
ಬೀದರ್, (ಅಕ್ಟೋಬರ್ 26): ಅಕ್ರಮ ಸಂಬಂಧ (Extramarital Affair)ಹೊಂದಿದ್ದ ಯುವಕನೋರ್ವನನ್ನು ಕಟ್ಟಿಹಾಕಿ ದೊಣ್ಣೆಯಿಂದ ಮನಬಂದಂತೆ ಕ್ರೂರವಾಗಿ ಥಳಿಸಿ ಸಾಯಿಸಿರುವ ಘಟನೆ ಬೀದರ್‌ನಲ್ಲಿ (Bidar) ನಡೆದಿದೆ. ಮಹಾರಾಷ್ಟ್ರ (Maharashtra)ನಾಂದೇಡ್ ಜಿಲ್ಲೆಯ ಗೌನಗಾಂವ್ ಗ್ರಾಮದ ನಿವಾಸಿ ವಿಷ್ಣು ಮೃತ ವ್ಯಕ್ತಿ. ವಿಷ್ಣು ಬೀದರ್‌ನ ಚಿಂತಾಕಿ ಗ್ರಾಮದ ಪೂಜಾಳೊಂದಿಗೆ ಅಕ್ರಮ ಸಂಬಂಧದಲ್ಲಿದ್ದ. ಇನ್ನು ಪೂಜಾಗೆ ಈಗಾಗಲೇ ಮದುವೆಯಾಗಿದ್ದರೂ, ಆಕೆ ವಿಷ್ಣುವಿನೊಟ್ಟಿಗೆ ಪ್ರೀತಿಯಲ್ಲಿ ಬಿದ್ದಿದ್ದಳು. ಇವರಿಬ್ಬರ ವಿಷಯ ತಿಳಿಯುತ್ತಲೇ ಪೂಜಾಳ ಕುಟುಂಬಸ್ಥರು ವಿಷ್ಣುವನ್ನು ಕರೆಸಿ ಕಂಬಕ್ಕೆ ಕಟ್ಟಿ ಥಳಿಸಿ ಕೊಂದಿದ್ದಾರೆ. ಸದ್ಯ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆ ಗೌಣಗಾಂವ್ ಗ್ರಾಮದ ನಿವಾಸಿ ವಿಷ್ಣು (27) ಮೃತ ಯುವಕ. ವಿಷ್ಣು ಕಳೆದ ಒಂದು ವರ್ಷದಿಂದ ನಾಗನಪಲ್ಲಿ ಗ್ರಾಮದ ವಿವಾಹಿತ ಮಹಿಳೆ ಪೂಜಾ ಎಂಬುವವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಅಕ್ಟೋಬರ್ 21ರಂದು ವಿಷ್ಣು ತನ್ನ ಇಬ್ಬರು ಸ್ನೇಹಿತರೊಂದಿಗೆ ಮಹಿಳೆಯ ಮನೆಗೆ ಬಂದಿದ್ದ ವೇಳೆ, ಆಕೆಯ ಕುಟುಂಬಸ್ಥರಿಂದ ಆಕ್ಷೇಪ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದು, ಮಹಿಳೆಯ ತಂದೆ ಅಶೋಕ್ ಮತ್ತು ಸಹೋದರ ಗಜಾನನ ಸೇರಿ ವಿಷ್ಣುವಿನ ಕೈ-ಕಾಲುಗಳನ್ನು ಕಟ್ಟಿ ದೊಣ್ಣೆಗಳಿಂದ ಮನಬಂದಂತೆ ಬರ್ಬರ ಹಲ್ಲೆ ನಡೆಸಿದ್ದಾರೆ.
ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸುತ್ತಿರುವ ದೃಶ್ಯಗಳನ್ನು ಯಾರೋ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಈ ವಿಡಿಯೋ ವೈರಲ್ ಆಗಿದೆ. ಹಲ್ಲೆಯ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಚಿಂತಾಕಿ ಪೊಲೀಸರು ದೌಡಾಯಿಸಿ, ಗಂಭೀರವಾಗಿ ಗಾಯಗೊಂಡಿದ್ದ ವಿಷ್ಣುವನ್ನು ಚಿಕಿತ್ಸೆಗಾಗಿ ತಕ್ಷಣವೇ ಆಸ್ಪತ್ರೆಗೆ ರವಾನಿಸಿದ್ದರು. ಆದ್ರೆ, ತೀವ್ರವಾಗಿ ಗಾಯಗೊಂಡಿದ್ದ ವಿಷ್ಣು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ.
ಮಗನನ್ನು ಕೊಲೆ ಮಾಡುವ ಉದ್ದೇಶದಿಂದಲೇ ಥಳಿಸಲಾಗಿದೆ ಎಂದು ಆರೋಪಿಸಿ ಮೃತ ವಿಷ್ಣು ಅವರ ತಾಯಿ ಲಕ್ಷ್ಮೀ ಅವರು ಚಿಂತಾಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮತ್ತೊಂದೆಡೆ ಅಕ್ರಮ ಸಂಬಂಧದ ಶಂಕೆ ಇರುವ ಮಹಿಳೆ ಸಹ ತನ್ನ ಕುಟುಂಬಸ್ಥರ ಪರವಾಗಿ ಚಿಂತಾಕಿ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ.
ಸದ್ಯ ಲಭ್ಯವಿರುವ ಮಾಹಿತಿ ಹಾಗೂ ಸಾಕ್ಷ್ಯಗಳ ಆಧಾರದ ಮೇಲೆ ಹಲ್ಲೆ ನಡೆಸಿ ಕೊಲೆಗೈದ ಆರೋಪದ ಮೇಲೆ ಮಹಿಳೆಯ ತಂದೆ ಅಶೋಕ್ ಮತ್ತು ಆಕೆಯ ಸಹೋದರ ಗಜಾನನ ಎಂಬ ಇಬ್ಬರನ್ನು ಚಿಂತಾಕಿ ಪೊಲೀಸರು ಬಂಧಿಸಿದ್ದು, ಯುವಕನ ಕೊಲೆಗೆ ನಿಖರ ಕಾರಣಗಳೇನು ಎನ್ನುವುದು ತನಿಖೆಯಿಂದ ತಿಳಿದುಬರಬೇಕಿದೆ.
Published On - 7:58 pm, Sun, 26 October 25