ಡಾ.ಸುಧಾಕರ್​ ಮೇಲೆ 80 ಕೋಟಿ ರೂಪಾಯಿ ಹಗರಣದ ಆರೋಪ; ನಾನು ಹೆದರುವ ಪ್ರಶ್ನೆಯೇ ಇಲ್ಲ ಎಂದ ಆರೋಗ್ಯ ಸಚಿವ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 04, 2021 | 6:15 PM

Dr K Sudhakar: ರಾಜ್ಯ ಡ್ರಗ್ & ಲಾಜಿಸ್ಟಿಕ್, ವೇರ್ ಹೌಸಿಂಗ್ ಸೊಸೈಟಿಯಲ್ಲಿ ಡಾ.ಸುಧಾಕರ್ ಅವರು ಅಗಪೆ, ಸಿಸ್ ಮ್ಯಾಕ್ಸ್ ಎಂಬ ತಮ್ಮ ಆಪ್ತ ಕಂಪನಿಗಳಿಗೆ ಗುತ್ತಿಗೆ ನೀಡಿದ್ದಾರೆ. ಅನುಭವವಿಲ್ಲದ ಈ 2 ಕಂಪನಿಗಳಿಗೆ ಟೆಂಡರ್ ನೀಡುವ ಮೂಲಕ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಬೆಂಗಳೂರು ನಗರ ಘಟಕದ AAP ಅಧ್ಯಕ್ಷ ಮೋಹನ್ ದಾಸರಿ ಆರೋಪಿಸಿದ್ದಾರೆ.

ಡಾ.ಸುಧಾಕರ್​ ಮೇಲೆ 80 ಕೋಟಿ ರೂಪಾಯಿ ಹಗರಣದ ಆರೋಪ; ನಾನು ಹೆದರುವ ಪ್ರಶ್ನೆಯೇ ಇಲ್ಲ ಎಂದ ಆರೋಗ್ಯ ಸಚಿವ
ಡಾ.ಕೆ.ಸುಧಾಕರ್​ ಮತ್ತು ಮೋಹನ್​ ದಾಸರಿ
Follow us on

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್ ವಿರುದ್ಧ ಸುಮಾರು 80 ಕೋಟಿ ರೂಪಾಯಿ ಟೆಂಡರ್ ಹಗರಣ ಆರೋಪ ಕೇಳಿಬಂದಿದೆ. ಬೆಂಗಳೂರು ನಗರ ಘಟಕದ AAP ಅಧ್ಯಕ್ಷ ಮೋಹನ್ ದಾಸರಿ ಈ ಗಂಭೀರ ಆರೋಪ ಮಾಡಿದ್ದು, ಅಕ್ರಮ ಟೆಂಡರ್‌ನಲ್ಲಿ ಸುಧಾಕರ್ ನೇರವಾಗಿ ಭಾಗಿಯಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ರಾಜ್ಯ ಡ್ರಗ್ ಮತ್ತು ಲಾಜಿಸ್ಟಿಕ್, ವೇರ್ ಹೌಸಿಂಗ್ ಸೊಸೈಟಿಯಲ್ಲಿ ಡಾ.ಸುಧಾಕರ್ ಅವರು ಅಗಪೆ, ಸಿಸ್ ಮ್ಯಾಕ್ಸ್ ಎಂಬ ತಮ್ಮ ಆಪ್ತ ಕಂಪನಿಗಳಿಗೆ ಗುತ್ತಿಗೆ ನೀಡಿದ್ದಾರೆ. ಅನುಭವವಿಲ್ಲದ ಈ 2 ಕಂಪನಿಗಳಿಗೆ ಟೆಂಡರ್ ನೀಡುವ ಮೂಲಕ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

2020ರ ಸೆಪ್ಟೆಂಬರ್ ತಿಂಗಳಲ್ಲಿ ಸರ್ಕಾರಿ ಪ್ರಯೋಗಾಲಯಗಳಿಗೆ ಸಾಧನ ವಿತರಿಸಲು ಟೆಂಡರ್ ಕರೆಯಲಾಗಿತ್ತು . ಈ ಪ್ರಕ್ರಿಯೆಯಲ್ಲಿ ಅಗಪೆ ಮತ್ತು ಸಿಸ್ ಮ್ಯಾಕ್ಸ್ ಕಂಪೆನಿಗಳಿಗೆ ಟೆಂಡರ್ ನೀಡಲಾಗಿದೆ. ಅಗಪೆ ಕಂಪೆನಿ ಬಯೋ ಕೆಮಿಸ್ಟ್ರಿಗೆ ಸಂಬಂಧಿಸಿದ ಎರಡು ಉಪಕರಣಗಳನ್ನು ಪೂರೈಸಿದೆ ಹಾಗೂ ಸಿಸ್ ಮ್ಯಾಕ್ಸ್ ಹೆಮಟಾಲಜಿಗೆ ಸಂಬಂಧಿಸಿದ ಎರಡು ಉಪಕರಣಗಳನ್ನ ಪೂರೈಸಿದೆ. ಇದಕ್ಕಿಂತಲೂ ಉತ್ತಮ ಗುಣಮಟ್ಟದ ಉಪಕರಣಗಳನ್ನು ಅತ್ಯಂತ ಕಡಿಮೆ ಬೆಲೆಗೆ ಪೂರೈಸಲು ಅನೇಕ ಕಂಪೆನಿಗಳು ಮುಂದಾಗಿದ್ದವಾದರೂ ಆ ಕಂಪೆನಿಗಳ ಪ್ರಸ್ತಾವನೆ ತಿರಸ್ಕರಿಸಿ ಅನುಭವವಿಲ್ಲದ ಎರಡು ಕಂಪೆನಿಗಳಿಗೆ ಟೆಂಡರ್ ನೀಡಲಾಗಿದೆ. ಇದನ್ನು ಮುಂಬೈ ಮೂಲದ ಟ್ರಾನ್ಸಿಯಾ ಕಂಪೆನಿ ಆರೋಗ್ಯ ಇಲಾಖೆ ಆಯುಕ್ತರಿಗೆ ನೀಡಿದ ದೂರಿನ ಪ್ರತಿಯಲ್ಲಿ ತಿಳಿಸಿದೆ ಎಂದು ಹೇಳಿದ್ದಾರೆ.

ಕೇರಳ ಮೂಲದ ಅಗಪೆ ಕಂಪೆನಿ 2018-19 ರಲ್ಲಿ ರದ್ದುಗೊಂಡ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿತ್ತು. ಈ ಕಂಪೆನಿ ಪ್ರಸ್ತುತ ಪೂರೈಸಿರುವ 1201 ಸೆಮಿ ಆಟೋ ಬಯೋ ಕೆಮಿಸ್ಟ್ರಿ ಅನಲೈಜರ್ ಸಾಧನಕ್ಕೆ ₹59,900 ರೂಪಾಯಿ ನಮೂದಿಸಿತ್ತು. ಇದೇ ಸಾಧನವನ್ನ ಕೇರಳದ ಆರೋಗ್ಯ ಇಲಾಖೆಗೆ ₹55,460 ರೂಪಾಯಿಗೆ ಪೂರೈಸಿದೆ. ಇಲ್ಲಿ ಅಗಪೆ ಕಂಪೆನಿಯಿಂದ ಹೆಚ್ಚುವರಿ ₹86 ಸಾವಿರಕ್ಕೆ ಖರೀದಿಸಲಾಗಿದೆ ಎಂದು ದೂರಿದ್ದಾರೆ. ಈ ಟೆಂಡರ್​ನಲ್ಲಿ ಗುಣಮಟ್ಟದ ಉಪಕರಣಗಳನ್ನು ಕಡಿಮೆ ಬೆಲೆಗೆ ನೀಡಲು ಅನೇಕ ಸಂಸ್ಥೆಗಳು ಮುಂದೆ ಬಂದಿದ್ದವು. ಆದರೂ ಆ ಕಂಪನಿಗಳ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ. ಇದು ದೊಡ್ಡ ಮಟ್ಟದ ಹಗರಣವಾಗಿದ್ದು, ಈ ಬಗ್ಗೆ ಆಯುಕ್ತರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಹೀಗಾಗಿ ಡಾ.ಕೆ.ಸುಧಾಕರ್ ರಾಜೀನಾಮೆ ನೀಡಬೇಕೆಂದು ಮೋಹನ್ ದಾಸರಿ ಆಗ್ರಹಿಸಿದ್ದಾರೆ.

ಇನ್ನೂ ಟೆಂಡರ್​ ಆಗಿಲ್ಲ, ಭ್ರಷ್ಟಾಚಾರ ಹೇಗಾಗುತ್ತೆ?
ಇದಕ್ಕೆ ಪ್ರತಿಕ್ರಿಯಿಸಿರುವ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್, ಈ ಪ್ರಕರಣ ಹೈಕೋರ್ಟ್‌ನಲ್ಲಿದೆ, ಇನ್ನೂ ಟೆಂಡರ್ ಆಗಿಯೇ ಇಲ್ಲ. ಅದರಲ್ಲಿ ಭ್ರಷ್ಟಾಚಾರ ಹೇಗೆ ಬಂತು? ಮೊದಲು ಮ್ಯಾಪಿಂಗ್ ಆಗಿರಲಿಲ್ಲ, ಈಗ ಮಾಡಿದ್ದೇವೆ ಅಷ್ಟೇ. ಇಸ್ರೋ ನಿರ್ದೇಶಕರು, ನಿಮ್ಹಾನ್ಸ್ ನಿರ್ದೇಶಕರು ಸೇರಿ ಹಲವು ಪರಿಣಿತರು, ಉನ್ನತ ಮಟ್ಟದ ಅಧಿಕಾರಿಗಳ ಸಮಿತಿ, ತಾಂತ್ರಿಕ ಸಲಹಾ ಸಮಿತಿ ಇದರಲ್ಲಿದೆ. ನಾನು ನೈತಿಕವಾಗಿ ಸರಿ ಇದ್ದೇನೆ, ಹೆದರುವ ಪ್ರಶ್ನೆಯೇ ಇಲ್ಲ. ಇಂತಹ ಆರೋಪಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಈ ಬಗ್ಗೆ ಕಾನೂನು ಹೋರಾಟಕ್ಕೂ ನಾನು ಸಿದ್ಧ ಎಂದು ವಿಧಾನಸೌಧದಲ್ಲಿ ಸವಾಲೆಸೆದಿದ್ದಾರೆ.

ಇದನ್ನೂ ಓದಿ
ಚಾಮರಾಜನಗರ ಹಾಲು ಒಕ್ಕೂಟದಲ್ಲಿ ಭ್ರಷ್ಟಾಚಾರ ಆರೋಪ: ಎಚ್ಚೆತ್ತುಕೊಂಡ ಸರ್ಕಾರ

‘ಹೌದು ನಾನು ಆರ್​ಎಸ್​ಎಸ್​, ನೀವ್ಯಾರು?’ ಕಾಂಗ್ರೆಸ್​ ಶಾಸಕರಿಗೆ ಸದನದಲ್ಲಿ ತಿರುಗೇಟು ನೀಡಿದ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ

Published On - 6:15 pm, Thu, 4 March 21