ಮಕ್ಕಳ ಕಾಟಕ್ಕೆ ಬೇಸತ್ತು ನಾಲ್ಕು ಮಹಡಿ ಕಟ್ಟಡದಿಂದ ಹಾರಿ ವೃದ್ಧ ತಂದೆ ಆತ್ಮಹತ್ಯೆ
ಕಾರವಾರದಲ್ಲಿ ಬಂಗಾರದ ವ್ಯಾಪಾರಿಯಾಗಿದ್ದ ಕೃಷ್ಣಾನಂದ ಪಾವಸ್ಕರ್ ಅವರು ತಮ್ಮ ಮಕ್ಕಳ ಆಸ್ತಿ ವಿವಾದದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಟ್ಯಾಂತರ ರೂಪಾಯಿ ಸಂಪಾದಿಸಿದ ಅವರು ಮಕ್ಕಳಿಗೆ ಪ್ರತ್ಯೇಕ ಮನೆಗಳನ್ನು ಕಟ್ಟಿಸಿಕೊಟ್ಟಿದ್ದರು. ಆದರೆ, ಆಸ್ತಿಯ ವಿಭಜನೆಯಿಂದಾಗಿ ಉಂಟಾದ ಜಗಳದಿಂದ ಬೇಸತ್ತ ಅವರು ನಾಲ್ಕು ಮಹಡಿ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾರವಾರ, ಡಿಸೆಂಬರ್ 06: ಅವರು ಬಂಗಾರದ ವ್ಯಾಪಾರ ಮಾಡುತ್ತಾ ಕೊಟ್ಯಾಂತರ ರೂ. ಹಣ ಗಳಿಸಿದ್ದರು. ಮೂವರು ಮಕ್ಕಳಿಗೂ ಮದುವೆ ಮಾಡಿ ಪ್ರತ್ಯೇಕ ಮನೆ ಮಾಡಿ ಕೊಟ್ಟಿದ್ದರು. ಇಷ್ಟೆಲ್ಲ ಮಾಡಿದರು ಅವರಿಗೆ ಮಕ್ಕಳು ನಿತ್ಯ ಕಿರಿಕಿರಿ ಮಾಡುತ್ತಿದ್ದರು. ಹೀಗಾಗಿ ಮಕ್ಕಳ ಕಾಟ ತಾಳಲಾರದೆ ಮನೆ ಮುಂದಿರುವ ನಾಲ್ಕು ಮಹಡಿ ಕಟ್ಟಡದಿಂದ ಹಾರಿ ಆತ್ಮಹತ್ಯೆ (death) ಮಾಡಿಕೊಂಡಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಶಂಕರಮಠ ರಸ್ತೆಯ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ.
ಆಸ್ತಿ ವಿಚಾರಕ್ಕೆ ವೃದ್ಧ ತಂದೆಗೆ ಮಕ್ಕಳಿಂದ ಕಿರಿಕಿರಿ
ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಶಂಕರಮಠ ರಸ್ತೆಯ ನಿವಾಸಿ ಕೃಷ್ಣಾನಂದ ಪಾವಸ್ಕರ ಎಂಬುವವರು ಕಳೆದ ನಾಲವತ್ತು ವರ್ಷಗಳಿಂದ ಕಾರವಾರ ನಗರದಲ್ಲಿ ಬಂಗಾರದ ವ್ಯಾಪಾರ ಮಾಡುತ್ತಾ ಕೊಟ್ಯಾಂತರ ರೂಪಾಯಿ ಹಣ ಗಳಿಸಿದ್ದಾರೆ. ಒಳ್ಳೆಯ ಮನೆ, ಆಸ್ತಿ ಗಳಿಸಿದ್ದ ಈ ವೃದ್ಧನಿಗೆ ಮೂವರು ಗಂಡು ಮಕ್ಕಳಿದ್ದಾರೆ. ಮೂವರು ಕೂಡ ಪ್ರತ್ಯೇಕ ಬಂಗಾರದ ವ್ಯಾಪಾರ ಮಾಡುತ್ತಾ ಒಳ್ಳೆಯ ಹಣ ಸಂಪಾದಿಸುತ್ತಾ ಆರ್ಥಿಕವಾಗಿ ಸದೃಢರಾಗಿದ್ದಾರೆ.
ಇದನ್ನೂ ಓದಿ: ಬಾಲಕಿ ಮೇಲೆ ಅತ್ಯಾಚಾರ: ಸಹಾಯ ಮಾಡಿದ್ದ ಆರೋಪಿ ಸ್ನೇಹಿತನಿಗೂ ಶಿಕ್ಷೆ ವಿಧಿಸಿದ ಕೋರ್ಟ್
ಮೂವರಿಗೂ ಮದುವೆ ಆಗಿ ಮಕ್ಕಳಿದ್ದಾರೆ. ಇಷ್ಟೆಲ್ಲ ಸಮೃದ್ಧವಾಗಿರುವ ಈ ಕುಟುಂಬವನ್ನು ಬೆಳೆಸಿದ ವೃದ್ಧ ದಂಪತಿಗಳಿಗೆ ಮೂವರು ಮಕ್ಕಳು ನಿತ್ಯವೂ ಕಿರಿಕಿರಿ ಮಾಡುತ್ತಿದ್ದರು. ತನ್ನ ಮಕ್ಕಳ ಮನಸ್ಥಿತಿಯನ್ನ ಮೊದಲೇ ಅರಿತಿದ್ದ ಈ ವೃದ್ಧ ತಾನು ಸಂಪಾದಿಸಿದ ಹಣದಲ್ಲಿ ಕೆಲವು ಆಸ್ತಿಯನ್ನ ತನ್ನ ಹತ್ತಿರ ಇಟ್ಕೊಂಡಿದ್ದರು. ಮಕ್ಕಳು ಎಷ್ಟೆ ಕೇಳಿದರೂ ಯಾರಿಗೂ ಕೊಡದೆ ತನಗೆ ಮತ್ತು ಹೆಂಡತಿಯ ಜೀವನೋಪಾಯಕ್ಕೆ ಬೇಕಾಗುತ್ತೆ ಅಂತಾ ಗದರಿಸಿ ಕಳಿಸುತ್ತಿದ್ದರು.
ಆಗಾಗ ಮೂವರು ಮಕ್ಕಳಿಗೂ ಮತ್ತು ವೃದ್ಧ ತಂದೆಗೂ ಜಗಳ ನಡೆಯುತ್ತಲೆ ಇತ್ತು. ಕಳೆದ ಕೆಲವು ದಿನಗಳಿಂದ ಕಿರಿಯ ಮಗನಾದ ವಿನಯ್ ಮನೆಯಲ್ಲಿ ದಂಪತಿಗಳು ವಾಸವಾಗಿದ್ದರು. ತಂದೆ ಕಡೆ ಇರುವ ಆಸ್ತಿಯನ್ನೆಲ್ಲಾ ಕಿರಿಯ ಮಗನ ಪಾಲಾಗುತ್ತೆ ಅಂತಾ ಆತನ ಮನೆಗೆ ಹೋಗಿ ಆಸ್ತಿ ಪಾಲು ಮಾಡಿ ಕೊಟ್ಬಿಡಿ ಅಂತಾ ದುಂಬಾಲು ಬಿದ್ದಿದ್ದರು. ಇತ್ತ ಕಿರಿಯ ಮಗ ಕೂಡ ನನ್ನ ಮನೆಯಲ್ಲಿ ವಾಸ ವಾಗಿದ್ದಿರಿ ಆ ಆಸ್ತಿಯನ್ನ ತನ್ನ ಹೆಸರಿನಲ್ಲಿ ಮಾಡಿಸಿ ಅಂತಾ ತಂದೆಯನ್ನ ಪಿಡಿಸುತ್ತಿದ್ದ ಎನ್ನಲಾಗಿದೆ.
ನಾಲ್ಕು ಮಹಡಿ ಕಟ್ಟಡ ಮೇಲಿಂದ ಹಾರಿ ಆತ್ಮಹತ್ಯೆ
ಹೀಗೆ ಮಕ್ಕಳ ಕಾಟಕ್ಕೆ ಬೇಸತ್ತಿದ್ದ ಕೋಟ್ಯಾಧಿಶ ವೃದ್ಧ ತಂದೆ, ತಮ್ಮ ಮನೆಯ ಮುಂದಿರುವ ನಾಲ್ಕು ಮಹಡಿ ಕಟ್ಟಡ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಟ್ಟಡದಿಂದ ಹಾರಿದ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದರ ಬದಲು, ಮೂವರು ಮಕ್ಕಳು ಅವರ ಮೃತ ದೇಹದ ಮುಂದೆ ಜಗಳ ಆಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಕ್ರಮ ಗೋಮಾಂಸ ಸಾಗಾಟ ದಂಧೆ: ಬರೋಬ್ಬರಿ 1.5 ಮಾಂಸ ಪತ್ತೆ!
ಒಟ್ಟಾರೆಯಾಗಿ ಜೀವನ ಪೂರ್ತಿ ಕಷ್ಟ ಪಟ್ಟು ಕೊಟ್ಯಾಂತರ ರೂ. ಹಣ ಗಳಸಿದರು ಕೂಡ ಕೊನೆಯ ದಿನಗಳಲ್ಲಿ ನೆಮ್ಮದಿಯ ಜೀವನ ನಡೆಸಬೇಕು ಅನ್ಕೊಂಡಿದ್ದ ವೃದ್ಧನಿಗೆ, ಆಸ್ತಿಗಾಗಿ ತಂದೆಯನ್ನ ಮಾನಸಿಕವಾಗಿ ನೋವು ಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳುವ ಹಾಗೆ ಮಾಡಿದ್ದಾರೆ. ಸದ್ಯ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.