ಕಚ್ಚಿತ್ತೆಂದು ಕೋಲಿನಿಂದ ಹೊಡೆದಿದ್ದಕ್ಕೆ ಶ್ವಾನ ಸಾವು: ಮಾಲೀಕನ ವಿರುದ್ಧ ಎಫ್ಐಆರ್
ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿ ವಾಕಿಂಗ್‌ಗೆ ಹೋಗುವಾಗ ಸಾಕು ನಾಯಿ ಮಾಲೀಕನಿಗೆ ಕಚ್ಚಿದ್ದು, ಆಕ್ರೋಶಗೊಂಡು ಕೋಲಿನಿಂದ ಹೊಡೆದು ನಾಯಿಯನ್ನು ಮಾಲೀಕ ಕೊಂದಿರುವಂತಹ ಘಟನೆ ನಡೆದಿದೆ. ಸದ್ಯ ಪುಟ್ಟೇನಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಇದೇ ರೀತಿಯಾಗಿ ವರ್ತೂರಿನಲ್ಲಿ ಚಾಲಕನೊಬ್ಬ ನಾಯಿಮರಿಯ ಮೇಲೆ ಕಾರು ಹತ್ತಿಸಿದ್ದು, ಸ್ಥಳದಲ್ಲೇ ಮೃತಪಟ್ಟಿರುವಂತಹ ಘಟನೆ ನಡೆದಿದೆ.
ಬೆಂಗಳೂರು, ಡಿಸೆಂಬರ್ 06: ಸಾಕು ನಾಯಿಯನ್ನು (dog) ಕೋಲಿನಿಂದ ಹೊಡೆದು ಮಾಲೀಕ ಕೊಂದಿರುವಂತಹ ಘಟನೆ ನಗರದ ಪುಟ್ಟೇನಹಳ್ಳಿಯಲ್ಲಿ ನಡೆದಿದೆ. ನಾಯಿ ಮಾಲೀಕ ಕರಣ್‌ನಿಂದ ಕೃತ್ಯವೆಸಗಲಾಗಿದೆ. ಸದ್ಯ ಪುಟ್ಟೇನಹಳ್ಳಿ ಠಾಣೆಯಲ್ಲಿ ಕರಣ್ ವಿರುದ್ಧ ಕೇಸ್ ದಾಖಲಾಗಿದೆ.
ಮಾಲೀಕ ಕರಣ್ ನಿತ್ಯ ಬೆಳಗ್ಗೆ ಸಾಕು ನಾಯಿ ರಾಟ್ ವಿಲ್ಲರ್ ವಾಕಿಂಗ್‌ಗೆ ಕರೆದೊಯ್ಯುತ್ತಿದ್ದರು. ಇಂದು ಬೆಳಗ್ಗೆ ಕೂಡ ವಾಕಿಂಗ್‌ಗೆ ಕರೆದುಕೊಂಡು ಹೋಗುವಾಗ ಮಾಲೀಕನಿಗೆ ಶ್ವಾನ ಕಚ್ಚಿದೆ. ಈ ವೇಳೆ ಕೈಯಲ್ಲಿದ್ದ ಕೋಲಿನಿಂದ ನಾಯಿಯನ್ನು ಹೊಡೆದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದೆ. ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ಮಾಡಿ, ಕೇಸ್ ದಾಖಲಿಸಿದ್ದಾರೆ.
ನಾಯಿ ಮರಿ ಮೇಲೆ ಕಾರು ಹತ್ತಿಸಿ ಚಾಲಕನ ವಿಕೃತಿ: ಸಾವು
ಇನ್ನು ಮತ್ತೊಂದು ಪ್ರಕರಣದಲ್ಲಿ ನಾಯಿ ಮರಿ ಮೇಲೆ ಕಾರು ಹತ್ತಿಸಿ ಚಾಲಕನ ವಿಕೃತಿ ಮೆರೆದಿರುವಂತಹ ಘಟನೆ ನಗರದ ವರ್ತೂರಿನ ಬೆಳಗೆರೆಯ ಖಾಸಗಿ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಅಪಾರ್ಟ್ಮೆಂಟ್ನ ಗೇಟ್ ಬಳಿ ನಿಂತಿದ್ದ ನಾಯಿ ಮರಿ ಮೇಲೆ ಚಾಲಕ ಕಾರು ಹತ್ತಿಸಿದ್ದಾನೆ. ಡಿಸೆಂಬರ್ 4ರಂದು ನಡೆದ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಾದ ಬೀದಿ ನಾಯಿಗಳ ಕಾಟ; ಕಬ್ಬನ್ ಪಾರ್ಕ್ ನಲ್ಲೂ ಸಾಕುನಾಯಿಗಳ ಮಾಲೀಕರಿಂದ ರೂಲ್ಸ್ ಬ್ರೇಕ್
ಕಾರಿನ ಚಕ್ರ ಹತ್ತಿ ನಾಯಿ ಮರಿ ಒದ್ದಾಡುತ್ತಿದ್ದರು ಚಾಲಕ ಮಾತ್ರ ತಿರುಗಿ ನೋಡಿಲ್ಲ. ಸಾರ್ವಜನಿಕರು ಸಿಸಿಟಿವಿ ದೃಶ್ಯವನ್ನು ಎಕ್ಸ್ನಲ್ಲಿ ಅಪ್ಲೋಡ್ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡುವ ಮೂಲಕ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಟಾಪ್ ಮೇಲೆ ನಾಯಿಗಳನ್ನ ಕೂರಿಸಿಕೊಂಡು ಕಾರು ಚಾಲನೆ ಮಾಡಿದ್ದ ವ್ಯಕ್ತಿ ಅರೆಸ್ಟ್
ಟಾಪ್ ಮೇಲೆ ನಾಯಿಗಳನ್ನ ಕೂರಿಸಿಕೊಂಡು ಕಾರು ಚಾಲನೆ ಮಾಡಿದ್ದ ವ್ಯಕ್ತಿಯನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಚಾಲಕ ಹರೀಶ್(36) ಅರೆಸ್ಟ್ ಆಗಿದ್ದಾರೆ. ಯಾವುದೇ ರೀತಿ ಸುರಕ್ಷತೆ ಇಲ್ಲದೆ ಮೂರು ನಾಯಿಗಳನ್ನ ಕೂರಿಸಿಕೊಂಡು ಕಲ್ಯಾಣನಗರ ಸಮೀಪ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ್ದರು.
ಇದನ್ನೂ ಓದಿ: ಬೆಂಗಳೂರಿನ ಬೀದಿನಾಯಿಗಳ ಕಾಟ: ಟಿವಿ9 ಅಭಿಯಾನ ಬೆನ್ನಲ್ಲೇ ಸಹಾಯವಾಣಿ ಬಿಡುಗಡೆ ಮಾಡಿದ ಬಿಬಿಎಂಪಿ
ಕೇಳಲು ಹೋದವರಿಗೆ ಅವಾಚ್ಯ ಶಬ್ದಗಳಿಂದ ಹರೀಶ್ ನಿಂದಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು. ಘಟನೆ ಬಗ್ಗೆ ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದರು. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:05 pm, Fri, 6 December 24