ಚಾಮರಾಜನಗರ ಹಾಲು ಒಕ್ಕೂಟದಲ್ಲಿ ಭ್ರಷ್ಟಾಚಾರ ಆರೋಪ: ಎಚ್ಚೆತ್ತುಕೊಂಡ ಸರ್ಕಾರ
ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದಲ್ಲಿ ಖಾಲಿ ಇದ್ದ 72 ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಆದರೆ ಈ ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರ, ಸ್ವಜನಪಕ್ಷಪಾತ, ರೋಸ್ಟರ್ ಪದ್ಧತಿ ನಿಯಮ ಗಾಳಿಗೆ ತೂರಿರುವ ಬಗ್ಗೆ ಆರೋಪ ಕೇಳಿಬಂದಿತ್ತು.
ಚಾಮರಾಜನಗರ: ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆದಿರುವ ಅಕ್ರಮ ನೇಮಕಾತಿ ಸಂಬಂಧ ಸರ್ಕಾರ ಕಡೆಗೂ ಎಚ್ಚೆತ್ತು ಕೊಂಡಿದೆ. ಅಕ್ರಮ ನೇಮಕಾತಿ ಹಾಗೂ ಅವ್ಯವಹಾರದ ಕುರಿತು ಶಾಸನಬದ್ಧ ವಿಚಾರಣೆ ನಡೆಸಿ ವರದಿ ನೀಡಲು ಸಹಕಾರ ಸಂಘಗಳ ಜಂಟಿ ನಿಬಂಧಕರನ್ನು ನೇಮಿಸಿ ಸಹಕಾರ ಸಂಘಗಳ ನಿಬಂಧಕರು ಆದೇಶ ಹೊರಡಿಸಿದ್ದು, ಅಕ್ರಮದಲ್ಲಿ ಭಾಗಿಯಾದವರಿಗೆ ಇದೀಗ ನಡುಕ ಶುರುವಾಗಿದೆ.
ಆರೋಪವೇನು? ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದಲ್ಲಿ ಖಾಲಿ ಇದ್ದ 72 ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಆದರೆ ಈ ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರ, ಸ್ವಜನಪಕ್ಷಪಾತ, ರೋಸ್ಟರ್ ಪದ್ಧತಿ ನಿಯಮ ಗಾಳಿಗೆ ತೂರಿರುವ ಬಗ್ಗೆ, ಒಕ್ಕೂಟದ ಅಂದಿನ ಅಧ್ಯಕ್ಷರು ಹಾಗು ನಿರ್ದೇಶಕರ ಸಂಬಂಧಿಗಳಿಗೆ ಹುದ್ದೆಗಳನ್ನು ಹಣಕ್ಕೆ ಮಾರಿರುವ ಬಗ್ಗೆ ಹಾಗೂ ಪ್ರಭಾವಿ ರಾಜಕಾರಣಿಗಳ ಮಕ್ಕಳನ್ನು ಅಕ್ರಮವಾಗಿ ನೇಮಕಾತಿ ಮಾಡಿಕೊಂಡು ಅರ್ಹ ಪ್ರತಿಭಾನ್ವಿತ ಅಭ್ಯರ್ಥಿಗಳಿಗೆ ಅನ್ಯಾಯವಾಗಿರುವ ಮತ್ತು 18 ಕೋಟಿಗೂ ಹೆಚ್ಚು ಅವ್ಯವಹಾರವಾಗಿರುವ ಬಗ್ಗೆ ವ್ಯಾಪಕ ಆರೋಪ ಕೇಳಿ ಬಂದಿತ್ತು.
ಜೊತೆಗೆ ವಿವಿಧ ಸಂಘ ಸಂಸ್ಥೆಗಳು ಭಾರೀ ಹೋರಾಟ ನಡೆಸಿದ್ದವು. ಈ ಹಿನ್ನಲೆಯಲ್ಲಿ ಅಂದಿನ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ತನಿಖೆ ನಡೆಸಲು ಜಿಲ್ಲಾ ಮಟ್ಟದ ನಾಲ್ವರು ಅಧಿಕಾರಿಗಳ ಜಂಟಿ ಸಮಿತಿ ರಚಿಸಿದ್ದರು. ಈ ಸಮಿತಿ ಸುಮಾರು ಎರಡು ತಿಂಗಳ ಕಾಲ ತನಿಖೆ ನಡೆಸಿ ಅಕ್ರಮ ನಡೆದಿರುವ ಕುರಿತು 6 ತಿಂಗಳ ಹಿಂದೆಯೆ ವರದಿ ಸಲ್ಲಿಸಿತ್ತು.
ಈ ವರದಿಯನ್ನು ಚಾಮರಾಜನಗರ ಜಿಲ್ಲಾಧಿಕಾರಿ ಸರ್ಕಾರಕ್ಕೂ ಸಲ್ಲಿಸಿದ್ದರು. ಆದರೆ ಇದುವರೆಗೆ ಸಹಕಾರ ಇಲಾಖೆ ಸಚಿವರಾಗಲಿ, ಅಧಿಕಾರಿಗಳಾಗಲಿ ಯಾವುದೇ ರೀತಿಯ ಕ್ರಮ ವಹಿಸಿರಲಿಲ್ಲ. ಇದಲ್ಲದೆ ವಿಚಾರಣೆಗೆ ನೇಮಕಗೊಂಡಿರುವ ಸಹಕಾರ ಸಂಘಗಳ ಉಪನಿಬಂಧಕರು ತ್ವರಿತವಾಗಿ ವಿಚಾರಣೆ ನಡೆಸಿ ಶಿಸ್ತು ಕ್ರಮ ಜರುಗಿಸಬೇಕೆಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಅಷ್ಟೇ ಅಲ್ಲದೇ ಈ ಬಗ್ಗೆ ಮಾತನಾಡಿದ ಸಾಮಾಜಿಕ ಹೋರಾಟಗಾರ ವೀರಭದ್ರಸ್ವಾಮಿ ಅವ್ಯವಹಾರ, ಅಕ್ರಮ ನಡೆಸಿರುವ ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಸಮಿತಿಯನ್ನು ಸೂಪರ್ ಸೀಡ್ ಮಾಡಬೇಕು ಹೊಸದಾಗಿ ಸಮಿತಿ ರಚಿಸಿ ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಮಲೆಮಹದೇಶ್ವರ ಬೆಟ್ಟಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪರವರನ್ನು ಭೇಟಿ ಮಾಡಿದ್ದ ಜಿಲ್ಲಾಭಿವೃದ್ಧಿ ಹೋರಾಟ ಸಮಿತಿ ಚಾಮುಲ್ ಅಕ್ರಮ ನೇಮಕಾತಿ ಕುರಿತು ದೂರು ಸಲ್ಲಿಸಿತ್ತು. ಅಲ್ಲದೆ ಹಿಂದಿನ ಜಿಲ್ಲಾಧಿಕಾರಿಗಳು ನೇಮಿಸಿದ್ದ ಜಂಟಿ ತನಿಖಾ ಸಮಿತಿ ನೀಡಿರುವ ವರದಿ ಬಗ್ಗೆ ಸರ್ಕಾರ ಒಂದು ವರ್ಷ ಕಳೆದರೂ ಯಾವುದೇ ಕ್ರಮ ಕೈಗೊಳ್ಳದೆ ಇರುವ ಬಗ್ಗೆ ಮುಖ್ಯಮಂತ್ರಿ ಗಮನ ಸೆಳೆದಿತ್ತು. ಈ ಹಿನ್ನಲೆಯಲ್ಲಿ ಈ ಬಗ್ಗೆ ಕ್ರಮ ವಹಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸಹಕಾರ ಇಲಾಖೆಗೆ ಸೂಚನೆ ನೀಡಿದ್ದರು.
ಮುಖ್ಯಮಂತ್ರಿ ಸೂಚನೆ ಮೇರೆಗೆ ಕ್ರಮ ಕೈಗೊಂಡಿರುವ ಸಹಕಾರ ಸಂಘಗಳ ನಿಬಂಧಕರು ಸಹಕಾರ ಸಂಘಗಳ ಕಾಯ್ದೆ 1959 ಕಲಂ 64 ರ ಅವಕಾಶಗಳ ಅನ್ವಯ ಶಾಸನ ಬದ್ಧ ವಿಚಾರಣೆ ಕೈಗೊಂಡು ವರದಿ ನೀಡಲು ಸಹಕಾರ ಸಂಘಗಳ ಜಂಟಿ ನಿಬಂಧಕ ಎಂ.ಡಿ.ನರಸಿಂಹಮೂರ್ತಿ ಅವರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಈ ಹಾಲು ಒಕ್ಕೂಟದ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಕುರಿತು ಶಾಸನಾತ್ಮಕ ವಿಚಾರಣೆ ನಡೆಸಿ ಅನುಸರಣಾ ಕ್ರಮ ಕೈಗೊಂಡು ವರದಿ ಸಲ್ಲಿಸಲು ಎಂ.ಡಿ.ನರಸಿಂಹಮೂರ್ತಿಗೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ
ಲಾಕ್ಡೌನ್ ನಂತರ ಗೋಪಾಲಕರಿಗೆ ಗುಡ್ ನ್ಯೂಸ್: ಕೋಲಾರ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ಹಾಲಿನ ದರ ಹೆಚ್ಚಳ
ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನದಲ್ಲಿ ಅವ್ಯವಹಾರ ಆರೋಪ: ರಸ್ತೆಗೆ ಹಾಲು ಚೆಲ್ಲಿ ಪ್ರತಿಭಟನೆ