
ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್ 19ಗೆ ಸಂಬಂಧಿಸಿದ ಮಾಹಿತಿಯನ್ನು ರಾಜ್ಯ ಸರ್ಕಾರ ಪ್ರತಿದಿನ ಅಂಕಿ ಅಂಶಗಳ ಸಮೇತ ನೀಡುತ್ತಿದೆ. ನಿನ್ನೆಯ ತನಕ ಕರ್ನಾಟಕದಲ್ಲಿ ಎಷ್ಟು ಸಾವುಗಳಾಗಿವೆ, ಎಷ್ಟು ಹೊಸ ಪ್ರಕರಣಗಳು ದಾಖಲಾಗಿವೆ, ಯಾವ ಜಿಲ್ಲೆಯಲ್ಲಿ ಹೆಚ್ಚು ಸೋಂಕಿತರಿದ್ದಾರೆ ಎಂಬಿತ್ಯಾದಿ ವಿವರಗಳ ಕ್ವಿಕ್ ಡಿಟೇಲ್ಸ್ ಇಲ್ಲಿದೆ.
ಕರ್ನಾಟಕದಲ್ಲಿ ಆರಂಭದಿಂದ ನಿನ್ನೆ ಸಂಜೆಯ ತನಕ ದಾಖಲಾದ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 8,84,897. ಇದರಲ್ಲಿ 8,49,821 ಜನ ಗುಣಮುಖರಾಗಿದ್ದಾರೆ. ಇದುವರೆಗೂ ಸುಮಾರು 11,778ಕ್ಕೂ ಹೆಚ್ಚು ಜನ ಸೋಂಕಿನಿಂದ ಮೃತಪಟ್ಟಿದ್ದಾರೆ.
ಬೆಂಗಳೂರು ನಗರಕ್ಕೆ ಮೊದಲ ಸ್ಥಾನ
ಕಳೆದ 24 ಗಂಟೆಯಲ್ಲಿ ರಾಜ್ಯಾದ್ಯಂತ ಒಟ್ಟು 998 ಹೊಸ ಪ್ರಕರಣಗಳು ಪತ್ತೆಯಾಗಿವೆ. ಕಳೆದೊಂದು ವಾರದ ಅವಧಿಯಲ್ಲಿ ಅತ್ಯಧಿಕ ಹೊಸ ಪ್ರಕರಣಗಳು ಪತ್ತೆಯಾಗಿರುವುದರಲ್ಲಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ದಕ್ಷಿಣ ಕನ್ನಡ, ತುಮಕೂರು, ಹಾಸನ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿದ್ದರೆ ಬೀದರ್ ಕೊನೆಯ ಸ್ಥಾನದಲ್ಲಿದೆ. ಮೃತರರಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರೇ ಅತ್ಯಧಿಕವಾಗಿದ್ದು ನಂತರ ವಯಸ್ಸಿಗನುಗುಣವಾಗಿ ಮರಣ ಪ್ರಮಾಣ ಇಳಿಕೆಯಾಗಿರುವುದು ವರದಿಯಲ್ಲಿ ಕಂಡುಬಂದಿದೆ.
61 ಶತಾಯುಷಿಗಳಿಗೆ ಸೋಂಕು
ಕಳೆದೊಂದು ವಾರದ ತನಕ ಕೊರೊನಾ ಸೋಂಕಿಗೆ ತುತ್ತಾಗುವವರಲ್ಲಿ 21-30 ವರ್ಷದ ಯುವಕರೇ ಹೆಚ್ಚಿದ್ದರು. ಆದರೆ ಈಗ ಆ ಸ್ಥಾನಕ್ಕೆ 30-39 ವರ್ಷದವರು ಬಂದಿದ್ದಾರೆ. ಇದುವರೆಗೆ ಈ ವಯೋಮಾನದ ಒಟ್ಟು 1,93,178 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 20-29 ವರ್ಷದವರಲ್ಲಿ 1,81,400, 40-49 ವರ್ಷದವರಲ್ಲಿ 1,57,309, 50-59 ವರ್ಷದವರಲ್ಲಿ 1,28,685, 60-69 ವರ್ಷದವರಲ್ಲಿ 88,582, 70-79 ವರ್ಷದವರಲ್ಲಿ 40,043, 80-89 ವರ್ಷದವರಲ್ಲಿ 11,079, 90-99 ವರ್ಷದವರಲ್ಲಿ 1,300 ಪ್ರಕರಣಗಳು ಪತ್ತೆಯಾಗಿದ್ದು 100 ವರ್ಷ ದಾಟಿದ 61 ಮಂದಿ ಶತಾಯುಷಿಗಳು ಸಹ ಸೋಂಕಿಗೆ ತುತ್ತಾಗಿದ್ದಾರೆ. ಇನ್ನು 10-19 ವಯೋಮಾನದ ಮಕ್ಕಳಲ್ಲಿ 57,142 ಹಾಗೂ 9 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ 26,118 ಪ್ರಕರಣಗಳು ದಾಖಲಾಗಿವೆ.
ಕೊರೊನಾ ಸೋಂಕು ದುಪ್ಪಟ್ಟು
ಅಧ್ಯಯನದ ಪ್ರಕಾರ ನಿನ್ನೆಯ ವೇಳೆಗೆ ಕೊಡಗಿನಲ್ಲಿ ಅತಿ ವೇಗವಾಗಿ ಕೇವಲ 62 ದಿನಗಳ ಅವಧಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದ್ದರೆ ಚಿತ್ರದುರ್ಗದಲ್ಲಿ 64, ಬೆಂಗಳೂರು ಗ್ರಾಮಾಂತರದಲ್ಲಿ 64, ತುಮಕೂರಿನಲ್ಲಿ 67 ದಿನಗಳ ಅವಧಿಯಲ್ಲಿ ದುಪ್ಪಟ್ಟು ಪ್ರಕರಣಗಳು ದಾಖಲಾಗಿವೆ. ಈ ಪಟ್ಟಿಯಲ್ಲಿ ಬೀದರ್ ಕೊನೆಯ ಸ್ಥಾನದಲ್ಲಿದ್ದು ಅಲ್ಲಿ ಕೊರೊನಾ ಕೇಸ್ ಎರಡು ಪಟ್ಟಾಗಲು ತೆಗೆದುಕೊಂಡ ಅವಧಿ 106 ದಿನ. ಒಟ್ಟಾರೆ ಕರ್ನಾಟಕದಲ್ಲಿ 79 ದಿನಗಳ ಅವಧಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ.
ಪ್ರಸ್ತುತ ಬೆಂಗಳೂರು ನಗರದಲ್ಲಿ ಬರೋಬ್ಬರಿ 18,395 ಜನ ಕ್ವಾರಂಟೈನ್ನಲ್ಲಿದ್ದು ನಂತರದ ಸ್ಥಾನದಲ್ಲಿರುವ ದಕ್ಷಿಣ ಕನ್ನಡದಲ್ಲಿ 2,842, ಮೈಸೂರಿನಲ್ಲಿ 1,670, ಉಡುಪಿಯಲ್ಲಿ 1,338, ಹಾಸನದಲ್ಲಿ 1,300 ಜನ ಕ್ವಾರಂಟೈನ್ ವಾಸ ಮಾಡುತ್ತಿದ್ದಾರೆ.