ಸಿದ್ದರಾಮಯ್ಯ ಯಾದಗಿರಿ ಕ್ಷೇತ್ರದಿಂದ ಸ್ಪರ್ಧಿಸಿದರೆ 1 ಕೋಟಿ ರೂ ನೀಡುವೆ ಎಂದು ಆಫರ್ ನೀಡಿದ ಬಿಜೆಪಿ ಮುಖಂಡ
ವಿಧಾನಸಭೆ ಚುನಾವಣೆಗೆ ಕೆಲವು ತಿಂಗಳು ಬಾಕಿಯಿದ್ದು, ಕಾಂಗ್ರೆಸ್ನ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಫರ್ಧಿಸುವುದಾಗಿ ಹೇಳಿದ್ದರು. ಇದೀಗ ಯಾದಗಿರಿ ಕ್ಷೇತ್ರದಿಂದ ಸ್ಪರ್ಧಿಸಿದ್ರೆ ನನ್ನ ಜಮೀನು ಮಾರಿಯಾದರೂ 1 ಕೋಟಿ ರೂ. ಕೊಡುತ್ತೇನೆ ಎಂದು ಬಿಜೆಪಿ ಮುಖಂಡ ಚಂದ್ರಾಯ ನಾಗರಾಳ್ ಹೇಳಿದ್ದಾರೆ.
ಯಾದಗಿರಿ: ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿದ್ದು, ಚುನಾವಣಾ ಕಾವು ಜೋರಾಗಿದೆ. ಇದೀಗ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಫರ್ಧಿಸುವುದಾಗಿ ಹೇಳಿದಾಗಿನಿಂದ ಹೇಗಾದರೂ ಸಿದ್ದರಾಮಯ್ಯರನ್ನ ಸೋಲಿಸಬೇಕು ಎಂದು ಉಭಯ ಪಕ್ಷಗಳು ಹರಸಾಹಸ ನಡೆಸುತ್ತಿದೆ. ಈ ಸಂದರ್ಭದಲ್ಲಿ ಯಾದಗಿರಿ ಕ್ಷೇತ್ರದಿಂದ ಸ್ಪರ್ಧಿಸಿದ್ರೆ ನನ್ನ ಜಮೀನು ಮಾರಿಯಾದರೂ 1 ಕೋಟಿ ರೂ. ಕೊಡುತ್ತೇನೆ ಎಂದು ಬಿಜೆಪಿ ಮುಖಂಡ ಚಂದ್ರಾಯ ನಾಗರಾಳ್ ಹೇಳಿದ್ದಾರೆ. ಯಾದಗಿರಿಯಿಂದ ಸ್ಪರ್ಧಿಸಿದ್ರೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರಿ 50-60 ಸಾವಿರ ಮತಗಳಿಂದ ಗೆಲ್ಲಿಸುತ್ತೇವೆ. ಯಾದಗಿರಿಯಲ್ಲಿ ಸ್ಪರ್ಧಿಸಿ ಎಂದು ಕಾಲು ಹಿಡಿದು ಮನವಿ ಮಾಡುತ್ತೇನೆ ಎಂದಿದ್ದಾರೆ.
ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಯಾದಗಿರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ ಗೆಲ್ಲಿಸುತ್ತೇವೆ. ನಾನೇನು ದೊಡ್ಡ ಉದ್ಯಮಿ ಅಲ್ಲ, ಅವರ ಅಭಿಮಾನಿ ಅವರು ಬಂದ್ರೆ ನಮ್ಮ ಭಾಗ ಅಭಿವೃದ್ಧಿ ಆಗುತ್ತೆ ಎಂಬ ಆಸೆಯಿದೆ. ಸಿದ್ದರಾಮಯ್ಯ ಋಣದಲ್ಲಿ ನಮ್ಮ ಭಾಗದ ಜನ ಇದ್ದಾರೆ ಹೀಗಾಗಿ ಓಟ್ ಹಾಕ್ತಾರೆ. ಇದೇ ಕಾರಣಕ್ಕೆ ನನ್ನ ಜಮೀನು ಮಾರಿ ಸಿದ್ದರಾಮಯ್ಯಗೆ ಹಣ ಕೊಡುತ್ತೇನೆ. ಸಿದ್ದರಾಮಯ್ಯ ಬಂದರೆ ಯಾದಗಿರಿ, ಸುರಪುರ, ಶಹಾಪುರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಸಿದ್ದರಾಮಯ್ಯ ಸ್ಪರ್ಧಿಸದಿದ್ದರೆ ಶರಣಬಸಪ್ಪಗೌಡ ದರ್ಶನಾಪುರ ಸ್ಪರ್ಧಿಸಲಿ ಅವರು ಸ್ಪರ್ಧೆ ಮಾಡಿದ್ರೆ ನಾನು 25 ಲಕ್ಷ ರೂ. ಕೊಡುವೆ. ಕಾಂಗ್ರೆಸ್ ಮುಖಂಡರಾದ ಎ.ಸಿ ಕಾಡ್ಲೂರ್, ಭೀಮಣ್ಣ ಮೇಟಿ ಹಾಗೂ ಶರಣಪ್ಪ ಸಲಾದಪುರ ಸ್ಪರ್ಧೆ ಮಾಡಿದ್ರು ನಾವು ಬಿಜೆಪಿ ಸೇರ್ತೆವೆ. ಅಹಿಂದ ನಾಯಕರಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎಂದು ಯಾದಗಿರಿಯಲ್ಲಿ BJP ಮುಖಂಡ ಚಂದ್ರಾಯ ನಾಗರಾಳ್ ಹೇಳಿಕೆ ನೀಡಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ