ವಿದೇಶಗಳಿಂದ ಅಡಿಕೆ, ಕಾಳುಮೆಣಸು ಆಮದಿಗೆ ಆಮ್ ಆದ್ಮಿ ಪಕ್ಷ ವಿರೋಧ
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ರಾಜ್ಯದ ರೈತರು ಬೆಳೆದ ಅಡಿಕೆ ಹಾಗೂ ಕಾಳುಮೆಣಸಿಗೆ ಬೇಡಿಕೆ ಕಡಿಮೆಯಾಗಲಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಬೆಂಗಳೂರು: ಕಡಿಮೆ ಗುಣಮಟ್ಟದ ಅಡಿಕೆ (Areca) ಹಾಗೂ ಕಾಳುಮೆಣಸನ್ನು (Black Pepper) ವಿದೇಶಗಳಿಂದ ಆಮದು ಮಾಡಿಕೊಂಡು, ನಮ್ಮ ದೇಶದ ಅಡಿಕೆ ಬೆಳೆಗಾರರ ಭವಿಷ್ಯದ ಜೊತೆ ಚೆಲ್ಲಾಟವಾಡುವ ನರೇಂದ್ರ ಮೋದಿ ಸರ್ಕಾರದ ನಿರ್ಧಾರಕ್ಕೆ ಆಮ್ ಆದ್ಮಿ ಪಾರ್ಟಿ (Aam Aadmi Party) ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಾರ್ಟಿ ಮುಖಂಡ ಹಾಗೂ ಹಿರಿಯ ವಕೀಲರಾದ ಬ್ರಿಜೇಶ್ ಕಾಳಪ್ಪ, ನಮ್ಮ ಕರ್ನಾಟಕವು ಜಗತ್ತಿನಲ್ಲೇ ಅತ್ಯುತ್ತಮ ಗುಣಮಟ್ಟದ ಅಡಿಕೆ ಹಾಗೂ ಕಾಳುಮೆಣಸು ಬೆಳೆಯುತ್ತಿದೆ. ಆದರೆ ಕೇಂದ್ರ ಸರ್ಕಾರವು ಭೂತಾನ್‌ನಿಂದ ಅಡಿಕೆಯನ್ನು ಹಾಗೂ ವಿಯೆಟ್ನಾಂನಿಂದ ಶ್ರೀಲಂಕಾ ಮೂಲಕ ಕಾಳುಮೆಣಸನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡಲು ಮುಂದಾಗಿದೆ. ಅವು ಕಡಿಮೆ ಗುಣಮಟ್ಟದ್ದಾಗಿದ್ದು, ಇಲ್ಲಿನ ಉತ್ತಮ ಗುಣಮಟ್ಟದ ಬೆಳೆಗಳೊಂದಿಗೆ ಮಿಶ್ರವಾಗುವುದರಿಂದ ಸ್ವದೇಶಿ ಅಡಿಕೆ ಹಾಗೂ ಕಾಳುಮೆಣಸಿನ ಬಗ್ಗೆ ಗ್ರಾಹಕರಲ್ಲಿ ತಪ್ಪು ಕಲ್ಪನೆ ಮೂಡಲಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ರಾಜ್ಯದ ರೈತರು ಬೆಳೆದ ಅಡಿಕೆ ಹಾಗೂ ಕಾಳುಮೆಣಸಿಗೆ ಬೇಡಿಕೆ ಕಡಿಮೆಯಾಗಲಿದೆ. ರೈತರಿಗೆ ಸಿಗುವ ಬೆಲೆಯ ಮೇಲೆ ಇದು ಕೆಟ್ಟ ಪರಿಣಾಮ ಪರಿಣಾಮ ಬೀರಲಿದೆ. ಭಾರತಕ್ಕೆ ಅಗತ್ಯವಿರುವಷ್ಟು ಅಡಿಕೆ ಹಾಗೂ ಕಾಳುಮೆಣಸನ್ನು ನಮ್ಮ ರೈತರೇ ಉತ್ಪಾದಿಸುವಾಗ ಆಮದು ಮಾಡಿಕೊಳ್ಳುವ ಅಗತ್ಯವೇನಿದೆ? ಎಂದು ಬ್ರಿಜೇಶ್ ಕಾಳಪ್ಪ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಭೂತಾನ್ನ ಅಡಿಕೆ ಆಮದಿಗೆ ಅನುಮತಿ ನೀಡಿರುವ ಬಿಜೆಪಿ ಸರ್ಕಾರದಿಂದ ವಿಶ್ವಾಸ ದ್ರೋಹ; ಸಿದ್ದರಾಮಯ್ಯ ಆಕ್ರೋಶ
ಒಂದುವೇಳೆ ಅಡಿಕೆ ಹಾಗೂ ಕಾಳುಮೆಣಸನ್ನು ಸರ್ಕಾರ ಆಮದು ಮಾಡಿಕೊಳ್ಳುವುದಾದರೆ, ಭಾರೀ ಮೊತ್ತದ ಆಮದು ಸುಂಕವನ್ನು ಸರ್ಕಾರ ಇವುಗಳಿಗೆ ವಿಧಿಸಬೇಕು. ಭಾರತೀಯ ರೈತರನ್ನು ರಕ್ಷಿಸಲು ಪರಿಣಾಮಕಾರಿಯಾದ ಆಮದು ಸುಂಕ ನೀತಿ ಇಲ್ಲದಿರುವ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳಲು ಆಮದುದಾರರಿಗೆ ಅವಕಾಶ ನೀಡಬಾರದು. ಅಡಿಕೆ ಹಾಗೂ ಕಾಳುಮೆಣಸು ಆಮದಿಗೆ ಸಂಬಂಧಿಸಿ ಪ್ರಭಾವಿಗಳಿಂದ ಸಫೆಮಾ, ಫೆರಾ ಮುಂತಾದ ಕಾನೂನುಗಳ ಉಲ್ಲಂಘನೆಯಾಗಿರುವುದು ಕಂಡುಬರುತ್ತಿದ್ದು, ಜಾರಿ ನಿರ್ದೇಶನಾಲಯವು ಈ ಸಂಬಂಧ ಆಳವಾದ ತನಿಖೆ ಮಾಡಬೇಕು ಎಂಬುದು ಆಮ್ ಆದ್ಮಿ ಪಾರ್ಟಿಯ ಆಗ್ರಹವಾಗಿದೆ ಎಂದು ಹೇಳಿದ್ದಾರೆ.
ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಉಪಾಧ್ಯಕ್ಷ ಬಿ.ಟಿ. ನಾಗಣ್ಣ ಮಾತನಾಡಿ, ಹಲವು ದಶಕಗಳಿಂದ ಬಾಧಿಸುತ್ತಿರುವ ಹಳದಿ ರೋಗ ಹಾಗೂ ಕೊಳೆ ರೋಗದಿಂದ ಅಡಿಕೆ ಬೆಳೆಗಾರರು ತೊಂದರೆ ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ಆರಂಭವಾದ ಎಲೆಚುಕ್ಕಿ ರೋಗವು ತೀವ್ರ ಸ್ವರೂಪ ಪಡೆಯುತ್ತಿದ್ದು, ಇದರಿಂದ ಭಾರೀ ಪ್ರಮಾಣದಲ್ಲಿ ಬೆಳೆ ನಾಶವಾಗುತ್ತಿದೆ. ಇಂತಹ ಸಂದರ್ಭದಲ್ಲಿ ರೈತರಿಗೆ ನೆರವಾಗಬೇಕಾದ ಸರ್ಕಾರವು ಅಡಿಕೆಯನ್ನು ಆಮದು ಮಾಡಿಕೊಳ್ಳುವ ಮೂಲಕ ಗಾಯದ ಮೇಲೆ ಬರೆ ಎಳೆಯಲು ಹೊರಟಿರುವುದು ಅಮಾನವೀಯ ನಡೆಯಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರಧಾನಿಗಳಿಗೆ ಹಾಗೂ ಕೇಂದ್ರದ ವಾಣಿಜ್ಯ ಖಾತೆ ಸಚಿವರಿಗೆ ಪತ್ರ ಬರೆಯಲಾಗಿದೆ ಹಾಗೂ ಸಂಸತ್ತಿನಲ್ಲೂ ಆಮ್ ಆದ್ಮಿ ಪಕ್ಷದಿಂದ ಈ ಬಗ್ಗೆ ವಿರೋಧ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.