ಬೆಂಗಳೂರಿನಲ್ಲಿ ಅಕ್ರಮ ಗೋಮಾಂಸ ಸಾಗಾಟ ದಂಧೆ: ಬರೋಬ್ಬರಿ 1.5 ಮಾಂಸ ಪತ್ತೆ!
ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಮಾಂಸ ಸಾಗಾಟ ಪ್ರಕರಣ ಭಾರೀ ಸದ್ದು ಮಾಡಿತ್ತು. ಮಟನ್ ಮಾಂಸದ ಜೊತೆಗೆ ದನದ ಮಾಂಸ ಮಿಕ್ಸ್ ಮಾಡಿ ಹೋಟೆಲ್ಗಳಿಗೆ ಸರಬರಾಜು ಮಾಡಲಾಗುತ್ತಿದೆ ಎಂದು ಹಿಂದೂ ಕಾರ್ಯಕರ್ತ ಪುನಿತ್ ಕೆರೆಹಳ್ಳಿ ಆರೋಪಿಸಿದ್ದರು. ಈ ಪ್ರಕರಣ ಮಾಸುವ ಮುನ್ನವೇ ನಗರದಲ್ಲಿ ಅಕ್ರಮ ಗೋಮಾಂಸ ಸಾಗಾಟ ದಂಧೆ ಬೆಳಕಿಗೆ ಬಂದಿದೆ.
ಬೆಂಗಳೂರು, (ಡಿಸೆಂಬರ್ 06): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಕ್ರಮ ಗೋಮಾಂಸ ಸಾಗಾಟ ದಂಧೆ ಬೆಳಕಿಗೆ ಬಂದಿದೆ. ಅಮೃತಹಳ್ಳಿ ಮತ್ತು ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿ ಇಂದು (ಡಿಸೆಂಬರ್ 06) ಒಂದೇ ದಿನ ಸುಮಾರು 1.5 ಟನ್ ನಷ್ಟು ಗೋಮಾಂಸ ಪತ್ತೆಯಾಗಿದೆ. ಚಿಕ್ಕಬಳ್ಳಾಪುರದ ಅಲ್ಲಿಪುರ ಕಸಾಯಿಖಾನೆಯಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ವಾಹನಗಳನ್ನು ಪೊಲೀಸರು ಅಡ್ಡಗಟ್ಟಿ ಹಿಡಿದಿದ್ದಾರೆ.
ಕೆ.ಆರ್.ಪುರಂ ಕಡೆಗೆ ಸಾಗಿಸುತ್ತಿದ್ದ ಟವೆರಾ ವಾಹನವನ್ನು ಅಮೃತಹಳ್ಳಿ ಪೊಲೀಸರು, ಹೆಬ್ಬಾಳ ಫ್ಲೈಓವರ್ ಬಳಿ ಅಡ್ಡಗಟ್ಟಿ ಹಿಡಿದಿದ್ದಾರೆ. 6 ಹಸು, 16 ಕರು ವಧೆ ಮಾಡಿ ಮಾಂಸ ಸಾಗಿಸಲಾಗುತ್ತಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ಸದ್ಯ ಪೊಲೀಸರು, ಚಾಲಕ ಥವೆರಾ ಖಾನ್ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.
ಇದನ್ನೂ ಓದಿ: ಕಚ್ಚಿತ್ತೆಂದು ಕೋಲಿನಿಂದ ಹೊಡೆದಿದ್ದಕ್ಕೆ ಶ್ವಾನ ಸಾವು: ಮಾಲೀಕನ ವಿರುದ್ಧ ಎಫ್ಐಆರ್
ಕೆಟ್ಟು ನಿಂತಿದ್ದ ಕಾರಿನಲ್ಲೂ ಗೋಮಾಂಸ ಪತ್ತೆ
ಇನ್ನೊಂದೆಡೆ ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿ ಕೆಟ್ಟು ನಿಂತಿದ್ದ ಫೋರ್ಡ್ ಕಾರಿನಲ್ಲೂ ಗೋಮಾಂಸ ಪತ್ತೆಯಾಗಿದೆ. ಸುಮಾರು 500 ಕೆಜಿಯಷ್ಟು ಗೋಮಾಂಸ ಇದ್ದ ಕಾರನ್ನು ಚಿಕ್ಕಜಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಕಾರಿನ ಸಂಖ್ಯೆ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಬಗ್ಗೆ ಚಿಕ್ಕಜಾಲ ಮತ್ತು ಅಮೃತಹಳ್ಳಿ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಲಾಗಿದ್ದು, ಈ ಬಗ್ಗೆ ಪೊಲೀಸರು ಸಹ ತನಿಖೆ ಕೈಗೊಂಡಿದ್ದಾರೆ.
ಎರಡೂ ವಾಹನಗಳಲ್ಲಿ ಸಿಕ್ಕಿರುವ ಗೋಮಾಂಸವನ್ನು ಒಂದೇ ಕಡೆ ಅಂದರೆ ಚಿಕ್ಕಬಳ್ಳಾಪುರದ ಅಲ್ಲಿಪುರ ಕಸಾಯಿಖಾನೆಯಿಂದ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದ್ದು, ಎಲ್ಲಿಗೆ ಸಾಗಿಸಲಾಗುತ್ತಿತ್ತು? ಇದರ ಹಿಂದೆ ಯಾರು ಇದ್ದಾರೆ? ಎನ್ನುವ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:01 pm, Fri, 6 December 24