ಕಲಬುರಗಿ: ಆ ಜನರು ಹಗಲು ಹೊತ್ತಿನಲ್ಲೇ ಗ್ರಾಮದಲ್ಲಿರಲು ಭಯ ಪಡ್ತಿದ್ದಾರೆ. ರಾತ್ರಿಯಾಗುತ್ತಿದ್ದಂತೆಯೇ ಮನೆಯಲ್ಲಿ ಹೇಗೆ ಇರುವುದಪ್ಪಾ ಎಂದು ಅಂಜುತ್ತಿದ್ದಾರೆ. ಗ್ರಾಮದಲ್ಲಿ ಯಾವಾಗ ಏನಾಗುತ್ತೋ ಅನ್ನೋ ಭಯದಲ್ಲೇ ದಿನ ದೂಡುತ್ತಿದ್ದಾರೆ. ಹಾಗಂತ ಆ ಗ್ರಾಮದಲ್ಲಿ ಕಾಡು ಪ್ರಾಣಿಗಳ ಭಯವಾಗಲೀ. ಕಳ್ಳರ ಚಿಂತೆಯಾಗಲೀ ಇಲ್ಲವೇ ಇಲ್ಲ. ಆದ್ರೂ ಈಗ ಕಾಡುತ್ತಿರುವ ಭಯ ಮಾತ್ರ ಅವರ ನೆಮ್ಮದಿಯನ್ನೇ ಕಸಿದುಕೊಂಡಿದೆ. ಅಷ್ಟಕ್ಕೂ ಅಲ್ಲಿಯ ಜನರಿಗೆ ಆತಂಕ ಮತ್ತು ಭಯ ಹುಟ್ಟಿಸಿರೋದು ಒಂದು ನಿಗೂಢ ಶಬ್ಧ.
ಸದ್ದು ಎಂದ ಮಾತ್ರಕ್ಕೆ ಇದು ಭೂಮಿಯ ಮೇಲಿನ ಸದ್ದಾಗಲೀ, ಗಣಿಗಾರಿಕೆ ಸದ್ದಾಗಲೀ, ಪಟಾಕಿ, ಸಿಡಿಮದ್ದುಗಳ ಸದ್ದಾಗಲಿ ಅಲ್ಲ. ಬದಲಾಗಿ ಭೂಮಿಯೊಳಗಿನಿಂದ ಬರುತ್ತಿರುವ ವಿಚಿತ್ರ ಸದ್ದು. ಈ ವಿಚಿತ್ರ ಸದ್ದಿಗೆ ಬೆಚ್ಚಿಬಿದ್ದಿರೋದು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದ ಜನರು. ಈ ಗ್ರಾಮದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ. ಆದ್ರೆ ಕಳೆದ ಮಳೆಗಾಲದಿಂದ ಗ್ರಾಮದ ಜನರು ಭಯದಲ್ಲಿಯೇ ಬದಕು ಸಾಗಿಸುತ್ತಿದ್ದಾರೆ. ಗ್ರಾಮದಲ್ಲಿ ಮೇಲಿಂದ ಮೇಲೆ ಭೂಮಿಯಿಂದ ಢಂ ಢಂ ಅನ್ನೋ ಸದ್ದು ಕೇಳಿ ಬರುತ್ತಿದೆ. ಕೆಲವು ಸಲ ಸದ್ದು ಬಂದಾಗ ಭೂ ಕಂಪನದ ಅನುಭವ ಕೂಡಾ ಗ್ರಾಮದ ಜನರಿಗೆ ಆಗುತ್ತಿದೆ. ಆದ್ರೆ ಭೂ ಕಂಪನ ಮಾತ್ರ ರಿಕ್ಟರ್ ಮಾಪಕದಲ್ಲಿ ದಾಖಲಾಗುತ್ತಿಲ್ಲ.
ಗಡಿಕೇಶ್ವರ ಸೇರಿದಂತೆ ಕಲಬುರಗಿ ಜಿಲ್ಲೆಯ ಅನೇಕ ಕಡೆ ಭೂಮಿಯೊಳಗೆ ಸುಣ್ಣದ ಕಲ್ಲಿನ ಪ್ರಮಾಣ ಹೆಚ್ಚಾಗಿದೆ. ಸುಣ್ಣದ ಕಲ್ಲಿನ ಮೇಲೆ ನೀರು ಬಿದ್ದಾಗ, ಈ ರೀತಿಯ ಸದ್ದು ಭೂಮಿಯಿಂದ ಬರುತ್ತದೆ. ಇದು ಭೂ ಕಂಪನ ಅಲ್ಲ. ಇದು ಭೂಮಿಯೊಳಗೆ ಆಗಾಗ ರಾಸಾಯನಿಕ ಪ್ರಕ್ರಿಯೆಗಳು ನಡೆಯುವುದರಿಂದ ಆಗುತ್ತಿದೆ. ಹೀಗಾಗಿ ಜನರು ಭಯ ಪಡುವ ಅಗತ್ಯವಿಲ್ಲ ಅಂತಿದ್ದಾರೆ ಗಣಿ ಇಲಾಖೆ ಅಧಿಕಾರಿಗಳು. ಆದ್ರೆ ಬೇಸಿಗೆ ಸಮಯದಲ್ಲಿ ಕೂಡ ಸದ್ದು ಬರ್ತಾ ಇರುವುದು ಗ್ರಾಮದ ಜನರ ಆತಂಕವನ್ನು ಹೆಚ್ಚಿಸಿದೆ.
ಗ್ರಾಮದಲ್ಲಿ ಮೇಲಿಂದ ಮೇಲೆ ಭೂಮಿಯಿಂದ ಸದ್ದು ಬರ್ತಾ ಇದ್ದರೂ ಜಿಲ್ಲಾಡಳಿತ ಮಾತ್ರ ನಿದ್ರೆಗೆ ಜಾರಿದೆ. ಗ್ರಾಮಕ್ಕೆ ಭೇಟಿ ನೀಡಿ, ಜನರ ನೋವು ಕೇಳುವ ಕೆಲಸವನ್ನು ಜಿಲ್ಲಾಡಳಿತ ಮಾಡುತ್ತಿಲ್ಲ. ಆದಷ್ಟು ಬೇಗ ಜಿಲ್ಲಾಡಳಿತ ಸದ್ದಿನ ಮೂಲವನ್ನು ಪತ್ತೆ ಮಾಡಿಸಿ, ಜನರ ಆತಂಕವನ್ನು ದೂರು ಮಾಡುವ ಕೆಲಸ ಮಾಡಬೇಕಿದೆ.
(ವರದಿ: ಸಂಜಯ್ ಚಿಕ್ಕಮಠ – 9980510149)
ಇದನ್ನೂ ಓದಿ:
ನದಿಯಿಂದ ಮೇಲೆದ್ದು ಬಂದ ಚನ್ನಕೇಶವ; ಶತಮಾನಗಳಷ್ಟು ಹಳೆಯ ದೇಗುಲದ ಜೀರ್ಣೋದ್ಧಾರದ ವೇಳೆ ಮಹಾ ಅಚ್ಚರಿ
ಪೊಲೀಸರ ಸೋಗಿನಲ್ಲಿ ಬಂದು ಉದ್ಯಮಿಯ ಚಿನ್ನ ದರೋಡೆ; ಕಲಬುರಗಿಯಲ್ಲಿ ಹಾಡಹಗಲೇ ದುಷ್ಕೃತ್ಯ
(A Village in Kalaburagi getting some unusual sound from Earth)