ಕಲಬುರಗಿ, ಆ.07: ಮನೆಯಲ್ಲಿನ ಹುಂಡಿ ಹಣ ಕದ್ದಿದಿಯಾ ಎಂದು ಆರೋಪಿಸಿ ಅಪ್ರಾಪ್ತ ಬಾಲಕನೋರ್ವನನ್ನ ಕೋಣೆಯಲ್ಲಿ ಕೂಡಿಹಾಕಿ ಸಿಗರೇಟ್‌ನಿಂದ ಕೈ ಕಾಲಿಗೆ ಸುಟ್ಟು ಚಿತ್ರಹಿಂಸೆ ನೀಡಿರುವ ಘಟನೆ ಕಲಬುರಗಿ(Kalaburagi) ನಗರದಲ್ಲಿ ನಡೆದಿದೆ. ನಗರದ ದುಬೈ ಕಾಲೋನಿಯ ನಿವಾಸಿ 14 ವರ್ಷದ ಬಾಲಕ ಅಭಿಷೇಕ್ ಚಿತ್ರಹಿಂಸೆಗೊಳಗಾಗಿದ್ದಾನೆ. ಅಂದಹಾಗೇ ಎಂದಿನಂತೆ ಅಭಿಷೇಕ್ ಶಾಲೆಗೆ ಹೋಗಿ ಬರುತ್ತಿದ್ದ. ಈ ವೇಳೆ ಶಿವಕುಮಾರ್ ಮನೆಯಲ್ಲಿ ಹುಂಡಿ ಹಣ ಕದ್ದಿದಿಯಾ ಎಂದು ಶ್ರೀಶೈಲ್ ವಾರದ್ ಎಂಬಾತನ ಕೋಣೆಗೆ ಕರೆದುಕೊಂಡು ಹೋಗಿ ಸಿಗರೇಟ್‌ನಿಂದ ಕೈಕಾಲಿಗೆ ಸುಟ್ಟಿದ್ದಾರೆ. ಶಿವಕುಮಾರ್, ಜಗನ್ನಾಥ್, ಸೈಬಣ್ಣ, ಮಲ್ಲಿಕ್, ಆದಿತ್ಯ ಸೇರಿಕೊಂಡು ಬಾಲಕನಿಗೆ ಹಣ ಕದ್ದಿದ್ದು ಒಪ್ಪಿಕೋ ಎಂದು ತಲೆ ಕೆಳಗೆ, ಕಾಲು ಮೇಲೆ ಮಾಡಿ ಅಮಾನುಷ ಕೃತ್ಯ ಎಸಗಿದ್ದಾರೆ.
ಇನ್ನು ಚಿತ್ರಹಿಂಸೆಗೊಳಗಾದ ಅಪ್ರಾಪ್ತ ಬಾಲಕನ ಪೋಷಕರು ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದು, ವಿಷಯ ತಿಳಿಯುತ್ತಲೆ ಓಡೊಡಿ ಬಂದಿದ್ದಾರೆ. ಅಪ್ರಾಪ್ತ ಬಾಲಕ ಅಭಿಷೇಕ್ ತಾನು ಹಣ ಕದ್ದಿಲ್ಲವೆಂದರೂ, ನೀನೇ ಹಣ ಕದ್ದಿದಿಯಾ ಒಪ್ಪಿಕೋ ಎಂದು ನಾಲ್ಕೈದು ಜನ ಯುವಕರು ಸೇರಿಕೊಂಡು ಸಿಗರೇಟ್‌ನಿಂದ ಸುಟ್ಟು ಸತತ ಮೂರ್ನಾಲ್ಕು ಗಂಟೆ ಥಳಿಸಿದ್ದಲ್ಲದೇ ಫ್ಯಾನ್‌ಗೆ ಬಾಲಕನ ಕಾಲು ಸಿಲುಕಿಸಲು ಯತ್ನಿಸಿದ್ದಾರೆ. ಬಾಲಕ ಎಷ್ಟೇ ಕೂಗಾಟ, ಚಿರಾಟ ಮಾಡಿದರೂ ಸಹ ನೆರೆ-ಹೊರೆಯವರು ಸಹಾಯಕ್ಕೆ ಬರಲಿಲ್ಲ. ಬಳಿಕ ನೀನು ಒಪ್ಪಿಕೊಳ್ಳದಿದ್ದರೆ ನಿನ್ನನ್ನ ಸಾಯಿಸುವುದಾಗಿ ಧಮ್ಕಿ ಹಾಕಿದ್ದಾರೆ. ಇಲ್ಲವಾದಲ್ಲಿ ನೀನು ಸರಾಯಿ ಕುಡಿದಿರೋ, ಸಿಗರೇಟ್ ಸೇದಿರೋ ವಿಡಿಯೋಗಳನ್ನ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಕೊನೆಗೆ ಅವರ ಚಿತ್ರಹಿಂಸೆ ತಾಳಲಾರದೇ ಹೌದು ನಾನೇ ಹುಂಡಿ ಹಣ ಕಳ್ಳತನ ಮಾಡಿರುವುದಾಗಿ ಬಾಲಕ ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ:ಹಾಡಹಗಲೇ ಅಕ್ಕ-ತಂಗಿಯನ್ನು ರಸ್ತೆಯಿಂದ ಕಿಡ್ನಾಪ್ ಮಾಡಿ, ಕಚ್ಚಿ ಚಿತ್ರಹಿಂಸೆ ನೀಡಿದ ಯುವಕರು
ಇದಾದ ಬಳಿಕ ನೀನು ನಮಗೆ ಐದು ಸಾವಿರ ರೂಪಾಯಿ ಹಣ ಕೊಡಬೇಕು ಮತ್ತು ಚಿನ್ನಾಭರಣ ಕಳ್ಳತನ ಮಾಡಿಕೊಂಡು ನಮಗೆ ತಂದುಕೊಡಬೇಕೆಂದು ಆವಾಜ್ ಹಾಕಿ ಬಾಲಕನನ್ನ ಬಿಟ್ಟು ಕಳಿಸಿದ್ದಾರೆ. ಇನ್ನು ಘಟನೆ ಸಂಬಂಧ ಚೌಕ್ ಠಾಣೆಯಲ್ಲಿ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್ ದಾಖಲಾಗುತ್ತಿದ್ದಂತೆ ಪೊಲೀಸರು ಐವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅದೇನೇ ಇರಲಿ ಬಾಲಕ ತಪ್ಪು ಮಾಡಿದ್ದೆ ಆದಲ್ಲಿ ಪೋಷಕರ ಗಮನಕ್ಕೆ ತರುವುದನ್ನ ಬಿಟ್ಟು, ಅಪ್ರಾಪ್ತ ಬಾಲಕ ಎನ್ನುವುದು ನೋಡದೇ ಪೈಶಾಚಿಕ ಕೃತ್ಯ ಎಸಗಿದ್ದು ಮಾತ್ರ ದುರಂತವೇ ಸರಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ