾಗಿದೆ.
ಪ್ರಕರಣದ ಬಗ್ಗೆ ಅರಸೀಕೆರೆಯಲ್ಲಿ ಶಾಸಕ ಶಿವಲಿಂಗೇಗೌಡ ಪ್ರತಿಕ್ರಿಯಿಸಿದ್ದು, ಆ ಆಡಿಯೊ ನಕಲಿ ಆಡಿಯೊ. ನನ್ನ ವಿರುದ್ಧ ಏನೋ ಸಂಚು ನಡೆಯುತ್ತಿರುವ ಅನುಮಾನವಿದೆ. ಮಿಮಿಕ್ರಿ ಆಡಿಯೊ ಸೃಷ್ಟಿ ಮಾಡಿ ಸಂಚು ಮಾಡಲಾಗಿದೆ. ನಮ್ಮ ಮನೆಗೆ ನಿತ್ಯ ನೂರಾರು ಜನರು ಬರುತ್ತಾರೆ. ನಾನು ಮಾತನಾಡಿದ್ದನ್ನ ತಿರುಚಲಾಗಿದೆ. ಖಂಡಿತಾ ಅದು ನನ್ನ ಮಾತುಗಳಲ್ಲ ಎಂದು ಹೇಳಿದ್ದಾರೆ.
ಚುನಾವಣೆ ನಡೆದು ಐದು ತಿಂಗಳು ಕಳೆದಿದೆ. ಆಗ ಮಾತನಾಡಿದ್ದು ಎಂದು ಈಗ ಆಡಿಯೊ ಬಿಟ್ಟಿದ್ದಾರೆ. ಕಟ್ ಅಂಡ್ ಪೇಸ್ಟ್ ಮಾಡಿ ಈ ರೀತಿಯ ಆಡಿಯೊ ಸೃಷ್ಟಿ ಮಾಡಲಾಗಿದೆ. ಈ ಹಿಂದೆ ಕೂಡ ಇಂತಹ ಆಡಿಯೊ ಎಡಿಟ್ ಮಾಡಿ ಹರಿಯ ಬಿಡಲಾಗಿತ್ತು. ಕೆಲವರು ಇದನ್ನು ಪ್ರವೃತ್ತಿ ಮಾಡಿಕೊಂಡಿದ್ದಾರೆ. ಇನ್ನು ಮುಂದೆ ಈ ರೀತಿ ಮಾಡುವವರ ಬಗ್ಗೆ ಎಚ್ಚರ ವಹಿಸುತ್ತೇವೆ. ಈ ಬಗ್ಗೆ ನಮ್ಮ ವಕೀಲರನ್ನು ಸಂಪರ್ಕ ಮಾಡಿ ದೂರು ಕೊಡುವ ಬಗ್ಗೆ ತೀರ್ಮಾನ ಮಾಡುತ್ತೇನೆ. ಹಣ ಹಂಚಿಕೆ ಬಗ್ಗೆ ಪ್ರಸ್ತಾಪವೇ ಇಲ್ಲ. ಅದೊಂದು ನಕಲಿ ಆಡಿಯೊ, ಏನು ಬೇಕಾದರೂ ತನಿಖೆ ಆಗಲಿ ಸಿದ್ಧನಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: ಮತ್ತೆ ಮುನ್ನಲೆಗೆ ಪಂಚಮಸಾಲಿ 2ಎ ಮೀಸಲಾತಿ ಕಿಚ್ಚು: ಸಿಎಂ ಜೊತೆ ಸಮುದಾಯದ ಮುಖಂಡರ ಸಭೆ
ಜೆಡಿಎಸ್ನಿಂದ ದೂರು ವಿಚಾರವಾಗಿ ಪ್ರತಿಕ್ರಿಯಿಸಿದ್ದು, ದೂರು ಕೊಡಲಿ ಬಿಡಿ, ಅದಕ್ಕೂ ನನಗೂ ಸಂಬಂಧ ಇಲ್ಲ. ಎಲ್ಲಾ ಆಡಿಯೊಗಳನ್ನು ಕಟ್ ಅಂಡ್ ಪೇಸ್ಟ್ ಮಾಡಲಾಗಿದೆ. ನಾನು ಮಾತಾಡಿರುವ ಕೆಲ ಅಂಶಗಳಲ್ಲಿ ಲೋಕಾರೂಡಿ ಮಾತನಾಡಿದ್ದೇನೆ. ಆದರೆ ಅದರ ನಡುವೆ ಕೆಲ ಮಾತು ಸೇರಿಸಿ ಕುತಂತ್ರ ಮಾಡಲಾಗಿದೆ. ನನ್ನ ಶಕ್ತಿ ಕುಂದಿಸಲು ಹೀಗೆ ಮಾಡಲಾಗುತ್ತಿದೆ. ರಾಜಕೀಯವಾಗಿ ಮೇಲೆ ಬರದಂತೆ ತಡೆಯಲು ಈ ರೀತಿ ಮಾಡುತ್ತಿದ್ದಾರೆ. ಈ ಬಗ್ಗೆ ನಾನೇ ಸತ್ಯ ಶೋಧನೆ ಮಾಡಬೇಕಾಗಿದೆ. ಸಚಿವ ಆಗೋದು ಬಿಡೋದು ನನ್ನ ಹಣೆಬರಹ ಇದ್ದಂತೆ ಆಗುತ್ತೆ. ಮೊದಲ ಬಾರಿಗೆ ನನ್ನ ಹೆಸರು ಬಂದಿತ್ತು ಕಡೆಗೆ ತಪ್ಪಿಹೋಯಿತು. ಈಗಲೂ ಸಚಿವ ಆಗಬಹುದು ಎಂದು ತಡೆಯಲು ಕುತಂತ್ರದಿಂದ ಹೀಗೆ ಮಾಡುತ್ತಿರಬಹುದ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.