ಮಂಡ್ಯದಲ್ಲಿ ನಾಟಿಕೋಳಿ ಸಾರು ರಾಗಿಮುದ್ದೆ ತಿನ್ನುವ ಸ್ಪರ್ಧೆ: 30 ನಿಮಿಷದಲ್ಲಿ 10 ಮುದ್ದೆ ತಿಂದ ಈರೇಗೌಡ ಪ್ರಥಮ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆಯ ಈರೇಗೌಡ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಇಂದು ಸಿರಿಧಾನ್ಯ ಹಬ್ಬದ ಅಂಗವಾಗಿ ನಾಟಿಕೋಳಿ ಸಾರು ರಾಗಿಮುದ್ದೆ ತಿನ್ನುವ ಸ್ಪರ್ಧೆ ನಡೆಯಿತು.
ಮಂಡ್ಯ, ಜ.2: ಜಿಲ್ಲೆಯ (Mandya) ಶ್ರೀರಂಗಪಟ್ಟಣ ತಾಲೂಕಿನ ಅಂಬೇಡ್ಕರ್ ಭವನದಲ್ಲಿ ಸಿರಿಧಾನ್ಯ ಹಬ್ಬದ ಅಂಗವಾಗಿ ನಾಟಿಕೋಳಿ ಸಾರು ರಾಗಿಮುದ್ದೆ ತಿನ್ನುವ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಅರಕೆರೆಯ ಈರೇಗೌಡ ಅವರು ಬರೋಬ್ಬರಿ 2.7 ಕೆ.ಜಿ. ತೂಕದ ಮುದ್ದೆ ತಿನ್ನುವ ಮೂಲಕ ಅಗ್ರ ಸ್ಥಾನ ತಮ್ಮದಾಗಿಸಿಕೊಂಡರು.
ಸ್ಪರ್ಧಿಗಳಿಗೆ ಮುದ್ದೆ ತಿನ್ನಲು 30 ನಿಮಿಷಗಳ ಕಾಲಾವಕಾಶ ನೀಡಲಾಯಿತು. ಪ್ರತಿ ಮುದ್ದೆಯನ್ನೂ ತೂಕ ಹಾಕಿ ಬಡಿಸಲಾಯಿತು. ಅದರೊಟ್ಟಿಗೆ ಬಿಸಿ ನಾಟಿಕೋಳಿ ಸಾರು, ನೆಂಚಿಕೊಳ್ಳಲು ನಾಟಿ ಕೋಳಿಯ ಮಾಂಸ ಹಾಗೂ ಮೊಟ್ಟೆ ನೀಡಲಾಯಿತು. ಹತ್ತು ಸ್ಪರ್ಧಿಗಳು ಉತ್ಸಾಹದಿಂದ ಮುದ್ದೆ ಮುರಿದರು.
ಇದನ್ನೂ ಓದಿ: ಸಿರಿಧಾನ್ಯ ಹಬ್ಬ; ಡಿಫರೆಂಟ್ ಸ್ಟೈಲಲ್ಲಿ ಮಿನಿಸ್ಟರ್ ಪರಮೇಶ್ವರ್ ಎಂಟ್ರಿ, ಇಲ್ಲಿದೆ ವಿಡಿಯೋ
62 ವರ್ಷ ಪ್ರಾಯದ ಹುರಿಮೀಸೆಯ ಸರದಾರ ಈರೇಗೌಡ ಎಲ್ಲರಿಗಿಂತ ಮುಂದಾಗಿ ಮುದ್ದೆ ಮುರಿಯುತ್ತ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡರು. ನಿಗದಿತ ಸಮಯದಲ್ಲಿ ಬರೋಬ್ಬರಿ 10 ಮುದ್ದೆ ಉಂಡು ಸೈ ಎನಿಸಿಕೊಳ್ಳುವ ಮೂಲಕ ಪ್ರಶಸ್ತಿಗೆ ಕೊರಳೊಡ್ಡಿದರು.
ಅರಕೆರೆಯ ಮತ್ತೊಬ್ಬ ಸ್ಪರ್ಧಿ ದಿಲೀಪ್ ಅವರು ಈರೇಗೌಡ ಅವರಿಗೆ ಪೈಪೋಟಿ ನೀಡಿದ್ದು, 1.682 ಕೆ.ಜಿ. ಮುದ್ದೆ ಸವಿದು ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು. ಟಿ.ಎಂ. ಹೊಸೂರು ನಿವಾಸಿ ರವೀಂದ್ರ 1.544 ಕೆ.ಜಿ. ಮುದ್ದೆ ತಿನ್ನುವ ಮೂಲಕ ತೃತೀಯ ಸ್ಥಾನ ಪಡೆದರು. ಸ್ಪರ್ಧೆಯ ಮೂರು ಬಹುಮಾನಗಳು ಶ್ರೀರಂಗಪಟ್ಟಣ ತಾಲೂಕಿನ ಪಾಲಾದವು. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ಅವರೂ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಅವರು ಆರು ಮುದ್ದೆ ತಿನ್ನುವ ಮೂಲಕ ಗಮನ ಸೆಳೆದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ