ಕಲಬುರಗಿ, ಡಿಸೆಂಬರ್ 06: ಸಾವಿನ ಕೊನೆ ಕ್ಷಣದಲ್ಲಿ ಮನೆ ಸೇರಬೇಕೆಂದು ಕೋರಿಕೆ ಇಟ್ಟಿದ್ದ 93 ವರ್ಷದ ವೃದ್ಧೆಯ (Old woman) ಕೊನೆ ಆಸೆಯನ್ನು ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಈಡೇರಿಸಿದ್ದಾರೆ. ಮನೆಗೆ ತೆರಳಿದ ಕೆಲ ದಿನಗಳ ಬಳಿಕ ವೃದ್ಧೆ ನಾಗಮ್ಮ ನಿಧನರಾಗಿದ್ದಾರೆ. ಆ ಮೂಲಕ ಅಂತಿಮ ಕ್ಷಣ ಮನೆಯಲ್ಲಿ ಕಳೆಯಬೇಕೆಂಬ ಅವರ ಆಸೆಯನ್ನು ಈಡೇರಿಸಲಾಗಿದೆ.
ಸೊಸೆಗೆ ಕಿರಕುಳ ನೀಡಿದ ಪ್ರಕರಣದಲ್ಲಿ ನಾಗಮ್ಮ ಆರೋಪಿಯಾಗಿದ್ದರು. ಸೊಸೆ ಮೃತಪಟ್ಟ ಹಿನ್ನಲೆ ಕಳೆದ 26 ವರ್ಷದಿಂದ ಐಪಿಸಿ ಸೆಕ್ಷನ್ 498 ಅಡಿ ನಾಗಮ್ಮ ಹಾಗೂ ಕುಟುಂಬಸ್ಥರ ವಿರುದ್ದ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಬೆಳಗಾವಿಯಲ್ಲೊಂದು ಮನಕಲಕುವ ಘಟನೆ: ಸರ್ಕಾರಿ ನೌಕರಿಯಲ್ಲಿದ್ರೂ ತಾಯಿಯನ್ನ ಅನಾಥ ಮಾಡಿದ ಮಗ
ಸುದೀರ್ಘ ವಿಚಾರಣೆ ಬಳಿಕ 2022ರಲ್ಲಿ ಅಂದರೆ 92 ವಯಸ್ಸಿನಲ್ಲಿ ಕಲಬುರಗಿ ಹೈಕೋರ್ಟ್ನಲ್ಲಿ ಶಿಕ್ಷೆ ಪ್ರಕಟವಾಗಿತ್ತು. ಕಳೆದೊಂದು ವರ್ಷದಿಂದ ವೃದ್ದೆ ನಾಗಮ್ಮ ಜೈಲಿನಲ್ಲಿದ್ದರು. ಇತ್ತೀಚೆಗಷ್ಟೆ ಉಪಲೋಕಾಯುಕ್ತ ನ್ಯಾ. ಬಿ.ವೀರಪ್ಪ ಜೈಲಿಗೆ ಭೇಟಿ ನೀಡಿದ್ದರು.
ಅಜ್ಜಿಯ ಅನಾರೋಗ್ಯ ನೋಡಿ ಪೆರೋಲ್ ನೀಡಲು ಸೂಚಿಸಿದ್ದರು. ಉಪಲೋಕಾಯುಕ್ತರ ಸೂಚನೆ ಮೇರೆಗೆ ನವೆಂಬರ್ 1ರಂದು ಪೆರೋಲ್ ನೀಡಲಾಗಿತ್ತು. ಪೆರೋಲ್ ಸಿಕ್ಕ ಬಳಿಕ ನಾಗಮ್ಮ ಮಗಳ ಮನೆಗೆ ಹೋಗಿದ್ದರು. ಕೆಲ ದಿನಗಳ ಬಳಿಕ ನಿಧನರಾಗಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಮನೆಗೆ ಪೆಟ್ರೋಲ್ ಸುರಿದು ಕುಟುಂಬಸ್ಥರ ಹತ್ಯೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಾನಾಗಿಯೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಶಿವಲಿಂಗಪ್ಪ ಕರೇಕಲ್ ಶರಣಾದ ಆರೋಪಿ. ಸದ್ಯ ಫರಹತಾಬಾದ್ ಪೊಲೀಸರು ಆರೋಪಿ ಶಿವಲಿಂಗಪ್ಪನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ವೃದ್ಧ ದಂಪತಿಯ ಮೇಲೆ ಕುಡಗೋಲು, ಬಂದೂಕು ಹಿಡಿದು ಹಲ್ಲೆಗೆ ಯತ್ನಿಸಿದ ಸಾಕು ಮಗ
ಕಳೆದ 8 ದಿನಗಳಿಂದ ಆರೋಪಿ ಶಿವಲಿಂಗಪ್ಪ ತಲೆಮರೆಸಿಕೊಂಡಿದ್ದ. ಜಮೀನು ವಿವಾದದ ವಿಚಾರವಾಗಿ ದಾಯಾದಿಗಳಾದ ಗುಂಡೇರಾವ ಕರೇಕಲ್, ಶಿವಲಿಂಗಪ್ಪ ಕರೇಕಲ್ ನಡುವೆ ಕಲಹ ನಡೆದಿದೆ. ಗುಂಡೇರಾವ ಮನೆಗೆ ಸೋದರ ಸಂಬಂಧಿ ಶಿವಲಿಂಗಪ್ಪ ಬೆಂಕಿ ಹಚ್ಚಿದ್ದ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಗುಂಡೇರಾವ ಕರೇಕಲ್ ಕುಟುಂಬ ಪಾರಾಗಿತ್ತು. ಸ್ಥಳೀಯರ ಸಮಯ ಪ್ರಜ್ಞೆಯಿಂದ 6 ಜನರು ಅಪಾಯದಿಂದ ಪಾರಾಗಿದ್ದರು. ನ.28ರಂದು ಕಲಬುರಗಿ ತಾಲೂಕಿನ ಕಡಣಿ ಗ್ರಾಮದಲ್ಲಿ ಘಟನೆ ನಡೆದಿತ್ತು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.